ಚ ಮೂ ಕೃಷ್ಣಶಾಸ್ತ್ರಿ
ಶ್ರೀ ಚ ಮೂ ಕೃಷ್ಣಶಾಸ್ತ್ರಿಯವರು, (ಚಕ್ರಕೋಡಿ ಮೂಡಂಬೈಲು ಕೃಷ್ಣಶಾಸ್ತ್ರಿ), ಮೂಲತಃ ಕರ್ನಾಟಕದ ದಕ್ಷಿಣಕನ್ನಡದವರು.[೧] ಸಂಸ್ಕೃತ, ಕನ್ನಡ, ಹಿಂದಿ, ಇಂಗ್ಲಿಷ್, ತುಳು, ಮತ್ತು ತೆಲುಗು ಮುಂತಾದ ಹಲವು ಭಾಷೆಗಳನ್ನು ಬಲ್ಲ ಶ್ರೀಯತರು, ಇತ್ತೀಚಿನವರೆಗೂ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಹಿರಿಯ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಸಾಹಿತ್ಯ-ಶಿಕ್ಷಣಕ್ಷೇತ್ರಗಳಲ್ಲಿ ಅವರು ನೀಡಿರುವ ಮಹತ್ತರ ಕೊಡುಗೆಯನ್ನು ಪರಿಗಣಿಸಿ ೨೦೧೭ರ ಜನವರಿ ೨೫ ರಂದು ಭಾರತಸರ್ಕಾರವು ಇವರಿಗೆ ಪದ್ಮಶ್ರೀಪುರಸ್ಕಾರವನ್ನು ಘೋಷಿಸಿದೆ.[೨]
ಜನನ, ವಿದ್ಯಾಭ್ಯಾಸ
ಬದಲಾಯಿಸಿಕೃಷ್ಣ ಶಾಸ್ತ್ರಿಗಳು, ೧೯೫೬ ರ ಜನವರಿ ೨೩ ರಂದು, ಬಂಟ್ವಾಳ ತಾಲ್ಲೂಕಿನ ಕೆದಿಲ ಗ್ರಾಮದಲ್ಲಿ ಜನಿಸಿದರು. ಬಡೆಕ್ಕಿಲದವರು. ತಂದೆ, ಚ.ಮೂ.ಈಶ್ವರ ಶಾಸ್ತ್ರಿ, ತಾಯಿ,ಸುಮತಿ ಶಾಸ್ತ್ರಿ. ಈ ದಂಪತಿಗಳ ೯ ಮಕ್ಕಳಲ್ಲಿ ಕೃಷ್ಣ, ಮೂರನೆಯವರು. ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೆದಿಲ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ, ತಿರುಪತಿ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ಸಂಸ್ಕೃತ ಶಾಸ್ತ್ರದಲ್ಲಿ ಪದವಿ ಪಡೆದರು. ಶಾಸ್ತ್ರಿಯವರ ಪತ್ನಿ, ಸರಿತಾ ಶಾಸ್ತ್ರಿ, ಹಾಗೂ ಮಗ, ಈಗ ಶೃಂಗೇರಿಯಲ್ಲಿ ವಾಸವಾಗಿದ್ದಾರೆ.
ಶೈಕ್ಷಣಿಕಕ್ಷೇತ್ರದಲ್ಲಿ ಮಾಡಿರುವ ಸಾಧನೆ
ಬದಲಾಯಿಸಿಶ್ರೀ ಚ ಮು ಕೃಷ್ಣಶಾಸ್ತ್ರಿಯವರು ಸಂಸ್ಕೃತ ಭಾಷೆಯ ಬಳಕೆ ಮತ್ತು ಪ್ರಚಾರಕ್ಕಾಗಿ ಹೊಸ ಹಾದಿಯನ್ನೇ ಹಿಡಿದು ಕೈಗೊಂಡು ವಿಶ್ವದ ಇತರೆ ದೇಶಗಳ ಸಾಲಿನಲ್ಲಿ ಭಾರತದ ನಾಗರಿಕತೆಯ ಸ್ಥಾನಮಾನವನ್ನು ಮರಳಿ ಸ್ಥಾಪಿಸಿದ ಶಿಕ್ಷಣತಜ್ಞರು. ಸಂಸ್ಕೃತವೇ ಸಮಾಜದಲ್ಲಿ ಸೌಹಾರ್ದತೆಯನ್ನು ಮೂಡಿಸುವ ಅತಿವಿಶಿಷ್ಟ ಬಂಧ ಎಂದು ಅವರು ನಂಬಿದ್ದಾರೆ. ಹಿಂದೆ ಕಲಿಸುತ್ತಿದ್ದ ವ್ಯಾಕರಣಾತ್ಮಕ ಮಾದರಿಯಲ್ಲಿ ಸಂಸ್ಕೃತವನ್ನು ಕಲಿಸುವುದರ ಬದಲಿಯಾಗಿ ಕ್ರಿಯಾರೂಪದಲ್ಲಿ ಸಂಭಾಷಣೆಯ ಭಾಷೆಯಾಗಿ ಕಲಿಸುವ ಅಭಿಯಾನವನ್ನು ಶ್ರೀ ಚ ಮೂ ಕೃಷ್ಣಶಾಸ್ತ್ರಿಯವರು ಯಶಸ್ವಿಯಾಗಿ ರೂಪಿಸಿ ಮುನ್ನಡೆಸಿದರು. ಸಂಸ್ಕೃತವನ್ನು ಮಾತನಾಡುವ ಭಾಷೆಯಾಗಿ ಉತ್ತೇಜಿಸುವುದಕ್ಕೆಂದು ಮೂರು ದಶಕಗಳ ಹಿಂದೆ ಅವರು ಮತ್ತು ಅವರ ಮಿತ್ರರು ಸೇರಿ `ಸಂಸ್ಕೃತ ಭಾರತಿ’ ಸಂಘಟನೆಯನ್ನು ಆರಂಭಿಸಿದರು. ಈಗ ಸಂಸ್ಕೃತ ಭಾರತಿಯು ಭಾರತದ ಮೂಲೆ ಮೂಲೆಗಳಲ್ಲಿ ಹರಡಿದೆ; ಅಮೆರಿಕಾ, ಕೆನಡಾ, ಇಂಗ್ಎಂಡ್, ಆಸ್ಟ್ರೇಲಿಯಾ ಮತ್ತು ಪಶ್ಚಿಮ ಏಶ್ಯಾ ದೇಶಗಳಲ್ಲಿ ಈ ಸಂಘಟನೆಯು ಪ್ರಬಲ ಅಸ್ತಿತ್ವವನ್ನು ಹೊಂದಿದೆ.
ಶ್ರೀ ಚ ಮು ಕೃಷ್ಣಶಾಸ್ತ್ರಿಯವರ ಪ್ರಯತ್ನಗಳಿಂದ ೧೦ ದಿನಗಳಲ್ಲಿ ಸಂಸ್ಕೃತವನ್ನು ಸಂಭಾಷಣಾ ಭಾಷೆಯಾಗಿ ಕಲಿಸುವ ಶಿಬಿರಗಳು ರೂಪುಗೊಂಡವು. ಈ ಶಿಬಿರಗಳಿಂದ ಈವರೆಗೆ ೯೦ ಲಕ್ಷಕ್ಕೂ ಹೆಚ್ಚು ಜನರಿಗೆ ಸಂಭಾಷಣಾ ಸಂಸ್ಕೃತವನ್ನು ಕಲಿಸಲಾಗಿದೆ. ಅವರ ಪ್ರಯತ್ನಗಳಿಂದ ಹಲವು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಂಸ್ಕೃತಕ್ಕಾಗಿ ಸಂವಹನಾ ಶಿಕ್ಷಣ ವಿಧಾನಗಳನ್ನು ರೂಪಿಸಲಾಗಿದೆ. `ಸಂಸ್ಕೃತ ಮನೆಗಳು’, `ಸಂಸ್ಕೃತ ಮಾತೃಭಾಷಾ ಮಕ್ಕಳು’ – ಈ ಪ್ರಯೋಗಗಳೂ ಅಪಾರ ಯಶಸ್ಸನ್ನು ಕಂಡಿವೆ. ಅವರು ಸಂಸ್ಕೃತಪ್ರಚಾರಕ್ಕಾಗಿ ಒಂದು ದೊಡ್ಡ ಕಾರ್ಯಪಡೆಗೇ ಸ್ಫೂರ್ತಿಯಾಗಿದ್ದಾರೆ; ಈ ಕಾರ್ಯಕರ್ತರು ಈಗ ಹಲವು ರಾಜ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಸಂಸ್ಕೃತ ಭಾರತಿಯು ನೀಡುತ್ತಿರುವ ಹಲವು ಸಂಸ್ಕೃತ ಭಾಷಾ ಕಲಿಕೆ ಕೋರ್ಸುಗಳನ್ನು ಸಾವಿರಾರು ಜನರು ಕಲಿಯುತ್ತಿದ್ದಾರೆ. ಅಮೆರಿಕಾದಲ್ಲಿ ಎಸ್ಎಎಫ್ಎಲ್ (SAFL ) ಎಂಬುದು ಅಲ್ಲಿನ ಭಾರತೀಯ ಮೂಲದ ಮಕ್ಕಳಲಿ ತುಂಬಾ ಜನಪ್ರಿಯವಾಗಿರುವ ಕೋರ್ಸ್.
ಶ್ರೀ ಚ ಮು ಕೃಷ್ಣಶಾಸ್ತ್ರಿಯವರು ಸಂಸ್ಕೃತದಲ್ಲಿ 14 ಪುಸ್ತಕಗಳನ್ನು ಬರೆದಿದ್ದಾರೆ. `ಸರಸ್ವತಿ ಸೇವಾ’ ಎಂಬ ಯೋಜನೆಯ ಮೂಲಕ ನೂರಾರು ಭಾರತೀಯ ಮತ್ತು ವಿದೇಶಿ ಭಾಷೆಗಳ ಗ್ರಂಥಗಳನ್ನು ಸಂಸ್ಕೃತಕ್ಕೆ ಅನುವಾದಿಸಲಾಗುತ್ತಿದೆ. ಸಂಸ್ಕೃತದಲ್ಲಿ ಆಧುನಿಕ ವಿಷಯಗಳ ಪುಸ್ತಕಗಳನ್ನು ಬರೆಯಲು ಮತ್ತು ಯುವ ಲೇಖಕರನ್ನು ಪ್ರೋತ್ಸಾಹಿಸಲು ಅವರು `ಸಂಸ್ಕೃತ ಪುಸ್ತಕ ಮೇಳ’ ಮತ್ತು `ಸಾಹಿತ್ಯೋತ್ಸವ’ಗಳನ್ನು ಸಂಘಟಿಸಿದ್ದಾರೆ.
ಶಿಕ್ಷಣ ಮತ್ತು ಕಲಿಕಾ ವಿಧಾನದಲ್ಲಿ ವ್ಯಾಪಕ ಅನುಭವವನ್ನು ಹೊಂದಿರುವ ಹಿನ್ನೆಲೆಯಲ್ಲಿ ಶ್ರೀ ಚ ಮೂ ಕೃಷ್ಣಶಾಸ್ತ್ರಿಯವರು ರಾಷ್ಟ್ರೀಯ ಸಂಸ್ಕೃತ ಪ್ರತಿಷ್ಠಾನ ಮತ್ತು ಹಲವು ವಿಶ್ವವಿದ್ಯಾಲಯಗಳ ಮಂಡಳಿಗಳಲ್ಲಿ ಸದಸ್ಯರಾಗಿದ್ದಾರೆ. `ಸಂಸ್ಕೃತದ ಅಭಿವೃದ್ಧಿಗಾಗಿ ಒಂದು ಮಾರ್ಗಸೂಚಿ – ಹತ್ತು ವರ್ಷಗಳ ದೃಷ್ಟಿಕೋನ ಯೋಜನೆ’ ವರದಿಯನ್ನು ೨೦೧೬ರಲ್ಲಿ ಸಲ್ಲಿಸಿದ ಕೇಂದ್ರ ಸರ್ಕಾರವು ರಚಿಸಿದ್ದ ಸಂಸ್ಕೃತ ಸಮಿತಿಯಲ್ಲಿ ಅವರೂ ಒಬ್ಬ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಶ್ರೀ ಚ ಮು ಕೃಷ್ಣಶಾಸ್ತ್ರಿಯವರು ತುಂಬಾ ಬೇಡಿಕೆಯಲ್ಲಿರುವ ಜನಪ್ರಿಯ ಭಾಷಣಕಾರರು. ಅವರು ಸಂಸ್ಕೃತದಲ್ಲಿ ಎಲ್ಲರಿಗೂ ತಿಳಿಯುವಂತಹ ಮನೋರಂಜನಾತ್ಮಕ, ಶಿಕ್ಷಣಾತ್ಮಕ ಶೈಲಿಯಲ್ಲಿ ನಿರರ್ಗಳವಾಗಿ, ಪ್ರಖರವಾಗಿ ಮಾತನಾಡಬಲ್ಲ ಪರಿಣತರು. ಯಾವುದೇ ಫಲಾಪೇಕ್ಷೆಯಿಲ್ಲದೆ ಕಾರ್ಯ ನಿರ್ವಹಿಸಬೇಕೆಂಬ ಭಗವದ್ಗೀತೆಯ ನೀತಿಯಂತೆಯೇ ನಡೆದುಕೊಳ್ಳುತ್ತಿರುವ ಶ್ರೀ ಚ ಮು ಕೃಷ್ಣಶಾಸ್ತ್ರಿಯವರು ಇಂದು ಭಾರತದಲ್ಲಿ ಸಂಸ್ಕೃತ ಭಾಷೆಯನ್ನು ಜನರತ್ತ ಒಯ್ದ ಭಾಷಾ ಕಾರ್ಯಕರ್ತರಾಗಿದ್ದಾರೆ.
ಈಗ ನಿರ್ವಹಿಸುತ್ತಿರುವ ಜವಾಬ್ದಾರಿಗಳು
ಬದಲಾಯಿಸಿ- ರಾಷ್ಟ್ರೀಯ ಮ್ಯಾನುಸ್ಕ್ರಿಪ್ಟ್ಸ್ ಮಿಶನ್ನ ಕಾರ್ಯಕಾರಿ ಸಮಿತಿಯ ಸದಸ್ಯ
- ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಷ್ಟ್ರೀಯ ಸಂಸ್ಕೃತ ಪರಿಷತ್ತಿನ ವಿಶೇಷ ಆಹ್ವಾನಿತ ಸದಸ್ಯರು
- ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಆಡಳಿತ ಮಂಡಳಿ ಸದಸ್ಯರು
- ಗುಜರಾತ್ ಸರ್ಕಾರದ ವೇರವಲ್ನ ಸೋಮನಾಥ ಸಂಸ್ಕೃತ ವಿಶ್ವವಿದ್ಯಾಳಯದ ಕಾರ್ಯಕಾರಿ ಸಮಿತಿಯ ಸದಸ್ಯರು
- ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹೊಸದಿಲ್ಲಿಯ ಎಸ್ಎಲ್ಬಿಎಸ್ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು
- ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ತಿರುಪತಿಯ ರಾಷ್ಟ್ರೀಯ ಸಂಸ್ಕೃತಿ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರು
ಹಿಂದೆ ಸೇವೆ ಸಲ್ಲಿಸಿದ ವಿವರಗಳು
ಬದಲಾಯಿಸಿ- ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸಂಸ್ಕೃತ ಭಾಷೆಯ ಜಿಐಎಸಿಯ ಮಾಜಿ ಸದಸ್ಯರು
- ಭಾರತ ಸರ್ಕಾರದ ಸಂಸ್ಕೃತ ವರ್ಷ ಆಚರಣಾ ಕೇಂದ್ರೀಯ ಸಮಿತಿಯ ಮಾಜಿ ಸದಸ್ಯರು
- ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ವಿವಿಧ ಸಮಿತಿಗಳ ಮಾಜಿ ಸದಸ್ಯರು
- ಸಿಬಿಎಸ್ಇ ಯ ಸಂಸ್ಕೃತ ಪಠ್ಯಪುಸ್ತಕ ಸಮಿತಿಯ ಮಾಜಿ ಸದಸ್ಯರು
- ಎನ್ಸಿಇಆರ್ಟಿಯ ಸಂಸ್ಕೃತದ ಮೂಲಕ ಸಂಸ್ಕೃತ ಸಮಿತಿಯ ಮಾಝಿ ಸದಸ್ಯರು
- ಯುಜಿಸಿಯ ಸರಲ ಸಂಸ್ಕೃತ ಶಿಕ್ಷಣ ಕೇಂದ್ರಂ ಸಮಿತಿಯ ಮಾಜಿ ಸದಸ್ಯರು
- ಭಾರತ ಸರ್ಕಾರದ ಕೇಂದ್ರೀಯ ಸಂಸ್ಕೃತ ಮಂಡಳಿಯ ಮಾಜಿ ಸದಸ್ಯರು
- ವಿವಿಧ ರಾಜ್ಯ ಸರ್ಕಾರಗಳ ಸಂಸ್ಕೃತ ಪಠ್ಯಪುಸ್ತಕ ಮತ್ತು ಶಿಕ್ಷಕ ತರಬೇತಿ ಕಾರ್ಯಕ್ರಮಗಳ ಮಾಜಿ ಸಲಹೆಗಾರರು
- `ಸಂಸ್ಕೃತ ಮತ್ತು ಕಂಪ್ಯೂಟರ್’ ಕುರಿತು ೧೯೮೬ರಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಸಮ್ಮೇಳನದ ಸಂಘಟನಾ ಸಮಿತಿಯ ಸದಸ್ಯರು
- ೧೫ನೆಯ ವಿಶ್ವ ಸಂಸ್ಕೃತ ಸಮ್ಮೇಳನದಲ್ಲಿ ಸಂಸ್ಕೃತದ ಮೂಲಕ ಸಂಸ್ಕೃತ ಶಿಕ್ಷಣ ತಂಡದ ಸಂಚಾಲಕರು
ಕೊಡುಗೆಗಳು
ಬದಲಾಯಿಸಿ- ೧೮೯೧ರಿಂದ ಸಂಸ್ಕೃತದ ರಂಗದಲ್ಲಿ ಶಿಕ್ಷಣಕ್ಕಾಗಿ ಸಂಪೂರ್ಣ ಸಮಯವನ್ನು ನೀಡಿ ಸ್ವಯಂಸೇವಾ ಕಾರ್ಯಕರ್ತರಾಗಿದ್ದಾರೆ; ತನ್ಮೂಲಕ ಸಂಸ್ಕೃತವನ್ನೇ ತಮ್ಮ ಜೀವನಧ್ಯೇಯವನ್ನಾಗಿ ಮಾಡಿಕೊಳ್ಳಲು ಸಾವಿರಾರು ಯುವಜನರಿಗೆ ಸ್ಫೂರ್ತಿಯಾಗಿದ್ದಾರೆ.
`*ಸರಳ ಸಂಸ್ಕೃತ ಸಂಭಾಷಣಾ ಪದ್ಧತಿ’ ಎಂಬ ಹೊಸ ಸಂಸ್ಕೃತ ಭಾಷಾ ಕಲಿಕಾ ವಿಧಾನವನ್ನು ರೂಪಿಸಿದ್ದಾರೆ. `*ಸಂಸ್ಕೃತ ಸಂಭಾಷಣೆ ಚಳವಳಿ’ಯನ್ನು ೧೯೮೧ರಲ್ಲೇ ಆರಂಭಿಸಿ ೧೦ ದಿನಗಳ ಸಂಭಾಷಣಾ ಸಂಸ್ಕೃತ ಶಿಬಿರಗಳ ಮೂಲಕ ಸುಮಾರು ೯೦ ಲಕ್ಷಕ್ಕೂ ಹೆಚ್ಚು ಜನರಿಗೆ ಸಂಭಾಷಣಾ ಸಂಸ್ಕೃತದಲ್ಲಿ ತರಬೇತಿಯನ್ನು ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
- ೧೯೮೩ರಲ್ಲಿ ಸಂಸತ್ ಸದಸ್ಯರಿಗೆ ಸಂಸತ್ ಭವನದಲ್ಲಿ ಹಿರಿಯ ಸಂಸದರಾದ ಶ್ರೀ ಎಲ್ ಕೆ ಆಡ್ವಾಣಿ, ಡಾ|| ಬಲರಾಂ ಜಾಖಡ್, ಡಾ|| ಕರಣ್ ಸಿಂಗ್ ಮುಂತಾದವರು ಭಾಗವಹಿಸಿದ್ದ ೧೦ ದಿನಗಳ ಸಂಸ್ಕೃತ ಸಂಭಾಷಣಾ ತರಗತಿಗಳನ್ನು ನಡೆಸಿ ಕೊಟ್ಟಿದ್ದಾರೆ.
- ಸಂಭಾಷಣಾ ಸಂಸ್ಕೃತದಲ್ಲಿ ಪರಿಣತರಾಗುವಂತೆ ಒಂದು ಲಕ್ಷಕ್ಕೂ ಹೆಚ್ಚು ಸಂಸ್ಕೃತ ಶಿಕ್ಷಕರಿಗೆ ತ ರಬೇತಿ ನೀಡುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ.
- ೧೩ ಪುಸ್ತಕಗಳನ್ನು ಬರೆದಿದ್ದಾರಲ್ಲದೆ ಸಮಕಾಲೀನ ಸಂಗತಿಗಳ ಕುರಿತು ನೂರಾರು ಲೇಖನಗಳನ್ನು ಬರೆದಿದ್ದಾರೆ.
- ಸಂಸ್ಕೃತದ ಹಳ್ಳಿಗಳನ್ನು, ಸಂಸ್ಕೃತದ ಮನೆಗಳನ್ನು ರೂಪಿಸುವಲ್ಲಿ ಮತ್ತು ದೇಶದೆಲ್ಲೆಡೆಯ ಸಂಸ್ಕೃತ ಸಂಸ್ಥೆಗಳಲ್ಲಿ ಸಂಸ್ಕೃತದ ವಾತಾವರಣವನ್ನು ಮೂಡಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.
- ಅಮೆರಿಕಾದಲ್ಲಿ ಎಸ್ಎಎಫ್ಎಲ್ (ವಿದೇಶಿ ಭಾಷೆಯಾಗಿ ಸಂಸ್ಕೃತ) ಆರಂಭಿಸುವಲ್ಲಿ ಕೊಡುಗೆ ನೀಡಿದ್ದಾರೆ.
- ಬೆಂಗಳೂರಿನಲ್ಲಿ ನಡೆದ ವಿಶ್ವ ಸಂಸ್ಕೃತ ಪುಸ್ತಕ ಮೇಳ ಮತ್ತು ಉಜ್ಜಯಿನಿಯಲ್ಲಿ ನಡೆದ ಸಂಸ್ಕೃತ ಸಾಹಿತ್ಯೋತ್ಸವದ ಪ್ರಮುಖ ಸಂಘಟಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
- ಸಂಸ್ಕೃತದಲ್ಲಿ `ಸಂಭಾಷಣಾ ಸಂದೇಶ’ ಎಂಬ ಬಹುವರ್ಣದ ಮ್ಯಾಗಜಿನ್ನ್ನು ಆರಂಭಿಸಿದ್ದಾರೆ; ಚಂದಮಾಮ ಸಂಚಿಕೆಗಳ ಸಂಸ್ಕೃತ ಆವೃತ್ತಿ ಪ್ರಕಟಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.
- ವಿವಿಧ ಭಾಷೆಗಳಿಂದ ಸುಮಾರು ೧೦೦೦ಕ್ಕೂ ಹೆಚ್ಚು ಸಮಕಾಲೀನ ಸಾಹಿತ್ಯ ಕೃತಿಗಳನ್ನು ಸಂಸ್ಕೃತಕ್ಕೆ ಅನುವಾದ ಮಾಡುವ `ಸರಸ್ವತೀ ಸೇವಾ ಯೋಜನೆ’ಯನ್ನು ಆರಂಭಿಸಿದ್ದಾರೆ.
- ಸಂಸ್ಕೃತ ವಿಕಿಪೀಡಿಯ ಆರಂಭಿಸಲು ನೆರವಾಗಿ ಇಂಟರ್ನೆಟ್ನಲ್ಲಿ ಸಂಸ್ಕೃತದ ಪ್ರಮಾಣ ಹೆಚ್ಚುವಲ್ಲಿ ಶ್ರಮಿಸಿದ್ದಾರೆ.
- ೧೦ ಭಾರತೀಯ ಭಾಷೆಗಳಲ್ಲಿ ಸಂಸ್ಕೃತ ಸಂಭಾಷಣಾ ಕೋರ್ಸ್ಗಳನ್ನು ಆರಂಭಿಸುವಲ್ಲಿ ಮುಖ್ಯ ಭೂಮಿಕೆ ವಹಿಸಿದ್ದಾರೆ.
- ಸಂಸ್ಕೃತದಲ್ಲಿ ಸೃಜನಶೀಲ ಬರವಣಿಗೆ ಮತ್ತು ಅನುವಾದಗಳನ್ನು ಕೈಗೊಳ್ಳುವುದಕ್ಕಾಗಿ ಸುಮಾರು ೨೦ ಕಾರ್ಯಾಗಾರಗಳನ್ನು ನಡೆಸುವಲ್ಲಿ ಶ್ರಮಿಸಿದ್ದಾರೆ.
- ಅಮೆರಿಕಾ, ಕೆನಡಾ, ಇಂಗ್ಎಂಡ್, ಆಸ್ಟ್ರೇಲಿಯಾ, ನೇಪಾಳ, ಯುಎಇ, ನೆದರ್ಲ್ಯಾಂಡ್, ಬೆಲ್ಜಿಯಂ, ಥೈಲ್ಯಾಂಡ್ ದೇಶಗಳಲ್ಲಿ ಸರ್ಕಾರದ ನೆರವಿಲ್ಲದೆಯೇಸಂಸ್ಕೃತ ಕಲಿಕೆ ಕುರಿತಂತೆ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ಈ ದೇಶಗಳಲ್ಲಿ ಸಂಸ್ಕೃತ ಕಲಿಸುವ ಸ್ವಯಂಸೇವಾ ಗುಂಪುಗಳನ್ನು ಸ್ಥಾಪಿಸಿದ್ದಾರೆ.
ಪ್ರಶಸ್ತಿಗಳು
ಬದಲಾಯಿಸಿ- ೧೯೮೭ರವರೆಗೆ ಶ್ರೀ ಚ ಮೂ ಕೃಷ್ಣಶಾಸ್ತ್ರಿಯವರಿಗೆ ಕಾಶಿ ಪಂಡಿತ ಪರಿಷತ್ನಿಂದ `ಸಾರಸ್ವತ ಸುಧಾಕರ’ (೧೯೮೪)
- ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಅಂತಾರಾಷ್ಟ್ರೀಯ ಯುವ ವರ್ಷಾಚರಣೆ ಸಮಿತಿಯಿಂದ `ರಾಷ್ಟ್ರೀಯ ಯುವ ಪುರಸ್ಕಾರ’ (೧೯೮೫)
- ೨೦೧೭ ರ ಪದ್ಮಶ್ರೀ ಪ್ರಶಸ್ತಿ
ಕೃತಿಗಳು
ಬದಲಾಯಿಸಿ- ಜಾನೇ ಧರ್ಮಃ ಉತ ಪ್ರಯೋಗೇ?- ಸಂಭಾಷಣಾ ಸಂಸ್ಕೃತ : ಏಕೆ?
- ಲಾಭಃ ಉತ ಹಾನಿಃ - ಚಿಂತನಾಪ್ರದ ಲೇಖನಗಳು
- ನಿಮಿತ್ತಮಾತ್ರಂ - ವಿಶ್ವ ಸಂಸ್ಕೃತ ಪುಸ್ತಕ ಮೇಳ ಕುರಿತು
- ನಿಮಿತ್ತಮಾತ್ರಂ (ಹಿಂದಿ) - ವಿಶ್ವ ಸಂಸ್ಕೃತ ಪುಸ್ತಕ ಮೇಳ ಕುರಿತು
- ಪರಿಷ್ಕಾರಃ - ವ್ಯಕ್ತಿತ್ವ ವಿಕಸನ ಕುರಿತ ಪುಸ್ತಕ
- ಪರಿವರ್ತನಂ - ತಂಡ ನಾಯಕರಿಗೆ ಕೈದೀವಿಗೆ
- ಸಾವಧಾನಃ ಸ್ಯಾಮ - ಇಂದಿನ ಸಂಸ್ಕೃತ ಕುರಿತ ಪ್ರಬಂಧಗಳು
- ಸಂಸ್ಕೃತಭಾರತೀ - ಸಂಸ್ಕೃತ ಭಾರತೀ ಕುರಿತು ಪರಿಚಯ
- ಸಂಸ್ಕೃತಂ: ಸ್ವಾಟ್ ವಿಶ್ಲೇಷಣೆ - ಸಂಸ್ಕೃತದ ಶಕ್ತಿ ಸಾಮರ್ಥ್ಯ ವಿಶ್ಲೇಷಣೆ
- ಸಂಸ್ಕರಣಂ - ಸಂಸ್ಕೃತ ಪ್ರಚಾರದ ಬಗ್ಗೆ ಲೇಖನಗಳು
- ಸಪ್ತದಶೀ - ಸಂಸ್ಕೃತ ಅಭಿವೃದ್ಧಿ ಕುರಿತ ಪ್ರಬಂಧಗಳು
- ಉತ್ತಿಷ್ಠ ! ಮಾ ಸ್ವಪ್ತ !! - ಸಂಸ್ಕೃತ ವಿದ್ವಾಂಸರಿಗೆ ಕರೆ
- ವೈಚಾರಿಕಮ್ - ವೈಚಾರಿಕ ಲೇಖನಗಳು
ಟಿಪ್ಪಣಿ
ಬದಲಾಯಿಸಿ- ↑ "ವಿಜಯವಾಣಿ ದಿನಪತ್ರಿಕೆ, 'ನಾಡಿನ 9 ಸಾಧಕರಿಗೆ ಪದ್ಮ ಪ್ರಶಸ್ತಿ ಕಿರೀಟ', ೨೬.೦೧.೨೦೧೭". Archived from the original on 2017-02-02. Retrieved 2017-01-27.
- ↑ "PadmaAwards-2017" (PDF). Archived from the original (PDF) on 2017-01-29. Retrieved 2017-01-26.