ಟ್ರಾನ್ಸಿಸ್ಟರ್ಗಳು
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಟ್ರಾನ್ಸಿಸ್ಟರ್‌ಗಳು ವಿದ್ಯುನ್ಮಾನ ಉಪಕರಣಗಳಲ್ಲಿರುವ ಮಂಡಲ ಅಥವಾ ಸರ್ಕ್ಯೂಟುಗಳಲ್ಲಿ ವಿದ್ಯುತ್ ಪ್ರವಾಹವನ್ನು ನಿಯಂತ್ರಿಸುತ್ತವೆ (ಹೀಗಾಗಿಯೇ ಪ್ರೊ. ಜಿ ವೆಂಕಟಸುಬ್ಬಯ್ಯನವರು ಇವುಗಳನ್ನು ಕನ್ನಡದಲ್ಲಿ ‘ವಿದ್ಯುನ್ನಿಯಂತ್ರಕ’ಗಳೆಂದು ಕರೆದಿದ್ದಾರೆ). ಇವು ವಿದ್ಯುತ್ ಸಂಕೇತಗಳನ್ನು ವರ್ಧಿಸಲು ಹಾಗೂ ಅತಿವೇಗದ ಸ್ವಿಚ್‌ಗಳಂತೆ ಕೂಡ ಬಳಕೆಯಾಗುತ್ತವೆ. ಇದರಿಂದಾಗಿಯೇ ದೂರಸಂಪರ್ಕ ಹಾಗೂ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಟ್ರಾನ್ಸಿಸ್ಟರ್‌ಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ನೂರು ರೂಪಾಯಿಯ ಮೇಡ್ ಇನ್ ಚೈನಾ ರೇಡಿಯೋವಿನಿಂದ ಹಿಡಿದು ಸಾವಿರಾರು ರೂಪಾಯಿ ಬೆಲೆಯ ಕಂಪ್ಯೂಟರ್‌ನವರೆಗೆ, ಲಕ್ಷಾಂತರ ರೂಪಾಯಿ ಬೆಲೆಯ ವೈದ್ಯಕೀಯ ಯಂತ್ರಗಳಿಂದ ಪ್ರಾರಂಭಿಸಿ ಕೋಟ್ಯಂತರ ಬೆಲೆಯ ವಿಮಾನಗಳ ನಿಯಂತ್ರಣವ್ಯವಸ್ಥೆಯವರೆಗೆ ಎಲ್ಲ ವಿದ್ಯುನ್ಮಾನ ಉಪಕರಣಗಳ ಜೀವಾಳವಾಗಿರುವ ಈ ಪುಟಾಣಿ ವಿಸ್ಮಯಗಳು ಇಂದಿನ ನಮ್ಮ ಡಿಜಿಟಲ್ ಜೀವನಶೈಲಿಯನ್ನು ಸಾಧ್ಯವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಟ್ರಾನ್ಸಿಸ್ಟರ್‌ಗಳ ಆವಿಷ್ಕಾರದ ಹಿಂದೆ ಒಂದು ಕುತೂಹಲಕರ ಕತೆಯಿದೆ, ಎರಡನೇ ವಿಶ್ವಯುದ್ಧ ಮುಗಿದ ಸಂದರ್ಭದಲ್ಲಿ ನಡೆದದ್ದು. ಯುದ್ಧಕಾಲದಲ್ಲಿ ಸೇನಾಪಡೆಗಳ ಉಪಯೋಗಕ್ಕಾಗಿ ವಿದ್ಯುನ್ಮಾನ ಉಪಕರಣಗಳನ್ನು ತಯಾರಿಸಲು ಸತತ ಸಂಶೋಧನೆಗಳು ನಡೆಯುತ್ತಿದ್ದವು. ಇವೇ ಸಂಶೋಧನೆಗಳ ಫಲವಾಗಿ ವಿಶ್ವದ ಮೊತ್ತಮೊದಲ ಗಣಕಗಳು ಅದೇ ತಾನೆ ತಯಾರಾಗಿದ್ದವು. ಈ ಗಣಕಗಳು ವ್ಯಾಕ್ಯೂಮ್ ಟ್ಯೂಬ್ ಅಥವಾ ಥರ್ಮಯಾನಿಕ್ ವಾಲ್ವ್‌ಗಳನ್ನು ಬಳಸುತ್ತಿದ್ದವು. ಗಾತ್ರದಲ್ಲಿ ಹೆಚ್ಚೂಕಡಿಮೆ ವಿದ್ಯುತ್ ಬಲ್ಬುಗಳಷ್ಟಿದ್ದ ಈ ವ್ಯಾಕ್ಯೂಮ್ ಟ್ಯೂಬುಗಳು ಸಿಕ್ಕಾಪಟ್ಟೆ ವಿದ್ಯುತ್ತನ್ನು ಕಬಳಿಸುತ್ತಿದ್ದವು. ಅಷ್ಟೇ ಅಲ್ಲ, ಬಲ್ಬುಗಳ ಹಾಗೆ ಬಿಸಿಯಾಗುತ್ತಿದ್ದವು; ಸುಟ್ಟುಹೋಗುತ್ತಲೂ ಇದ್ದವು. ಪ್ರತಿಯೊಂದು ಗಣಕದಲ್ಲೂ ಇಂತಹ ನೂರಾರು-ಸಾವಿರಾರು ವ್ಯಾಕ್ಯೂಮ್ ಟ್ಯೂಬುಗಳು ಬಳಕೆಯಾಗುತ್ತಿದ್ದರಿಂದ ಗಣಕದ ಗಾತ್ರ ಕೂಡ ಕೊಂಚ ಅತಿ ಎನಿಸುವಷ್ಟೇ ದೊಡ್ಡದಾಗಿರುತ್ತಿತ್ತು. ಕೇವಲ ಹದಿನೆಂಟು ಸಾವಿರ ವ್ಯಾಕ್ಯೂಮ್ ಟ್ಯೂಬ್‌ಗಳನ್ನು ಹೊಂದಿದ್ದ ಇನಿಯಾಕ್ ಎಂಬ ಗಣಕವನ್ನು ಇಡಲು ಒಂದು ಇಡೀ ಕೊಠಡಿಯೇ ಬೇಕಾಗುತ್ತಿತ್ತು. ಅಷ್ಟೇ ಅಲ್ಲ, ಅದರ ಮೇಲ್ವಿಚಾರಣೆಗಾಗಿಯೇ ನಾಲ್ಕೈದು ತಜ್ಞರ ಅವಶ್ಯಕತೆಯಿತ್ತು. ಇವೆಲ್ಲ ಸಮಸ್ಯೆಗಳ ಕಾರಣದಿಂದ ಹೆಚ್ಚು ಹೆಚ್ಚು ವೇಗವಾಗಿ ಕೆಲಸಮಾಡುವ ಗಣಕಗಳನ್ನು ನಿರ್ಮಿಸುವುದು ಅಸಾಧ್ಯವೇ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಪರಿಸ್ಥಿತಿಯಿಂದ ಬೇಸತ್ತ ವಿಜ್ಞಾನಿಗಳು ವ್ಯಾಕ್ಯೂಮ್ ಟ್ಯೂಬ್‌ಗಳ ಬದಲಿಗೆ ಬಳಸಲು ಸೂಕ್ತವಾದ ಸಾಧನಗಳನ್ನು ರೂಪಿಸಲು ಸತತ ಪ್ರಯತ್ನ ನಡೆಸತೊಡಗಿದ್ದರು.