ಜೇಮ್ಸ್ ಹಾಪ್‍ವುಡ್ ಜೀನ್ಸ್

ಗಣಿತಜ್ಞ

ಜೇಮ್ಸ್ ಹಾಪ್‍ವುಡ್ ಜೀನ್ಸ್ (1877-1946 ). ಇಂಗ್ಲೆಂಡಿನ ಗಣಿತ ಮತ್ತು ಖಭೌತವಿಜ್ಞಾನಿ.

ಲಂಡನ್ನಿನ ಸೌತ್ ಪೋರ್ಟಿನಲ್ಲಿ 1877ರ ಸೆಪ್ಟೆಂಬರ್ 11ರಂದು ಜನನ. ಮರ್ಚೆಂಟ್ ಟೇಲರ್ಸ್ ಸ್ಕೂಲ್, ಟ್ರಿನಿಟಿ ಕಾಲೇಜ್ ಮತ್ತು ಕೇಂಬ್ರಿಜಿನಲ್ಲಿ ವಿದ್ಯಾಭ್ಯಾಸ. ಕೇಂಬ್ರಿಜಿನಿಂದ 1898ರಲ್ಲಿ ಗಣಿತಶಾಸ್ತ್ರದಲ್ಲಿ ದ್ವಿತೀಯ ಸ್ಥಾನ ಪಡೆದು ತೇರ್ಗಡೆಯಾದ. 1900ರಲ್ಲಿ ಈತನಿಗೆ ಸ್ಮಿತ್ ಬಹುಮಾನ ದೊರೆಯಿತು. 1901ರಲ್ಲಿ ಫೆಲೋ ಆಫ್ ಟ್ರಿನಿಟಿ ಆಗಿ ಆಯ್ಕೆಯಾದ. 1904ರಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕನಾಗಿಯೂ 1905-09ರ ವರೆಗೆ ಅನ್ವಯ ಗಣಿತಶಾಸ್ತ್ರದಲ್ಲಿ ಪ್ರಿನ್ಸ್‍ಟನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಾಗಿಯೂ 1910-12ರ ವರೆಗೆ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಸ್ಟೋಕ್ಸ್ ಅಧ್ಯಾಪಕನಾಗಿಯೂ ಸೇವೆ ಸಲ್ಲಿಸಿದ. ಪ್ರಾಬ್ಲೆಮ್ಸ್ ಆಫ್ ಕಾಸ್ಮಾಗನಿ ಅಂಡ್ ಸ್ಟೆಲ್ಲಾರ್ ಡೈನಮಿಕ್ಸ್ ಎಂಬ ಈತನ ಪ್ರಬಂಧಕ್ಕೆ 1917ರಲ್ಲಿ ಆ್ಯಡಮ್ ಬಹುಮಾನ ದೊರೆಯಿತು. 1919-29ರವರೆಗೆ ರಾಯಲ್ ಸೊಸೈಟಿಯ ಕಾರ್ಯಾದರ್ಶಿಯಾಗಿ, 1923ರಲ್ಲಿ ಮೌಂಟ್ ವಿಲ್ಸನ್ ವೀಕ್ಷಣಾಲಯದಲ್ಲಿ ಸಂಶೋಧನ ಸಹಾಯಕನಾಗಿ, 1922ರಲ್ಲಿ ಆಕ್ಸ್‍ಪರ್ಡಿನಲ್ಲಿ ಹ್ಯಾಲಿ ಅಧ್ಯಾಪಕನಾಗಿ, 1924-1929ರ ರಾಯಲ್ ಇನ್ಸ್‍ಟಿಟ್ಯೂಷನ್ನಿನಲ್ಲಿ ಖಗೋಳಶಾಸ್ತ್ರದ ಪ್ರಾಧ್ಯಾಪಕನಾಗಿ, 1925-1927ರ ವರೆಗೆ ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿಯ ಅಧ್ಯಕ್ಷನಾಗಿ, 1934ರಲ್ಲಿ ಬ್ರಿಟಿಷ್ ಅಸೋಸಿಯೇಷನ್ನಿನ ಮತ್ತು 1938ರಲ್ಲಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ನಿನ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದಾನೆ. ಈತನಂತೆ ಹೇರಳವಾಗಿ ಪದಕಗಳನ್ನೂ ಗೌರವ ಡಿಗ್ರಿಗಳನ್ನೂ ಪಡೆದವರು ವಿರಳ. 1919ರಲ್ಲಿ ರಾಯಲ್ ಸೊಸ್ಶೆಟಿಯ ಪದಕವೂ 1922ರಲ್ಲಿ ರಾಯಲ್ ಅಸ್ಟ್ರನಾಮಿಕಲ್ ಸೊಸ್ಶೆಟಿಯ ಚಿನ್ನದ ಪದಕವೂ 1931ರಲ್ಲಿ ಫ್ರಾಂಕ್ಲಿನ್ ಇನ್‍ಸ್ಟಿಟ್ಯೂಟಿನ ಪದಕವೂ 1937ರಲ್ಲಿ ಇಂಡಿಯನ್ ಅಸೋಸಿಯೇಷನ್ನಿನ ಮುಖರ್ಜಿ ಪದಕವೂ 1938ರಲ್ಲಿ ಬಂಗಾಳದ ರಾಯಲ್ ಏಷಿಯಾಟಿಕ್ ಸೊಸ್ಶೆಟಿಯ ಪದಕವೂ 1939ರಲ್ಲಿ ಬ್ರಿಟನ್ನಿನ ದಿ ಆರ್ಡರ್ ಆಫ್ ಮೆರಿಟ್ ಪದವಿಯೂ ಈತನಿಗೆ ದೊರೆತವು. ಈತನ ಪ್ರತಿಭೆಯನ್ನೂ ವಿಜ್ಞಾನಕ್ಕೆ ಈತ ಸಲ್ಲಿಸಿದ ಸೇವೆಯನ್ನೂ ಗುರುತಿಸಿ 1928ರಲ್ಲಿ ಇವನಿಗೆ ನೈಟ್ (ಸರ್) ಪದವಿಯನ್ನಿತ್ತು ಗೌರವಿಸಲಾಯಿತು.

ಜೇಮ್ಸ್ ಜೀನ್ಸನು ಗಣಿತಶಾಸ್ತ್ರವನ್ನು ಭೌತಶಾಸ್ತ್ರದ ಅನೇಕ ಭಾಗಗಳಿಗೆ ಗಮನಾರ್ಹವಾದ ಫಲಿತಾಂಶದೊಡನೆ ಪ್ರಯೋಗಿಸಿದ್ದಾನೆ. ಅನಿಲಗಳ ಚಲನ ಸಿದ್ಧಾಂತದಲ್ಲಿ ಈತ ಶಕ್ತಿಯ ಸಮವಿಭಾಗೀಕರಣ ನಿಯಮಕ್ಕೂ ಮ್ಯಾಕ್ಸ್‍ವೆಲ್ಲನ ಅಣುಗಳ ವೇಗವಿತರಣೆಯ ನಿಯಮಕ್ಕೂ ಸಾಧನೆಗಳನ್ನು ಕೊಟ್ಟಿದ್ದಾನೆ. ಹಾಗೆಯೇ ಕಪ್ಪು ವಸ್ತುವಿನಿಂದ ಹೊರಹೊಮ್ಮುವ ಶಕ್ತಿಯ ಹಂಚಿಕೆಗೂ ಸೂತ್ರವನ್ನು ಆವಿಷ್ಕರಿಸಿದ್ದಾನೆ. ಇಲ್ಲಿ ಅಭಿಜಾತ ವಿಧಾನಗ¼ನ್ನು ಬಳಸಿ ಶೋಧಿಸಿದ ಸೂತ್ರ ರ್ಯಾಲಿಯ ನೀಳ ಅಲೆಯುದ್ಧಗಳ ಸೂತ್ರಕ್ಕೆ ಸಮವಾಗಿದೆ. ವಿಕಿರಣದ (ರೇಡಿಯೇಷನ್) ಬೇರೆ ಬೇರೆ ಮುಖಗಳ ಬಗ್ಗೆಯೂ ಈತ ಸಂಶೋಧನೆ ಮಾಡಿದ್ದಾನೆ. ಇದರಲ್ಲಿ ವಿಕಿರಣ ಮತ್ತು ಸ್ವತಂತ್ರ ಎಲೆಕ್ಟ್ರಾನುಗಳ ಅಂತರ ಕ್ರಿಯೆ ಮುಖ್ಯವಾದದ್ದು. ಭೌತವಿಜ್ಞಾನದಲ್ಲಿ ಜೀನ್ಸನ ಸಂಶೋಧನೆಗಳು ಸಾಕಷ್ಟಿದ್ದರೂ ಖಗೋಳವಿಜ್ಞಾನ ಈತನಿಗೆ ಅತಿ ಪ್ರಿಯವಾದ ಕ್ಷೇತ್ರ. ಅದರಲ್ಲಿಯೂ ವಿಶ್ವಸೃಷ್ಟಿವಾದದ (ಕಾಸ್ಮಾಗನಿ) ಅನೇಕ ಸಮಸ್ಯೆಗಳಿಗೆ ಗಣಿತ ವಿಶ್ಲೇಷಣೆಯನ್ನೂ ಕೊಟ್ಟಿದ್ದಾನೆ. ಈ ವಿಶ್ಲೇಷಣೆಯಿಂದ ವಿಶ್ವ ವಿಜ್ಞಾನದ (ಕಾಸ್ಮಾಲಜಿ) ಅನೇಕ ಮೂಲ ಸಿದ್ಧಾಂತಗಳು ಪ್ರಕಟವಾಗಿವೆ. ಉದಾಹರಣೆಗೆ ಪಿಯರ್ ಆಕಾರದ ಆಕೃತಿಗಳ (ಪಿಯರ್ ಷೇಪ್ಡ್ ಫಿಗರ್ಸ) ಸ್ಥಿರತೆಯ ಬಗ್ಗೆ ಈತನ ವಿಶ್ಲೇಷಣೆಯನ್ನು ಪರಿಶೀಲಿಸಬಹುದು. ಇಂಥ ವಸ್ತುಗಳು ಮೊದಲು ಅಸಂಪೀಡನಶೀಲ (ಇನ್ ಕಂಪ್ರೆಸಿಬಲ್) ದ್ರವದಲ್ಲಿ ಆವರ್ತಿಸುತ್ತಿರುವುವೆಂದು ಕಲ್ಪಿಸಿ ತರುವಾಯ ಅದೇ ದ್ರವವನ್ನು ಸಂಪೀಡನಶೀಲ (ಕಂಪ್ರೆಸಿಬಲ್) ದ್ರವವನ್ನಾಗಿ ಪರಿಗಣಿಸಿ ತನ್ನ ಗಣಿತ ವಿಶ್ಲೇಷಣೆಯನ್ನು ಜೀನ್ಸ್ ಕೊಟ್ಟಿದ್ದಾನೆ. ಒಂದು ಕಾಯ ಇನ್ನೊಂದನ್ನು ಸಮೀಪಿಸಿದಾಗ ಮೊದಲನೆಯದರಲ್ಲಿ ಉಬ್ಬರವಿಳಿತಗಳುಂಟಾಗುತ್ತವೆ. ಇದರಿಂದ ಆ ಕಾಯ ಬಿರಿಯುವ ಸಂಭಾವ್ಯತೆಯೂ ಉಂಟು. ಈ ಬಿರಿತದ ಸಮಸ್ಯೆಗೆ ಮೇಲಿನ ಗಣಿತ ವಿಶ್ಲೇಷಣೆಯನ್ನೇ ಪ್ರಯೋಗಿಸಿ ಬಳಿಕ ಇದನ್ನು ನಕ್ಷತ್ರಗಳ ಬಿರಿತಕ್ಕೆ ಅಳವಡಿಸಿದ್ದಾನೆ. ಇಂಥ ಬಿರಿತದಿಂದಲೇ ಗ್ರ್ರಹಗಳೂ ಉಪಗ್ರಹಗಳೂ ಉಂಟಾದವು ಎಂದು ಜೀನ್ಸನ ವಾದ. ಇದಲ್ಲದೆ ಸೌರವ್ಯೂಹದ ಉಗಮದ ವಿಚಾರದಲ್ಲಿ ಕಾಂಟ್ ಮತ್ತು ಲಾಪ್ಲಾಸರು ಮಂಡಿಸಿದ ನೆಬ್ಯುಲ ಊಹೆಯನ್ನು (ನೆಬ್ಯುಲರ್ ಹೈಪಾಥಿಸಿಸ್) ತಪ್ಪೆಂದು ಜೀನ್ಸ್ ತೋರಿಸಿದ್ದಾನೆ. ಕೇಂಬ್ರಿಜಿನ ಹೆರಾಲ್ಡ್ ಜೆಫ್ರೀಸ್ ಎಂಬಾತನೊಡನೆ ಜೀನ್ಸ್ ಮಂಡಿಸಿದ ಸೌರವ್ಯೂಹ ನಿರ್ಮಾಣವನ್ನು ಕುರಿತ ವಾದ ವಿವಾದಾಸ್ಪದವಾಗಿದ್ದರೂ ಬಲುಮಂದಿ ವಿಶ್ವಸೃಷ್ಟಿವಾದಿಗಳು ಇದನ್ನು ಒಪ್ಪಿಕೊಂಡಿದ್ದಾರೆ. ನಕ್ಷತ್ರಚಲನೆಯ ಮೇಲೆ ಗುರುತ್ವಾಕರ್ಷಣದ ಪರಿಣಾಮದ ಬಗ್ಗೆಯೂ ಜೀನ್ಸ್ ಸಂಶೋಧನೆಯನ್ನು ನಡೆಸಿದ್ದಾನೆ. ಇಷ್ಟಲ್ಲದೆ ಯಮಳ ನಕ್ಷತ್ರಗಳ ಸ್ವಭಾವ ಮತ್ತು ರಚನೆ, ಸರ್ಪಿಲ ನೆಬ್ಯುಲಗಳ (ಸ್ಪೈರಲ್ ನೆಬ್ಯುಲೆ) ಪ್ರಕೃತಿ, ದೈತ್ಯ ಮತ್ತು ಕುಬ್ಜ ನಕ್ಷತ್ರಗಳು, ನಕ್ಷತ್ರ ಶಕ್ತಿಯ ಮೂಲ, ಅನಿಲ ರೂಪದ ನಕ್ಷತ್ರಗಳು ಮತ್ತು ಈ ನಕ್ಷತ್ರಗಳ ವಿಕಸನ ಮತ್ತು ವಿಕಿರಣ-ಇವೇ ಮೊದಲಾದ ವಿಷಯಗಳ ಮೇಲೆ ಜೀನ್ಸ್ ಪ್ರೌಢ ಪ್ರಬಂಧಗಳನ್ನು ಬರೆದಿದ್ದಾನೆ. ಈತ ವಿಖ್ಯಾತ ವಿಜ್ಞಾನಿಯಾಗಿರುವಂತೆಯೇ ತತ್ವ ಶಾಸ್ತ್ರಜ್ಞನೂ ಹೌದು. ವಿಜ್ಞಾನದಲ್ಲಿ ಗಣಿತಶಾಸ್ತ್ರದ ಪಾತ್ರವನ್ನು ಜೀನ್ಸ್ ಬಲುವಾಗಿ ಎತ್ತಿಹಿಡಿದಿದ್ದಾನೆ. ಗಣಿತವಲ್ಲದ ಸತ್ಯ ಇಲ್ಲವೆಂಬುದೇ ಈತನ ಮತ. ಆದ್ದರಿಂದಲೇ ಇವನನ್ನು ಆಧುನಿಕ ಪೈಥಾಗೊರಸ್ ಎಂದು ಹೇಳುವುದುಂಟು.

ಕೃತಿಗಳು

ಬದಲಾಯಿಸಿ

ಡೈನಮಿಕಲ್ ಥಿಯರಿ ಆಫ್ ಗ್ಯಾಸಸ್ (1904), ಮ್ಯಾಥ್‍ಮ್ಯಾಟಿಕಲ್ ಥಿಯರಿ ಆಫ್ ಎಲೆಕ್ಟ್ರಿಸಿಟಿ ಅಂಡ್ ಮ್ಯಾಗ್ನೆಟಿಸಮ್ (1908), ಪ್ರಾಬ್ಲಮ್ಸ್ ಆಫ್ ಕಾಸ್ಮಾಗನಿ ಅಂಡ್ ಸ್ಟೆಲ್ಲಾರ್ ಡ್ಯೆನಮಿಕ್ಸ್ (1919), ರೇಡಿಯೇಷನ್ ಅಂಡ್ ಕ್ವಾಂಟಮ್ ಥಿಯರಿ (1914), ಅಟಾಮಿಸಿಟಿ ಅಂಡ್ ಕ್ವಾಂಟ (1926), ಅಸ್ಟ್ರಾನಮಿ ಅಂಡ್ ಕಾಸ್ಮಾಗನಿ (1928)-ಇವು ಸರ್ ಜೇಮ್ಸ್ ಜೀನ್ಸನ ಪ್ರೌಢ ಕೃತಿಗಳು. ತಾಂತ್ರಿಕವಲ್ಲದ ಅಂದರೆ ಜನಪ್ರಿಯವಾದ ಗ್ರಂಥಗಳ ರಚನೆಯಲ್ಲಿ ಜೀನ್ಸ್ ಒಂದು ಹೊಸ ಹಾದಿಯನ್ನೇ ನಿರ್ಮಿಸಿದ. ಅತಿಕ್ಲಿಷ್ಟವಾದ ವ್ಯೆಜ್ಞಾನಿಕ ಸಿದ್ಧಾಂತಗಳನ್ನೂ ಸುಲಭವಾಗಿ ಅರ್ಥವಾಗುವಂತೆ ತಿಳಿಸಿದ ಅಸಾಧಾರಣ ಪ್ರತಿಭೆ ಈತನದು. ವಿಜ್ಞಾನವನ್ನು ಜನಪ್ರಿಯಗೊಳಿಸಿದ ಕೀರ್ತಿ ಜೀನ್ಸನಿಗೆ ಸಲ್ಲಬೇಕು. ದಿ ಯೂನಿವರ್ಸ್ ಅರೌಂಡ್ ಅಸ್ (1929), ದಿ ಮಿಸ್ಟೀರಿಯಸ್ ಯೂನಿವರ್ಸ್ (1930), ದಿ ಸ್ಟಾರ್ಸ್ ಇನ್ ದೆಯರ್ ಕೋರ್ಸಸ್ (1931), ದಿ ನ್ಯೂ ಬ್ಲಾಕ್‍ಗ್ರೌಂಡ್ ಆಫ್ ಸೈನ್ಸ್ (1933), ಫಿಸಿಕ್ಸ್ ಅಂಡ್ ಫಿಲಾಸಫಿ (1942), ದಿ ಗ್ರೋತ್ ಆಫ್ ಫಿಸಿಕಲ್ ಸೈನ್ಸ್ (1947)-ಇವು ಜೀನ್ಸನ ಅತ್ಯಂತ ಜನಪ್ರಿಯ ಪುಸ್ತಕಗಳು.