ಟಾಟಾ ಥಿಯೇಟರ್
ಟಾಟಾ ಥಿಯೇಟರ್ ಭಾರತದ ಮುಂಬಯಿ ನಗರದ ದಿ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಸಂಗೀತ, ನೃತ್ಯ ಮತ್ತು ನಾಟಕಕ್ಕಾಗಿ ೧೦೧೦ ಆಸನಗಳ ವಿಶಿಷ್ಟ ವೇದಿಕೆಯ ಸೌಲಭ್ಯವಾಗಿದೆ. ಇದು ಭಾರತದ ಮೊದಲ ರಂಗಮಂದಿರವಾಗಿದ್ದು, ಭಾರತೀಯ ಸಂಗೀತ, ನೃತ್ಯ ಮತ್ತು ಸಂಬಂಧಿತ ಕಲಾ ಪ್ರಕಾರಗಳಿಗೆ ವಿಶಿಷ್ಟವಾದ ಧ್ವನಿ ಮತ್ತು ದೃಶ್ಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ ಹಾಗೂ ನಿರ್ಮಿಸಲಾಗಿದೆ. ಇದನ್ನು ಲಾರ್ಸನ್ ಮತ್ತು ಟುಬ್ರೊ ನಿಯಮಿತ ಕಂಪೆನಿಯವರು ನಿರ್ಮಿಸಿದ್ದಾರೆ.
ಭಾರತೀಯ ಶಾಸ್ತ್ರೀಯ ಸಂಗೀತ ಕಛೇರಿಗಳು ಮತ್ತು ಪ್ರದರ್ಶನಗಳಲ್ಲಿ ಸಾಂಪ್ರದಾಯಿಕ ಆಸನದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ಟಾಟಾ ಥಿಯೇಟರ್ ವೇದಿಕೆಯನ್ನು ಬಹುತೇಕ ಅರ್ಧ ವೃತ್ತಾಕಾರದಲ್ಲಿ ನಿರ್ಮಿಸಲಾಗಿದೆ. ಮೇಲ್ಭಾಗ ಮತ್ತು ಗೋಡೆಯ ಹೊದಿಕೆಯಲ್ಲಿರುವ ಪರ್ಯಾಯ ನಿಮ್ನ ಮತ್ತು ಪೀನ ತ್ರಿಕೋನ ರೂಪಗಳು ಸಂಪೂರ್ಣ ಸಭಾಂಗಣದಲ್ಲಿ ಧ್ವನಿ ಪ್ರಸಾರ ಉತ್ತಮವಾಗಿ ಆಗುವಂತೆ ಮಾಡುತ್ತದೆ. ಧ್ವನಿಪ್ರಸಾರಕ್ಕೆ ಉತ್ತಮವಾಗಿ ಅನುವು ಮಾಡಿಕೊಡುವ ಹೆಚ್ಚಿನ ಸಾಂದ್ರತೆಯ ಸಂಕುಚಿತ ಪ್ಲಾಸ್ಟರ್‌ನ ರೂಪಗಳನ್ನು ಕೈಯಿಂದ ತಯಾರಿಸಿ ಅವುಗಳನ್ನು ಅಳವಡಿಸಲಾಯಿತು. ವಾದ್ಯಗೋಷ್ಠಿಯಲ್ಲಿ ನುಡಿಸುವ ಪ್ರತಿಯೊಂದು ಸಂಗೀತ ಉಪಕರಣವನ್ನು ಪ್ರತ್ಯೇಕವಾಗಿ ಸಭಾಂಗಣದ ಪ್ರತಿಯೊಂದು ಮೂಲೆಯಲ್ಲೂ ಕೇಳುವಂತೆ ವಾಸ್ತುಶಿಲ್ಪಿಗಳು ಸಭಾಂಗಣವನ್ನು ವಿನ್ಯಾಸ ಮಾಡಿದ್ದಾರೆ.
ಹೊರಗಿನ ರಸ್ತೆ ಸಂಚಾರ ಹಾಗೂ ಇತರೆ ಸದ್ದುಗದ್ದಲಗಳು ಒಳಬರದಂತೆ ಟಾಟಾ ಥಿಯೇಟರ್ ಕಾಂಪ್ಲೆಕ್ಸ್‌ನ ಬಾಹ್ಯ ರಚನೆಯನ್ನು ವಿನ್ಯಾಸ ಮಾಡಲಾಗಿದೆ. ಇದಲ್ಲದೆ ಪ್ರತ್ಯೇಕವಾಗಿ ಕಗ್ಗಲ್ಲಿನಿಂದ ಅಡಿಪಾಯವನ್ನು ನಿರ್ಮಿಸಲಾಗಿದೆ.
ಯಹೂದಿ ಮೆನುಹಿನ್, ಉಸ್ತಾದ್ ವಿಲಾಯತ್ ಖಾನ್ ಮತ್ತು ಎಂಎಸ್ ಸುಬ್ಬಲಕ್ಷ್ಮಿ ಅವರು ಟಾಟಾ ಥಿಯೇಟರ್‌ನಲ್ಲಿ ಹಲವು ವರ್ಷಗಳ ಕಾಲ ಪ್ರದರ್ಶನ ನೀಡಿದ ಪ್ರಸಿದ್ಧ ಕಲಾವಿದರು. ಟಾಟಾ ಥಿಯೇಟರ್ ಅನ್ನು ಭಾರತಕ್ಕೆ ಭೇಟಿ ನೀಡುವ ವಿಶೇಷ ಅತಿಥಿಗಳು ಮತ್ತು ಗಣ್ಯರಿಗಾಗಿ ಪ್ರಸ್ತುತಪಡಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಇದರ ವಿಶಾಲವಾದ ಪಡಸಾಲೆಗಳನ್ನು ವಿಶೇಷ ಪ್ರದರ್ಶನಗಳಿಗೆ ಸಹ ಬಳಸಲಾಗುತ್ತಿದೆ.