ಜೋಳದರಾಶಿ ದೊಡ್ಡನಗೌಡರು
ಜೋಳದರಾಶಿ ದೊಡ್ಡನಗೌಡರು (ಜುಲೈ ೨೭, ೧೯೧೦ - ಮೇ ೧೦, ೧೯೯೪) ನಾಟಕಕಾರರಾಗಿ, ಕವಿಗಳಾಗಿ, ಗಮಕಿಗಳಾಗಿ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಸುಪ್ರಸಿದ್ಧರಾಗಿದ್ದಾರೆ. ಜೋಳದರಾಶಿ ದೊಡ್ಡನಗೌಡರು ನಾಡಿನುದ್ದಕ್ಕೂ ಜನರ ಕಿವಿಗೆ ಕಾವ್ಯದ ಕಂಪುಣಿಸಿದವರು. ಸಾಹಿತ್ಯ ಸಮ್ಮೇಳನಗಳಲ್ಲೂ ಕಾವ್ಯವಾಚನ - ಪ್ರವಚನಗಳನ್ನು ಮಾಡಿದವರು. ರಂಗನಟ, ಬರಹಗಾರರೂ ಆಗಿದ್ದ ಗೌಡರು ತಮ್ಮಷ್ಟಕ್ಕೆ ತಾವೇ ಕನ್ನಡ ಸಾಂಸ್ಕೃತಿಕ ಪರಿಚಾರಕನಂತೆ ಮಹತ್ವದ ಕೆಲಸ ಮಾಡಿದವರು.
ಜೋಳದರಾಶಿ ದೊಡ್ಡನಗೌಡರು | |
---|---|
ಜನನ | ಜುಲೈ ೨೭, ೧೯೧೦ ಬಳ್ಳಾರಿ ಜಿಲ್ಲೆಯ ಜೋಳದರಾಶಿ |
ಮರಣ | ಮೇ ೧೦, ೧೯೯೪ |
ವೃತ್ತಿ(ಗಳು) | ರಂಗ ಕಲಾವಿದರು, ಗಮಕಿಗಳು, ಬರಹಗಾರರು, ಜಮೀನ್ದಾರರು |
ಜೀವನ
ಬದಲಾಯಿಸಿಬಳ್ಳಾರಿ ಸೀಮೆಯ ಸಾಂಪ್ರದಾಯಕ ಹಳ್ಳಿಯಾದ ಜೋಳದರಾಶಿಯು, ಕರ್ನಾಟಕ-ಆಂಧ್ರ ಗಡಿಯ ಕೊನೆಯ ಊರು. ಈ ಊರಿನಲ್ಲಿ ಜೋಳದರಾಶಿ ದೊಡ್ಡನಗೌಡರು ಜುಲೈ 27, 1910ರಂದು ಜನಿಸಿದರು. ತಂದೆ ಪಂಪನಗೌಡರು ಮತ್ತು ತಾಯಿ ರುದ್ರಮ್ಮನವರು. ಸುಮಾರು ನಾನೂರು ಎಕರೆ ಭೂಮಿ ಉಳುವವನಿಗೇ ಭೂಮಿ ಕಾಯಿದೆಯಲ್ಲಿ ಇವರ ಕೈತಪ್ಪಿದರೂ ದೊಡ್ಡನಗೌಡರು ೫೦ ಎಕರೆಗಳ ಭೂಮಾಲೀಕತ್ವವುಳ್ಳವರಾಗಿದ್ದರು. ಹೀಗಿದ್ದರೂ ಅವರು ಭೂಮಾಲೀಕತ್ವದ ಯಜಮಾನಿಕೆ ನಡೆಸಿದ್ದೇ ಇಲ್ಲ. ಅವರು ನಟನೆ, ಕಾವ್ಯ ವಾಚನ, ಸಾಹಿತ್ಯ ಇವುಗಳನ್ನು ತಮ್ಮೊಡನೆ ಹೊತ್ತು ನಾಡಿನಲ್ಲೆಲ್ಲಾ ಅಲೆದದ್ದೇ ಹೆಚ್ಚು.
ಅವರ ಊರಿನಲ್ಲಿ ವಿದ್ಯಾಭ್ಯಾಸಕ್ಕೆ ಶಾಲೆಯ ಅವಕಾಶ ಎಷ್ಟಿತ್ತೋ ಅವರ ವಿದ್ಯಾಭ್ಯಾಸವೂ ಅಷ್ಟಕ್ಕೇ ಮೊಟಕುಗೊಂಡಿತು. ಜೈಮಿನಿ ಭಾರತ, ಹರಿಶ್ಚಂದ್ರ ಕಾವ್ಯ, ಪ್ರಭುಲಿಂಗಲೀಲೆ ಮುಂತಾದ ಕಾವ್ಯಗಳ ಅಭ್ಯಾಸ ಮತ್ತು ಬಯಲಾಟದಲ್ಲಿ ವೇಶಕಟ್ಟುವುದು ಅವರಿಗೆ ಅನುವಂಶಿಕವಾಗಿ ಬಂದ ಗುಣವಾಗಿತ್ತು.
ಅವರು ಪುಟ್ಟವರಾಗಿದ್ದಾಗ ನಟಿಸುತ್ತಿದ್ದ ಅನುಭವವನ್ನು ತಮ್ಮ ಆತ್ಮಚರಿತ್ರೆಯಲ್ಲಿ ಹೀಗೆ ವರ್ಣಿಸಿದ್ದಾರೆ: "ನನ್ನ ವಯಸ್ಸು 6-7 ಇರಬಹುದು. ನಾಟಕ ‘ಕನಕತಾರ’. ಆ ನಾಟಕದ ಕಥೆಯೇನೊ ತಿಳಿಯದು. ಆದರಲ್ಲಿ ಋಷ್ಯಾಶ್ರಮ. ಅಲ್ಲಿ ಒಬ್ಬ ಋಷಿ. ಆ ಋಷಿಯ ಶಿಷ್ಯರಲ್ಲಿ ನಾನೊಬ್ಬ ಬಾಲಶಿಷ್ಯ. ಪದವನ್ನೇನೊ ಕಲಿತು ಹಾಡುತ್ತಿದ್ದೆ. ಆದರೆ ಆ ಪದದಲ್ಲಿಯ ‘ಪರಮ ಗುರುವರ’ ಎಂದು ಹೇಳುವುದಕ್ಕೆ ಬದಲಾಗಿ ‘ಪಲಮ ಗುಲುವಲ’ ಎಂದು ಹೇಳುತ್ತಿದ್ದೆ. ‘ರ’ಕಾರವನ್ನು ನುಡಿಯದೇ ಇದ್ದ ನಾಲಿಗೆ ಎಷ್ಟು ಸಾರಿ ಹೇಳಿಕೊಟ್ಟರೂ ‘ಲ’ಕಾರವನ್ನೇ ನುಡಿಯುತ್ತಿತ್ತು. ಇದರಿಂದ, ನನ್ನ ಓರಿಗೆಯ ಹುಡುಗರೆಲ್ಲಾ ನನ್ನ ಹೆಸರಿಗೆ ಬದಲಾಗಿ ‘ಏ ಗುಲುವಲಾ ಬಾರೋ’ ಎಂದು ಹಾಸ್ಯ ಮಾಡುತ್ತಿದ್ದರು. ಮೊದಲನೆಯ ಈ ‘ಗುಲು’ ಸ್ತೋತ್ರ ನಾಟಕವಾಡಿಸಲೇ ಇಲ್ಲ. ಊರಿಗೆ ಪ್ಲೇಗು ಬಂದು, ಊರವರನ್ನಲ್ಲದೆ ಈ ನಾಟಕದವರಲ್ಲಿ ಕೆಲವರನ್ನು ನುಂಗಿ ನೀರು ಕುಡಿದಿದ್ದರಿಂದ ಆ ನಾಟಕ, ಆ ನನ್ನ ‘ಗುಲುಸ್ತೋತ್ರ’, ಅಲ್ಲಿಗೇ ನಿಂತುಹೋಯಿತು".
ರಂಗಭೂಮಿಯಲ್ಲಿ
ಬದಲಾಯಿಸಿಬಾಲ್ಯದಲ್ಲಿಯೇ ನಟರಾಗಿ ನಾಟಕ ಕಂಪನಿ ಕಟ್ಟಿ ಕೈಸುಟ್ಟುಕೊಂಡ ನಂತರ ಬಳ್ಳಾರಿ ರಾಘವರಿಂದ ನಟಿಸಲು ಆಹ್ವಾನ ಬಂದಾಗ, ತಂದೆಯವರ ಒಪ್ಪಿಗೆ ಪಡೆದು ಪುನಃ ರಂಗಭೂಮಿಗೆ ಬಂದರು. ತೆಲುಗು ಮತ್ತು ಕನ್ನಡ ಭಾಷೆಗಳೆರಡೂ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಕನಕದಾಸರ ಪಾತ್ರದಲ್ಲಿ ಅವರ ಅಭಿನಯವನ್ನು ನೋಡಿದ ಜನತೆಯಿಂದ ಅವರಿಗೆ ಅಭೂತಪೂರ್ವ ಸನ್ಮಾನ ಸಂದಿತ್ತು. ಬಸವೇಶ್ವರ, ಕನಕದಾಸ, ಕಬೀರದಾಸ, ನಾರದ, ಕೃಷ್ಣ ಇತ್ಯಾದಿ ಪಾತ್ರಗಳಲ್ಲಿ ಉಭಯ ಭಾಷೆಗಳ ರಂಗಭೂಮಿಯ ನಟರಾಗಿ ಅವರು ಅಪಾರ ಜನಪ್ರಿಯತೆ ಗಳಿಸಿದ್ದರು.
ಕಾವ್ಯವಾಚನ
ಬದಲಾಯಿಸಿಕಂಚಿನ ಕಂಠದ ದೊಡ್ಡನಗೌಡರಿಗೆ ಹಾಡುಗಾರಿಕೆ ತಾನೇ ತಾನಾಗಿ ಒಲಿದುಬಂದಿತ್ತು. ಕವಿ ಪುಟ್ಟಪ್ಪನವರ ಮನೆಯಲ್ಲಿ, ದ.ರಾ. ಬೇಂದ್ರೆ, ಕೋ. ಚನ್ನಬಸಪ್ಪ, ವೀರಭದ್ರಪ್ಪ ಮುಂತಾದವ ಸಮ್ಮುಖದಲ್ಲಿ ರಾಮಾಯಣದರ್ಶನಂನ ಶಬರಿ ಕಥಾ ಪ್ರಸಂಗ ವಾಚಿಸಿ ಮೆಚ್ಚುಗೆ ಪಡೆದಿದ್ದರು.
ಒಂದು ಕಾಲಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕಾವ್ಯವಾಚನ ಇರುತ್ತಿತ್ತು. ಈಗ ಅದು ಕಾಣೆಯಾಗಿದೆ. ಗಮಕದ ಮೂಲಕ ಕಾವ್ಯವನ್ನು ಕೇಳಿಸಿಕೊಳ್ಳುವಾಗ ಓದಿನಲ್ಲಿ ಕಾಣದ ಅರ್ಥದ ಪದರಗಳು ಹೊಳೆಯಬಲ್ಲವು. ಹಾಗೆ ಹೊಸ ಅರ್ಥಗಳನ್ನು ಕಾಣಿಸುವಂತೆ ಹಾಡುತ್ತಿದ್ದವರಲ್ಲಿ ಜೋಳದರಾಶಿ ದೊಡ್ಡನಗೌಡರೂ ಒಬ್ಬರು. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅವರು ಸಾವಿರಾರು ಸಮ್ಮೇಳನ, ಸಾಹಿತ್ಯೋತ್ಸವ, ಜಾತ್ರೆಗಳಲ್ಲಿ ಕಾವ್ಯಗಾಯನ ಮತ್ತು ಪ್ರವಚನ ಮಾಡಿದವರು. ಇವುಗಳಲ್ಲೆಲ್ಲ 1935ರಲ್ಲಿ ಹಂಪಿಯಲ್ಲಿ ಏರ್ಪಟ್ಟಿದ್ದ ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ 500ನೇ ವರ್ಷದ ಕಾರ್ಯಕ್ರಮದಲ್ಲಿ, ಉಚ್ಚಕಂಠದಲ್ಲಿ ಹರಿಹರನ ರಚನೆಯನ್ನು ಹಾಡಿ ಸಭೆಯ ಸದ್ದನ್ನಡಗಿಸಿದ ಪ್ರಸಂಗವು ಖ್ಯಾತವಾಗಿದೆ. ತರೀಕೆರೆಯಲ್ಲಿ ನಡೆದ ಪ್ರಥಮ ಜನಪದ ಸಾಹಿತ್ಯ ಸಮ್ಮೇಳನದಲ್ಲಿ, ತಮ್ಮ ಕಾವ್ಯವಾಚನ ಕೇಳಿಸಿಕೊಳ್ಳದೆ ಗದ್ದಲ ಮಾಡುತ್ತಿದ್ದ ಸಭಿಕರತ್ತ ಕೈಲಿದ್ದ ಗ್ರಂಥದಿಂದಲೇ ಬೀಸಿ ಹೊಡೆದ ಪ್ರಸಂಗವೂ ಅಷ್ಟೇ ಖ್ಯಾತವಾಗಿದೆ.
ದೊಡ್ಡನಗೌಡರ ಮಹತ್ವ ಇರುವುದು, ತಮ್ಮ ಹಾಡಿಕೆಯ ಮೂಲಕ ಕನ್ನಡ ಕಾವ್ಯಗಳ ಬಗ್ಗೆ ಜನರಲ್ಲಿ ಆಸಕ್ತಿ - ಅಭಿರುಚಿ ಹುಟ್ಟುವಂತೆ ಮಾಡಿದ್ದು. ಸಾಹಿತ್ಯಾಭಿರುಚಿ ಹುಟ್ಟಿಸುವ ಕೆಲಸವನ್ನು ಅ. ನ. ಕೃಷ್ಣರಾಯರು ತಮ್ಮ ಅಮೋಘ ಭಾಷಣಗಳ ಮೂಲಕ ಮಾಡಿದರೆ, ಅವರ ಆಪ್ತ ಗೆಳೆಯರಾದ ದೊಡ್ಡನಗೌಡರು ತಮ್ಮ ಗಾಯನದ ಮೂಲಕ ಮಾಡಿದರು. ಗೌಡರ ಕಾವ್ಯಗಾಯನದಲ್ಲಿ ಸಾಹಿತ್ಯಾಭಿರುಚಿ, ಸಂಗೀತ ಪ್ರಜ್ಞೆ ಹಾಗೂ ದೈವಭಕ್ತಿಯ ಆವೇಶ - ಮೂರೂ ಮೇಳೈಸಿದ್ದವು. ಅವರು ಹಾಡುತ್ತಿದ್ದ ಮುಖ್ಯ ಕಾವ್ಯಗಳೆಂದರೆ- ‘ರಾಜಶೇಖರ ವಿಳಾಸ’, ‘ಶೂನ್ಯಸಂಪಾದನೆ’, ‘ಭರತೇಶ ವೈಭವ’, ‘ಪ್ರಭುಲಿಂಗಲೀಲೆ’, ‘ಬಸವಪುರಾಣ’, ‘ಹರಿಹರನ ರಗಳೆಗಳು’, ‘ಗಿರಿಜಾ ಕಲ್ಯಾಣ’, ‘ಹರಿಶ್ಚಂದ್ರಕಾವ್ಯ’, ‘ರಾಮಾಯಣ ದರ್ಶನಂ’, ‘ಜೈಮಿನಿಭಾರತ’ ಮುಂತಾದವು. ಗೌಡರಿಗೆ ಕನ್ನಡದ ಎಲ್ಲ ಕಾವ್ಯಗಳ ಮೇಲೆ ಮತಾತೀತ ಪ್ರೀತಿಯಿತ್ತು. ವಿಶೇಷವೆಂದರೆ, ಅವರ ಹಾಡಿಕೆಯಲ್ಲಿ ಶ್ರೋತೃಗಳು ಬಿಕ್ಕಿಬಿಕ್ಕಿ ಅಳುವ ಪ್ರಸಂಗಗಳು ಸಾಮಾನ್ಯವಾಗಿದ್ದವು. ಎಷ್ಟೋ ಸಲ ಹಾಡುತ್ತಿದ್ದ ಗೌಡರೂ ಭಾವಾವೇಶಕ್ಕೆ ಒಳಗಾಗಿ ಭೋರೆಂದು ಅಳುತ್ತಿದ್ದುದೂ ಇತ್ತು.
ಬರಹಗಾರರಾಗಿ
ಬದಲಾಯಿಸಿದೊಡ್ಡನಗೌಡರು ನಟನೆ ಗಾಯನದ ಜತೆ ಕನ್ನಡದ ಒಬ್ಬ ಲೇಖಕರೂ ಆಗಿದ್ದರು. ಕನ್ನಡ ಮತ್ತು ತೆಲುಗಿನಲ್ಲಿ ಅವರು ಸುಮಾರು ನಲವತ್ತಕ್ಕೂ ಹೆಚ್ಚು ಕೃತಿ ರಚನೆ ಮಾಡಿದ್ದರು. ರಸವರ್ಷ, ಯಾತ್ರಿಕ, ನಮ್ಮ ಹಂಪೆ, ಗೌಡತಿ ಬರಲ್ಲಿಲ್ಲ, ರಾಮೇಶನ ವಚನಗಳು ಮುಂತಾದವು ಅವರ ಕಾವ್ಯ ಕೃತಿಗಳು. ನೋಡ್ರವ್ವ ನಾಟಕ, ಅಭಯ, ಸಾಯದವನ ಸಮಾಧಿ, ಕ್ರಾಂತಿ ಪುರುಷ, ಕನಕದಾಸ ಮುಂತಾದವು ಅವರು ರಚಿಸಿದ ಪ್ರಖ್ಯಾತ ನಾಟಕಗಳು. ಅವರ ಆತ್ಮಚರಿತ್ರೆಯಾದ ‘ನಂದೇನಾನೋದಿದೆ’ ವಿಶಿಷ್ಟ ಕೃತಿ ಎಂದು ಸಾಹಿತ್ಯಲೋಕದಲ್ಲಿ ಖ್ಯಾತಿ ಪಡೆದಿದೆ. ವಿಶಿಷ್ಟವಾದ ಘಟನೆಗಳಿಂದ ಕೂಡಿದ ಅದು ಕರ್ನಾಟಕ ರಂಗಭೂಮಿಯ ಚರಿತ್ರೆಯ ದೃಷ್ಟಿಯಿಂದ ಮಹತ್ವದ ಆಕರವಾಗಿದೆ. ಅದರ ಗದ್ಯ ಕೂಡ ವಿಶಿಷ್ಟವಾಗಿದೆ.
ಗೌಡರ ಬರೆಹ, ನಟನೆ ಮತ್ತು ಗಾಯನಗಳ ವಿಶಿಷ್ಟತೆ ಇರುವುದು ಅವರ ದ್ವಿಭಾಷಿಕತೆಯಲ್ಲಿ. ಎಷ್ಟೋ ಕನ್ನಡ ಚಳವಳಿಗಾರರು ಕನ್ನಡ-ತೆಲುಗುಗಳನ್ನು ಎದುರಾಳಿಗಳೆಂದು ಭಾವಿಸಿರುವುದುಂಟು. ಆದರೆ ಪ್ರಸಿದ್ಧ ತೆಲುಗು ನಟರಾಗಿದ್ದ ಬಳ್ಳಾರಿ ರಾಘವರ ಪರಮ ಶಿಷ್ಯರಾಗಿದ್ದ ದೊಡ್ಡನಗೌಡರು, ಉಭಯಭಾಷಾ ಕವಿಯಾಗಿದ್ದರು. ಕನ್ನಡ-ತೆಲುಗು ಅವರ ಎರಡು ಶ್ವಾಸಕೋಶಗಳಂತೆ ಇದ್ದವು. ‘ವಚನಾಮೃತಮು’, ‘ಅನುಭವಾಲು-ಜ್ಞಾಪಕಾಲು’, ‘ಗೇಯ ಗುಂಜಾರಮು’ ಅವರ ಪ್ರಮುಖ ತೆಲುಗು ಕೃತಿಗಳು.
ಬಹುಮುಖಿ ವ್ಯಕ್ತಿತ್ವ
ಬದಲಾಯಿಸಿಜೋಳದರಾಶಿಯವರು ನಾಡನ್ನೆಲ್ಲ ತಿರುಗಿದರೂ, ಊರಲ್ಲೇ ನೆಲೆಸಿ ಅದನ್ನು ಸಮೃದ್ಧಗೊಳಿಸಿದವರು. ಏಕೀಕರಣ ಚಳವಳಿಗಾರ, ರೈತ, ನಟ, ಗಾಯಕ, ಗ್ರಾಮಪಂಚಾಯತಿ ಅಧ್ಯಕ್ಷ- ಹೀಗೆ ಹಲವು ಪಾತ್ರಗಳಲ್ಲಿ ಕೆಲಸ ಮಾಡಿದ ಗೌಡರದು ಬಹುಮುಖೀ ವ್ಯಕ್ತಿತ್ವ. ದೊಡ್ಡನಗೌಡರು ಸಾಹಿತ್ಯ, ಸಂಗೀತ ಮತ್ತು ರಂಗಭೂಮಿಯ ನಡುವಣ ಕೊಂಡಿಯಂತೆ ಕೆಲಸ ಮಾಡಿದವರು. ಅವರಿಗೆ ಕಾವ್ಯಗಾಯನದ ಬಗೆಗಿನ ಬದ್ಧತೆ ಎಷ್ಟಿತ್ತೆಂದರೆ, ಹರಿಶ್ಚಂದ್ರಕಾವ್ಯವನ್ನೋ ಶೂನ್ಯಸಂಪಾದನೆಯನ್ನೋ ಹಾಡುತ್ತಿರುವಾಗ ಅಥವಾ ನಟನೆ ಮಾಡುತ್ತಿರುವಾಗಲೇ ರಂಗಭೂಮಿಯಲ್ಲಿ ತಮಗೆ ಸಾವು ಬರಬೇಕೆಂದು ಅವರು ಬಯಸಿದ್ದರು; ತಮ್ಮ ಶವಸಂಸ್ಕಾರದ ವೇಳೆ ಅಪಸ್ವರದಲ್ಲಿ ಹಾಡುವ ಭಜನೆಯವರನ್ನು ಕರೆಸಬಾರದು ಎಂದು ಅವರ ಸಂಬಂಧಿಕರಿಗೆ ತಾಕೀತು ಸಹ ಮಾಡಿದ್ದರು!
ಪ್ರಶಸ್ತಿ ಗೌರವಗಳು
ಬದಲಾಯಿಸಿ‘ಗಮಕ ಕಲಾನಿಧಿ’ ಎಂಬುದು ಜೋಳದರಾಶಿ ದೊಡ್ಡನ ಗೌಡರಿಗೆ ಅರ್ಪಿತವಾದ ಸಂಭಾವನ ಗ್ರಂಥವಾಗಿದೆ. ಕರ್ನಾಟಕ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ೧೯೮೧ರಲ್ಲಿ ಬಳ್ಳಾರಿ ಜಿಲ್ಲಾ ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕಲಬುರ್ಗಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮುಂತಾದ ಗೌರವಗಳು ಅವರನ್ನರಿಸಿ ಬಂದಿದ್ದವು.
ಈ ಮಹಾನ್ ಚೇತನರು ಮೇ ೧೦, ೧೯೯೪ರಂದು ಈ ಲೋಕವನ್ನಗಲಿದರು. ಈ ಮಹಾನ್ ಚೇತನಕ್ಕೆ ನಮ್ಮ ನಮನ.
ಮಾಹಿತಿ ಕೃಪೆ
ಬದಲಾಯಿಸಿ- ಕಣಜ
- ನಡೆದಷ್ಟೂ ದಾರಿ: ಕನ್ನಡದ ಪುಣ್ಯ ಜೋಳದರಾಶಿ Archived 2023-04-07 ವೇಬ್ಯಾಕ್ ಮೆಷಿನ್ ನಲ್ಲಿ.