ಜಾರ್ಜ್ ಈಲಿಯಟ್
ಜಾರ್ಜ್ ಈಲಿಯಟ್ (ಎಲಿಯಟ್) ಎಂಬ ಪುರುಷ ಹೆಸರಿನಲ್ಲಿ ಬರೆದು ಪ್ರಸಿದ್ಧಳಾದ ಇಂಗ್ಲೀಷಿನ ಕಾದಂಬರಿಗಾರ್ತಿ - ಮೇರಿ ಆನ್ ಈವಾನ್ಸ್ .( ಹುಟ್ಟು- ೧೮೧೯, ಸಾವು-೧೮೮೦). ವಿಕ್ಟೋರಿಯನ್ ಯುಗದ ಪ್ರಮುಖ ಬರಹಗಾರ್ತಿ ಇವಳು. ಇವಳು ಏಳು ಕಾದಂಬರಿಗಳನ್ನು ಬರೆದಿದ್ದು , ವಾಸ್ತವತೆ ಮತ್ತು ಮಾನಸಿಕ ಒಳನೋಟ ಇವುಗಳ ಹೆಗ್ಗುರುತುಗಳಾಗಿವೆ. ಸಿಲಾಸ್ ಮಾರ್ನರ್, ಆಡಂ ಬೀಡ್ (1859), ಮಿಲ್ ಆನ್ ದಿ ಫ್ಲಾಸ್ (1860). ಮಿಡ್ಲ್‌ಮಾರ್ಚ್ (1872) ಇವಳು ಬರೆದ ಪ್ರಸಿದ್ಧ ಕಾದಂಬರಿಗಳು.
ಜಾರ್ಜ್ ಈಲಿಯಟ್ | |
---|---|
ಜನನ | Mary Ann Evans ೨೨ ನವೆಂಬರ್ ೧೮೧೯ Nuneaton, Warwickshire, England |
ಮರಣ | 22 December 1880 Chelsea, Middlesex, England | (aged 61)
ಅಂತ್ಯ ಸಂಸ್ಕಾರ ಸ್ಥಳ | Highgate Cemetery (East), Highgate, London |
ಕಾವ್ಯನಾಮ | George Eliot |
ವೃತ್ತಿ | ಕಾದಂಬರಿಕಾರ್ತಿ |
ಕಾಲ | ವಿಕ್ಟೋರಿಯನ್ |
ಪ್ರಮುಖ ಕೆಲಸ(ಗಳು) | The Mill on the Floss (1860), Silas Marner (1861), Middlemarch (1871–72), Daniel Deronda (1876) |
ಬಾಳ ಸಂಗಾತಿ | John Cross (1880; her death) |
ಪಾಲುದಾರ(ರು) | George Henry Lewes (1854–78) (his death) |
ಸಂಬಂಧಿಗಳು | Robert Evans and Christiana Pearson (parents); Christiana, Isaac, Robert, and Fanny (siblings) |
ಬಾಲ್ಯ ಮತ್ತು ಜೀವನ
ಬದಲಾಯಿಸಿವಾರ್ವಿಕ್ಷೈರಿನಲ್ಲಿ ಈಕೆಯ ತಂದೆ ಕೇವಲ ಬಡ ಬಡಗಿಯೊಬ್ಬನ ಮಗನಾದರೂ ರೈತನಾಗಿ ಜೀವನವನ್ನು ಪ್ರಾರಂಭಿಸಿ ಸ್ವಶ್ರಮದಿಂದ ಆಸ್ತಿಯೊಂದರ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ. ಮೇರಿಯನ್ ಕೊನೆಯ ಮಗಳು, ಕಪ್ಪು ಕೂದಲಿನ ಚದುರೆ. ತನ್ನ ಅಣ್ಣ ಐಸ್ಯಾಕನನ್ನು ಕಂಡರೆ ತುಂಬ ಪ್ರೀತಿ. ತನ್ನ ಮಿಲ್ ಆನ್ ದಿ ಫ್ಲಾಸ್ ಎಂಬ ಕಾದಂಬರಿಯಲ್ಲಿ ಟಾಮ್‍ನ ಪಾತ್ರದಲ್ಲಿ ಐಸ್ಯಾಕನನ್ನೂ ಅವನ ಸೋದರಿಯ ಪಾತ್ರದಲ್ಲಿ ತನ್ನನ್ನೂ ಚಿತ್ರಿಸಿದ್ದಾಳೆ. 17ನೆಯ ವಯಸ್ಸಿನಲ್ಲಿ ತಾಯಿ ಸತ್ತ ಒಡನೆಯೇ ಮನೆಯ ಜವಾಬ್ದಾರಿಯೆಲ್ಲ ಈಕೆಯ ಮೇಲೆ ಬಿತ್ತು. ಗ್ರಾಮಜೀವನವೆಂದರೆ ಈಕೆಗೆ ಪ್ರಿಯ. ವಿರಾಮಕಾಲದಲ್ಲಿ ವ್ಯಾಸಂಗಮಾಡುವುದರಲ್ಲೂ ವಿಶ್ವಾಸ. ಆದರೂ ಅಂಥ ಸಾಮರ್ಥ್ಯವುಳ್ಳ ಯುವತಿಗೆ ಗ್ರಾಮಜೀವನ ಸಪ್ಪೆಯಾಗಿ ಕಂಡಿತು. ಹೆಣ್ಣಾಗಿ ಹುಟ್ಟಿದುದರಿಂದ ತನಗಾದ ಸಂಕೋಚಗಳನ್ನು ಡೇನಿಯಲ್ ಡೊರೊಂಡ ಎಂಬ ಕಥೆಯಲ್ಲಿ ತೋಡಿಕೊಂಡಿದ್ದಾಳೆ. 21ನೆಯ ವಯಸ್ಸಿನಲ್ಲಿ ವಾರ್ವಿಕ್ಷೈರಿನಿಂದ ಆಕೆಗೆ ಬಿಡುಗಡೆಯಾಯಿತು. ಐಸ್ಯಾಕನಿಗೆ ತೋಟದ ಮೇಲ್ವಿಚಾರಣೆ ವಹಿಸಿ ಮಗಳೊಂದಿಗೆ ತಂದೆ ಕವೆಂಟ್ರಿಗೆ ಬಂದು ನೆಲೆಸಿದ. ಇಲ್ಲಿ ಮೇರಿಯನಳಿಗೆ ರಿಬ್ಬನ್ ತಯಾರಕ ಬ್ರೇ ಮತ್ತು ಆತನ ಹೆಂಡತಿಯ ಪರಿಚಯವಾಯಿತು. ಈ ದಂಪತಿಗಳ ಪ್ರಭಾವದಿಂದ ಮತಧರ್ಮವಿಚಾರಗಳಲ್ಲಿ ಮೇರಿಯನಳಿಗಿದ್ದ ಉತ್ಕಟ ಹಾಗೂ ಸಂಕೋಚ ಮನೋಭಾವ ವ್ಯತ್ಯಾಸಗೊಂಡಿತು. ತಂದೆ ಸತ್ತಮೇಲೆ (1849) ಬ್ರೇ ದಂಪತಿಗಳೊಡನೆ ದೇಶ ಸಂಚಾರಮಾಡಿ ಬಂದಳಲ್ಲದೆ ದಿ ವೆಸ್ಟ್ ಮಿನಿಸ್ಟರ್ ರಿವ್ಯೂ ಎಂಬ ಪತ್ರಿಕೆಗೆ ಲೇಖನಗಳನ್ನು ಬರೆದಳು. ಅನಂತರ ಅದರ ಸಂಪಾದಕನ ಕೋರಿಕೆಯಂತೆ ಲಂಡನ್ನಿಗೆ ಹೋಗಿ ಆ ಪತ್ರಿಕೆಯ ಉಪಸಂಪಾದಕಳಾಗಿ ಕೆಲಸ ಮಾಡಿದಳು. ಅಲ್ಲಿ ಇವಳಿಗೆ ಪ್ರಸಿದ್ಧ ಲೇಖಕ ಹರ್ಬರ್ಟ್ ಸ್ಪೆನ್ಸರ್ ಮತ್ತು ನಟ ಜಾರ್ಜ್ ಹೆನ್ರಿ ಲೆವಿಸರ ಸ್ನೇಹವಾಯಿತು. ಕಾನೂನಿನ ರೀತ್ಯ ಮದುವೆಯಾಗದಿದ್ದರೂ ಸುಮಾರು ಇಪ್ಪತ್ತೈದು ವರ್ಷಕಾಲ ಮೇರಿಯನ್ ಎವನ್ಸ್ ಮತ್ತು ಹೆನ್ರಿ ಲೆವಿಸ್ ಗಂಡ ಹೆಂಡಿರಂತೆ ಬಾಳಿದರು. ತಮ್ಮ ಮೂರು ಮಕ್ಕಳನ್ನೂ ಈಕೆ ವಿಶ್ವಾಸದಿಂದ ಸಾಕಿದಳು.
ಬರಹಗಾರಳಾಗಿ
ಬದಲಾಯಿಸಿಬರೆಯಲು ಪ್ರಾರಂಭಿಸಿದಾಗ ಎವನ್ಸ್‌ಗೆ ನಲವತ್ತರ ವಯಸ್ಸಾಗಿತ್ತು. ಬಹಳ ಉತ್ತಮ ಕಾದಂಬರಿ ಎನಿಸಿದ ಸೀನ್ಸ್ ಫ್ರಂ ಕ್ಲರಿಕಲ್ ಲೈಫ್ ಎಂಬುದರಲ್ಲಿ ಈಕೆಯ ಪ್ರಾರಂಭಿಕ ಗ್ರಾಮಜೀವನದ ಚಿತ್ರಗಳಿವೆ. ಇದರಲ್ಲಿ ದಿ ಸ್ಯಾಡ್ ಫಾರ್ಚೂನ್ಸ್ ಆಫ್ ದಿ ರೆವರೆಂಡ್ ಎಮಾಸ್ ಬಾರ್ಟನ್, ಮಿಸ್ಟರ್ ಜೆಲ್ಫಿಲ್ಸ ಲೌವ್ ಸ್ಟೋರಿ, ಜೆನೇಟ್ಸ್ ರಿಪೆಂಟೆನ್ಸ್ ಎಂಬ ಮೂರು ಕಥೆಗಳಿವೆ. ಅನಂತರ ಆಡಂ ಬೀಡ್, ಮಿಲ್ ಆನ್ ದಿ ಫ್ಲಾಸ್, ಸೈಲಸ್ ಮಾರ್ನರ್ ಎಂಬ ಮೂರು ಕಾದಂಬರಿಗಳು ಹೊರಬಂದುವು. ಕೊನೆಯ ಕಾದಂಬರಿಯಲ್ಲಿ ಬಾಗಿಲಲ್ಲಿ ಸಿಕ್ಕ ತಬ್ಬಲಿ ಹೆಣ್ಣು ಕೂಸೊಂದನ್ನು ಸಾಕಿದ ನೇಕಾರನೊಬ್ಬನ ಜೀವನ ಚಿತ್ರಣವಿದೆ. ರೊಮೊಲದಲ್ಲಿ (1861) 15ನೆಯ ಶತಮಾನದ ಇಟಲಿಯ ಹಿನ್ನೆಲೆಯಿದೆ. ಡೇನಿಯಲ್ ಡರೋಂಡದಲ್ಲಿ (1876) 19ನೆಯ ಶತಮಾನದ ಯುರೋಪಿನ ಜೀವನವಿದೆ. ಈಕೆಯ ಅತ್ಯುತ್ತಮ ಕಾದಂಬರಿಯೆಂದು ಖ್ಯಾತವಾಗಿರುವ ಮಿಡ್ಲ್ ಮಾರ್ಚ್‍ನಲ್ಲಿ ಸಣ್ಣ ಊರೊಂದರಲ್ಲಿನ ಮಧ್ಯಮವರ್ಗದ ಕುಟುಂಬವೊಂದರ ಕಥೆ ಇದೆ. ಇಷ್ಟಲ್ಲದೆ ಈಕೆ ಒಂದು ಪ್ರಬಂಧ ಗುಚ್ಛವನ್ನೂ ಕವನ ಸಂಕಲನವನ್ನೂ ಬರೆದಿದ್ದಾಳೆ. ತನ್ನ ಕಾಲಕ್ಕಾಗಲೇ ಈಕೆ ಖ್ಯಾತ ಲೇಖಕಿಯಾಗಿ ಸಾಕಷ್ಟು ಗೌರವ ಸಂಪಾದಿಸಿದ್ದಳು. ಲೆವಿಸ್ ಸತ್ತಮೇಲೆ ತನ್ನನ್ನು ಮೆಚ್ಚಿದ ಜಾನ್ ವಾಲ್ಟರ್ ಕ್ರಾಸ್ ಎಂಬಾತನನ್ನು ಈಕೆ ಮದುವೆಯಾದಳು.
ಕಾದಂಬರಿಗಳ ಒಳನೋಟ
ಬದಲಾಯಿಸಿಜಾರ್ಜ್ ಎಲಿಯಟ್ಳು ತನ್ನ ಕಾದಂಬರಿಗಳಲ್ಲಿ ಸಾಮಾನ್ಯ ಜನರ ಜೀವನದಲ್ಲಿನ ಆಳವಾದ ಸಮಸ್ಯೆಗಳನ್ನು ಗಂಭೀರವಾಗಿ ಬಿಡಿಸಿದ್ದಾಳೆ. ಇವಳು ಆರಿಸಿದ ಕಥಾನಕಗಳೆಲ್ಲ ಸಂಕೀರ್ಣವಾದವು. ಸಾಮಾನ್ಯ ಜನಕ್ಕೆ ಒದಗುವ ದುರಂತಗಳನ್ನು ಈಕೆ ತೀಕ್ಷ್ಣವಾಗಿ ವರ್ಣಿಸಿದ್ದಾಳೆ. ಅಷ್ಟೇ ಚೆನ್ನಾಗಿ ಜೀವನದ ಲಘು ಸನ್ನಿವೇಶಗಳನ್ನೂ ಹಾಸ್ಯಪ್ರಕರಣ ಗಳನ್ನೂ ಈಕೆ ಚಿತ್ರಿಸಿದ್ದಾಳೆ. ಸಂಭಾಷಣೆಯನ್ನು ಸಹಜವಾಗಿ ಬೆಳಸುವ ಕಲೆ ಈಕೆಗೆ ಸಿದ್ಧಿಸಿತ್ತು. ಮಕ್ಕಳ ವಿಷಯಗಳನ್ನಂತೂ ಈಕೆ ಮನಮುಟ್ಟುವಂತೆ ಚಿತ್ರಿಸಿದ್ದಾಳೆ. ಬದುಕಿನಲ್ಲಿ ಪ್ರತಿಯೊಂದು ಕ್ರಿಯೆಯೂ ಫಲವನ್ನು ಕೊಟ್ಟೇ ಕೊಡುತ್ತದೆ ಎಂಬುದು ಈಕೆಯ ಗಾಢ ನಂಬಿಕೆ. ಮನುಷ್ಯನು ತನ್ನ ಒಂದು ಕ್ರಿಯೆ ಗುಟ್ಟಾಗಿ ಉಳಿಯುತ್ತದೆ ಎಂದಾಗಲಿ ಇಂಥ ಫಲವನ್ನೇ ನೀಡುತ್ತದೆ ಎಂದಾಗಲಿ ನಿರೀಕ್ಷಣೆಯನ್ನು ಇಟ್ಟುಕೊಳ್ಳ ಬಹುದು. ಆದರೆ ಆತನ ನಿರೀಕ್ಷಣೆ ತಪ್ಪಾಗಬಹುದು. ಜಾರ್ಜ್ ಎಲಿಯೆಟ್‍ಳ ಹಲವು ಕಾದಂಬರಿಗಳೇ ಎಂದೋ ನಡೆದ ಕ್ರಿಯೆಯು ಕಾಲದ ಗರ್ಭದಲ್ಲಿ ಮರೆಯಾಗಿದ್ದು, ನಿರೀಕ್ಷಿಸದಿದ್ದಾಗ ನಿರೀಕ್ಷಿಸದಿದ್ದ ಫಲವನ್ನೂ ಕೊಡುತ್ತದೆ. ಮನುಷ್ಯ-ಮನುಷ್ಯರ ನಡುವಣ ಪ್ರೀತಿ, ನೆರವು ಇವೇ ನಿಜವಾದ ಸಂಪತ್ತು. (‘ಸೈಲಸ್ ಮಾರ್ನರ್’ನಲ್ಲಿ ಪ್ರೀತಿಯ ಭಾಗ್ಯದ ನಿರೂಪಣೆ ಇದೆ.) ಇವಳು ತನ್ನನ್ನು ‘ವಿನಾಲಿಯರಿಸ್ಟ್’ ಎಂದು ಕರೆದು ಕೊಂಡಳು. ಹೀಗೆಂದರೆ, ಜಗತ್ತು ಉತ್ತಮವಾಗುವ ವಿಷಯದಲ್ಲಿ ನಿರಾಸೆ ಇಲ್ಲ, ಆದರೆ ಅದು ತಾನಾಗಿಯೇ ಸುಧಾರಿಸುತ್ತದೆ ಎಂದು ನಂಬುವಂತಿಲ್ಲ, ಮನುಷ್ಯನ ಪ್ರಯತ್ನದಿಂದ ಸುಧಾರಿಸುತ್ತದೆ ಎಂದು ನಂಬಿಕೆ ಇರುವ ವ್ಯಕ್ತಿ. ಜಾರ್ಜ್ ಎಲಿಯಟ್‍ಳಿಗೆ ದೇವರಲ್ಲಿ ನಂಬಿಕೆ ಇಲ್ಲ. ಆದರೆ ಮಾನವರ ಪರಸ್ಪರ ಪ್ರೀತಿಗೆ ಅತ್ಯುನ್ನತ ಸ್ಥಾನವನ್ನು ಕೊಟ್ಟಳು. ಮನುಷ್ಯರು ಪರಸ್ಪರ ಅವಲಂಬಿಸುತ್ತಾರೆ, ಒಂಟಿಯಾಗಿ ಸಾರ್ಥಕ ಬದುಕನ್ನು ನಡೆಸುವುದು ಅಸಾಧ್ಯ, ಮನುಷ್ಯನ ಭಾವಗಳು (ಫೀಲಿಂಗ್ಸ್) ಬಹು ಮುಖ್ಯ ಇವೇ ಮನುಷ್ಯನ ನಡತೆಯನ್ನು ನಿರ್ಧರಿಸುತ್ತವೆ. ಆದುದರಿಂದ ಮನುಷ್ಯನ ಪರಸ್ಪರ ಅವಲಂಬನೆ ಕಲ್ಯಾಣಕರವಾಗಬೇಕಾದರೆ ನಮ್ಮ ಫೀಲಿಂಗ್ಸ್ ಅನ್ನು ನೈತಿಕವಾಗಿ ಇಟ್ಟುಕೊಳ್ಳುವುದು ಅನಿವಾರ್ಯ ಎಂಬುದು ಈಕೆಯ ಚಿಂತನೆ. ಈಕೆಯ ಕಾದಂಬರಿಗಳಲ್ಲಿ ಪಾತ್ರಗಳು ಆರೋಗ್ಯಕರವಾದ, ಗಟ್ಟಿ ಫೀಲಿಂಗ್ ನಿಂದ ಆಯ್ಕೆ ಮಾಡಿದಾಗ ಬದುಕು ಅರ್ಥವತ್ತಾಗುತ್ತದೆ. ಫೀಲಿಂಗ್ ಟೊಳ್ಳಾದಾಗ ಬದುಕು ಅರ್ಥಹೀನವಾಗುತ್ತದೆ. ಒಮ್ಮೊಮ್ಮೆ ಈಕೆಗೆ ಕ್ರಿಯೆಯನ್ನು ಸಾಕಷ್ಟು ದೂರದಿಂದ ನೋಡಲು ಸಾಧ್ಯವಾಗಿಲ್ಲ ಎನ್ನಿಸುತ್ತದೆ; ಆ್ಯಡಂ ಬೀಡ್ನಲ್ಲಿ ಹೆಟಿ ಸೊರಲ್ ಎನ್ನುವ ಪಾತ್ರಕ್ಕೆ ವಿರುದ್ಧವಾಗಿದ್ದಾಳೆ ಎನ್ನಿಸುತ್ತದೆ. ಇಂಥ ದೋಷಗಳಿದ್ದರೂ ಈಕೆ ಕಾದಂಬರಿಯಲ್ಲಿ ಬದುಕಿನ ಅರ್ಥ ಅನ್ವೇಷಣೆಯನ್ನು ಕಲಾತ್ಮಕವಾಗಿ ನಿರೂಪಿಸಿದಳು. ಇಂಗ್ಲಿಷ್ ಕಾದಂಬರಿಯ ಸಾಹಿತ್ಯದಲ್ಲಿ ಬಹು ದೊಡ್ಡ ಸ್ಥಾನ ಈಕೆಯದು.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- The George Eliot Fellowship
- Works by George Eliot at Project Gutenberg
- Poetry Foundation profile and poems
- Full biography: "Evans, Marian [George Eliot] (1819–1880)", Oxford Dictionary of National Biography, Oxford University Press, 2008
- George Eliot at The Victorian Web
- Literary Encyclopedia biography
- Hyper-Concordance to the Works of George Eliot, Nagoya University Archived 2012-12-11 ವೇಬ್ಯಾಕ್ ಮೆಷಿನ್ ನಲ್ಲಿ.
- The Life of George Eliot by John Morley' at Project Gutenberg
- Athenaeum review of Archived 2012-12-22 at Archive.is The Mill on the Floss by Geraldine Jewsbury, (7 April 1860)
- Archival material relating to ಜಾರ್ಜ್ ಈಲಿಯಟ್ listed at the UK National Archives
- George Eliot Collection Archived 2009-06-15 ವೇಬ್ಯಾಕ್ ಮೆಷಿನ್ ನಲ್ಲಿ. at the Harry Ransom Center at the University of Texas at Austin
- Images of letter fragments and personal belongings Archived 2012-12-24 at Archive.is
- JK Rowling Interview Archived 2014-10-07 ವೇಬ್ಯಾಕ್ ಮೆಷಿನ್ ನಲ್ಲಿ. with Daniel Radcliffe cites George Eliot's real name as inspiration for character Lily Evans's name.