ಗೌಳವ್ (ಗೋವಿನ ತಳಿ)
ಉಭಯೋದ್ದೇಶಿತ ತಳಿಗಳು. ಕೆಲಸಗಾರ ತಳಿಯಾಗಿಯೇ ಹೆಚ್ಚಿನ ಉಪಯೋಗ, ಪ್ರಸಿದ್ಧಿ: ಅತ್ಯಂತ ಚುರುಕಿನ ಹಳೆಯ ಕೆಲಸಗಾರ ತಳಿ. ಇವುಗಳ ಮೂಲ ಮಹಾರಾಷ್ಟ್ರದ ವಾರ್ಧ, ಬಾಲಾಘಾಟ್, ಛಿಂದ್ವಾರಾ, ರಾಜ್‌ನಂದ್ಗಾಂವ್ (ಈಗ ಚತ್ತೀಸ್‌ಗಢದಲ್ಲಿದೆ) ಸುತ್ತಮುತ್ತಲ ಪ್ರದೇಶಗಳು. ಆರ್ಯರು ಹಾದುಹೋದರೆನ್ನಲಾದ ಉತ್ತರದಿಂದ ಮಧ್ಯಭಾರತದ ಹಾಗೂ ದಕ್ಷಿಣದವರೆಗಿನ ಹಾದಿಯಗುಂಟ ಇವುಗಳನ್ನು ಕಾಣಬಹುದು.
ಗೌಳವ್ | |
---|---|
ತಳಿಯ ಹೆಸರು | ಗೌಳವ್ |
ಮೂಲ | ವಾರ್ಧಾ ಜಿಲ್ಲೆ - ಮಹಾರಾಷ್ಟ್ರ, ದಕ್ಷಿಣ ಮಧ್ಯ ಪ್ರದೇಶ. |
ವಿಭಾಗ | ಉಭಯ, ಸಾಧಾರಣ ಗಾತ್ರ |
ಬಣ್ಣ | ಬಿಳಿ ಹಾಗು ಬೂದು. ಹೋರಿಗೆ ಕುತ್ತಿಗೆ, ಭುಜ, ಹಿಂಭಾಗದಲ್ಲಿ ಹೆಚ್ಚು ಬೂದು ಇರುತ್ತದೆ. |
ಮುಖ | ಉಬ್ಬಿರುತ್ತದೆ. ಕಣ್ಣು: ನೀಳವಾಗಿದ್ದು, ಬಾಗಿರುತ್ತದೆ. |
ಕೊಂಬು | ಸಣ್ಣದು |
ಕಿವಿ | ಸಾಧಾರಣ ಗಾತ್ರ |
ಇತಿಹಾಸ: ಮರಾಠರು ಈ ತಳಿಯ ಮುಖ್ಯ ಪೋಷಕರು. ಈ ತಳಿಯ ಚಲನೆಯಲ್ಲಿನ ಅಪರೂಪದ ವೇಗಕ್ಕೆ ಮರಾಠರು ಮರುಳಾಗಿ ಯುಧ್ಧಸಾಮಗ್ರಿಗಳ ಸಾಗಣೆಗೆ ಬಳಸಿಕೊಂಡರೆಂಬ ಪ್ರತೀತಿ. ಮಧ್ಯಪ್ರದೇಶದ ಗೋಂಡ್ವಾನ ಪ್ರಾಂತ್ಯದ ಮೇಲೆ ಯುಧ್ಧವಾದಾಗ ಬೆಟ್ಟಗುಡ್ಡಗಳ ದಾರಿಯಲ್ಲಿ ಯುಧ್ಧ ಸಾಮಗ್ರಿಗಳ ಸಾಗಣೆ ದುಸ್ತರವಾದ ಸಂದರ್ಭದಲ್ಲಿ ಗೌಳವ್ ತಳಿ ಯುದ್ಧ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿತೆಂದು ಐತಿಹ್ಯ. ಒಂದು ಕಾಲದಲ್ಲಿ ಅತ್ಯುತ್ತಮ ಹಾಲಿನ ತಳಿ ಕೂಡ ಇದಾಗಿತ್ತೆಂದು ಇತಿಹಾಸ ಹೇಳುತ್ತಾದರೂ ಕಳೆದೆರೆಡು ಶತಮಾನಗಳಲ್ಲಿ ಇದರ ವೇಗ ಮತ್ತು ದೇಹದಾರ್ಢ್ಯತೆಯ ಕುರಿತಾಗಿ ತಳಿಪೋಷಕರು ಹೆಚ್ಚಿನ ಆಸಕ್ತಿವಹಿಸಿದ್ದರಿಂದ ಇದೊಂದು ಉತ್ತಮ ಕೆಲಸಗಾರತಳಿಯಾಗಿಯೆ ರೂಪುಗೊಂಡಿತು. ಸಾಕುವಿಕೆ ಸಾಮಾನ್ಯವಾಗಿ ೬ ರಿಂದ ೮ ಹಸುಗಳಿರುವ ಮಂದೆಯಲ್ಲಿರುತ್ತದೆ. ಇದನ್ನು ಸಾಕಲ್ಪಡುವ ಪ್ರದೇಶಗಳಲ್ಲಿನ ಮುಖ್ಯ ಬೆಳೆ ಜೋಳವಾದ್ದರಿಂದ ಇವುಗಳ ಆಹಾರ ಕಟಾವ್ ಆದ ಜೋಳದ ಗಿಡ, ಸೋಯಾ ಬೀನ್‌ನ ಗಿಡ ಮತ್ತು ಹಿಂಡಿ ಕೂಡ ತುಂಬ ಪ್ರಚಲಿತವಿರುವ ಇನ್ನೊಂದು ಆಹಾರ.
ದೇಹಲಕ್ಷಣಗಳು: ಚಪ್ಪಟೆ ಹಣೆ, ಬಾದಾಮಿ ಆಕಾರದ ಕಣ್ಣುಗಳು, ಮೇಲೆ ಚಾಚಿದಂತ ಮಧ್ಯಮ ಗಾತ್ರದ ಕಿವಿ, ಹಿಂದಕ್ಕೆ ಬಾಗಿದ ದಪ್ಪನೆಯ ಆದರೆ ಗಿಡ್ಡ ಕೊಂಬು, ಮೊಣಕಾಲು ಮುಟ್ಟಿಯೂ ಮುಟ್ಟದಂತಿರುವ ಗಿಡ್ಡ ಬಾಲ. ಗೌಳವ್ ತಳಿಯ ಗೋವುಗಳು ಹೆಚ್ಚಾಗಿ ಕಾಣಸಿಗುವುದು ಬಿಳಿ ಹಾಗು ಬೂದು ಬಣ್ಣಗಳಲ್ಲಿ. ಹೋರಿಗಳು ಕಪ್ಪು ಬಣ್ಣದ ಕಂಠ, ದೊಡ್ಡ ಡುಬ್ಬ ಹೊಂದಿದ್ದು ಹೆಚ್ಚು ಉದ್ದವಾಗಿ ಬಲಾಢ್ಯವಾಗಿರುತ್ತವೆ. ಗೌಳವ್ ತಳಿಯ ಹಾಲು ಉತ್ಪಾದಕತೆ ಒಂದು ಅವಧಿಗೆ ಸುಮಾರು ೬೦೦ ಕೆ.ಜಿ. ಹೋರಿಗಳು ಸಾಮಾನ್ಯವಾಗಿ ೧೨೦ ಸೆ.ಮೀ ಉದ್ದವಾಗಿದ್ದರೆ ಹಸುಗಳ ಉದ್ದ ೧೧೦ ಸೆ.ಮೀ. ಹೋರಿಗಳ ತೂಕ ಅಜಮಾಸು ೪೫೦ ಕೆ.ಜಿ. ಹಸುಗಳದ್ದು ೩೪೦ ಕೆ.ಜಿ.ಯ ಆಚೀಚೆ.
ಚಿತ್ರಗಳು
ಬದಲಾಯಿಸಿ-
ಗಂಡು
-
ಹೆಣ್ಣು
ಆಧಾರ/ಆಕರ
ಬದಲಾಯಿಸಿ'ಗೋವಿಶ್ವಲೋಕ' ಜಾಲತಾಣದ 'ಗೋವಿಶ್ವ' ಇ-ಪತ್ರಿಕೆ Archived 2018-11-24 ವೇಬ್ಯಾಕ್ ಮೆಷಿನ್ ನಲ್ಲಿ.