ಜೀವನ ಚೈತ್ರ (ಚಲನಚಿತ್ರ)
ಜೀವನ ಚೈತ್ರ - ೧೯೯೨ರಲ್ಲಿ ಬಿಡುಗಡೆಯಾದ, ದೊರೈ- ಭಗವಾನ್ ನಿರ್ದೇಶಿಸಿರುವ ಕನ್ನಡ ಚಲನಚಿತ್ರ.
ಜೀವನ ಚೈತ್ರ (ಚಲನಚಿತ್ರ) | |
---|---|
ನಿರ್ದೇಶನ | ದೊರೆ-ಭಗವಾನ್ |
ನಿರ್ಮಾಪಕ | ಪಾರ್ವತಮ್ಮ ರಾಜ್‍ಕುಮಾರ್ |
ಕಥೆ | ವಿಶಾಲಾಕ್ಷಿ ದಕ್ಷಿಣಾಮೂರ್ತಿ |
ಪಾತ್ರವರ್ಗ | ಡಾ.ರಾಜ್‍ಕುಮಾರ್ ಮಾಧವಿ ಕಲಾ, ಶ್ರೀರಕ್ಷಾ, ಸುಜಾತ, ಸುಧಾರಾಣಿ, ಬಾಲರಾಜ್ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
ಬಿಡುಗಡೆಯಾಗಿದ್ದು | ೧೯೯೨ |
ಪ್ರಶಸ್ತಿಗಳು | ಈ ಚಿತ್ರದ ನಾದಮಯ ಈ ಲೋಕವೆಲ್ಲಾ ಗೀತೆಯ ಗಾಯನಕ್ಕೆ ಡಾ.ರಾಜ್‍ಕುಮಾರ್ ಅವರಿಗೆ ರಾಷ್ಟ್ರಪ್ರಶಸ್ತಿ ದೊರಕಿತು |
ಚಿತ್ರ ನಿರ್ಮಾಣ ಸಂಸ್ಥೆ | ದಾಕ್ಷಾಯಿಣಿ ಸಿನಿ ಕಂಬೈನ್ಸ್ |
ಸಾಹಿತ್ಯ | ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್ |
ಇತರೆ ಮಾಹಿತಿ | ವಿಶಾಲಾಕ್ಷಿ ದಕ್ಷಿಣಾಮೂರ್ತಿಯವರ ಇದೇ ಹೆಸರಿನ ಕಾದಂಬರಿ ಆಧಾರಿತ. |
ಈ ಚಿತ್ರದಲ್ಲಿ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಸಾಮಾಜಿಕ ಕಳಕಳಿಯ ಸಂದೇಶವಿದೆ. ಮದ್ಯಸೇವನೆಯ ವಿರುದ್ಧ ಹೋರಾಡುವ ಪಾತ್ರದಲ್ಲಿ ಡಾ.ರಾಜ್‍ಕುಮಾರ್ ಅಭಿನಯಿಸಿದ್ದಾರೆ. ಮಾಧವಿ ಈ ಚಿತ್ರದ ನಾಯಕಿ. ಈ ಚಿತ್ರ ೩ ವರ್ಷಗಳ ನಂತರ ಚಿತ್ರರಂಗಕ್ಕೆ ರಾಜ್ ಕುಮಾರ್ರವರ ಮರುಪ್ರವೇಶವಾಗಿತ್ತು. ಇದೊಂದು ವಿಶಾಲಾಕ್ಷಿ ದಕ್ಷಿಣಾಮೂರ್ತಿಯವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಲನಚಿತ್ರ. ಪ್ರಾರಂಭದಲ್ಲಿ ಈ ಚಿತ್ರವನ್ನು ಸಿಂಹಾದ್ರಿಯ ಸಿಂಹ ಎಂದು ಹೆಸರಿಸಲಾಗಿತ್ತು. ಈ ಚಿತ್ರದಿಂದ ರಾಜ್ ಕುಮಾರ್ ಕನ್ನಡ ಪ್ರೇಕ್ಷಕರ ಮೇಲಿನ ತಮ್ಮ ಹಿಡಿತವನ್ನು ಮತ್ತೊಮ್ಮೆ ತೋರಿಸಿದರು.
ಈ ಚಿತ್ರದ ಪರಿಣಾಮವಾಗಿ ಕರ್ನಾಟಕದಲ್ಲಿನ ಹಲವಾರು ಹೆಂಡದಂಗಡಿಗಳು ಮುಚ್ಚಲ್ಪಟ್ಟವು ಹಾಗು ಡಾ.ರಾಜ್‍ಕುಮಾರ್ ಅವರ ಹಲವಾರು ಅಭಿಮಾನಿಗಳು ಮದ್ಯಪಾನ ತ್ಯಜಿಸಿದರೆಂದು ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.
"ನಾದಮಯ" ಗೀತೆಗಾಗಿ ರಾಜ್ ಕುಮಾರ್ ೪೦ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಹಿನ್ನೆಲೆ ಗಾಯಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಗಳಿಸಿದರು. ೧೯೯೨ - ೯೩ನೇ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರಕ್ಕೆ ೪ ಪ್ರಶಸ್ತಿ ಲಭಿಸಿತು; ಮೊದಲ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ (ರಾಜ್ ಕುಮಾರ್), ಅತ್ಯುತ್ತಮ ಸಂಗೀತ ನಿರ್ದೇಶಕ (ಉಪೇಂದ್ರಕುಮಾರ್) ಮತ್ತು ಅತ್ಯುತ್ತಮ ಸಂಭಾಷಣೆ ಬರಹಗಾರ - ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ (ಚಿ.ಉದಯಶಂಕರ್).
ಕಥಾವಸ್ತು
ಬದಲಾಯಿಸಿಈ ಚಿತ್ರದ ಕಥೆ, ನಾಯಕ ಯೌವನದಲ್ಲಿ ವಿಶ್ವನಾಥನಿಂದ ಮುಂದೆ ಜೋಡೀದಾರ್ ವಿಶ್ವನಾಥನಾಗುವ ತನಕ ನಡೆಯುವ ಘಟನಾವಳಿಗಳನ್ನೊಳಗೊಂಡ ಕಥೆಯಾಗಿದೆ.
ಕಥಾನಾಯಕ ಒಬ್ಬ ಆದರ್ಶ ಮಗ, ಕಥಾನಾಯಕಿ ಮೀನಾಕ್ಷಿ (ಮಾಧವಿ)ಯನ್ನು ತನ್ನ ಬಾಳ ಸಂಗಾತಿಯಾಗಿ ಸ್ವೀಕರಿಸಲು ತಂದೆ ತಾಯಿಯರಲ್ಲಿ ಕೇಳುತ್ತಾನೆ. ಮೀನಾಕ್ಷಿ ವಿಶ್ವನಾಥನ ಕಡೆಗೆ ಆಕರ್ಷಿತಳಾದರೂ, ಜೋಡೀದಾರರ ವಂಶಕ್ಕೆ ತಾನು ಸರಿ ಹೊಂದುತ್ತೇನೋ ಇಲ್ಲವೊ ಎಂದು ಹೆದರುತ್ತಾಳೆ. ಆದರೆ ವಿಶ್ವನಾಥನ ತಂದೆ ತನ್ನ ಮಗನ ಆಯ್ಕೆಯಿಂದ ಸಂತೋಷಗೊಂಡು ಮದುವೆ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸುತ್ತಾರೆ. ಮೀನಾಕ್ಷಿ ಮತ್ತು ವಿಶ್ವನ್ನಾಥ ಮದುವೆಯಾಗುತ್ತಾರೆ.
ವಿಶ್ವನಾಥ ತನ್ನ ತಂದೆಯಿಂದ ಸಿಂಹಾದ್ರಿ ಮತ್ತು ಇತರ ಎಂಟು ಹಳ್ಳಿಗಳ ಜೋಡೀದಾರನಾಗುವ ಜವಾಬ್ದಾರಿಯನ್ನು ತೆಗೆದುಕೊಂಡು, ಆ ಹಳ್ಳಿಗಳ ಜೀವನವನ್ನು ಉತ್ತಮವಾಗಿಸುವ ಪ್ರಯತ್ನ ಮಾಡುತ್ತಾನೆ. ಅನಕ್ಷರತೆ, ಅಕ್ರಮ ಮದ್ಯ ತಯಾರಿಕೆ ಮತ್ತು ಸಮಾಜದ ಇನ್ನಿತರ ಅನಿಷ್ಟ ಪದ್ದತಿಗಳ ವಿರುದ್ಧ ಹೋರಾಡುತ್ತಾನೆ. ಸಮಾನಾಂತರವಾಗಿ ಚಿತ್ರದ ಹಾಸ್ಯ ದೃಶ್ಯಗಳನ್ನು ಮನೆತನದ ದೇವಸ್ಥಾನದ ಅರ್ಚಕ 'ಪುಟ್ಟಾ ಜೋಯ್ಸ' ನಿರ್ವಹಿಸುತ್ತಾನೆ. ಜೋಡಿದಾರ್ ಮನೆಯಿಂದ ಚಿನ್ನ ಕದಿಯಲು ಪ್ರಯತ್ನಿಸಿ ಸಿಕ್ಕಿಬಿದ್ದಾಗ, ತಪ್ಪೊಪ್ಪಿಕೊಳ್ಳುತ್ತಾನೆ. ಉದಾರ ವ್ಯಕ್ತಿತ್ವದವನಾದ ವಿಶ್ವನಾಥ ಅವನಿಗೆ ಸ್ವಲ್ಪ ಹಣ ಕೊಟ್ಟು, ಊರಿನವರು ವಿಷಯ ಗೊತ್ತಾದರೆ ನಿನ್ನನ್ನು ಕೊಂದೇಬಿಡುತ್ತಾರೆ ಎಂದು ಊರನ್ನು ತೊರೆಯಲು ಹೇಳುತ್ತಾನೆ. ಪುಟ್ಟಾ ಜೋಯ್ಸ ತಾನು ಜೋಡೀದಾರರೊಡನೆ ಇರಲು ಅಯೋಗ್ಯನೆಂದು ತಿಳಿದು ದುಃಖದಲ್ಲಿ ಊರನ್ನು ತೊರೆಯುತ್ತಾನೆ.
ವಿಶ್ವನಾಥನ ಮಕ್ಕಳು ವಯಸ್ಸಿಗೆ ಬಂದಾಗ ಮನೆಯಲ್ಲಿ ಬಿರುಕು ಆರಂಭವಾಗುತ್ತದೆ. ಹಿರಿಯ ಮಗ ಒಬ್ಬ ವೈದ್ಯ ತನ್ನ ಸಹಪಾಠಿ, ಒಬ್ಬ ಮದ್ಯದಂಗಡಿಯವ (ತೂಗುದೀಪ ಶ್ರೀನಿವಾಸ್), ಯಾರು ವಿಶ್ವನಾಥನಿಂದ ಊರಿನಿಂದ ಹೊರ ಹಾಕಿರಲ್ಪಟ್ಟಿರುತ್ತಾನೋ ಮಗಳನ್ನು ಪ್ರೀತಿಸುತ್ತಾನೆ. ವಿಶ್ವನಾಥ ಹುಡುಗಿಯ ತಂದೆಯ ಹತ್ತಿರ ಮದುವೆ ಪ್ರಸ್ತಾಪವನ್ನು ಚರ್ಚಿಸಲು ಬಂದಾಗ ಅವನು ವಿಶ್ವನಾಥನನ್ನು ಅವಮಾನಿಸುತ್ತಾನೆ.
ವಿಶ್ವನಾಥ ತನ್ನ ಮಗ ಹಾಗು ಸೊಸೆ ಇಬ್ಬರೂ ವೈದ್ಯರಾದ್ದರಿಂದ, ಅವರನ್ನು ತಾನು ಹಳ್ಳಿಯ ಒಳಿತಿಗಾಗಿ ನಿರ್ಮಿಸಲು ಬಯಸಿದ ಆಸ್ಪತ್ರೆಯನ್ನು ನೋಡಿಕೊಳ್ಳಲು ಬಯಸುತ್ತಾನೆ. ಆದರೆ ಹುಡುಗಿಯ ತಂದೆ ದೂರದೃಷ್ಟಿ ಇಲ್ಲದೆ, ತನ್ನ ಮಗಳು ಹಳ್ಳಿಯಲ್ಲೇ ಉಳಿಯುತ್ತಾಳೆಂದು ತಿಳಿಯುತ್ತಾನೆ. ವಿಶ್ವನಾಥ ಅವಳು ತನ್ನ ಮಗನನ್ನು ಮದುವೆಯಾಗಬೇಕಿದ್ದರೆ ಹಳ್ಳಿಯಲ್ಲೇ ಉಳಿಯಬೇಕೆಂದು ಒತ್ತಾಯ ಮಾಡುತ್ತಾನೆ.
ತಾನು ತನ್ನ ಪ್ರೀತಿ ಅಥವಾ ಹಳ್ಳಿ, ಎರಡರಲ್ಲಿ ಯಾವುದಾದರೂ ಒಂದನ್ನು ಆರಿಸಿಕೊಳ್ಳಬೇಕಾಗಿ ಹುಡುಗನನ್ನು ಹೆದರಿಸಿ ಹುಡುಗಿಯ ತಂದೆ ಹೊರನಡೆಯುತ್ತಾನೆ. ವಿಶ್ವನಾಥನ ಮಗ ವಿಶ್ವನಾಥನ ಜೊತೆ ಜಗಳವಾಡಿ ಮನೆಯನ್ನು ತೊರೆಯುತ್ತಾನೆ. ವಿಶ್ವನಾಥ ರಾಯರಿಗೆ ಹೀಗೆ ಮೊದಲನೆ ಆಘಾತವಾಗುತ್ತದೆ.
ಎರಡೆನೆಯ ಮಗ ಅಭಿಜಿತ್ ಮದುವೆಯಾದರೂ, ಸೊಸೆಗೆ ಹಳ್ಳಿಯ ಮನೆಯಲ್ಲಿ ಅತ್ತೆ ಮಾವನ ಸೇವೆ ಮಾಡಿಕೊಂಡಿರುವುದು ಹಿಡಿಸುವುದಿಲ್ಲ. ಮೀನಾಕ್ಷಿ ತನ್ನ ಸೋದರನನ್ನು, ಅವನ ಮಗಳು ಲಕ್ಷ್ಮಿ(ಸುಧಾರಾಣಿ) ತನ್ನ ಮನೆಯಲ್ಲಿಯೇ ಕೆಲ ದಿನ ಕಳೆಯಲೆಂದು ಕೇಳುತ್ತಾಳೆ.
ಲವಲವಲವಿಕೆಯ ಲಕ್ಶ್ಮಿ ಮತ್ತೊಮ್ಮೆ ಆ ಮನೆಯಲ್ಲಿ ಹರುಷ ತುಂಬುತ್ತಾಳೆ. ವಿಶ್ವನಾಥ್ ಮತ್ತು ಮೀನಾಕ್ಷಿ ತಮ್ಮ ಕೊನೆಯ ಮಗ ನರಹರಿಗೆ ಅವಳನ್ನು ಮದುವೆ ಮಾಡಳು ಯೋಚಿಸುತ್ತಾರೆ. ಒಂದು ರಹಸ್ಯ ಪ್ರೇಮವನ್ನು ಹೊಂದ್ದಿದ್ದ ನರಹರಿ ಇದನ್ನು ತಿಳಿದ ಕೂಡಲೇ ಅವಳನ್ನು ಮದುವೆಯಾಗಿ ಮನೆಗೆ ಕರೆತರುತ್ತಾನೆ.
ವಿಶ್ವನಾಥ್ ಮತ್ತು ಮೀನಾಕ್ಷಿಗೆ ನರಹರಿ ಮತ್ತು ಅವನ ಹೆಂಡತಿಯನ್ನು ನೋಡಿ ಆಘಾತವಾಗುತ್ತದೆ. ತನ್ನ ಅಣ್ಣನಿಗೆ ಹೇಳಿದಂತೆ ಮಾತನ್ನು ಉಳಿಸಿಕೊಳ್ಳಲಾಗದ ಮೀನಾಕ್ಷಿ ಅದೇ ಕೊರಗಿನಿಂದ ಕೊನೆಯುಸಿರೆಳೆಯುತ್ತಾಳೆ.
ಒಂಟಿತನದಿಂದ ವಿಶ್ವನಾಥ ತೀರ್ಥಯಾತ್ರೆಗೆ ಹೊರಡುತ್ತಾನೆ, ಅಲ್ಲಿ ಒಂದು ಅಪಘಾತಕ್ಕೆ ಒಳಗಾಗಿ ಹಣ ಮತ್ತು ನೆನಪಿನ ಶಕ್ತಿ ಕಳೆದುಕೊಳ್ಳುತ್ತಾನೆ. ಹೀಗೇ ಬದರಿನಾಥ, ವಾರಣಾಸಿ ಮುಂತಾದ ಸ್ಠಳಗಳಿಗೆ ಭೇಟಿ ನೀಡುತ್ತಾನೆ. ಹಿಮಾಲಯದ ಸೌಂದರ್ಯ ಕಂಡು ಮಂತ್ರಮುಗ್ಧನಾಗಿ ಹಾಡುತ್ತಾನೆ.
ಈ ಸ್ಠಿತಿಯಲ್ಲಿ ವಿಶ್ವನಾಥನನ್ನು ಪುಟ್ಟಾ ಜೋಯ್ಸ ನೋಡುತ್ತಾನೆ ಮತ್ತು ವಿಶ್ವನಾಥನಿಗೆ ನೆನಪಿನ ಶಕ್ತಿ ಮರುಕಳಿಸಲು ಸಹಾಯ ಮಾಡುತ್ತಾನೆ.
ಏತನ್ಮಧ್ಯೆ ತೂಗುದೀಪ ವಿಶ್ವನಾಥನ ಮಕ್ಕಳನ್ನು ಮರುಳು ಮಾಡಿ, ವಿಶ್ವನಾಥನ ಆಸ್ತಿಯನ್ನು ತನ್ನ ಕೈವಶ ಮಾಡಿಕೊಳ್ಳುತ್ತಾನೆ. ಮೂರೂ ಮಕ್ಕಳು ಐಷಾರಾಮಿ ಜೀವನದ ಗೀಳನ್ನು ಹಚ್ಚಿಕೊಂಡು ತಮ್ಮ ಅಜ್ಜಿಯನ್ನೂ ಸಹ ಮನೆಯಿಂದ ಹೊರ ಹಾಕುತ್ತಾರೆ.
ವಿಶ್ವನಾಥ ಮರಳಿದಾಗ, ದೇವಸ್ಥಾನದಂತಿದ್ದ ತನ್ನ ಒಂದು ಹೋಟೇಲಿನಂತೆ ಮಾರ್ಪಾಡಾಗಿರುವುದನ್ನು ಗಮನಿಸುತ್ತಾನೆ. ಅಲ್ಲಿದ್ದ ಮದ್ಯ ವ್ಯಸನಿಗಳನ್ನು ತಾನೊಬ್ಬನೇ ಹೊಡೆದೋಡಿಸಿ ತನ್ನ ತಾಯಿಯ ಬಗ್ಗೆ ವಿಚಾರಿಸುತ್ತಾನೆ. ತನ್ನ ತಾಯಿ ಏಕಾಂಗಿಯಾಗಿ ದಿನ ಕಳೆಯುತ್ತಿರುವುದನ್ನು ತಿಳಿದ ಕೂಡಲೇ ಅಲ್ಲಿಗೆ ಹೋಗುತ್ತಾನೆ.
ಅವನ ತಾಯಿಗೆ ಮಗ ಜೀವಂತವಾಗಿರುವುದನ್ನು ನೋಡಿ ಬಹಳ ಸೊತೋಷವಾಗುತ್ತದೆ. ಮದ್ಯ ಮಾರಾಟ ಮತ್ತು ಇನ್ನಿತರ ಅನಿಷ್ತ ಪದ್ದತಿಗಳ ವಿರುದ್ಧ ಹೋರಾಡಲು ಪ್ರೇರೇಪಿಸುತ್ತಾರೆ.
ವಿಶ್ವನಾಥ ಗೆಲ್ಲುತ್ತಾನೆ, ಜೂಜಾಡುವ ಜಾಗವನ್ನು ಒಂದು ಶಾಲೆಯಾಗಿ ಪರಿವರ್ತಿಸುತ್ತಾನೆ ಮತ್ತು ಮದ್ಯದಂಗಡಿಯನ್ನು ಮುಚ್ಚಿಸುತ್ತಾನೆ. ಅವನ ಮಕ್ಕಳೂ ಕೂಡ ಪಾಠ ಕಲಿತು ಮನೆಗೆ ಮರಳಿ ಬರುತ್ತಾರೆ.
ಸಂತೋಷದಿಂದ ವಿಶ್ವನಾಥ, ತನ್ನ ಆಸ್ತಿಯನ್ನು ತನ್ನ ಮಕ್ಕಳಲ್ಲಿ ಹಂಚಲು ಕ್ರಯಪತ್ರ ಬರೆದು, ಸಿಂಹಾದ್ರಿಯನ್ನು ಬಿಟ್ಟು ಬಹುದೂರ ಹೊರಡುತ್ತಾನೆ.
ಪಾತ್ರವೃಂದ
ಬದಲಾಯಿಸಿನಟ | ಪಾತ್ರ |
---|---|
ರಾಜ್ ಕುಮಾರ್ | ವಿಶ್ವನಾಥ |
ಮಾಧವಿ | ಮೀನಾಕ್ಷಿ |
ಕೆ ಎಸ್ ಅಶ್ವಥ್ | ವಿಶ್ವನಾಥನ ತಂದೆ |
ಪಂಡರೀಬಾಯಿ | ವಿಶ್ವನಾಥನ ತಾಯಿ |
ಚಿ ಗುರುದತ್ | ಹಿರಿಯ ಮಗ |
ಅಭಿಜಿತ್ | ಎರಡನೇ ಮಗ |
ಬಾಲರಾಜ್ | ಕೊನೆಯ ಮಗ |
ಟೆನ್ನಿಸ್ ಕೃಷ್ಣ | ಪುಟ್ಟಾ ಜೋಯ್ಸ |
ಸುಧಾರಾಣಿ | ಲಕ್ಷ್ಮಿ |
ಸಂಗೀತ
ಬದಲಾಯಿಸಿಚಿ.ಉದಯಶಂಕರ್, ಕೆ.ಎಸ್.ನರಸಿಂಹಸ್ವಾಮಿ ಹಾಗೂ ಮೂಗೂರು ಮಲ್ಲಪ್ಪರವರು ರಚಿಸಿರುವ ಸಾಹಿತ್ಯಕ್ಕೆ ಉಪೇಂದ್ರ ಕುಮಾರ್ ಸಂಗೀತ ನೀಡಿದ್ದಾರೆ.