ಒಬ್ಬಿಬ್ಬರಿಗೊ ಕೇವಲ ಕೆಲವರಿಗೊ ಮಾತ್ರ ಅರ್ಥವಾಗಬಲ್ಲ ಭಾಷೆಗಳು (ಸೀಕ್ರೆಟ್ ಲ್ಯಾಂಗ್ವೇಜಸ್).

ಉದ್ದೇಶ ಬದಲಾಯಿಸಿ

ಸಾಮಾನ್ಯವಾಗಿ ಭಾಷೆಯ ಉದ್ದೇಶ ಎಲ್ಲರಿಗೂ ಅರ್ಥವಾಗುವಂತಿರಬೇಕು ಎಂಬುದು. ಇದಕ್ಕೆ ವಿರುದ್ಧವಾದ ಉದ್ದೇಶ ಗುಪ್ತಭಾಷೆ ಗಳಿಗಿವೆ. ಗುಪ್ತಕಾರ್ಯಾಚರಣೆ ನಡೆಸುವ ಅನೇಕರಿಗೆ ಇಂಥ ಭಾಷೆಗಳ ಅಗತ್ಯ ಕಂಡುಬಂದಿದೆ. ಆಟಕ್ಕಾಗಿ ಮಕ್ಕಳು, ಪ್ರಣಯ ವಿನೋದಕ್ಕಾಗಿ ಪ್ರೇಮಿಗಳು, ರಹಸ್ಯ ವಾರ್ತಾವಹನಕ್ಕಾಗಿ ಗೂಢಚಾರರು ಹಾಗೂ ದರೋಡೆಕಾರರು ಇಂಥ ಭಾಷೆಗಳನ್ನು ಬಳಸುತ್ತಾರೆ.

ಪ್ರಚಲಿತ ಭಾಷೆಯೊಂದನ್ನು ಗುಪ್ತಭಾಷೆಯಾಗಿ ಬಳಸಬಹುದು. ಉದಾಹರಣೆಗೆ, ತೋಡ ಭಾಷೆ. ಅದು ನೀಲಗಿರಿಯ ಸುತ್ತಣ ಪ್ರದೇಶಕ್ಕೆ ಮಾತ್ರ ಮೀಸಲಾದ ಒಂದು ಆದಿವಾಸಿ ಭಾಷೆ. ಅದನ್ನು ಬಳಸಿ ಲಂಡನ್ನಿನಲ್ಲಿರುವವರಿಗೆ ಪತ್ರ ಬರೆದಲ್ಲಿ ಅದರ ಅರ್ಥ ಉದ್ದೇಶಿತ ವ್ಯಕ್ತಿಗಳಿಗಲ್ಲದೆ ಉಳಿದವರಿಗೆ ಆಗದು. ಬಳಕೆ ತಪ್ಪಿದ್ದು ಕೇವಲ ವಸ್ತುಪ್ರದರ್ಶನಾಲಯದ ಆಶ್ಚರ್ಯವಾಗುಳಿದಿರುವ ಭಾಷೆಯೂ ಗುಪ್ತಭಾಷೆಯಾಗಬಲ್ಲದು. ಉದಾಹರಣೆಗೆ ಕ್ಯೂಬದಲ್ಲಿನ ಲುಕೂಮಿ ಎಂಬ ಆಫ್ರಿಕನ್ ಭಾಷೆ. ಎಷ್ಟೋ ವೇಳೆ ಕೃತಕಭಾಷೆಯೊಂದು ಗುಪ್ತಭಾಷೆಯಾಗಿ ಬಳಕೆಗೆ ಬರಬಹುದು. ಉದಾಹರಣೆಗಳಿಗೆ (ನೋಡಿ-ಕೃತಕ ಭಾಷೆಗಳು).

ಗುಪ್ತ ಲೇಖನ ವಿಧಾನಗಳು ಬದಲಾಯಿಸಿ

ರಹಸ್ಯ ಸಮಾಚಾರಗಳ ರಚನೆ ಮತ್ತು ರವಾನೆಗಳಿಗಾಗಿ ಬಗೆಬಗೆಯ ಗುಪ್ತ ಲೇಖನ ವಿಧಾನಗಳು ಜನ್ಮತಾಳಿವೆ. ರಹಸ್ಯ ಲೇಖನದಲ್ಲಿ ಮೂರು ಹಂತಗಳಿರುತ್ತವೆ. ಒಂದು-ಸಹಜ ಭಾಷೆಯಲ್ಲಿರುವ ಮಾಹಿತಿಗಳನ್ನು ಕೋಷ್ಟಕದ ಸಹಾಯದಿಂದ ಗುಪ್ತಭಾಷೆಗೆ ಪರಿವರ್ತಿಸುವುದು. ಎರಡು-ಗುಪ್ತಭಾಷೆಗಳನ್ನು ಗುರಿಗೆ ಪ್ರೇಷಿಸುವುದು. ಮೂರು-ಗುಪ್ತಲೇಖನವನ್ನು ಸಹಜ ಭಾಷೆಗೆ ಪರಿವರ್ತಿಸುವುದು. ಉದಾಹರಣೆಗೆ ಇಂಗ್ಲಿಷ್ ವರ್ಣಮಾಲೆಯ 26 ಅಕ್ಷರಗಳಿಗೂ ಬೇರೆ ಬೇರೆ ಅಕ್ಷರಗಳನ್ನು ಪ್ರತಿಕಿಸುವುದು. A ಗೆ L, B ಗೆ M ಹೀಗೆ. ಅನಂತರ ತಿಳಿಸಬೇಕಾದ ಮಾಹಿತಿ OPEN WESTERN FRONT ಎಂಬುದನ್ನು ಗುಪ್ತ ಅಕ್ಷರಗಳಾಗಿ ಪರಿವರ್ತಿಸುವುದು. ಈ ಪರಿವರ್ತಿತ ಸಂದೇಶವನ್ನು ಕೋಷ್ಟಕ ಗೊತ್ತಿದ್ದವನು ಮಾತ್ರ ಓದಲು ಸಾಧ್ಯ (ನೋಡಿ- ಗುಪ್ತಲೇಖ ಶಾಸ್ತ್ರ).

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: