ಜೀನ್‌ನಮೂನೆ
ಜೀನ್‌ನಮೂನೆಯು (ಜೀನೋಟೈಪ್) ಜೀವಿಯೊಂದರ ಅನುವಂಶಿಕ ಸಂಯೋಜನೆ ಮತ್ತು ಇದು ಜೀವಿಯ ಭ್ರೂಣಾವಸ್ಥೆಯಿಂದ ವಯಸ್ಕರವರೆಗಿನ ಎಲ್ಲ ಹಂತಗಳಲ್ಲಿನ ಅನುವಂಶಿಕ ಸಾಧ್ಯತೆ ಮತ್ತು ಮಿತಿಗಳನ್ನು ನಿರ್ಣಯಿಸುತ್ತದೆ. ಜೀನ್‌ನಮೂನೆಯು ಜೀವಿಯ ವಾಸ್ತದದ ರೂಪ ಮತ್ತು ವರ್ತನೆಯನ್ನು (ಸ್ಥೂಲಾರ್ಥದಲ್ಲಿ ವ್ಯಕ್ತನಮೂನೆ ಅಥವಾ ಫೀನೊಟೈಪ್) ನಿರ್ಣಯಿಸುವ ಮೂರು ಅಂಶಗಳಲ್ಲಿ ಒಂದು. ಇನ್ನೂ ಎರಡು ಅಂಶಗಳು ಅನುವಂಶಿಕವಾಗಿ ದತ್ತವಾಗುವ ಎಪಿಜೆನಿಟಿಕ್ ಅಂಶಗಳು [೧] ಮತ್ತು ಇತರ ಪರಿಸರದ ಅಂಶಗಳು.
ಜೀವಿಯೊಂದರ ಜೀನ್‌ನಮೂನೆಯು ಅದರಲ್ಲಿರುವ ಜೆನೆಟಿಕ್ ಕೋಡ್ ಅಥವಾ ಅನುವಂಶಿಕ ಸಂಕೇತಗಳ ನಕಾಶೆ. ಎಲ್ಲಾ ಒಂದೇ ರೀತಿಯ ಜೀನ್‌ನಮೂನೆ ಇರುವ ಜೀವಿಗಳು ಒಂದೇ ರೀತಿಯಲ್ಲಿ ಕಾಣುತ್ತವೆ ಅಥವಾ ಒಂದೇರೀತಿಯಲ್ಲಿ ವರ್ತಿಸುತ್ತವೆ ಎಂಬುದು ವಾಸ್ತವವಲ್ಲ ಏಕೆಂದರೆ ಅವು ಕಾಣುಬರುವ ಮತ್ತು ವರ್ತಿಸುವ ರೀತಿಯು ಪರಿಸರದಿಂದ ಸಹ ಪ್ರಭಾವಿತವಾಗಿರುತ್ತದೆ. ಜೀನ್‌ನಮೂನೆ ಪದವನ್ನು ಎರಡು ಅರ್ಥದಲ್ಲಿ ಬಳಸಲು ಸಾಧ್ಯವಿದೆ. ಮೊದಲನೆಯದು ಅದು ಒಟ್ಟಾರೆ ಜೀವಿಯೊಂದರ ಅನುವಂಶಿಕ ಮಾಹಿತಿಯ ಮೊತ್ತ. ಇನ್ನೊಂದು ಸಾಮಾನ್ಯ ಅರ್ಥದಲ್ಲಿ ನಿರ್ದಿಷ್ಟ ಆಸಕ್ತಿ (ಅಥವಾ ಅಧ್ಯಯನಕ್ಕೆ) ಸಂಬಂಧಿಸಿದ ಗುಣಗಳನ್ನು ಪ್ರತಿನಿಧಿಸುವ ಜೀವಿಯಾಗಿ. ಈ ಬಗೆಗಿನ ಸರಳೀಕೃತ ಗ್ರಹಿಕೆಯನ್ನು ಹೀಗೆ ಹೇಳಬಹುದು. ಹಲವು ಜೀವಿಗಳಲ್ಲಿ ತಂದೆ ಮತ್ತು ತಾಯಿಯಿಂದ ಪಡೆದ ಜೀವಿಗಳ ಎರಡು ವರ್ಣತಂತುಗಳ ಸಮೂಹ ಜೀವಿಯಲ್ಲಿ ಇರುತ್ತವೆ. ಅವುಗಳ ಮೇಲೆ ಅಲೆಲ್‌ಗಳು ಎಂದು ಕರೆಯಲಾದ ನಿರ್ದಿಷ್ಟ ಗುಣಗಳ ವಂಶವಾಹಿ ನೆಲೆಗಳು (ಲೋಕಸ್) ಇರುತ್ತವೆ. ಹೀಗಾಗಿ ಪ್ರತಿಗುಣಕ್ಕೆ ಕನಿಷ್ಠ ಎರಡು ಅಲೆಲ್‌ಗಳು (ತಂದೆ ಮತ್ತು ತಾಯಿಯಿಂದ ಪಡೆದ ಒಂದೊಂದು ಅಲೆಲ್) ಇರುತ್ತವೆ. ಚಿತ್ರದಲ್ಲಿ ಕಾಣಿಸಿದ ಪುನ್ನೆಟ್ ಚೌಕದಲ್ಲಿ ಬಟಾಣಿ ಸಸ್ಯದ ಹೂವಿನ ದಳದ ಬಣ್ಣಗಳನ್ನು B ಮತ್ತು bಗಳಿಂದ ಸಂಕೇತಿಸಲಾಗಿದೆ. ಇವೆರಡೂ ಭಿನ್ನ ಅಲೆಲ್‌ಗಳು ಮತ್ತು B ಪ್ರಭಾವಿ ಅಲೆಲ್ (ಡಾಮಿನೆಂಟ್ ಅಲೆಲ್) ಮತ್ತು b ಅಪ್ರಭಾವಿ ಅಲೆಲ್ (ರಿಸೆಸಿವ್ ಅಲೆಲ್). ಜೀವಿಯೊಂದರಲ್ಲಿ ಎರಡು ಅಲೆಲ್‌ಗಳು ಇರುವ ಕಾರಣಕ್ಕೆ ಜೀನ್‌ನಮೂನೆಯು BB, Bb ಅಥವಾ bb ಆಗಿರಲು ಸಾಧ್ಯ. ನಿರ್ದಿಷ್ಟ ನೆಲೆಯಲ್ಲಿನ ಎರಡೂ ಅಲೆಲ್‌ಗಳೂ ಒಂದೇ ರೀತಿಯವಾಗಿದ್ದರೆ ಆ ಜೀವಿಯನ್ನು ಸಮಯುಗ್ಮಜ (ಹೋಮೋಜೈಗೋಟ್- ಈ ಉದಾಹರಣೆಯಲ್ಲಿ BB, bb ಎರಡೂ ಸಮಯುಗ್ಮಜಗಳು) ಮತ್ತು ನಿರ್ದಿಷ್ಟ ನೆಲೆಯ ಎರಡು ಅಲೆಲ್‌ಗಳು ಭಿನ್ನವಾಗಿದ್ದರೆ ಅದನ್ನು ಭಿನ್ನಯುಗ್ಮಜ (ಹೆಟರೊಜೈಗೋಟ್- ಈ ಉದಾಹರಣೆಯಲ್ಲಿ Bb ಭಿನ್ನಯುಗ್ಮಜ) ಎಂತಲೂ ಕರೆಯಲಾಗಿದೆ. ಈ ಜೀನ್‌ನಮೂನೆಗಳಿಂದ ಉಂಟಾಗುವ ವ್ಯಕ್ಯನಮೂನೆಗಳನ್ನು (ಫೀನೊಟೈಪ್) ಚಿತ್ರದಲ್ಲಿನ ಚೌಕದಲ್ಲಿ ತೋರಿಸಲಾಗಿದೆ.
ಜೀನ್‌ನಮೂನೆ ಮತ್ತು ವ್ಯಕ್ತನಮೂನೆ
ಬದಲಾಯಿಸಿಇವೆರಡರ ನಡುವಿನ ವ್ಯತ್ಯಾಸವನ್ನು ಹೀಗೆ ಗುರುತಿಸ ಬಹುದು:
- ಅವಲೋಕಿಸುವ ಆಕರಗಳಲ್ಲಿನ ವ್ಯತ್ಯಾಸ.- ಜೀನ್‌ನಮೂನೆಯನ್ನು ಅನುವಂಶಿಕ ಡಿಎನ್ಎ ಮೂಲಕ ಅವಲೋಕಿಸ ಬಹುದು ಮತ್ತು ವ್ಯಕ್ತನಮೂನೆಯನ್ನು ಜೀವಿಯ ಹೊರ ಗುಣಗಳ ಮೂಲಕ ಅವಲೋಕಿಸ ಬಹುದು.
- ಜೀನ್‌ನಮೂನೆ ಮತ್ತು ವ್ಯಕ್ತನಮೂನೆಗಳು ಯಾವಾಗಲೂ ನೇರವಾಗಿ ಸಂಬಂಧಿಸಿರುವುದಿಲ್ಲ. ಕೆಲವು ವಂಶವಾಹಿಗಳು ನಿರ್ದಿಷ್ಟ ವ್ಯಕ್ತನಮೂನೆಯನ್ನು ನಿರ್ದಿಷ್ಟ ಪರಿಸರದಲ್ಲಿ ಮಾತ್ರ ವ್ಯಕ್ತಪಡಿಸುತ್ತವೆ. ಹಾಗೆಯೇ ಕೆಲವು ವ್ಯಕ್ತನಮೂನೆಗಳು ಹಲವು ಜೀನ್‌ನಮೂನೆಯ ಕಾರಣಕ್ಕೆ ಉಂಟಾಗುತ್ತವೆ.
ಕೆಲವು ಅನುವಂಶಿಕ ಕಾಯಿಲೆಗಳ ಕುಟುಂಬ ಇತಿಹಾಸವನ್ನು ಗುರುತಿಸುವಲ್ಲಿ ಜೀನ್‌ನಮೂನೆ ಮತ್ತು ವ್ಯಕ್ತನಮೂನೆ ಮುಖ್ಯವಾಗುತ್ತವೆ. ಉದಾಹರಣೆಗೆ ಅಲ್ಬಿನೊ ಅಥವೊ ಬಿಳಿಚಿಕೆ ಕಾಯಿಲೆಯಲ್ಲಿ ರೋಗಿಗೆ ಅಪ್ರಭಾವಿ ಎರಡು ಅಲೆಲ್‌ಗಳಿರುತ್ತವೆ (aa). ಹೀಗಾಗಿ ಈ ರೋಗದಿಂದ ಬಳತ್ತಿರುವ ವ್ಯಕ್ತಿ ಇನ್ನೊಂದು ವ್ಯಕ್ತಿಯನ್ನು ಸೇರಿದಾಗ ಆ ವ್ಯಕ್ತಿ ಭಿನ್ನಯುಗ್ಮಜನಾ(ಳಾ)ಗಿದ್ದರೆ (Aa) ಈ ರೋಗ ಸಂತತಿಯು ಪಡೆಯು ಸಾಧ್ಯತೆ ಶೇ ೫೦ ರಷ್ಟಿದ್ದರೆ, ಆ ವ್ಯಕ್ತಿ ರೋಗಮುಕ್ತ ಸಮಯುಗ್ಮಜನಾ(ಳಾ)ಗಿದ್ದರೆ (AA) ಸಂತತಿ ರೋಗವನ್ನು ಪಡೆಯು ಸಾಧ್ಯತೆ ಇರುವುದಿಲ್ಲ. ಇದಕ್ಕೆ ಭಿನ್ನವಾಗಿ ಬಿಳಿಚಿಕೆ ಕಾಯಿಲೆಯ ಅಲೆಲ್ ಒಂದು ಇರುವ ಇಬ್ಬರು ವ್ಯಕ್ತಿಗಳು (ಭಿನ್ನಯುಗ್ಮಜ-Aa) ಸೇರಿದರೆ ಅವರಿಗೆ ಸ್ವತಹ ಕಾಯಿಲೆ ಇಲ್ಲದಿದ್ದಾಗ್ಯೂ ಕಾಯಿಲೆ ಇರುವ ಸಂತತಿ ಹುಟ್ಟುವ ಸಾಧ್ಯತೆ ಶೇ ೨೫ ಇರುತ್ತದೆ.
ವಾಸ್ತವದಲ್ಲಿ ಒಂದೇ ವಂಶವಾಹಿ ಒಂದು ಅಥವಾ ಹೆಚ್ಚು ಗುಣಗಳನ್ನು ನಿಯಂತ್ರಿಸುವ ಸಾಧ್ಯತೆ ತೀರ ಕಡಿಮೆ, ಹೀಗಾಗಿ ಹಲವು ವಂಶವಾಹಿಗಳು ಗುಣ (ಅಥವಾ ಗುಣಗಳನ್ನು) ನಿಯಂತ್ರಿಸುತ್ತಿರ ಬಹುದು. ಅಷ್ಟೇ ಅಲ್ಲ ಡಿಎನ್‌ಎ ಕೆಲವು ಭಾಗ ಕೇವಲ ಇತರ ವಂಶವಾಹಿಗಳ ಅಭಿವ್ಯಕ್ತಿಯ ನಿಯಂತ್ರಣದಲ್ಲಿಯೂ ತೊಡಗಿರ ಬಹುದು.
ಟಿಪ್ಪಣಿಗಳು ಮತ್ತು ಉಲ್ಲೇಖಗಳು
ಬದಲಾಯಿಸಿ- ↑ ಇವು ಡಿಎನ್ಎ ಅನುವಂಶಿಕ ಪದಾರ್ಥದ ಮೂಲಕವಲ್ಲದೆ ದೈಹಿಕವಾಗಿ ದತ್ತವಾಗುತ್ತವೆ
ಆಧಾರ
- ಇಂಗ್ಲೀಶ್ ವಿಕಿಪೀಡಿಯ ಪುಟ “Genotype”
- ವಿಕಿಪೀಡಿಯ ಪುಟ ವಂಶವಾಹಿ
- “Genotype”, Biology, Encyclopedia Britannica