ಜಾಹ್ನವಿ ಜಯಪ್ರಕಾಶ್


ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

“ನನ್ನ ಇಡೀ ಜೀವನವೇ ಸಂಗೀತಮಯ” ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಜಾಹ್ನವಿ ಜಯಪ್ರಕಾಶ್ ನೃತ್ಯಕ್ಕೆ ಅದರಲ್ಲೂ ಭರತನಾಟ್ಯಕ್ಕೆ ಹಾಡುವವರಲ್ಲಿ ಅದ್ವಿತೀಯರು ಎಂದರೆ ತಪ್ಪಾಗಲಾರದು. ಸಂಗೀತದ ವಾತಾವರಣದಲ್ಲೇ ಬೆಳೆದ ಜಾಹ್ನವಿ ತನ್ನ ಎಳೆಯ ವಯಸ್ಸಿನಿಂದಲೇ ಹಾಡುಗಾರಿಕೆಯ ಸೂಕ್ಷ್ಮತೆಗಳನ್ನು ಕರಗತಮಾಡಿಕೊಂಡಿದ್ದರು. ಮುಂದೆ ಖ್ಯಾತ ಸಂಗೀತಜ್ಞ ಟಿ. ಪುಟ್ಟಸ್ವಾಮಯ್ಯನವರ ಮಾರ್ಗದರ್ಶನದಲ್ಲಿ ಎಂ.ಎ. ಪದವಿಯನ್ನು ಗಳಿಸಿ ಸಂಗೀತ ಕ್ಷೇತ್ರದಲ್ಲಿ ತಮ್ಮ ಹೆಸರು ಚಿರಸ್ಥಾಯಿಯಾಗಿರುವಂತೆ ಯಶಸ್ವಿಯಾದರು. ತಮ್ಮ ಸಣ್ಣ ವಯಸ್ಸಿನಲ್ಲೇ ಕಚೇರಿಗಳಲ್ಲಿ ಹಾಡುವ ಆತ್ಮವಿಶ್ವಾಸವನ್ನು ಬೆಳೆಸಿಕೊಂಡವರಾಗಿದ್ದರೂ ಜಾಹ್ನವಿ ಹೆಸರು ಗಳಿಸಿದ್ದು ನೃತ್ಯಕ್ಕೆ ಅದರಲ್ಲೂ ಭರತನಾಟ್ಯದ ಹಿನ್ನಲೆ ಗಾಯಕಿಯಾಗಿ. ನೃತ್ಯಕ್ಕೆ ಹಾಡಲು ತೊಡಗಿ ಅದನ್ನೇ ತಮ್ಮ ವೃತ್ತಿಯನ್ನಾಗಿ ಮುಂದುವರಿಸಿದರಾದರೂ ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡು ಸಂಗೀತದ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿರುವುದೇ ಈಕೆಯ ಹೆಗ್ಗಳಿಕೆ. ತಮ್ಮ ಜೀವನದಲ್ಲಿ ಅವರಿಗೆ ಇಂತಹ ತಿರುವು ದೊರೆತ್ತದ್ದೇ ಒಂದು ಯೋಗಾಯೋಗ ಸನ್ ೧೯೭೨ರಲ್ಲಿ ಆಗತಾನೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಈ ೧೮ ವಯಸ್ಸಿನ ತಣಿಯದ ಡಾ|| ಕೆ. ವೆಂಕಟಲಕ್ಷ್ಮಮ್ಮನವರ ಅಭಿನಯ ಕಾರ್ಯಕ್ರಮಕ್ಕೆ ಹಾಡುವ ಅವಕಾಶ ಒದಗಿ ಬಂದಿತು. ವಿದ್ವತ್ ಗೋಷ್ಠಿಯಲ್ಲಿ ಜರುಗಿದ ಆ ಕಾರ್ಯಕ್ರಮ ಎಷ್ಟು ಯಶಸ್ವಿಯಾಯಿತೆಂದರೆ ವೀಕ್ಷಕರ ಮೆಚ್ಚುಗೆ ಖ್ಯಾತ ನೃತ್ಯ ಕಲಾವಿದೆಯ ಉತ್ತೇಜನಗಳಿಂದ ಜಾಹ್ನವಿಯವರ ಆತ್ಮವಿಶ್ವಾಸವೂ ಕುದುರಿದ್ದಲ್ಲದೆ, ಆ ಪ್ರಕಾರವನ್ನೇ ತಮ್ಮ ವೃತ್ತಿಯನ್ನು ಮುಂದುವರಿಸುವಂತೆ ಮಾಡಿತ್ತು. ಮುಂದೆ ವಿಶ್ವವಿಖ್ಯಾತ ಕಮಲಾ ಲಕ್ಷ್ಮಣ್ ಮುಂತಾದ ಹೆಸರಾಂತ ಭರತನಾಟ್ಯ ಕಲಾವಿದರಿಗೆ ಹಿನ್ನೆಲೆ ಗಾಯನ ಒದಗಿಸಿ ಅವರಿಂದ ದೊರೆತ ಮೆಚ್ಚುಗೆಯಿಂದ ಆ ಕ್ಷೇತ್ರದಲ್ಲಿ ತಮ್ಮ ಸ್ಥಾನ-ಮಾನವನ್ನು ಭದ್ರಪಡಿಸಿಕೊಳ್ಳುವಂತಾದರು. ಸುಮಾರು ೩೦-೩೫ ವರುಷಗಳ ಜಾಹ್ನವಿಯವರ ಈ ವಿಶಿಷ್ಠ ಸೇವೆಯಲ್ಲಿ ಇವರ ಸಹಕಾರವಿಲ್ಲದೇ ನರ್ತಿಸದ ಭರತನಾಟ್ಯ ಕಲಾವಿದ/ದೆ ಇಲ್ಲವೇ ಇಲ್ಲವೆಂದರೂ ತಪ್ಪಾಗಲಾರದು. ಅದು ಒಂದು ಕಾಲ. ಆಗತಾನೆ ಭರತನಾಟ್ಯ ಜನಪ್ರಿಯತೆಯನ್ನೂ ಗಳಿಸಿತ್ತು. ಹೆಚ್ಚಾಗಿ ನಟುವನಾರ್ ಅಥವಾ ನೃತ್ಯಗುರುಗಳೇ ನಟುವಾಂಗದ ಜೊತೆಗೆ ಗಾಯನವನ್ನೂ ಒದಗಿಸುವ ಪರಿಪಾಠ ಬೆಳೆದು ಬಂದಿತ್ತು. ಹಾಗೆ ಹಾಡುವ ಅವಕಾಶ ದೊರೆತರೂ ೩೫-೪೦ರೂ. ಗಳ ಸಂಭಾವನೆ ಅಷ್ಟೇನೂ ಆಕರ್ಷಕ ಎನ್ನುವಂತಿರಲಿಲ್ಲ. ಹಾಗೇ ಆರಂಭವಾದ ಜಾಹ್ನವೀಯವರ ವೃತ್ತಿ ಮುಂದೆ ರೂ. ೫೦೦ನ್ನೂ ಗಳಿಸುವಂತಾಗಿ, ಭರತನಾಟ್ಯದ ರಂಗ ಪ್ರವೇಶದಲ್ಲಿ ಅದರ ಮೂರು-ನಾಲ್ಕರಷ್ಟನ್ನು ಗಳಿಸುವಂತಾದರು. ಜಾಹ್ನವೀಯವರ ಬೇಡಿಕೆಯೂ ಬೆಳೆಯುತ್ತಾ ದಿನದ ೨೪ ಗಂಟೆಗಳು ಸಾಲದು ಎಂದು ಹೇಳಿಕೊಳ್ಳುವ ಹಂತವನ್ನು ಮುಟ್ಟಿದರು. ಈ ಮಧ್ಯೆ, ನೃತ್ಯ ಶಾಲೆಗಳ ಬೇಡಿಕೆಯಂತೆ, ದೂರದರ್ಶನದ ಅವಶ್ಯಕತೆಗಳಿಗನುಗುಣವಾಗಿ ನೃತ್ಯ-ನಾಟಕಗಳಿಗೆ, ನೃತ್ಯ-ರೂಪಕಗಳಿಗೆ ಸಂಗೀತ ಸಂಯೋಜನೆಯನ್ನು ಹೊಂದಿಸುವ ಜವಾಬ್ದಾರಿಯೂ ಸೇರಿ ಜಾಹ್ನವೀಯವರ ಪ್ರತಿಭೆ ಇನ್ನೂ ಪ್ರಕಾಶಮಾನವಾಯಿತು. ಹಲವು ವೇಳೆ ನೃತ್ಯ ಶಿಕ್ಷಕರ ಕೊರತೆಯನ್ನು ತುಂಬಿಕೊಡುವ ಸಲುವಾಗಿ ನೃತ್ಯದ “ಶೋಲ್ಕಟ್ಟು”ಗಳ ಪಠಣದಲ್ಲೂ ನೈಪುಣ್ಯತೆಯನ್ನು ಗಳಿಸಿಕೊಂಡು ದೇಶ-ವಿದೇಶಗಳಲ್ಲಿ ಸಂಚರಿಸಿ ಖ್ಯಾತ ನಾಮರಾದ ಈ ವಿಶಿಷ್ಟ ಚೇತನಕ್ಕೆ ರಾಜ್ಯ ಅಕಾಡೆಮಿಯು ತನ್ನ ೧೯೯೫-೯೬ನೇ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.