ಜುಮಿಕಿ ಗಿಡ
ಜುಮಿಕಿ ಗಿಡವು ಪ್ಯಾಸಿಫ್ಲೋರೇಸೀ ಕುಟುಂಬಕ್ಕೆ ಸೇರಿದ ಒಂದು ಬಳ್ಳಿ. ಪ್ಯಾಸಿಫ್ಲೋರ ಇದರ ಶಾಸ್ತ್ರೀಯ ಹೆಸರು. ಇದರಲ್ಲಿ ಹಲವಾರು ಪ್ರಭೇದಗಳುಂಟು. ಇವುಗಳ ತವರು ಉಷ್ಣ ಹಾಗೂ ಸಮಶೀತೋಷ್ಣವಲಯಗಳು. ಅಮೆರಿಕ, ಏಷ್ಯ, ಆಸ್ಟ್ರೇಲಿಯ, ಪಾಲಿನೇಷ್ಯಗಳಲ್ಲಿ ಇವು ಕಾಡುಗಿಡಗಳಾಗಿ ಬೆಳೆಯುತ್ತವೆ. ಭಾರತದಲ್ಲಿ ಎರಡು ಪ್ರಭೇದಗಳು ಮಾತ್ರ ಕಾಡುಗಿಡಗಳಾಗಿ ಬೆಳೆಯುವುವಾದರೂ ಇನ್ನು ಕೆಲವು ಪ್ರಭೇದಗಳನ್ನು ತೋಟಗಳಲ್ಲಿ ಅಲಂಕಾರಕ್ಕಾಗಿಯೂ ಕೆಲವನ್ನು ಹಣ್ಣುಗಳಿಗಾಗಿಯೂ ಬೆಳೆಸುವರು. ಭಾರತದಲ್ಲಿ ಬೆಳೆಯುವ ಪ್ರಭೇದಗಳಲ್ಲಿ ಪ್ರಧಾನವಾದವು; ಪ್ಯಾಸಿಫ್ಲೋರ ಫೀಟಿಡ, ಪ್ಯಾ. ಇನ್‍ಕಾರ್ನೇಟ, ಪ್ಯಾ. ಲಾರಿಫೋಲಿಯ, ಪ್ಯಾ. ಮಾಲಿಸಿಮ, ಪ್ಯಾ. ಕ್ವಾಡ್ರಾಂಗ್ಯುಲೇರಿಸ್ ಮತ್ತು ಪ್ಯಾ. ಎಡ್ಯುಲಿಸ್.
ರಚನೆ
ಬದಲಾಯಿಸಿಜುಮಿಕಿ ಗಿಡದ ವಿವಿಧ ಪ್ರಭೇದಗಳಲ್ಲಿ ಎಲೆಗಳು ಸರಳ ರೀತಿಯವು; ಪರ್ಯಾಯ ಇಲ್ಲವೆ ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿವೆ. ಎಲೆಯ ಅಲಗಿನ ಆಕಾರ ಹಸ್ತದಂತೆ. ಎಲೆಗಳ ಬುಡದಲ್ಲಿರುವ ವೃಂತಪತ್ರಗಳು ಕುಡಿತಂತುಗಳಾಗಿ (ಟೆಂಡ್ರಿಲ್ಸ್) ಮಾರ್ಪಾಟಾಗಿವೆ. ಇವುಗಳ ಸಹಾಯದಿಂದ ಸಸ್ಯ ಆಧಾರಕ್ಕೆ ಸುತ್ತಿಕೊಂಡು ಬೆಳೆಯುತ್ತದೆ. ಹೂಗಳು ಬಹು ದೊಡ್ಡವು; ಆಕರ್ಷಕವಾಗಿವೆ. ಒಂಟೊಂಟಿಯಾಗಿ ಅರಳುತ್ತವೆ. ಇವುಗಳ ಬಣ್ಣ ಹಳದಿ, ಹಸಿರು-ನೀಲಿ, ನಸುಗುಲಾಬಿ, ಕೆಂಪು ಅಥವಾ ನೇರಳೆ ಹೀಗೆ ವೈವಿಧ್ಯಮಯ. ಪ್ರತಿ ಹೂವಿನಲ್ಲಿ 4-5 ಪುಷ್ಟಪತ್ರಗಳು, 4-5 ದಳಗಳು, 4-5 ಕೇಸರಗಳು ಮತ್ತು 3 ಕಾರ್ಪೆಲುಗಳಿಂದ ಕೂಡಿದ ಉಚ್ಚಸ್ಥಾನದ ಅಂಡಾಶಯ ಇವೆ. ಕೇಸರಗಳೆಲ್ಲ ಒಂದುಗೂಡಿ ಕೂಡಿದ ಉಚ್ಚಸ್ಥಾನದ ಅಂಡಾಶಯ ಇವೆ. ಕೇಸರಗಳೆಲ್ಲ ಒಂದುಗೂಡಿ ಆಂಡ್ರೊಫೋರ್ ಎಂಬ ರಚನೆಯನ್ನು ನಿರ್ಮಿಸಿವೆ. ಇದರ ತುದಿಯಿಂದ ಅಂಡಾಶಯದ ಶಲಾಕೆ ಹೊರಬರುತ್ತದೆ. ಅಲ್ಲದೆ ಇದರ ಬುಡದಲ್ಲಿ ಮಕರಂದವನ್ನು ಉತ್ಪಾದಿಸಲು ಗ್ರಂಥಗಳುಂಟು. ಫಲ ಬೆರಿ ಮಾದರಿಯದು; ಗುಂಡನೆಯ ಆಕಾರದ್ದು. ಇದಕ್ಕೆ ದೃಢವಾದ ಸಿಪ್ಪೆಯೂ ಮೃದುವಾದ ಹಾಗೂ ತಿನ್ನಲು ಯೋಗ್ಯವಾದ ತಿರುಳೂ ಉಂಟು. ಬೀಜಗಳು ಹಲವಾರು.
ಎಡ್ಯುಲಿಸ್ ಪ್ರಭೇದ
ಬದಲಾಯಿಸಿಜುಮಿಕಿ ಗಿಡದ ಹಲವಾರು ಪ್ರಭೇದಗಳಲ್ಲಿ ಅತ್ಯಂತ ಮುಖ್ಯವಾದ್ದು ಎಡ್ಯುಲಿಸ್ ಎಂಬುದು. ಇದರ ತವರು ಬ್ರಜಿಲ್. ಸಾಮಾನ್ಯ ಬಳಕೆಯ ಇಂಗ್ಲಿಷಿನಲ್ಲಿ ಇದಕ್ಕೆ ಪ್ಯಾಷನ್ ಫ್ರೊಟ್, ಪರ್ಪಲ್ ಗ್ರ್ಯಾನಡಿಲ ಎಂಬ ಹೆಸರುಗಳುಂಟು. ಇದನ್ನು ಪ್ರಪಂಚದ ಎಲ್ಲೆಡೆಗಳಲ್ಲೂ ಆಕರ್ಷಕ ಹೂವುಗಳಾಗಿ ತಮ್ಮ ಹಣ್ಣುಗಳಿಗಾಗಿ ಬೆಳೆಸುವರು. ಎಲೆಗಳು ಮೂರು ಹಾಲೆಗಳುಳ್ಳವು. ಹೂಗಳ ಬಣ್ಣ ಬಿಳಿ. ಕೆಲವೊಮ್ಮೆ ನಸುನೇರಳೆ ಛಾಯೆಯಿಂದ ಕೂಡಿರುವುದುಂಟು. ಫಲಗಳು ಅಂಡಾಕಾರ ಅಥವಾ ಗೋಳಾಕಾರದವು. ಭಾರತದಲ್ಲಿ ನೀಲಗಿರಿ, ವೈನಾಡು ಮತ್ತು ಆಂಧ್ರಪ್ರದೇಶದ ಅರಕು ಕಣಿವೆಗಳಲ್ಲಿ ಇದು ಸೊಂಪಾಗಿ ಬೆಳೆಯುತ್ತದೆ. ಅಲ್ಲದೆ ಇದನ್ನು ಪಂಜಾಬ್, ಕಾಂಗ್ರಾ ಕಣಿವೆ ಮತ್ತು ಹಿಮಾಚಲ ಪ್ರದೇಶದ ಮಂಡಿ ಎಂಬಲ್ಲೂ ಬೆಳೆಸುತ್ತಾರೆ. ಅಸ್ಸಾಮ್, ಬಂಗಾಳ, ಕೊಡೈಕನಾಲ್ ಮೊದಲಾದ ಸ್ಥಳಗಳಲ್ಲಿ ಇದು ಕಾಡುಸಸ್ಯವಾಗಿ ಬೆಳೆಯುತ್ತದೆ. ದಕ್ಷಿಣ ಆಫ್ರಿಕ, ಕೀನ್ಯ, ಆಸ್ಟ್ರೇಲಿಯ, ನ್ಯೂಜೀಲೆಂಡ್ ಮತ್ತು ಹವಾಯಿ ದ್ವೀಪಗಳಲ್ಲಿ ಇದನ್ನು ಬೃಹತ್ ಪ್ರಮಾಣದಲ್ಲಿ ಕೃಷಿ ಮಾಡುವರು. ಪ್ಯಾ.ಎಡ್ಯುಲಿಸ್ ಪ್ರಭೇದದಲ್ಲಿ ಹಲವು ಬಗೆಗಳಿವೆ. ಭಾರತದಲ್ಲಿ ಎರಡು ಬಗೆಗಳು ಮಾತ್ರ ಬೆಳೆಯುತ್ತವೆ. ಒಂದು ಪ್ಯಾ. ಎಡ್ಯುಲಿಸ್ ಫಾರ್ಮ್ ಎಡ್ಯುಲಿಸ್; ಇದರ ಹಣ್ಣುಗಳ ಬಣ್ಣ ನೇರಳೆ. ಇನ್ನೊಂದು ಹಳದಿ ಫಲದ ಬಗೆ ಪ್ಯಾ ಎಡ್ಯುಲಿಸ್ ಫಾರ್ಮ ಫ್ಲೇವಿಕಾರ್ಪ ನೇರಳೆ ಬಣ್ಣದ ಹಣ್ಣಿನ ಬಗೆ 900ರಿಂದ 1800 m. ಎತ್ತರದ ಪ್ರದೇಶಗಳಲ್ಲಿ ಬೆಳೆಯುತ್ತದೆ. ಆದರೆ ಹಳದಿ ಬಣ್ಣದ ಬಗೆ 450 m. ಎತ್ತರದ ವರೆಗಿನ ಪ್ರದೇಶಗಳಲ್ಲಿ ಮಾತ್ರ ಬೆಳೆಯಬಲ್ಲುದು. ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಇದು ಹೇರಳವಾಗಿದೆ.
ಬೆಳೆಯುವ ವಿಧಾನ
ಬದಲಾಯಿಸಿಜುಮಿಕಿ ಗಿಡದ ಬೆಳೆವಣಿಗೆಗೆ ಬೆಚ್ಚಗಿರುವ ಹಾಗೂ ಆದ್ರ್ರತೆ ಹೆಚ್ಚಾಗಿರುವ ಸಮಶೀತೋಷ್ಣ ವಾತಾವರಣ ಅಗತ್ಯ. ಅಧಿಕ ನೀರಿನ ಪೂರೈಕೆಯಿದ್ದರೆ ಹವಾ ಪರಿಸ್ಥಿತಿ ಅಷ್ಟು ಅನುಕೂಲವಾಗಿಲ್ಲದಿದ್ದರೂ ಒಳ್ಳೆಯ ಫಸಲನ್ನು ಕೊಡಬಲ್ಲುದು. ಇದು ಕೊಂಚ ಮಟ್ಟಿನ ಶೈತ್ಯವನ್ನು ತಡೆದುಕೊಳ್ಳುತ್ತದೆ. ಆದರೂ ಕಡುಚಳಿ ಹಾನಿಕರ. ಬಳ್ಳಿಯಂತಿರುವ ಈ ಸಸ್ಯವನ್ನು ತಂತಿ, ಜಾಳಂದರ, ಬೇಲಿ, ಲತಾ ಕುಂಜ ಮತ್ತು ಚಪ್ಪರಗಳ ಮೇಲೆ ಹಬ್ಬಿಸಬಹುದು. ಇದನ್ನು ಹಣ್ಣಿನ ಮರಗಳ ಜೊತೆಗೆ ಮಿಶ್ರಬೆಳೆಯಾಗಿಯೋ ಇಲ್ಲವೆ ಶುದ್ಧ ಬೆಳೆಯಾಗಿಯೋ ಬೆಳೆಸಬಹುದು. ಶುದ್ಧ ಬೆಳೆಯಾದರೆ 3 m. ಅಂತರದ ಸಾಲುಗಳಲ್ಲಿ ಗಿಡದಿಂದ ಗಿಡಕ್ಕೆ 5-6 m. ಅಂತರವಿರುವಂತೆ ಬೆಳೆಸಲಾಗುತ್ತದೆ. ಮಿಶ್ರಬೆಳೆಯಾದರೆ ಹಣ್ಣಿನ ಮರಗಳ ಸಾಲುಗಳ ನಡುವೆ 3-5 m. ಅಂತರ ಬಿಟ್ಟು ನೆಡಲಾಗುತ್ತದೆ. ಗಿಡಗಳ ವೃದ್ಧಿ ಬೀಜಗಳಿಂದ ಇಲ್ಲವೆ ಕಾಂಡತುಂಡುಗಳಿಂದ. 3-4 m. ಉದ್ದದ ಕಾಂಡ ತುಂಡುಗಳನ್ನು ಮೊದಲು ಪಾತಿಗಳಲ್ಲಿ ನೆಟ್ಟು 3 ತಿಂಗಳ ತರುವಾಯ ಬೇಕಾದ ಸ್ಥಳಕ್ಕೆ ವರ್ಗಾಯಿಸುವುದು ವಾಡಿಕೆ. ಬೀಜಗಳ ಮೂಲಕ ವೃದ್ಧಿಸಿದ ಗಿಡಗಳಿಗಿಂತ ಕಾಂಡತುಂಡುಗಳಿಂದ ಬೆಳೆದಂಥವು ಬೇಗನೆ ಫಲ ಕೊಡುವುವು. ಬೀಜಗಳ ಮೊಳೆಯುವ ಸಾಮಥ್ರ್ಯ ಬಹಳ ಕಾಲ ಇರುವುದಿಲ್ಲವಾದ್ದರಿಂದ ಬಿತ್ತಲು ಹೊಸ ಬೀಜಗಳು ಉತ್ತಮ. ಬೀಜಗಳನ್ನು ಸರಿಯಾಗಿ ಸಿದ್ಧಗೊಳಿಸಿದ ಒಟ್ಟು ಪಾತಿಗಳಲ್ಲಿ ಬಿತ್ತಬೇಕು. ಮೂರು ನಾಲ್ಕು ವಾರಗಳಲ್ಲಿ ಇವು ಮೊಳೆಯುತ್ತವೆ. ಸಸಿಗಳು 15-25 ಛಿm. ಎತ್ತರ ಬೆಳೆದ ಅನಂತರ ಅಂದರೆ 3-4 ತಿಂಗಳ ತರುವಾಯ ಸಸಿಗಳನ್ನು ಕಿತ್ತು ಶಾಶ್ವತ ಸ್ಥಳದಲ್ಲಿ ನೆಡಬೇಕು. ಕೊಟ್ಟಿಗೆ ಗೊಬ್ಬರದೊಂದಿಗೆ ಅಮೋನಿಯಮ್ ಸಲ್ಫೇಟ್, ಸೂಪರ್ ಫಾಸ್ಪೇಟ್ ಮತ್ತು ಪೊಟ್ಯಾಸಿಯಮ್ ಸಲ್ಪೇಟುಗಳನ್ನು 10:6:10ರ ಪ್ರಮಾಣದಲ್ಲಿ ಬೆರೆಸಿ ವರ್ಷಕ್ಕೊಮ್ಮೆ ಹಾಕಿದರೆ ಉತ್ತಮ. ದಕ್ಷಿಣ ಭಾರತದಲ್ಲಿ ಗಿಡಗಳನ್ನು ಸಮರುವುದು ಅಷ್ಟಾಗಿ ರೂಢಿಯಲ್ಲಿಲ್ಲ. ಆದರೆ ರೋಗಕ್ಕೆ ತುತ್ತಾದ ಹಾಗೂ ದಟ್ಟವಾಗಿ ಬೆಳೆದ ಕೊಂಬೆಗಳನ್ನು ಫೆಬ್ರುವರಿ ಅಥವಾ ಮಾರ್ಚ್ ತಿಂಗಳಲ್ಲಿ ಸಮರುವುದರಿಂದ ಒಳ್ಳೆಯ ಫಸಲನ್ನು ಪಡೆಯಬಹುದು. ನೆಟ್ಟ ಎರಡನೆಯ ವರ್ಷದಲ್ಲೇ ಫಲಕೊಡಲು ಪ್ರಾರಂಭಿಸುವ ಜುಮಿಕಿ ಗಿಡ ಆರನೆಯ ವರ್ಷದಲ್ಲಿ ಉತ್ಪನ್ನದ ಗರಿಷ್ಠ ಪ್ರಮಾಣವನ್ನು ಮುಟ್ಟುತ್ತದೆ. ಅಂದರೆ ಒಂದು ಗಿಡದಲ್ಲಿ 5.8-9 ಞg. ಹಣ್ಣುಗಳು ಸಿಗುತ್ತವೆ. ಇದು ಸಾಮಾನ್ಯವಾಗಿ ವರ್ಷದಾದ್ಯಂತ ಹಣ್ಣುಗಳನ್ನು ಉತ್ಪತ್ತಿಮಾಡಬಲ್ಲುದಾದರೂ ಹೆಚ್ಚು ಮೊತ್ತದ ಹಣ್ಣುಗಳು ದೊರೆಯುವುದು ಮೇ-ಜೂನ್ ಮತ್ತು ಸೆಪ್ಟೆಂಬರ್-ಆಕ್ಟೋಬರ್ ತಿಂಗಳುಗಳಲ್ಲಿ. ಹಣ್ಣುಗಳು ಪೂರ್ಣಮಾಗುವ ಮುನ್ನ ಕೀಳುವುದು ಒಳ್ಳೆಯದು. ಇಲ್ಲವಾದರೆ ಇವು ಗಿಡದಲ್ಲೇ ಮಾಗಿ ನೆಲಕ್ಕೆ ಬಿದ್ದು ಹಾಳಾಗುತ್ತವೆ. ಹಣ್ಣುಗಳನ್ನು ಸಾಮಾನ್ಯ ಉಷ್ಣತೆಯಲ್ಲಿ ದೀರ್ಘಕಾಲ ಸಂಗ್ರಹಿಸಿಟ್ಟರೆ ಹಣ್ಣಿನ ಸಿಪ್ಪೆ ಸುಕ್ಕುಗಟ್ಟುವುದು. ಆದರೆ ಕನಿಷ್ಠ ಉಷ್ಣಾಂಶಗಳಲ್ಲಿ ಅಂದರೆ 420-460 ಈ. ನಲ್ಲಿ ನಾಲ್ಕೈದು ವಾರಗಳ ತನಕ ಸಂಗ್ರಹಿಸಿಡಬಹುದು. ಹಣ್ಣುಗಳಿಗೆ ಬೂಷ್ಟು ತಗಲುವ ಸಂಭವವಿರುವುದರಿಂದ ಫಾರ್ಮಾಲ್‍ಡಿಹೈಡ್, ಅಯೊಡೀನ್, ಬೋರಿಕ್ ಆಮ್ಲ ಮತ್ತು ಆಲ್ಕೊಹಾಲುಗಳ ಮಿಶ್ರಣದಿಂದ ಸಂಸ್ಕರಿಸಿ, 5 ಲೈಸೋಲ್ ಸವರಿರುವ ಪಾಲಿತೀನ್ ಚೀಲಗಳಲ್ಲಿ ತುಂಬಿ ಇಡಬೇಕು. ಭಾರತದಲ್ಲಿ ಜುಮಿಕಿ ಗಿಡಕ್ಕೆ ಹಾನಿಕಾರಕ ಕೀಟಪಿಡುಗುಗಳಾಗಲೀ ಶಿಲೀಂಧ್ರಗಳಾಗಲೀ ಅಂಟುವುದಿಲ್ಲ. ಆದೆರ ಬೇರೆ ದೇಶಗಳಲ್ಲಿ ಫೈಟೋಮೊನಾಸ್ ಪ್ಯಾಸಿಫ್ಲೋರೀ ಎಂಬ ಬ್ಯಾಕ್ಟೀರಿಯ ರೋಗ ಬರುವುದುಂಟು. ಕಂದು ಬಣ್ಣದ ಕಲೆಗಳನ್ನು ಉಂಟು ಮಾಡುವ ಕೊಲಿಟೊಟ್ರೈಕಮ್ ಎಂಬ ಶಿಲೀಂಧ್ರಗಳಿಂದಲೂ ಕಾಯಿಲೆ ಬರುವ ಸಂಭವವಿದೆ. ಹಣ್ಣು ನೊಣಗಳು, ಉಣ್ಣಿಗಳು ಮತ್ತು ಒಂದು ವಿಧದ ತಿಗಣೆ-ಇವು ಕೀಟಪಿಡುಗುಗಳಲ್ಲಿ ಪ್ರಧಾನವಾದವು.
ಉಪಯೋಗಗಳು
ಬದಲಾಯಿಸಿಜುಮಿಕಿ ಗಿಡದ ಹಣ್ಣುಗಳನ್ನು ನೇರವಾಗಿ ತಿನ್ನಬಹುದಾದರೂ ಇದರಿಂದ ಹಲವಾರು ಬಗೆಯ ಪಾನೀಯಗಳನ್ನು ತಯಾರಿಸುವುದೇ ಹೆಚ್ಚು ರೂಢಿಯಲ್ಲಿರುವ ಕ್ರಮ. ಬಲವರ್ಧಕ ಪಾನಕ, ರಸಪಾಕ, ಷರಬತ್ ಮೊದಲಾದುವುಗಳ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಇದರ ರಸಕ್ಕೆ ಆಮ್ಲೀಯ ಗುಣಗಳಿರುವುದರಿಂದ ಮತ್ತು ಸುವಾಸನೆಯಿರುವುದರಿಂದ ಇದನ್ನು ಐಸ್‍ಕ್ರೀಮ್, ಕೇಕ್, ಹೂರಣ ಮೊದಲಾದವನ್ನು ತಯಾರಿಸಲು ಉಪಯೋಗಿಸುತ್ತಾರೆ. ನೇರಳೆ ವರ್ಣದ ಹಣ್ಣಿನ ಬಗೆ ಹಳದಿ ಬಣ್ಣದ ಬಗೆಗಿಂತ ಹೆಚ್ಚು ಸುಗಂಧಪೂರಿತವಾದುದು. ಎರಡೂ ವಿಧಗಳಲ್ಲಿ ಸಕ್ಕರೆ, ಆಸ್ಕಾರ್ಬಿಕ್ ಆಮ್ಲ ಮತ್ತು ಕೆರೋಟಿನ್‍ಗಳ ಅಂಶವಿರುವುದರಿಂದ ಇವು ಅತ್ಯಂತ ಪುಷ್ಟಿದಾಯಕವೆನಿಸಿವೆ. ಸಕ್ಕರೆ, ಗ್ಲೂಕೋಸ್, ಸ್ಯೂಕ್ರೋಸ್ ಮತ್ತು ಫ್ರಕ್ಟೋಸುಗಳನ್ನು ಒಳಗೊಂಡಿವೆ. ಅಲ್ಲದೆ ನಿಕೋಟಿನಿಕ್ ಆಮ್ಲ, ರೈಬೋಫ್ಲೇವಿನ್ ಮತ್ತು ಅನೇಕ ಬಗೆಯ ಖನಿಜ ವಸ್ತುಗಳೂ ಉಂಟು. ಸಿಟ್ರಿಕ್ ಮತ್ತು ಮ್ಯಾಲಿಕ್ ಆಮ್ಲಗಳೂ ಸ್ವಲ್ಪ ಮೊತ್ತದಲ್ಲಿವೆ. ಹಳದಿ ವರ್ಣದ ಬಗೆಯಲ್ಲಿರುವ ಚಂಚಲ ತೈಲ ಟಿ- ಹೈಕ್ಸೈಲ್ ಕ್ಯಾಪ್ರೊಯೇಟ್, ಟಿ- ಹೆಕ್ಸೈಲ್ ಬ್ಯೂಟಿರೇಟ್, ಈಥೈಲ್ ಕ್ಯಾಪ್ರೊಯೇಟ್ ಮತ್ತು ಈಥೈಲ್ ಬ್ಯೂಟಿರೇಟ್ ಮೊದಲಾದುವುಗಳನ್ನು ಒಳಗೊಂಡಿರುವುದರಿಂದ ಹಣ್ಣುಗಳಿಗೆ ವಿಶಿಷ್ಟ ವಾಸನೆ ಮತ್ತು ರುಚಿ ಉಂಟು. ಬೀಜಗಳಿಂದ ಪಡೆಯಲಾಗುವ ಎಣ್ಣೆಯಿಂದ ಬಣ್ಣ ಮತ್ತು ಮೆರುಗೆಣ್ಣೆಯನ್ನು ತಯಾರಿಸುವುದಿದೆ.
ಕೆಲವು ಪ್ರಭೇದಗಳು
ಬದಲಾಯಿಸಿಪ್ಯಾಸಿಫ್ಲೋರ ಫೀಟಿಡ ಎಂಬುದು ಜುಮಿಕಿ ಗಿಡದ ಇನ್ನೊಂದು ಮುಖ್ಯ ಪ್ರಭೇದ. ಇದಕ್ಕೆ ಕುಕ್ಕಿಬಳ್ಳಿ ಎಂಬ ಹೆಸರೂ ಇದೆ. ಇದು ಕೂಡ ಒಂದು ಲತೆ. ಇದನ್ನು ಉಜ್ಜಿದಾಗ ಒಂದು ತೆರನ ದುರ್ಗಂಧ ಹೊರಡುತ್ತದೆ. ಅಮೆರಿಕದ ಉಷ್ಣಪ್ರದೇಶಗಳೇ ಇದರ ತವರು. ಭಾರತದಲ್ಲೂ ಇದನ್ನು ಬೆಳೆಸುತ್ತಾರೆ. ಎಲೆಗಳು ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ಫಲಗಳು ಗೋಳಾಕಾರದವು; ಕೂದಲುಗಳಿಂದ ಆವೃತವಾಗಿವೆ. ಈ ಪ್ರಭೇದದಲ್ಲಿ ಸುಮಾರು 38 ಬಗೆಗಳುಂಟು. ಪೂರ್ತಿ ಪಕ್ವವಾದ ಹಣ್ಣುಗಳು ತಿನ್ನಲು ಯೋಗ್ಯ. ಆದರೆ ಮಾಗುವ ಮುನ್ನ ಇವುಗಳಲ್ಲಿ ಒಂದು ತೆರನ ವಿಷಪದಾರ್ಥ ಉಂಟು. ಹಣ್ಣುಗಳಿಗೆ ವಾಂತಿಕಾರಕ ಗುಣ ಇದೆ. ಇವುಗಳ ಕಷಾಯವನ್ನು ಆಸ್ತಮಾ ಮತ್ತು ಪಿತ್ತ ವಿಕಾರಕ್ಕೆ ಔಷಧಿಯಾಗಿ ಬಳಸುತ್ತಾರೆ. ಎಲೆಗಳನ್ನು ಗಾಯಗಳಿಗೆ ಕಟ್ಟುವುದಿದೆ. ಎಲೆ ಹಾಗೂ ಬೇರುಗಳ ಕಷಾಯ ಗರ್ಭಸ್ರಾವವನ್ನು ಉಂಟುಮಾಡುತ್ತದೆ. ಆದರೆ ಇದು ಗರ್ಭೋನ್ಮಾದಕ್ಕೂ ಉತ್ತಮ ಮದ್ದು.
ಪ್ಯಾಸಿಫ್ಲೋರ ಇನ್‍ಕಾರ್ನೇಟ (ಮೇಪಾಪ್) : ಅಲಂಕಾರಕ್ಕಾಗಿ ಬಳ್ಳಿ ಮಾಡ, ಪಡಸಾಲೆ ಮತ್ತು ಕಮಾನುಗಳಿಗೆ ಹಬ್ಬಿಸಲಾಗುವ ಇನ್ನೊಂದು ಪ್ರಭೇದ. ಆಗ್ನೇಯ ಅಮೆರಿಕ ಇದರ ತವರು. ಹೂಗಳು ದೊಡ್ಡವು. ಅವುಗಳ ಬಣ್ಣ ನಸುಗುಲಾಬಿ. ಫಲಗಳು ಗೋಳಾಕಾರದವು. ಪೂರ್ತಿಮಾಗಿದಾಗ ತಿನ್ನಲು ಯೋಗ್ಯವಾಗಿವೆ. ಇವಕ್ಕೆ ಸೆಳವುರೋಧಕ ಹಾಗೂ ಶಾಮಕ ಗುಣಗಳುಂಟು. ಅಲ್ಲದೆ ಇವಕ್ಕೆ ಮತ್ತು ಬರಿಸುವ ಸಾಮಥ್ರ್ಯವಿರುವುದರಿಂದ ನಿರ್ನಿದ್ರತೆ ಮತ್ತು ಮೂರ್ಛಾರೋಗಗಳಲ್ಲಿ ಉಪಯೋಗಿಸುತ್ತಾರೆ. ವ್ರಣ ಮತ್ತು ಮೂಲವ್ಯಾಧಿಗಳ ಚಿಕಿತ್ಸೆಯಲ್ಲಿ ಬೇರನ್ನು ಬಳಸುವುದುಂಟು.
ಪ್ಯಾಸಿಫ್ಲೋರ ಲಾರಿಫೋಲಿಯ (ಜಮೈೀಕ ಹನಿ ಸಕಲ್): ಅಲಂಕಾರಕ್ಕಾಗಿ ಬೆಳೆಸುವ ಒಂದು ಪ್ರಭೇದ. ಅಮೆರಿಕದ ಉಷ್ಣ ಪ್ರದೇಶಗಳ ಮೂಲವಾಸಿ, ಎಲೆಗಳು ದೊಡ್ಡವು; ಹೊಳೆಯುತ್ತವೆ. ಹೂಗಳು ಸುಗಂಧಪೂರಿತವಾಗಿವೆ. ಅವುಗಳ ಬಣ್ಣ ನೇರಳೆ. ಹಣ್ಣುಗಳು 5-8 ಛಿm. ಉದ್ದವಾಗಿವೆ; ಇವು ಕೇಸರಿ ವರ್ಣದವು. ಭಾರತದ ಕೆಲವು ಕಡೆಗಳಲ್ಲಿ ಇದರ ಕೃಷಿ ಇದೆ. ಆದರೆ ಅಸ್ಸಾಮಿನಲ್ಲಿ ಕಾಡುಗಿಡವಾಗಿ ಬೆಳೆಯುತ್ತದೆ. ಎಲೆಗಳು ಜಂತುನಾಶಕ. ಬೀಜಗಳಿಗೆ ಹೃದಯೋತ್ತೇಜಕ ಮತು ನಿದ್ರಾಜನಕ ಗುಣಗಳುಂಟು. ಅಲ್ಲದೆ ಇವು ಸ್ವೇದಕಾರಿಗಳೂ ಹೌದು.
ಪ್ಯಾಸಿಫ್ಲೋರ ಮಾಲಿಸಿಮ (ಬನಾನ ಪ್ಯಾಷನ್ ಫ್ರೂಟ್) : ಈ ಪ್ರಭೇದ ತಮಿಳುನಾಡಿನಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ. ಕಾಂಡದ ಮೇಲೆ ದಟ್ಟವಾದ ಮತ್ತು ಮೃದುವಾದ ಕೂದಲಿನ ಹೊದಿಕೆಯುಂಟು. ಹೂಗಳು ಗುಲಾಬಿ ಬಣ್ಣದವು. ಕಾಯಿಯ ಆಕಾರ ಚತುರಶ್ರದಂತೆ. ಇದರ ವ್ಯಾಸ 6-7 ಛಿm. ಇದನ್ನು ಅಲಂಕಾರ ಸಸ್ಯವನ್ನಾಗಿ ಬೆಳೆಸುತ್ತಾರೆ.
ಪ್ಯಾಸಿಫ್ಲೋರ ಕ್ವಾಡ್ರ್ಯಾಂಗ್ಯುಲೇರಿಸ್ (ಜಯಂಟ್ ಗ್ರ್ಯಾನಡಿಲ) : ಇದು ಚತುಷ್ಕೋನದ ಕಾಂಡವುಳ್ಳ ಒಂದು ಲತೆ. ಅಮೆರಿಕದ ಉಷ್ಣಪ್ರದೇಶಗಳು ಇದರ ಮೂಲ ಸ್ಥಾನವಾದರೂ ಆಕರ್ಷಕ ಹೂವುಗಳಿಗೋಸ್ಕರ ಮತ್ತು ತಿನ್ನಲು ಯೋಗ್ಯವಾದ ಹಣ್ಣುಗಳಿಗೋಸ್ಕರ ಭಾರತದಲ್ಲಿ ಬಳಸುವರು. ಎಲೆಗಳು ಅಂಡಾಕಾರದವು. ಹೂಗಳು ನಸುಗುಲಾಬಿ ಬಣ್ಣದವು. ಹಣ್ಣು ಹಳದಿ ಅಥವಾ ಹಸಿರು ಮಿಶ್ರಿತ ಹಳದಿ ವರ್ಣದ್ದು. ಈ ಪ್ರಭೇದದ ಮ್ಯಾಕ್ರೊಕಾರ್ಪ ಎಂಬ ಬಗೆಯಲ್ಲಿ ಕಾಯಿಗಳು 15-25 ಛಿm. ಉದ್ದ ಇವೆ. ಈ ಪ್ರಭೇದ ವರ್ಷದ ಸರ್ವ ಋತುಗಳಲ್ಲೂ ಫಲಗಳನ್ನೀಯಬಲ್ಲುದು. ಒಂದು ವರ್ಷದ ಅವಧಿಯಲ್ಲಿ ಒಂದು ಸಸ್ಯ 25ರಿಂದ 120 ಹಣ್ಣುಗಳನ್ನು ಉತ್ಪಾದಿಸುತ್ತದೆ. ಪ್ಯಾಸಿಫ್ಲೋರ ಎಡ್ಯುಲಿಸ್‍ನಂತೆಯೇ ಇದು ಕೂಡ ಬಹಳ ಉಪಯುಕ್ತವಾಗಿದೆ. ಎಳೆಯ ಕಾಯಿಗಳನ್ನು ತರಕಾರಿಯನ್ನಾಗಿಯೂ ಬಳಸುತ್ತಾರೆ.
ಹೊರಗಿನ ಕೊಂಡಿಗಳು
ಬದಲಾಯಿಸಿ- ಜುಮಿಕಿ ಗಿಡ at the Encyclopedia of Life
- The Passiflora Society International
- Killip, The American Species of Passifloraceae, Fieldiana, Bot. 19 (1938)
- Passiflora online
- Passiflora edulis Archived 2020-07-05 ವೇಬ್ಯಾಕ್ ಮೆಷಿನ್ ನಲ್ಲಿ.
- Passiflora Picture Gallery
- Chilean Passiflora pictures Archived 2021-04-15 ವೇಬ್ಯಾಕ್ ಮೆಷಿನ್ ನಲ್ಲಿ.
- A list of Heliconius Butterflies and the Passiflora species their larvae consume