ಗುಡುಗು
ಗುಡುಗು ಮಿಂಚಿನಿಂದ ಉಂಟಾಗುವ ಧ್ವನಿ. ಮಿಂಚಿನಿಂದ ಇರುವ ದೂರ ಮತ್ತು ಅದರ ಸ್ವರೂಪವನ್ನು ಅವಲಂಬಿಸಿ, ಗುಡುಗು ತೀಕ್ಷ್ಣ, ಜೋರಾದ ಕರ್ಕಶ ಧ್ವನಿಯಿಂದ ಹಿಡಿದು ದೀರ್ಘ, ಕಡಿಮೆ ಮಟ್ಟದ ಶಬ್ದದವರೆಗೆ ವ್ಯಾಪಿಸಬಹುದು. ಮಿಂಚಿನಿಂದ ಉಂಟಾದ ಒತ್ತಡ ಹಾಗೂ ತಾಪಮಾನದಲ್ಲಿನ ಹಠಾತ್ ಹೆಚ್ಚಳವು ಮಿಂಚಿನ ಹೊಳಪಿನ ಸುತ್ತಲಿನ ಮತ್ತು ಅದರೊಳಗಿನ ಗಾಳಿಯು ಕ್ಷಿಪ್ರವಾಗಿ ಹಿಗ್ಗುವಂತೆ ಮಾಡುತ್ತದೆ. ಪ್ರತಿಯಾಗಿ, ಗಾಳಿಯ ಈ ಹಿಗ್ಗುವಿಕೆಯು ಶಬ್ದಸ್ಫೋಟವನ್ನು ಹೋಲುವ ಧ್ವನಿ ಆಘಾತ ತರಂಗವನ್ನು ಸೃಷ್ಟಿಸುತ್ತದೆ. ಇದನ್ನು ಹಲವುವೇಳೆ "ಸಿಡಿಲೆರಗು" ಅಥವಾ "ಗುಡುಗಿನ ಆರ್ಭಟ" ಎಂದು ಕರೆಯಲಾಗುತ್ತದೆ.
ಕಾರಣ
ಬದಲಾಯಿಸಿಗುಡುಗಿನ ಕಾರಣವು ಶತಮಾನಗಳಾದ್ಯಂತ ಊಹನ ಹಾಗೂ ವೈಜ್ಞಾನಿಕ ತನಿಖೆಯ ವಿಷಯವಾಗಿದೆ. ದಾಖಲಿಸಿದ ಮೊದಲ ಸಿದ್ಧಾಂತವು ಕ್ರಿ.ಪೂ. ನಾಲ್ಕನೇ ಶತಮಾನದ ಗ್ರೀಕ್ ತತ್ತ್ವಜ್ಞಾನಿಯಾದ ಅರಿಸ್ಟಾಟಲ್‌ಗೆ ಸೇರಿದ್ದೆನ್ನಲಾಗಿದೆ. ಗುಡುಗು ಮೋಡಗಳ ಅಪ್ಪಳಿಸುವಿಕೆಯಿಂದ ಉಂಟಾಗುತ್ತದೆಂಬುದು ಮುಂಚಿನ ಒಂದು ಊಹನವಾಗಿತ್ತು. ತರುವಾಯ, ಅಸಂಖ್ಯಾತ ಇತರ ಸಿದ್ಧಾಂತಗಳನ್ನು ಪ್ರಸ್ತಾಪಿಸಲಾಯಿತು. ೧೯ನೇ ಶತಮಾನದ ಮಧ್ಯಭಾಗದ ವೇಳೆಗೆ, ಮಿಂಚು ನಿರ್ವಾತವನ್ನು ಸೃಷ್ಟಿಸುತ್ತದೆ ಎಂಬುದು ಒಪ್ಪಲಾದ ಸಿದ್ಧಾಂತವಾಗಿತ್ತು.