ಟಿ ತಂಬುಚೆಟ್ಟಿ
ಸರ್ ಟಿ ಆರ್ ಎ ತಂಬುಚೆಟ್ಟಿಯವರ ಎಂಟು ಮಕ್ಕಳಲ್ಲಿ ಕೊನೆಯವರಾದ ಟಿ ತಂಬುಚೆಟ್ಟಿಯವರು ಮೈಸೂರು ಪ್ರಾಂತ್ಯದಲ್ಲಿ ಹುಜೂರ್ ಕಾರ್ಯದರ್ಶಿ ಹಾಗೂ ಮಂತ್ರಿಮಂಡಲದ ಸದಸ್ಯರಾಗಿ ಸೇವೆ ಸಲ್ಲಿಸಿ ೧೯೪೦ರಲ್ಲಿ ಅತ್ಯಂತ ಸೂಕ್ಷ್ಮ ಸ್ಥಾನವಾದ ಮಹಾರಾಜರ ಖಾಸಾ ಕಾರ್ಯದರ್ಶಿಯ ಸ್ಥಾನಕ್ಕೇರಿದರು. ಮಹಾರಾಜ ಜಯಚಾಮರಾಜೇಂದ್ರ ಒಡೆಯರ ಮುಖ್ಯ ಸಲಹೆಗಾರರಾಗಿ ಸರ್ ಟಿ ತಂಬುಚೆಟ್ಟಿಯವರು ಸ್ವಾತಂತ್ರ್ಯ ಸಂಕ್ರಮಣಕಾಲದ ಮೈಸೂರು ರಾಜ್ಯದ ಸರ್ವಾಂಗೀಣ ಪ್ರಗತಿಗೆ ಮುಖ್ಯ ಕಾರಣಕರ್ತರಾಗಿದ್ದಾರೆ. ೧೯೪೮ರಲ್ಲಿ ಸೇವೆಯಿಂದ ನಿವೃತ್ತರಾದ ಅವರು ಮೈಸೂರರಸರಿಂದ ’ಅಮಾತ್ಯಶಿರೋಮಣಿ’ ಬಿರುದನ್ನೂ ಬ್ರಿಟಿಷ್ ಸರ್ಕಾರದಿಂದ ನೈಟ್ ಪದವಿಯನ್ನೂ ಪಡೆದಿದ್ದರು. ಮೈಸೂರಿನ ಸಂತ ಫಿಲೋಮಿನಾ ಚರ್ಚ್, ಸಂತ ಫಿಲೋಮಿನಾ ಕಾಲೇಜುಗಳ ನಿರ್ಮಾಣದಲ್ಲಿ ಇವರ ಕೊಡುಗೆ ಅಪಾರ. ಅವರು ತಮ್ಮ ಪತ್ನಿ ಅಂದರೆ ದೇಶೋಪಕಾರಿಣಿ ಮೇಡಮ್ ಜರ್ಟ್ರೂಡ್ ತಂಬುಚೆಟ್ಟಿಯವರ ಹೆಸರಿನಲ್ಲಿ ಕಬ್ಬನ್ ಪಾರ್ಕ್ನಲ್ಲಿ ಕಟ್ಟಿದ ಬಾಲಭವನ ಇಂದಿಗೂ ಮಕ್ಕಳಿಗೆ ಮುದ ನೀಡುತ್ತಿದೆ.