ಚರ್ಚೆಪುಟ:ಕಳಸಾ-ಬಂಡೂರಿ ನಾಲಾ ಯೋಜನೆ

ಸಾರ್ವಜನಿಕ ಅಭಿಪ್ರಾಯ ಬದಲಾಯಿಸಿ

  • (ಪದ್ಮರಾಜ ದಂಡಾವತಿ-ಪ್ರಜಾವಾಣಿ)
  • ಅನ್ಯಾಯವನ್ನು ಸಹಿಸಿಕೊಳ್ಳಬಾರದು ಮತ್ತು ಅದನ್ನು ಪ್ರತಿಭಟಿಸಬೇಕು ಎಂಬುದರಲ್ಲಿ ಎರಡು ಅಭಿಪ್ರಾಯ ಇರಲಾರದು. ಆದರೆ, ನಾವು ಈಗ ಪ್ರತಿಭಟಿಸುತ್ತಿರುವ ರೀತಿ ಸರಿಯೇ ಎಂದು ಒಂದು ಸಾರಿ ಪ್ರಶ್ನಿಸಿಕೊಳ್ಳಬೇಕು ಮತ್ತು ನಾವು ಈಗ ಮಾಡುತ್ತಿರುವ ಪ್ರತಿಭಟನೆಯಿಂದ ನಮಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆಯೇ ಎಂದೂ ಕೇಳಿಕೊಳ್ಳಬೇಕು. ನಮಗೆ ತಿಳಿಯದೇ ಇದ್ದರೆ ಯಾರಾದರೂ ತಿಳಿವಳಿಕಸ್ಥರ ಬಳಿಯಾದರೂ ಕೇಳಿ ತಿಳಿದುಕೊಳ್ಳಬೇಕು. ಇನ್ನಷ್ಟು ಲಂಬಿಸದೇ ವಿಷಯಕ್ಕೆ ಬರುವುದಾದರೆ ಮಹಾದಾಯಿ ನದಿ ನೀರಿಗಾಗಿ ಬೇಡಿಕೆ ಇಟ್ಟು ನಾವು ಈಗ ನಡೆಸುತ್ತಿರುವ ಹೋರಾಟಕ್ಕೆ ಒಂದು ದಿಕ್ಕು ಬೇಕಾಗಿದೆ, ಮಾರ್ಗದರ್ಶನ ಬೇಕಾಗಿದೆ. ಈಗ ಅದು ನಡೆಯುತ್ತಿರುವ ರೀತಿ ಸರಿಯಿಲ್ಲ. ಮಹಾದಾಯಿ ನದಿ ನೀರಿಗಾಗಿ ನಡೆಯುತ್ತಿರುವ ಹೋರಾಟದ ಕೇಂದ್ರ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಇದೆ. ಪಕ್ಕದ ಗದಗ ಜಿಲ್ಲೆಯ ನರಗುಂದದಲ್ಲಿಯೂ ಚಳವಳಿಗೆ ಸಾಕಷ್ಟು ಬಲ ಇದೆ. ಸುತ್ತಮುತ್ತಲಿನ ಸವದತ್ತಿ, ರಾಮದುರ್ಗ, ಬಾದಾಮಿ, ಗದಗ, ಧಾರವಾಡ, ಹುಬ್ಬಳ್ಳಿ ಮುಂತಾದ ಊರುಗಳಲ್ಲಿ ಚಳವಳಿಯ ಕಾವು ಇದ್ದರೂ ಅದು ನರಗುಂದ ಹಾಗೂ ನವಲಗುಂದದಲ್ಲಿ ಇರುವಷ್ಟು ಪ್ರಖರವಾಗಿ ಇಲ್ಲ.
  • ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಬಳಿ ಮಲಪ್ರಭಾ ನದಿಗೆ 1973–74ರಲ್ಲಿ ಅಣೆಕಟ್ಟು ಕಟ್ಟಿದ ನಂತರ ಇದುವರೆಗೆ ಮೂರು ಅಥವಾ ನಾಲ್ಕು ಸಾರಿ ಮಾತ್ರ ಅದು ತುಂಬಿದೆ. ಅದರ ಸಾಮರ್ಥ್ಯ 34.34 ಟಿಎಂಸಿ ಅಡಿ. ಕಳೆದ ಅಕ್ಟೋಬರ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುವ ಸಮಯದಲ್ಲಿ ಜಲಾಶಯದಲ್ಲಿ ಇದ್ದ ನೀರಿನ ಪ್ರಮಾಣ ಕೇವಲ 11.42 ಟಿಎಂಸಿ ಅಡಿ. ಕಳೆದ ನಾಲ್ಕು ದಶಕಗಳಲ್ಲಿ ಒಟ್ಟು ಸಾಮರ್ಥ್ಯದ ಸರಾಸರಿ ಶೇಕಡಾ 50ರಷ್ಟು ಪ್ರಮಾಣದಲ್ಲಿ ಮಾತ್ರ ಜಲಾಶಯಕ್ಕೆ ನೀರು ಬಂದಿದೆ. ಕೆಲವು ಸಾರಿ ಅಷ್ಟು ನೀರೂ ಹರಿದು ಬಂದಿಲ್ಲ. ಅಂದರೆ ಒಟ್ಟು ಈ ಯೋಜನೆಯೇ ಒಂದು ರೀತಿಯಲ್ಲಿ ನಿರರ್ಥಕವಾದುದು.
  • ಈಗ ಅದೇ ಮಲಪ್ರಭೆ ಚರಂಡಿ ನೀರಿಗಿಂತ ಕೆಟ್ಟದಾಗಿ ಹರಿಯುತ್ತಿದ್ದಾಳೆ. ನಮ್ಮ ಬೃಹತ್‌ ನೀರಾವರಿ ಯೋಜನೆಗಳು ಹೇಗೆ ನಮ್ಮ ನದಿ ಹರಿವನ್ನು ಹಾಳುಗೆಡವುತ್ತವೆ ಎಂಬುದಕ್ಕೆ ನವಿಲುತೀರ್ಥದ ಬಳಿ ನಿರ್ಮಿಸಿರುವ ಜಲಾಶಯಕ್ಕಿಂತ ಕೆಟ್ಟ ನಿದರ್ಶನ ಇನ್ನೊಂದು ಇರಲು ಸಾಧ್ಯವಿಲ್ಲ.
  • ಅದು ಮುಖ್ಯವಾಗಿ ನೀರಾವರಿ ಉದ್ದೇಶಕ್ಕೆ ನಿರ್ಮಿಸಿದ ಜಲಾಶಯವಾದರೂ ಅದರಿಂದ ಹುಬ್ಬಳ್ಳಿ–ಧಾರವಾಡದಂಥ ದೈತ್ಯ ನಗರಗಳ ಕುಡಿಯುವ ನೀರಿಗೂ ಅದೇ ಜಲಾಶಯದ ನೀರು ಆಧಾರವಾಗಿದೆ. ದಂಡೆಯಲ್ಲಿ ಇರುವ ಇತರ ಊರುಗಳಿಗೂ ಕುಡಿಯಲು ಸಹಜವಾಗಿಯೇ ನದಿಯಲ್ಲಿನ ಚೂರು ಪಾರು ನೀರೇ ಬೇಕಾಗುತ್ತದೆ. ಹೀಗೆ ಜಲಾಶಯದಲ್ಲಿನ ನೀರು ಕುಡಿಯುವ ಉದ್ದೇಶಕ್ಕೆ ಮತ್ತು ಸುತ್ತಮುತ್ತಲಿನ ಕಾರ್ಖಾನೆಗಳಿಗೆ ಬಳಕೆಯಾಗುತ್ತಿರುವುದರಿಂದ ರೈತರಿಗೆ ಮತ್ತಷ್ಟು ಸಮಸ್ಯೆಯಾಗಿದೆ. ಇಂಥ ಸಂದರ್ಭದಲ್ಲಿ ಹುಟ್ಟಿಕೊಂಡುದು ಕಳಸಾ ಬಂಡೂರಿ ನಾಲಾ ಯೋಜನೆ.
  • ಮಹಾದಾಯಿ ನದಿಯ ಹರಿವಿಗೆ ಸಂಬಂಧಿಸಿದಂತೆ ನಾವು ಮೇಲಿನ ರಾಜ್ಯವಾಗಿದ್ದರೂ ಆ ನದಿ ತನ್ನ ಜೀವನದಿಯೂ ಆಗಿರುವುದರಿಂದ ಪಕ್ಕದ, ನದಿ ಹರಿವಿನ ದೃಷ್ಟಿಯಿಂದ ಕೆಳಗಿನ, ಗೋವಾ ರಾಜ್ಯ ಆಕ್ಷೇಪ ಎತ್ತಿದೆ. ಗೋವಾ ರಾಜ್ಯದ ಆಕ್ಷೇಪವನ್ನು ನ್ಯಾಯಮಂಡಳಿ ಎತ್ತಿ ಹಿಡಿದಿದೆ. ಈಗಿನ ಉಗ್ರ ಪ್ರತಿಭಟನೆಯ ಹಿನ್ನೆಲೆಯಿದು.
  • ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಚೇರಿಗಳಿಗೆ ಬೆಂಕಿ ಹಚ್ಚುವವರು, ಪೀಠೋಪಕರಣ ಧ್ವಂಸ ಮಾಡುವವರು, ರಾಜ್ಯ ಬಂದ್‌ ಕರೆ ಕೊಡುವವರು ಒಂದು ಮೂಲಭೂತ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು: ಇಂಥ ಹಿಂಸಾಚಾರದಿಂದ, ಪುಂಡಾಟಿಕೆಯಿಂದ ನಾವು ನ್ಯಾಯವನ್ನು ಗಳಿಸಲು ಸಾಧ್ಯವಿಲ್ಲ. ಅದರಲ್ಲೂ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳು ಇಂಥ ಹಿಂಸಾಚಾರಕ್ಕೆ ಬಗ್ಗುವುದಿಲ್ಲ. 119 ಪುಟಗಳಷ್ಟು ಸುದೀರ್ಘವಾದ ನ್ಯಾಯಮಂಡಳಿ ಆದೇಶವನ್ನು ನಮ್ಮ ಹೋರಾಟಗಾರರು ಯಾರಾದರೂ ಓದಿದ್ದಾರೆಯೋ ಇಲ್ಲವೋ ತಿಳಿಯದು. ಅವರು ಓದಬೇಕು.
ಇನ್ನು ಎರಡು ಅಥವಾ ಮೂರು ವರ್ಷಗಳಲ್ಲಿ ನ್ಯಾಯಮಂಡಳಿಯ ಅಂತಿಮ ಐತೀರ್ಪು ಬರಬಹುದು ಎಂದು ನಿರೀಕ್ಷೆಯಿದೆ. ಅಲ್ಲಿವರೆಗೆ ನಮ್ಮ ವಾದವನ್ನು ಸಮರ್ಥವಾಗಿ ಮಂಡಿಸುವ ಕಡೆಗೆ ನಾವು ಗಮನ ಕೊಡಬೇಕು. ಏಕೆಂದರೆ ನ್ಯಾಯಮಂಡಳಿ ಮುಂದೆ ಈಗ ನಾವು ಮಂಡಿಸಿರುವ ವಾದವನ್ನು ನ್ಯಾಯಮೂರ್ತಿಗಳು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.:(ಪದ್ಮರಾಜ ದಂಡಾವತಿ-ಪ್ರಜಾವಾಣಿ)[[೧]]Bschandrasgr (ಚರ್ಚೆ) ೧೧:೨೦, ೩೧ ಜುಲೈ ೨೦೧೬ (UTC)
Return to "ಕಳಸಾ-ಬಂಡೂರಿ ನಾಲಾ ಯೋಜನೆ" page.