ಹೆಸರೇ ತಿಳಿಸುವಂತೆ ಇವು ಕಟ್ಟಿ ಚಲಾವಣೆಗೆ ತಂದ ಭಾಷೆಗಳು (ಆರ್ಟಿಫಿಷಿಯಲ್ ಲ್ಯಾಂಗ್ವೇಜಸ್), ಹುಟ್ಟಿ ಬೆಳೆದು ಬಂದುವಲ್ಲ. ಸಹಜ ಭಾಷೆಗಳಿಂದ ಸಾಧಿಸಲಾಗದ ಯಾವುದೋ ಒಂದು ಉದ್ದೇಶಕ್ಕಾಗಿ ಈ ಭಾಷೆಗಳು ಸಿದ್ಧವಾಗುತ್ತವೆ. ಆಡಿದ ಮಾತು ಜನಸಾಮಾನ್ಯರಿಗೆ ತಿಳಿಯಬಾರದು ಎಂಬ ಉದ್ದೇಶವಿದ್ದಾಗ ಇಂಥದೊಂದು ಭಾಷೆ ಅಗತ್ಯವೆನಿಸುತ್ತದೆ. ಅಲ್ಲದೆ ಬಹು ಭಾಷಾ ಗೊಂದಲವನ್ನು ತಪ್ಪಿಸಿ ಯಾವುದಾದರೊಂದು ಭಾಷೆಯನ್ನು ರಾಷ್ಟ್ರದ ಅಥವಾ ಇಡೀ ವಿಶ್ವದ ವ್ಯವಹಾರ ಮಾಧ್ಯಮವನ್ನಾಗಿ ಬಳಸುವ ಉದ್ದೇಶವಿದ್ದಲ್ಲೂ ಇಂಥ ಭಾಷೆಯ ಅಗತ್ಯ ಕಂಡು ಬರುತ್ತದೆ. ಒಂದೊಂದು ಕೃತಕ ಭಾಷೆಗೂ ತನ್ನದೇ ಆದ ಶಬ್ದಸಂಪತ್ತು, ವ್ಯಾಕರಣ, ಕೆಲವು ವೇಳೆ ವಿಶಿಷ್ಟ ಲಿಪಿ-ಇವು ಇರುತ್ತವೆ.

ಇತಿಹಾಸ

ಬದಲಾಯಿಸಿ

ತಮ್ಮವೇ ಆದ ಗುಪ್ತ ಕೃತಕ ಭಾಷೆಗಳನ್ನು ವಿಶೇಷವಾಗಿ ಸೈನ್ಯದ ಗೂಢಚಾರರು, ವ್ಯಾಪಾರಿಗಳು, ದರೋಡೆಕೋರರು ಹಾಗೂ ಚಿಕ್ಕ ಚಿಕ್ಕ ಮಕ್ಕಳು ಹೆಚ್ಚಾಗಿ ಉಪಯೋಗಿಸುತ್ತಾರೆ. ಇದರ ಮುಖ್ಯ ಉದ್ದೇಶವೇನೆಂದರೆ ತಮ್ಮ ಮಾತು ಬೇರೆ ಜನರಿಗೆ ಅರ್ಥವಾಗುವಂತಿರಬಾರದು ಎಂಬುದು. ಭಾರತದ ಸ್ವಾತಂತ್ರ್ಯ ಸಂಗ್ರಾಮಕಾಲದಲ್ಲಿ ಕೆಲವು ದಂಗೆಕಾರರು ವಿರೋಧಿಗಳಿಗೆ ತಡೆಯನ್ನುಂಟುಮಾಡುವ ಉದ್ದೇಶದಿಂದ ಕೆಲವು ಗುಪ್ತ ಭಾಷೆಗಳನ್ನು, ಗುಪ್ತಲಿಪಿಗಳನ್ನು ಉಪಯೋಗಿಸಿದರು. ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಗುಪ್ತ ಭಾಷಾಪ್ರವೃತ್ತಿಗೆ ಕೆಲವು ಉದಾಹರಣೆಗಳನ್ನು ನೋಡಬಹುದು. ತಮ್ಮ ಭಾಷೆ ಮೂರನೆಯವರಿಗೆ ಅರ್ಥವಾಗದಿರಲೆಂದು ಪದದ ವರ್ಣವನ್ನು ಹಿಂದುಮುಂದು ಮಾಡಿ ಬಳಸುವುದಿದೆ. ಉದಾ: ಅವನು ಮನೆಗೆ ಹೋದ-ಎಂಬುದನ್ನು ನುವಅ ಗೆನೆಮ ದಹೋ- ಎಂದು ಹೇಳುವುದು. ಪದದ ಪ್ರತಿ ವರ್ಣದ ಹಿಂದೆ ಇನ್ನೊಂದು ವರ್ಣವನ್ನು ಸೇರಿಸಿ ಆಡುವುದು. ಉದಾ: ಅವನು ಮನೆಗೆ ಹೋದ-ಎಂಬುದನ್ನು ಕಅಕವಕನು ಕಮಕನೆಕಗೆ ಕಹೋಕದ ಎನ್ನುವುದು. ಕೆಲವು ಮಕ್ಕಳು ಪದದ ಮೊದಲ ವರ್ಣದ ಮುಂದೆ ಪ್ಪ ವರ್ಣವನ್ನು ಸೇರಿಸಿ ಗಂಟೆಗಟ್ಟಲೆ ಮಾತಾಡುತ್ತಾರೆ. ಉದಾ: ಅವನು ಅಲ್ಲೇ ಹೋದ-ಎಂಬುದನ್ನು ಅಪ್ಪವನು ಅಪ್ಪಲ್ಲೇ ಹೊಪ್ಪೋದ-ಎಂದು. ಕೆಲವು ಮಕ್ಕಳು ಕನ್ನಡ, ಹಿಂದೀ, ಉರ್ದು, ಇಂಗ್ಲೀಷ್, ಇತ್ಯಾದಿ ಭಾಷೆಗಳ ಲಿಪಿಗಳನ್ನು ಬಳಸಿಕೊಂಡು ಒಂದು ಕೃತಕ ಲಿಪಿಯನ್ನೇ ನಿರ್ಮಿಸಿದ್ದಾರೆ. ಉದಾ: ಅದು ಂದು, ಇದು- iದು, ಅವನು ಂವನು ಇತ್ಯಾದಿ. ಹಲವು ಭಾಷಾ ಲಿಪಿಗಳನ್ನು ಬಲ್ಲ ವಿದ್ಯಾರ್ಥಿಗಳಲ್ಲಿ ಈ ಪ್ರವೃತ್ತಿ ಹೆಚ್ಚಾಗಿ ಕಂಡುಬರುತ್ತದೆ. ಗುಪ್ತಲಿಪಿಯಲ್ಲಿ ಸ್ನೇಹಿತರಿಂದ ಸ್ನೇಹಿತರಿಗೆ ಕಾಗದಗಳು ಓಡಾಡುತ್ತವೆ. ಕೆಲವು ವೇಳೆ ಅಕ್ಷರಗಳನ್ನು ಹಿಂದುಮುಂದು ಮಾಡಿ ಕನ್ನಡಿಯಲ್ಲಿ ಕಂಡಂತೆ ಬರೆಯಲಾಗುತ್ತದೆ. ಅದನ್ನು ಓದಬೇಕಾದರೆ ಕನ್ನಡಿ ಹಿಡಿದೇ ಓದಬೇಕು. ಕೆಲವು ವೇಳೆ ಅಕ್ಷರಗಳಿಗೆ ಬದಲಾಗಿ ಅಂಕಿಗಳನ್ನು ಬಳಸುವುದುಂಟು. ಈಗ ಬಳಕೆಯಲ್ಲಿರುವ ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಶೀಘ್ರಲಿಪಿಗಳು ಇಂಥವೇ ಅಲ್ಲದಿದ್ದರೂ ಅಂಥ ಬರೆವಣಿಗೆಗಾಗಿ ಹುಟ್ಟಿದ ಕೃತಕ ಲಿಪಿಗಳಾಗಿವೆ.

ರಾಷ್ಟ್ರೀಯ ಭಾಷೆಯ ಅಗತ್ಯ

ಬದಲಾಯಿಸಿ

ದೇಶ ವಿಶಾಲವಾಗಿದ್ದು ಅದರಲ್ಲಿ ಅನೇಕ ಭಾಷೆಗಳು ಬಳಕೆಯಲ್ಲಿದ್ದರೆ ಕೆಲವೇಳೆ ಒಂದು ರಾಷ್ಟ್ರೀಯ ಭಾಷೆಯ ಅಗತ್ಯ ಕಂಡುಬರಬಹುದು. ಹಾಗೆಯೆ ದೇಶ ದೇಶಗಳ ನಡುವಿನ ಅಂತರರಾಷ್ಟ್ರೀಯ ವ್ಯವಹಾರಗಳಿಗಾಗಿ ಒಂದು ಅಂತರರಾಷ್ಟ್ರೀಯ ಭಾಷೆ ಇದ್ದರೊಳ್ಳೆಯದು ಎಂಬ ಭಾವನೆ ಕೆಲವೊಮ್ಮೆ ಕಾಣಿಸಿಕೊಂಡಿರುವುದುಂಟು. (ನೋಡಿ- ಅಂತರರಾಷ್ಟ್ರೀಯ-ಭಾಷೆ). ನೂರು ಭಾಷೆಗಳು ಬಳಕೆಯಲ್ಲಿರುವ ಕಡೆ ಅವುಗಳಲ್ಲೊಂದನ್ನು ರಾಷ್ಟ್ರಭಾಷೆಯೆಂದಾಗಲಿ ಅಂತರರಾಷ್ಟ್ರೀಯ ಭಾಷೆಯೆಂದಾಗಲಿ ಆರಿಸಿದಲ್ಲಿ ಪಕ್ಷಪಾತ ಮಾಡಿದಂತಾಗುತ್ತದೆ. ಅದರಿಂದ ಗೊಂದಲ, ಘರ್ಷಣೆಗಳಿಗೆ ಎಡೆ ಮಾಡಿಕೊಟ್ಟಂತಾಗಬಹುದು. ಆದ್ದರಿಂದ ಆ ಉದ್ದೇಶಕ್ಕೆ ಕೃತಕ ಭಾಷೆಯೊಂದನ್ನು ಸೃಷ್ಟಿಸುವ ಕಡೆ ವಿದ್ವಾಂಸರ ಗಮನ ಹರಿದಿರುವುದುಂಟು.

ಫ್ರಾನ್ಸಿಸ್ ಬೇಕನ್(1561-1626)

ಬದಲಾಯಿಸಿ

ಇಂಥ ಉದ್ದೇಶದಿಂದ ಒಂದು ಕೃತಕ ಭಾಷೆಯನ್ನು ನಿರ್ಮಿಸುವ ಸರ್ವಪ್ರಯತ್ನ ನಡೆಸಿದವರಲ್ಲಿ ಫ್ರಾನ್ಸಿಸ್ ಬೇಕನ್(1561-1626) ಮೊಟ್ಟ ಮೊದಲಿಗನೆನ್ನಬಹುದು. ಆತ ತನ್ನ ಕಾಲದಲ್ಲಿ ಆಗಷ್ಟೇ ಪರಿಚಯವಾಗುತ್ತಿದ್ದ ಚೀನೀ ಭಾವಲಿಪಿಯನ್ನು ಉಪಯೋಗಿಸಿಕೊಂಡು ಕೃತಕ ಬರೆವಣಿಗೆಯ ಒಂದು ವಿಧಾನವನ್ನು ಸೂಚಿಸಿದ. ಅದು ಕೇವಲ ಬರೆವಣೆಗೆಯೇ ಹೊರತು ಭಾಷೆಯಲ್ಲ. 1629ರಲ್ಲಿ ತತ್ತ್ವಶಾಸ್ತ್ರಜ್ಞ ಡೇಕಾರ್ಟ್ ಸಂಖ್ಯೆಗಳ ಆಧಾರದ ಮೇಲೆ ಕೃತಕ ಭಾಷೆಯೊಂದನ್ನು ರೂಪಿಸಿದ. ಇದರಿಂದ ವಿಶ್ವಭಾಷಾ ಚಳವಳಿಗೆ ತೀವ್ರ ಪ್ರೋತ್ಸಾಹ ಸಿಕ್ಕಿದಂತಾಯಿತು. ಅಲ್ಲಿಂದ ಮುಂದೆ ಕೆಲವೇ ವರ್ಷಗಳಲ್ಲಿ ಅನೇಕ ಕೃತಕ ಭಾಷೆಗಳು ಹುಟ್ಟಿಕೊಂಡವು. ಅವುಗಳಲ್ಲಿ ಕೆಲವು ಬರೆವಣೆಗೆಯನ್ನೂ ಸೇರಿಸಿಕೊಂಡವು. ಈ ಭಾಷೆಗಳ ಬಗ್ಗೆ ಸಾಕಷ್ಟು ಚರ್ಚೆ, ಪ್ರಯೋಗ ನಡೆಯಿತಾದರೂ ಯಾವುದೂ ಬಳಕೆಗೆ ಬರಲು ಸಾಧ್ಯವಾಗಲಿಲ್ಲ. ಫ್ರಾನ್ಸಿಸ್ ಬೆಕನನಿಂದ ಇಂದಿನವರೆಗೆ ಹೆಚ್ಚುಕಡಿಮೆ ಏಳನೂರು ಕೃತಕ ಭಾಷೆಗಳು ಸೃಷ್ಟಿಯಾಗಿವೆ ಎಂದು ಲೆಕ್ಕಾಚಾರ ಮಾಡಲಾಗಿದೆ. ಇವುಗಳಲ್ಲಿ ಕೆಲವು ಬಳಕೆಯಲ್ಲಿರುವ ವಿವಿಧ ಭಾಷೆಗಳ ಬೇರೆಬೇರೆ ಅಂಶಗಳನ್ನು ಸೇರಿಸಿ ತಯಾರಿಸಿದ ಮಿಶ್ರಣಗಳಾಗಿವೆ. ಬೋಪಲ್, ದಿಲ್, ಬಾಲ್ಟಾ, ಲ್ಯಾಟಿನೀಸ್, ವೆಲ್ಟ್ ಪಾರ್ಲ್ ಮುಂತಾದ ಕೃತಕ ಭಾಷೆಗಳು ಸುಮಾರು ಹತ್ತೊಂಬತ್ತನೆಯ ಶತಮಾನದಲ್ಲಿ ನಿರ್ಮಿತವಾದವು. ನೋವಿಯಲ್, ಇಂಟರ್‍ಲಿಂಗ್ವ, ಇಂಟರ್ ಗ್ಲಾಸ, ಇಡೊ, ಅಕ್ಸಿಡೆಂಟಲ್-ಮುಂತಾದ ಕೃತಕ ಭಾಷೆಗಳು ಇಪ್ಪತ್ತನೆಯ ಶತಮಾನದಲ್ಲಿ ಸೃಷ್ಟಿಯಾದವು. ಇವುಗಳಲ್ಲಿ ಎರಡು ಭಾಷೆಗಳು ಮಾತ್ರ ತುಂಬ ಯಶಸ್ವಿಯಾಗಿದ್ದು ವಿಶೇಷ ಉಲ್ಲೇಖಕ್ಕೆ ಯೋಗ್ಯವಾಗಿವೆ. ಅವು ಯಾವುವೆಂದರೆ ಒಂದು ವೊಲಾಪುಕ್; ಇನ್ನೊಂದು ಎಸ್ಪರ್ಯಾಂಟೊ. ಪ್ಲೇಯರ್ ಎಂಬಾತ ಸುಮಾರು 1880ರಲ್ಲಿ ವೊಲಾಪುಕ್ ಭಾಷೆಯನ್ನು ನಿರ್ಮಿಸಿದ. ಇದರ ಧಾತುಗಳನ್ನು ಇಂಗ್ಲಿಷ್ ಮತ್ತು ಲ್ಯಾಟಿನ್ ಭಾಷಾಮೂಲಗಳಿಂದ ತಂದುಕೊಳ್ಳಲಾಗಿದೆ. ಇದರ ಪದಸಮೂಹ ತುಂಬ ಸರಳ ಹಾಗೂ ಸುಲಭ. ವ್ಯಾಕರಣ ಮಾತೃಭಾಷೆಯಾದ ಜರ್ಮನ್ ಭಾಷೆಯನ್ನಾಧರಿಸಿದೆ. ಪ್ಲೇಯರ್‍ನಿಗೆ ಜಗತ್ತಿಗೆಲ್ಲ ಒಂದೇ ಒಂದು ಭಾಷೆಯನ್ನು ನಿರ್ಮಿಸಬೇಕೆಂಬ ಆಸೆ ಇತ್ತಾದರೂ ಅವನ ಪ್ರಯತ್ನಕ್ಕೆ ಸಾಕಷ್ಟು ಮಾನ್ಯತೆ ಸಿಕ್ಕಲಿಲ್ಲ.

ಲಾಜರಸ್ ಲುಡ್ವಿಗ್ ಜಮೆನ್ ಹಾಫ್ (1850-1917)

ಬದಲಾಯಿಸಿ

ಭಾಷಾಶಾಸ್ತ್ರದಲ್ಲಿ ಪ್ರಕಾಂಡ ಪಂಡಿತನೂ ಬಹುಭಾಷಾವಿಶಾರದನೂ ಆದ ಲಾಜರಸ್ ಲುಡ್ವಿಗ್ ಜಮೆನ್ ಹಾಫ್ (1850-1917) ಎಂಬ ರಷ್ಯನ್ ಪಂಡಿತ ಎಸ್ಪರ್ಯಾಂಟೊ ಎಂಬ ಅಂತರರಾಷ್ಟ್ರೀಯ ಭಾಷೆಯೊಂದನ್ನು 1887ರಲ್ಲಿ ಸೃಷ್ಟಿಸಿದ. ಮೊದಮೊದಲು ಜನ ಇವನ ಯತ್ನಕ್ಕೆ ಅಷ್ಟಾಗಿ ಮಾನ್ಯತೆ ನೀಡಲಿಲ್ಲವಾದರೂ ಕಾಲ ಕಳೆದಂತೆಲ್ಲ ಎಸ್ಪರ್ಯಾಂಟೊ ಯೂರೋಪಿನ ದೊಡ್ಡ ದೊಡ್ಡ ವಿದ್ವಾಂಸರ ಗಮನವನ್ನು ಆಕರ್ಷಿಸಿತು. ಇದರ ಸರಳತೆ, ಉಪಯೋಗಗಳನ್ನವರು ತುಂಬ ಪ್ರಶಂಸಿಸಿದರು. ಈ ಭಾಷಾಪ್ರಚಾರಕ್ಕಾಗಿಯೇ ಒಂದು ಸಂಸ್ಥೆಯನ್ನು ತೆರೆಯಲಾಯಿತು. ವಿಶ್ವದ ಕೆಲವು ರಾಷ್ಟ್ರಗಳ ಬೆಂಬಲವೂ ಇದಕ್ಕೆ ದೊರೆಯಿತು. ಇದೆಲ್ಲದರ ಪರಿಣಾಮವಾಗಿ ಎಸ್ಪರ್ಯಾಂಟೊ ಬಹುಬೇಗ ಯಶಸ್ಸು ಗಳಿಸಿಕೊಳ್ಳಲು ಅವಕಾಶ ಸಿಕ್ಕಿದಂತಾಯಿತು. ಜûಮೆನ್‍ಹಾಫ್ 1887ರಲ್ಲಿ ಎಸ್ಪರ್ಯಾಂಟೊ ಎಂಬ ಗುಪ್ತನಾಮದಲ್ಲಿ ಅಂತರರಾಷ್ಟ್ರೀಯ ಭಾಷೆ ಎಂಬ ಒಂದು ಕಿರು ಹೊತ್ತಗೆಯನ್ನು ಪ್ರಕಟಿಸಿದ. ಎಸ್ಪರ್ಯಾಂಟೊ ಎಂಬ ಲ್ಯಾಟಿನ್ ಪದಕ್ಕೆ ಆಶಾವಾದಿ ಎಂದರ್ಥ. ಜûಮೆನ್‍ಹಾಫ್‍ನ ಗುಪ್ತನಾಮವೇ ಅವನ ಭಾಷೆಯ ಹೆಸರಾಗಿ ಉಳಿಯಿತು.

ಎಸ್ಪರ್ಯಾಂಟೊ ಭಾಷೆ

ಬದಲಾಯಿಸಿ

ಎಸ್ಪರ್ಯಾಂಟೊ ಭಾಷೆಗೆ ಹೆಚ್ಚಿನ ಪ್ರಸಾರ ದೊರಕಿತು. ಒಂದನೆಯ ಮತ್ತು ಎರಡನೆಯ ಮಹಾಯುದ್ದ ಕಾಲದಲ್ಲದನ್ನು ಪ್ರಚಾರ ಮಾಧ್ಯಮವನ್ನಾಗಿ ಬಳಸಲಾಯಿತು. ಈ ಭಾಷೆಯಲ್ಲಿ ಅನೇಕಾನೇಕ ಗ್ರಂಥಗಳು ಹೊರಬಿದ್ದುವು. ನಿರ್ಮಿತ ಭಾಷೆಗಳಲ್ಲೆಲ್ಲ ಎಸ್ಪರ್ಯಾಂಟೊ ನಿರ್ವಿವಾದವಾಗಿ ಅತ್ಯಂತ ಯಶಸ್ವಿಯಾದ ಜನಪ್ರಿಯವಾದ ಭಾಷೆ. ಸರಳತೆ, ಸಂಕ್ಷಿಪ್ತತೆ, ಸೌಲಭ್ಯ, ಹಾಗೂ ಕ್ರಮಬದ್ಧತೆಗಳೇ ಈ ಭಾಷೆಯ ಮುಖ್ಯ ಸೂತ್ರಗಳು.ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ಕೆಲವು ವಿದ್ವಾಂಸರು ಎಸ್ಪರ್ಯಾಂಟೊ ಭಾಷೆಯನ್ನು ತುಂಬ ನವೀನ ರೀತಿಯಲ್ಲಿ ಪರಿವರ್ತಿಸುವ ಪ್ರಯತ್ನ ನಡೆಸಿದರು. ಅಂಥವರಲ್ಲಿ ಕಾಂಟುರಟ್ ಮೊದಲಿಗ. ಅವನ ಅತಿ ಸರಳ ಹಾಗೂ ತುಂಬ ಉಪಯೋಗಿ ನವೀನ ಭಾಷೆಯೇ ಇಡೊ. ಈ ಪದವನ್ನು ಎಸ್ಪರ್ಯಾಂಟೊ ಭಾಷೆಯಿಂದಲೇ ತೆಗೆದುಕೊಂಡಿದೆ. ಇದರ ಅರ್ಥ ಮಗು ಅಥವಾ ಹುಟ್ಟು ಎಂದು. ಇದನ್ನು ಸುಲಭವಾಗಿ ಅಂತರರಾಷ್ಟ್ರೀಯ ಭಾಷೆಯನ್ನಾಗಿ ಉಪಯೋಗಿಸಿಕೊಳ್ಳಬಹುದಿತ್ತು. ಆದರದು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ.[]

ಕೃತಕ ಭಾಷೆಗಳ ಚಲಾವಣೆ

ಬದಲಾಯಿಸಿ

ಅಷ್ಟಾಗಿ ಕೃತಕ ಭಾಷೆಗಳು ಚಲಾವಣೆಗೆ ಬಂದು ಶಾಶ್ವತವಾಗಿ ನಿಲ್ಲದಿರಲು ಅನೇಕ ಕಾರಣಗಳಿವೆ. ಭಾಷೆ ಒಂದು ಸಾಮಾಜಿಕ ಕ್ರಿಯೆ. ಅದು ಸಂಪ್ರದಾಯದ ಸಹಜ ಕೊಡುಗೆ. ಸಾಮೂಹಿಕ ಸೃಷ್ಟಿಯೇ ಹೊರತು ಅದು ಕೃತಕ ನಿರ್ಮಾಣವಲ್ಲ. ಆದುದರಿಂದಲೇ ಯಾವ ಒಂದು ಕೃತಕ ಭಾಷೆಯೂ ಸಂಪೂರ್ಣವಾಗಿ ಯಶಸ್ವಿಯಾಗುವುದು ಸಾಧ್ಯವಾಗಿಲ್ಲ. ಯಾವುದೇ ಒಂದು ಭಾಷೆಯನ್ನು ಜಗತ್ತಿನಾದ್ಯಂತ ಬಳಕೆಗೆ ತಂದರೂ ಅದನ್ನು ಬಳಸುವ ಜನ ಮೊದಲೇ ಬೇರೆ ಬೇರೆ ಭಾಷೆಗಳನ್ನಾಡುತ್ತಿರುತ್ತಾರಾದ್ದರಿಂದ ಭಾಷಾ ವ್ಯತ್ಯಾಸಗಳುಂಟಾಗುವ ಅಪಾಯ ಇದ್ದೇ ಇರುತ್ತದೆ. ಒಂದೇ ಭಾಷೆಯನ್ನು ಒಂದೇ ಸ್ಥಿತಿಯಲ್ಲಿ ಬಳಕೆಯಲ್ಲಿ ಉಳಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಚಿರಪರಿವರ್ತನಾಶೀಲತೆ ಭಾಷೆಯ ಬಹುಮುಖ್ಯ ಲಕ್ಷಣ. ಬಳಕೆಯಲ್ಲಿರುವ ಭಾಷೆಯಲ್ಲಂತೂ ಈ ಮಾತು ಸತ್ಯ. ಹಾಗಿರುವಾಗ ಕೃತಕ ಭಾಷೆಯೊಂದು ಅಸ್ತಿತ್ವಕ್ಕೆ ಬಂದು ಈಗಿರುವ ಭಾಷೆಗಳ ಸ್ಥಾನವನ್ನು ಆಕ್ರಮಿಸಿಕೊಳ್ಳುವುದು ಸಾಧಾರಣ ಪರಿಸ್ಥಿತಿಯಲ್ಲಿ ಸಾಧ್ಯವಾಗದ ಮಾತು.[]

ಉಲ್ಲೇಖಗಳು

ಬದಲಾಯಿಸಿ
  1. "ಆರ್ಕೈವ್ ನಕಲು". Archived from the original on 2016-05-26. Retrieved 2016-11-01.
  2. http://www.prajavani.net/news//article/2012/12/22/141406.html[ಶಾಶ್ವತವಾಗಿ ಮಡಿದ ಕೊಂಡಿ]