ಗುಣವಂತೆ ಶಂಭುಲಿಂಗೇಶ್ವರ

ನಾಡಿನಾದ್ಯಂತ ಇರುವ ಶಿವದೇಗುಲಗಳಲ್ಲಿ ಅತಿ ವಿಶಿಷ್ಠ ಹಾಗೂ ಪುರಾಣ ಪ್ರಸಿದ್ಧಿಯಿಂದ ನಿತ್ಯ ಸಾವಿರಾರು ಭಕ್ತರನ್ನು ಸೆಳೆಯುವ ಕ್ಷೇತ್ರಗಳು ಕೆಲವೇ ಕೆಲವು. ಋಷಿ ಮುನಿಗಳಿಂದ, ನಾರದಾದಿ ದೇವತೆಗಳಿಂದ ನಿರ್ಮಿಸಲ್ಪಟ್ಟ ದೇಗುಲಗಳು ಎಷ್ಟು ಖ್ಯಾತಿಯೋ ಹಾಗೇ ರಾವಣನಂತಹ ದಾನವರಿಂದ ನಿರ್ಮಾಣವಾದ ಕ್ಷೇತ್ರವೂ ಭಾರತೀಯರಾದ ನಮ್ಮಲ್ಲಿ ಭಕ್ತಿ ಮತ್ತು ಶ್ರದ್ಧೆಗಳ ಕೇಂದ್ರವಾಗಿದೆ. ಶಿವನ ವಿಗ್ರಹ, ಲಿಂಗಗಳು ಕೆಲ ದೇಗುಲಗಳಲ್ಲಿ ಕಂಡು ಬಂದರೆ ಆತ್ಮಲಿಂಗ ಇರುವ ಪಂಚ ಕ್ಷೇತ್ರಗಳು ಉತ್ತರಕನ್ನಡ ಜಿಲ್ಲೆ ಯ ಕರಾವಳಿ ತೀರದಲ್ಲಿ ಅರಬ್ಬೀಸಮುದ್ರದ ಕಿನಾರೆಯಲ್ಲಿ ಕಂಡುಬರುತ್ತದೆ. ಇಂತಹ ಕ್ಷೇತ್ರಗಳಲ್ಲಿ ಗುಣವಂತೆಯಲ್ಲಿರುವ ಶ್ರೀಶಂಭುಲಿಂಗೇಶ್ವರ ಕ್ಷೇತ್ರ ಸಹ ಒಂದು.

ಗುಣವಂತೆಯ ಶ್ರೀಶಂಭುಲಿಂಗೇಶ್ವರ ಕ್ಷೇತ್ರ

ಎಲ್ಲಿದೆ ಗುಣವಂತೆ?

ಬದಲಾಯಿಸಿ

ಕಾರವಾರ- ಮಂಗಳೂರು ರಾಷ್ಟ್ರೀಯ ಹೆದ್ದಾರಿ ೧೭ ರಲ್ಲಿ ಹೊನ್ನಾವರ ತಾಲೂಕು ಕೇಂದ್ರದಿಂದ ೧೦ ಕಿ.ಮೀ.ದೂರದಲ್ಲಿವ ಗುಣವಂತೆ ಗ್ರಾಮ ಹೆದ್ದಾರಿ ಸನಿಹದಲ್ಲೇ ಇದ್ದು ಈ ದೇಗುಲದಿಂದ ದೇಶದಾದ್ಯಂತ ಆಸ್ತಿಕರ ತೀರ್ಥಕ್ಷೇತ್ರವಾಗಿದೆ. ಸದಾ ಪುಷ್ಕರಣಿಯಲ್ಲಿ ಸ್ನಾನಗೈಯುವ ಭಕ್ತರು, ದೇಗುಲ ಪ್ರದಕ್ಷಿಣೆ, ಜಲಜಾಭಿಷೇಕ, ಕ್ಷೀರಾಭಿಷೇಕ, ರುದ್ರಾಭಿಷೇಕ ಸೇವೆ, ಪ್ರಾಕಾರದಲ್ಲಿ ಉರುಳುಸೇವೆ ಮಾಡುವ ಭಕ್ತರಿಂದ ಬೆಳಿಗ್ಗೆಯಿಂದ ಸಂಜೆಯವರೆಗೂ ಗಿಜಿಗುಟ್ಟುತ್ತಿರುತ್ತದೆ. ಗೋಕರ್ಣದ ಶ್ರೀಮಹಾಬಲೇಶ್ವರನ ಆತ್ಮಲಿಂಗ ದರ್ಶನ ಮಾಡಿದವರು ಒಂದೇ ದಿನ ಪಂಚಕ್ಷೇತ್ರಗಳಲ್ಲಿ ಉಳಿದ ಕ್ಷೇತ್ರಗಳ ದರ್ಶನ ಪಡೆದರೆ ಸಿದ್ಧಿ ಲಭಿಸುತ್ತದೆ ಎಂಬುದು ತೀರ್ಥಯಾತ್ರಿಗಳ ನಂಬಿಕೆ.

ಗೋಕರ್ಣ, ಸಜ್ಜೇಶ್ವರ , ಧಾರೇಶ್ವರ, ಗುಣವಂತೇಶ್ವರ, ಮುರುಡೇಶ್ವರಗಳು ರಾವಣನಿಂದ ನಿರ್ಮಿಸಲ್ಪಟ್ಟ ಪಂಚಕ್ಷೇತ್ರಗಳಾಗಿದ್ದು ಪಾಪ ಕಳೆದು ಸದ್ಬುದ್ಧಿ ನೀಡಿ ಉತ್ತಮ ಗುಣಗಳನ್ನು ಪ್ರೇರೇಪಿಸುವ ಕ್ಷೇತ್ರ ಗುಣವಂತೆಯ ಶಂಭುಲಿಂಗೇಶ್ವರ(ಗುಣವಂತೇಶ್ವರ)ದ ಮಹತ್ವವಾಗಿದೆ ಎಂಬ ನಂಬಿಕೆಯಿದೆ.

ಪುರಾಣ ಪ್ರಸಿದ್ಧಿ

ಬದಲಾಯಿಸಿ

ಈ ಕ್ಷೇತ್ರದ ಬಗ್ಗೆ ಶಿವಪುರಾಣದಲ್ಲಿ ಬಹು ವಿಸ್ತೃತ ವರ್ಣನೆಯಿದೆ. ಪುರಾಣಕಾಲದಲ್ಲಿ ಲಂಕಾಧೀಶನಾದ ದಾನವ ಚಕ್ರವರ್ತಿ ರಾವಣೇಶ್ವರ ತನ್ನ ತಾಯಿ ಕೈಕಸಾದೇವಿ ಸಮುದ್ರ ಕಿನಾರೆಯ ಮರಳಿನಲ್ಲಿ ಶಿವಲಿಂಗ ಮಾಡಿ ಪೂಜಿಸುತ್ತಿರುವಾಗ ಪದೇ ಪದೇ ತೆರೆಗಳಿಂದ ಭಗ್ನವಾಗುವುದನ್ನು ಕಂಡು ಖಿನ್ನನಾದನಂತೆ. ತನ್ನ ಮಾತೆ ನಿತ್ಯವೂ ಶಿವನನ್ನು ಶ್ರದ್ಧೆ ಹಾಗೂ ನಿರಾಂತಕವಾಗಿ ಪೂಜಿಸುವಂತೆ ಮಾಡಲು ಕೈಲಾಸವಾಸಿ ಶಿವನ ಕುರಿತು ಉಗ್ರ ತಪಸ್ಸು ಮಾಡಿ ಆತ್ಮಲಿಂಗವನ್ನು ಪಡೆದುಕೊಂಡನಂತೆ. ರಾಜಧಾನಿ ತಲುಪುವವರೆಗೂ ಭೂಮಿಗೆ ಸ್ಪರ್ಶಿಸದಂತೆ ಕೊಂಡೊಯ್ಯಬೇಕು ಎಂದು ಶಿವ ತಿಳಿಸಿದ್ದನಂತೆ. ಲಂಕೆಯ ಮಾರ್ಗದಲ್ಲಿ ಪ್ರಯಾಣ ಬೆಳೆಸಿ ಗೋಕರ್ಣದ ಬಳಿ ಬಂದಾಗ ಸಂಧ್ಯಾವಂದನೆ ಸಮಯವಾಯಿತಂತೆ. ಶಿವನಿಗೆ ಅರ್ಘ್ಯಕೊಡಲು ಕೈಯಲ್ಲಿರುವ ಆತ್ಮಲಿಂಗವನ್ನು ಯಾರ ಬಳಿ ಕೊಡಲಿ ಎಂದು ಚಿಂತಿಸುತ್ತಿರುವಾಗ ದೇವತೆಗಳ ಪ್ರತಿ ತಂತ್ರದಂತೆ ದನಗಾಹಿ ವೇಷದಲ್ಲಿ ಗಣಪತಿ ಆಗಮಿಸಿದನಂತೆ, ಆಗ ರಾವಣನು ಗಣಪತಿಯ ಕೈಯಲ್ಲಿ ಆತ್ಮಲಿಂಗನನ್ನು ನೀಡಿ ತ್ವರಿತವಾಗಿ ಸಂಧ್ಯಾವಂದನೆ ಮಾಡಿ ಬರುವುದಾಗಿಯೂ, ಅಲ್ಲಿಯವರೆಗೆ ಜೋಪಾನವಾಗಿ ಕೈಲ್ಲಿ ಹಿಡಿದುಕೊಳ್ಳುವಂತೆಯೂ ತಿಳಿಸಿದಿನಂತೆ. ಸಂಜೆಯಾಗುತ್ತಿರುವ ಕಾರಣ ದನಗಳು ಹಿಂತಿರುಗಿದರೆ ೩ ಸಲ ಕೂಗಿ ಕರೆಯುವೆ. ಅಷ್ಟರೊಳಗೆ ಬರಬೇಕು. ಇಲ್ಲವಾದರೆ ಭೂಮಿಗೆ ಇಡುವುದಾಗಿ ಗಣಪತಿ ಕರಾರು ಹೇಳಿದ್ದನಂತೆ. ರಾವಣ ಸಂಧ್ಯಾವಂದನೆಗಾಗಿ ಸಮುದ್ರದ ಬಳಿ ಹೋಗುತ್ತದ್ದಂತೆ ೩ ಸಲ ಕೂಗಿ ಗಣಪತಿ ಆತ್ಮ ಲಿಂಗವನ್ನು ನೆಲಕ್ಕೆ ಇಟ್ಟನಂತೆ. ಭೂಮಿಯನ್ನು ಸ್ಪರ್ಶಿಸುತ್ತಿದ್ದಂತೆ ಆತ್ಮಲಿಂಗ ಆಳಕ್ಕೆ ಇಳಿಯತೊಡಗಿದಾಗ ರಾವಣ ಓಡೋಡಿ ಬಂದು ಕೀಳಲು ಯತ್ನಿಸಿದನಂತೆ, ಆಗ ಆತ್ಮಲಿಂಗ ಐದು ಚೂರುಗಳಾದವಂತೆ. ಅದನ್ನು ಲಂಕೆಗೆ ಎಸೆಯಬೇಕೆಂದು ರಾವಣ ಜೋರಾಗಿ ಎಸೆದಾಗ ಕಾರವಾರ ಸನಿಹದ ಸಜ್ಜೇಶ್ವರ, ಹಳದೀಪುರ ಸನಿಹದ ಧಾರೇಶ್ವರ, ಹೊನ್ನಾವರ ಸನಿಹದ ಗುಣವಂತೆ ಹಾಗೂ ಮುರುಡೇಶ್ವರದ ಸಮುದ್ರದ ಬಳಿ ಬಿದ್ದವಂತೆ. ಹೀಗೆ ರಾವಣನಿಂದ ನಿರ್ಮಿತವಾದ ಪಂಚಕ್ಷೇತ್ರಗಳಲ್ಲಿ ಗುಣವಂತೆಯಲ್ಲಿರುವ ಈ ಶಂಭುಲಿಂಗೇಶ್ವರ ಸಹ ಒಂದಾಗಿದೆ.

ಇಲ್ಲಿನ ದೇವರು ಉಗ್ರ ಸ್ವರೂಪಿಯಂತೆ. ಅಭಿಷೇಕ ಪ್ರಿಯನಂತೆ. ದೇಗುಲದ ಹೊರ ಪ್ರಾಕಾರದಲ್ಲಿರುವ ನಂದಿ ವಿಗ್ರಹ ಉಳಿದ ದೇಗುಲಗಳ ವಾಡಿಕೆಯಂತೆ ದೇವರ ಕಡೆ ಮುಖಮಾಡದೆ ಇಲ್ಲಿ ನಂದಿಯ ದೃಷ್ಠಿ ಉತ್ತರ ದಿಕ್ಕಿನತ್ತ (ಗೋಕರ್ಣದತ್ತ) ಮುಖ ಮಾಡಿದೆ. ಬಾಳಿನಲ್ಲಿ ತೊಂದರೆಯಾದವರು, ಸಮಸ್ಯೆಗಳಿಂದ ಬಳಲಿದವರು, ರೋಗನಿವಾರಣೆ, ಸಂತಾನಪ್ರಾಪ್ತಿ, ಮಂಗಲ ಕಾರ್ಯ ಸಿದ್ಧಿ, ವ್ಯಾಪಾರ ವ್ಯವಹಾರದಲ್ಲಿ ವೃದ್ಧಿ, ವಿದಾಭ್ಯಾಸದಲ್ಲಿ ಪ್ರಗತಿ, ಉದ್ಯೋಗ ಪ್ರಾಪ್ತಿ ಇತ್ಯಾದಿ ಉದ್ದೇಶಗಳಿಗೆ ಈ ದೇವರಿಗೆ ಅಭಿಷೇಕ ಮಾಡಿಸಿದರೆ ನಿವಾರಣೆಯಾಗುತ್ತದೆ ಎಂಬ ಅಚಲವಾದ ನಂಬಿಕೆಯಿದೆ. ನೀರಿನ ಅಭಿಷೇಕ, ಎಳನೀರ ಅಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭೀಷೇಕಗಳನ್ನು ಹರಕೆಯಾಗಿ ಸಲ್ಲಿಸುತ್ತಾರೆ.ಇಲ್ಲಿ ನಿತ್ಯ ತ್ರಿಕಾಲ ಪೂಜೆ ಸಲ್ಲುತ್ತದೆ.ದೇವಾಲಯದ ಮುಂಭಾಗದಲ್ಲಿ ಪುಷ್ಕರತೀರ್ಥ ಎಂಬ ಕೊಳವಿದೆ. ಈ ಕೊಳ ವಿಶಾಲವಾಗಿದ್ದು ಗೋಕರ್ಣದ ಕೋಟಿ ತೀರ್ಥದಷ್ಟೇ ಪಾವನವಾದದ್ದು ಎಂಬ ನಂಬಿಕೆಯಿದೆ. ಈ ಕೊಳದಲ್ಲಿ ಸ್ನಾನ ಮಾಡಿದರೆ ಚರ್ಮರೋಗ ನಿವಾರಣೆಯಾಗುತ್ತದೆ, ಸ್ಮರಣ ಶಕ್ತಿ ಹೆಚ್ಚುತ್ತದೆ, ಶತ್ರು ಕಾಟ ದೂರವಾಗುತ್ತದೆ, ದುರ್ಗುಣ ದೂರವಾಗಿ ಸದ್ಗುಣ ಬೆಳೆಯುತ್ತದೆ ಎಂಬ ನಂಬಿಕೆಯಿದೆ.

ಶ್ರಾವಣಮಾಸದಲ್ಲಿ ನಿತ್ಯ ವಿಶೇಷ ಪೂಜೆ, ರುದ್ರಪಾರಾಯಣ, ಅಭಿಷೇಕ, ಕಾರ್ತೀಕದಲ್ಲಿ ನಿತ್ಯವೂ ಭಕ್ತರಿಂದ ದೀಪೋತ್ಸವ , ರುದ್ರ ಪಾರಾಯಣ, ನವರಾತ್ರಿಯಲ್ಲಿ ಒಂಭತ್ತು ದಿನವೂ ವಿಶೇಷ ಪೂಜೆ, ವಿಜಯ ದಶಮಿಯಂದು ಪಲ್ಲಕ್ಕಿ ಉತ್ಸವ, ದೀಪಾವಳಿಯ ಬಲಿ ಪಾಡ್ಯಮಿಯಂದು ವಿಶೇಷ ಉತ್ಸವ, ಬಲಿ ಕಾರ್ಯಕ್ರಮಗಳು ನಡೆಯುತ್ತವೆ. ಪ್ರತಿವರ್ಷ ಚೈತ್ರ ಮಾಸದ ಮೇಷ ಸಂಕ್ರಮಣದಂದು ಮಹಾರಥೋತ್ಸವ ಅತ್ಯಂತ ವಿಜೃಂಬಣೆಯಿಂದ ಜರುಗುತ್ತದೆ.

ಮುಜರಾಯಿ ಇಲಾಖೆಗೆ ಸೇರಿದ ಈ ದೇಗುಲ ಇತ್ತೀಚೆಗೆ ಅಭಿವೃದ್ಧಿ ಪಥದಲ್ಲಿ ಸಾಗಿದ್ದು ಹಲವು ಕಾಮಗಾರಿಗಳು ನಡೆಯುತ್ತಿವೆ. ಸ್ಥಳೀಯ ಮುಖಂಡರ ಮಾರ್ಗದರ್ಶನದಲ್ಲಿ ಕಲ್ಯಾಣಮಂಟಪ, ಚಂದ್ರಶಾಲೆ, ಮುಖಮಂಟಪ ನಿರ್ಮಾಣ, ವ್ಯಾಸಗೋಪುರ ನಿರ್ಮಾಣ ಮುಂತಾದ ಕಾರ್ಯಗಳು ಭರದಿಂದ ನಡೆಯುತ್ತಿದೆ.