ಗೊಂದಲಿಗರು - ಅಂಬಾಭವಾನಿಯ ಹೆಸರಿನಲ್ಲಿ ಗೊಂದಲ ಹಾಕುವ ಜನರನ್ನು ಈ ಹೆಸರಿನಿಂದ ಕರೆಯುತ್ತಾರೆ.

ಈ ಜನ ಮಹಾರಾಷ್ಟ್ರದವರು. ಜಮದಗ್ನಿ ಮತ್ತು ಆತನ ಪತ್ನಿ ರೇಣುಕ ಈ ಪಂಗಡದವರ ಸ್ಥಾಪಕರೆಂದು ಪ್ರತೀತಿ. ಇವರು ಶಿವಾಜಿಯ ಗೂಢಚಾರರಾಗಿ, ಭಿಕ್ಷುಕರಂತೆ ವೇಷಧಾರಿಗಳಾಗಿ ಮುಸಲ್ಮಾನರ ರಾಜ್ಯವಾಗಿದ್ದ ಬಿಜಾಪುರಕ್ಕೆ ಬಂದರು. ಅಲ್ಲಿನ ಪರಿಸ್ಥಿತಿಯಿಂದಾಗಿ ಇವರು ತಮ್ಮ ವೇಷವನ್ನೇ ಜೀವನಾಧಾರವನ್ನಾಗಿ ಮಾಡಿಕೊಳ್ಳಬೇಕಾಯಿತು.

ಗೊಂದಲಿಗರಲ್ಲಿ ಎರಡು ಗೋತ್ರಗಳಿವೆ : ಸ್ವಗೋತ್ರ ಮತ್ತು ಭಿನ್ನಗೋತ್ರ. ಸ್ವಗೋತ್ರದ ಗುಂಪು , ಧಾನಗಾರ, ಮರಾಠಾ, ಕಂಭಾರ, ಕದಮ್ರಾಮ್, ರೇಣುಕ್ರಾಮ್, ಮಾಲಿ, ಅಕರ್ಮಾಸೆ - ಎಂಬ ಎಂಟು ಗುಂಪುಗಳಾಗಿವೆ. ಭಿನ್ನ ಗೋತ್ರ ಪವಾರ್, ಗಾಯಕವಾಡ ಮೊದಲಾಗಿ ಹನ್ನೆರಡು ರೀತಿಯಾಗಿ ಒಡೆದಿದೆ.

ಬಟ್ಟೆ ಬರೆ

ಬದಲಾಯಿಸಿ

ಗಂಡುಮಕ್ಕಳ ಉಡುಗೆತೊಡುಗೆ ಸಾಮಾನ್ಯವಾದುದು. ಅಂಗಿ ಇಲ್ಲವೆ ಜುಬ್ಬ, ಕಚ್ಚೆಪಂಚೆ ಇಲ್ಲವೆ ಪೈಜಾಮ, ತಲೆಗೆ ಸುಮಾರು ಹನ್ನೆರಡು ಅಡಿಗಳಿಗೂ ಹೆಚ್ಚಿನ ನೀಳವಾದ ಬಟ್ಟೆರುಮಾಲು (ಮುಂಡಾಸು) ಇಲ್ಲವೆ ಟೋಪಿ, ಕೈಬೆರಳಲ್ಲಿ ಉಂಗುರ, ಕೊರಳಿನಲ್ಲಿ ಚಿನ್ನದಸರ ಇರುವುದುಂಟು. ಹೆಣ್ಣುಮಕ್ಕಳು ಸಾದಾ ಸೀರೆ ರವಿಕೆ ತೊಡುತ್ತಾರೆ. ಹೆಂಗಸರು ಕಚ್ಚೆ ಹಾಕುವುದು ರೂಢಿ. ಇವರ ಆಭರಣಗಳು ಬಹಳ ವಿಶಿಷ್ಟವಾದವು. ತಲೆಗಂಟಿನ ಜಾಗದಲ್ಲಿ ಗಜರ; ಮೂಗಿನಲ್ಲಿ ನತ್ತು; ಕಿವಿಯ ಮೇಲೆ ಬುಗುಡಿ; ಕೆಳಗೆ ಹೂ; ಕೊರಳಿನಲ್ಲಿ ಗುಂಡಿನ ಸರ, ಚಪ್ಪಲ ಹಾರ, ಬೋದುಮಾಳ, ತಾಂಡಳೀಪುರ್, ಪುತ್ಥಳೀಸರ, ತಾಳಿ ಸಾಮಾನು, ಕೋಯಿ, ವಜ್ರಟಿಕ್ಕಿ; ಗೆಜ್ಜೆಟಿಕ್ಕಿ; ತೋಳಿಗೆ ತೋಳುಬಂದಿ, ಪಾಟ್ಲಿ, ಬಿಲ್ವರ್, ಬಳೆ; ಸೊಂಟಕ್ಕೆ ಡಾಬು; ಕಾಲಿಗೆ ತೋಡೆ, ಪೈಜಾಮ್, ಕಾಲುಂಗುರ, ಕಾಲುಮಚ್ಚಿ ಗೇಂಡು.

ಅಂಬಾಭವಾನಿ (ತುಳುಜಾಭವಾನಿ) ಇವರ ಕುಲದೇವತೆ. ಮಹಾರಾಷ್ಟ್ರದ ತುಳಜಾಪುರ ಈ ದೇವತೆಯ ಮೂಲಸ್ಥಾನ.

ಗೊಂದಲಿಗರಲ್ಲಿ ಮಹಾಶಕ್ತಿದೇವತೆಯೊಂದುಂಟು. ಸಟವೈ ಎಂದು ಅದರ ಹೆಸರು. ಮಗುವಿನ ಹಣೆಯ ಮೇಲೆ ಒಳ್ಳೆಯದನ್ನು ಬರೆಯಲಿ ಎಂದು ಆ ದೈವವನ್ನು ಪುಜಿಸುತ್ತಾರೆ.

ಧಾರ್ಮಿಕ ಮತ್ತು ಸಾಮಾಜಿಕ ಸಂಪ್ರದಾಯಗಳು

ಬದಲಾಯಿಸಿ

ಮಗು ಜನನವಾದ ಐದು ದಿನಕ್ಕೆ ಆಚರಿಸುವ ಪುಜೆಗಳನ್ನು ಐದ್ಪೀಶಿ ಎನ್ನುತ್ತಾರೆ. ಮಗು ಹುಟ್ಟಿದ ಹನ್ನೆರಡನೆಯ ದಿನ ತೊಟ್ಟಿಲಿಗೆ ಹಾಕುವುದು, ಹೆಸರಿಡುವುದು, ಜೋಗುಳ ಹಾಡುವುದು ರೂಢಿಯಲ್ಲಿದೆ.

ಲಗ್ನವಾದ ಹೆಣ್ಣು ಮೈನೆರೆದಾಗ ಅವಳ ಪತಿಗೆ ಬಣ್ಣ ಎರಚುವುದು (ರಂಗು ಹಲ್ತಾತ್) ಉಂಟು. ಮಕರ (ಮೈನೆರೆದ ಹೆಣ್ಣನ್ನು ಕೂಡಿಸುವ ಪ್ರತ್ಯೇಕವಾದ ಗುಡಿಸಲು) ಬಿಟ್ಟು ಹೆಣ್ಣು ಹೊರಗೆ ಬರುವತನಕ ಗಂಡಿನ ಮೈಮೇಲೆ ಬಣ್ಣ ಇರಬೇಕಾಗುತ್ತದೆ. ಬಟ್ಟೆ ಬದಲಾಯಿಸಿದರೆ ಮತ್ತೆ ರಂಗು ಹಾಕುತ್ತಾರೆ.

ಗೊಂದಲಿಗರಲ್ಲಿ ಮೊದಮೊದಲು ತೊಟ್ಟಿಲುವಿವಾಹ, ಬಾಲ್ಯವಿವಾಹ ಇದ್ದುವು. ಈಗ ವಧುವಿಗೆ ಏಳೆಂಟು ವರ್ಷಗಳಾದ ಮೇಲೆ ಲಗ್ನ ಮಾಡುವುದು ಬಳಕೆಯಲ್ಲಿದೆ.

ಇವರಲ್ಲಿ ಲಗ್ನವಾಗುವಾಗ ವೀಳ್ಯದ ಶಾಸ್ತ್ರ ಇಟ್ಟುಕೊಳ್ಳುತ್ತಾರೆ. ಲಗ್ನದ ದಿನವನ್ನು ಗೊತ್ತುಮಾಡುತ್ತಾರೆ. ಮೂರು ದಿನಗಳ ಲಗ್ನ ಇವರಲ್ಲಿ ಉಂಟು. ಮೊದಲ ದಿನ ಹಸುರು ಚಪ್ಪರದಲ್ಲಿ ನೆರೆದಿರುವವರಿಗೆ ಕುಂಕುಮದಿಂದ ಹೆಬ್ಬೆಟ್ಟು ಗಾತ್ರದ ನಾಮ ಬಳಿಯುತ್ತಾರೆ. ಅಕ್ಕಿಯೊಂದಿಗೆ ಜೋಳ ಬೆರೆಸಿದ ಅಕ್ಷತೆಯನ್ನು ಎಲ್ಲರ ಕೈಗೂ ಹಂಚುತ್ತಾರೆ. ಅವರಲ್ಲಿ ಒಬ್ಬ ಮಂತ್ರ ಹೇಳುತ್ತ ತಾಳಿ ಕಟ್ಟಿಸುತ್ತಾನೆ. ಎರಡನೆಯ ದಿನ ಸೊಲಿಗೆ ನೀರಿನ ಸ್ನಾನದ ಕಾರ್ಯಕ್ರಮ ಇರುತ್ತದೆ. ಸ್ನಾನ ಆದಮೇಲೆ ಮೈ ಒರೆಸಿಕೊಳ್ಳುವ ಮುಂಚೆಯೇ ಚಂಡಾಡುವ ಶಾಸ್ತ್ರ ಮಾಡುತ್ತಾರೆ. ಆ ಚಂಡುಗಳು ಬೇವಿನ ಸೊಪ್ಪಿನಿಂದ ಆದವು. ಉಳಿದ ಶಾಸ್ತ್ರಗಳು ಮಾಮೂಲಿನಂತೆ.

ಗೊಂದಲಿಗರಲ್ಲಿ ಏನಾದರೂ ಜಗಳವಾದರೆ ಫಿರ್ಯಾದಿ ಓಣಿಯ ಜನಕ್ಕೆ ತಿಳಿಸುತ್ತಾನೆ. ಆಗ ಪಂಚರು ಸೇರಿ ನ್ಯಾಯಕ್ಕೆ ಕೂರುತ್ತಾರೆ. ಏನಿದ್ದರೂ ಆ ಜಗಲಿಯಲ್ಲಿ, ಅವರ ಮುಂದೇ ಇತ್ಯರ್ಥವಾಗಬೇಕು. ಕೋರ್ಟಿಗೆ ಹೋಗುವ ಸಂದರ್ಭಗಳು ಅಪರೂಪ. ತಪ್ಪಿತಸ್ಥನಿಗೆ ದಂಡ ವಿಧಿಸಲಾಗುತ್ತದೆ. ದಂಡ ಕೊಡದವರಿಗೆ ಇವರ ಸಮಾಜದಲ್ಲಿ ಯಾವ ಸ್ಥಾನವೂ ಇರುವುದಿಲ್ಲ. ಗೊಂದಲಿಗರಲ್ಲಿ ಲಗ್ನವಾದವರು ಮಾತ್ರ ಹೆಣ ಹೊರುವ, ಸಂಸ್ಕಾರ ಮಾಡುವ ಹಕ್ಕು ಪಡೆದಿರುತ್ತಾರೆ. ಲಗ್ನವಾದವರು ಸತ್ತರೆ ಎಷ್ಟೇ ಚಿಕ್ಕ ಪ್ರಾಯದವರಿದ್ದರೂ ಸುಡುತ್ತಾರೆ. ಲಗ್ನವಾಗದೆ ಸತ್ತ ಹೆಣವನ್ನು ಎಕ್ಕದ ಗಿಡದೊಂದಿಗೆ ಲಗ್ನಮಾಡುತ್ತಾರೆ. ಇನ್ನೂ ಲಗ್ನವಾಗದ, ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸತ್ತರೆ ಅಂಥವರನ್ನು ಹುಗಿಯುತ್ತಾರೆ. ಮಕ್ಕಳು ಸತ್ತರೆ ಮೊರವನ್ನು ಉಪಯೋಗಿಸದೆ ಕೈಗಳಿಂದಲೇ ಅವನ್ನು ಒಯ್ದು ಶ್ಮಶಾನದಲ್ಲಲ್ಲದೆ ಬೇರೆ ಜಾಗದಲ್ಲಿ ಹೂಳುತ್ತಾರೆ.

ಎಲ್ಲ ಹಬ್ಬಗಳನ್ನು ಇವರು ಆಚರಿಸುತ್ತಾರೆ. ಮೊಹರಂ ಮತ್ತು ಹೋಳಿ ಹಬ್ಬಗಳೂ ಇವರಲ್ಲಿ ಉಂಟು. ಈ ಎರಡು ಹಬ್ಬಗಳಲ್ಲಿ ಕಟ್ಟುವ ವೇಷಕ್ಕೆ ಸೋಂಗು ತೆಗೆಯುವುದು ಎಂದು ಕರೆಯುತ್ತಾರೆ. ಹಣ ಸಂಪಾದನೆಯೇ ಇಲ್ಲಿ ಮುಖ್ಯವಾದುದು. ದೀಪಾವಳಿಯಲ್ಲಿ ಲಕ್ಷ್ಮೀಪುಜೆ ಮಾಡುತ್ತಾರೆ. ಆಷಾಢದ ಕೊನೆಯಲ್ಲಿ ಇಲ್ಲವೆ ಶ್ರಾವಣದ ಮೊದಲಲ್ಲಿ ನಡೆಯುವ ದುರ್ಗವ್ವನ ಹಬ್ಬ ಇವರಿಗೆ ಮುಖ್ಯವಾದುದು.

ಗೋಂಧಳಿ, ಗೊಂದಲಿ ಎಂಬುವು ಗೊಂದಲ ಎಂಬ ಪದಕ್ಕೆ ಇರುವ ಇತರ ರೂಪಗಳು.

ಗೊಂದಲ ಹಾಕುವುದು ಸಾಮಾನ್ಯವಾಗಿ ಅಂಬಾಭವಾನಿಯ ಮುಂದೆ. ದೇವಿಯ ಗುಡಿಯ ಮುಂದೆ ಅದು ನಡೆಯುತ್ತದೆ. ಮದುವೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಅಂಬಾಭವಾನಿಯ ಒಕ್ಕಲವರು ತಮ್ಮ ಮನೆಗಳಲ್ಲಿ ಗೊಂದಲ ಹಾಕಿಸುವ ಪದ್ಧತಿ ಉಂಟು. ಗೊಂದಲ ಪ್ರಾರಂಭವಾಗುತ್ತಿದ್ದಂತೆ ನೆಲದ ಮೇಲಿದ್ದ ಸಂಬಾಳ (ಜೋಡಿ ತಬಲಗಳು) ಹೆಗಲೇರುತ್ತದೆ. ಚೌಡಿಕೆ ಶ್ರುತಿಗೊಳ್ಳುತ್ತದೆ. ಪತ್ತ ಕೈ ಸೇರುತ್ತದೆ. ಮುಂಡಾಸು ಕಚ್ಚೆಗಳು ಬಿಗಿಗೊಳ್ಳುತ್ತವೆ. ಮೊದಲು ಬರುವ ಸ್ವರವೇ ಚೌಡಿಕೆಯದು. ಈ ಮೇಳದಲ್ಲಿ ಮೂರು ಜನ ಇರುತ್ತಾರೆ. ಪತ್ತ ಹಾಕುವವನೇ ಕಥೆಗಾರ. ಗಣಪತಿ ಸ್ತೋತ್ರದಿಂದ ಗೊಂದಲ ಪ್ರಾರಂಭವಾಗುತ್ತದೆ. ಅನಂತರ ದೇವೀಸ್ತೋತ್ರ. ಕನ್ನಡ ಮತ್ತು ಮರಾಠಿ ಭಾಷೆಗಳೆರಡರಲ್ಲೂ ಈ ಸ್ತೋತ್ರವನ್ನು ನಾನಾಗತ್ತಿನಲ್ಲಿ ಹೇಳುತ್ತಾರಾದರೂ ಮರಾಠಿ ಬಳಕೆಯೇ ಹೆಚ್ಚು. ಗೊಂದಲದ ಲಾವಣಿಗಳು ವೀರರಸ ಪ್ರಧಾನವಾದವು. ಅನೇಕ ದೇಶಭಕ್ತರ ಕಥೆಗಳು ಅವುಗಳಲ್ಲಿ ಬರುತ್ತವೆ. ಈ ಭಕ್ತರು ಮೈಮರೆತು ಕುಣಿಯುವ ನೃತ್ಯ ರೋಮಾಂಚಕಾರಿಯಾದುದು. ತಮ್ಮ ವಾದ್ಯಗಳಿಂದ ಹೊರಹೊಮ್ಮುವ ಸ್ವರದ ರೂಪದಲ್ಲಿ ತಮ್ಮ ಆರಾಧ್ಯದೈವ ಪ್ರತ್ಯಕ್ಷಗೊಂಡಿತು ಎಂದವರು ನಂಬುತ್ತಾರೆ. ಮೇಳ ಬೆಳಕು ಹರಿಯುವ ತನಕ ನಡೆಯುತ್ತದೆ. ಆದಕಾರಣ ಕಥೆಯ ವಿಸ್ತಾರಕ್ಕೆ ಸಮವಾಗಿ ಅಲ್ಲಿ ಸ್ತೋತ್ರಗಳ, ಮನೋರಂಜನೆಗಾಗಿ ಹಾಡುವ ಲಾವಣಿಗಳ ಸಂಖ್ಯೆಯನ್ನು ಅಳವಡಿಸಲಾಗುತ್ತದೆ.

ಗೊಂದಲಿಗರಿಗೆ ನಾಗರಿಕ ಸಂಪರ್ಕ ಉಂಟಾಗುವ ಮುನ್ನ ಅವರು ಗೊಂದಲಕ್ಕೆಂದು ಬಳಸುತ್ತಿದ್ದ ವೇಷಭೂಷಣಗಳು ಹೀಗೆ ಇದ್ದವು; ಐವತ್ತು ಅರವತ್ತು ಅಡಿ ಉದ್ದದ ಬಟ್ಟೆಯ ಮುಂಡಾಸು, ಕಾಲತನಕ ಇರುವ ಉದ್ದನೆಯ ಅಂಗಿ, ಎದೆಯ ಮೇಲೆ ಕತ್ತರಿ ಆಕಾರದ ಕವಡೆಪಟ್ಟಿಗಳು, ಕವಡೆಪಟ್ಟಿಗಳ ನಡುವೆ ದೇವೀವಿಗ್ರಹ, ನಡುವಿಗೆ ಕವಡೆಪಟ್ಟಿ, ಕಾಲಿಗೆ ಗೆಜ್ಜೆ. ಈಗಲೂ ವಿಶೇಷ ಸಂದರ್ಭಗಳಲ್ಲಿ ಈ ವೇಷದಲ್ಲೇ ಗೊಂದಲ ಹಾಕುತ್ತಾರೆ. ಈಗ ಸಾಮಾನ್ಯವಾಗಿ ದೈನಂದಿನ ವೇಷದಲ್ಲೇ ಗೊಂದಲ ನಡೆದುಹೋಗುತ್ತದೆ.

ವಸತಿಯ ಪ್ರದೇಶ

ಬದಲಾಯಿಸಿ

ಬಹುಪಾಲು ಗೊಂದಲಿಗರು ಈಗ ಬಿಜಾಪುರ, ಬೆಳಗಾವಿ, ಧಾರವಾಡ, ಶಿವಮೊಗ್ಗ, ಗುಲ್ಬರ್ಗಾ, ಬಿದರೆ, ಬಳ್ಳಾರಿ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಕಂಡು ಬರುತ್ತಾರೆ.