ಚನ್ನರಾಯಪಟ್ಟಣ ತಾಲ್ಲೂಕಿನ ಶಾಸನೋಕ್ತ ಕೆರೆಗಳ ನಿರ್ಮಾಪಕರು

ಸುಮಾರು ಸಾವಿರ ವರ್ಷಗಳ ಹಿಂದೆ ರಾಜರು ಮಾಡಿದ ದಿಗ್ವಿಜಯ, ರಾಜ್ಯ ವಿಸ್ತರಣೆ ಮೊದಲಾದವುಗಳಿಂದ ೨೦-೨೧ನೇ ಶತಮಾನದಲ್ಲಿನ ನಮಗೆ ಎಷ್ಟರ ಮಟ್ಟಿನ ಪ್ರಯೋಜನವಾಗುತ್ತಿದೆಯೋ ಹೇಳುವುದು ಕಷ್ಟ. ಹಾಗೆಯೇ ಅಂದು ಕಟ್ಟಿಸಿದ ದೇವಾಲಯಗಳಿಂದ ಇಂದು ಯಾರು ಮತ್ತು ಎಷ್ಟು ಜನ ಪ್ರಯೋಜನ ಪಡೆಯುತ್ತಿದ್ದಾರೋ ಎಂದು ತಿಳಿಯುವುದೂ ಕಷ್ಟ. ಆದರೆ ಸಾವಿರಾರು ವರ್ಷಗಳ ಹಿಂದೆ ರಾಜರುಗಳು, ಮಂತ್ರಿ-ದಂಡನಾಯಕರುಗಳು, ಅವರ ಕೈಕೆಳಗಿನ ಅಧಿಕಾರಿಗಳು, ಊರ ಗಾವುಂಡರುಗಳು ಮತ್ತು ಶ್ರೀಸಾಮಾನ್ಯರು ಕಟ್ಟಿಸಿದ ಕೆರೆಗಳಿಂದ, ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಈ ನಾಡಿನ ಬಹುಸಂಖ್ಯಾತ ಜನರು ಉಪಯೋಗ ಪಡೆಯುತ್ತಿದ್ದಾರೆ. ಇದು ಇನ್ನು ಮುಂದೆಯೂ ಮುಂದುವರೆಯುತ್ತದೆ. ಅಂತಹ ಮಹನೀಯವಾದ, ಬಹುಜನೋಪಯೋಗಿಯಾದ ಮಹತ್ಕಾರ್ಯಗಳನ್ನು ಮಾಡಿದ ಜನರು ಪ್ರಾತಃಸ್ಮರಣೀಯರಾಗಿದ್ದಾರೆ.
ಶಾಸನಗಳನ್ನು ಮತ್ತು ಒಟ್ಟಾರೆಯಾಗಿ ಇತಿಹಾಸವನ್ನು ಗಮನಿಸಿದಾಗ ಕೆರೆ ಕಟ್ಟಿಸುವುದು ಒಂದು ಪರಂಪರೆಯಂತೆ ಬೆಳೆದುಕೊಂಡು ಬಂದಿರುವುದನ್ನು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ವಿಜಯನಗರದ ಅರಸು ಇಮ್ಮಡಿ ದೇವರಾಯನ ಪ್ರಧಾನಿ ಲಕ್ಷ್ಮೀಧರನ ಶಾಸನದಲ್ಲಿನ ಒಂದು ಪದ್ಯವನ್ನು ಗಮನಿಸಬಹುದಾಗಿದೆ.

ಕೆರೆಯುಂ ಕಟ್ಟಿಸು, ಬಾವಿಯುಂ ಸವೆಸು, ದೇವಾಗಾರಮಂ ಮಾಡಿಸು,
ಸೆರೆಯೊಳ್ ಸಿಕ್ಕಿದನಾಥರಂ ಬಿಡಿಸು, ಮಿತ್ರರ್ಗಿಂಬುಗೆಯ್, ನಂಬಿದ
ರ್ಗ್ಗೆರೆವಟ್ಟಾಗಿರು, ಶಿಷ್ಯರಂ ಪೊರೆ, ಎನ್ನುತ್ತಿಂತೆಲ್ಲವಮಂ ಪಿಂತೆ ತಾ
ನೆರೆದಳ್ ಪಾಲೆರೆವಂದು ತೊಟ್ಟು ಕಿವಿಯೊಳ್ ಲಕ್ಷ್ಮೀಧರಾಮಾತ್ಯನ||

ಇದು ತಾಯಿ ಸಿಂಗಾಂಬಿಕೆ, ಕೇವಲ ಲಕ್ಷ್ಮೀಧರನಿಗೆ ಹೇಳಿದ ಮಾತುಗಳಲ್ಲ. ಅಥವಾ ಸಿಂಗಾಂಬಿಕೆಯೊಬ್ಬಳೇ ಈ ರೀತಿ ಹೇಳುತ್ತಿದ್ದಳು ಎನ್ನುವಂತಿಲ್ಲ. ಕರ್ನಾಟಕದಲ್ಲಿ ಕದಂಬ ದೊರೆಗಳ ಕಾಲದಿಂದಲೂ ಕೆರೆ ಕಟ್ಟಿಸುವಂತಹ ಕೆಲಸ ಮಹತ್ಕಾರ್‍ಯದಂತೆ ಪರಿಗಣಿತವಾಗಿ ನಡೆದುಕೊಂಡು ಬಂದಿರುವುದನ್ನು ಗಮನಿಸಿದರೆ, ನಾಡಿನ ಎಲ್ಲಾ ತಾಯಂದಿರ ಪ್ರತಿನಿಧಿಯಾಗಿ ಸಿಂಗಾಂಬಿಕೆ ಈ ಮಾತುಗಳನ್ನು ಆಡಿದ್ದಾಳೆ ಎನ್ನಬಹುದು. ವಿಜಯನಗರದ ಕಾಲಕ್ಕಂತೂ ನೀರಾವರಿಗೆ ಕೊಟ್ಟ ಪ್ರಾಮುಖ್ಯತೆಯನ್ನು ಗಮನಿಸಿದರೆ ಅಂದಿನ ಎಲ್ಲಾ ತಾಯಂದಿರಿಗೂ ತಮ್ಮ ಮಕ್ಕಳು ಕೆರೆಯನ್ನು ಕಟ್ಟಿಸುವಂತಹ ಮಹತ್ಕಾರ್ಯವನ್ನು ಮಾಡಬೇಕೆಂಬ ಹಂಬಲವಿದ್ದಿರಬೇಕು ಅನ್ನಿಸುತ್ತದೆ. ಈ ದೃಷ್ಟಿಯಿಂದ ಅಂತಹ ಕೆಲವರಾದರೂ ಮಹನೀಯರ ಬಗ್ಗೆ ಸಾಧ್ಯವಾದಷ್ಟು ವಿಷಯಗಳನ್ನು ತಿಳಿಯಬೇಕೆಂಬುದು ಈ ಲೇಖನದ ಉದ್ದೇಶವಾಗಿದೆ.
ನನ್ನ ಅಧ್ಯಯನದ ವ್ಯಾಪ್ತಿಯಲ್ಲಿ ಎಪಿಗ್ರಾಫಿಯಾ ಕರ್ನಾಟಿಕ ಸಂಪುಟ ಎರಡು ಮತ್ತು ಬಾ.ರಾ.ಗೋಪಾಲ ಅವರ ಸಂಪಾದಕತ್ವದಲ್ಲಿ ಬಂದಿರುವ ಸಂಪುಟ ಹತ್ತರಲ್ಲಿನ ಚೆನ್ನರಾಯಪಟ್ಟಣ ತಾಲ್ಲೂಕಿನ ಶಾಸನಗಳು ಮಾತ್ರ ಬರುತ್ತವೆ. ಶಾಸನಗಳಲ್ಲಿ ಬರುವ ಕೆರೆಗಳನ್ನು ಕಟ್ಟಿಸಿದ ಮಹನೀಯರ ವ್ಯಕ್ತಿಚಿತ್ರ ಮತ್ತು ಅವರ ವಂಶಾವಳಿಯನ್ನು ಸಾಧ್ಯವಾದಷ್ಟು ಮಟ್ಟಿಗೆ ಗ್ರಹಿಸಲು ಪ್ರಯತ್ನಿಸಿದ್ದೇನೆ. ಇಲ್ಲಿ ಕೆರೆಗಳ ಗಾತ್ರ, ವಿಸ್ತೀರ್ಣ, ತಾಂತ್ರಿಕತೆ ಮುಂತಾದವುಗಳ ಕಡೆಗೆ ಗಮನಹರಿಸದೆ, ಅವುಗಳನ್ನು ಕಟ್ಟಿದವರ ಮೇಲೆಯೇ ಹೆಚ್ಚು ಕೇಂದ್ರೀಕರಿಸಲಾಗಿದೆ. ಇಲ್ಲಿ ಸಿಗುವ ಕೆರೆ ನಿರ್ಮಾಪಕರುಗಳಲ್ಲಿ ಅರಸ-ಅರಸಿಯರು, ದಂಡನಾಯಕರುಗಳು, ಅವರುಗಳ ತಾಯಿ ಅಥವಾ ಹೆಂಡತಿ ಅಥವಾ ಸಹೋದರಿಯರು ಅಲ್ಲದೆ ಜನಸಾಮಾನ್ಯರೂ ಇದ್ದಾರೆ. ಅವರ ಸ್ವಂತ ವಿಚಾರಗಳು, ಅವರ ಒಡಹುಟ್ಟಿದವರ ವಿಚಾರಗಳು ಮತ್ತು ಅವರುಗಳ ಇನ್ನಿತರ ಸತ್ಕಾರ್ಯಗಳನ್ನು ಗುರುತಿಸಲು ಪ್ರಯತ್ನಿಸಿರುತ್ತೇನೆ.
ಈ ಎರಡೂ ಸಂಪುಟಗಳಲ್ಲಿರುವ ಒಟ್ಟು ಶಾಸನಗಳು ೭೧೬. ಇಷ್ಟೂ ಶಾಸನಗಳ ಅವಲೋಕನದಿಂದ ಸಿಕ್ಕ ಕೆರೆಗಳು ಸುಮಾರು ೯೫. ಇಲ್ಲಿನ ಬಹುತೇಕ ಕೆರೆಗಳನ್ನು ವಿವಿಧ ಕಾರ್ಯನಿಮಿತ್ತವಾಗಿ ಬಿಟ್ಟ ದಾನ ದತ್ತಿಗಳಿಗೆ ಸಂಬಂಧಪಟ್ಟ ಜಮೀನುಗಳಿಗೆ ಗಡಿಯ ಗುರುತಾಗಿ ಬಳಸಿಕೊಳ್ಳಲಾಗಿದೆ. ಅವುಗಳನ್ನು ಕಟ್ಟಿಸಿದವರು ಯಾರು? ಎಂಬ ವಿಚಾರಗಳಿಗೆ ಅಲ್ಲಿ ಉತ್ತರವಿಲ್ಲ. ಆದರೆ ಶಾಸನಗಳಲ್ಲಿ ಉಲ್ಲೇಖಿತವಾಗಿರುವ ಕೆರೆಗಳು ಆಯಾಯ ಶಾಸನಗಳಿಗಿಂತ ಹಿಂದಿನವು ಎಂಬುದು ನಿರ್ವಿವಾದವಾದ ಸಂಗತಿ. ಎರಡೂ ಸಂಪುಟಗಳ ಶಾಸನಗಳಲ್ಲಿ ಉಲ್ಲೇಖಿತವಾಗಿರುವ ಎಲ್ಲಾ ಕೆರೆಗಳನ್ನು ಅಧ್ಯಯನದ ದೃಷ್ಟಿಯಿಂದ ನಾಲ್ಕು ವಿಭಾಗಗಳನ್ನು ಮಾಡಿಕೊಳ್ಳಬಹುದು.
೧ ಕೆರೆ ಕಟ್ಟಿಸಿದವರ ವಿಚಾರಗಳನ್ನು ತಿಳಿಸುವಂತವುಗಳು
೨ ಒಂದು ಪಂಗಡ ಅಥವಾ ವರ್ಗ ಅಥವಾ ಜಾತಿ ಸೂಚಕವಾದ ಕೆರೆಗಳು
೩ ವ್ಯಕ್ತಿಯ ಹೆಸರಿನಿಂದ ಸೂಚಿತವಾಗಿರುವಂತವುಗಳು
೪ ಕೇವಲ ಗಡಿಯ ಗುರುತಾಗಿ, ಊರಿನ ಹೆಸರಿನಿಂದ ಅಥವಾ ಭೌಗೋಳಿಕ ಪರಿಸರದಿಂದ ಸೂಚಿತವಾಗಿರುವಂತವುಗಳು.

೧ ಕೆರೆಕಟ್ಟಿಸಿದವರ ವಿಚಾರಗಳನ್ನು ತಿಳಿಸುವಂತವುಗಳು
ಈ ವಿಭಾಗದಲ್ಲಿ ಸುಮಾರು ೧೫ ಕೆರೆಗಳಷ್ಟೆ ಸಿಗುತ್ತವೆ. ಕೆರೆ ಕಟ್ಟಿಸಿದವರ ಪಟ್ಟಿಯಲ್ಲಿ ಹೊಯ್ಸಳ ವಿಷ್ಣುವರ್ಧನನ ರಾಣಿ ಶಾಂತಲೆ, ಹೊಯ್ಸಳ ದಂಡನಾಯಕರುಗಳಾದ ಗಂಗರಾಜ, ಕೇಶೀರಾಜ, ಪೆರುಮಾಳೆ, ಅಧಿಕಾರಿಗಳಾದ ಪಸಾಯಿತ ಬೆಳ್ಳಪ್ಪನಾಯಕ, ಮಯಿಲೆನಾಯಕ, ಕಮ್ಮಟದ ಬಸವಣ್ಣ ಇವರುಗಳಲ್ಲದೆ ಲಕ್ಕವ್ವೆ, ಸಾತವ್ವೆ, ಜಾಕಬ್ಬೆಯಂತಹ ಮಹಿಳೆಯರು, ಉತ್ತಮಗಾವುಂಡ, ಬಾಚರಸ, ನಾಗದೇವಹೆಗ್ಗಡೆ ಮೊದಲಾದ ಶ್ರೀಸಾಮಾನ್ಯರೂ ಇದ್ದಾರೆ. ಇದು, ಈ ಅಧ್ಯಯನದ ಪ್ರಮುಖ ವಿಭಾಗವಾದ್ದರಿಂದ ಕೆರೆಗಳನ್ನು ಕಟ್ಟಿಸಿದ ಮಹನೀಯರ ವಿಚಾರಗಳನ್ನು ವಿವರವಾಗಿ ವಿವೇಚಿಸಲಾಗುವುದು.

ಉತ್ತಮಗಾವುಣ್ಣ (೮-೯ನೆಯ ಶತಮಾನ)
ಬಸವನಪುರ ಗ್ರಾಮದ, ಸುಮಾರು ೮-೯ನೆಯ ಶತಮಾನಕ್ಕೆ ಸೇರಿದ ಒಂದು ಶಾಸನ೩ ಗಂಗದೊರೆ ಎರೆಯಪ್ಪರಸನನ್ನು, ಮತ್ತು ಅವನ ಮಗ ಗೋವಿಂದರಸನನ್ನು ಉಲ್ಲೇಖಿಸುತ್ತದೆ. ಚೆನ್ನರಾಯಪಟ್ಟಣ ತಾಲ್ಲೂಕಿನ ಶಾಸನಗಳಲ್ಲಿ ಕೆರೆಯ ನಿರ್ಮಾತೃವನ್ನು ಉಲ್ಲೇಖಿಸುವ ಅತ್ಯಂತ ಪ್ರಾಚೀನ ಶಾಸನ ಇದಾಗಿದೆ. ಉತ್ತಮಗಾವುಣ್ಡ ಎಂಬುವವನು ಕೆರೆ ಕಟ್ಟಿಸಿದ್ದನ್ನು ತಿಳಿದು, ಅಲ್ಲಿಗೆ ಬಂದ ಗಂಗದೊರೆ ಎರೆಯಪ್ಪರಸರ ಮಗ ಗೋವಿಂದರಸನು, ಕೆರೆಯ ಉಸ್ತುವಾರಿಗೆಂದು ಆರು ಖಂಡುಗ ಭೂಮಿಯನ್ನು ಜಮ್ಬೂರಿನ ಪೆಮ್ಮಾಡಿಗಾವುಣ್ಡ ಬಾಗೆಯೂರಿನ ಕಮ್ಮಾರಗಾವಣ್ಡ, ಸವುಳಜ್ಞದ ಮೆಣ್ಡೆಗಾವುಣ್ಡ ಮತ್ತು ಬೆಳ್ವೊರಲ ಬಿನಮ್ಮ ಇವರನ್ನು ಸಾಕ್ಷಿಗಳಾಗಿ ಇಟ್ಟುಕೊಂಡು ದತ್ತಿ ಬಿಡುತ್ತಾನೆ. ಅದರಲ್ಲಿ ಪತ್ತೊನ್ದಿ ಅಂದರೆ ಹತ್ತನೇ ಒಂದು ಭಾಗ ಉತ್ತಮಗಾವುಣ್ಡನಿಗೆ ಸೇರಬೇಕೆಂದು ವ್ಯವಸ್ಥೆ ಮಾಡುತ್ತಾನೆ. ಸಾಮಾನ್ಯವಾಗಿ ಕೆರೆಯ ನಿರ್ಮಾತೃವೇ ದೇವಾಲಯಗಳಿಗೆ, ಬ್ರಾಹ್ಮಣರಿಗೆ ದಾನ ದತ್ತಿ ಬಿಡುವುದನ್ನು ಕಾಣುತ್ತೇವೆ. ಆದರೆ ಇಲ್ಲಿ ಕೆರೆ ಕಟ್ಟಿಸಿದವನೇ ಬಿಟ್ಟ ದತ್ತಿಯಲ್ಲಿ ಹತ್ತನೇ ಒಂದು ಭಾಗವನ್ನು ಪಡೆಯುವ ಸ್ಥಿತಿಯಲ್ಲಿದ್ದಾನೆ. ಅಂದರೆ ಆತ ಬಡವನಾಗಿರುವ ಅಥವಾ ಕೆರೆ ಕಟ್ಟಿಸಿ ಬರಿಗೈ ಆಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಇದೊಂದು ಶಾಸನವನ್ನು ಬಿಟ್ಟು ಮತ್ತಾವ ಶಾಸನದಲ್ಲಿಯೂ ಉತ್ತಮಗಾವುಣ್ಡನ ಉಲ್ಲೇಖವಿಲ್ಲ. ಆದ್ದರಿಂದ ಆತನ ಇತಿವೃತ್ತವನ್ನು ತಿಳಿಯಲಾಗುವುದಿಲ್ಲ. ಆದರೆ ಸುಮಾರು ೧೧೦೦ ವರ್ಷಗಳ ಹಿಂದೆ ಶ್ರೀಸಾಮಾನ್ಯನೊಬ್ಬ ತನ್ನ ಹೊಟ್ಟೆಬಟ್ಟೆ ಕಟ್ಟಿ ಮಾಡಿಸಿದ ಕೆರೆ ಇಂದಿಗೂ ಸುಸ್ಥತಿಯಲ್ಲಿದೆ. ಈಗ ಅದನ್ನು ಸಿದ್ದಿಕಟ್ಟೆ ಎಂದು ಕರೆಯಲಾಗುತ್ತಿದ್ದು, ಒಂದು ಕೋಡಿ ಮತ್ತು ಒಂದು ತೂಬು ಇದೆ. ಬಸವನಪುರ ಮತ್ತು ಸುತ್ತ ಮುತ್ತಲ ಹಳ್ಳಿಯ ಜನತೆಗೆ, ಜಾನುವಾರುಗಳಿಗೆ ಮತ್ತು ನೂರಾರು ಎಕರೆ ಭೂಮಿಗೆ ನೀರೊದೊಗಿಸುತ್ತಿದೆ. ಈ ದೃಷ್ಟಿಯಿಂದ ಉತ್ತಮಗಾವುಣ್ಡನನ್ನು ನಾವಿಲ್ಲಿ ನೆನೆಯಬೇಕಾಗಿದೆ.

ಸಿಂಗಸಮುದ್ರ (೧೦-೧೧ನೇ ಶತಮಾನ)
ಬೆಕ್ಕದಲ್ಲಿನ ಒಂದು ಶಾಸನ೪, ನಯಕೀರ್ತಿ ಸಿದ್ಧಾಂತದೇವ ಮತ್ತು ಅವನ ಶಿಷ್ಯರಾದ ಭಾನುಕೀರ್ತಿ ಸಿದ್ಧಾಂತದೇವ ಮತ್ತು ಪ್ರಭಾಚಂದ್ರದೇವ ಅವರ ಸಲಹೆಯಂತೆ, ಮಹಪ್ರಧಾನಿ ಹಿರಿಯ ಬಂಡಾರಿ ರಾಮದೇವನಾಯಕ, ಬಂಡಾರಿ ಸಿಂಘಯ್ಯ ಮತ್ತು ಮಹಾವಡ್ಡಬ್ಯಹಾರಿ ಕವಡಮಯ್ಯನ ಸಾತಿಸೆಟ್ಟಿ ಮುಂತಾದವರು ಕೆರೆಯನ್ನು ಕಟ್ಟಲು ಭೂಮಿಯನ್ನು ನೀಡಿದರೆಂದು ಉಲ್ಲೇಖಿಸುತ್ತದೆ. ಅದೇ ಶಾಸನ ಮುಂದುವರೆದು, ಬೆಕ್ಕನ ನಾಗರಸನ ಮಗ ಚಾಮರಸನು ಮತ್ತು ಹುಳ್ಳರಸನು, ಮುದ್ದರಸನ ಮಗ ಸೋಮರಸನು ಸಿಂಗಸಮುದ್ರವೆಂಬ ಕೆರೆಯನ್ನು ಕಟ್ಟಿ, ಕಲ್ಲತೂಬನ್ನು ಇಕ್ಕಿದರು ಎಂದು ಹೇಳುತ್ತದೆ. ಶಾಸನದಲ್ಲಿ ಕಾಲದ ಉಲ್ಲೇಖವಿಲ್ಲದಿದ್ದರೂ ಹೊಯ್ಸಳ ವೀರಬಲ್ಲಾಳನ ಆಳ್ವಿಕೆಯನ್ನು ಉಲ್ಲೇಖಿಸುತ್ತದೆ. ಎಪಿಗ್ರಾಫಿಯಾ ಕರ್ನಾಟಿಕದಲ್ಲಿ ಈ ಶಾಸನದ ಕಾಲವನ್ನು ೧೦-೧೧ನೆಯ ಶತಮಾನ ಎಂದು ಉಲ್ಲೇಖಿಸಿದೆ. ಆದರೆ ವೀರಬಲ್ಲಾಳನ ಆಳ್ವಿಕೆ ಆರಂಭವಾಗುವುದೇ ಕ್ರಿ.ಶ. ೧೧೭೩ರಿಂದ. ಆದ್ದರಿಂದ ಪ್ರಸ್ತುತ ಶಾಸನದ ಕಾಲವನ್ನು ೧೨ನೆಯ ಶತಮಾನವೆಂದು ಹೇಳಬಹುದು.
ಎಪಿಗ್ರಾಪಿಯಾ ಕರ್ನಾಟಿಕದ ಪೀಠಿಕೆಯಲ್ಲಿ ಗುರುತಿಸಿರುವಂತೆ, ವಿದ್ವಾಂಸರು ಅಷ್ಟಾಗಿ ಗಮನ ಹರಿಸಿರದ ಚಾಲುಕ್ಯವಂಶದ ಮಾಂಡಲಿಕನೊಬ್ಬನನ್ನು, ಬೆಕ್ಕದಲ್ಲಿಯ ಇನ್ನೊಂದು ಶಾಸನ೫ ಉಲ್ಲೇಖಿಸುತ್ತದೆ. ಅದರ ಕಾಲ ಕ್ರಿ.ಶ. ೧೦೭೯. ಆ ಮಾಂಡಲಿಕನ ಹೆಸರೂ ಹುಳ್ಳರಸ ಎಂದಿರುವುದರಿಂದ ಈ ಶಾಸನವು ಗಮನಾರ್ಹವಾಗಿದೆ. ಆತನು ವಿಷ್ಣುವರ್ಧನ ಜಗದೇಕಮಲ್ಲ ನರಸಿಂಹ ಹೊಯ್ಸಳದೇವನ ಅಧೀನನಾಗಿದ್ದಂತೆ ತೋರುತ್ತದೆ. ಶಾಸನದಲ್ಲಿ ಆತನ ವಂಶಾವಳಿಯನ್ನು ಕೊಟ್ಟಿದೆ. ಅದರಲ್ಲಿನ ಕೆಲವು ಹೆಸರುಗಳು ಮೊದಲಿನ (೫೬೪) ಶಾಸನದಲ್ಲಿನ ವ್ಯಕ್ತಿಗಳ ಹೆಸರುಗಳೇ ಆಗಿರುವುದು ಗಮನಿಸಬೇಕಾದ ಸಂಗತಿಯಾಗಿದೆ.
ಮುದ್ದರಸನ ಮಕ್ಕಳು ಬಾಚರಸ &ನಾಗರಸ. ನಾಗರಸನ ಮಗ ಹುಳ್ಳರಸ ಈ ಕೆರೆಯ ನಿರ್ಮಾತೃ.
ಹುಳ್ಳರಸನು, ಅಯ್ಯಂದಿರು ಕಟ್ಟಿಸಿದ್ದ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿದ್ದಲ್ಲದೆ, ಸೋಮೇಶ್ವರ ಮತ್ತು ಮುದ್ದೇಶ್ವರ ದೇವಾಲಯಗಳಿಗೆ ಭೂಮಿ ದಾನ ಮಾಡಿದ ವಿಚಾರವಿದೆ. ಅಲ್ಲದೆ ತಂದೆ ಮೂವರುಂ ಮಾಡಿ ಬಿಟ್ಟ ದತ್ತಿ ಎಂದಿರುವುದರಿಂದ ಆ ದಾನದಲ್ಲಿ ಆತನ ತಂದೆ, ದೊಡ್ಡಪ್ಪ ಮತ್ತು ಅಜ್ಜನೂ ಭಾಗಿಯಾಗಿದ್ದಿರಬೇಕು.
೫೬೩ನೇ ಶಾಸನೋಕ್ತ ಮುದ್ದರಸ, ನಾಗರಸ ಮತ್ತು ಹುಳ್ಳರಸ ಅವರುಗಳು ೫೬೪ನೇ ಶಾಸನದಲ್ಲಿ ಬಂದಿರುವ ನಾಗರಸ ಮತ್ತು ಅವನ ಮಗ ಹುಳ್ಳರಸ, ಹಾಗೂ ಮುದ್ದರಸ ಎಂಬುವವರ ವಂಶದವರೇ ಆಗಿರುವ ಸಾದ್ಯತೆ ಇದೆ. ಆದರೆ ಎರಡೂ ಶಾಸನಗಳ ನಡುವೆ ಸುಮಾರು ಒಂದು ನೂರು ವರ್ಷಗಳ ಅಂತರವಿದೆ. ಆದ್ದರಿಂದ, ನಡುವೆ ಒಂದೆರಡು ತಲೆಮಾರುಗಳು ಇದ್ದಿರಬೇಕು ಎಂದು ಊಹಿಸಬಹುದಾಗಿದೆ. ಈ ಶಾಸನವು ಕೆರೆಯ ತೂಬಿನ ಮೇಲೆಯೇ ಇದ್ದು, ಆ ಕೆರೆಯೇ ಶಾಸನೋಕ್ತ ಸಿಂಗಸಮುದ್ರ ಆಗಿದೆ ಎಂದು ಹೇಳಬಹುದು. ಈಗ ಆ ಕೆರೆಯನ್ನು ಬೆಕ್ಕನಕೆರೆ ಎಂದು ಕರೆಯಲಾಗುತ್ತಿದೆ.

ಗಂಗರಾಜ (ಕ್ರಿ.ಶ. ೧೧೧೮)
ಕ್ರಿ.ಶ.೧೧೧೮ಕ್ಕೆ ಸೇರಿದ ಶ್ರವಣಬೆಳಗೊಳದ ಶಾಸನದಲ್ಲಿ, ಗಂಗರಾಜನು ಗಂಗಸಮುದ್ರವೆಂಬ ಕೆರೆಯನ್ನು ಕಟ್ಟಿಸಿದ ವಿಚಾರವಿದೆ. ಆತ ಹೊಯ್ಸಳ ವಿಷ್ಣುವರ್ಧನನ ದಂಡನಾಯಕನಾಗಿದ್ದವನು. ಶ್ರವಣಬೆಳಗೊಳದ ಸುಮಾರು ಮೂವತ್ತಕ್ಕೂ ಹೆಚ್ಚು ಶಾಸನಗಳು ಆತನನ್ನು ಉಲ್ಲೇಖಿಸುತ್ತವೆ. ಆತನ ಬಗ್ಗೆ ಸಾಕಷ್ಟು ವಿವರಗಳೂ ಲಭ್ಯವಾಗಿವೆ. ವಿಷಯವಿಶ್ವಕೋಶದಂತಹ ಉದ್ಗ್ರಂಥಗಳು ಆತನ ಎಲ್ಲಾ ಸಾಧನೆಗಳನ್ನು ಹೇಳಿದ್ದರೂ, ಆತ ಕೆರೆಕಟ್ಟಿಸಿದ ವಿಚಾರದಲ್ಲಿ ಮೌನವಹಿಸಿವೆ! ಆತ ಕಟ್ಟಿಸಿದ ಕೆರೆ ಗಂಗಸಮುದ್ರದ ಉಲ್ಲೇಖವೇ ಸುಮಾರು ಹದಿನೈದು ಶಾಸನಗಳಲ್ಲಿದೆ. ಆತನ ವಂಶಾವಳಿಯನ್ನು ಜಿನನಾಥಪುರದ ಒಂದು ಶಾಸನ ಮತ್ತು ಇತರ ಕೆಲವು ಶಾಸನಗಳಿಂದ ಗುರುತಿಸಬಹುದಾಗಿದೆ.
ನಾಗವರ್ಮ

ಮಾರಮಯ್ಯ (ಪತ್ನಿ ಮಾಕಣಬ್ಬೆ)
ಒಂದನೆಯ ಯೇಚಿರಾಜ (ಪತ್ನಿ ಪೋಚಕಬ್ಬೆ)
ಬಮ್ಮಣ್ಣ(ಪತ್ನಿ ಬಾಗಂಡಬ್ಬೆ)
ಎರಡನೆಯ ಯೇಚಿರಾಜ(ಪತ್ನಿ ಏಚಕಬ್ಬೆ)
?(ಪತ್ನಿ ಜಕ್ಕಣಬ್ಬೆ)
ಬೊಪ್ಪ
ಗಂಗರಾಜ (ಪತ್ನಿಯರು ನಾಗಲಾದೇವಿ ಮತ್ತು ಲಕ್ಷ್ಮಿ)
ಬೊಪ್ಪ ಮತ್ತು ಏಚ

ನಾಗವರ್ಮ ಎಂಬುವವನ ವಂಶದವನಾದ ಗಂಗರಾಜನಿಗೆ ಬಮ್ಮಣ್ಣನಲ್ಲದೆ ಇನ್ನೊಬ್ಬ ಅಣ್ಣ ಇದ್ದಿರಬೇಕು ಎಂಬ ಅನುಮಾಗಳಿವೆ. ಆತ ಹೆಚ್ಚು ಗೌರವಿಸುತ್ತಿದ್ದ, ಆತನ ಅತ್ತಿಗೆ ಜಕ್ಕಣಬ್ಬೆ, ಬಮ್ಮಣ್ಣನ ಹೆಂಡತಿಯೊ ಅಥವಾ ಇನ್ನೊಬ್ಬ ಅಣ್ಣನ ಹೆಂಡತಿಯೊ ಸ್ಪಷ್ಟವಾಗುವುದಿಲ್ಲ. ಆಕೆಗೆ ಬೊಪ್ಪ ಎಂಬ ಮಗನಿದ್ದಂತೆ ತಿಳಿಯುತ್ತದೆ. ಚಾವುಂಡರಾಯ ಬಸದಿಯಲ್ಲಿನ ನೇಮೀಶ್ವರನ ಸಿಂಹಪೀಠದ ಮೇಲೆ ಇರುವ ಶಾಸನದಲ್ಲಿ, ಗಂಗರಾಜನ ಮಗ ಏಚ ಎಂಬುವವನು ಬೊಪ್ಪನ ಚೈತ್ಯಾಲಯವನ್ನು ಕಟ್ಟಿಸಿದ ವಿಚಾರವಿದೆ. ಆದರೆ ಈ ಏಚನು ಗಂಗರಾಜನ ಇನ್ನೊಬ್ಬ ಮಗನಾಗಿದ್ದು, ತನ್ನ ಸಹೋದರ ಬೊಪ್ಪನ ಹೆಸರಿನಲ್ಲಿ ಚೈತ್ಯಾಲಯವನ್ನು ನಿರ್ಮಿಸಿದನೆ? ಅಥವಾ ಗಂಗರಾಜನ ಅಣ್ಣ ಬಮ್ಮಣ್ಣನ ಮಗ ಏಚನೇ ಬೊಪ್ಪನ ಹೆಸರಿನಲ್ಲಿ ಚೈತ್ಯಾಲಯವನ್ನು ನಿರ್ಮಿಸಿದನೆ? ಎಂಬುದು ಸ್ಪಷ್ಟವಾಗುವುದಿಲ್ಲ. ಆದರೆ, ಶ್ರವಣಬೆಳಗೊಳದ ಇನ್ನೊಂದು ಶಾಸನದಲ್ಲಿ, ಗಂಗರಾಜನ ಅಣ್ಣ ಹೆಗ್ಗಡೆ ಬಮ್ಮಣಯ್ಯನ ಮಗ ಹಿರಿಏಚಿಮಯ್ಯ ಎಂದಿರುವುದರಿಂದ, ಗಂಗರಾಜನಿಗೆ ಏಚ ಎಂಬ ಇನ್ನೊಬ್ಬ ಮಗನಿದ್ದಿರಬಹುದು.
ಪ್ರಸ್ತುತ ಶಾಸನದಲ್ಲಿ೧೦ ಕಣ್ಣಗಾಲದ ಬಿಜಾನಕಬಿಯ ಕಾಳಗದಲ್ಲಿ ಕಟಕದ ಹನ್ನಿರ್ವ್ವರು ಸಾಮಂತರನ್ನು ಓಡಿಸಿ ಗೆದ್ದಾಗ, ವಿಷ್ಣುವರ್ಧನನು ಮೆಚ್ಚಿ ಬೇಡಿಕೊ ಎಂದಾಗ ದೇವತಾ ಪೂಜೆ, ಆಹಾರದಾನಕ್ಕೆ ಕಾರುಣ್ಯದಿಂದ ಪರಮ ಗ್ರಾಮವನ್ನು ಪಡೆದು ಕೆಱೆಯನ್ನು ಕಟ್ಟಿಸಿ ಅದಕ್ಕೆ ಗಂಗಸಮುದ್ರವೆಂದು ನಾಮಕರಣ ಮಾಡುತ್ತಾನೆ.
ಗಂಗರಾಜನ ಮತ್ತು ಆತನ ಕುಟುಂಬದವರ ಇನ್ನಿತರ ಸಾಧನೆಗಳನ್ನು, ಹೊಯ್ಸಳ ಸಾಮ್ರಾಜ್ಯದಲ್ಲಿ ಆತನಿಗಿದ್ದ ಪ್ರಾಮುಖ್ಯತೆಯನ್ನು ಕೆಳಕಂಡಂತೆ ಗಮನಿಸಬಹುದಾಗಿದೆ.
ಗಂಗರಾಜನು ಮೂಲಸಂಘದ ದೇಸಿಯಗಣದ ಶುಭಚಂದ್ರ ಸಿದ್ಧಾಂನ್ತದೇವ ಮುನಿಗೆ ಶಿಷ್ಯನಾಗಿದ್ದನು. ಗೊಮ್ಮಟನ ಸುತ್ತ ಸುತ್ತಾಲಯವನ್ನು ಮಾಡಿಸಿದ ಕೀರ್ತಿ ಗಂಗರಾಜನದು. ಕಣ್ಣೆಗಾಲದ ಯುದ್ಧದಲ್ಲಿ ಚಾಲುಕ್ಯ ಪೆರ್ಮಾಡಿಯನ್ನು ಸೋಲಿಸಿ ಪಡೆದ ಪರಮ ಗ್ರಾಮವನ್ನು ತನ್ನ ತಾಯಿ ಮತ್ತು ಹೆಂಡತಿಯರು ಕಟ್ಟಿಸಿದ ಬಸದಿಗಳ ಜೊತೆಗೆ ಹಲವಾರು ಬಸದಿಗಳಿಗೆ ದತ್ತಿ ಬಿಡುತ್ತಾನೆ. ಗಂಗರಾಜನ ಹೆಂಡತಿ ಲಕ್ಷ್ಮಿಗೆ ದೇಮಿಯಕ್ಕ ಎಂಬ ಸಹೋದರಿಯೂ ಭೂಚಣ ಎಂಬ ಸಹೋದರನೂ ಇದ್ದಂತೆ ತಿಳಿಯುತ್ತದೆ. ಆಕೆಯ ತಾಯಿ ನಾಗಲೆಯನ್ನು ಲೀಲಾವತಿ ದಂಡನಾಯಿಕಿತಿ ಎಂದು ಕರೆಯಲಾಗಿದೆ. ದೇಮಿಯಕ್ಕ ನಿಧನಳಾದಾಗ ಲಕ್ಷ್ಮಿಯು ಅವಳಿಗೆ ನಿಸಧಿಯನ್ನು ನಿರ್ಮಿಸುತ್ತಾಳೆ. ಗಂಗರಾಜನ ಪತ್ನಿ ಲಕ್ಷ್ಮಿಯು ಮತ್ತು ತಾಯಿ ಪೋಚಿಕಬ್ಬೆಯು ಬಸದಿಗಳನ್ನು ನಿರ್ಮಾಣ ಮಾಡಿಸಿದ್ದಾರೆ. ಗಂಗರಾಜನ ಅಣ್ಣ ಹೆಗ್ಗಡೆ ಬಮ್ಮಣ್ಣನ ಮಗ ಹಿರಿಏಚಿಮಯ್ಯನು ಶಾಂತಿನಾಥ ಬಸದಿಯನ್ನು ಕಟ್ಟಿಸಿದ್ದಾನೆ. ಗಂಗವಾಡಿಯ ಎಲ್ಲಾ ಬಸದಿಗಳನ್ನು ಜೀರ್ಣೋದ್ದಾರ ಮಾಡಿಸಿದಂತೆ ತಿಳಿದು ಬರುತ್ತದೆ. ಕಂಬದಹಳ್ಳಿಯ ಬಸದಿಗಳನ್ನು ಜೀರ್ಣೋದ್ಧಾರ ಮಾಡಿಸಿದ್ದಕ್ಕಾಗಿ ಅಲ್ಲಿನ ಶಾಸನಗಳಿಂದ ತಿಳಿದು ಬರುತ್ತದೆ. ಅತ್ತಿಗೆ ಜಾಕಬ್ಬೆಯು ನಯಣದ ದೇವರನ್ನು ಪ್ರತಿಷ್ಟೆ ಮಾಡಿಸುತ್ತಾಳೆ. ಜಕ್ಕಬ್ಬೆಯು ಜಕ್ಕೀಕೆರೆ ಎಂಬುದನ್ನು ಕಟ್ಟಿಸಿದ್ದು, ಅದು ಈಗ ಜಕ್ಕಿಕಟ್ಟೆ ಎಂದು ಕರೆಯಲ್ಪಡುತ್ತಿದೆ. ಗಂಗರಾಜನು ಜಕ್ಕಬ್ಬೆಯ ಮರಣಾನಂತರ ಅವಳಿಗೆ ನಿಸಿಧಿಯನ್ನು ನಿರ್ಮಿಸುತ್ತಾನೆ. ತಾಯು ಪೋಚಿಕಬ್ಬೆಯ ಮರಣಾನಂತರ ನಿಸಿಧಿಯನ್ನು ಮಾಡಿಸಿದ ಉಲ್ಲೇಖಗಳೂ ಇವೆ. ಜಿನನಾಥಪುರವನ್ನು ಮತ್ತು ಅಲ್ಲಿ ಜಿನಾಲಯವನ್ನು ಕಟ್ಟಿಸಿದ ಕೀರ್ತಿ ಗಂಗರಾಜನದು. ಶ್ರವಣಬೆಳಗೊಳದಲ್ಲಿ ಶಾಸನ ಬಸದಿ ಮತ್ತು ಕತ್ತಲೆಬಸದಿಯನ್ನು ಗಂಗರಾಜ ಕಟ್ಟಿಸಿದನೆಂದು ತಿಳಿಯುತ್ತದೆಯಾದರೂ ಅದರ ಬಗ್ಗೆ ಬಿನ್ನಾಭಿಪ್ರಾಯಗಳಿವೆ.
ಹತ್ತು ಹಲವಾರು ಧಾರ್ಮಿಕ ಕಾರ್ಯಗಳಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ ಗಂಗರಾಜನು ರಾಜಕೀಯವಾಗಿಯೂ ಪ್ರಮುಖ ವ್ಯಕ್ತಿಯಾಗಿ ಕಂಡುಬರುತ್ತಾನೆ. ಹೊಯ್ಸಳ ವಿಷ್ಣುವರ್ಧನನ ನಿಷ್ಟಾವಂತ ದಂಡನಾಯಕನಾಗಿ ಹೆಸರು ಮಾಡಿದ್ದ ಗಂಗರಾಜನು ಚೋಳರನ್ನು ಓಡಿಸಿ ತಲಕಾಡನ್ನು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಆ ಯುದ್ಧದಲ್ಲಿ ಗಂಗರಾಜನು ಮುಂದೆ ನಿಂತು ಹೋರಾಡಿದನೆಂದು ಕಂಬದಹಳ್ಳಿಯ ಶಾಸನವು ಉಲ್ಲೇಖಿಸುತ್ತದೆ. ಆಗ ತನಗೆ ಕಾಣಿಕೆಯಾಗಿ ದೊರೆತ ಬಿಂಡಿಗನವಿಲೆಯನ್ನು, ತನ್ನ ಗುರುವಿಗೆ ದೇವತಾ ಕಾರ್ಯಕ್ಕಾಗಿ ದತ್ತಿ ಬಿಡುತ್ತಾನೆ. ವಿಷ್ಣುವರ್ಧನನು ಸಿಂಹಾಸನಾರೂಢನಾಗುವ ಸಂಧರ್ಭದಲ್ಲಿ ಪ್ರಧಾನ ಪಾತ್ರ ವಹಿಸುತ್ತಾನೆ. ಹೀಗೆ, ಅಂದಿನ ಹೊಯ್ಸಳ ಸಾಮ್ರಾಜ್ಯದಲ್ಲಿ ಪ್ರಮುಖ ದಂಡನಾಯಕನಾಗಿದ್ದ ಗಂಗರಾಜನನ್ನು, ಆತನ ಸಾಧನೆಗಳನ್ನು ಕೊಂಡಾಡಿರುವ ಒಂದು ಪದ್ಯವು ನಾಲ್ಕೈದು ಶಾಸನಗಳಲ್ಲಿ ಪುನರಾವರ್ತನೆಯಾಗಿದೆ.

ಗಂಗವಾಡಿಯ ಬಸದಿಗಳೆನಿತೊಳವತುಮಂ ತಾನೆಯ್ದೆ ಪೊಸಯಿಸಿದಂ
ಗಂಗವಾಡಿಯ ಗೊಮ್ಮಟದೇವರ್ಗ್ಗೆ ಸುತ್ತಾಲಯಮನೆಯ್ದೆ ಮಾಡಿಸಿದಂ
ಗಂಗವಾಡಿಯ ತಿಗುಳರಂ ಬೆಂಕೊಡು ವೀರಗಂಗಂಗೆ ನಿಮಿರ್ಚ್ಚಿ ಕೊಟ್ಟ
ಗಂಗರಾಜನಾಮುನ್ನಿನ ಗಂಗರಾಯಂಗಂ ನೂರ್ಮಡಿ ಧನ್ಯನಲ್ತೆ||

ಗಂಗರಾಜ ಕ್ರಿ.ಶ. ೧೧೩೩ರಲ್ಲಿ ಮರಣ ಹೊಂದಿದಾಗ, ಆತನ ಮಗ ಬೊಪ್ಪನು, ಹಳೇಬೀಡಿನಲ್ಲಿ ದ್ರೋಹರಘಟರಟ್ಟವೆಂಬ ಪಾರ್ಶ್ವನಾಥ ಜಿನಾಲಯವನ್ನು ತನ್ನ ತಂದೆಯ ಹೆಸರಿನಲ್ಲಿ ನಿರ್ಮಿಸುತ್ತಾನೆ. ಸಂತೇಶಿವರದಲ್ಲಿ ಗಂಗರಾಜನ ಹೆಸರಿನಲ್ಲಿ ಗಂಗೇಶ್ವರ ದೇವಾಲಯವು ನಿರ್ಮಾಣವಾಗಿದ್ದು, ಅದನ್ನು ಆತನ ಮಗ ಬೊಪ್ಪನು ಜೀರ್ಣೋದ್ಧಾರ ಮಾಡಿಸಿ, ಕೆಲವು ದತ್ತಿಗಳೊಂದಿಗೆ ಎಣ್ಣೆ ಗಾಣವೊಂದನ್ನು ದೇವಾಲಯಕ್ಕೆ ಅರ್ಪಿಸುತ್ತಾನೆ. ತಂದೆಯ ಹಾದಿಯಲ್ಲಿಯೇ ಮುಂದುವರೆದ ಮಗ ಬೊಪ್ಪ ವಿಷ್ಣುವರ್ಧನನ ಕಡೆಗಾಲದವರೆಗೂ ಅವನಿಗೆ ನಿಷ್ಠನಾಗಿ ಜೊತೆಯಲ್ಲಿದ್ದುದಲ್ಲದೆ, ವಿಷ್ಣುವರ್ಧನನ ಮರಣಾನಂತರ ಆತನ ಅಂತ್ಯಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾನೆ.
ಜಕ್ಕಿಯಬ್ಬೆ (ಕ್ರಿ.ಶ. ೧೨ನೆಯ ಶತಮಾನ)
೫೦೪ ನೇ ಶಾಸನವು ಗಂಗರಾಜನ ಅತ್ತಿಗೆ ಜಕ್ಕಬ್ಬೆಯು ಜಕ್ಕಿ ಕೆರೆಯನ್ನು ಕಟ್ಟಿಸಿ ನಯಣದ ದೇವರನ್ನು ಮಾಡಿಸಿದ ವಿಚಾರವಿದೆ. ಈಗ ಜಕ್ಕಿಕಟ್ಟೆ ಎಂದು ಕರೆಯುತ್ತಿರುವುದೇ ಆ ಕೆರೆಯಾಗಿದೆ. ಆಕೆ ಗಂಗರಾಜನ ಅತ್ತಿಗೆಯಾಗಿ ಮಾತ್ರ ಶಾಸನಗಳಲ್ಲಿ ಉಲ್ಲೇಖಿತಳಾಗಿದ್ದಾಳೆ. ಆದರೆ ಆಕೆಯ ಪತಿಯಾರೆಂದು ತಿಳಿಯುವುದಿಲ್ಲ. ಗಂಗರಾಜನಿಗೆ ಬಮ್ಮಣ್ಣನಲ್ಲದೆ ಬೇರೊಬ್ಬ ಅಣ್ಣನಿದ್ದಿರಬಹುದೆ? ಎಂಬುದರ ಬಗ್ಗೆ ಏನನ್ನು ಹೇಳಲು ಸಾಧ್ಯವಾಗಿಲ್ಲ.

ನಾಗದೇವ ಹೆಗ್ಗಡೆ (ಕ್ರಿ.ಶ. ೧೨ನೆಯ ಶತಮಾನ)
ಶ್ರವಣಬೆಳಗೊಳದಲ್ಲಿ ಈಗ ಜಿಗಣೆಕಟ್ಟೆಯ ಬಳಿಯಿರುವ ಶಾಸನದಲ್ಲಿ೧೧ ನಾಗಸಮುದ್ರ ಕೆರೆಯನ್ನು ನಾಗದೇವ ಹೆಗ್ಗಡೆ ಎಂಬುವವನು ಕಟ್ಟಿಸಿದ ವಿಚಾರವಿದೆ. ಆತನ ತಂದೆಯ ಹೆಸರು ಬೊಮ್ಮದೇವ ಹೆಗ್ಗಡೆ. ಗುರು ನಯಕೀರ್ತಿಸಿದ್ಧಾಂತ ಚಕ್ರವರ್ತಿ. ಕೆರೆಯ ಜೊತೆಗೆ ಒಂದು ತೋಟವನ್ನೂ ಮಾಡಿಸಿದ ವಿಚಾರ ಶಾಸನದಲ್ಲಿದೆ. ಈಗಿನ ಜಿಗಣೆಕಟ್ಟೆಯೇ ಅಂದಿನ ನಾಗಸಮುದ್ರವಾಗಿದ್ದಿರಬೇಕು. ಆತನ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಸುಂಡಹಳ್ಳಿಯ ಶಾಸನದಲ್ಲಿ೧೨ ನಾಗದೇವ ಹೆಗ್ಗಡೆ, ಕೆಂಚೇಗೌಡ ಮತ್ತು ಮಾರೇಗೌಡ ಮುಂತಾದವರು ಒಂದು ಕೆರೆ ಕಟ್ಟಿಸಿದರೆಂದು ಉಲ್ಲೇಖವಿದೆ. ಆದುದ್ದರಿಂದ ನಾಗದೇವ ಹೆಗ್ಗಡೆಯು ಸುಂಡಹಳ್ಳಿಯವನಾಗಿದ್ದಿರಬೇಕು ಎಂದು ಊಹಿಸಬಹುದು. ಅವರು ಕಟ್ಟಿಸಿದ ಕೆರೆ ಯಾವುದೆಂದು ಶಾಸನದಲ್ಲಿ ಉಲ್ಲೇಖವಿಲ್ಲ.

ಶಾಂತಲೆ (ಕ್ರಿ.ಶ. ೧೧೨೩)
ಶ್ರವಣಬೆಳಗೊಳದ ಚಿಕ್ಕಬೆಟ್ಟದಲ್ಲಿನ ಶಾಸನವೊಂದು೧೩ ಹೊಯ್ಸಳ ವಿಷ್ಣುವರ್ಧನನ ರಾಣಿ ಶಾಂತಲೆಯು ಎಳಸನಕಟ್ಟೆ ಎಂಬುದನ್ನು ಕೆರೆಯಾಗಿ ಕಟ್ಟಿಸಿ ಸವತಿಗಂಧವಾರಣ ಬಸದಿಗೆ, ಸುರಗಿಗೆ ಬಿಟ್ಟ ವಿಚಾರವನ್ನು ತಿಳಿಸುತ್ತದೆ. ಶಾಂತಲೆಯು, ಗಂಗರಾಜನು ಕಟ್ಟಿಸಿದ್ದ ಗಂಗಸಮುದ್ರದ ಕೆಳಗೆ ಗದ್ದೆಗಳನ್ನು ದತ್ತಿ ಬಿಟ್ಟ ವಿಚಾರವನ್ನು ಈ ಶಾಸನ ಉಲ್ಲೇಖಿಸುತ್ತದೆ. ಶಾಂತಲೆಯ ಬಗ್ಗೆ ಹೆಚ್ಚಿಗೇನನ್ನು ಹೇಳುವ ಅವಶ್ಯಕತೆಯಿಲ್ಲ. ವಿಷ್ಣುವರ್ಧನನ ಮನಃಪ್ರಿಯೆಯಾಗಿ, ರಾಣಿಯಾಗಿ, ಹೊಯ್ಸಳ ಸಾಮ್ರಾಜ್ಞಿಯಾಗಿ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಆಕೆಯ ಹೆಸರು ಅಜರಾಮರವಾಗಿದೆ. ಕರ್ನಾಟಕದಲ್ಲಿ ಆಗಿ ಹೋದ ಯಾವ ರಾಣಿಗೂ ಸಿಗದಷ್ಟು ಮಹತ್ವ ಶಾಂತಲೆಗೆ ದಕ್ಕಿದೆ. ಆದರೂ, ಚೆನ್ನರಾಯಪಟ್ಟಣ ತಾಲ್ಲೂಕಿನ ಶಾಸನಗಳ ಹಿನ್ನಲೆಯಲ್ಲಿ ಅವಳನ್ನು ಗಮನಿಸಬಹುದಾಗಿದೆ. ಸಂಪುಟ ಎರಡರಲ್ಲಿ ಸುಮಾರು ಆರು ಶಾಸನಗಳಲ್ಲಿ ಮತ್ತು ಸಂಪುಟ ಹತ್ತರಲ್ಲಿ ಎರಡು ಶಾಸನಗಳಲ್ಲಿ ಆಕೆಯ ಬಗ್ಗೆ ವಿವರಗಳು ದೊರೆಯುತ್ತವೆ. ಸವತಿಗಂಧಾವರಣ ಬಸದಿಯನ್ನು ಕಟ್ಟಿಸಿ, ಅದಕ್ಕೆ ಕಲ್ಕಣಿನಾಡಿನ ಮಟ್ಟನವಿಲೆ ಎಂಬ ಗ್ರಾಮವನ್ನು ದತ್ತಿಯನ್ನಾಗಿ ಬಿಟ್ಟು, ಅದನ್ನು ಮೇಘಚಂದ್ರ ತ್ರೈವಿದ್ಯಾದೇವರ ಶಿಷ್ಯರಾದ ಪ್ರಭಾಚಂದ್ರ ಸಿದ್ಧಾಂತ ದೇವರಿಗೆ ಧಾರೆಯೆರೆದು ಕೊಡುತ್ತಾಳೆ. ಗಂಗರಾಜನ ಪತ್ನಿ ಲಕ್ಷ್ಮಿಮತಿಯೂ ಸಹ ಮೇಘಚಂದ್ರತ್ರೈವಿದ್ಯಾದೇವರ ಶಿಷ್ಯೆ ಎಂಬುದು ಗಮನಾರ್ಹ ವಿಷಯ. ಶಾಂತಲೆಯ ವಂಶಾವಳಿಯನ್ನು ಹೀಗೆ ಗುರುತಿಸಬಹುದಾಗಿದೆ. ನಾಗವರ್ಮ (ಪತ್ನಿ ಚಂದಿಕಬ್ಬೆ)

ಬಲದೇವ ಪತ್ನಿ ಬಾಚಿಯಕ್ಕ
ಮಾಚಿಕಬ್ಬೆ
ಶಾಂತಲೆ (ಪತಿ ವಿಷ್ಣುವರ್ಧನ)
ನಾಗದೇವ (ಪತ್ನಿ ನಾಗಿಯಕ್ಕ)
ಬಲ್ಲ
ಏಚಿಯಕ್ಕ
ಬಲದೇವ
ಸಿಂಗಣ (ಪತ್ನಿ ಶ್ರೀಯಾದೇವಿ)

ಶಾಂತಲೆಯು ಕ್ರಿ.ಶ. ೧೧೩೧ ರಲ್ಲಿ ಶಿವಗಂಗೆಯಲ್ಲಿ ಸತ್ತಳೆಂದು ಸಂಪುಟ ಎರಡರ ಪೀಠಿಕೆಯಲ್ಲಿ ಹೇಳಲಾಗಿದೆ. ಆದರೆ ಆಕೆ ಶ್ರವಣಬೆಳಗೊಳದಲ್ಲಿಯೇ ಸತ್ತಳೆಂಬುದು ಕೆಲವರ ಅಭಿಪ್ರಾಯ. ಶಿವಗಂಗೆಯ ತೀರ್ಥದಲ್ಲಿ ಮುಡುಪಿ ಸತ್ತಳು ಎಂಬುದರಲ್ಲಿ ಯಾವ ಶಿವಗಂಗೆ ಎಂಬ ಅನುಮಾನವಿದೆ. ಈ ವಿಷಯದಲ್ಲಿ ಸಾಕಷ್ಟು ಭಿನ್ನಾಬಿಪ್ರಾಯಗಳಿವೆ. ಆಕೆಯ ತಾಯಿ ಮಾಚಿಕಬ್ಬೆ ಒಂದು ತಿಂಗಳ ಕಾಲ ಸನ್ಯಸನ ವ್ರತವನ್ನು ಕೈಗೊಂಡು ಪಂಡಿತ ಮರಣವನ್ನು ಪಡೆದಳೆಂಬುದು ಗಮನಿಸಬೇಕಾದ ವಿಚಾರವಾಗಿದೆ. ಶಾಂತಲೆಯ ತಂದೆ ಶೈವಮತಾನುಯಾಯಿಗಿದ್ದರೂ ಮಾಚಿಕಬ್ಬೆಯ ಜೈನಮತನಿಷ್ಟೆ ಮೆಚ್ಚಬೇಕಾದ ವಿಷಯವಾಗಿದೆ. ಮುಂದೆ ಶಾಂತಲೆ ವಿಷ್ಣುವರ್ಧನನ ಪತ್ನಿಯಾದ ಮೇಲೆ, ಆತನು ಹಿಂದೂ (ವೈಷ್ಣವ) ಮತಾನುಯಾಯಿಯಾಗಿದ್ದರೂ ಆಕೆ ಜೈನಧರ್ಮವೂ ಸೇರಿದಂತೆ ಸರ್ವಧರ್ಮಗಳಲ್ಲಿಯೂ ಸಮಾನ ಆಸಕ್ತಿಯುಳ್ಳವಳಾಗಿ ಕಂಡುಬರುತ್ತಾಳೆ. ಶಾಂತಲೆಯು ಮೂಲತಃ ಶೈವ ಸಂಪ್ರದಾಯದವಳೇ ಆಗಿದ್ದಾಳೆ ಎಂಬ ಅಭಿಪ್ರಾಯವೂ ಇದೆ. ಗಂಗೇಶ್ವರ ದೇವಾಲಯಕ್ಕೆ ಗಂಗರಾಜನ ಮಗ ಬೊಪ್ಪನು ಕೆಲವು ಭೂಮಿಗಳನ್ನು ಮತ್ತು ಒಂದು ಎಣ್ಣೆಗಾಣವನ್ನು ಶಾಂತಲೆಯ ಸಮ್ಮುಖದಲ್ಲಿ ದೇವರಿಗೆ ಅರ್ಪಿಸುವ ವಿಚಾರವಿದೆ.೧೪

ಪಸಾಯಿತ ಬೆಳ್ಳಪ್ಪನಾಯಕ (ಕ್ರಿ.ಶ. ೧೧೬೫)
ಬಾಗೂರು ಹೋಬಳಿ, ಬಿದರೆ ಗ್ರಾಮದ ಶಾಸನದಿಂದ೧೫, ಪಸಾಯಿತ ಬೆಳ್ಳಪ್ಪನಾಯಕ ಎಂಬುವವನು ಕಗ್ಗನ ಬಿದರೆಯಲ್ಲಿ ಬಾಣಗರೆಯನ್ನು ಕಟ್ಟಿಸಿದ ವಿಚಾರ ತಿಳಿಯುತ್ತದೆ. ಇದರ ಕಾಲ ಕ್ರಿ.ಶ. ೧೧೬೫. ಹೊಯ್ಸಳ ಒಂದನೆಯ ನರಸಿಂಹನಲ್ಲಿ ಅಧಿಕಾರಿಯಾಗಿದ್ದ ಬೆಳ್ಳಪ್ಪನಾಯಕನು, ನಿರ್ಗುಂದನಾಡಿನ ಕುಮಾರವ್ರಿತ್ತಿಯ ಕಗ್ಗನ ಬಿದರೆಯಲ್ಲಿ ಕಲಿದೇವನ ದೇವಾಲಯವನ್ನು ಕಟ್ಟಿಸಿ, ಮಹಾದೇವರಾಸಿ ಪಂಡಿತರ ಕಾಲನ್ನು ತೊಳೆದು ದೇವರ ಅಂಗಭೋಗಕ್ಕೆ, ನೈವೇದ್ಯಕ್ಕೆಂದು ದತ್ತಿ ಬಿಡುತ್ತಾನೆ. ಕಲಿದೇವರ ದೇವಾಲಯದ ಹಿಂದೆ ಬಾಣಗೆರೆಯನ್ನು, ನೆಲ್ಲಿಗುಂಡಿಯನ್ನು ಕಟ್ಟಿಸಿ ದೇವರಿಗೆ ಸಮರ್ಪಿಸುತ್ತಾನೆ. ನೆಲ್ಲಿಗುಂಡಿಯೂ ಒಂದು ಸಣ್ಣ ಕೆರೆ ಅಥವಾ ಕಟ್ಟೆಯಾಗಿರಬಹುದು. ಬೆಳ್ಳಪ್ಪನಾಯಕನನ್ನು ಮತ್ತು ಅವನು ಕಟ್ಟಿಸಿದ ದೇವಾಲಯವನ್ನು, ವೃತ್ತವೊಂದರಲ್ಲಿ ಹೀಗೆ ಹೊಗಳಿದೆ.

ಇದು ಮದನಾರಿಗಂ ಸುರಗಣಾಂಬಿಕೆಗಂದು ವಿವಾಹ ಕಾಲದೊಳು
ಮುದದಿ ಸುರ್ಕ್ಕಳಿಂದ್ರ ಸಹಿತಂ ನೆರೆದರ್ತ್ತಿಯಿಸ್ವಕರ್ಮ ನೆ
ಮ್ಮದಿ ನೆರೆಮಾಡಲೆಂತೆಸವ ಸೋಬನ ಮಂಟಪದಂತಿರೋಪ್ಪುವೀ
ಬಿದರೆಯೊಳೀಸ್ವರಾಲಯಮನೆತ್ತಿಸಿದ ಬೆಳ್ಳಪನೇಂ ಕ್ರತಾರ್ತ್ತನೋ || ಚಂಪಕಮಾಲೆ||

ಪಸಾಯಿತ ಬೆಳ್ಳಪ್ಪನಾಯಕ

ಹಿರಿಯ ಪತ್ನಿ ಹೊಲ್ಲವ್ವೆನಾಯಕಿತಿ
ಮಲ್ಲಯ್ಯನಾಯಕ
ಕೇತಯ್ಯನಾಯಕ
ಕಿರಿಯಪತ್ನಿ ಚೊಂಗಯ್ಯವೈನಾಯಕಿತಿ
ದೇವಂಣ
ಬೋಕಂಣ
ಗೌರಲಾದೇವಿ(ಪತಿ ಹೊಯ್ಸಳ ನರಸಿಂಹ)
ಕುಮಾರ ಎಱೆಯಂಗದೇವ

ಬೆಳ್ಳಪ್ಪನಾಯಕನಿಗೆ ಇಬ್ಬರು ಹೆಂಡತಿಯರು. ಮೊದಲನೆಯವಳು ಅರ್ಧಾಂಗ ಲಕ್ಷ್ಮಿಯೆನಿಸಿದ ಹೊಲ್ಲವೆನಾಯಕಿತಿ. ಇವಳಿಗೆ ಮಲ್ಲಯ್ಯನಾಯಕ ಮತ್ತು ಕೇತಯ್ಯನಾಯಕ ಎಂಬಿಬ್ಬರು ಗಂಡು ಮಕ್ಕಳು. ಇಬ್ಬರನ್ನೂ, ಮರೆವೊಕ್ಕರ ತಪ್ಪದೆ ಕಾವವರು, ಕುಲದೀಪಕರು, ಸುಪುತ್ರರು ಎಂದು ಮುಂತಾಗಿ ಹೊಗಳಲಾಗಿದೆ. ಎರಡನೆ ಹೆಂಡತಿ ದಕ್ಷಿಣಗಂಗಾತೀರ್ಥಮೆನಿಸಿದ ತುಂಗಭದ್ರೆ ನಾಮಾಂಕಿತೆ ಚುಂಗೊಯ್ವೆನಾಯಕಿತಿ. ಇವಳಿಗೆ ದೇವಣ್ಣ ಬೋಕಣ ಎಂಬಿಬ್ಬರು ಗಂಡು ಮಕ್ಕಳು ಮತ್ತು ಗೌರಲಾದೇವಿ ಎಂಬ ಹೆಣ್ಣುಮಗಳು. ಗೌರಲಾದೇವಿಯನ್ನು ಗೋತ್ರಪವಿತ್ರೆ ಯೆಂದು ಕರೆಯಲಾಗಿದೆ. ತಂದೆ ಮಗಳನ್ನು, ಬಿದರೆಯ ಪಕ್ಕದ ಗ್ರಾಮವಾದ ಕೆಂಬಾಳಿನ ಶಾಸನವೊಂದರಲ್ಲಿ೧೬ ಉಲ್ಲೇಖಿಸಲಾಗಿದೆ. ಈ ಶಾಸನದಿಂದ ಗೌರಲದೇವಿ ಎಂಬುವವಳಲ್ಲಿ ನರಸಿಂಹನಿಗೆ ಎಱೆಯಂಗ ಎಂಬ ಮಗನಿದ್ದುದು ತಿಳಿಯುತ್ತದೆ. ಶಾಸನವು ಬೆಳ್ಳಪ್ಪನಾಯಕ ಮತ್ತು ಅವನ ಮಗಳು ಗೌರಲದೇವಿ ಅಥವಾ ಗೌರೀದೇವಿ ಮತ್ತಿತರರು ಮಲ್ಲಿಕಾರ್ಜುನದೇವರ ಸೇವೆಗೆ ಅನ್ನಸಂತರ್ಪಣೆಗೆಂದು ಗಾಣವೊಂದನ್ನು ಮತ್ತು ಭೂದಾನ ನೀಡಿದ್ದನ್ನು ದಾಖಲಿಸಿದೆ. ಅಮೃತರಾಶಿ ಪಂಡಿತನ ಶಿಷ್ಯನಾದ ಮಲ್ಲಿಕಾರ್ಜುನಜೀಯನಿಗೆ ದಾನ ನೀಡಲಾಗಿದೆ. ಈ ಕೆಲಸಕ್ಕೆ ಮಂಚಗೌಡ, ಹೆಗ್ಗಡೆ ಗಂಗಣ್ಣ, ಚೊಟ್ಟಿಗಾವುಂಡ, ಮಾಳಗಾವುಂಡ ಮತ್ತು ಅಲ್ಲಿಯ ಅರವತ್ತು ವಕ್ಕಲು ಜನರು ನೆರವು ನೀಡುತ್ತಾರೆ. ತಂದೆಯ ಹಾದಿಯಲ್ಲಿಯೇ ನಡೆದ ಗೌರಲಾದೇವಿ ಆಗಿನ ಕಾಲಕ್ಕೆ ಪ್ರಮುಖ ಮಹಿಳೆಯಾಗಿ ಬಾಳಿರಬಹುದು. ಹೊಯ್ಸಳ ನರಸಿಂಹನೇ ಆಕೆಯನ್ನು ಮದುವೆಯಾಗಿರುತ್ತಾನೆ. ಆಕೆಗೆ ಕುಮಾರ ಎಱೆಯಂಗದೇವನೆಂಬ ಮಗನಿದ್ದಾನೆ. ಶಾಸನದಲ್ಲಿ, ಮಹಾನುಭಾವೆಯೆನಿಸಿದ ಗೌರಲದೇವಿಗಂ ಶೃಮತು ಪ್ರತಾಪನಾರಸಿಂಘದೇವಂಗಂ ಪುಟ್ಟಿದನುದಯಾರ್ಕ್ಕತೇಜಂ ಶ್ರೀಮತು ಕುಮಾರನೆಱೆಯಂಗದೇವರು ಕೆಂಬಾಳಂ ಸುಖಸಂಕಥಾವಿನೋದದಿಂನಾಳುತ್ತಮಿರ್ದ್ದನು ಎಂದು ಹೇಳಿದೆ.

ಮಯಿಲೆಯನಾಯಕ (ಕ್ರಿ.ಶ. ೧೧೮೬)
ಕಬ್ಬಳ್ಳಿಯಲ್ಲಿರುವ ಎರಡೂ ಶಾಸನಗಳು ಈ ಅಧ್ಯಯನದ ದೃಷ್ಟಿಯಿಂದ ಮುಖ್ಯವಾಗುತ್ತವೆ. ಮೊದಲನೇ ಶಾಸನದಲ್ಲಿ೧೭ ಮಯಿಲೆಯನಾಯಕನು ದೇವೇಶ್ವರ ದೇವಾಲಯವನ್ನು ಮತ್ತು ಕನ್ನೆಗೆರೆಯನ್ನು ಕಟ್ಟಿಸಿದ ವಿಚಾರವಿದೆ. ಶಾಸನದ ಕಾಲ ಕ್ರಿ.ಶ. ೧೧೮೬. ಬಲ್ಲಾಳನ ಪಾದಪದ್ಮೋಪಜೀವಿಯಾಗಿದ್ದ ದೇವೆಯನಾಯಕನನ್ನು ಈ ಶಾಸನದಲ್ಲಿ ಶ್ರೀಮತು ಮಂಡಳಿಕ ನಾಯಕ ಗೋಧೂವೆಘರಟ್ಟ ಶರಣಾಗತ ವಜ್ರ ಪಂಜರ ಮಾವನಂಕಕಾರ ವಿರೋಧಿನಾಯಕರ ಗಂಡ ಮಹಾಪಸಾಯ್ತಂ ಪರಮವಿಶ್ವಾಸಿ ದೇವೆಯನಾಯಕ ಎಂದು ಹೊಗಳಿದೆ. ಈ ಬಿರುದುಗಳನ್ನು ಗಮನಿಸಿದರೆ ಬಲ್ಲಾಳನ ಆಪ್ತರಲ್ಲಿ ಈತನೂ ಒಬ್ಬನೆನಿಸುತ್ತದೆ. ದೇವೆಯನಾಯಕನ ಹೆಂಡತಿ ಪದುಮಲೆನಾಯಕಿತಿ. ಇವರ ಹಿರಿಯ ಮಗನೇ ಮಯಿಲೆಯನಾಯಕ. ಹಿರಿಯಮಗನೆಂದು ಕರೆದಿದ್ದರು ಇತರೆ ಮಕ್ಕಳ ಉಲ್ಲೇಖವಿಲ್ಲ. ಈತನನ್ನು ಸುಪುತ್ರ ಗೋತ್ರಪವಿತ್ರ ದ್ವಿಜದೇವತಾತುಪರ ಯಾಚಕರಕಲ್ಪವ್ರಿಕ್ಷ ಸತ್ಯಧೀರ ತಂತ್ರದ ಹಿರಿಯಮಗ ಎಂದು ಹೊಗಳಿದೆ.
ಮಯಿಲೆಯನಾಯಕನು ದಿಡುಗಿನ-ದಿಡಗ-ವ್ರಿತ್ತಿಯ ಕಬ್ಬಳ್ಳಿಯ ಊರಮುಂದೆ ಕಂನ್ನೆಗೆರೆಯನ್ನು ಕಟ್ಟಿಸಿ ದೇವೇಶ್ವರ ದೇವಾಲಯಕ್ಕೆ ದತ್ತಿ ಬಿಡುತ್ತಾನೆ. ದೇವೇಶ್ವರ ದೇವಾಲಯವು ಆತನ ತಂದೆ ದೇವೆಯನಾಯಕನ ಹೆಸರಿನಲ್ಲಿ ಕಟ್ಟಿಸಿದ ದೇವಸ್ಥಾನವಾಗಿರಬಹುದೆಂದು ಊಹಿಸಬಹುದು. ಇಲ್ಲಿಯೂ ಕಂನ್ನೆಗೆರೆ ಎಂದರೆ ಮೊದಲು ಕಟ್ಟಿಸಿದ ಕೆರೆಯೆಂದು ಅರ್ಥೈಸಬಹುದಾಗಿದೆ. ಆದರೆ ಸರಣಿಯಲ್ಲಿ ಬರುವ ಮೊದಲ ಕೆರೆ ಎಂದೂ ಅರ್ಥವಿದೆ. ತಾನೇ ಕಟ್ಟಿಸಿದ ಕಂನ್ನೆಗೆರೆಯ ಎರಡೂ ಕೋಡಿಗಳಲ್ಲಿನ ಭೂಮಿಗಳನ್ನು ಮಾಚಜೀಯನ ಮಗ ಹೊಂನಜೀಯನ ಕಾಲನ್ನು ತೊಳೆದು ದತ್ತಿ ಬಿಡುತ್ತಾನೆ.
ಎರಡನೇ ಶಾಸನದಲ್ಲಿ೧೮ ದಿವೇಸ್ವರ ದೇವರ ಕೆರೆಗೆ ಹೊಂನಜೀಯನ ಮಗ ಸಕಳೇಶ್ವರ ಪಣ್ಡಿತರು ವಿಳಂಬಿ ಸಂವತ್ಸರದ ವೈಸಾಕ ಸು ೧೦ ಸೋಮುವಾರದಂದು ತುಂಬಿನಾ ಖಂಭ ನಿಲಿಸಿದ ಮಾಡಿದ ಬಿನಾಣೆ ಮಸಣಯೋಜಮಲ್ಲೋಸುಜನು ಎಂದಿದೆ. ಇಲ್ಲಿ ಬಂದಿರುವ ಎರಡು ಹೆಸರುಗಳು-ಹೊಂನಜೀಯ ಮತ್ತು ಮಸಣಯೋಜ ಮೊದಲಿನ ಶಾಸನದಲ್ಲಿಯೂ ಬಂದಿವೆ. ಅಲ್ಲಿ ಮಾಚಜೀಯನ ಮಗ ಹಂನಜೀಯನೆಂದೂ ಮಾಡಿದ ಬಿವಣೆಮಾರೋಜನುಂ ಮಸಣೋಜನುಂ ಎಂದೂ ಉಲ್ಲೇಖಿಸಲಾಗಿದೆ. ಮೊದಲ ಶಾಸನದಲ್ಲಿ ಉಲ್ಲೇಖವಾಗಿರುವ ಹಂನಜೀಯನು ಎರಡನೇ ಶಾಸನದಲ್ಲಿ ಆತನ ಮಗ ಸಕಳೇಸ್ವರ ಪಣ್ಡಿತನೊಂದಿಗೆ ಉಲ್ಲೇಖವಾಗಿರುವುದು ಸ್ಪಷ್ಟವಾಗಿದೆ. ಹಾಗೆಯೇ ಮೊದಲನೇ ಶಾಸನವನ್ನು ತಯಾರಿಸಿದವರು ಮಾರೋಜ ಮತ್ತು ಮಸಣಯೋಜ ಎಂಬುವವರು. ಅದೇ ಮಸಣೋಜ ಎರಡನೇ ಶಾಸನದಲ್ಲಿ ಸಕಳೇಸ್ವರಪಣ್ಡಿತ ನಿಲ್ಲಿಸಿದ ತೂಬಿನ ಕಂಬವನ್ನು ಮಾಡಿದವನಾಗಿದ್ದಾನೆ. ಅಂದರೆ ಈ ಶಾಸನ ಮೊದಲಿನ ಶಾಸನದ ಕಾಲ ಕ್ರಿ.ಶ.೧೧೮೬ ಕ್ಕಿಂತ ಸುಮಾರು ೫೦ ವರ್ಷಗಳ ಇತ್ತೀಚಿನದಾಗಿರುವ ಸಾಧ್ಯತೆಯಿದೆ. ಆದರೆ ಎರಡನೇ ಶಾಸನದಲ್ಲಿ ಶಕವರ್ಷದ ಉಲ್ಲೇಖವಿಲ್ಲದೆ, ವಿಳಂಬಿ ಸಂವತ್ಸರದ ವೈಸಾಕ ಸು ೧೦ ಸೋಮುವಾರ ಎಂದಷ್ಟೇ ಇದ್ದು, ಅದರ ಕಾಲವನ್ನು ಸುಮಾರು ಹದಿನಾರನೇ ಶತಮಾನ ಎಂದಿರುವುದಲ್ಲದೆ, ೧೫೬೮ ಮೇ ೫ನೇ ತಾರೀಕಿಗೆ ಸರಿಹೊಂದಿಸಿದ್ದಾರೆ. ಅದಕ್ಕೆ ಅವರು ಬೇರಾವುದೆ ಕಾರಣವನ್ನೂ ಕೊಟ್ಟಿಲ್ಲ. ಪ್ರಸ್ತುತ ಶಾಸನದ ಕಾಲ ಹದಿಮೂರನೇ ಶತಮಾನವೆಂದು ಹೇಳಬಹುದಾಗಿದೆಯಲ್ಲದೆ, ಸಂವತ್ಸರದ ಆಧಾರದ ಪ್ರಸ್ತುತ ಶಾಸನದ ಕಾಲವು ಕ್ರಿ.ಶ. ೧೨೩೮ ಏಪ್ರಿಲ್ ೨೫ಕ್ಕೆ ಸರಿಹೊಂದುತ್ತದೆ. ಆದರೆ ಸೋಮವಾರದ ಬದಲಾಗಿ ಭಾನುವಾರ ಬರುತ್ತದೆ.೧೯ ದಿವೇಸ್ವರ ದೇವರ ಕೆರೆಗೆ ತೂಬಿನ ಕಂಬವನ್ನು ನಿಲ್ಲಿಸಿದರೆಂದರೆ ಅದು ಮಯಿಲೆಯನಾಯಕ ಕಟ್ಟಿಸಿದ ಕಂನ್ನೆಗೆರೆಯೇ ಆಗಿರುವ ಸಾಧ್ಯತೆಯಿದೆ. ದಿವೇಸ್ವರ ದೇವಾಲಯವನ್ನು ಮಯಿಲೆಯನಾಯಕನೇ ಕಟ್ಟಿಸಿದನೆಂದು ಮೊದಲನೇ ಶಾಸನದಿಂದ ಸ್ಪಷ್ಟವಾಗಿದೆ.

ಬಾಚರಸ. (೧೨-೧೩ನೆಯ ಶತಮಾನ)
ಬಾಚರಸನೆಂಬುವನು ಸಂತೇಶಿವರದಲ್ಲಿ ಕೆರೆಯೊಂದನ್ನು ಕಟ್ಟಿಸಿದ ವಿಚಾರ ಒಂದು ಶಾಸನದಲ್ಲಿದೆ.೨೦ ಬಾಚರಸನ ಪೂರ್ವೋತ್ತರಗಳು ಈ ಶಾಸನದಲ್ಲಿಯಾಗಲಿ, ಸಂತೇಶಿವರದ ಉಳಿದ ಶಾಸನಗಳಲ್ಲಿಯೆ ಆಗಲಿ ಇಲ್ಲ. ಪ್ರಸ್ತುತ ಶಾಸನದಲ್ಲಿ ಭಾರದ್ವಾಜ ಗೋತ್ರದ ಕಾಳಿಮಯ್ಯನಿಂದ ಆರಂಭಿಸಿ, ನಾರಾಯಣ ಮತ್ತು ಕೇಶವ ಇವರವರೆಗೆ ಮೂರು ತಲೆಮಾರಿನ ವಿವರಗಳಿವೆ. ಇವರಲ್ಲಿ ನಾರಾಯಣನೆಂಬುವನು ಹೊಯ್ಸಳ ಬಲ್ಲಾಳನಲ್ಲಿ ಸಂಧಿವಿಗ್ರಹಿಯಾಗಿದ್ದನೆಂದೂ, ಅವನು ಸಂತೇಶಿವರದ ಗಂಗೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿದನೆಂದು ಉಲ್ಲೇಖಿಸುತ್ತದೆ. ಅದೆ ಸಮಯದಲ್ಲಿ, ಬಾಚರಸನು ಕಂನ್ನೆಗರೆಯನ್ನು ಕಟ್ಟಿಸಿ ದೇವರಿಗೆ ದತ್ತಿ ಬಿಡುತ್ತಾನೆ. ಕಂನ್ನಗೆರೆ ಅಂದರೆ ಆತನು ಕಟ್ಟಿಸಿದ ಮೊದಲ ಕೆರೆ ಎಂದು ಅರ್ಥೈಸಬಹುದಾಗಿದೆ. ಆದರೆ ಭಾರದ್ವಾಜ ಗೋತ್ರದವರಿಗೂ ಬಾಚರಸನಿಗೂ ಇರುವ ಸಂಬಂಧವೇನೆಂಬುದು ಸ್ಪಷ್ಟವಾಗುವುದಿಲ್ಲ.

ಸಾತವ್ವೆ (ಶಾಂತಲಾದೇವಿ) (ಕ್ರಿ.ಶ. ೧೧೮೧)
ಚೆನ್ನರಾಯಪಟ್ಟಣದ ಶಾಸನದಲ್ಲಿ೨೧ ಸಾತವ್ವೆ ಎಂಬುವಳು ಶಾಂತಿಸಮುದ್ರ ಎಂಬ ಕೆರೆಯನ್ನು ಕಟ್ಟಿಸಿದ ವಿಚಾರವಿದೆ. ಅಲ್ಲಿನ ಇತರ ಶಾಸನಗಳಿಂದ ಮುಖ್ಯವಾಗಿ ೯,೧೮ಮತ್ತು ೧೯ನೇ ಸಂಖ್ಯೆಯ ಶಾಸನಗಳಿಂದ ಸಾತವ್ವೆಯ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಬಹುದಾಗಿದೆ. ಈಕೆಯನ್ನು ಶಾಂತಲಾದೇವಿ ಎಂದೂ ಕರೆಯಲಾಗಿದೆ.
ಶ್ರೀನಿಧಿ ದೇವಿಮಯ್ಯ ಮತ್ತು ಅರಸವ್ವೆಯವರ ಮಗ ಚಂದಿಮಯ್ಯ ಎಂಬುವವನು ಮಹಾಪ್ರಧಾನಿ ಹೆಗ್ಗಡೆಯಾಗಿದ್ದವನು. ಅವನ ಹೆಂಡತಿ ಚಾಮಲೆ. ಅವರಿಗೆ ಶಂಕರದೇವ, ಬಮ್ಮದೇವ, ಶಾಂತಲೆ ಮತ್ತು ರಾಮದೇವ ಎಂಬ ನಾಲ್ವರು ಮಕ್ಕಳು. ಶಾಂತಲೆಯನ್ನು ಹೊಯ್ಸಳ ದಂಡನಾಯಕರಲ್ಲಿ ಒಬ್ಬನಾದ ಮಾಚಿರಾಜನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಮಾಚಿರಾಜನ ತಂದೆ ಮಾರ ಎಂಬುವವನು. ಮಹಾಪ್ರಧಾನಿ ಹೆಗ್ಗಡೆಯ ಮಗಳೂ, ದಂಡನಾಯಕನ ಹೆಂಡತಿಯೂ ಆದ ಸಾತವ್ವೆಯನ್ನು ಶಾಸನದಲ್ಲಿ ಪರಮದಯಾಳು ಮಾನ್ಯೆ ನಿಜಗೋತ್ರಪವಿತ್ರೆ ಸನ್ಧಾನ ದಾನ ನಿರ್ಭ್ಬರತ ಭಕ್ತಿಯುಕ್ತಿ ಮಿತ್ರೇಶ ಪಾದಾಬ್ಜ ವರಪ್ರಸಾದದೆ ಬಾಸುರಕೀರ್ತಿ ನಿರ್ಮ್ಮಳಿತ ಮೂರ್ತಿ ಪತಿಬ್ರತೆ ಪೆಂಪನಾವಗಂ ಕರಣದ ಮಾಚಿರಾಜನ ಮನಪ್ರಿಯೆ ಶಾಂತಲದೇವಿ ಎಂದು ಹೊಗಳಲಾಗಿದೆ.
ದೇವಿಮಯ್ಯ ಪತ್ನಿ ಅರಸವ್ವೆ

ಚಂದಿಮಯ್ಯ ಪತ್ನಿ ಚಾಮಲೆ
ಶಂಕರದೇವ
ಬಮ್ಮದೇವ
ಶಾಂತಲೆ (ಪತಿ ಮಾರನ ಮಗ ಮಾಚಿರಾಜ)
ರಾಮದೇವ

ಇನ್ನೊಂದು ಶಾಸನದಲ್ಲಿ೨೨ ಶಂಕರೇಶ್ವರ, ಬಮ್ಮದೇವ, ಶಾಂತೇಶ್ವರ ಮತ್ತು ರಾಮನಾಥ ದೇವಾಲಯಗಳ ಉಲ್ಲೇಖವಿದೆ. ಈ ದೇವಾಲಯಗಳ ಹೆಸರಿಗೂ, ಚಂದಿಮಯ್ಯನ ನಾಲ್ವರು ಮಕ್ಕಳ ಹೆಸರಿಗೂ ಇರುವ ಸಾಮ್ಯದಿಂದಾಗಿ, ಈ ನಾಲ್ಕೂ ಜನರ ಹೆಸರಿನಲ್ಲಿ ನಾಲ್ಕು ದೇವಾಲಯಗಳು ನಿರ್ಮಾಣವಾಗಿವೆ ಎನ್ನಬಹುದು ೯ನೆಯ ಶಾಸನದಲ್ಲಿ ಶಾಂತಲೆಯೇ ಶಾಂತೇಶ್ವರ ದೇವಾಲಯವನ್ನು ಕಟ್ಟಿಸಿದಳೆಂಬ ಉಲ್ಲೇಖವಿದೆ. ಅದರ ಜೊತೆ ಶಾಂತಿಸಮುದ್ರವೆಂಬ ಕೆರೆಯನ್ನು ಮಾಡಿಸಿದಳೆಂದು ತಿಳಿದುಬರುತ್ತದೆ. ಶಾಂತಲೆಯ ಈ ಎಲ್ಲಾ ಕೆಲಸಗಳನ್ನು ಮತ್ತು ಅವಳ ತಂದೆ ಹಾಗೂ ಪತಿಯ ಅಧಿಕಾರಗಳನ್ನು ಗಮನಿಸಿದರೆ, ಆ ಕಾಲಕ್ಕೆ ಸಾತವ್ವೆಯು ಪ್ರಮುಖ ಮಹಿಳೆಯಾಗಿರಬೇಕು ಅನ್ನಿಸುತ್ತದೆ. ಆಕೆ ಮಾಡಿದ ಇತರ ಕೆಲಸಗಳೆಂದರೆ, ದೇವಾಲಯ ನಿರ್ಮಾಣಕ್ಕೆ ಮತ್ತು ಎರಡು ತಾಮ್ರ ಶಾಸನಗಳ ಕಂಡರಣೆಗೆ ದತ್ತಿ ಬಿಟ್ಟದ್ದು. ಅನೇಕ ತೆರಿಗೆಗಳ ಜೊತೆಗೆ ಬಿತ್ತುವಟ್ಟವನ್ನು ದೇವಾಲಯಗಳ ನಿರ್ವಹಣೆಗಾಗಿ ಕೊಟ್ಟಿದ್ದು ಮತ್ತು ಶಾಂತೇಶ್ವರ ದೇವಾಲಯವನ್ನು ಕಟ್ಟಿದ ಅಸಂದಿಯ ಸೋಮೋಜನ ಮಗ ಹರಿಯೋಜನಿಗೆ ದಾನ ಕೊಟ್ಟಿದ್ದು ಮುಂತಾದವುಗಳು.

ಕೇಸಿರಾಜ (ಕ್ರಿ.ಶ. ೧೨೦೯)
ಅಗ್ರಹಾರ ಬೆಳಗುಲಿಯ ಒಂದು ಶಾಸನವು೨೩ ಕೇಶವಸಮುದ್ರ ಮತ್ತು ಲಕ್ಷ್ಮಿಸಮುದ್ರಗಳೆಂಬ ಎರಡು ಕೆರೆಗಳನ್ನು ಕೇಸಿರಾಜ ಕಟ್ಟಿಸಿದನೆಂದು ಉಲ್ಲೇಖಿಸುತ್ತದೆ. ಈ ಕೇಸಿರಾಜ ಶಬ್ದಮಣಿದರ್ಪಣಂ ಕೃತಿಯ ಕರ್ತೃವಲ್ಲ. ಈ ಶಾಸನದ ಕಾಲ ಕ್ರಿ.ಶ. ೧೨೦೯. ಹೊಯ್ಸಳ ವೀರಬಲ್ಲಾಳನನ್ನು ಉಲ್ಲೇಖಿಸುವ ಈ ಶಾಸನದಲ್ಲಿ, ಕೇಸಿರಾಜನನ್ನು ಬಲ್ಲಾಳನ ದಂಡನಾಯಕನೆಂದು ಕರೆಯಲಾಗಿದೆ. ಇಲ್ಲಿನ ಏಳು ಶಾಸನಗಳು ಸಂ.೧೦ರಲ್ಲಿವೆ. ಇವುಗಳ ಅಧ್ಯಯನದಿಂದ ಕೇಸಿರಾಜನ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯಬಹುದಾಗಿದೆ. ರಾಮದಂಡಾಧಿಪ (ವಿನಯಾದಿತ್ಯನ ಮಂತ್ರಿ)

ಶ್ರೀಧರದಂಡನಾಥ (ಎರೆಯಂಗನ ಮಂತ್ರಿ)
ಮಲ್ಲಿದೇವದಂಡಾಧಿಪ(ವಿಷ್ಣುವರ್ಧನನ ಆಳ್ವಿಕೆಯಲ್ಲಿ ಮಂತ್ರಿ)
ಮಾಧವ ಅಮಾತ್ಯ (ನರಸಿಂಹನ ಆಳ್ವಿಕೆಯಲ್ಲಿ ಮಂತ್ರಿ)
ನಾಚಣದಂಡನಾಥ
ದಾವರಸ
ಕೇಶವ (ವೀರಬಲ್ಲಾಳನ ಆಳ್ವಿಕೆಯಲ್ಲಿ)
ಮಲ್ಲಪ
ಮಾರಯ್ಯ
ಕಂಚಲಾದೇವಿ
ಬೆಟ್ಟರಸ ಮಂತ್ರಿ
ದಾಮದಂಡೇಶ
ದಾಮರಾಜಸಚಿವ
ಕೇಶರಾಜಸೇನಾಧಿಪ

ಹೊಯ್ಸಳ ವಿನಯಾದಿತ್ಯನಲ್ಲಿ ಮಂತ್ರಿಯಾಗಿದ್ದವನು ರಾಮ. ಈ ರಾಮನ ಮಗ ಶ್ರೀಧರದಂಡನಾಥ ವಿನಯಾದಿತ್ಯನ ಮಗ ಎರೆಯಂಗನಲ್ಲಿ ಮಂತ್ರಿಯಾಗಿದ್ದವನು. ಶ್ರೀಧರದಂಡನಾಥನಿಗೆ ಮೂವರು ಮಕ್ಕಳು ಮಲ್ಲಿದೇವದಂಡನಾಥ, ದಾಮರಾಜ ಮತ್ತು ಕೇಶವರಾಜಸೇನಾಧಿಪ ಆ ಮೂವರೂ ಹೊಯ್ಸಳ ವಿಷ್ಣುವರ್ಧನನಲ್ಲಿ ಅಧಿಕಾರಿಗಳಾಗಿದ್ದರು. ಅವರಲ್ಲಿ ಹಿರಿಯ ಮಲ್ಲಿದೇವ ದಂಡಾಧಿಪನಿಗೆ ಮಾಧವಾಮಾತ್ಯ, ಬೆಟ್ಟರಸ ಮತ್ತು ದಾಮದಂಡೇಶ ಎಂಬ ಮೂವರು ಮಕ್ಕಳು. ಹೊಯ್ಸಳ ಒಂದನೇ ನರಸಿಂಹನಲ್ಲಿ ಅಧಿಕಾರಿಗಳಾಗಿದ್ದವರು. ಅವರಲ್ಲಿ ಹಿರಿಯನಾದ ಮಾಧವ ಅಮಾತ್ಯನಿಗೆ ನಾಚಣದಂಡನಾಥ, ದಾವರಸ, ಕೇಶವ, ಮಲ್ಲಪ ಮತ್ತು ಮಾರಮಯ್ಯ ಎಂಬ ಐವರು ಗಂಡುಮಕ್ಕಳು ಮತ್ತು ಕಂಚಲಾದೇವಿ ಎಂಬ ಒಬ್ಬ ಹೆಣ್ಣುಮಗಳು. ಅವರಲ್ಲಿ ಮದ್ಯಮನಾದ ಕೇಶವನೇ ಪ್ರಸ್ತುತ ಶಾಸನದ ಕೇಂದ್ರ ವ್ಯಕ್ತಿ. ಆತನನ್ನು ಕೇಶವಚಮೂಪಂ ವೀರಬಲ್ಲಾಳ ಭೂವರನಾಸ್ತಾನದೊಳಿರ್ದಪಂ ಮಣಿಗಳೊಳ್ ಮಾಣಿಕ್ಯಮಿರ್ಪಂದದಿ ಎಂದು ಕೊಂಡಾಡಿದೆ. ಇನ್ನೊಂದು ಕಂದ ಪದ್ಯದಲ್ಲಿ, ಕೆಳಗಿನಂತೆ ವರ್ಣಿಸಲಾಗಿದೆ.

ನಿಖಿಳ ಚಮೂಪರ ನುಡಿ ಜಳ
ಲಿಖಿತಂ ಕೇಶವ ಚಮೂವರಂ ಚತುರ ಚತು
ರ್ಮ್ಮಖನಾಡಿನ ನುಡಿಯೆ ಶಿಳಾ
ಲಿಕೀತಂ ಬಲ್ಲಾಳ ಭೂಮಿಪಾಳನ ಸಭೆಯೊಳ್

ಕೇಶವನು ಕ್ರಿ.ಶ. ೧೨೦೯ ಡಿಸೆಂಬರ್ ೫ ರಲ್ಲಿ ನಿರ್ಗುಂದ ನಾಡಿನ ಪಂಜಾಡಿಯ ಬೆಳ್ಗಲಿಯನ್ನು ಧಾರಾಪೂರ್ವಕವಾಗಿ ಪಡೆದು, ಕೇಶವಪುರವೆಂಬ ಅಗ್ರಹಾರವನ್ನು ಮಾಡಿಸಿ, ಕೇಶವೇಶ್ವರ ದೇವಾಲಯವನ್ನು ಮಾಡಿಸಿ ಕೇಶವಸಮುದ್ರ ಮತ್ತು ಲಕ್ಷ್ಮಿಸಮುದ್ರಗಳೆಂಬ ಎರಡು ಕೆರೆಗಳನ್ನು ಕಟ್ಟಿಸುತ್ತಾನೆ. ಅದರ ಶ್ರೀಕಾರ್ಯಕ್ಕೆ ವೀರಬಲ್ಲಾಳನಲ್ಲಿ ಭಿನ್ನವಿಸಿಕೊಂಡು, ಒಪ್ಪಿಸಿ, ಬೆಳ್ಗಲಿಯ ಗೌಡರುಗಳಿಂದ ಅರಸನಿಗೆ ಸಲ್ಲುತ್ತಿದ್ದ ಕೊಡುಗೆಯನ್ನು ದೇವದತ್ತಿಯಾಗಿ ಬಿಡಿಸುತ್ತಾನೆ. ಬೆಳ್ಗಲಿಯಿಂದ ಪಡುವಣಕ್ಕಿರುವ ತಗಡೂರಿನ ಕೇಶವ ದೇವಸ್ಥಾನಕ್ಕೂ ದಾನ ದತ್ತಿಗಳನ್ನು ಬಿಡುತ್ತಾನೆ.
ಕೇಶವನು ಕಟ್ಟಿಸಿದ ದೇವಾಲಯವು ನುಗ್ಗೆಹಳ್ಳಿಯ ಸದಾಶಿವ ದೇವಾಲಯವನ್ನು ಹೋಲುತ್ತದೆ. ದ್ವಿಕೂಟ ದೇವಾಲಯವಾಗಿದ್ದು, ಪೂರ್ವಕ್ಕೆ ಮುಖ ಮಾಡಿರುವ ಗರ್ಭಗುಡಿಯಲ್ಲಿ ಶಿವಲಿಂಗವೂ ದಕ್ಷಿಣಕ್ಕೆ ಮುಖ ಮಾಡಿರುವ ಗರ್ಭಗುಡಿಯಲ್ಲಿ ಕೇಶವನ ಶಿಲ್ಪವೂ ಇವೆ. ಶಾಸನಗಳಲ್ಲಿರುವಂತೆ ಈಗಲೂ ಕೇಶವೇಶ್ವರ ದೇವಾಲಯವೆಂದೇ ಕರೆಯಲಾಗುತ್ತಿದೆ.
ಕೇಶವನು ಕಟ್ಟಿಸಿದ ಕೆರೆಗಳಲ್ಲಿ ಲಕ್ಷ್ಮಿಸಮುದ್ರವು ವಿಶಾಲವಾದ ಕೆರೆಯಾಗಿದೆ. ಅದನ್ನೀಗ ಹೊನ್ನಮ್ಮನಕೆರೆ ಎಂದು ಕರೆಯಲಾಗುತ್ತಿದೆ. ನಂತರದ ದಿನಗಳಲ್ಲಿ, ಆ ಕೆರೆಯ ಏರಿಯ ಹಿಂಬದಿಗೆ ಇರುವ ಹೊನ್ನಮ್ಮ ಎಂಬ ಗ್ರಾಮದೇವತೆಯ ಗುಡಿಯಿಂದಾಗಿ ಕೆರೆಗೆ ಈ ಹೆಸರು ಬಂದಿರಬೇಕು. ಎರಡು ಕೋಡಿ ಒಂದು ತೂಬು ಇರುವ ಈ ಕೆರೆ ಸಾವಿರಾರು ಎಕರೆ ಜಮೀನಿಗೆ ನೀರೊದಗಿಸುತ್ತದೆ. ಮೊದಲು ಮೂರು ತೂಬುಗಳಿದ್ದವೆಂದು, ಅವುಗಳಲ್ಲಿ ಎರಡು ಹೂತು ಹೋಗಿವೆಯೆಂದು ಊರಿನವರು ಹೇಳುತ್ತಾರೆ.
ಕೇಶವಸಮುದ್ರವೆಂಬುದು ಕೇಶವೇಶ್ವರ ದೇವಾಲಯಕ್ಕೆ ಅಂಟಿಕೊಂಡಂತೆ ಇರುವ, ಈಗ ಹೊಸಕೆರೆ ಎಂದು ಕರೆಯುವ ಸಣ್ಣ ಕೆರೆಯಾಗಿದೆ. ಇದರ ಕೆಳಗೆ, ಈಗ ನಾಚಗೆರೆ ಎಂದು ಕರೆಯಲ್ಪಡುತ್ತಿರುವ ಕೆರೆಯಿದೆ. ಪ್ರಸ್ತುತ ಶಾಸನದಲ್ಲಿ ನಾಚರಸನಕೆರೆ ಎಂಬುದರ ಉಲ್ಲೇಖವಿದ್ದು, ನಾಚರಸನಕೆರೆಯೇ ನಾಚಗೆರೆಯಾಗಿ ಬಳಕೆಯಲ್ಲಿರಬಹುದು. ನಾಚರಸನಕೆರೆಯನ್ನು ಹೆಸರಿನ ಸಾಮ್ಯದಿಂದಾಗಿ, ಕೇಶವನ ಅಣ್ಣನಾದ ನಾಚಣ್ಣದಂಡನಾಯಕನು ಕಟ್ಟಿಸಿರಬಹುದೆಂದು ಊಹಿಸಲು ಸಾಧ್ಯವಿದೆ. ಕೇಶವೇಶ್ವರ ದೇವಾಲಯದ ನಿರ್ಮಾಣವಾದ ನಂತರ ದೇವಾಲಯದ ಬಳಕೆಗೆಂದು ನಾಚರಸನ ಕೆರೆಯ ಒಂದು ಭಾಗಕ್ಕೆ ಏರಿ ಹಾಕಿ ಕೇಶವಸಮುದ್ರ ಎಂದು ಪ್ರತ್ಯೇಕಿಸಿಕೊಂಡಿರುವ ಸಾಧ್ಯತೆಯಿದೆ.

ಕಮ್ಮಟದ ಬಸವಣ್ಣ (ಕ್ರಿ.ಶ. ೧೨೫೨)
ನುಗ್ಗೆಹಳ್ಳಿಯ ಒಂದು ಶಾಸನದಲ್ಲಿ೨೪ ಕಮ್ಮಟದ ಬಸವಣ್ಣ ಎಂಬುವವನು ಒಂದು ಕೆರೆ ಕಟ್ಟಿಸಿದ ವಿಚಾರವಿದೆ. ಶಾಸನದ ಕಾಲ ಕ್ರಿ.ಶ. ೧೨೫೨. ಹೊಯ್ಸಳ ಸೋಮೇಶ್ವರನ ಮಹಾಪ್ರಧಾನಿ, ಸಂಧಿವಿಗ್ರಹಿ ಬೊಮ್ಮಣ್ಣದಂಡನಾಯಕನಿಗೆ ಪ್ರೀತಿಪಾತ್ರನಾಗಿದ್ದ ಕಮ್ಮಟದ ಬಸವಣ್ಣನದು ಕಾಷ್ಯಪಗೋತ್ರ. ತಂದೆ ವಿಷ್ಣುಭಟ್ಟ. ತಾಯಿ ಲಕ್ಷ್ಮೀದೇವಿ. ಬೊಮ್ಮಣ್ಣದಂಡನಾಯಕನನ್ನು ಬಸವಣ್ಣನ ಪೋಷಕ ತಂದೆ ಎಂದು ಕರೆಯಲಾಗಿದೆ. ಬಸವಣ್ಣನನ್ನು ಊರೊಡೆಯ ಬಸವರಸ ಎಂದೂ ಕಮ್ಮಟದ ಬಸವಣ್ಣ ಎಂದೂ ಕರೆಯಲಾಗಿದೆ. ಕಮ್ಮಟ ಎಂಬುದು ನಾಣ್ಯ ಟಂಕಿಸುವ ಹುದ್ದೆಯ ಹೆಸರಿರಬಹುದು. ನುಗ್ಗೆಹಳ್ಳಿಯ ಕಾಲುವಳ್ಳಿಯಾಗಿದ್ದ ಗೊಟ್ಟಿಕೆರೆಯಲ್ಲಿ ಒಂದು ಕೆರೆಯನ್ನು ಕಟ್ಟಿಸಿ ಬ್ರಹ್ಮಸಮುದ್ರವೆಂದು ಕರೆಯುತ್ತಾನೆ. ಅದೇ ಕೆರೆಯ ಮೊದಲೇರಿಯ ಹಳುಗಿನಲ್ಲಿಯ ಭೂಮಿಗಳನ್ನು ತತ್ಕಾಲೋಚಿತ ಕ್ರಯಕ್ಕೆ ಮೂಲದ್ರವ್ಯವನ್ನು ಕೊಟ್ಟು ಕ್ರಯಧಾನವಾಗಿ ಪಡೆದು, ನುಗ್ಗೆಹಳ್ಳಿಯ ನಾನಾಗೋತ್ರದ ಬ್ರಾಹ್ಮಣರುಗಳಿಗೆ, ಪ್ರತಿದಿನ ಹನ್ನೆರಡು ಜನ ಬ್ರಾಹ್ಮಣ ಭೋಜನಕ್ಕೆ ವ್ಯವಸ್ಥೆ ಮಾಡುತ್ತಾನೆ. ಇಂತಹ ಪುಣ್ಯಕೆಲಸಗಳನ್ನು ಮಾಡಿದ ಬಸವಣ್ಣ ಜನ್ಮವಿತ್ತ ತಂದೆ ವಿಷ್ಣುವರ್ಧನನ ಕುಲವನ್ನೂ, ಪೋಷಿಸಿದ ಬೊಮ್ಮಣ್ಣ ದಂಡನಾಯಕನ ಕುಲವನ್ನೂ ಉದ್ಧರಿಸಿದನೆಂದು ಶಾಸನದಲ್ಲಿ ಹೇಳಿದೆ.

ಲಕ್ಷ್ಮಿ (ಲಕ್ಕವ್ವೆಯಕ್ಕ) (ಕ್ರಿ.ಶ. ೧೨೫೩)
ನುಗ್ಗೆಹಳ್ಳಿಯ ಮತ್ತೊಂದು೨೫ ಶಾಸನವು ಲಕ್ಕವ್ವೆ ಎಂಬುವವಳು ಒಂದು ಕೆರೆಯನ್ನು ಕಟ್ಟಿಸಿ ದತ್ತಿ ಬಿಟ್ಟಿದ್ದನ್ನು ಉಲ್ಲೇಖಿಸುತ್ತದೆ. ಕೆರೆಯನ್ನು ಶಾಸನದಲ್ಲಿ ಹಿರಿಯಕೆರೆ ಎಂದಷ್ಟೇ ಕರೆಯಲಾಗಿದೆ. ಈಗ ನುಗ್ಗೆಹಳ್ಳಿ ಕೆರೆ ಎಂದೂ, ಹಿರೆಕೆರೆ ಎಂದೂ ಕರೆಯಲ್ಪಡುತ್ತಿರುವ ಇದು ಸಾಕಷ್ಟು ದೊಡ್ಡ ಕೆರೆಯಾಗಿದ್ದು, ಹಿರಿಯಕೆರೆ ಎಂಬ ಹೆಸರಿಗೆ ತಕ್ಕಂತೆಯೆ ಇದೆ. ಲಕ್ಷ್ಮಿ ಅಥವಾ ಲಕ್ಕವ್ವೆಯಕ್ಕ ಹೊಯ್ಸಳ ಸೋಮೇಶ್ವರನ ಮಹಾಪ್ರಧಾನಿ ಬೊಮ್ಮಣ್ಣದಂಡನಾಯಕನ ಅಕ್ಕ. ನುಗ್ಗೆಹಳ್ಳಿಯಲ್ಲಿ ವಿಜಯಸೋಮನಾಥಪುರ ಎಂಬ ಅಗ್ರಹಾರವನ್ನು ಮಾಡಿಸಿ, ಪ್ರಸನ್ನ ಕೇಶವ, ನರಸಿಂಹ, ಗೋಪಾಲಸ್ವಾಮಿ ದೇವರುಗಳ ತ್ರಿಕೂಟ ದೇವಾಲಯವನ್ನೂ ಮತ್ತು ಸದಾಶಿವ ದೇವಾಲಯವನ್ನೂ ಕಟ್ಟಿಸಿದ ಕೀರ್ತಿ ಬೊಮ್ಮಣ್ಣದಂಡನಾಯಕನದು.
ಲಕ್ಕವ್ವೆಯಕ್ಕನವರು ತಾವೇ ಕಟ್ಟಿಸಿದ ಹಿರಿಯಕೆರೆಯ ಕೆಳಗೆ ಮೂವತ್ತೆರಡು ಮೆಟ್ಟಿನಗಳೆದು, ಕಂಬ ಮುಂನೂರು ಬೀಜವರಿಯ ನಾಲ್ಕು ಸಲಗೆ ಗದ್ದೆಯನ್ನು, ಆ ಕಾಲಕ್ಕೆ ಉಚಿತವಾದ ಕ್ರಯಕ್ಕೆ ಕ್ರಯದಾನವಾಗಿ ಪಡೆದು ನುಗ್ಗೆಹಳ್ಳಿಯ ನಾನಾ ಗೋತ್ರದ ಬ್ರಾಹ್ಮಣರುಗಳಿಗೆ ಪ್ರತಿದಿನ ಎಂಟು ಜನ ಬ್ರಾಹ್ಮಣ ಭೋಜನಕ್ಕೆ ಛತ್ರವಾಗಿ ಬಿಡುತ್ತಾಳೆ. ಅಲ್ಲದೆ ಅಡುಗೆ ಮಾಡುವವರಿಗೂ ಕೆಲವು ದತ್ತಿಗಳನ್ನು ಬಿಡುತ್ತಾಳೆ. ನುಗ್ಗೆಹಳ್ಳಿಯ ಪಕ್ಕದಲ್ಲಿರುವ ಅಕ್ಕನಹಳ್ಳಿ ಎಂಬ ಊರಿದ್ದು, ಈ ಲಕ್ಕವ್ವೆಯಕ್ಕನ ಹೆಸರಿನಿಂದ ಕರೆದಿದ್ದಿರಬಹುದು ಅಥವಾ ಆಕೆ ಆ ಊರಿನವಳೇ ಆಗಿರುವ ಸಾಧ್ಯತೆಯಿದೆ.
ಮೊದಲೇ ಹೇಳಿದಂತೆ ಹೆಸರಿಗೆ ತಕ್ಕಂತೆಯೆ ಇರುವ ಈ ಹಿರಿಯಕೆರೆಯು, ತಿಪಟೂರು ಚೆನ್ನರಾಯಪಟ್ಟಣ ರಸ್ತೆಯ ಪಕ್ಕದಲ್ಲಿಯೇ ಇದ್ದು, ಎರಡು ಕೋಡಿ ಮತ್ತು ಎರಡು ತೂಬುಗಳನ್ನು ಹೊಂದಿದೆ. ಹೊಯ್ಸಳ ಕಾಲದ ಕೆತ್ತನೆಯುಳ್ಳ ಎರಡು ತೂಬುಗಂಬಗಳು ಈಗಲೂ ಅಚ್ಚಳಿಯದಂತೆ ನಿಂತು ತಮ್ಮ ಗತಕಾಲದ ವೈಭವವನ್ನು ಸಾರುತ್ತಿವೆ.

ಪೆರುಮಾಳೆ ದಂಡನಾಯಕ (ಕ್ರಿ.ಶ. ೧೨೭೬)
ಕುಂದೂರಿನ ಶಾಸನವೊಂದು೨೬ ಪೆರುಮಾಳೆ ದಂಡನಾಯಕನು ಪೆರುಮಾಳೆಸಮುದ್ರ ಎಂಬ ಕೆರೆಯನ್ನು ಕಟ್ಟಿಸಿದ ವಿಚಾರವನ್ನು ತಿಳಿಸುತ್ತದೆ. ಶಾಸನದ ಕಾಲ ಕ್ರಿ.ಶ. ೧೨೭೬. ಹೊಯ್ಸಳ ಸೋಮೇಶ್ವರ ಮತ್ತು ಬಿಜ್ಜಳರಾಣಿಯ ಮಗ ಮೂರನೆಯ ನರಸಿಂಹನನ್ನು ಉಲ್ಲೇಖಿಸುತ್ತದೆ. ಗ್ಯಾರಹಳ್ಳಿಯ ಒಂದು ಶಾಸನ೨೭ ಮತ್ತು ಬಾಳಗಂಚಿಯ ಒಂದು ಶಾಸನದಲ್ಲಿ೨೮ ಪೆರುಮಾಳೆಯ ಬಗ್ಗೆ ವಿವರಗಳು ದೊರೆಯುತ್ತವೆ. ಮೂರನೆಯ ನರಸಿಂಹನಲ್ಲಿ ಮಂತ್ರಿಯಾಗಿದ್ದನೆಂದೂ, ಕುಂದೂರು ಶಾಸನದಲ್ಲಿ ಮಹಾಪ್ರಧಾನಿಯೆಂದೂ, ಗ್ಯಾರಹಳ್ಳಿಯ ಶಾಸನದಲ್ಲಿ ದಂಡನಾಯಕನೆಂದೂ ಕರೆಯಲಾಗಿದೆ. ಆತನದು ಆತ್ರೇಯ ಗೋತ್ರ. ತಂದೆ ವಿಷ್ಣುದೇವ. ತಾಯಿ ಮಂಚಲೆ. ಹೆಚ್ಚಿನ ವಿವರಗಳು ಲಭ್ಯವಿಲ್ಲ.
ಕುಂದೂರಿನಿಂದ ದಕ್ಷಿಣಕ್ಕೆ, ಗ್ಯಾರಹಳ್ಳಿಯಿಂದ ಪಶ್ಚಿಮಕ್ಕೆ ಪೆಱುಮಾಳೆಸಮುದ್ರ ಎಂಬ ಕೆರೆಯನ್ನು ಕಟ್ಟಿಸಿ, ವಿಜಯಮಾಧವಪುರವಾದ ಕುಂದೂರಿನಲ್ಲಿ ಪಂಚಿಕೇಶ್ವರ ಧರ್ಮಕ್ಕೆಂದು ತಾನು ಕಟ್ಟಿಸಿದ ಕೆರೆಯ ಹಿಂದಿನ ಭೂಮಿಗಳನ್ನು ದತ್ತಿ ಬಿಡುತ್ತಾನೆ. ಇದೇ ವಿಷಯವನ್ನು ಗ್ಯಾರಹಳ್ಳಿಯ ಶಾಸನವು ಸ್ಪಷ್ಟಪಡಿಸುತ್ತದೆ. ಈಗ ಗ್ಯಾರಹಳ್ಳಿಕೆರೆ ಎಂದು ಕರೆಯಲ್ಪಡುವ ಇದು ದೊಡ್ಡ ಕೆರೆಯಾಗಿದ್ದು, ಎರಡು ತೂಬು ಮತ್ತು ಒಂದು ಕೋಡಿಯನ್ನು ಒಳಗೊಂಡಿದೆ.
ಬಾಳಗಂಚಿಯಲ್ಲೂ ಸಹ, ನೀಲನಕಟ್ಟೆಯ ಕೆರೆಯನ್ನು ಮತ್ತು ಅದರ ಕಾಲುವೆ ತೂಬು ಕೋಡಿಗಳನ್ನು ಸರಿಯಾಗಿ ಇಟ್ಟುಕೊಳ್ಳಲು ದತ್ತಿಗಳನ್ನು ಬಿಡುತ್ತಾನೆ. ಆ ಕೆಲಸನ್ನು ಮಾಡುವ ವಕ್ಕಲಿಗನಿಗೆ, ಬಿಟ್ಟದತ್ತಿಯ ಒಂದು ಭಾಗ ಸಲ್ಲುವಂತೆ ಏರ್ಪಾಡು ಮಾಡುತ್ತಾನೆ. ಅಲ್ಲದೆ ಊರಿನ ಜನತೆಗೆ ಕೆಲವು ತೆರಿಗೆಗಳನ್ನು ಮಾನ್ಯ ಮಾಡುತ್ತಾನೆ.

೨. ಒಂದು ವರ್ಗದ ಅಥವಾ ಪಂಗಡದ ಹೆಸರಿನಿಂದ ಉಲ್ಲೇಖಿತವಾಗಿರುವ ಕೆರೆಗಳು
ಈ ವರ್ಗದ ಕೆರೆಗಳು ಒಂದು ಜಾತಿಯ ಅಥವಾ ಒಂದು ಪಂಗಡದ ಹೆಸರಿನಿಂದ ಸೂಚಿತವಾಗಿವೆ. ಅವುಗಳನ್ನು ಕಟ್ಟಿಸಿದವರು ಯಾರೆಂದು ತಿಳಿದು ಬರುವುದಿಲ್ಲ. ಈ ವಿಭಾಗದಲ್ಲಿ ಐದು ಕೆರೆಗಳನ್ನು ಗುರುತಿಸಬಹುದಾಗಿದೆ.

ಬಣಜಿಗನಕೆರೆ
ನುಗ್ಗೆಹಳ್ಳಿಯ ಒಂದು ಶಾಸನದಲ್ಲಿ೨೯ ಈ ಕೆರೆಯ ಉಲ್ಲೇಖವಿದೆ. ಪ್ರಸನ್ನಕೇಶವದೇವರ ಪ್ರತಿಷ್ಠಾಪನೆಯ ದಿನದಂದು ಹೊಯ್ಸಳ ದಂಡನಾಯಕ ಬೊಮ್ಮಣ್ಣನು ವೇದಾರ್ತ್ತದ ಮಂಚಂಣ್ನಳಿಗೆ ಕಬ್ಬಳಿಯ ವಿತ್ತಿಯೊಳಗಿನ ಬಣಜಿಗನಕೆರೆಯನ್ನು ಪ್ರಾಯಶ್ಚಿತ್ತ ರೂಪದಲ್ಲಿ ಕೊಡುತ್ತಾನೆ. ಕೆರೆಯನ್ನು ದಾನ ಕೊಡುವ ಅಧಿಕಾರವನ್ನು ಹೊಂದಿದ್ದ ಬೊಮ್ಮಣ್ಣದಂಡನಾಯಕನೇ ಆ ಕೆರೆಯನ್ನು ಕಟ್ಟಿಸಿರಬಹುದು. ಆ ಕೆರೆ ಬಣಜಿಗ ಅಂದರೆ ವ್ಯಾಪಾರಿಗಳ ಪಂಗಡಕ್ಕೆ ಸೇರಿದ್ದಾಗಿರಬಹುದು ಅಥವಾ ಆ ಪಂಗಡದ ಯಾರೋ ಒಬ್ಬನು ಮಾಡಿಸಿದ ಕೆರೆಯಾಗಿರಬಹುದು. ಅಂದರೆ ಬಣಜಿಗ ಎಂಬ ಪಂಗಡ ಕ್ರಿ.ಶ.೧೨೪೬ ಕ್ಕಿಂತಲೂ ಮುಂಚಿನಿಂದ ಇತ್ತೆಂದು ಊಹಿಸಬಹುದು. ಆದರೆ ಅದು ಜಾತಿ ಸೂಚಕವಾಗಿರದೆ ವೃತ್ತಿಸೂಚಕವಾಗಿದ್ದಿರಬಹುದು.

ಹಾರುವಗೆಱೆ
ಅದೇ ೧೧೩ನೇ ಶಾಸನದಲ್ಲಿ ಹಾರುವಗೆಱೆಯ ಉಲ್ಲೇಖವಿದೆ. ಸದಾಶಿವ ದೇವಾಲಯದ ಹಿಂಭಾಗದಲ್ಲಿ ಈಗಲೂ ಹಾರವನಕಟ್ಟೆ ಹಾರುವಯ್ಯನಕಟ್ಟೆ ಎಂದು ಕರೆಯಲ್ಪಡುವ ಸಣ್ಣ ಕೆರೆಯಿದೆ. ಅದಕ್ಕೆ ಒಂದು ತೂಬು ಸಹ ಇದೆ. ಇದೇ ಅಂದಿನ ಹಾರುವಗೆೞ. ಬೊಮ್ಮಣ್ಣದಂಡನಾಯಕನ ಅಕ್ಕ ಲಕ್ಕವ್ವೆಯು ಕಟ್ಟಿಸಿದ ಹಿರಿಯಕೆರೆಯ ಮೇಲಿನ ಮೂಲೆಗೆ ಏರಿ ಹಾಕಿ ಈ ಕೆರೆಯನ್ನು ನಿರ್ಮಿಸಲಾಗಿದೆ. ಹಿರಿಯಕೆರೆಯನ್ನು ಎಲ್ಲಾ ಜನಾಂಗದವರು ಬಳಸುತ್ತಿದ್ದುದರಿಂದ, ಅಗ್ರಹಾರದ ಬ್ರಾಹ್ಮಣರಿಗೆ ಮತ್ತು ದೇವಾಲಯದ ಕಾರ್ಯಗಳಿಗೆ ಅನುಕೂಲವಾಗುವಂತೆ ದೇವಾಲಯದ ಹಿಂದೆಯೇ ಇದನ್ನು ನಿರ್ಮಿಸಿಕೊಂಡಿರಬಹುದು. ಆಗ್ಗೆ ಕೇವಲ ಬ್ರಾಹ್ಮಣರೇ ಬಳಸುತ್ತಿದ್ದುದರಿಂದ ಹಾರುವಗೆೞೆ ಎಂಬ ಹೆಸರು ನಿಂತಿರಬೇಕು. ಆದರೆ ಈಗ ಅದನ್ನು ಎಲ್ಲಾ ವರ್ಗದವರು ಬಳಸುತ್ತಿದ್ದಾರೆ.
ಹೊಲೆಗೆಱೆ

ಕೆಂಬಾಳಿನ ಶಾಸನವೊಂದರಲ್ಲಿ೩೦ ಹೊಲಗೆಱೆ ಉಲ್ಲೇಖವಿದೆ. ಕೆಂಬಾಳಿನ ಸುತ್ತ ಮುತ್ತ ಒಂದು ದೊಡ್ಡ ಕೆರೆಯಲ್ಲದೆ ನಾಲ್ಕಾರು ಸಣ್ಣ ಪುಟ್ಟ ಕಟ್ಟೆಗಳಿವೆ. ಅದರಲ್ಲಿಯ ಒಂದು ಈ ಹೊಲಗೆಱೆಯಾಗಿರಬಹುದು. ಪ್ರಸ್ತುತ ಯಾವ ಕೆರೆ ಕಟ್ಟೆಯಾಗಲಿ ಈ ಹೆಸರಿನಿಂದ ಕರೆಯಲ್ಪಡುತ್ತಿಲ್ಲ. ಹೊಲೆಯರು ಕಟ್ಟಿಸಿದ್ದರಿಂದಲೋ ಅಥವಾ ಹೊಲೆಯರು ಮಾತ್ರ ಬಳಸುತ್ತಿದ್ದರಿಂದಲೋ ಈ ಹೆಸರು ಬಂದಿರಬೇಕು. ಮೊದಲಿನ ಅಭಿಪ್ರಾಯವೆ ಸರಿಯೆಂದಾದರೆ ಕೆರೆ ಕಟ್ಟಿಸುವಂತಹ ಸಾಮಾಜಿಕ ಕಾರ್ಯದಲ್ಲಿ ಆ ಪಂಗಡದವರೂ ಭಾಗಿಗಳಾಗುತ್ತಿದ್ದರು ಎನ್ನಬಹುದು. ಆದರೆ ಕರ್ನಾಟಕದ ಹಾಗೂ ಭಾರತದ ಸಾಮಾಜಿಕ ಇತಿಹಾಸವನ್ನು ಗಮನಿಸಿದರೆ ಇದು ಕಷ್ಟಸಾಧ್ಯವಾದ ವಿಚಾರ. ಆದ್ದರಿಂದ ಎರಡನೇ ಕಾರಣವೆ ಅಂದರೆ ಹೊಲೆಯರು ಮಾತ್ರ ಬಳಸುತ್ತಿದ್ದುದರಿಂದ ಹೊಲೆಗೆಱೆ ಎಂಬ ಹೆಸರು ನಿಂತಿರಬೇಕು ಎನ್ನಬಹುದು.

ಹೊಲೆಯರಹಳ್ಳ
ದಿಂಡಗೂರಿನ ತಾಮ್ರಪಟವೊಂದರಲ್ಲಿ೩೧ ಹೊಲೆಯರಹಳ್ಳದ ಉಲ್ಲೇಖವಿದೆ. ಮೇಲೆ ಹೇಳಿದ ಹೊಲೆಗೆಱೆಗೆ ಸಂಬಂಧಪಟ್ಟ ವಿಚಾರಗಳನ್ನು ಇದಕ್ಕೂ ಅನ್ವಯಿಸಬಹುದಾಗಿದೆ.

ದಾಸಿಯಕೆರೆ
ಮೇಲೆ ಹೇಳಿದ, ದಿಂಡಗೂರಿನ ತಾಮ್ರಪಟದಲ್ಲಿ ದಾಸಿಯಕೆರೆಯ ಉಲ್ಲೇಖವಿದೆ. ಅದರ ಹೆಸರನ್ನಷ್ಟೇ ಆಧರಿಸಿ ಹೇಳುವುದಾದರೆ, ಯಾರೋ ದಾಸಿ ಅಂದರೆ ಉಳ್ಳವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಕೆಲಸದವಳು ಕಟ್ಟಿಸಿದ ಕೆರೆಯಾಗಿರಬಹುದು.

೩ ವ್ಯಕ್ತಿಯ ಹೆಸರಿಂದ ಗುರುತಿಸಬಹುದಾದ ಕೆರೆಗಳು
ಈ ವಿಭಾಗದಲ್ಲಿ ಕೆರೆಗಳು ಕಟ್ಟಿಸಿದ ವ್ಯಕ್ತಿಯ ಹೆಸರಿನಿಂದ ಸೂಚಿತವಾಗಿರಬಹುದು ಅಥವಾ ತಂದೆಯೊ ಮಕ್ಕಳೋ ಒಬ್ಬರು ಇನ್ನೊಬ್ಬರ ಹೆಸರಿನಲ್ಲಿ ಕಟ್ಟಿಸಿದ ಕೆರೆಗಳಾಗಿರಬಹುದು. ಈ ಕೆರೆಗಳ ಹೆಸರುಗಳನ್ನು ಗಮನಿಸಿದರೆ ಇವುಗಳನ್ನು ಆಳರಸರಲ್ಲದೆ ಸಾಮಾನ್ಯ ಜನತೆಯೂ ಊರ ಗೌಡರುಗಳೂ ಕಟ್ಟಿಸಿರಬಹುದಾಗಿದೆ ಎಂದು ಊಹಿಸಬಹುದು. ಅವುಗಳ ಪಟ್ಟಿ ಹೀಗಿದೆ.
೧. ಜವನೆಯಹೆಗ್ಗಡೆಯಕೆಱೆ
೨. ನಾಚರಸನಕೆಱೆ
೩. ಬೊಪ್ಪಗೌಡನಕೆಱೆ
೪. ಮಾಕಗೌಡನಕೆಱೆ
೫. ಮಾನಪ್ಪನಕೆಱೆ
೬. ಮೊಲಸನಕೆಱೆ
೭. ರಾಜೋಜನಕೆಱೆ
೮. ಹೆಗ್ಗಡೆಬೊಮ್ಮಯ್ಯನಕೆಱೆ
೯. ಹೆಗ್ಗಡೆಯಕೆಱೆ
೧೦. ಹೊಮ್ಮಗೌಡನಕೆಱೆ
೧೧. ಕಲಿಯಮ್ಮನಕಟ್ಟೆ
೧೨. ಕೇಸಿಯಣ್ಣನಕೆಱೆ
೧೩. ಚೆಂನಣನಕೊಳ
೧೪. ಚಿಗದೇವರಾಜ ಕಲ್ಯಾಣಿ
೧೫. ದೊಡ್ಡನಕಟ್ಟೆ
೧೬. ಬಿಟ್ಟಿಸೆಟ್ಟಿಯಕೆಱೆ
೧೭. ಬಿಂಬಿಸೆಟ್ಟಿಯಕೆಱೆ
೧೮. ಬೀರಜ್ಜನಕೆಱೆ
೧೯. ಹಿರಿಯಜಕ್ಕಿಯಂವೆಯಕೆಱೆ

೪ ಉಳಿದ ಕೆಱೆಗಳು
ಈ ವಿಭಾಗದ ಕೆರೆಗಳು ಊರಿನ ಹೆಸರಿನಿಂದ ಅಥವಾ ಭೌಗೋಳಿಕ ಪರಿಸರದ ಆಧಾರದಿಂದ ಹೆಸರನ್ನು ಪಡೆದುಕೊಂಡಿರಬಹುದಾದ ಸಾಧ್ಯತೆಗಳಿವೆ.
೧. ಅಬ್ಬೆಯಕೆರೆ
೨. ಅಱೆಯಕೆಱೆ
೩. ಅವಳಗೆಱೆ
೪. ಕರಡಿಗೆಱೆ
೫. ಕಲ್ಲಕೆಱೆ
೬. ಕವಿಲೆಯತಿಕಯ್ಯನಕೆಱೆ
೭. ಕಾರೆಯಕೆಱೆ
೮. ಕೆಂಬರೆಯಹಳ್ಳ
೯. ಗುಂಡಿಗೆಱೆ
೧೦. ಚಂದನಕೆಱೆ
೧೧. ತಾವರೆಗೆಱೆ
೧೨. ತಾವರೆಯದವಿಗೆಱೆ
೧೩. ದೇವಿಗೆಱೆ
೧೪. ನಿಟ್ಟಾರಿಯಕೆಱೆ
೧೫. ಪಿರಿಯಕೆಱೆ
೧೬. ಬಿದಿರಕೆಱೆ
೧೭. ಬೆಂಣ್ನಗೆಱೆ
೧೮. ಬ್ರಹ್ಮಸಮುದ್ರ
೧೯. ಹಿರಿಯಕೆಱೆ
೨೦. ಮಾಚಗಟ್ಟದಕೆಱೆ
೨೧. ಅತ್ತಿಕೆಱೆ
೨೨. ಅರೆಯಕೆಱೆ
೨೩. ಎಡವಲಗೆಱೆ
೨೪. ಎಡವಳ್ಳಿಗೆಱೆ
೨೫. ಎರೆಕಟ್ಟಿನಕೊಳ
೨೬. ಕಲ್ಲಕೆಱೆ
೨೭. ಕೆಂಕೆಱೆ
೨೮. ಕೆಸರಕೆಱೆ
೨೯. ಕೇತಂಗೆಱೆ
೩೦. ಕ್ಷೀರಸಾಗರ
೩೧. ಜನವುರದಹಿರಿಯಕೆಱೆ
೩೨. ದೇವಳಂಗೆಱೆ
೩೩. ನಗರಜಿನಾಲಯದಕೆಱೆ
೩೪. ನಜುಗೆಱೆ
೩೫. ನಾಗರಕಟ್ಟೆ
೩೬. ನಾಗಸಮುದ್ರ
೩೭. ನೇರಲಕೆಱೆ
೩೮. ಪಡವಲಗೆಱೆ
೩೯. ಬದಿಹಾಳಕೆಱೆ
೪೦. ಬಳ್ಳೆಯಕೆಱೆ
೪೧. ಬೆಕ್ಕನಕೆಱೆ
೪೨. ಮತ್ತಿಯಕೆಱೆ
೪೩. ಮಾವಿನಕೆಱೆ
೪೪. ಮೋರಿಂಗೆಱೆ
೪೫. ವಿಳಸನಕಟ್ಟೆ
೪೬. ಸಿಂಗಸಮುದ್ರ
೪೭. ಹೂಲಿಯಕೆಱೆ
೪೮. ಬಿಳಿಕೆರೆ
೪೯. ಮುಳ್ಳಕೆಱೆ
೫೦. ಸತ್ತಿಗೆಱೆ
೫೧. ಸಂಡಿಯಕೆಱೆ
೫೨. ಸಿಂಘಟಗೆಱೆ
೫೩. ಗಂಜಿಗೆಱೆ
೫೪. ಸುಡೆಯಕೆಱೆ
೫೫. ಸರಡಿಯಕೆ
ಇದಿಷ್ಟು ಚೆನ್ನರಾಯಪಟ್ಟಣ ತಾಲ್ಲೂಕಿನ ಶಾಸನಗಳಲ್ಲಿ ಬರುವ ಕೆರೆ ಕಟ್ಟಿಸಿದವರ ವಿಚಾರಗಳು. ಇಲ್ಲಿ ಬರುವ ಕೆರೆ ನಿರ್ಮಾಪಕರುಗಳ ಉಲ್ಲೇಖ ಬೇರೆ ತಾಲ್ಲೂಕಿನ ಅಥವಾ ಬೇರೆ ಜಿಲ್ಲೆಗಳ ಶಾಸನಗಳಲ್ಲಿ ಬರುತ್ತವೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿಲ್ಲ. ಇತಿಹಾಸದ ಕಾಲಗರ್ಭದಲ್ಲಿ ಹುದುಗಿ ಹೋಗಿರುವ, ಕೆರೆ ಕಟ್ಟಿಸುವಂತಹ ಮಹತ್ತರವಾದ ಕೆಲಸವನ್ನು ಮಾಡಿದ ಮಹನೀಯರ ವಿಚಾರಗಳನ್ನು ತಿಳಿಯುವಲ್ಲಿ ಇದೊಂದು ಸಣ್ಣ ಪ್ರಯತ್ನವಾಗಿದೆ.

ಅಡಿಟಿಪ್ಪಣಿಗಳು

೧ ಸಂಪುಟ ಎರಡರಲ್ಲಿ ೫೭೩ ಮತ್ತು ಸಂಪುಟ ಹತ್ತರಲ್ಲಿ ೧೪೩ ಶಾಸನಗಳಿವೆ.
೨ ಸಂಪುಟ ಎರಡರಲ್ಲಿ ೪೧ ಮತ್ತು ಹತ್ತರಲ್ಲಿ ೫೪ ಕೆರೆಗಳು
೩ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೭೭
೪ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೨, ೫೬೪
೫ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೨, ೫೬೩
೬ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೨, ೫೫೮
೭ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೨, ೫೩೨
೮ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೨, ೧೪೯
೯ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೨, ೧೭೯
೧೦ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೨, ೫೫೮
೧೧ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೨, ೪೪೩
೧೨ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೨, ೫೫೭
೧೩ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೨, ೧೬೨
೧೪ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೬೮
೧೫ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೭೬
೧೬ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೭೧
೧೭ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೧೨೨
೧೮ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೧೨೩
೧೯ ಕಬ್ಬಳ್ಳಿಯ ಈ ಎರಡು ಶಾಸನಗಳಲ್ಲಿ ಉಲ್ಲೇಖವಾಗಿರುವ ಮಾಚಜೀಯ, ಹೊಂನಜೀಯ, ಸಕಳೇಶ್ವರಪಣ್ಡಿತ ಮತ್ತು ಕೆಂಬಾಳಿನ ಶಾಸನದ ಅಮೃತರಾಸಿ ಪಣ್ಡಿಗ ಮತ್ತು ಆತನ ಶಿಷ್ಯ ಮಲ್ಲಿಕಾರ್ಜುನಜೀಯ, ಅಲ್ಲದೆ ಬಿದರೆಯ ಶಾಸನದಲ್ಲಿ ಉಲ್ಲೇಖವಾಗಿರುವ ಮಹಾದೇವರಾಸಿ ಪಣ್ಡಿತ ಅವರುಗಳು ಹೆಸರಿನ ರೀತಿಯಿಂದಾಗಿ ಕಾಳಾಮುಖ ಯತಿಗಳೆಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ ಕಾಳಾಮುಖ ಯತಿ ಪರಂಪರೆಯಲ್ಲಿ, ೧೨-೧೩ ನೇ ಶತಮಾನಗಳ ಕಾಲವನ್ನು ಶಿಷ್ಯ ಪರಂಪರೆಯಿಂದ ಪುತ್ರ ಪರಂಪರೆಯಾಗಿ ಬದಲಾಗುತ್ತಿದ್ದ ಸಂಕ್ರಮಣ ಕಾಲವೆಂಬುದನ್ನು ಗಮನಿಸಬಹುದಾಗಿದೆ
೨೦ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೮೫
೨೧ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೯
೨೨ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೧೯
೨೩ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೬೪
೨೪ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೧೧೨
೨೫ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೧೧೧
೨೬ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೫೩
೨೭ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೪೮
೨೮ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೩೪
೨೯ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೧೧೩
೩೦ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೭೦
೩೧ ಎಫಿಗ್ರಾಪಿಯಾ ಕರ್ನಾಟಕ ಸಂಪುಟ ೧೦, ಚೆನ್ನರಾಯಪಟ್ಟಣ ೪೦