ಚಾರ್ಲ್ಸ್ ಹೆನ್ರಿ ಟಾನಿ
ಚಾರ್ಲ್ಸ್ ಹೆನ್ರಿ ಟಾನಿ ( 1837-1922). ಸಂಸ್ಕೃತ ವಿದ್ವಾಂಸ. ರಿಚರ್ಡ್‍ಟಾನಿ ಎಂಬುವನ ಮಗ. ರಗ್ಬಿ ಮತ್ತು ಟ್ರಿನಿಟಿ ಕಾಲೇಜುಗಳಲ್ಲಿ ಶಿಕ್ಷಣ ಪಡೆದು ಪದವೀಧರನಾದ (1860). ಸ್ವಭಾವತಃ ಬುದ್ಧಿವಂತನಾದ ಈತನಿಗೆ ತನ್ನ ವ್ಯಾಸಂಗಾವಧಿಯ ಉದ್ದಕ್ಕೂ ವಿದ್ಯಾರ್ಥಿವೇತನ ದೊರಕಿತ್ತು.
ಅನೇಕ ವರ್ಷಗಳ ಕಾಲ ಕಲ್ಕತ್ತದ ಪ್ರೆಸಿಡೆನ್ಸಿ ಕಾಲೇಜಿನ ಅಧ್ಯಕ್ಷನಾಗಿಯೂ ಪ್ರಾಧ್ಯಾಪಕನಾಗಿಯೂ ಸೇವೆ ಸಲ್ಲಿಸಿದ. ಅನಂತರ ಕಲ್ಕತ್ತ ವಿಶ್ವವಿದ್ಯಾಲಯದ ಕುಲಸಚಿವನಾಗಿ ನೇಮಕಗೊಂಡ. ಬಂಗಾಳದ ಶಿಕ್ಷಣಮಂಡಳಿಯ ನಿರ್ದೇಶಕನಾಗಿ ಮೂರು ಬಾರಿ ಚುನಾಯಿತನಾಗಿ ಸೇವೆ ಸಲ್ಲಿಸಿದ. ಲಂಡನ್ನಿನ ಇಂಡಿಯಾ ಕಛೇರಿಯಲ್ಲಿ ಗ್ರಂಥಪಾಲಕನಾಗಿ ಕೆಲಕಾಲ ದುಡಿದು 1903ರಲ್ಲಿ ನಿವೃತ್ತಿ ಹೊಂದಿದ. ಈತ ಅನೇಕ ಸಂಸ್ಕೃತ ಗ್ರಂಥಗಳನ್ನು ಸಂಪಾದಿಸಿ ಕೆಲವನ್ನು ಆಂಗ್ಲಭಾಷೆಗೆ ಅನುವಾದಿಸಿದ್ದಾನೆ. ಅವುಗಳಲ್ಲಿ ಸೋಮದೇವನ ಕಥಾಸರಿತ್ಸಾಗರದ ಅನುವಾದ ಪ್ರಸಿದ್ಧವಾದುದು.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: