ಜೇಮ್ಸ್ ಏಬ್ರಂ ಗಾರ್ಫೀಲ್ಡ್
ಗಾರ್ಫೀಲ್ಡ, ಜೇಮ್ಸ್ ಏಬ್ರಂ
ಬದಲಾಯಿಸಿ1831-81. ಅಮೆರಿಕ ಸಂಯುಕ್ತ ಸಂಸ್ಥಾನದ ಇಪ್ಪತ್ತನೆಯ ಅಧ್ಯಕ್ಷ.
ಬದುಕು ಮತ್ತು ರಾಜಕಾರಣ
ಬದಲಾಯಿಸಿಒಹಾಯೊ ರಾಜ್ಯದ ಕಹಾಗ ಕೌಂಟಿಯ ಆರೆಂಜ್ ಎಂಬ ನಗರದ ಬಳಿ ಸಣ್ಣ ಹೊಲವೊಂದರ ಗುಡಿಸಲೊಂದರಲ್ಲಿ 1831ರ ನವೆಂಬರ್ 19ರಂದು ಹುಟ್ಟಿದ. ಗಾರ್ಫೀಲ್ಡನಿಗೆ ಕೇವಲ ಎರಡು ವರ್ಷ ವಯಸ್ಸಾಗಿದ್ದಾಗ ತಂದೆ ತೀರಿಕೊಂಡ. ಸಂಸಾರ ಬಡತನವನ್ನು ಎದುರಿಸ ಬೇಕಾಯಿತು. ತಾಯಿ ಧೈರ್ಯ ದಿಂದ ತನ್ನ ಹಿರಿಯ ಮಗನೊಂದಿಗೆ ಹೊಲದ ಕೆಲಸ ನಿರ್ವಹಿಸಿದಳು. ಮಕ್ಕಳು ತಾಯಿಯ ಅಂಕೆಯಲ್ಲಿ ಸುಶಿಕ್ಷಿತರಾಗಿ ಬೆಳೆದರು. ದುಡಿಮೆಯ ಬೆಲೆ ಅರಿತರು. ಚರ್ಚಿನಲ್ಲಿ ಶ್ರದ್ಧೆ ಮೂಡಿಸಿ ಕೊಂಡರು,
1856ರಲ್ಲಿ ಗಾರ್ಫೀಲ್ಡ ವಿಲಿಯಮ್ಸ ಕಾಲೇಜ್ನಿಂದ ಪದವೀಧರನಾದ. ಅನಂತರ ಸ್ವಲ್ಪ ಕಾಲ ಹಿರಾಯ್ನಲ್ಲಿಯ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಾಪಕನಾಗಿದ್ದ. ಕ್ರೈಸ್ತವಲಯಗಳಲ್ಲಿ ಒಳ್ಳೆಯ ಉಪನ್ಯಾಸಕನೆಂದು ಇವನಿಗೆ ಹೆಸರು ಬಂದಿತ್ತು. ಹೊಸದಾಗಿ ಸ್ಥಾಪಿತವಾಗಿದ್ದ ರಿಪಬ್ಲಿಕನ್ ಪಕ್ಷದ ಕಡೆಗೆ ಈತನ ಒಲವು ಬೆಳೆದಿತ್ತು. 1859ರಲ್ಲಿ ಒಹಾಯೊ ವಿಧಾನ ಮಂಡಲಕ್ಕೆ ಸದಸ್ಯನಾಗಿ ಆಯ್ಕೆ ಹೊಂದಿದ. ಅಮೆರಿಕನ್ ಅಂತರ್ಯುದ್ಧ ಕಾಲದಲ್ಲಿ ಇವನು ಸೇನೆಗೆ ಯೋಧರನ್ನು ಸಂಗ್ರಹಿಸಿ ಸ್ವತಃ ಕರ್ನಲ್ ಆಗಿ ಹೋರಾಡಿದ. ಎರಡು ವರ್ಷಗಳಲ್ಲಿ ಇವನು ಮೇಜರ್ ಜನರಲ್ ದರ್ಜೆಗೆ ಏರಿದ್ದ.
19ನೆಯ ಒಹಾಯೊ ಜಿಲ್ಲೆಯಿಂದ ಕಾಂಗ್ರೆಸಿಗೆ ಗಾರ್ಫೀಲ್ಡನ ಆಯ್ಕೆಯಾಯಿತು (1863). ಚೈತನ್ಯಶೀಲನೂ ದಕ್ಷನೂ ಸ್ನೇಹಪ್ರಿಯನೂ ಆಗಿದ್ದ ಗಾರ್ಫೀಲ್ಡ ಬಹು ಬೇಗ ಖ್ಯಾತಿ ಗಳಿಸಿದ. ಮುಂದಿನ ಹದಿನಾರು ವರ್ಷಗಳ ಅವಧಿಯಲ್ಲಿ ನಡೆದ ಚುನಾವಣೆಗಳಲ್ಲಿ ಇವನು ಸಾಮಾನ್ಯವಾಗಿ ಹೆಚ್ಚು ಕಷ್ಟವಿಲ್ಲದೆ ಕಾಂಗ್ರೆಸಿಗೆ ಆಯ್ಕೆ ಹೊಂದುತ್ತಿದ್ದ. ಅವು ಅಂತರ್ಯುದ್ಧದ, ರಾಷ್ಟ್ರ ಪುನರ್ರಚನೆಯ, ಕ್ಷೋಭೆಯ ದಿನಗಳು. ರಿಪಬ್ಲಿಕನ್ ಪಕ್ಷದಲ್ಲಿ ಗಾರ್ಫೀಲ್ಡ ಒಬ್ಬ ಸಂಪ್ರದಾಯವಾದಿಯಾಗಿದ್ದ. ಹಣಸಂಬಂಧವಾಗಿ ರಾಜಕೀಯ ಕ್ಷೇತ್ರಗಳಲ್ಲಿ ಅನೈತಿಕ ವ್ಯವಹಾರಗಳು ಆಗ ವಿಶೇಷವಾಗಿ ತೋರಿಬಂದಿದ್ದುವು. ಇವನಿಗೂ ಅಂಥ ಅಪವಾದದ ಅಂಟು ಹತ್ತದೆ ಇರಲಿಲ್ಲ. 1880 ರಲ್ಲಿ ಈತ ಸೆನೆಟಿಗೆ ಆಯ್ಕೆ ಹೊಂದಿದ. ಅಮೆರಿಕ ಸಂಯುಕ್ತಸಂಸ್ಥಾನದ ಅಧ್ಯಕ್ಷ ಪದವಿಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದ. ಆ ಪದವಿಗೆ ಜಾನ್ ಷೆರ್ಮನನನ್ನು ಅಭ್ಯರ್ಥಿಯಾಗಿ ನಾಮಕರಣ ಮಾಡಲು ಈತ ಪ್ರಯತ್ನಿಸಿದ. ಈ ಸಂಬಂಧವಾಗಿ ಬಿಕ್ಕಟ್ಟು ಸಂಭವಿಸಿ ಕೊನೆಗೆ ಅದಕ್ಕೆ ಗಾರ್ಫೀಲ್ಡನ ನಾಮಕರಣವಾಯಿತು. ಪಕ್ಷದ ಹಲವಾರು ಪ್ರಬಲ ಗುಂಪುಗಳು ಇವನ ಅಭ್ಯರ್ಥಿತನವನ್ನು ವಿರೋಧಿಸುತ್ತಿದ್ದುವು. ಕೊನೆಗೆ ಈತ ಕೆಲವೇ ಮತಗಳಿಂದ ವಿಜಯಗಳಿಸಿ, 1881 ರ ಮಾರ್ಚ್ 4 ರಂದು ಅಧಿಕಾರಾರೋಹಣ ಮಾಡಿದ. ಪಕ್ಷದಲ್ಲಿದ್ದ ಈತನ ಶತ್ರುಗಳು ಇವನ ವಿರುದ್ಧ ಹೋರಾಟ ನಡೆಸಿದರು. ತಮಗೆ ಹಲವಾರು ಸವಲತ್ತುಗಳನ್ನು ನೀಡದಿದ್ದರೆ ಸಹಕಾರ ನೀಡುವುದಿಲ್ಲವೆಂದು ಹೇಳಿ ಒತ್ತಾಯ ಹಾಕಿದರು. ಗಾರ್ಫೀಲ್ಡ ಮಣಿಯಲಿಲ್ಲ. ಜುಲೈ 2 ರಂದು ಚಾರಲ್ಸ ಜೆ, ಗಿಟೌ ಎಂಬವನು ಇವನ ಮೇಲೆ ಗುಂಡು ಹಾರಿಸಿದ. ಆತ ಗಾರ್ಫೀಲ್ಡನಿಂದ ಹುದ್ದೆಯೊಂದನ್ನು ಬಯಸಿದ ನಿರಾಶನಾಗಿದ್ದವನೆಂದೂ ಪ್ರಾಯಶಃ ಮತಿವಿಕಲನಾಗಿದ್ದನೆಂದು ಹೇಳಲಾಗಿದೆ. ಸೆಪ್ಟೆಂಬರ್ 19ರಂದು ಗಾರ್ಫೀಲ್ಡ ನಿಧನ ಹೊಂದಿದ.