ಜಾಂಬವಂತ
ಜಂಬವಂತನು ಭೂಮಿ ಮತ್ತು ಆಕಶಕ್ಕಿಂತ ಮೊದಲು ಜನಿಸಿದನು. ಮಾದಿಗರ ಮೂಲ ಪುರುಷ
ಜಾಂಬವಂತನು ರಾಮಾವತಾರ ಮತ್ತು ಕೃಷ್ಣಾವತಾರಗಳೆರಡರ ಕಾಲದಲ್ಲೂ ಭಾಗವಹಿಸಿದನೆನ್ನಲಾದ ದೀರ್ಘಜೀವಿ; ಅಶ್ವತ್ಥಾಮ, ಹನುಮಂತರಂತೆ ಯುಗಯುಗಾಂತರಗಳವರೆಗೂ ಜೀವಿಸಿದ್ದವ. ಈತನ ಚರಿತ್ರೆ ರಾಮಾಯಣದಲ್ಲಿ ಹೇಗೋ ಹಾಗೆ ಹರಿವಂಶ, ಭಾಗವತಗಳಲ್ಲೂ ಬಂದಿದೆ.
ಜಾಂಬವಂತ ಕರಡಿಯ ಜಾತಿಯವ. ತಾಯಿ ರಕ್ಷಾದೇವಿ, ತಂದೆ ಪ್ರಜಾಪತಿ. ಕಿಷ್ಕಿಂಧೆಯಲ್ಲಿ ವಾನರ ರಾಜನಾದ ಸುಗ್ರೀವನ ಆಪ್ತಸಚಿವರಲ್ಲಿ ಒಬ್ಬ. ಸೀತಾನ್ವೇಷಣೆಗಾಗಿ ಹನುಮಂತನ ಜೊತೆಯಲ್ಲಿ ಈತನೂ ಹೋಗಿದ್ದನಲ್ಲದೆ ಅವನನ್ನು ಹುರಿದುಂಬಿಸಿ ಸಮುದ್ರಲಂಘನಕ್ಕೆ ಸಿದ್ಧಗೊಳಿಸಿದ. ಅನಂತರ ನಡೆದ ಲಂಕಾಯುದ್ಧದಲ್ಲಿ ರಾಮನಿಗೆ ಸಹಾಯಕನಾಗಿದ್ದ. ಯುದ್ಧದಲ್ಲಿ ಮೂರ್ಛಾಕ್ರಾಂತನಾದ ಲಕ್ಷ್ಮಣನನ್ನು ಬದುಕಿಸಲು ಸಂಜೀವನವನ್ನು ತರುವಂತೆ ಹನುಮಂತನಿಗೆ ಸಲಹೆ ಮಾಡಿದವ ಈತನೇ.
ಕೃಷ್ಣಚರಿತ್ರೆಯಲ್ಲಿ ಬರುವ ಸ್ಯಮಂತಕೋಪಾಖ್ಯಾನದ ಕಥೆ ಜಾಂಬವಂತನ ಶೌರ್ಯಪ್ರಶಂಸೆಯೇ ಆಗಿದೆ. ಒಮ್ಮೆ ಶ್ರೀಕೃಷ್ಣ ಪ್ರಸೇನನೊಂದಿಗೆ ಬೇಟೆಗೆ ಹೋಗಿದ್ದಾಗ ಒಂದು ಸಿಂಹ ಪ್ರಸೇನನನ್ನು ಕೊಂದು, ಅವನ ಕೊರಳಿನಲ್ಲಿದ್ದ ಸ್ಯಮಂತಕ ಮಣಿಯನ್ನು ಅಪಹರಿಸಿತು. ಜಾಂಬವಂತ ಆ ಸಿಂಹವನ್ನು ಕೊಂದು, ಅದರ ವಶದಲ್ಲಿದ್ದ ರತ್ನವನ್ನು ತನ್ನ ಮಗಳಾದ ಜಾಂಬವತಿಗೆ ತಂದುಕೊಟ್ಟ. ಮುಂದೆ ಮಣಿಗಾಗಿ ಜಾಂಬವಂತನಿಗೂ ಕೃಷ್ಣನಿಗೂ ಬಾಹುಯುದ್ಧ ನಡೆಯಿತು. ಕೃಷ್ಣನೇ ಭಗವಂತನೆಂಬ ಅರಿವಾದಾಗ ಜಾಂಬವಂತ ಮಣಿಯೊಡನೆ ಜಾಂಬವತಿಯನ್ನೂ ಕೃಷ್ಣನಿಗೆ ಒಪ್ಪಿಸಿ ಕೃತಾರ್ಥನಾದ.