ಜೆಸ್ಟರೋಮನೋರಮ್ ಎಂದರೆ ರೋಮನರ ಸಾಹಸಗಳು ಎಂದರ್ಥ. ಇದು ಬೋಧಕರಿಗೆ ಉಪಯುಕ್ತವೆನಿಸಿರುವ ನೀತಿಪುರ ಲ್ಯಾಟಿನ್ ಕಥೆಗಳನ್ನು ಒಳಗೊಂಡ ಸಂಕಲನ. ಇದರ ಕಾಲ ಸುಮಾರು ೧೩ ನೆಯ ಶತಮಾನದ ಅಂತ್ಯ ಅಥವಾ ೧೪ ನೆಯ ಶತಮಾನದ ಆದಿ ಎಂದು ಗುರುತಿಸಲಾಗಿದೆ. ಇದರ ಕರ್ತೃವಿನ ಬಗೆಗೆ ನಿರ್ದಿಷ್ಟವಾಗಿ ಏನೂ ತಿಳಿದುಬರುವುದಿಲ್ಲ. ಆ ಕಾಲದ ಅತ್ಯಂತ ಜನಪ್ರಿಯ ಕೃತಿಗಳಲ್ಲಿ ಇದೂ ಒಂದು. ಅಷ್ಟೇ ಅಲ್ಲ ಚಾಸರ್, ಜಾನ್ ಗೋವರ್, ತಾಮಸ್ ಆಕ್ಲಿವ್, ಷೇಕ್ಸಪಿಯರ್ ಮುಂತಾದವರ ಕೆಲವು ಕೃತಿಗಳಿಗೆ ಪ್ರತ್ಯಕ್ಷವಾಗಿಯೋ ಅಪ್ರತ್ಯಕ್ಷವಾಗಿಯೋ ನೆರವಾದ ಮೂಲಕೃತಿ.


ರೋಮನರ ಸಾಹಸಗಳು ಎಂಬ ಹೆಸರು ಈ ಸಂಕಲನಕ್ಕೆ ಭಾಗಶಃ ಅನ್ವಯವಾಗುತ್ತದೆ. ಏಕೆಂದರೆ, ಇದರಲ್ಲಿ ಪ್ರಾಚೀನ ಇತಿಹಾಸ ಮತ್ತು ಪೌರಾಣಿಕ ಕಥೆಗಳು ಪೌರಸ್ತ್ಯ ಮತ್ತು ಯೂರೋಪಿನಲ್ಲಿರುವಂಥ ವೈವಿಧ್ಯಮಯ ಕಥೆಗಳೂ ಇವೆ. ಇದರ ಶೈಲಿ ತುಂಬ ಕೆಳಮಟ್ಟದ್ದು. ಕಥೆಗಳನ್ನು ಹೇಳುವ ಧಾಟಿ ಸಂಗ್ರಹಕಾರ ಆಯ್ದುಕೊಂಡ ಮೂಲಕ್ಕನುಗುಣವಾಗಿ ವೈವಿಧ್ಯವನ್ನು ತಳೆದಿದ್ದರೂ ಆತ ಇವನ್ನು ಸಂಕಲಿಸಿ ಒಟ್ಟಾಗಿಸುವುದರಲ್ಲಿ ತನ್ನ ಜಾಣ್ಮೆಯನ್ನು ತೋರಿದ್ದಾನೆ ಎನ್ನಬಹುದು. ಉದಾಹರಣೆಗೆ: ಗೈ ಆಫ್ ವಾರ್ ವಿಕ್ ಎಂಬ ಕಥನ ಕವನದ ಶೃಂಗಾರಾಂಕುರ ಸನ್ನಿವೇಶ ಆಕ್ಲೀವನ ಡೇರಿಯಸ್ ಅಂಡ್ ಹಿಸ್ ತ್ರೀ ಸನ್ಸ್ ಎಂಬ ಕಥೆ ಚಾಸರನ ಮ್ಯಾನ್ ಆಫ್ ಲಾಸ್ ಎಂಬ ಕಥೆಯ ಕೆಲವು ಭಾಗ; ಚಕ್ರವರ್ತಿ ತಿಯೋಡೋಸಿಯಸ್‍ನ ಕಥೆ-ಇದು ಷೇಕ್ಸ್‍ಪಿಯರ್‍ನ ಕಿಂಗ್ ಲಿಯರ್ ಅನ್ನು ಪ್ರಧಾನ ಲಕ್ಷಣಗಳಲ್ಲಿ ಹೋಲುತ್ತದೆ.

ಇದರ ಒಂದು ವಿಶಿಷ್ಟ ಗುಣವೆಂದರೆ ಪ್ರತಿ ಕಥೆಯ ಕೊನೆಯಲ್ಲಿ ಒಂದು ನೀತಿಯಿದೆ. ಈ ನೀತಿಕಥೆಗಳು ಇನ್ನೂ ಅನೇಕ ಜನ ಸಾಹಿತಿಗಳಿಗೆ ವಸ್ತುವನ್ನು ಒದಗಿಸಿದೆ.

ಪ್ರತಿಗಳು, ಆವೃತ್ತಿಗಳು, ಆಧಾರಿತ ಕೃತಿಗಳು

ಬದಲಾಯಿಸಿ

೧೫ ನೆಯ ಶತಮಾನದಲ್ಲಿ ಯೂಟ್ರೆಕ್ಟ್ ಮತ್ತು ಕಲೋನ್‍ನಿಂದ ಹೊರಬಂದ ಮುದ್ರಿತ ಕೃತಿಗಳೇ ಅತ್ಯಂತ ಪ್ರಾಚೀನವಾದುವು. ಆದರೆ ಇವುಗಳ ನಿರ್ದಿಷ್ಟವಾದ ಕಾಲ ತಿಳಿದುಬಂದಿಲ್ಲ. ಇದೇ ಶತಮಾನದಲ್ಲಿ ಮೂರು ಇಂಗ್ಲಿಷ್ ಭಾಷೆಯ ಪ್ರತಿಗಳು ಸಿದ್ದವಾದುವು. ಅವುಗಳಲ್ಲಿ ಮೊದಲೆರಡು ೨೪೪೦ ರಲ್ಲೂ ಮೂರನೆಯದು ಪ್ರಾಯಶಃ ಲಂಡನ್ನಿನ ಬ್ರಿಟಿಷ್ ಮ್ಯೂಸಿಯಂನಲ್ಲಿರುವ ಹಾರ್ಲೆಯಿನ್ ಹಸ್ತಪ್ರತಿ ೫೩೬೯ರ ಆಧಾರದ ಮೇಲೆ ರಚಿತವಾಗಿ ಸುಮಾರು ೧೫೨೪ ರಲ್ಲಿ ವಿಂಗ್‍ಕಿನ್ ಡ ವರ್ಡೆಯಿಂದ ಪ್ರಕಾಶಿತವಾಗಿರಬೇಕು. ಕೇಂಬ್ರಿಜ್‍ನ ಸೇಂಟ್ ಜಾನ್ ಕಾಲೇಜಿನಲ್ಲಿ ಇದರ ಒಂದೇ ಒಂದು ಪ್ರತಿಯಿದೆ. ೧೫೭೭ ರಲ್ಲಿ ರಿಚರ್ಡ್ ರಾಬಿನ್‍ಸನ್ ಎಂಬಾತ ಡ ವರ್ಡೆಯಿಂದ ಪ್ರಕಾಶಿತವಾದ ಕೃತಿಯನ್ನು ಪರಿಷ್ಕರಿಸಿ ಪ್ರಕಟಿಸಿದ. ಇದು ಅತ್ಯಂತ ಜನಪ್ರಿಯವಾದ ಕೃತಿ ಎನಿಸಿತು. ಇದು ೨೬೪೮ ಮತ್ತು ೧೭೦೩ ರ ಅವಧಿಯಲ್ಲಿ ಕಡಿಮೆ ಎಂದರೆ ಎಂಟು ಆವೃತ್ತಿಗಳನ್ನು ಕಂಡಿತು. ೧೭೦೩ ರಲ್ಲಿ ಬ್ರಾಥೊಲೊಮೀನ್ ಪ್ರಾಟ್ ಎಂಬಾತ ಲ್ಯಾಟಿನ್ ಕೃತಿಯನ್ನು ಆಧರಿಸಿ ಭಾಷಾಂತರಿಸಿದ ಮೊದಲ ಸಂಪುಟವನ್ನು ಹೊರತಂದ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: