1895-1976. ಕರ್ನಾಟಕದ ಹಿರಿಯ ಪತ್ರಿಕೋದ್ಯಮಿಗಳ ಲ್ಲೊಬ್ಬರು. ಕರ್ನಾಟಕದಲ್ಲಿ ಅನೇಕ ಕನ್ನಡ ಪತ್ರಿಕೆಗಳ ಹುಟ್ಟು ಬೆಳೆವಣಿಗೆಗಳಿಗೆ ಕಾರಣರಾದ ಇವರು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಲವಾರು ಪ್ರಯೋಗಗಳನ್ನೂ ಅಳವಡಿಸಿದರು.

ಬೈಸಾನಿ ನರಸಿಂಹೇಶ್ವರ ಗುಪ್ತ ಆಂಧ್ರಪ್ರದೇಶಚಿತ್ತೂರಿನಲ್ಲಿ 1895ರ ಡಿಸೆಂಬರ್ 16ರಂದು ಜನಿಸಿದರು. ತಂದೆ ರಂಗಯ್ಯ ಶೆಟ್ಟಿ, ತಾಯಿ ಶ್ರೀರಂಗ ನಾಂದಾರಮ್ಮ ತಮಿಳುನಾಡಿನಲ್ಲಿ (ಮದರಾಸು) ವಿದ್ಯಾಭ್ಯಾಸ ಮಾಡಿ ಇವರು ಮದರಾಸಿನಲ್ಲಿ ಆನಿಬೆಸೆಂಟರ ಪತ್ರಿಕೋದ್ಯಮ ಕಾಲೇಜಿನಲ್ಲಿ ಶಿಕ್ಷಣ ಪಡೆದು ಮದರಾಸಿನಲ್ಲೇ ನ್ಯೂ ಇಂಡಿಯ (ದಿನಪತ್ರಿಕೆ) ಮತ್ತು ಕಾಮನ್ ವೀಲ್ (ವಾರಪತ್ರಿಕೆ) ಇವುಗಳ ಸಂಪಾದಕೀಯ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದು, ಬೆಂಗಳೂರಿಗೆ ಮಾರುಹೋಗಿ ಅಲ್ಲೇ ನೆಲಸಲು ನಿರ್ಧರಿಸಿದರು. ಆಗಿನ ಮೈಸೂರು ಸಂಸ್ಥಾನದ ರಾಜಕೀಯ ಕ್ಷೇತ್ರಕ್ಕೆ ಧುಮುಕಿ ಪ್ರಜಾಪಕ್ಷ ಸ್ಥಾಪನೆಗೆ ದುಡಿದರು.

ಗುಪ್ತ ಅವರು ರಾಜಕೀಯ, ಪತ್ರಿಕೋದ್ಯಮ, ವಾಣಿಜ್ಯ-ಈ ಮೂರು ಕ್ಷೇತ್ರಗಳಲ್ಲಿಯೂ ಕೆಲಸ ಮಾಡಿದವರು. 1942ರಿಂದ 1946ರ ವರೆಗೆ ಅವರು ಬೆಂಗಳೂರು ಪೌರಸಭೆಯ, 1948ರಿಂದ ಮೈಸೂರು ವಿಶ್ವವಿದ್ಯಾನಿಲಯದ ಸೆನೇಟಿನ, 1949ರಿಂದ ಮೈಸೂರು ವಿಶ್ವವಿದ್ಯಾನಿಲಯ ಕೌನ್ಸಿಲಿನ, 1945ರಿಂದ 1949ರ ವರೆಗೆ ಮೈಸೂರಿನ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ, ಆ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪನಾಯಕರಾಗಿ ಇದ್ದರು. ಮೈಸೂರು ಬ್ಯಾಂಕಿನ ಮತ್ತು ಅನೇಕ ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳ ನಿರ್ದೇಶಕರಾಗಿದ್ದರು. ಚಲನಚಿತ್ರ ಕ್ಷೇತ್ರದಲ್ಲಿ ವಿಜಯಾ ಟಾಕೀಸ್ ಡಿಸ್ಟ್ರಿಬ್ಯೂಟರ್ಸ್ನ ಪಾಲುದಾರರಾಗಿದ್ದರು. ಇದರ ಒಡೆತನದಲ್ಲಿ ಕೆಲವು ಚಿತ್ರಮಂದಿರಗಳೂ ಇದ್ದುವು. ಇವರ ಪ್ರಗತಿ ಪ್ರಕಟನಾಲಯ ಎಂಬತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದೆ. ಇವರು ಜಪಾನ್ ಮತ್ತು ಐರೋಪ್ಯ ದೇಶಗಳ ಪ್ರವಾಸ ಮಾಡಿದ್ದಾರೆ. ಇವರು ಅಖಿಲ ಭಾರತ ಉತ್ಪಾದಕ ಸಂಘದ ಉಪಾಧ್ಯಕ್ಷರಾಗಿಯೂ ಅದರ ರಾಜ್ಯಶಾಖೆಯ ಅಧ್ಯಕ್ಷರಾಗಿಯೂ ಇದ್ದರು. ವಿಶ್ವೇಶ್ವರಯ್ಯ ತಾಂತ್ರಿಕ ವಸ್ತು ಸಂಗ್ರಹಾಲಯ ಸ್ಥಾಪನೆಗೆ ಮುಖ್ಯ ಕಾರಣರು ಇವರು.

ಬಿ.ಎನ್. ಗುಪ್ತರದು ಧರ್ಮಕಾರ್ಯಗಳಿಗೆ ಪ್ರಸಿದ್ಧವಾದ ವಂಶ. ಅವರ ತಾತನವರು ಮದರಾಸಿನ ಬೈಸಾನಿ ಮಾಧವಚೆಟ್ಟಿ ಚಾರಿಟೀಸಿನ ಸ್ಥಾಪಕರು. ಗುಪ್ತರು ಅದಕ್ಕೆ ಅಧ್ಯಕ್ಷರಾಗಿದ್ದರು. 1970ರಲ್ಲಿ ಗುಪ್ತರು ಜನ್ಮಭೂಮಿ ಟ್ರಸ್ಟ್‌ ಸ್ಥಾಪಿಸಿದರು. ಪತ್ರಿಕೋದ್ಯಮ ಮತ್ತು ಕನ್ನಡ ಸಾಹಿತ್ಯಗಳ ಬೆಳೆವಣಿಗೆಯೂ ಈ ಕ್ಷೇತ್ರಗಳಲ್ಲಿ ದುಡಿದಿರುವ ಮಹನೀಯರ ಸನ್ಮಾನವೂ ಈ ನ್ಯಾಸದ ಉದ್ದೇಶಗಳು. ಇದರಿಂದ ಮೈಸೂರು, ಬೆಂಗಳೂರು ವಿಶ್ವವಿದ್ಯಾನಿಲಯಗಳಿಗೆ ಗುಪ್ತರು ದತ್ತಿಗಳನ್ನು ನೀಡಿದ್ದಾರೆ. ಸದಾಕ್ರಿಯಾಶೀಲರಾಗಿದ್ದು ಗುಪ್ತ 1976ರ ಜುಲೈ 28ರಂದು ನಿಧನರಾದರು.

ಪತ್ರಿಕೋದ್ಯಮದಲ್ಲಿ

ಬದಲಾಯಿಸಿ

ಮೈಸೂರಿನ ಪ್ರಥಮ ರಾಜಕೀಯ ಪಕ್ಷವೂ ಜವಾಬ್ದಾರಿ ಸರ್ಕಾರದ ಬೇಡಿಕೆಯನ್ನು ಪ್ರಥಮವಾಗಿ ಮಂಡಿಸಿದ್ದೂ ಆದ ಪ್ರಜಾಪಕ್ಷವನ್ನು ಬೆಳೆಸುವುದಕ್ಕಾಗಿ ಪ್ರಜಾಮತ ವಾರಪತ್ರಿಕೆಯನ್ನು ಪ್ರಕಟಿಸಲು ಗುಪ್ತ ಅವರು ನಿರ್ಧರಿಸಿದರು. ಆದರೆ ಮಿರ್ಜಾ ಇಸ್ಮಾಯಿಲ್ ದಿವಾನರಾಗಿದ್ದ ಮೈಸೂರು ಸರ್ಕಾರ ಅದಕ್ಕೆ ಅನುಮತಿ ಕೊಡಲಿಲ್ಲ. ಗುಪ್ತ ಅವರು ಮದರಾಸಿಗೆ ಹೋಗಿ 1929ರಲ್ಲಿ ಪ್ರಜಾಮತ ಪ್ರಾರಂಭಿಸಿದರಲ್ಲದೆ ಎರಡು ವರ್ಷಗಳ ಅನಂತರ (1931) ಜನವಾಣಿ ದಿನಪತ್ರಿಕೆಯನ್ನು ಪ್ರಾರಂಭಿಸಿದರು. ಜನವಾಣಿಯಲ್ಲಿ ಪ್ರಕಟವಾದ ಒಂದು ಲೇಖನದಿಂದಾಗಿ ಆ ಪತ್ರಿಕೆ ನಿಂತುಹೋಯಿತು. ಅಷ್ಟರಲ್ಲಿ ಮಿರ್ಜಾ ಅವರು ಆ ಪತ್ರಿಕೆಗಳನ್ನು ಬೆಂಗಳೂರಿನಲ್ಲಿ ಪ್ರಕಟಿಸಲು ಅನುಮತಿ ನೀಡಿದ್ದರಿಂದ 1933ರಲ್ಲಿ ಅವೆರಡೂ ಬೆಂಗಳೂರಿನಿಂದ ಪ್ರಕಟವಾಗಲಾರಂಭಿಸಿದುವು. ಬೆಂಗಳೂರಿಗೆ ಹಿಂದಿರುಗಿದ ಕೂಡಲೆ ಗುಪ್ತ ಅವರು ಮೈಸೂರು ಕಾಂಗ್ರೆಸ್ ಸ್ಥಾಪನೆಗಾಗಿ ಹೋರಾಡಲು ಪ್ರಾರಂಭಿಸಿದರು. ತಾವೇ ಹಿಂದೆ ಸ್ಥಾಪಿಸಿದ್ದ ಪ್ರಜಾಪಕ್ಷದ ವಿರುದ್ಧವಾಗಿಯೇ ಅಭ್ಯರ್ಥಿಗಳನ್ನು ನಿಲ್ಲಿಸಬೇಕಾಯಿತು. ಗುಪ್ತ ಅವರ ರಾಜಕೀಯ ಚಟುವಟಿಕೆಗಳು ಹೆಚ್ಚಾದಾಗ, ಅವರು ಮೈಸೂರಿನವರಲ್ಲವೆಂಬ ಕಾರಣವನ್ನು ನೀಡಿ, ಇಪ್ಪತ್ನಾಲ್ಕು ಗಂಟೆಗಳೊಳಗಾಗಿ ಸಂಸ್ಥಾನವನ್ನು ಬಿಟ್ಟು ಹೋಗುವಂತೆ ಮೈಸೂರು ಸರ್ಕಾರ ಆಜ್ಞೆ ಮಾಡಿತು. ಗುಪ್ತ ಅವರು ಹುಬ್ಬಳ್ಳಿಗೆ (ಆಗ ಹುಬ್ಬಳ್ಳಿ ಮುಂಬಯಿ ಪ್ರಾಂತ್ಯಕ್ಕೆ ಸೇರಿತು.) ತೆರಳಿ (1936) ಅಲ್ಲಿಂದ ಪ್ರಜಾಮತವನ್ನು ಪ್ರಕಟಿಸಲು ಪ್ರಾರಂಭಿಸಿದರು. (ಆ ವೇಳೆಗೆ ಜನವಾಣಿಯನ್ನು ಅವರು ಬೇರೆಯವರಿಗೆ ಕೊಟ್ಟಿದ್ದರು.) ಸಂಸ್ಥಾನದೊಳಕ್ಕೆ ಪ್ರಜಾಮತ ಬರಕೂಡದೆಂದು ಮೈಸೂರು ಸರ್ಕಾರ ಬಹಿಷ್ಕಾರ ಹಾಕಿತು. ಸಂಸ್ಥಾನದ ಹೊರಗೆ ಪ್ರಜಾಮತವೆಂಬ ಹೆಸರಿನಲ್ಲೇ ಪತ್ರಿಕೆ ನಡೆಯುತ್ತಿದ್ದರೂ ಇನ್ನೊಂದು ಹೆಸರಿನಲ್ಲಿ ಆ ಪತ್ರಿಕೆಯ ಸಂಚಿಕೆಗಳನ್ನು ಮೈಸೂರು ಸಂಸ್ಥಾನಕ್ಕೆ ಕಳುಹಿಸಲು ಗುಪ್ತ ಅವರು ಪ್ರಾರಂಭಿಸಿದರು. ಆ ಹೆಸರಿನ ಪತ್ರಿಕೆಗೂ ಸರ್ಕಾರ ಬಹಿಷ್ಕಾರ ಹಾಕಿತು. ಮತ್ತೆ ಪತ್ರಿಕೆಯ ಹೆಸರನ್ನು ಬದಲಾಯಿಸಲಾಯಿತು. ಮತ್ತೆ ಸರ್ಕಾರದ ಬಹಿಷ್ಕಾರ, ಮತ್ತೆ ಹೆಸರಿನ ಬದಲಾವಣೆ; ಹೀಗೆಯೇ ಸಾಗಿತು. ಇನ್ನು ಬಹಿಷ್ಕಾರ ಹಾಕುವುದರಿಂದ ಪ್ರಯೋಜನವಿಲ್ಲವೆಂದು ಸರ್ಕಾರ ಸುಮ್ಮನಾಯಿತು. 1938ರಲ್ಲಿ ಮಿರ್ಜಾ ಅವರು ಮತ್ತೆ ಗುಪ್ತ ಅವರನ್ನು ಬೆಂಗಳೂರಿಗೆ ಆಹ್ವಾನಿಸಿದರು. ಬೆಂಗಳೂರಿಗೆ ಹಿಂದಿರುಗಿದ ಮೇಲೆ ಗುಪ್ತ ಅವರು ಜನವಾಣಿಯನ್ನು ಪಡೆದುಕೊಂಡರು. ಬಹಿಷ್ಕಾರಗಳಿಂದಾಗಿ ಪ್ರಜಾಮತ ಪತ್ರಿಕೆ ಸ್ಥಳಾಂತರವಾಗುತ್ತಿದ್ದರೂ ಒಂದು ವಾರವೂ ಅದು ನಿಲ್ಲದೆ ಪ್ರಕಟವಾಗುತ್ತಿತ್ತು. 1948ರಲ್ಲಿ ಗುಪ್ತರು ಇವೆರಡು ಪತ್ರಿಕೆಗಳನ್ನೂ ಮಾರಿದರು. ಪ್ರಜಾಮತ ಆ ವೇಳೆಗೆ 36,000 ಪ್ರತಿಗಳ ಪ್ರಸಾರ ಸಂಖ್ಯೆಯನ್ನು ಮುಟ್ಟಿದ್ದ ಪ್ರಥಮ ಕನ್ನಡ ವಾರಪತ್ರಿಕೆಯಾಗಿತ್ತು. ಅನಂತರ 1959ರಲ್ಲಿ ಅವರು ಜನಪ್ರಗತಿ ವಾರಪತ್ರಿಕೆಯನ್ನು ಕೊಂಡರು. 1961ರಲ್ಲಿ ಮಲ್ಲಿಗೆ ಮಾಸಪತ್ರಿಕೆಯನ್ನು ಸ್ಥಾಪಿಸಿದರು. 1971ರವರೆಗೂ ನಡೆಸಿಕೊಂಡುಬಂದು ಅನಂತರ ಬೇರೆಯವರಿಗೆ ವಹಿಸಿಕೊಟ್ಟರು.