ಜೈವಿಕ ಔಷಧಗಳು: ರೋಗಗಳ ಚಿಕಿತ್ಸೆ ನಿರೋಧಕಗಳಿಗಾಗಿ ಉಪಯೋಗಿಸುವ ವಿವಿಧ ವಿಷಪದಾರ್ಥಗಳು, ವಿಷಹಾರಿಗಳು, ದುರ್ಬಲೀಕೃತ ಅಥವಾ ನಿರ್ಜೀವ ವಿಷಾಣುಗಳನ್ನು ಒಳಗೊಂಡ ಲಸಿಕೆಗಳು ಚಿಕಿತ್ಸೆಗಾಗಿ ಉಪಯೋಗಿಸುವ ರಕ್ತದ್ರವ ಇತ್ಯಾದಿಗಳು (ಬಯೊಲಾಜಿಕಲ್ ಪ್ರಾಡಕ್ಟ್ಸ)[೧]. ಇವೆಲ್ಲವನ್ನೂ ಸಾಮಾನ್ಯವಾಗಿ ಉಪಯೋಗಿಸಲಾಗುವುದು. ಆಗ ಇವು ವ್ಯಕ್ತಿಯಲ್ಲಿ ಆತ ಸಹಜ ರೋಗದಿಂದ ವಿಮುಕ್ತವಾದಾಗ ಪಡೆಯುವ ನೈಸರ್ಗಿಕ ರಕ್ಷೆಯನ್ನೇ ಉಂಟುಮಾಡುತ್ತವೆ.

ತೆಗೆದುಕೊಳ್ಳುವ ರೀತಿ ಬದಲಾಯಿಸಿ

ಪೋಲಿಯೋ ವಿರುದ್ದ ಉಪಯೋಗಿಸುವ ಜೈವಿಕ ಔಷಧ ಮಾತ್ರ ಬಾಯಲ್ಲಿ ತೆಗೆದುಕೊಳ್ಳಬಹುದಾದಂಥದ್ದು.[೨] ಇದನ್ನು ಹೀಗೆ ಸೇವಿಸಿದಾಗ ವ್ಯಕ್ತಿಯಲ್ಲಿ ಇದು ಅತ್ಯಲ್ಪ ತೀವ್ರತೆಯ ಕರುಳಿನ ಪೋಲಿಯೋವನ್ನು ಉಂಟುಮಾಡಿದರೂ ಎಲ್ಲ ರೀತಿಯ ಪೋಲಿಯೊ ವಿರುದ್ದ ನಿರೋಧಕವಸ್ತುಗಳು ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುವಂತೆ ಮಾಡುತ್ತದೆ. ಅದೇ ರೀತಿ ಪ್ರತಿರೋಧಶಕ್ತಿಯನ್ನು ಟೈಫಾಯಿಡ್ ವಿರುದ್ಧ ಬಳಸುವ ಬಾಯಿ ಲಸಿಕೆಗಳೂ ಬಂದಿವೆ. ರೋಗನಿರೋಧಕ ಚಿಕಿತ್ಸೆಗಳಿಗೆ ಉಪಯೋಗಿಸಲಾಗುವ ರಕ್ತ ಮತ್ತು ರಕ್ತರಸವನ್ನು (ಸೀರಮ್) ಕೂಡ ಜೈವಿಕ ಔಷಧಗಳೆಂದೇ ಪರಿಗಣಿಸಲಾಗಿದೆ. ಚಿಕಿತ್ಸೆಗೆ ಉಪಯೋಗಿಸುವ ರಕ್ತರಸವನ್ನು ನಿರ್ದಿಷ್ಟ ಪ್ರಾಯೋಗಿಕ ಸನ್ನಿವೇಶಗಳಲ್ಲಿ ಪ್ರಾಯೋಗಿಕ ಪ್ರಾಣಿಗಳ ರಕ್ತವನ್ನು ಶೇಖರಿಸಿ ಗರಣೆಕಟ್ಟಿಸಿ ಗರಣೆಯಿಂದ ಸರಿಸಲಾಗುತ್ತದೆ.[೩] ಈ ಮೂಲಕ ರಕ್ತವು ಕಣಗಳನ್ನು ಕಳೆದುಕೊಳ್ಳುವುದೇ ಅಲ್ಲದೆ ರಕ್ತದ್ರವ (ಪ್ಲಾಸ್ಮ) ಗರಣೆಕಟ್ಟುವುದೂ ತಪ್ಪುತ್ತದೆ. ಇಂಥ ರಕ್ತರಸಗಳನ್ನು ಚುಚ್ಚುಮದ್ದಿನ ಮೂಲಕ ದೇಹದೊಳಗೆ ಹೊಗಿಸಲಾಗುತ್ತದೆ. ಮಾನವರು ಇಲ್ಲವೆ ಪ್ರಾಣಿಗಳು ಯಾವುದೇ ಸೋಂಕಿನ ರೋಗದಿಂದ ವಿಮುಕ್ತರಾದ ಬಳಿಕ ಸಾಮಾನ್ಯವಾಗಿ ಅವರ ದೇಹದಲ್ಲಿ ಆ ಸೋಂಕಿನ ವಿರುದ್ಧ ವಸ್ತು ಇರುತ್ತದೆ. ಅಂಥವರ ರಕ್ತವನ್ನೊ ರಕ್ತದ್ರವವನ್ನೊ ರಕ್ತರಸವನ್ನೊ ಕೂರಾದರೋಗ (ಅಕ್ಯೂಟ್ ಇಲ್ನೆಸ್) ಚಿಕಿತ್ಸೆಗಾಗಿ ಇಲ್ಲವೆ ತಾತ್ಕಾಲಿಕ ರೋಗನಿರೋಧಕವಾಗಿ ಬಳಸಬಹುದು. ಇವು ವಿಷಾಣುಗಳಿಗೆ ಮಾರಕವಾಗಿ ವ್ಯಕ್ತಿಯನ್ನು ಸೋಂಕಿನಿಂದ ರಕ್ಷಿಸುತ್ತವೆ.

ಔಷಧದ ಪ್ರಮಾಣ ಬದಲಾಯಿಸಿ

ವಿಷವಸ್ತುಗಳನ್ನು ಮಾನವರಿಗೂ ಪ್ರಾಣಿಗಳಿಗೂ ಚುಚ್ಚುಮದ್ದಿನ ಮೂಲಕ ಒಂದು ವಿಲ್‍ನಷ್ಟು ಕೊಟ್ಟರೆ ಮಾರಕಗಳು. ಆದರೆ ಸೂಕ್ತವಾಗಿ ಕಡಿಮೆ ಪ್ರಮಾಣದಲ್ಲಿ ಕೊಟ್ಟರೆ ಇವು ಸ್ವೀಕೃತ ದೇಹದಲ್ಲಿ ತಮಗೇ ವಿರುದ್ಧವಾದ ವಸ್ತುಗಳನ್ನು ಉತ್ಪಾದಿಸಿ ವ್ಯಕ್ತಿ ಅದೇ ವಿಷವಸ್ತುವಿನ ವಿರುದ್ಧ ರಕ್ಷಣೆಪಡೆವ ಸ್ಥಿತಿಯನ್ನು ಸೃಜಿಸುತ್ತವೆ. ಈ ವಿಷವಸ್ತುಗಳು ಹಾವಿನ ಅಥವಾ ಜೇಡರ ಹುಳುವಿನ ವಿಷವಸ್ತು ಇಲ್ಲವೆ ಸೋಂಕುರೋಗಗಳ ವಿಷಾಣುಗಳ ವಿಷವಸ್ತುವಾಗಿರಬಹುದು.

ಉಪಯೋಗಿಸುವ ರೀತಿ ಬದಲಾಯಿಸಿ

ಸೋಂಕು ರೋಗಗಳ ವಿಷವಸ್ತುಗಳನ್ನು ಒಂದೊಂದೇ ಆಗಿ ಉಪಯೋಗಿಸುವುದಕ್ಕಿಂತ ಅನೇಕ ವಿಷಾಣುಗಳ ವಿಷಗಳ ಮಿಶ್ರಣವನ್ನು ಉಪಯೋಗಿಸುವುದೂ ರೂಢಿಯಲ್ಲಿ ಉಂಟು. ಇಂಥ ವಿಷಮಿಶ್ರಣವನ್ನು ತಯಾರಿಸಬೇಕಾದರೆ ಮೊದಲು ಸೂಕ್ತರೀತಿಯ ವಿಷಾಣುಗಳನ್ನು ಕೃತಕ ಮಾಧ್ಯಮದಲ್ಲಿ ಕೃಷಿಮಾಡಿ ಶೇಖರಿಸಿ ಬಳಿಕ ಅವನ್ನು ಚೆನ್ನಾಗಿ ತೊಳೆಯಲಾಗುತ್ತದೆ. ಅನಂತರ ಅವನ್ನು ಬೇರ್ಪಡಿಸಿ ಅವಕ್ಕೆಂದೇ ತಯಾರಾದ ವಿಶಿಷ್ಟವಾದ ರುಬ್ಬುವಯಂತ್ರದಲ್ಲಿ ಅರೆದು ಪುನಃ ಅಪಕೇಂದ್ರೀಕರಿಸಿ ನೀರಿನಂತೆ ಸ್ವಚ್ಛವಾದ ವಿಷದ್ರಾವಣವನ್ನು ಬೇರ್ಪಡಿಸಲಾಗುವುದು. ಅಲ್ಪ ಪ್ರಮಾಣದಿಂದ ಪ್ರಾರಂಭಿಸಿ ಸ್ವಲ್ಪಸ್ವಲ್ಪವಾಗಿ ಹೆಚ್ಚಿಸುತ್ತ ಪ್ರಯೋಗ ಪ್ರಾಣಿಗಳಿಗೆ ಇಂಥ ಯಾವುದೇ ವಿಷವಸ್ತುವನ್ನು ಕೊಟ್ಟರೆ ಅವುಗಳ ರಕ್ತದಲ್ಲಿ ವಿಶಿಷ್ಟ ಪ್ರತಿವಿಷವಸ್ತು ಅಧಿಕವಾಗಿ ಉತ್ಪನ್ನವಾಗುತ್ತದೆ. ಈ ವಸ್ತು ಇರುವ ರಕ್ತರಸವನ್ನು ಮಾನವರಲ್ಲಿ ರೋಗ ಚಿಕಿತ್ಸೆ ನಿರೋಧಕ್ಕಾಗಿ ಕೊಡಲಾಗುವುದು. ಇಂಥ ಜೈವಿಕ ಔಷಧಿಗಳಿಗೆಲ್ಲ ಅವುಗಳ ನಿರ್ದಿಷ್ಟ ಚಿಕಿತ್ಸಾಸಾಮಥ್ರ್ಯವಿರುವ ಕಾಲಾವಧಿಯನ್ನು ಸೂಚಿಸಿರುತ್ತದೆ. ಆ ಗಡು ಕಳೆದ ಬಳಿಕ ಸ್ವಲ್ಪ ಕಾಲ ಸಾಮಾನ್ಯವಾಗಿ ಇವನು ಉಪಯೋಗಿಸಬಹುದಾದರೂ ಅಂಥ ಉಪಯೋಗದಿಂದ ನಿರೀಕ್ಷಿತ ಗುಣ ದೊರೆಯುವುದು ಕಷ್ಟ. ಕೆಲವು ವೇಳೆ ಇಂಥ ಕಾಲಾವಧಿ ಮೀರಿದ ಜೈವಿಕ ಔಷಧಗಳಿಂದ ದೇಹಕ್ಕೆ ಘಾತವೇ ಆಗಬಹುದು.[೪]

ಜೈವಿಕ ಔಷಧಿಯ ವಿಧಗಳು ಬದಲಾಯಿಸಿ

ಜೈವಿಕ ಔಷಧಗಳ ಗುಂಪಿಗೆ ಹಾವಿನ ವಿಷ, ಅಗ್ಲೂಟಿನಿನ್, ರಕ್ತರಸ, ಪ್ರತಿಜೈವಿಕಗಳು (ಆಂಟಿಬಯೋಟಿಕ್ಸ್[೫]), ರಕ್ತದ್ರವ, ಲಸಿಕೆಗಳು (ವಿಷಮಜ್ವರದ ವಿರುದ್ಧವಾದ ಟಿ.ಎ.ಬಿ., ನೆಗಡಿವಿರುದ್ಧ ಲಸಿಕೆ, ಪೋಲಿಯೋ ವಿರುದ್ಧ ಲಸಿಕೆ ಇತ್ಯಾದಿ), ನಿರೋಧಜನಕಗಳು (ಆಂಟಿಜೆನಗಳು), ನಿರ್ಬಲಗೊಳಿಸಿದ ವಿಶಿಷ್ಟ ಏಕಾಣು ಇಲ್ಲವೆ ಏಕಾಣುಗಳ ಮಿಶ್ರಣ, ಡಿಫ್ತೀರಿಯಾ, ನಾಯಿಕೆಮ್ಮು ಮತ್ತು ಧನುರ್ವಾಯುಗಳ ನಿವಾರಣೆಗಾಗಿ ಉಪಯೋಗಿಸುವ ದುರ್ಬಲಗೊಳಿಸಿದ ವಿಷವಸ್ತು ಇಲ್ಲವೆ ಪ್ರತಿವಿಷಗಳು ಇವೆಲ್ಲ ಸೇರಿವೆ.

ಜೈವಿಕ ಔಷಧಗಳ ವರ್ಗೀಕರಣ ಬದಲಾಯಿಸಿ

ಕೂರಾದ ರೋಗಚಿಕಿತ್ಸೆಗೆ ಮತ್ತು ತಾತ್ಕಾಲಿಕ ರೋಗನಿವಾರಣೆಗೆ ಉಪಯೋಗಿಸತಕ್ಕವು. ಇವು ಕ್ರಿಯಾತ್ಮಕವಲ್ಲದ (ಪ್ಯಾಸಿವ್) ರೋಗನಿವಾರಣಸಾಮಥ್ರ್ಯವನ್ನು ನೀಡುತ್ತವೆ .
ಪ್ರತಿವಿಷಗಳು (ಹಾವು ಜೇಡರಹುಳುವಿನ ವಿಷದ ವಿರುದ್ಧ) ವಿಶಿಷ್ಟವಾಗಿ ತಯಾರಿಸಿದ ರಕ್ತರಸ.

ಲಸಿಕೆಗಳು ಬದಲಾಯಿಸಿ

ದುರ್ಬಲಗೊಳಿಸಿ ತಯಾರಿಸಿದ ರೋಗಾಣುಗಳ ಹೆಸರಿನಿಂದಲೇ ಲಸಿಕೆಗಳನ್ನು[೬] ಕರೆಯಲಾಗುತ್ತದೆ-ಟೈಫಾಯಿಡ್ ವ್ಯಾಕ್ಸೀನ್, ಪೋಲಿಯೋ ವ್ಯಾಕ್ಸೀನ್, ಡಿಫ್ತೀರಿಯ ಟಾಕ್ಸಾಯ್ಡ್ ಇತ್ಯಾದಿಗಳು ಇಂಥ ಹೆಸರಿರುವ ಲಸಿಕೆಗಳು. ಈ ಲಸಿಕೆಗಳ ತಯಾರಿಕೆಗಾಗಿ ಪ್ರತಿರೋಧಕಗನ್ನು ದುರ್ಬಲಗೊಳಿಸುವುದು ಅತಿಯಾಗಿರಬಾರದು. ಹಾಗಾದರೆ ಇಂಥ ಜೈವಿಕ ಔಷಧವನ್ನು ಸ್ವೀಕರಿಸಿದ ವ್ಯಕ್ತಿಯಲ್ಲಿ ಪ್ರತಿರೋಧಕಗಳು ಉತ್ಪನ್ನವಾಗದೇ ಇರಬಹುದು. ಸಿಡುಬು, ಪೀತಜ್ವರ, ಕ್ಷಯ ಈ ರೋಗಗಳ ವಿಷಾಣುಗಳನ್ನು ದುರ್ಬಲೀಕರಿಸಿ ವ್ಯಕ್ತಿಯ ದೇಹದೊಳಕ್ಕೆ ಸೇರಿಸಿದರೂ ಅವು ಕೆಲಮಟ್ಟಿಗೆ ವೃದ್ಧಿಹೊಂದುತ್ತವೆ. ಆದರೆ ದೇಹವೆಲ್ಲ ವ್ಯಾಪಿಸದೆ ಸ್ಥಳೀಯವಾಗಿ ನೆಲೆಸಿ ಅಲ್ಪಕಾಲದ ಅಲ್ಪತೀಕ್ಷ್ಣತೆಯ ರೋಗವನ್ನು ಉಂಟುಮಾಡಿ ಮುಂದೆ ಪ್ರಾಪ್ತವಾಗಬಹುದಾದ ಪ್ರಬಲ ಸೋಂಕಿನ ವಿರುದ್ಧ ರಕ್ಷಣೆಯನ್ನು ಒದಗಿಸುತ್ತವೆ. ಟೈಫಾಯಿಡ್, ನಾಯಿಕೆಮ್ಮು, ಪೋಲಿಯೋ ವಿಷಾಣುಗಳನ್ನು[೭] ಪೂರ್ಣವಾಗಿ ಸಾಯಿಸಿ ಜೈವಿಕ ಔಷಧವನ್ನಾಗಿ ಉಪಯೋಗಿಸಲಾಗುತ್ತದೆ. ಡಿಫ್ತೀರಿಯ ಟೆಟನಸುಗಳ ವಿಷಾಣುವಿಷಗಳನ್ನು ಕಾವು ಮತ್ತು ರಾಸಾಯನಿಕ ಮಿಶ್ರಣದಿಂದ ದುರ್ಬಲೀಕರಿಸಲಾಗುತ್ತದೆ. ಏಕಾಣುಗಳ್ನು ದುರ್ಬಲೀಕರಿಸಲು ಅವನ್ನು ನಿರ್ದಿಷ್ಟ ಕೃತಕಮಾಧ್ಯಮದಲ್ಲಿ ಪದೇ ಪದೇ ಕೃಷಿ ಮಾಡಲಾಗುತ್ತದೆ. ಇಲ್ಲವೆ ವಿಶೇಷ ಪರಿಸ್ಥಿತಿಗಳಲ್ಲಿ ಕೃಷಿ ಮಾಡಲಾಗುತ್ತದೆ.[೮]

ಉಲ್ಲೇಖಗಳು ಬದಲಾಯಿಸಿ

  1. Research, Center for Biologics Evaluation and (18 December 2019). "Licensed Biological Products with Supporting Documents". FDA (in ಇಂಗ್ಲಿಷ್). Retrieved 11 January 2020.
  2. https://kidshealth.org/en/parents/polio-vaccine.html
  3. "Vaccine Animal Cells: Do You Really Want Cow, Bird, Pig & Dog DNA in your Body?". Retrieved 11 January 2020.
  4. "Vaccine Side Effects and Adverse Events | History of Vaccines". www.historyofvaccines.org (in ಇಂಗ್ಲಿಷ್). Retrieved 11 January 2020.
  5. https://www.medicalnewstoday.com/articles/10278.php
  6. "What are vaccines?". Immunize BC (in ಇಂಗ್ಲಿಷ್). 17 November 2017. Archived from the original on 11 ಜನವರಿ 2020. Retrieved 11 January 2020.
  7. "WHO EMRO | Oral polio vaccine and its production | Information resources | Polio eradication initiative". www.emro.who.int. Retrieved 11 January 2020.
  8. Salk, Jonas E. (18 April 1959). "POLIOMYELITIS VACCINE PREPARATION AND ADMINISTRATION: ANALYSIS OF BASIC PREMISES AND CURRENT PRACTICES". Journal of the American Medical Association (in ಇಂಗ್ಲಿಷ್). pp. 1829–1838. doi:10.1001/jama.1959.03000330001001. Retrieved 11 January 2020.