ಜೋಸಿಫೀನ್
ಜೋಸಿಫೀನ್ 1763-1814. ಫ್ರಾನ್ಸಿನ ಚಕ್ರವರ್ತಿನಿ; ಒಂದನೆಯ ನೆಪೋಲಿಯನನ ಪತ್ನಿ. ಜೋಸೆಫ್ ಟಾಸ್ಟರನ ಜ್ಯೇಷ್ಠ ಪುತ್ರಿ.
ಬದುಕು
ಬದಲಾಯಿಸಿಮಾರ್ಟಿನೀಕ್ ದ್ವೀಪದಲ್ಲಿ ಜನಿಸಿದಳು. ಅಲೆಗ್ಸಾಂಡ್ರೆ ಬೋಆರ್ನೆಯನ್ನು 1779ರಲ್ಲಿ ಮದುವೆಯಾದಳು. ಯೂಗೀನ್ ಮತ್ತು ಹಾರ್ಟೆನ್ಸ್ ಯೂಗೀನೀ ಈ ದಂಪತಿಗಳ ಮಕ್ಕಳು. ಕುಲೀನನಾದ ಅಲೆಗ್ಸಾಂಡ್ರೆ ಫ್ರಾನ್ಸಿನ ಕ್ರಾಂತಿಯಲ್ಲಿ ಕೊಲೆಯಾದ (1794). ಜೋಸೆಫೀನ್ ಮಾತ್ರ ಸ್ನೇಹಿತರ ನೆವಿನಿಂದ ಉಳಿದಳು. 1795ರ ವೇಳೆಗೆ ಪ್ಯಾರಿಸಿನಲ್ಲಿ ಈಕೆ ತನ್ನ ಕ್ರಾಂತಿಕಾರಕ ನಡೆವಳಿಕೆಗಳಿಂದ ಪ್ರಸಿದ್ಧಳಾಗಿದ್ದಳು. ನೆಪೋಲಿಯನ್ ಬೋನಾಪಾರ್ಟನಿಗೆ ಇಟಲಿಯಲ್ಲಿನ ಸೈನ್ಯದ ನಾಯಕತ್ವ ದೊರೆತಾಗ ಆತನಿಗೆ ಉಜ್ಜ್ವಲ ಭವಿಷ್ಯವಿದೆಯೆಂಬುದನ್ನರಿತು. ಆತ ಇಟಲಿಯ ಕಾರ್ಯಾಚರಣೆಗೆ ಹೋಗುವುದಕ್ಕೆ ಕೇವಲ ಎರಡು ದಿನ ಮೊದಲು ಅವನನ್ನು ಈಕೆ ವಿವಾಹವಾದಳು (1796). ಮೊದಮೊದಲು ಅವರಿಬ್ಬರ ಸಂಬಂಧ ಹಿತವಾಗಿತ್ತು. ಅನಂತರ, ನೆಪೋಲಿಯನ್ ಈಜಿಪ್ಟಿನಲ್ಲಿದ್ದಾಗ (1798-99) ಈಕೆ ಹಿಪೊಲ್ಯುಟ್ ಚಾರ್ಲ್ಸ್ ಎಂಬ ಅಧಿಕಾರಿಯೊಡನೆ ಅನೈತಿಕ ಸಂಬಂಧ ಬೆಳೆಸಿದಳು. ಈ ನಡತೆಯಿಂದಾಗಿ ಜೋಸೆಫೀನಳಿಂದ ನೆಪೋಲಿಯನ್ ವಿಚ್ಚೇದನ ಪಡೆಯಬೇಕೆಂದು ಅವನ ಸಹೋದರ ಸಹೋದರಿಯರು ಒತ್ತಾಯಿಸಲಾರಂಭಿಸಿದರು. ಆದರೆ ನೆಪೋಲಿಯನ್ ತಟಸ್ಥನಾಗಿದ್ದ. ಆತ ಅಜೀವ ಪ್ರಧಾನ ದಂಡನಾಯಕನಾಗಿ ಆಯ್ಕೆಯಾದ ಮೇಲೆ (1802) ವಿಚ್ಚೇದನದ ಒತ್ತಾಯ ಹೆಚ್ಚಾಯಿತು. 1804ರ ಮೇನಲ್ಲಿ ಸಾಮ್ರಾಜ್ಯದ ಘೋಷಣೆ ಆದಾಗ ಜೋಸೆಫೀನ್ ಆತಂಕಕ್ಕೊಳಗಾದಳು. 1804ರ ಡಿಸೆಂಬರ್ ಒಂದರ ಪಟ್ಟಾಭಿಷೇಕ ಸಮಾರಂಭದಲ್ಲಿ ಧಾರ್ಮಿಕ ವಿಧಿಯೊಂದಿಗೆ ನೆಪೋಲಿಯನ್ ತನ್ನನ್ನು ಮತ್ತೆ ಮದುವೆಯಾಗಬೇಕೆಂದು ಹಟ ಹಿಡಿದಳು. ಈ ವಿವಾಹದ ಸಮಯದಲ್ಲಿ ಒಂದು ಸಣ್ಣ ಲೋಪವಿರುವಂತೆ ನೆಪೋಲಿಯನ್ ಉದ್ದೇಶಪೂರ್ವಕವಾಗಿ ವ್ಯವಸ್ಥೆಗೊಳಿಸಿದ. ಈ ಲೋಪಕ್ಕಾಗಿಯೇ ಮುಂದೆ ಈ ಮದುವೆಯನ್ನು ನ್ಯಾಯಾಲಯ ಅಸಿಂಧುವೆಂದು ಘೋಷಿಸಿತು (1810). ಜೊಸೆಫೀನಳ ದುಂದುವೆಚ್ಚ, ಅನೈತಿಕ ನಡತೆ ಇವುಗಳಿಂದಲೇ ಅಲ್ಲದೆ, ಆಕೆಗೆ ಮಕ್ಕಳಾಗದಿದ್ದುದರಿಂದಲೂ ಅವಳ ಸ್ಥಾನ ಇಳಿಯಿತು. ನೆಪೋಲಿಯನ್ ರಾಜಕೀಯ ನೆಪವನ್ನೊಡ್ಡಿ ಅವಳಿಂದ ವಿಚ್ಛೇದನ ಪಡೆದ (1809). ಪ್ಯಾರಿಸ್ ಬಳಿ ಇರುವ ತನ್ನ ಖಾಸಗಿ ನಿವಾಸದಲ್ಲಿ ಆಕೆ ತನ್ನ ಉಳಿದ ದಿನಗಳನ್ನು ವೈಭವದಿಂದಲೇ ಕಳೆದಳು. ನೆಪೋಲಿಯನ್ ಅವಳ ಕ್ಷೇಮದ ಬಗ್ಗೆ ಆಸ್ಥೆ ವಹಿಸಿದ. ಆಕೆ 1814ರ ಮೇ 29ರಂದು ತನ್ನ ನಿವಾಸದಲ್ಲಿ ಕೊನೆಯುಸಿರೆಳೆದಳು.