ಚಿತ್ರಹಿಂಸೆ
ಚಿತ್ರಹಿಂಸೆ ಎಂದರೆ ಗುಟ್ಟನ್ನು ತಿಳಿಯಲೊ, ಸೇಡು ತೀರಿಸಿಕೊಳ್ಳಲೊ, ಪ್ರಾಯಶ್ಚಿತ್ತವಾಗಿಯೋ ವ್ಯಕ್ತಿಗೆ ಕೊಡುವ ಚಿತ್ರವಿಚಿತ್ರವಾದ ಹಿಂಸೆ (ಟಾರ್ಚ್‍ರ್). ಸಮಾಜಶಾಸ್ತ್ರಜ್ಞರು ಈ ಅಭಿಪ್ರಾಯವನ್ನು ಹೆಚ್ಚಾಗಿ ದಂಡನೆ ಮತ್ತು ಕಾಯದೆಯ ಪರಿಮಿತಿಯಲ್ಲಿ ಪರಿಗಣಿಸಿದ್ದಾರೆ. ರೋಮನ್ ಕಾಯದೆ ತಜ್ಞರು ಚಿತ್ರಹಿಂಸೆಯನ್ನು ಸತ್ಯಾಸತ್ಯತೆಯನ್ನು ಹೊರಗೆಡಹುವ ಒಂದು ವಿಧಾನವೆಂದು ಪರಿಗಣಿಸಿದ್ದರು. ಅಪರಾಧಿಗಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಕೊಟ್ಟು ಸತ್ಯವನ್ನು ಅವರು ಕಂಡುಹಿಡಿಯುತ್ತಿದ್ದರು. ಇದಕ್ಕಾಗಿ ಪುರಾತನ ಕಾಲದಲ್ಲಿ ದಿವ್ಯವೆಂಬ(ಆರ್ಡಿಯಲ್) ಮತ್ತೊಂದು ಬಗೆಯ ಓರೆಗಲ್ಲನ್ನು ಉಪಯೋಗಿಸಲಾಗುತ್ತಿತ್ತು. ದಿವ್ಯಗಳು ಸಹಿತ ಕಠೋರವಾದುವೇ. ಬೆಂಕಿಯ ಮೇಲೆ ನಡೆದೂ ಕಾಲು ಸುಡದಿದ್ದಲ್ಲಿ, ಕೈಯಲ್ಲಿ ಬೆಂಕಿಯನ್ನು ಹಿಡಿದೂ ಕೈ ಸುಡದಿದ್ದಲ್ಲಿ ಅಪರಾಧದ ಗುಮಾನಿ ಇದ್ದವನು ನಿರಪರಾಧಿಯಾಗುತ್ತಿದ್ದ. ಅಪರಾಧವನ್ನು ಕಂಡುಹಿಡಿಯುವುದಕ್ಕೆ ಮಾತ್ರವಲ್ಲದೆ ಶಿಕ್ಷೆಯಾಗೂ ಚಿತ್ರಹಿಂಸೆ ಕೊಡುವುದು ಮುಂದೆ ವಾಡಿಕೆಯಾಯಿತು.
ಕೆಲವೊಂದು ಸಲ ಕೆಲವು ನಿರಪರಾಧಿಗಳೂ ಅಪರಾಧಿಗಳೆಂದು ಸಂಶಯಕ್ಕೆ ಒಳಗಾದವರೂ ಚಿತ್ರಹಿಂಸೆಗೆ ಬಲಿಯಾಗಿರುವುದುಂಟು. ಚಿತ್ರಹಿಂಸೆ ಪೂರ್ವಕಾಲದಲ್ಲಿ ಗ್ರೀಸ್ ಮತ್ತು ರೋಮ್‍ಗಳಲ್ಲಿ ಹೆಚ್ಚಾಗಿ ಗುಲಾಮಗಿರಿಗೆ ಕೊಡಲ್ಪಡುತ್ತಿತ್ತು. ಚಿತ್ರಹಿಂಸೆ ಜಗತ್ತಿನಲ್ಲಿ ಸಾಮಾನ್ಯವಾದ ಶಿಕ್ಷೆಯ ವಿಧಿಯಾಗಿರಲಿಲ್ಲ. ಅಸೀರಿಯನರಲ್ಲಿ, ಈಜಿಪ್ಟಿಯನರಲ್ಲಿ ಕಂಡುಬಂದಾಗ್ಯೂ ಪೂರ್ವಕಾಲದ ಚೀನಿಯರ, ಹಿಂದುಗಳ ಮತ್ತು ಜ್ಯೂ ಜನರ ಕಾಯಿದೆಗಳಲ್ಲಿ ಚಿತ್ರಹಿಂಸೆ ಕಂಡುಬರುವುದಿಲ್ಲ. ಆದರೆ ಮುಸ್ಲಿಮರಲ್ಲಿ ಕಾಯ್ದ ಕೆಂಡವನ್ನು ತಲೆಯ ಮೇಲೆ ಇಡುವ ವಿಧಾನ ಬಹಳ ಹಿಂದೆಯೇ ಇತ್ತು. ಅಥೆನ್ಸಿನ ಗುಲಾಮರನ್ನು ಬಂಡಿಗಳ ಗಾಲಿಗಳ ಕೆಳಗೆ ತುಳಿಸಿ ಇಲ್ಲವೆ ಸುಡುವ ಮನೆಯಲ್ಲಿ ಕೂಡಿ ಹಾಕಿ ಅಪರಾಧಕ್ಕೆ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು.
ರೋಮ್ ಗಣರಾಜ್ಯದಲ್ಲಿ ಚಿತ್ರಹಿಂಸೆಯನ್ನು ಕೊಡುವ ಪೂರ್ವದಲ್ಲಿ ಅಪರಾಧ ಸಿದ್ದವಾಗುವುದು ಅವಶ್ಯವಾಗಿದ್ದರೂ ಕೆಲವೊಂದು ಸಲ ಗುಮಾನಿ ಇದ್ದವರಿಗೆ ಚಿತ್ರಹಿಂಸೆಯನ್ನು ಕೊಟ್ಟೇಕೊಡುತ್ತಿದ್ದರು.
ಇನ್ನೂ ಕೆಲವು ಸಲ ಚಿತ್ರಹಿಂಸೆಗಳಿಗೆ ಹೆದರಿ ನಿರಪರಾಧಿಗಳು ಸಹಿತ ಅಪರಾಧಿಗಳೆಂದು ತಾವೇ ಒಪ್ಪಿಕೊಂಡ ಪ್ರಸಂಗಗಳು ಆಗ ಧಾರಾಳವಾಗಿ ದೊರೆಯುತ್ತಿದ್ದವು. ಆಗ ಚಿತ್ರಹಿಂಸೆಗೆ ಗುರಿಪಡಿಸುವುದನ್ನು ಮಕ್ಕಳಿಗೆ, ಗರ್ಭಿಣಿ ಸ್ತ್ರೀಯರಿಗೆ ಮತ್ತು ಪೂಜಾರಿಗಳಿಗೆ ಅನ್ವಯಿಸಿರಲಿಲ್ಲ. ಆದರೆ ಅಪರಾಧಗಳನ್ನು ಗುರುತಿಸುವಾಗ ಮಾತ್ರ ಚಿತ್ರಹಿಂಸೆಗೆ ಬಹಳ ಮಹತ್ವವನ್ನು ಕೊಡಲಾಗುತ್ತಿತ್ತು. ಕ್ರಿ.ಶ 1215 ರಲ್ಲಿ ರೋಮಿನ ಪ್ರಜಾಪ್ರತಿನಿಧಿ ಸಭೆ ಚಿತ್ರಹಿಂಸೆಯ ಈ ಅನಾಗರಿಕ ಪದ್ಧತಿಗಳಿಗೆ ಕೊನೆ ತಂದಿತು. 13ನೆಯ ಶತಮಾನದಲ್ಲಿ ಫ್ರಾನ್ಸ್ ಮತ್ತು ಇಟಲಿಗಳಲ್ಲಿ ಚಿತ್ರಹಿಂಸೆಯ ಪದ್ಧತಿ ಜಾರಿಯಲ್ಲಿ ಇದ್ದುದು ಕಂಡು ಬರುತ್ತದೆ. ಫ್ರಾನ್ಸಿನಲ್ಲಂತೂ ಚಿತ್ರಹಿಂಸೆಯ ಅನೇಕ ವಿಧಗಳು ಇದ್ದುವಲ್ಲದೆ ಅವುಗಳಿಗೆ ಪ್ರತ್ಯೇಕ ಹೆಸರುಗಳು ಇದ್ದುವು.
ಇಂಗ್ಲೆಂಡಿನಲ್ಲಿ ಸ್ಟೀಫನ್ ಅರಸನ ಕಾಲದಲ್ಲಿ ಅರಾಜಕತೆಯುಂಟಾದಾಗ ಚಿತ್ರಹಿಂಸೆ ಎಂಬುದು ಒಂದು ಬೈಗುಳದ ಶಬ್ದವಾಗಿತ್ತು. ಜಾನ್ ಅರಸನ ಕಾಲದಲ್ಲಿ ಜ್ಯೂ ಜನರಿಂದ ಸಂಪತ್ತು ಸೆಳೆಯುವ ವಿಧಾನಗಳಿಗೂ ಈ ಶಬ್ದವನ್ನು ಉಪಯೋಗಿಸಿರುವುದುಂಟು. 13 ಮತ್ತು 14ನೆಯ ಶತಮಾನದಲ್ಲಿ ಇಂಗ್ಲೆಂಡಿನಲ್ಲಿ ಚಿತ್ರಹಿಂಸೆಯನ್ನು ಪ್ರಯೋಗಿಸಿರುವುದು ಕಂಡುಬಂದಿದೆ. ಷೇಕ್ಸ್‍ಪಿಯರ್ ಮತ್ತು ಎಲಿಜ಼ಬೆತ್ ರಾಣಿಯ ಕಾಲದ ಇನ್ನುಳಿದ ನಾಟಕಕಾರರು ಚಿತ್ರಹಿಂಸೆಯ ಅನೇಕ ಉದಾಹರಣೆಗಳನ್ನು ತಮ್ಮ ನಾಟಕಗಳಲ್ಲಿ ಪ್ರದರ್ಶಿಸಿದ್ದಾರೆ. ಚಿತ್ರಹಿಂಸೆ ಮತ್ತು ಅಜ್ಞಾನಗಳು ಜೊತೆಜೊತೆಯಾಗಿ ಹೋಗುತ್ತವೆ. ಗುಪ್ತ ನ್ಯಾಯಾಲಯಗಳು ಗುಪ್ತ ನ್ಯಾಯ ದಂಡನೆಗಳಿಗೆ ಮಹತ್ವವಿತ್ತಿವೆ. ಗುಪ್ತ ನ್ಯಾಯ ದಂಡನೆಗಳಲ್ಲಿ ಚಿತ್ರಹಿಂಸೆಗೆ ಮಹತ್ವದಸ್ಥಾನ ದೊರೆತಿದೆ. ಸ್ಕಾಟ್‍ಲೆಂಡಿನಲ್ಲಿ ಕಾಯದೆ ಸ್ವರೂಪ ಇಂಗ್ಲೆಂಡಿನಲ್ಲಿಯದಕ್ಕಿಂತ ಭಿನ್ನವಾಗಿರಲಿಲ್ಲ. 1542ರಲ್ಲಿ ಈ ದೇಶದಲ್ಲಿ ಚಿತ್ರಹಿಂಸೆಯಿಂದ ಒಪ್ಪಿಕೊಂಡ ಅಪರಾಧ ನಿಜವಾದುದಲ್ಲವೆಂದು ಪ್ರಸ್ಥಾಪಿತವಾಯಿತು. ಮಾಟವಿದ್ಯೆ ಭೂತವಿದ್ಯೆಗಳನ್ನು ರೂಢಿಸಿಕೊಂಡ ಜನ ಇಂಗ್ಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿ ಚಿತ್ರಹಿಂಸೆಯನ್ನು ತಮ್ಮ ಸಾಧನವಾಗಿ ಬಳಸುತ್ತಿದ್ದರು. ಈ ಮಾಟಗಾರರು ಕೆಲವೊಂದು ಸಲ ಅಪರಾಧೀ ಕಾರ್ಯಗಳನ್ನು ಕೈಕೊಳ್ಳುತ್ತಿದ್ದರು. ಇಂಥ ಉದಾಹರಣೆಗಳು ಈಗಲೂ ಭಾರತದಲ್ಲಿ ಕಂಡುಬರುತ್ತವೆ. ಮಕ್ಕಳನ್ನು ಕದ್ದು ದೇವಿಗೆ ಬಲಿಕೊಡುವ ಅನೇಕ ಸಂಗತಿಗಳು ನಡೆಯುತ್ತಿವೆ. ಸ್ಕಾಟ್‍ಲೆಂಡನಲ್ಲಿಯ ಅನೇಕ ಚಿತ್ರಹಿಂಸೆಯ ಪ್ರಸಂಗಗಳು ಸೋವಿಯೆತ್ ದೇಶದಿಂದ ಬಂದಂಥವುಗಳಾಗಿದ್ದವು. ನೂರೆಂಬರ್ಗ್‍ದಲ್ಲಿನ ವಸ್ತು ಸಂಗ್ರಹಾಲಯಗಳು ಮತ್ತು ಇನ್ನಿತರ ಐತಿಹಾಸಿಕ ಸ್ಮಾರಕಗಳು ಚಿತ್ರಹಿಂಸೆಯ ಅಸ್ಥಿತ್ವವನ್ನು ತೋರಿಸುತ್ತವೆ.
ಗ್ರಿಲ್ಯಾಂಡಸ್ ಎಂಬ ಪಂಡಿತ ಚಿತ್ರಹಿಂಸೆಯಲ್ಲಿ ಐದು ವಿಧಗಳನ್ನು ಮಾಡಿದ್ದಾನೆ. ಮೊದಲೆನೆಯದು ಕೇವಲ ಬೆದರಿಕೆ, ಎರಡನೆಯದು ತೂಗುಹಾಕುವುದು, ಮೂರನೆಯದು ಎತ್ತರದಲ್ಲಿ ತೂಗುಹಾಕುವುದು, ನಾಲ್ಕನೆಯದು ಅನೇಕ ಗಂಟೆಗಳವರೆಗೆ ತೂಗುಹಾಕುವುದು, ಐದನೆಯದು ಕೈಕಾಲುಗಳಿಗೆ ಭಾರವನ್ನು ಕಟ್ಟಿ ತೂಗುಹಾಕುವುದು. ಇಂತ ಅನೇಕ ಚಿತ್ರಹಿಂಸೆಗಳಿಗೆ ಜನ ಹೇಗೆ ತುತ್ತಾಗುತ್ತಿದ್ದರೆಂಬುದು ಸೋಜಿಗದ ಸಂಗತಿ. ಇಂಥವು ನ್ಯಾಯಾದೀಶರು ಮತ್ತು ಅಧಿಕಾರಿಗಳ ಎದುರಿಗೇ ನಡೆಯುತ್ತಿದ್ದವೆಂಬುದು ಇನ್ನೂ ಗಮನಾರ್ಹ ವಿಷಯ. ಗ್ರಿಲ್ಯಾಂಡಸ್ ತನ್ನ ಪೀಸಾ ಮತ್ತು ರೋಮ್ ಪ್ರದೇಶಗಳ ಅನುಭವಗಳನ್ನು ವಿವರಿಸುವಾಗ ಚಿತ್ರಹಿಂಸೆಗೆ ಗುರಿಯಾದ ಒಬ್ಬ ಕಳ್ಳ ತನ್ನ ಹತ್ತಿರ ಒಂದು ತಾಯತವನ್ನು ಇಟ್ಟುಕೊಂಡು ಹಿಂಸೆಯನ್ನು ಸಹಿಸಿಕೊಳ್ಳುತ್ತಿದ್ದನೆಂದು ವಿವರಿಸುತ್ತಾನೆ. ಈ ಪ್ರಕಾರವಾಗಿ ಚಿತ್ರಹಿಂಸೆಯು ದಂಡನೆಗಳಿಗೆ ಒಳಗಾದ ಅಪರಾಧಿಗಳು ಮಂತ್ರ ಪಠಣ ಮಾಡುವುದು ಮತ್ತು ಚಿತ್ರಹಿಂಸೆಯನ್ನು ಸಹಿಸಿಕೊಳ್ಳುವ ಮಾಂತ್ರಿಕ ವಿಧಿಗಳನ್ನು ಕೈಕೊಳ್ಳುವುದು ರೂಡಿಯಲ್ಲಿತ್ತು.
ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ವೈರಿಗಳೊಡನೆ ನಡೆದುಕೊಳ್ಳುವ ನೀತಿಯನ್ನು ವಿವರಿಸುತ್ತ ಸಾಮ, ದಾನ, ಭೇದ, ದಂಡ ಎಂಬ ನಾಲ್ಕು ಬಗೆಗಳನ್ನು ಸೂಚಿಸುತ್ತಾನೆ. ವೈರಿ ರಾಜ್ಯಗಳನ್ನು ಗೆಲ್ಲುವಾಗ ಅವರಿಗೆ ಯಾವ ತರಹದ ತೊಂದರೆಗಳನ್ನು ಕೊಡಬೇಕೆಂಬುದನ್ನು ಹೇಳುತ್ತಾ ವೈರಿ ರಾಜ್ಯಗಳಲ್ಲಿ ರೋಗಗಳನ್ನು ಹಬ್ಬಿಸಬೇಕು ಮತ್ತು ಕೆರೆ ಬಾವಿಗಳಲ್ಲಿ ವಿಷವನ್ನು ಹಾಕಿ ಪ್ರಜೆಗಳಿಗೆ ತೊಂದರೆ ಕೊಡುವುದರಲ್ಲಿ ಹಿಂದು ಮುಂದು ನೋಡಬಾರದು ಎಂದು ವಿಧಿಸಿದ್ದಾನೆ. ಔರಂಗಜೇಬ್ ಭಾರತದ ಸಾರ್ವಭೌಮನಿದ್ದಾಗ ಶಿವಾಜಿಯ ಮಗ ಸಂಬಾಜಿಯನ್ನು ಚಿತ್ರಹಿಂಸೆಗೆ ಗುರಿ ಮಾಡಿ ಕೊಂದನೆಂದು ಇತಿಹಾಸಕಾರರು ಬಣ್ಣಿಸಿದ್ದಾರೆ. ಭಾರತದ ಮೇಲೆ ಮುಸಲ್ಮಾನರ ದಾಳಿಗಳಾದಾಗ ಕಾಲಕ್ಕೆ ಅನೇಕ ಹಿಂದೂ ರಾಜರು ಮತ್ತು ಪ್ರಜೆಗಳು ಮತ್ತು ಸ್ತ್ರೀಯರು ಚಿತ್ರಹಿಂಸೆಗೆ ಗುರಿಯಾದರು. ಬಂಗಾಳದಲ್ಲಿ ಬಿಳಿಯರನ್ನು ಕತ್ತಲ ಕೋಣೆಯಲ್ಲಿ ಹಾಕಿ ಕೊಂದುದು (ಅದು ನಿಜವಾದಲ್ಲಿ) ಒಂದು ತರಹದ ಚಿತ್ರಹಿಂಸೆಯೇ. ಬಡತನ ಮತ್ತು ಬರಗಾಲದಲ್ಲಿ ಕಾಮಿಗಳು ಪರಸ್ತ್ರೀಯರನ್ನು ಚಿತ್ರಹಿಂಸೆಗೆ ಗುರಿಮಾಡಿದ ಪ್ರಸಂಗಗಳು ಭಾರತದ ನಾಟಕಕಾರರು ಮತ್ತು ಕಾದಂಬರಿಕಾರರು ತಮ್ಮ ಕೃತಿಗಳಲ್ಲಿ ವರ್ಣಿಸಿದ್ದಾರೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಚಿತ್ರಹಿಂಸೆಗೆ ಒಂದು ಪ್ರಬಲ ನಿದರ್ಶನ. ಈಚೆಗೆ ಪೂರ್ವ ಬಂಗಾಲದಲ್ಲಿ ಪಾಕಿಸ್ತಾನೀಯರು ನಡೆಸಿದ ಹತ್ಯಾಕಾಂಡದಲ್ಲಿ ಅನೇಕ ಚಿತ್ರಹಿಂಸೆಯ ವಿಧಗಳು ಹೊರಬಿದ್ದಿವೆ. ಸ್ತ್ರೀಯರನ್ನು ವಿವಸ್ತ್ರರನ್ನಾಗಿ ಮಾಡುವುದು, ನಿರಪರಾಧಿಗಳ ಮೇಲೆ ಗುಂಡಿನ ಮಳೆಗರೆಯುವುದು-ಇವು ಚಿತ್ರಹಿಂಸೆಯ ಕೆಲವು ಉದಾಹರಣೆಗಳು.
ಹಿಂದೂ ಧರ್ಮದಲ್ಲಿ ಬರುವ ನರಕ ಯಾತನೆಯ ಕಲ್ಪನೆಯಲ್ಲಿ ಚಿತ್ರಹಿಂಸೆಗೆ ಸರಿಸಮಾನವಾದ ಕಲ್ಪನೆಗಳಿವೆ. ಪಾಪ ಮಾಡಿದವರು ನರಕವನ್ನು ಸೇರಿ ಅನೇಕ ತರಹದ ಹಿಂಸೆಗಳಿಗೆ ಗುರಿಯಾಗುತ್ತಾರೆ. ಬೆಂಕಿಯಿಂದ ಸುಡುವುದು, ಹಾವು ಚೇಳುಗಳಿಂದ ಕಡಿಸುವುದು, ಗರಗಸದಿಂದ ತಲೆ ಕೊರೆಯುವುದು, ಭರ್ಜಿಯಿಂದ ಬೆನ್ನು, ಹೊಟ್ಟೆಗಳನ್ನು ತಿವಿಯುವುದು-ಇವೇ ಮುಂತಾದವು ಅವುಗಳಲ್ಲಿ ಕೆಲವು. ಎಲ್ಲಾ ಧರ್ಮಗಳಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಸ್ವರ್ಗನರಕಗಳ ಕಲ್ಪನೆಗಳಿವೆ.
ಚರ್ಚುಗಳು ಧರ್ಮಬಾಹಿರರನ್ನು ದಂಡಿಸುದಕ್ಕಾಗಿ ಚಿತ್ರಹಿಂಸೆಯನ್ನು ಅವಲಂಬಿಸಿದ್ದು ಕ್ರೈಸ್ತಧರ್ಮದ ಇತಿಹಾಸದಲ್ಲಿನ ಒಂದು ಸಂಗತಿಯಾಗಿದೆ. ಇಸ್ಲಾಮ್ ಧರ್ಮದ ಪ್ರಸಾರ ಸಹಿತ ಒಂದು ಕೈಯಲ್ಲಿ ಕತ್ತಿ ಮತ್ತೊಂದು ಕೈಯಲ್ಲಿ ಕುರಾನ್- ಹೀಗೆ ನಡೆಯಿತು.
ನವಯುಗದಲ್ಲಿ ಚಿತ್ರಹಿಂಸೆಯನ್ನು ಅನಾಗರೀಕವೆಂದು ಪರಿಗಣಿಸಲಾಗಿದೆ. ಅಗಸ್ಟಾಯಿನ್, ಉಲ್ಫಿಯನ್, ಕ್ವಿಂಟಿಲಿಯನ್, ಮತ್ತು ಮಾಂಟೇನ್ ಇವರು ಚಿತ್ರಹಿಂಸೆಯನ್ನು ವಿರೋಧಿಸಿದರು. ಆದರೆ ಡೆಮಾಸ್ತನೀಸ್, ಅರಿಸ್ಟಾಟಲ್, ಬೋಡಿನ್ ಮತ್ತು ಪೋಲೆಯರ್ ಇವರು ಚಿತ್ರಹಿಂಸೆ ನ್ಯಾಯದಂಡನೆಯಲ್ಲಿ ಇರಬೇಕೆಂದು ವಾದಿಸಿದರು. 17ನೆಯ ಶತಮಾನದಿಂದ ಈಚೆಗೆ ಇಂಗ್ಲೆಂಡಿನಲ್ಲಿ ಚಿತ್ರಹಿಂಸೆಗೆ ಸ್ಥಾನವಿಲ್ಲ. ಸ್ಕಾಟ್‍ಲೆಂಡಿನಲ್ಲಿ 18ನೆಯ ಶತಮಾನದಲ್ಲಿ ಅದನ್ನು ಕಾಯಿದೆಯಿಂದ ಮೊಟಕು ಮಾಡಲಾಯಿತು (1708). ಅದೇ ರೀತಿಯಲ್ಲಿ ಪ್ರಷ್ಯದಲ್ಲಿ 1740ರಲ್ಲಿ, ಪೋರ್ಚುಗಲ್‍ನಲ್ಲಿ 1776ರಲ್ಲಿ, ಸ್ವೀಡನ್ನಿನಲ್ಲಿ 1786ರಲ್ಲಿ, ಫ್ರಾನ್ಸಿನಲ್ಲಿ 1789ರಲ್ಲಿ ಮತ್ತು ರಷ್ಯದಲ್ಲಿ 1801ರಲ್ಲಿ ಚಿತ್ರಹಿಂಸೆಗೆ ಸ್ಥಾನವಿಲ್ಲವಾಯಿತು.ಆದರೆ 1906-07ರಲ್ಲಿ ರಾಜಕೀಯ ಕೈದಿಗಳು ಚಿತ್ರಹಿಂಸೆಯ ಕ್ರೂರಯಾತನೆಗಳಿಗೆ ಒಳಗಾದರೆಂದು ವಸ್ತು ಸಂಗ್ರಹಾಲಯದಲ್ಲಿನ ದಾಖಲೆಗಳಿಂದ ತಿಳಿದು ಬರುತ್ತದೆ. ಅವುಗಳಲ್ಲಿ ಬೆಂಕಿಯಿಂದ ಪಾದವನ್ನು ಸುಡುವುದು ಮುಖ್ಯವಾಗಿತ್ತು. ಪೌರಸ್ತ್ಯ ರಾಷ್ಟ್ರಗಳಲ್ಲಿ ಸಹಿತ ಚಿತ್ರಹಿಂಸೆಗೆ ಈಗ ಯಾವ ಸ್ಥಾನವೂ ಇಲ್ಲ. ಆದರೆ ಅಧಿಕಾರಿಗಳು ಗುಪ್ತವಾಗಿ ತಮ್ಮ ಚಿತ್ರಹಿಂಸೆಯ ವಿಧಾನಗಳನ್ನು ಅನುಸರಿಸುತ್ತಿದ್ದರೆಂದು ತಿಳಿಯುತ್ತದೆ.
ಇಂದಿನ ಯುಗದಲ್ಲಿ ಚಿತ್ರಹಿಂಸೆಗೆ ಯಾವ ರಾಷ್ಟ್ರವೂ ಪುರಸ್ಕಾರಕೊಟ್ಟಿಲ್ಲ. ಚಿತ್ರಹಿಂಸೆ ಅಮಾನುಷವೆಂದು ಅನಾಗರೀಕವೆಂದೂ ಬಗೆಯಲಾಗಿದೆ. ಅಪರಾಧಗಳ ತನಿಖೆ ಮುಖ್ಯವಾಗಿ ವೈಜ್ಞಾನಿಕವಾಗಿ ನಡೆಯುತ್ತಿದೆಯೇ ವಿನಾ ಚಿತ್ರಹಿಂಸೆಯಿಂದಲ್ಲ.
ಬಾಹ್ಯ ಸಂಪರ್ಕಗಳು
ಬದಲಾಯಿಸಿ- Torture, at the Stanford Encyclopedia of Philosophy.
- Detainee Treatment | Task Force On Detainee Treatment - Report and video - "It Was Torture": Report of the Constitution Project’s Task Force on Detainee Treatment, 7 October 2013- The Constitution Project’s Task Force on Detainee Treatment
- Medieval Torture - Development, equipment and techniques in Europe
- Chinese Methods of Torture and Execution Photograph collection at University of Victoria, Special Collections
- CPT Database (by the European Committee for the Prevention of Torture and Inhuman or Degrading Treatment or Punishment)
- Atlas of Torture Archived 2019-01-26 ವೇಬ್ಯಾಕ್ ಮೆಷಿನ್ ನಲ್ಲಿ. - Overview of the situation of torture and ill-treatment around the world (by the Ludwig Boltzmann Institute of Human Rights (BIM) in Vienna, Austria)
- 25 Western Depictions of Crime and Punishment during Qing Dynasty Archived 2016-01-02 ವೇಬ್ಯಾಕ್ ಮೆಷಿನ್ ನಲ್ಲಿ. - Collection of 51 images on crime and punishment in late Imperial China.