ಚರ್ಚೆಪುಟ:ಬಿ.ಎನ್.ರಾವ್

  • (ಲೇಖನದ ಆಧಾರಕ್ಕೆ)

ಬೆನಗಲ್ ನರಸಿಂಗ ರಾಯರ ಸ್ಮರಣೆ ಬಾರದೇ?

ಬದಲಾಯಿಸಿ
  • ಕಳೆದ ತಿಂಗಳು ಮುಂಬೈನ ಡಾ. ಬಿ.ಆರ್. ಅಂಬೇಡ್ಕರ್ ಸ್ಮಾರಕದ ಶಂಕುಸ್ಥಾಪನೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 26ನ್ನು ಸಂವಿಧಾನ ದಿನವನ್ನಾಗಿ ಆಚರಿಸುವ ಸರ್ಕಾರದ ತೀರ್ಮಾನವನ್ನು ಪ್ರಕಟಿಸಿದ್ದರು. ಅಂತೆಯೇ ಕಳೆದವಾರ ಪ್ರಥಮ ‘ಸಂವಿಧಾನ ದಿನ’ದ ಆಚರಣೆಯೂ ನಡೆಯಿತು. ‘ಸಂವಿಧಾನ ದಿನ’ದ ಆಚರಣೆಗೆ ಕೇಂದ್ರ ಸರ್ಕಾರ ಕೊಟ್ಟ ಕಾರಣ, ಭಾರತದಲ್ಲಿ ಕಾನೂನು ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಇತರರಿಗೆ ಸಂವಿಧಾನದ ಬಗ್ಗೆ ಇರುವ ತಿಳಿವಳಿಕೆ ಕಡಿಮೆ. ಮುಖ್ಯವಾಗಿ ಶಾಲೆಯ ವಿದ್ಯಾರ್ಥಿಗಳಿಗಾದರೂ ಸಂವಿಧಾನದ ಹಿರಿಮೆ, ಅದರ ತಿರುಳು ಮನವರಿಕೆ ಮಾಡಿಕೊಡಬೇಕಾದ ಅಗತ್ಯ ಇದೆ ಎನ್ನುವುದು.
  • ಆಶಯವೇನೋ ಒಪ್ಪತಕ್ಕದ್ದೇ. ಪ್ರಪಂಚದ ಅತಿದೊಡ್ಡ ಸಂವಿಧಾನ ನಮ್ಮದೆಂದು ಬೀಗುವ ನಾವು, ಸಂವಿಧಾನದ ಕುರಿತು ನಾಲ್ಕು ವಾಕ್ಯ ಹೇಳುವುದಕ್ಕೂ ತಡವರಿಸುತ್ತೇವೆ. ಭಾರತದ ಸಂವಿಧಾನ ಎಂದರೆ ಅಂಬೇಡ್ಕರ್ ಪ್ರತಿಮೆಯಲ್ಲಿ, ಡಾ.ಬಿ.ಆರ್. ಅಂಬೇಡ್ಕರ್ ಅವರು ತಮ್ಮ ಎಡಗೈನಲ್ಲಿ ಹಿಡಿದುಕೊಂಡಿರುವ ಒಂದು ಪುಸ್ತಕವಾಗಿ ಮಾತ್ರ ನಮ್ಮಲ್ಲಿ ಬಹುತೇಕರಿಗೆ ಸಂವಿಧಾನ ಪರಿಚಯವಿದ್ದರೆ ಅಚ್ಚರಿಯೇನಿಲ್ಲ. ಏಳೆಂಟು ವರ್ಷಗಳ ಹಿಂದೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಂವಿಧಾನವನ್ನು ಪರಿಚಯಿಸುವ ಯೋಜನೆ ಜಾರಿಗೆ ತಂದಿತ್ತು.
  • ಅದರಿಂದ ಆದ ಉಪಯೋಗವೆಂದರೆ, ಕೆಲವು ಅರೆಕಾಲಿಕ ಉಪನ್ಯಾಸಕ ಹುದ್ದೆಗಳು ಸೃಷ್ಟಿಯಾದವು. ಹಲವರಿಗೆ ನೌಕರಿ ದೊರೆಯಿತು. ಆದರೆ ಆ ಉಪನ್ಯಾಸಕರೂ ಸಂವಿಧಾನದ ಪೀಠಿಕೆಯ ಆಚೆಗೆ ಏನನ್ನೂ ವಿವರಿಸಲಾಗದ ಸ್ಥಿತಿಯಲ್ಲಿದ್ದರು! ಹಾಗಾಗಿ ಮುಂದಿನ ದಿನಗಳಲ್ಲಾದರೂ ‘ಸಂವಿಧಾನ ದಿನ’ ಅದರ ಆಶಯಕ್ಕನುಗುಣವಾಗಿ ಅನುಷ್ಠಾನಗೊಂಡರೆ ಉತ್ತಮವೇ. ಅದಿರಲಿ, ಅಮೆರಿಕದ ಖ್ಯಾತ ಇತಿಹಾಸತಜ್ಞ ಗ್ರಾನ್ವಿಲ್ ಆಸ್ಟಿನ್ ‘The Indian Constitution: Cornerstone of a Nation’ ಎಂಬ ಕೃತಿಯಲ್ಲಿ, ಭಾರತ ಸಂವಿಧಾನ ರಚನೆಗೆ ಮುಖ್ಯ ಕೊಡುಗೆ ನೀಡಿದ 21 ಜನರನ್ನು ಗುರುತಿಸುತ್ತಾರೆ. ಅದರಲ್ಲಿ ಏಳು ಮಂದಿಯ ಹೆಸರು ನಮಗೆ ಚಿರಪರಿಚಿತ.
  • ಡಾ. ಬಿ.ಆರ್ ಅಂಬೇಡ್ಕರ್, ಆಚಾರ್ಯ ಕೃಪಲಾನಿ, ಪಂಡಿತ್ ನೆಹರೂ, ಪಂಡಿತ್ ಜಿ.ಬಿ. ಪಂತ್, ಮೌಲಾನಾ ಆಜಾದ್, ಸರ್ದಾರ್ ಪಟೇಲ್ ಮತ್ತು ಡಾ.ರಾಜೇಂದ್ರ ಪ್ರಸಾದ್. ಆದರೆ ಉಳಿದ 14 ಮಂದಿಯ ಕೊಡುಗೆಯೂ ಮಹತ್ವದ್ದೇ. ಅದರಲ್ಲೂ ಮುಖ್ಯವಾಗಿ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಬೆನಗಲ್ ನರಸಿಂಗ ರಾವ್ ಮತ್ತು ಕೆ.ಎಂ ಮುನ್ಷಿ ಸಂವಿಧಾನ ರಚನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು. ಮೂರು ಅವಧಿಗೆ ಮದ್ರಾಸಿನ ಅಡ್ವೊಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದ ಅಲ್ಲಾಡಿಯವರನ್ನು ಖುದ್ದು ನೆಹರೂ ಸಾಂವಿಧಾನಿಕ ಸಭೆಯ ಭಾಗವಾಗುವಂತೆ ವಿನಂತಿಸಿಕೊಂಡಿದ್ದರು.
  • ಕೆ.ಎಂ ಮುನ್ಷಿ, ಸಂವಿಧಾನದ ವಿವಿಧ ಆಯಾಮಗಳ ಕುರಿತು ಚರ್ಚಿಸಲು ರಚಿಸಲಾಗಿದ್ದ 11 ಉಪಸಮಿತಿಗಳಲ್ಲಿ ಸ್ಥಾನ ಪಡೆದಿದ್ದರು. ಬೇರಾರೂ ಇಷ್ಟು ಉಪಸಮಿತಿಗಳಿಗೆ ನೇಮಕವಾಗಿರಲಿಲ್ಲ ಎನ್ನುವುದೇ ಮುನ್ಷಿ ಅವರ ಪಾಂಡಿತ್ಯಕ್ಕೆ ದ್ಯೋತಕ. ಸಂವಿಧಾನದ ಮೂಲ ಕರಡು ರಚಿಸಿದ ಬೆನಗಲ್ ನರಸಿಂಗ ರಾವ್, ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತ ನ್ಯಾಯಶಾಸ್ತ್ರಜ್ಞ ಎನಿಸಿಕೊಂಡವರು. ಸಾಂವಿಧಾನಿಕ ಸಭೆಯ ಅಧ್ಯಕ್ಷರಾಗಿದ್ದ, ಪ್ರಥಮ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರಪ್ರಸಾದ್ ‘India's Constitution in the Making’ ಕೃತಿಗೆ ಮುನ್ನುಡಿ ಬರೆಯುತ್ತಾ ‘If Dr. B.R Ambedkar was the skillful pilot of the Constitution, Sir B.N Rau was the person who visualized the plan and laid its foundation’ ಎಂದಿದ್ದಾರೆ.
  • ‘ನನಗೆ ಸಂದ ಕೀರ್ತಿಯ ದೊಡ್ಡಪಾಲು ಬಿ.ಎನ್. ರಾವ್ ಅವರಿಗೆ ಸಲ್ಲಬೇಕು’ ಎಂಬ ಅಂಬೇಡ್ಕರರ ಮಾತು ಲೋಕಸಭೆಯ ಕಡತಗಳಲ್ಲಿ ದಾಖಲಾಗಿದೆ. ಈ ಮಾತು ಭಾರತ ಸಂವಿಧಾನ ರಚನೆಯಲ್ಲಿ ಬಿ.ಎನ್. ರಾವ್ ವಹಿಸಿದ ಪಾತ್ರವನ್ನು ತಿಳಿಸುತ್ತದೆ. ಭಾರತದ ಸಂವಿಧಾನ ರಚನೆಗೆ ನೆರವಾದದ್ದನ್ನು ಹೊರತುಪಡಿಸಿಯೂ ಬೆನಗಲ್ ಸಾಧನೆಯ ಪಟ್ಟಿ ದೊಡ್ಡದೇ ಇದೇ. ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಬೆನಗಲ್ ನರಸಿಂಗ ರಾವ್, ಕರ್ನಾಟಕದವರು ಎನ್ನುವುದು ನಮಗೆ ಹೆಮ್ಮೆ ಎನಿಸಬಹುದಾದ ಸಂಗತಿ. ಉಡುಪಿ ಬಳಿಯ ಬೆನಗಲ್ ಎಂಬ ಕುಗ್ರಾಮದಲ್ಲಿ 1887ರ ಫೆಬ್ರುವರಿ 26ರಂದು ಜನಿಸಿದ ರಾವ್, ಮಂಗಳೂರಿನ ಕೆನರಾ ಶಾಲೆಯಲ್ಲಿ ಕಲಿತು, ಇಂಗ್ಲಿಷ್, ಗಣಿತ ಮತ್ತು ಸಂಸ್ಕೃತ ವಿಷಯಗಳನ್ನು ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಭ್ಯಾಸ ಮಾಡಿ, ಭಾರತ ಸರ್ಕಾರದ ವಿದ್ಯಾರ್ಥಿವೇತನದೊಂದಿಗೆ ಇಂಗ್ಲೆಂಡಿಗೆ ತೆರಳಿ ಕೇಂಬ್ರಿಜ್‌ ಕಾಲೇಜಿನಲ್ಲಿ ಪದವಿ ಪಡೆದು ನಂತರ ಇಂಡಿಯನ್ ಸಿವಿಲ್ ಸರ್ವೀಸ್ ಸೇರಿದವರು.
  • ಹಾಗೆ ನೋಡಿದರೆ, ಬಿ.ಎನ್. ರಾವ್ ಅವರದ್ದು ಸಾಧಕರ ಕುಟುಂಬ. ತಂದೆ ಬೆನಗಲ್ ರಾಘವೇಂದ್ರರಾವ್ ಪ್ರಸಿದ್ಧ ವೈದ್ಯರಾದರೆ, ಅಣ್ಣ ಸಂಜೀವರಾವ್ ಶ್ರೇಷ್ಠ ಶಿಕ್ಷಣ ತಜ್ಞ ಎನಿಸಿಕೊಂಡು ಇಂಡಿಯನ್ ಎಜುಕೇಷನ್ ಸರ್ವೀಸ್‌ನಲ್ಲಿ ಸೇವೆ ಸಲ್ಲಿಸಿದವರು. ಬಿ.ಎನ್. ರಾವ್ ಅವರಿಗಿಂತ ಒಂದು ವರ್ಷ ಕಿರಿಯರಾಗಿದ್ದ ಬೆನಗಲ್ ರಾಮರಾವ್, ಸಿವಿಲ್ ಸರ್ವೀಸ್‌ನಲ್ಲಿ ಸೇವೆ ಸಲ್ಲಿಸಿ, ಕೊನೆಗೆ ಭಾರತೀಯ ರಿಸರ್ವ್ ಬ್ಯಾಂಕಿನ ಗೌವರ್ನರ್ ಆಗಿ ನಿವೃತ್ತರಾದರು. ಕಿರಿಯ ತಮ್ಮ ಶಿವರಾವ್, ಕಾರ್ಮಿಕ ಚಳವಳಿಗಳ ಮೂಲಕ ರಾಜಕೀಯದಲ್ಲಿ ಸಕ್ರಿಯರಾಗಿ ಮಂಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿ, ಮದ್ರಾಸ್ ಪ್ರಾಂತ್ಯದಲ್ಲಿ ರಾಜಾಜಿ ಸಂಪುಟದಲ್ಲಿ ಮಂತ್ರಿಗಳಾಗಿದ್ದ, ಶಿವರಾಮ ಕಾರಂತರ ಅಣ್ಣ ಕೋಟ ರಾಮಕೃಷ್ಣ ಕಾರಂತರ ವಿರುದ್ಧ ಜಯಗಳಿಸಿದವರು. ‘ದಿ ಹಿಂದೂ’ ಪತ್ರಿಕೆಯಲ್ಲಿ ಪತ್ರಕರ್ತರಾಗಿಯೂ ದುಡಿದವರು.
  • ಬಿ.ಎನ್. ರಾವ್ ಐಸಿಎಸ್ ಅಧಿಕಾರಿಯಾಗಿ ಮೊದಲ ಹದಿನಾಲ್ಕು ವರ್ಷ ಅವಿಭಜಿತ ಬಂಗಾಲದಲ್ಲಿ ಸೇವೆ ಸಲ್ಲಿಸುವಾಗ ನ್ಯಾಯಶಾಸ್ತ್ರ ಅವರನ್ನು ಸೆಳೆಯುತ್ತಿತ್ತು. ಅಭ್ಯಾಸವೂ ಸಾಗಿತು. ಜಿಲ್ಲಾ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗುವ ಅವಕಾಶ ಒದಗಿತು. ಬ್ರಿಟಿಷ್ ಸರ್ಕಾರ, ಭಾರತ ಕಾನೂನು ಸಂಹಿತೆಯನ್ನು ಪುನರ್ ವಿಮರ್ಶಿಸುವ ಕೆಲಸವನ್ನು ಬಿ.ಎನ್. ರಾವ್ ಅವರಿಗೆ ವಹಿಸಿತು. ಬೆನಗಲ್ ಅವರ ಸೇವೆ ಗುರುತಿಸಿ ‘ನೈಟ್ ಹುಡ್’ ಬಿರುದನ್ನು ನೀಡಿತು. ಐಸಿಎಸ್ ಸೇವೆಯಿಂದ ನಿವೃತ್ತರಾದ ಬಳಿಕ ಸರ್ ತೇಜ್ ಬಹದ್ದೂರ್ ಸಾಪ್ರು ಅವರ ಒತ್ತಾಸೆಯ ಮೇರೆಗೆ, ಕಾಶ್ಮೀರದ ಪ್ರಧಾನ ಮಂತ್ರಿಯಾಗಿ ನಿಯುಕ್ತಿಗೊಂಡ ಬೆನಗಲ್, ಹದಿನೆಂಟು ತಿಂಗಳ ಕಾಲ ಸೇವೆ ಸಲ್ಲಿಸಿದರು. ಆದರೆ ಆಡಳಿತ ಮತ್ತು ಯೋಜನೆಯ ಅನುಷ್ಠಾನದ ವಿಷಯದಲ್ಲಿ ಅಡ್ಡಿಗಳು ಎದುರಾದಾಗ ರಾಜೀನಾಮೆ ಇತ್ತು ಹೊರಬಂದರು. ನಂತರ 1945ರ ಇಂಡೊ- ಬ್ರಿಟಿಷ್ ಒಪ್ಪಂದದ ಸಲುವಾಗಿ ಕೆಲಸ ಮಾಡಿದರು.
  • ಭಾರತಕ್ಕೆ ಅಧಿಕಾರ ಹಸ್ತಾಂತರಿಸಲು ಬ್ರಿಟಿಷರು ಮುಂದಾದಾಗ ಹೊಸ ಸಂವಿಧಾನ ರಚನೆಯ ಕಾರ್ಯ ಚುರುಕುಗೊಂಡಿತು. ಸಾಂವಿಧಾನಿಕ ಸಭೆ ರೂಪುಗೊಂಡಿತು. ‘ಈ ಸಾಂವಿಧಾನಿಕ ಸಭೆಯ ಮೊದಲ ಕೆಲಸ ಎಂದರೆ ನಮ್ಮದೇ ಆದ ಹೊಸ ಸಂವಿಧಾನದೊಂದಿಗೆ ಭಾರತವನ್ನು ಸ್ವತಂತ್ರಗೊಳಿಸುವುದು’ ಎಂದು ಧ್ಯೇಯನಿಶ್ಚಯ ಭಾಷಣ ಮಾಡಿದ ನೆಹರೂ, ಸಾಮಾಜಿಕ, ಆರ್ಥಿಕ, ರಾಜಕೀಯ ಸಮಾನತೆ, ಸಮಾನ ಅವಕಾಶ ಮತ್ತು ವಾಕ್, ಚಿಂತನೆ, ನಂಬಿಕೆ, ಆರಾಧನೆ, ವೃತ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದರು. ನೆಹರೂ ಭಾಷಣದ ಹಲವು ಅಂಶಗಳು ಮುಂದೆ ಸಂವಿಧಾನದ ಪೀಠಿಕೆಯಲ್ಲಿ ಅಡಕವಾದವು. ನ್ಯಾಯಶಾಸ್ತ್ರದ ಪಾಂಡಿತ್ಯ, ವಿವಿಧ ದೇಶಗಳ ಸಂವಿಧಾನ ಕುರಿತ ಅರಿವು, ಆಡಳಿತದ ಅನುಭವಗಳಿಂದಾಗಿ, ಭಾರತ ಸಂವಿಧಾನ ಸಮಿತಿಯ ಸಲಹೆಗಾರರಾಗುವ ಅವಕಾಶ ಸಹಜವಾಗಿ ಬಿ.ಎನ್. ರಾವ್ ಅವರಿಗೆ ಒದಗಿತು.
  • ನಿಮಗೆ ಗೊತ್ತಿರಬಹುದು, ಭಾರತದ ಸಂವಿಧಾನವನ್ನು ‘Bag of Borrowings’ ಎಂದು ಕರೆಯಲಾಗುತ್ತದೆ. ಭಾರತದ ಸಂವಿಧಾನ, ಹಲವು ಉತ್ತಮ ಅಂಶಗಳನ್ನು ಇತರ ದೇಶಗಳಿಂದ ಎರವಲು ಪಡೆದಿದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಆಶಯಗಳನ್ನು ಫ್ರೆಂಚ್ ಸಂವಿಧಾನದಿಂದ, ಪಂಚ ವಾರ್ಷಿಕ ಯೋಜನೆಯ ಮಾದರಿಯನ್ನು ಸೋವಿಯತ್ ರಷ್ಯಾದಿಂದ, ಆಡಳಿತ ನಿರ್ದೇಶನಾ ತತ್ವಗಳನ್ನು ಐರ್ಲೆಂಡ್ ಸಂವಿಧಾನದಿಂದ, ಸರ್ವೋಚ್ಚ ನ್ಯಾಯಾಲಯದ ನಡಾವಳಿಯ ನಿಯಮಗಳನ್ನು ಜಪಾನಿನಿಂದ ಪಡೆದುಕೊಂಡಿದೆ. ಹಲವು ದೇಶಗಳ ಸಂವಿಧಾನವನ್ನು ಅದಾಗಲೇ
  • ಕೂಲಂಕಷವಾಗಿ ಅಧ್ಯಯನ ಮಾಡಿದ್ದ ಬಿ.ಎನ್. ರಾವ್, ಭಾರತ ಸಂವಿಧಾನದ ಮೂಲ ಕರಡನ್ನು ರಚಿಸಿ ಸಾಂವಿಧಾನಿಕ ಸಭೆಯ ಮುಂದಿಟ್ಟರು.

ಬಿ.ಎನ್. ರಾವ್ ಮಂಡಿಸಿದ ಸಂವಿಧಾನದ ಮೂಲ ರಚನೆ 243 ವಿಧಿಗಳನ್ನು, 13 ಅನುಚ್ಛೇದಗಳನ್ನು ಒಳಗೊಂಡಿತ್ತು. ನಂತರ ಬಿ.ಆರ್. ಅಂಬೇಡ್ಕರ್ ಅವರ ಸಮರ್ಥ ಮುಂದಾಳತ್ವದಲ್ಲಿ ‘ಸಂವಿಧಾನ ಕರಡು ರಚನಾ ಸಮಿತಿ’ ಅದನ್ನು ಚರ್ಚೆಗೆ ಒಳಪಡಿಸಿ, ಪರಿಷ್ಕರಿಸಿ ಹಲವು ಹೊಸ ವಿಧಿಗಳನ್ನೂ ಸೇರಿಸಿ, 315 ವಿಧಿಗಳಿರುವ ಸಂವಿಧಾನದ ಮೊದಲ ಕರಡನ್ನು ಸಾಂವಿಧಾನಿಕ ಸಭೆಯ ಮುಂದೆ ಮಂಡಿಸಿತು. ಚರ್ಚೆಗಳು ನಡೆದು ಕೊನೆಗೆ ಅದು ಅಂಗೀಕೃತಗೊಳ್ಳುವಾಗ ಸಂವಿಧಾನದ ವಿಧಿಗಳ ಸಂಖ್ಯೆ 395 ಮುಟ್ಟಿತ್ತು. ಜಗತ್ತಿನ ಅತಿ ದೊಡ್ಡ ಸಂವಿಧಾನ ಎಂಬ ಹೆಗ್ಗಳಿಕೆಗೆ ಭಾರತದ ಸಂವಿಧಾನ ಪಾತ್ರವಾಯಿತು.

  • ಬಿ.ಎನ್. ರಾವ್ ಅಮೆರಿಕ ಸೇರಿದಂತೆ ಹಲವು ದೇಶಗಳ ಸಂವಿಧಾನದ ಬಗ್ಗೆ ನಿಖರವಾಗಿ ಮಾತನಾಡುತ್ತಿದ್ದರು ಎಂಬುದಕ್ಕೆ ಒಂದು ನಿದರ್ಶನವೆಂದರೆ, ಭಾರತ ವಿದೇಶಾಂಗ ಮಂತ್ರಾಲಯದ ಸೆಕ್ರೆಟರಿ ಜನರಲ್ ಆಗಿದ್ದ ಸರ್ ಗಿರಿಜಾ ಶಂಕರ್ ಭಾಜಪೈ ಅವರೊಂದಿಗೆ ಮಾತನಾಡುತ್ತಾ ಅಮೆರಿಕ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಫೆಲಿಕ್ಸ್ ಫ್ರಾಂಕ್ಫರ್ಟರ್ ‘ಒಂದೊಮ್ಮೆ ಅಮೆರಿಕದ ಅಧ್ಯಕ್ಷರು, ಅಮೆರಿಕದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಹುದ್ದೆಗೆ, ಅಮೆರಿಕ ಸಂವಿಧಾನದ ಇತಿಹಾಸ ಮತ್ತು ಕಾರ್ಯವೈಖರಿಯ ಬಗ್ಗೆ ಪಾಂಡಿತ್ಯ ಉಳ್ಳ ನ್ಯಾಯಶಾಸ್ತ್ರಜ್ಞನನ್ನು ಸೂಚಿಸಿ ಎಂದರೆ, ನಾನು ಸರ್ ಬಿ.ಎನ್. ರಾವ್ ಅವರ ಹೆಸರನ್ನೇ ಸೂಚಿಸಬೇಕಾಗುತ್ತದೆ’ ಎಂದಿದ್ದರಂತೆ. ಬೆನಗಲ್ ರಾವ್ ಅವರಿಗೆ ಸಂವಿಧಾನ ರಚನೆಯಲ್ಲಿದ್ದ ಕೌಶಲವನ್ನು ಬರ್ಮಾ ದೇಶ ಕೂಡ ಬಳಸಿಕೊಂಡಿತು. ನಂತರ ರಾವ್, ವಿಶ್ವಸಂಸ್ಥೆಯ ಕಾಯಂ ಭಾರತೀಯ ಪ್ರತಿನಿಧಿಯಾಗಿ ನೇಮಕಗೊಂಡರು.
  • ಅಂತರರಾಷ್ಟ್ರೀಯ ನ್ಯಾಯಾಲಯದ ಮೊದಲ ಭಾರತೀಯ ನ್ಯಾಯಾಧೀಶರಾಗಿ ಹೆಗ್ಗಳಿಕೆಗೆ ಪಾತ್ರರಾದರು. ಗಾಂಧಿ ಮತ್ತು ಐನ್‌ಸ್ಟೀನ್ ಅವರನ್ನು ಆದರ್ಶವಾಗಿ ಒಪ್ಪಿಕೊಂಡಿದ್ದ ರಾವ್, ತಮ್ಮ ಜೀವನದುದ್ದಕ್ಕೂ ತಾವು ನಂಬಿದ್ದ ತತ್ವ ಸಿದ್ಧಾಂತಗಳೊಂದಿಗೆ ರಾಜಿಯಾದವರಲ್ಲ. ಬಿ.ಎನ್. ರಾವ್ ಅವರ ದೇಶಪ್ರೇಮ, ಸಾಮಾಜಿಕ ಬದ್ಧತೆ ಎಷ್ಟು ಉತ್ಕಟವಾಗಿತ್ತೆಂದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೂರನೇ ಅಧ್ಯಕ್ಷರಾಗಿದ್ದ ಬದ್ರುದ್ದೀನ್ ತ್ಯಾಬ್ಜಿ ‘ನಮ್ಮ ಕಾಲದ ಪರಿಪೂರ್ಣ ಭಾರತೀಯ ಯಾರೆಂದು ನನ್ನನ್ನು ಪ್ರಶ್ನಿಸಿದರೆ, ತಟ್ಟನೆ ನೆನಪಾಗುವ ಹೆಸರು ಬೆನಗಲ್ ನರಸಿಂಗ ರಾವ್’ ಎಂದಿದ್ದರು.
  • ಮುಗಿಸುವ ಮುನ್ನ ಒಂದು ಘಟನೆಯನ್ನು ಹೇಳಬೇಕು. 1953ರ ಅಕ್ಟೋಬರ್‌ನಲ್ಲಿ ಬಿ.ಎನ್. ರಾವ್ ತೀವ್ರ ಅನಾರೋಗ್ಯದಿಂದಾಗಿ ಜ್ಯೂರಿಕ್ ಆಸ್ಪತ್ರೆಯಲ್ಲಿದ್ದಾಗ ಅಲ್ಲಿಗೆ ಭೇಟಿಕೊಟ್ಟ ಪಾಕಿಸ್ತಾನದ ಗವರ್ನರ್ ಜನರಲ್ ಗುಲಾಮ್ ಮೊಹಮದ್ ‘Come and be my guest at Karachi. We will look after you. We have no one like you in Pakistan’ ಎಂದಿದ್ದರಂತೆ. ವಿಪರ್ಯಾಸವೆಂದರೆ ಬಿ.ಎನ್. ರಾವ್ ಅವರಂಥ ಓರ್ವ ದೇಶಭಕ್ತ, ಸಂವಿಧಾನದ ಮೂಲ ರಚನೆಯನ್ನು ಕೊಟ್ಟ ಕಾನೂನು ಪಂಡಿತ, ಭಾರತದ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಒಯ್ದ ಪ್ರತಿಭಾವಂತನನ್ನು ವರುಷಗಳು ಕಳೆದಂತೆ ಭಾರತವೇ ಮರೆತುಬಿಟ್ಟಿತು! ಮೊನ್ನೆ ‘ಸಂವಿಧಾನ ದಿನ’ದಂದು ನಮ್ಮ ಸರ್ಕಾರ ನೆಪಕ್ಕಾದರೂ ಅವರನ್ನು ಸ್ಮರಿಸಿದಂತೆ ಕಾಣಲಿಲ್ಲ. ಬಿಡಿ, ಬಿ.ಎನ್. ರಾವ್ ನಮ್ಮ ಉಡುಪಿ ಮೂಲದವರು ಎಂಬ ಕಾರಣಕ್ಕಾದರೂ ನಾವು ಕನ್ನಡಿಗರು ಅವರನ್ನು ಹೆಮ್ಮೆಯಿಂದ ನೆನೆಯೋಣ.(ಸೀಮೋಲ್ಲಂಘನ | ಸುಧೀಂದ್ರ ಬುಧ್ಯ-:Fri, 04/12/2015

www.prajavani.net[[೧]]Bschandrasgr (ಚರ್ಚೆ) ೧೬:೦೬, ೪ ಮೇ ೨೦೧೬ (UTC)

Return to "ಬಿ.ಎನ್.ರಾವ್" page.