ಗೋವಿಂದ IV(ರಾಷ್ಟ್ರಕೂಟ)

ಗೋವಿಂದ IV(ರಾಷ್ಟ್ರಕೂಟ) ರಾಷ್ಟ್ರಕೂಟ ದೊರೆ (930-35). 3ನೆಯ ಇಂದ್ರನ ಕಿರಿಯ ಮಗ. ಪ್ರಭೂತವರ್ಷ, ಸುವರ್ಣವರ್ಷ, ನೃಪತುಂಗ, ನೃಪತಿತ್ರಿಣೇತ್ರ, ಸಾಹಸಾಂಕ, ರಟ್ಟಕಂದರ್ಪ ಎಂಬುವು ಇವನ ಬಿರುದುಗಳು. ನಾಲ್ವಡಿ ಗೋವಿಂದ ಅಣ್ಣನಾದ ಇಮ್ಮಡಿ ಅಮೋಘವರ್ಷನನ್ನು ಪ್ರಾಯಶಃ ಕೊಲ್ಲಿಸಿ ಪಟ್ಟಕ್ಕೆ ಬಂದ. ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಸಾಮ್ರಾಜ್ಯದ ಚಕ್ರವರ್ತಿಯಾದ. ಆದರೂ ಯೌವನಮದ ಮತ್ತು ರಾಜ್ಯಮದದಿಂದ ಜನಾನುರಾಗಿಯಾಗದೆ ತನ್ನನ್ನು ತಾನೇ ನಾಶಪಡಿಸಿಕೊಂಡ.

ರಾಷ್ಟ್ರಕೂಟರ ಬೆಂಬಲದಿಂದ ವೆಂಗಿ ಸಿಂಹಾಸನಾಧಿಕಾರಿಯಾಗಿದ್ದ ಇಮ್ಮಡಿ ಯುದ್ಧಮಲ್ಲನನ್ನು 934ರಲ್ಲಿ ಇಮ್ಮಡಿ ಭೀಮ ಓಡಿಸಿ ತಾನೇ ರಾಜನಾದ. ಆದರೂ ಈ ಸಮಯದಲ್ಲಿ ನಾಲ್ಕನೆಯ ಗೋವಿಂದ ವೆಂಗಿಯ ಮೇಲೆ ರಾಷ್ಟ್ರಕೂಟರ ಪ್ರಭಾವವನ್ನು ಉಳಿಸಿಕೊಳ್ಳುವ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ರಾಜ್ಯದ ಹೊರಗೆ ತನ್ನ ಪರಾಕ್ರಮವನ್ನು ತೋರಿಸಲು ಅಸಮರ್ಥನಾದ ಗೋವಿಂದ ವೆಂಗಿಯ ಸಿಂಹಾಸನದ ಹಕ್ಕುದಾರರಲ್ಲೊಬ್ಬನಾಗಿದ್ದ ಐದನೆಯ ವಿಜಯಾದಿತ್ಯನಿಗೆ ತನ್ನ ಚಾಳುಕ್ಯ ಸಾಮಂತ ಇಮ್ಮಡಿ ಅರಿಕೇಸರಿ ಆಶ್ರಯವನ್ನಿತ್ತನೆಂಬ ನೆಪದಲ್ಲಿ ಅರಿಕೇಸರಿಯನ್ನು ಕೆಣಕಿದ. ಅವನು ವಿಜಯಾದಿತ್ಯನನ್ನು ಒಪ್ಪಿಸಲು ನಿರಾಕರಿಸಿದ. ಇಮ್ಮಡಿ ಅರಿಕೇಸರಿ ಸಮರ್ಥ ವೀರನಾಗಿದ್ದುದೇನೋ ನಿಜ. ಆದರೆ ದೊಡ್ಡ ಸೈನ್ಯದಿಂದ ಕೂಡಿದ್ದ ಚಕ್ರವರ್ತಿಯನ್ನು ಒಬ್ಬ ಸಾಮಂತ ಎದುರಿಸುವುದು ಅಸಾಮಾನ್ಯ ಕೆಲಸವೆಂದು ಅವನು ತಿಳಿದಿದ್ದ. ಇದೇ ಸಮಯಕ್ಕೆ ಸರಿಯಾಗಿ ಗೋವಿಂದನ ಉಚ್ಚಾಟನೆಗೆ ಗೋವಿಂದನ ಅತ್ಯಾಚಾರ ಮತ್ತು ದುರಾಚಾರಗಳಿಂದ ಕೋಪಗೊಂಡಿದ್ದ ಸಾಮಂತರು ಒಟ್ಟಾಗಿ ಸೇರಿ ಮೂರನೆಯ ಅಮೋಘವರ್ಷನ ಬಳಿಗೆ ಓಡಿ ಗೋವಿಂದನ ದುರಾಡಳಿತದಿಂದ ವಿಮುಕ್ತಗೊಳಿಸುವಂತೆ ಬೇಡಿಕೊಂಡರು. ಒಳ್ಳೆಯ ನಡೆನುಡಿಗಳಿಗೂ ಸಂಸ್ಕೃತಿಗೂ ಮತ್ತು ಪ್ರಜಾವಾತ್ಸಲ್ಯಕ್ಕೂ ಹೆಸರಾಗಿದ್ದ ಅಮೋಘವರ್ಷ ಈ ಸಮಯದಲ್ಲಿ ತ್ರಿಪುರಿಯಲ್ಲಿದ್ದ. ಇಮ್ಮಡಿ ಅರಿಕೇಸರಿ ಗೋವಿಂದನ ಮೇಲೆ ಯುದ್ಧಕ್ಕೆ ಸಿದ್ಧನಾದಾಗ, ಅಮೋಘವರ್ಷನ ಪರವಾಗಿದ್ದ ಅವನ ಅಳಿಯ ಗಂಗ 2ನೆಯ ಬೂತುಗ ಮುಂತಾದ ಉಳಿದ ಸಾಮಂತರಾಜರು ಅರಿಕೇಸರಿಗೆ ತಮ್ಮ ಬೆಂಬಲವನ್ನು ನೀಡಿದರು. ಗೋವಿಂದ ಚೋಳ 1ನೆಯ ಪರಾಂತಕನಿಂದ ನೆರವನ್ನು ಬಯಸಿದರೂ ಸಕಾಲಕ್ಕೆ ಸಿಗಲಿಲ್ಲ. 935ರಲ್ಲಿ ಸಂಭವಿಸಿದ ಯುದ್ಧದಲ್ಲಿ ಅರಿಕೇಸರಿ ಗೋವಿಂದನನ್ನು ಸೋಲಿಸಿದ. ಗೋವಿಂದ ರಣರಂಗದಲ್ಲೇ ಪ್ರಾಣ ಕಳೆದುಕೊಂಡ. ಅನಂತರ ಮೂರನೆಯ ಅಮೋಘವರ್ಷ ಪಟ್ಟಕ್ಕೆ ಬಂದ. ಈ ವಿಚಾರ ಪಂಪನ ವಿಕ್ರಮಾರ್ಜುನವಿಜಯದಲ್ಲಿ ಸ್ಪಷ್ಟವಾಗಿ ವರ್ಣಿತವಾಗಿದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: