ಚರ್ಚೆಪುಟ:ಮಲಾಲ ಯೂಸಫ್ ಝಾಯಿ
ಗಟ್ಟಿದನಿಯ ಹೆಣ್ಣು ಮಗಳು
ಬದಲಾಯಿಸಿಹೆಚ್ಚಿನ ವಿವರ (Sun, 12/28/2014 ಪ್ರಜಾವಾಣಿ) ಅಕ್ಟೋಬರ್ 9, 2012ರಂದು ಮಲಾಲಾ ಶಾಲೆಯಿಂದ ಮನೆಗೆ ಹೋಗುತ್ತಿದ್ದಳು. ಇಬ್ಬರು ಬಂದೂಕುಧಾರಿಗಳು ಅವಳೂ ಸಹಪಾಠಿಗಳೂ ಇದ್ದ ಬಸ್ಸನ್ನು ಅಡ್ಡಗಟ್ಟಿ ನಿಲ್ಲಿಸಿದರು. ಒಳಗೆ ನುಗ್ಗಿದವರೇ ಅವಳನ್ನು ಕೇಳಿದರು. ಅವಳ ತಲೆಗೆ ಗುಂಡಿಕ್ಕಿದರು. ಸ್ವಾಟ್ ಕಣಿವೆಯಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ನಿಷೇಧಿಸಲು ತಾಲಿಬಾನ್ ಪ್ರಯತ್ನಿಸುತ್ತಿದ್ದಾಗ, ಅದರ ವಿರುದ್ಧ ಪ್ರಬಲವಾಗಿ ದನಿಯೆತ್ತಿದ ಹುಡುಗಿ ಮಲಾಲಾ. ಆ ಹೋರಾಟದಿಂದಾಗಿಯೇ ಗುಂಡೇಟು ತಿಂದಾಗ ಅವಳಿಗಿನ್ನೂ ಹದಿನೈದು ವರ್ಷ.
ಪರಿಚಯ
ಬದಲಾಯಿಸಿಮಲಾಲಾ ಯೂಸಫ್‌ಜಾಯ್ ಶಾಲಾ ಮಾಸ್ತರರ ಮಗಳು. ಅಪ್ಪ ಮಗಳಲ್ಲಿ ಶಿಕ್ಷಣ ಪ್ರೀತಿಯನ್ನು ಬಿತ್ತಿದ್ದ. ಪಾಕಿಸ್ತಾನದ ಸ್ವಾಟ್ ಕಣಿವೆಯಲ್ಲಿ 2009ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗ ಹೆಣ್ಣುಮಕ್ಕಳ ಶಿಕ್ಷಣವನ್ನು ನಿಷೇಧಿಸಿತು. ಶಾಲೆಗಳ ಮೇಲೆ ನೂರಾರು ಬಾಂಬ್‌ಗಳನ್ನು ಹಾಕಿಸಿತು.
ಶಾಲಾ ಜೀವನ
ಬದಲಾಯಿಸಿತಾಲಿಬಾನ್ ಆಡಳಿತಕ್ಕೆ ಬಂದ ಮೇಲೆ, ಬಿಬಿಸಿ ಉರ್ದು ವೆಬ್‌ಸೈಟ್ ಶಾಲಾ ಬಾಲಕಿಯಿಂದ ಅಲ್ಲಿನ ಆಡಳಿತ ವೈಖರಿಯಿಂದ ಆಗಿರುವ ಪರಿಣಾಮಗಳ ಕುರಿತು ಬೇನಾಮಿ ಬ್ಲಾಗ್ ಒಂದನ್ನು ಬರೆಸಲು ತೀರ್ಮಾನಿಸಿತು. ಸ್ಥಳೀಯ ಶಾಲೆಯೊಂದನ್ನು ವೆಬ್‌ಸೈಟ್ ಸಂಪರ್ಕಿಸಿದಾಗ ಜಿಯಾಉದ್ದೀನ್ ಯೂಸಫ್‌ಜಾಯ್ ಸಂಭವನೀಯ ವಿದ್ಯಾರ್ಥಿನಿಯರ ಹೆಸರುಗಳನ್ನು ಸೂಚಿಸಿದರು. ಅವರು ಸೂಚಿಸಿದ ವಿದ್ಯಾರ್ಥಿನಿಯರು ಹೆದರಿ ಹಿಂದೆ ಸರಿದರು. ಆಗ ಅವರು 11 ವರ್ಷದ ತಮ್ಮ ಮಗಳನ್ನೇ ಆ ಕೆಲಸ ಮಾಡಲು ಪ್ರೇರೇಪಿಸಿದರು.
ಬ್ಲಾಗ್ ಬರೆವಣಿಗೆ
ಬದಲಾಯಿಸಿ2009ರ ಜನವರಿಯಿಂದ ಮಾರ್ಚ್‌ವರೆಗೆ ಮಲಾಲಾ ‘ಗುಲ್ ಮಕೈ’ ಎಂಬ ಹೆಸರಿನಲ್ಲಿ ಬ್ಲಾಗ್ ಬರೆದಳು. ಮಾಧ್ಯಮದಲ್ಲಿ ಅದಕ್ಕೆ ವ್ಯಾಪಕ ಪ್ರಚಾರ ಸಿಕ್ಕಿತು. ನ್ಯೂಯಾರ್ಕ್ ಟೈಮ್ಸ್ ಆ ಅಪ್ಪ–ಮಗಳ ಕುರಿತು ಒಂದು ಸಾಕ್ಯ್ಷಚಿತ್ರವನ್ನೇ ತಯಾರಿಸಿತು. ಕ್ರಮೇಣ ಅವಳು ಟೀವಿ ವಾಹಿನಿಗಳಲ್ಲಿ ಕಾಣಿಸಿಕೊಳ್ಳಲಾ ರಂಭಿ ಸಿದಳು. ಬಾಲಕಿಯ ಶಿಕ್ಷಣ ಹಕ್ಕಿನ ಬಗೆಗೆ ನಿರ್ಭಿಡೆಯಿಂದ ಮಾತನಾಡತೊಡಗಿದಳು. ಡಿಸೆಂಬರ್ 2011ರಲ್ಲಿ ಪಾಕಿಸ್ತಾನವು ಮೊದಲ ‘ರಾಷ್ಟ್ರೀಯ ಯುವ ನಾಯಕಿ’ ಶಾಂತಿ ಪ್ರಶಸ್ತಿಯನ್ನು ನೀಡಿ ಅವಳನ್ನು ಗೌರವಿಸಿತು.
ಅವಳ ಜನಪ್ರಿಯತೆ ಹೆಚ್ಚಾದಂತೆ ತಾಲಿಬಾನ್ ಜನರು ಕೆರಳಿದರು. ಮಲಾಲಾ ಹಾಗೂ ಅವಳ ತಂದೆಗೆ ಜೀವ ಬೆದರಿಕೆ ಒಡ್ಡಿದರು. ಕೊನೆಗೆ ಶಾಲಾ ಬಸ್‌ನಲ್ಲಿ ಅವಳ ಮೇಲೆ ದಾಳಿ ಇಟ್ಟರು. ದಿಟ್ಟ ಹುಡುಗಿಗೆ ಗುಂಡೇಟು ಬಿದ್ದಮೇಲೆ ಇಂಗ್ಲೆಂಡ್‌ಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಯಿತು. ಪವಾಡಸದೃಶ ರೀತಿಯಲ್ಲಿ ಅವಳು ಪಾರಾದಳು.
ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿ
ಬದಲಾಯಿಸಿಕೊಲೆಯ ಯತ್ನದಿಂದ ಮಲಾಲಾ ತನ್ನ ಹೋರಾಟದ ವಿಷಯದಲ್ಲಿ ಇನ್ನಷ್ಟು ಗಟ್ಟಿಯಾದಳು. ಶಾಂತಿಯುತವಾಗಿಯೇ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹೋರಾಡುವುದನ್ನು ಮುಂದುವರಿಸಿದಳು. ಇಡೀ ಜಗತ್ತಿನ ಹೃದಯವನ್ನು ಅವಳು ಗೆದ್ದಳು. ವಿಶ್ವಸಂಸ್ಥೆಯಲ್ಲಿ ಅವಳು ಭಾಷಣ ಮಾಡಿದಾಗ ಎಲ್ಲರೂ ಎದ್ದುನಿಂತು ಕರತಾಡನ ಮಾಡಿ ಅವಳಿಗೆ ಮೆಚ್ಚುಗೆ ಸೂಚಿಸಿದರು. ಮಕ್ಕಳಿಗಾಗಿ ನೀಡುವ ಅಂತರರಾಷ್ಟ್ರೀಯ ಶಾಂತಿ ಪ್ರಶಸ್ತಿಯ ಗೌರವವು ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಕೈಲಾಶ್ ಸತ್ಯಾರ್ಥಿಯ ಜೊತೆ ಅವಳಿಗೂ ಸಂದಿತು. ‘ಐ ಆ್ಯಮ್ ಮಲಾಲಾ’ ಎಂಬ ಆತ್ಮಕಥೆಯನ್ನು ಅವಳು ಬರೆದಿದ್ದು, ಅದು ಅನೇಕರಿಗೆ ಸ್ಫೂರ್ತಿದಾಯಕವಾಗಿದೆ. ಅತಿ ಹೆಚ್ಚು ಜನಪ್ರಿಯ ಯುವತಿ ಅವಳಾಗಿದ್ದಾಳೆ.
- Bschandrasgr ೦೯:೪೦, ೨೯ ಡಿಸೆಂಬರ್ ೨೦೧೪ (UTC)/ಸದಸ್ಯ:Bschandrasgr