ಚಿನ್ಮಯ ಎಮ್ ರಾವ್

ಹಿನ್ನೆಲೆ ಹಾಗು ಆರಂಭಿಕ ಜೀವನ

ಬದಲಾಯಿಸಿ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದ ಬಳಿ ಇರುವ ಹೊನಗೋಡು ಗ್ರಾಮದ ಚಿನ್ಮಯ ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರು (ಜನನ : ಮೇ ೨೨, ೧೯೮೨). ರೈತಾಪಿ ಕುಟುಂಬದಲ್ಲಿ ಹುಟ್ಟಿದವರಾದರೂ ಬಾಲ್ಯದಿಂದಲೂ ಇವರ ಆಸಕ್ತಿ ಮಾತ್ರ ಸಂಗೀತ ಹಾಗು ಸಾಹಿತ್ಯದಲ್ಲಿ. ಸಾಗರದ ಶ್ರೀಮತಿ ಅವರಿಂದ ದಕ್ಷಿಣಾದಿ ಶಾಸ್ತ್ರೀಯ ಸಂಗೀತ ಗಾಯನದಲ್ಲಿ ಜ್ಯೂನಿಯರ್ ಹಂತ ಮುಗಿಸಿದ ಇವರು ಶಿವಮೊಗ್ಗದಲ್ಲಿ ಬಿ.ಬಿ.ಎಂ ಅಭ್ಯಾಸ ಮಾಡುವಾಗ ವಿದ್ವಾನ್ ಹೆಚ್.ಎಸ್ ನಾಗರಾಜ್ ಅವರಲ್ಲಿ ಸೀನಿಯರ್ ವಿಭಾಗದ ಸಂಗೀತವನ್ನು ಅಭ್ಯಾಸ ಮಾಡಿ ಉತ್ತೀರ್ಣರಾದರು. ಮುಂದೆ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಬಿ.ಎ ಪದವಿಯನ್ನು ಪಡೆದರೂ ಇವರ ಒಲವು ಮಾತ್ರ ಸಂಗೀತದೆಡೆಗೇ ಇತ್ತು. ತತ್ಪರಿಣಾಮವಾಗಿ ಮೈಸೂರಿನ ವಿದ್ವಾನ್ ಆರ್.ಎಸ್ ನಂದಕುಮಾರ್ ಹಾಗು ಬೆಂಗಳೂರಿನ ವಿದ್ವಾನ್ ಕೆ.ಜಿ ರಾಮಸ್ವಾಮಿ ಅವರ ಬಳಿ ಸಂಗೀತದ ಸಾಧನೆಯನ್ನು ಮುಂದುವರಿಸಿದರು. ಪ್ರಸ್ತುತ ವಿದ್ವಾನ್ ಹೊಸಹಳ್ಳಿ ಜಿ ಅನಂತ ಅವಧಾನಿ ಅವರಲ್ಲಿ ಸಂಗೀತವನ್ನು ಸಾಧನೆ ಮಾಡುತ್ತಿರುವ ಚಿನ್ಮಯ ಮೈಸೂರು ವಿಶ್ವವಿದ್ಯಾಲಯದ ದೂರಶಿಕ್ಷಣದ ಮುಖೇನ ಮಾಸ್ಟರ್ ಆಫ್ ಮ್ಯೂಸಿಕ್ ಕೂಡ ಅಭ್ಯಾಸ ಮಾಡುತ್ತಿದ್ದಾರೆ. ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ.

ಸಂಗೀತ ನಿರ್ದೇಶಕ

ಬದಲಾಯಿಸಿ

ಸ್ವಲ್ಪ ಕಾಲ ಬೆಂಗಳೂರಿನಲ್ಲಿದ್ದ ಚಿನ್ಮಯ ಮಹಾನಗರದ ಯಾಂತ್ರಿಕ ಜೀವನವನ್ನು ಇಷ್ಟ ಪಡದೆ ಮತ್ತೆ ತನ್ನೂರಿಗೆ ಬಂದು ಕೃಷಿ ಬದುಕಿನಲ್ಲೇ ಖುಷಿಯನ್ನು ಕಂಡರು. ಈ ನಡುವೆಯೇ ಸಂಗೀತ ನಿರ್ದೇಶಕರಾಗಿ ಆಡಿಯೋ ಪ್ರಪಂಚಕ್ಕೆ ಕಾಲಿಟ್ಟ ಚಿನ್ಮಯ ತಮ್ಮ ಮೊದಲ ಸಂಗೀತ ನಿರ್ದೇಶನದ ಅಡಕ ಮುದ್ರಿಕೆ(ಸಿಡಿ)ಗೆ ಸ್ವತಹ ತಾವೇ ಸರಳ ಸಂಸ್ಕೃತದಲ್ಲಿ ಸಾಹಿತ್ಯವನ್ನು ರಚಿಸಿಕೊಂಡು ತಾವೇ ಹಾಡಿದರು. ಯಾನ್ ಇನ್ ಎಫೆಬಲ್ ಸೋಲ್-ಓಂಕಾರರೂಪಿಣಿ" ಎಂಬ ಹೆಸರಿನ ಈ ಧ್ವನಿಮುದ್ರಿಕೆಯನ್ನು ೨೦೦೪ರಲ್ಲಿ ಲಹರಿ ರೆಕಾರ್ಡಿಂಗ್ ಕಂಪೆನಿ ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿತು.

ಸಂಗೀತ ನಿರ್ದೇಶನದಲ್ಲಿ ಯಾವುದೇ ಕಾರಣಕ್ಕೂ ರಾಜಿಯಾಗದ ಚಿನ್ಮಯ ತಮ್ಮ ಮೊದಲ ಧ್ವನಿಮುದ್ರಿಕೆಯಲ್ಲಿ ಪಂಡಿತ್ ಫಯಾಝ್ ಖಾನ್ ಅವರ ಸಾರಂಗಿ ವಾದನ ಹಿನ್ನೆಲೆಯಲ್ಲಿ ಬೇಕೇಬೇಕೆಂದು ಪಟ್ಟು ಹಿಡಿದು ಅವರೊಬ್ಬರ ಡೇಟ್‌ಗಾಗಿ ಮೂರು ತಿಂಗಳು ಕಾದಿದ್ದರು ! ಆ ನಂತರ ಅವರನ್ನು ಕರೆಸಿ ಅವರ ಪ್ರತಿಭೆಯನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದರು. ಸಂಗೀತ ನಿರ್ದೇಶನದಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಕೀ ಬೋರ್ಡ್‌ನಲ್ಲಿ ಹೊರಹೊಮ್ಮುವ ಕೃತಕ ಅಥವಾ ನಕಲು ವಾದ್ಯಗಳ ಬದಲಾಗಿ ಮೂಲವಾದ್ಯಗಳನ್ನೇ ಬಳಸುತ್ತಿದ್ದ ಚಿನ್ಮಯ ಇದರಿಂದ ಸಂಗೀತ ವಾದ್ಯದವರಿಗೂ ಜೀವನಾದಾಯವಾಗಿ ಬೆಲೆ ಬರುತ್ತದೆ ಹಾಗು ಸಂಗೀತಪ್ರಿಯರಿಗೂ ಮೋಸ ಮಾಡಿದಂತಾಗುವುದಿಲ್ಲ. ವಾದ್ಯಗಳ ಮೂಲಧ್ವನಿಯಿಂದ ಉಂಟಾಗುವ ಮನೋರಂಜನೆ ಉತ್ಕೃಷ್ಠವಾದದ್ದೆಂದು ಚಿನ್ಮಯ ತಮ್ಮ ವಿಚಾರಧಾರೆಯನ್ನು ಮಂಡಿಸುತ್ತಾರೆ. ತಮ್ಮ ಸಂಗೀತವಿರುವಲ್ಲಿ ಗ್ರೂಪ್ ವಯೋಲಿನ್ ಆದಿಯಾಗಿ ಎಲ್ಲವೂ ಮೂಲವಾದ್ಯಗಳೇ ಬೇಕೆಂದು ತಮ್ಮ ಇಪ್ಪತ್ತೊಂದನೆಯ ವಯಸ್ಸಿನಲ್ಲೇ ಕೇರಳದ ಕ್ಯಾಲಿಕಟ್, ತ್ರೀಶೂರ್ ಹಾಗು ಕೊಚಿನ್ ನಗರಗಳಿಗೆ ತಾವೊಬ್ಬರೇ ಹೋಗಿ ಧ್ವನಿಮುದ್ರಿಸಿಕೊಂಡು ಬರುತ್ತಿದ್ದರು. ಎಷ್ಟೋ ಬಾರಿ ನಿರ್ಮಾಪಕರ ಬಜೆಟ್ ದಾಟಿದಾಗ ತಮ್ಮ ಕೈಯಿಂದಲೇ ಹಣ ಹಾಕಿ ಭಕ್ತಿಗೀತೆಗಳಿಗೂ ಸಿನೆಮಾ ಗುಣಮಟ್ಟದ ಸಂಗೀತವನ್ನು ಚಿನ್ಮಯ ನೀಡಿದ್ದಾರೆ. ಆ ಕಾರಣಕ್ಕಾಗಿಯೇ ಲಹರಿಯಂತಹ ಬ್ರಾಂಡೆಡ್ ಆಡಿಯೋ ಕಂಪೆನಿಗಳು ಇವರ ಹಲವಾರು ಸಿ.ಡಿಗಳನ್ನು ಹೊರತಂದಿದೆ.

ಚಿನ್ಮಯ ಈವರೆಗೆ ಇಪ್ಪತ್ತೈದಕ್ಕೂ ಹೆಚ್ಚು ಧ್ವನಿಮುದ್ರಿಕೆಗಳಿಗೆ ಸಂಗೀತ ನೀಡಿದ್ದಾರೆ. ಅವರ ಸಂಗೀತ ನಿರ್ದೇಶನಕ್ಕೆ ಹಾಡಿದ ಮಹನೀಯರಲ್ಲಿ ಡಾ. ಎಸ್.ಪಿ ಬಾಲಸುಬ್ರಹ್ಮಣ್ಯಮ್, ಉದಿತ್ ನಾರಾಯಣ್, ಉನ್ನಿಕೃಷ್ಣನ್, ಮಧುಬಾಲಕೃಷ್ಣನ್, ರಾಜೆಶ್‌ಕೃಷ್ಣನ್, ಗುರುಕಿರಣ್, ವಿಜಯಪ್ರಕಾಶ್, ಪುತ್ತೂರು ನರಸಿಂಹ ನಾಯಕ್, ರಮೇಶ್ ಚಂದ್ರ, ಅಜಯ್ ವಾರಿಯರ್, ಎಂ.ಡಿ ಪಲ್ಲವಿ, ಅನುರಾಧ ಶ್ರೀರಾಮ್, ಅನುರಾಧ ಪೌಡ್ವಾಲ್, ಅನುರಾಧ ಭಟ್ ಇನ್ನೂ ಮುಂತಾದವರು. ಎಸ್.ಪಿ.ಬಿ ಇವರ ಅತೀ ಹೆಚ್ಚು ಅಂದರೆ ಆರು ಸಿ.ಡಿ ಗಳಿಗೆ ಹಾಡಿದ್ದಾರೆ. ಇವರ ಸಂಗೀತದ ಭಕ್ತಿಅಭಿಷೇಕ, ಶರಣಂ ಅಯ್ಯಪ್ಪ, ಶ್ರೀಗುರುರಾಯ ಸಿ.ಡಿಗಳು ಅದೆಷ್ಟು ಜನಪ್ರಿಯವಾದವರೆಂದರೆ ಟಿ.ವಿ ವಾಹಿನಿಗಳಲ್ಲೂ ಮುಂಜಾನೆಯಲ್ಲಿ ಹಲವಾರು ಬಾರಿ ಈ ಸಿ.ಡಿಗಳ ಹಾಡುಗಳು ಮರುಪ್ರಸಾರವಾಗುತ್ತಲೇ ಇರುತ್ತವೆ. ಇದೇ ಸಾಲಿಗೆ ಸೇರಿದ ಇವರದೇ ಗಾಯನದ ಸೌಂದರ್ಯಲಹರಿ ಸಿ.ಡಿ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದೆ. ಅಚ್ಚರಿಯೆಂದರೆ ಹೊನಗೋಡಿನ ತಮ್ಮ ಮನೆಯಲ್ಲೇ ನಿರ್ಮಿಸಿಕೊಂಡ ಪುಟ್ಟ ಸ್ಟೂಡಿಯೋದಲ್ಲಿ ಸೌಂದರ್ಯಲಹರಿ ಧ್ವನಿಮುದ್ರಣಗೊಂಡಿದ್ದು ! ದೀಪಕ್ ಸಾಗರ್ ಸಾಹಿತ್ಯದ ಇವರದೇ ಸಂಗೀತದ ಮೊದಲ ಭಾವಗೀತೆ ಸಿ.ಡಿ ಭಾವಪಯಣ ಕೂಡ ಜನಮನ್ನಣೆ ಗಳಿಸಿತು. ಇದೇ ಜೋಡಿಯ "ಬಣ್ಣದ ತೇರು" ಸಿ.ಡಿ ಜನಪದ ಗೀತೆಗಳಿಗೆ ಹೊಸ ಭಾಷ್ಯ ಬರೆಯಿತು. ಭಕ್ತಿವಂದನ ಎಂಬ ಲಹರಿ ಸಂಸ್ಥೆ ಹೊರತಂದಿದ್ದ ಸಿ.ಡಿ ಕೂಡ ಜನಮನ ಗೆದ್ದ ಕಾರಣ ಲಹರಿ ಸಂಸ್ಥೆಯವರೇ ಅದಕ್ಕೆ ವೀಡಿಯೋ ಚಿತ್ರೀಕರಣವನ್ನೂ ಜೋಡಿಸಿ "ದಶಕ್ಷೇತ್ರವೈಭವ" ಎಂಬ ಡಿ.ವಿ.ಡಿಯನ್ನು ಬಿಡುಗಡೆ ಮಾಡಿದರು. ಇದಕ್ಕೆ ವಿನಯ ಪ್ರಸಾದ್ ನಿರೂಪಣೆ ಮಾಡಿದರು. ಇನ್ನು ಕನ್ನಡದ ಹೆಸರಾಂತ ಕಾದಂಬರಿಕಾರ ನಾ.ಡಿಸೋಜ ಅವರ ಮಕ್ಕಳ ಗೀತೆಗಳ ಸಂಗ್ರಹ "ಬಣ್ಣದ ಚಿಟ್ಟೆಗೆ ಚಿನ್ಮಯ ನೀಡಿದ ಸಂಗೀತಕ್ಕೆ ನಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಾ ನಾನು ಮಕ್ಕಳ ಗೀತೆಗಳನ್ನು ಬರೆದದ್ದು ಸಾರ್ಥಕವಾಯಿತೆಂದು ಚಿನ್ಮಯ ಅವರ ಸಂಗೀತವನ್ನು ಕೊಂಡಾಡಿದ್ದಾರೆ.

ಸಂಗೀತ-ಸಾಹಿತ್ಯ-ಗಾಯನ ಕೃಷಿಯಲ್ಲಿ ನಿರತರಾಗಿರುವ ಚಿನ್ಮಯ ಅವರ ಪ್ರತಿಭೆಯನ್ನು ಗುರುತಿಸಿದ ಕನ್ನಡದ ಸುಪ್ರಸಿದ್ಧ ನಿರ್ದೇಶಕ-ಛಾಯಗ್ರಾಹಕ ಅಶೋಕ್ ಕಶ್ಯಪ್ ತಮ್ಮ ನಿರ್ದೇಶನದ "ಪ್ರೀತಿಯಿಂದ" ಧಾರಾವಾಹಿಯ ಶೀರ್ಷಿಕೆ ಗೀತೆಯನ್ನು ಟ್ರ್ಯಾಕ್‌ಗಾಗಿ ಹಾಡಿಸಿದರು. ಅದನ್ನು ಕೇಳಿ ಮನಸೋತ ಅಶೋಕ್ ಕಶ್ಯಪ್ ಮತ್ತೆ ಪ್ರಸಿದ್ಧ ಗಾಯಕರಿಂದ ಹಾಡಿಸಿದರೂ ಇವರ ಧ್ವನಿಯನ್ನೇ ಉಳಿಸಿಕೊಂಡರು. ತತ್ಪರಿಣಾಮವಾಗಿ ಸುವರ್ಣಾವಾಹಿನಿಯಲ್ಲಿ ೨೦೧೧ ಮಾರ್ಚ್ ೭ ರಿಂದ ಚಿನ್ಮಯ ಮೆಗಾ ಧಾರಾವಾಹಿಯೊಂದಕ್ಕೆ ಶೀರ್ಷಿಕೆ ಗೀತೆಯನ್ನು ಹಾಡುವ ಮೂಲಕ ಕಿರುತೆರೆಗೆ ಗಾಯಕರಾಗಿ ಪಾದಾರ್ಪಣೆ ಮಾಡಿದರು.

ಚಲನಚಿತ್ರ ಸಂಗೀತ ನಿರ್ದೇಶಕ

ಬದಲಾಯಿಸಿ

ಚಿನ್ಮಯ "ಅಗಮ್ಯ" ಎಂಬ ಹೊಸ ಕನ್ನಡ ಚಲನಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುವ ಮೂಲಕ ೨೦೧೩ ಜನವರಿ ೧೬ರಂದು ಕನ್ನಡ ಬೆಳ್ಳಿತೆರೆಗೂ ಕಾಲಿಟ್ಟರು. ಪಾಶ್ಚಾತ್ಯ ಹಾಗು ಭಾರತೀಯ ಸಂಗೀತದ ಸಮ್ಮಿಶ್ರಣದಲ್ಲಿ ತಯಾರಾದ "ಅಗಮ್ಯ" ಚಿತ್ರದ ವಿಭಿನ್ನ ರೀತಿಯ ರಾಗಸಂಯೋಜನೆಯನ್ನು ಕೇಳಿ ಸ್ವತಹ ಉದಿತ್ ನಾರಾಯಣ್ ಹಾಡುವಾಗ ಅಚ್ಚರಿ ಹಾಗು ಆನಂದವನ್ನು ವ್ಯಕ್ತಪಡಿಸಿದ್ದಾರೆ.

ಚಿನ್ಮಯ ಸ್ಥಳೀಯ ಪತ್ರಿಕೆಗಳಿಗೆ ಕವನಗಳನ್ನು ಬರೆಯುತ್ತಿದ್ದರು. ಇವರ ಪ್ರಪ್ರಥಮ ಕವನ ಸಂಕಲನ "ವಿಶ್ವಚೇತನ" ೨೦೦೬ನೆ ಇಸವಿಯಲ್ಲಿ ೭೩ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಕಟಣೆಯಾಗಿ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ಹೊರತಂದಿತು. ಶಿವಮೊಗ್ಗದಲ್ಲಿ ನಡೆದ ಸಮ್ಮೇಳನದಲ್ಲಿ ಖ್ಯಾತ ಕವಿ ಪ್ರೊಫೆಸರ್ ನಿಸ್ಸಾರ್ ಅಹಮದ್ ಇದನ್ನು ಲೋಕಾರ್ಪಣೆ ಗೊಳಿಸಿದ್ದರು.

೨೦೦೭ರಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರದ ರಾಮಚಂದ್ರಾಪುರದಲ್ಲಿ ನಡೆದ ಐತಿಹಾಸಿಕ ವಿಶ್ವಗೋಸಮ್ಮೇಳನದ ಸಂದರ್ಭದಲ್ಲಿ ಗೋಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಚಿನ್ಮಯ ಗೋವಿನ ಕುರಿತಾಗಿ ೧೨೧ ಘೋಷವಾಕ್ಯಗಳನ್ನು ರಚಿಸಿ ಪುಸ್ತಕವಾಗಿ ಹೊರತಂದರು. "ಮಾತೆಗಾಗಿ ಮಾತುಗಳು" ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾದ ಕನ್ನದದ ಈ ಪುಸ್ತಕ ಆಂಗ್ಲಭಾಷೆಗೂ" ವರ್ಲ್ಡ್ ಆಫ್ ವರ್ಡ್ಸ್ ಫಾರ್ ದಿ ಮದರ್ ಆಫ್ ವರ್ಲ್ಡ್" ಎಂಬ ಹೆಸರಿನ ಪುಸ್ತಕವಾಗಿ ಬಿಡುಗಡೆಗೊಂಡಿತು.

ಹೊಸ ಬೆಳವಣಿಗೆ ಎಂಬಂತೆ ಕಳೆದ ೨೦೧೧ರಲ್ಲಿ ಹವ್ಯಾಸಿ ಪತ್ರಕರ್ತರೂ ಆಗಿ ಲೇಖನ ಬರೆಯಲಾರಂಭಿಸಿದ ಚಿನ್ಮಯ ಅವರ ಲೇಖನಗಳು ರಾಜ್ಯದ ಪ್ರಮುಖ ದಿನಪತ್ರಿಕೆಗಳಲ್ಲಿ, ವಾರಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುತ್ತಿದೆ. ಪ್ರಕಟಿತ ಲೇಖನಗಳ ಸಂಕಲನ "ತಾರೆಗಳ ಕುರಿತು ಮನಸಾರೆ.." ಹಾಗು ಪ್ರಕಟಿತ ೨೦೮ ಹನಿಗವನಗಳ ಸಂಗ್ರಹ "ಹನಿಪ್ರವಾಹ" ಸಾಧನಾ ಪ್ರಕಾಶನದಿಂದ ಬಿಡುಗಡೆಯಾಗಿದೆ. ಹನಿಪ್ರವಾಹಕ್ಕೆ ರವಿ ಬೆಳೆಗೆರೆ, ಹಂಸಲೇಖ ಹಾಗು ರೂಪಾ ಅಯ್ಯರ್ ಬೆನ್ನುಡಿ ಬರೆದಿರುವುದು ವಿಶೇಷವಾಗಿದೆ. "ಕಲೆಗೊಂದು ಕನ್ನಡಿ" ಹಾಗು "ಸುಮ್ನೆ ಒಂದಿಷ್ಟು..." ಎಂಬ ಎರಡು ಪುಸ್ತಕಗಳು ಸದ್ಯದಲ್ಲೇ ಬಿಡುಗಡೆಯಾಗಲಿದೆ. ತಮ್ಮ ಬರವಣಿಗೆಗಳಲ್ಲಿ ಚಿನ್ಮಯ ಯಾವತ್ತೂ ವಿಷಯಾಧಾರಿತವಾಗಿರುತ್ತಾರೆ ವಿನಹ ಯಾವುದೇ ಒಂದು ಪ್ರತ್ಯೇಕ ಸಿದ್ಧಾಂತಕ್ಕೆ ಅಂಟಿಕೊಳ್ಳುವ ಜಾಯಮಾನದವರಲ್ಲ.

ಒಟ್ಟಿನಲ್ಲಿ ಸಂಗೀತ-ಸಾಹಿತ್ಯ-ಗಾಯನ ಈ ಮೂರರಲ್ಲೂ ಪ್ರಾವೀಣ್ಯತೆಯನ್ನು ಪಡೆದು ಈ ಸಮಾಜಕ್ಕೆ ತಾನೊಂದು ಕೊಡುಗೆಯಾಗಬೇಕೆಂದು ಚಿನ್ಮಯ ಎಂ.ರಾವ್ ಅವರು ಕನಸು ಕಂಡು ಅದನ್ನು ನನಸಾಗಿಸುವತ್ತ ಸಾಗುತ್ತಿದ್ದಾರೆ. ಮಹಾನಗರಿಗಳಲ್ಲಿದ್ದರೆ ಮಾತ್ರ ಬೆಳೆಯಬಹುದು, ಕೀರ್ತಿವಂತರಾಗಬಹುದೆಂಬ ಅಲಿಖಿತ ನಿಯಮಕ್ಕೆ ತದ್ವಿರುದ್ಧವಾಗಿ ಹೆಜ್ಜೆ ಇಡುತ್ತಾ ತನ್ನ ಹಳ್ಳಿಯಲ್ಲೇ ಇದ್ದು ನಗರದವರೇ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ.

ಸಂಗೀತದ ಪರಿವಿಡಿ-ಚಲನಚಿತ್ರ

ಬದಲಾಯಿಸಿ
ಚಿತ್ರದ ಹೆಸರು ನಿರ್ಮಾಣ ಬಿಡುಗಡೆಯಾದ ವರ್ಷ ಮಾರುಕಟ್ಟೆಗೆ ತಂದ ಆಡಿಯೋ ಸಂಸ್ಥೆ
ಅಗಮ್ಯ ಸಂಜೀವಿನಿ ಸಿನಿ ಕ್ರಿಯೇಶನ್ಸ್ ೨೦೧೩ ಲಹರಿ ರೆಕಾರ್ಡಿಂಗ್ ಕಂಪೆನಿ

ಸಂಗೀತದ ಪರಿವಿಡಿ- ಚಲನಚಿತ್ರೇತರ

ಬದಲಾಯಿಸಿ
ಕ್ರಮ ಸಂಖ್ಯೆ ಧ್ವನಿಮುದ್ರಿಕೆಯ ಹೆಸರು ಬಿಡುಗಡೆಯಾದ ವರ್ಷ ಮಾರುಕಟ್ಟೆಗೆ ತಂದ ಆಡಿಯೋ ಸಂಸ್ಥೆ
ಯಾನ್ ಇನ್ ಎಫೆಬಲ್ ಸೋಲ್-ಓಂಕಾರರೂಪಿಣಿ ೨೦೦೪ ಲಹರಿ ರೆಕಾರ್ಡಿಂಗ್ ಕಂಪೆನಿ
ಭಕ್ತಿ ಅಭಿಷೇಕ ೨೦೦೫ ಗೀತಶ್ರೀ ಆಡಿಯೋ
ಭಕ್ತಿವಂದನ ೨೦೦೭ ಲಹರಿ ರೆಕಾರ್ಡಿಂಗ್ ಕಂಪೆನಿ
ಶರಣಮ್ ಅಯ್ಯಪ್ಪ ೨೦೦೭ ಗೀತಶ್ರೀ ಆಡಿಯೋ
ಭಾವಪಯಣ ೨೦೦೮ ಲಹರಿ ರೆಕಾರ್ಡಿಂಗ್ ಕಂಪೆನಿ
ಸೌಂದರ್ಯಲಹರಿ ೨೦೦೮ ಗೀತಶ್ರೀ ಆಡಿಯೋ
ಶ್ರೀಗುರುರಾಯ ೨೦೦೮ ಗೀತಶ್ರೀ ಆಡಿಯೋ
ಶ್ರೀಗುರುರಾಯ (ತೆಲುಗು) ೨೦೦೮ ಗೀತಶ್ರೀ ಆಡಿಯೋ
ಲಲಿತಾಸಹಸ್ರನಾಮ ೨೦೦೮ ಗೀತಶ್ರೀ ಆಡಿಯೋ
೧೦ ದೀಪಾಂಬುಧಿಯ ದೀಪ ೨೦೦೮ ಗೀತಶ್ರೀ ಆಡಿಯೋ
೧೧ ಬಣ್ಣದ ಚಿಟ್ಟೆ ೨೦೦೯ ಆಪಲ್ ಬ್ಲೋಸಮ್ ಪ್ರೈವೇಟ್ ಲಿಮಿಟೇಡ್ ಕಂಪೆನಿ.
೧೨ ಶ್ರೀ ಗುರುಗೀತಾ ೨೦೦೯ ಸನ್ ಟೈಮ್ಸ್ ಆಡಿಯೋ
೧೩ ನಾನು ಅದೃಷ್ಟಶಾಲಿ ೨೦೧೦ ತ್ರಿಡಿ ಕ್ರಿಯೇಟಿವ್ಸ್
೧೪ ಗೀತಾರ್ಪಣಮ್ ೨೦೧೦ ಗೀತಶ್ರೀ ಆಡಿಯೋ
೧೫ ಮಂಗಳ ಮೂರ್ತಿ ಮಣಿಕಂಠ (ತೆಲುಗು) ೨೦೧೦ ಗೀತಶ್ರೀ ಆಡಿಯೋ
೧೬ ಕಟ್ಟು ಕಟ್ಟು ಇರುಮುಡಿ ಕಟ್ಟು ೨೦೧೦ ಗೀತಶ್ರೀ ಆಡಿಯೋ
೧೭ ಕಂಬದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ೨೦೧೦ ಗೀತಶ್ರೀ ಆಡಿಯೋ
೧೮ ದೀಪಾಂಬುಧಿ ಕಾಳಿಕಾಂಬಾ ವೈಭವ (ವಿಸಿಡಿ) ೨೦೧೦ ಗೀತಶ್ರೀ ಆಡಿಯೋ
೧೯ ಶ್ರೀ ಅಭಯಹಸ್ತೆ ಆದಿಲಕ್ಷ್ಮೀವೈಭವ ೨೦೧೦ ಗೀತಶ್ರೀ ಆಡಿಯೋ
೨೦ ಶಬರಿಗಿರೀಶ ಶ್ರೀ ಧರ್ಮಶಾಸ್ತಾ (ವಿಸಿಡಿ) ೨೦೧೦ ಗೀತಶ್ರೀ ಆಡಿಯೋ
೨೧ ಶಬರಿಗಿರೀಶ ಶ್ರೀ ಧರ್ಮಶಾಸ್ತಾ (ವಿಸಿಡಿ-ತೆಲುಗು) ೨೦೧೦ ಗೀತಶ್ರೀ ಆಡಿಯೋ
೨೨ ಕೋಲುಮಂಡೆ ಜಂಗಮದೇವ ೨೦೧೦ ಗೀತಶ್ರೀ ಆಡಿಯೋ
೨೩ ಅಂತರಾಳ (ಸಾಹಿತ್ಯ) ೨೦೧೧ ಲಹರಿ ರೆಕಾರ್ಡಿಂಗ್ ಕಂಪೆನಿ
೨೪ ದಶಕ್ಷೇತ್ರ ವೈಭವ (ವೀಡಿಯೋ ಡಿವಿಡಿ) ೨೦೧೧ ಲಹರಿ ರೆಕಾರ್ಡಿಂಗ್ ಕಂಪೆನಿ
೨೫ ಬಣ್ಣದ ತೇರು ೨೦೧೧ ಲಹರಿ ರೆಕಾರ್ಡಿಂಗ್ ಕಂಪೆನಿ
೨೬ ಶಿವಾನಂದಲಹರಿ ೨೦೧೨ ಲಹರಿ ರೆಕಾರ್ಡಿಂಗ್ ಕಂಪೆನಿ
೨೭ ಮನೋಬೋಧ ೨೦೧೨ ಲಹರಿ ರೆಕಾರ್ಡಿಂಗ್ ಕಂಪೆನಿ

ಪ್ರಕಟಿತ ಕೃತಿಗಳು

ಬದಲಾಯಿಸಿ
ಕ್ರಮ ಸಂಖ್ಯೆ ಪುಸ್ತಕದ ಹೆಸರು ಪ್ರಾಕಾರ ಪ್ರಕಾಶನ ಬಿಡುಗಡೆಯಾದ ವರ್ಷ
ವಿಶ್ವಚೇತನ ಕವನ ಸಂಕಲನ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು ೨೦೦೬
ಮಾತೆಗಾಗಿ ಮಾತುಗಳು ೧೨೧ ಗೋವಿನ ಘೋಷವಾಕ್ಯಗಳು ಮನಸ್ವಿನಿ ಪ್ರಕಾಶನ ಹೊನಗೋಡು ೨೦೦೭
ವರ್ಲ್ಡ್ ಆಫ್ ವರ್ಡ್ಸ್ ಫಾರ್ ದಿ ಮದರ್ ಆಫ್ ವರ್ಲ್ಡ್ ‍‍(ಆಂಗ್ಲ ಅನುವಾದಿತ ಕೃತಿ) ೧೨೧ ಗೋವಿನ ಘೋಷವಾಕ್ಯಗಳು ಮನಸ್ವಿನಿ ಪ್ರಕಾಶನ ಹೊನಗೋಡು ೨೦೦೭
ಹನಿಪ್ರವಾಹ ೨೦೮ ಹನಿಗವನಗಳ ಸಂಗ್ರಹ ಸಾಧನಾ ಪ್ರಕಾಶನ ಬೆಂಗಳೂರು ೨೦೧೨
ತಾರೆಗಳ ಕುರಿತು ಮನಸಾರೆ ಪ್ರಕಟಿತ ಸಿನಿಮಾ ಲೇಖನಗಳ ಸಂಗ್ರಹ ಸಾಧನಾ ಪ್ರಕಾಶನ ಬೆಂಗಳೂರು ೨೦೧೨
ಕಲೆಗೊಂದು ಕನ್ನಡಿ ಪ್ರಕಟಿತ ಲೇಖನಗಳ ಸಂಗ್ರಹ ಸುಂದರ ಪ್ರಕಾಶನ ಬೆಂಗಳೂರು ೨೦೧೩

ಸೂಚಿಸುವ ವೆಬ್ ಕೊಂಡಿಗಳು

ಬದಲಾಯಿಸಿ

ದಿ ಹಿಂದು -೪-೫-೨೦೦೯ Archived 2014-02-04 ವೇಬ್ಯಾಕ್ ಮೆಷಿನ್ ನಲ್ಲಿ.

ಮನಾಚೆ ಶ್ಲೋಕಗಳ ಕನ್ನಡ ಅವತರಣಿಕೆ ಬಿಡುಗಡೆ

ಭಕ್ತಿ ಅಭಿಷೇಕ-ಹಾಡುಗಳು

ಭಾವಪಯಣ-ಹಾಡುಗಳು

ಬಣ್ಣದಚಿಟ್ಟೆ ಅಡಕ ಮುದ್ರಿಕೆಯ ಬಗ್ಗೆ Archived 2012-02-01 ವೇಬ್ಯಾಕ್ ಮೆಷಿನ್ ನಲ್ಲಿ.

ಕೆಲವು ಭಕ್ತಿಗೀತೆಗಳು Archived 2013-05-19 ವೇಬ್ಯಾಕ್ ಮೆಷಿನ್ ನಲ್ಲಿ.

ಅಗಮ್ಯ ಚಿತ್ರದ ಅಡಕ್ ಮುದ್ರಿಕೆ ಬಿಡುಗಡೆಯ ವಾರ್ತೆ Archived 2014-02-02 ವೇಬ್ಯಾಕ್ ಮೆಷಿನ್ ನಲ್ಲಿ.

ಹೊರಗಿನ ಸಂಪರ್ಕಗಳು

ಬದಲಾಯಿಸಿ

ಚಿನ್ಮಯಎಂರಾವ್.ಕಾಮ್ Archived 2013-06-01 ವೇಬ್ಯಾಕ್ ಮೆಷಿನ್ ನಲ್ಲಿ.

ಚಿನ್ಮಯ ಎಂ.ರಾವ್ ಅಧೀಕೃತ ಯೂಟೂಬ್ ಚಾನೆಲ್