ಗುಜರಾತ್ ಜೈನ ತೀರ್ಥಕ್ಷೇತ್ರಗಳು
ಗುಜರಾತ್ ರಾಜ್ಯವು ಜೈನ ತೀರ್ಥ ಕ್ಷೇತ್ರಗಳ (Gujarat Jain piligrimage centers) ತವರೂರಾಗಿದೆ.
ಗುಜರಾತ್ ಕ್ಷೇತ್ರವನ್ನು ಹಾಗೂ ಪಕ್ಕದ ರಾಜಸ್ತಾನದ ಮೌಂಟ್ ಅಬು ಕ್ಷೇತ್ರವನ್ನು ನೋಡಲು ಸರಳ ಮಾರ್ಗದರ್ಶಿ ಇಲ್ಲಿದೆ.
ಬೆಂಗಳೂರು ಅಥವಾ ಚೆನ್ನೈನಿಂದ ಅಹಮದಾಬಾದ್‌ದೆ ತೆರಳಿ. ರೈಲು ಹಾಗೂ ವಿಮಾನಯಾನ ಸೌಲಭ್ಯವಿದೆ. ಅಹಮದಾಬಾದ್‌ನಿಂದ ರಾತ್ರಿ ೧೦.೦೦ ಗಂಟೆಗೆ ಹೊರಡುವ ಸೋಮನಾಥ್ ಎಕ್ಸ್‌ಪ್ರೆಸ್‌ನಲ್ಲಿ ಜುನಾಗಢ್‌ಗೆ ತೆರಳಿ. ಜುನಾಗಢ್‌ನಿಂದ ಗಿರಿನಾರ್ ಕ್ಷೇತ್ರವು ೫ ಕಿಮೀ ದೂರದಲ್ಲಿದೆ. ರಿಕ್ಷಾ ಸಂಪರ್ಕ ಲಭ್ಯವಿದೆ. ಗಿರಿನಾರ್ ಬೆಟ್ಟದ ಕೆಳಗೆ ದಿಗಂಬರ ಜೈನ ಧರ್ಮಶಾಲೆಯಿದ್ದು, ಕೊಠಡಿ ಮತ್ತು ಭೋಜನದ ವ್ಯವಸ್ಥೆ ಇಲ್ಲಿ ಲಭ್ಯವಿದೆ. ಸುಮಾರು ೯,೦೦೦ ಮೆಟ್ಟಿಲು (ಹತ್ತಿ ಇಳಿದು ಬರಲು ೧೮,೦೦೦ ಮೆಟ್ಟಿಲು)ಇರುವ ಬೆಟ್ಟವು ಕಡಿದಾಗಿದ್ದು, ಮೇಲುಗಡೆ ಶ್ವೇತಾಂಬರ ಮತ್ತು ದಿಗಂಬರ ಜಿನಾಲಯವಿದೆ. ದಿಗಂಬರ ಜೈನ ಧರ್ಮಶಾಲೆಯಲ್ಲೂ ಸುಂದರವಾದ ಜಿನಾಲಯವಿದೆ. ಶ್ರೀ ನೇಮಿನಾಥರ ಪಾದುಕೆ (ಹಿಂದೂಗಳು ಅದನ್ನು ತಮ್ಮದೆಂದು ಪೂಜಿಸುತ್ತಾರೆ) ದರ್ಶನ ಮಾಡುವಷ್ಟರಲ್ಲಿ ನೀವು ದಣಿದಿರುತ್ತೀರಿ. ದರ್ಶನ ಮುಗಿಸಿ ಬಂದು ಅಂದು ಧರ್ಮಶಾಲೆಯಲ್ಲಿ ತಂಗಿರಿ.
ಬೆಳಿಗ್ಗೆ ಗಿರಿನಾರ್‌ನಿಂದ ಜುನಾಗಢ್‌ಗೆ ತೆರಳಿ, ಅಲ್ಲಿಂದ ಸೋನಘಡ್‌ಗೆ ತೆರಳಿ (ಸುಮಾರು ೨೦೦ ಕಿಮೀ).ಬಸ್,ಖಾಸಗಿ ಬಸ್ ಸೌಲಭ್ಯವಿದೆ. ಸೋನ್‌ಘಡ್‌ನಲ್ಲಿ ದರ್ಶನ ಮುಗಿಸಿ ಅಲ್ಲಿಂದ ೨೫ ಕಿಮೀ ದೂರವಿರುವ ಪಾಲಿಟಾಣಾವನ್ನು ತಲುಪಬಹುದು. ಇಲ್ಲಿ ಉಳಿದುಕೊಳ್ಳಲು ಹಲವಾರು ಯಾತ್ರಿ ನಿವಾಸಗಳು ಲಭ್ಯವಿದೆ. ಬೆಟ್ಟದ ಕೆಳಗಿರುವ ತಲಹೇಟಿಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿಕೊಳ್ಳುವುದು ಉತ್ತಮ. ಹೋದ ದಿನ ರಾತ್ರಿ ಬೆಟ್ಟದ ಕೆಳಗಿರುವ ಜಿನಮಂದಿರಗಳ ದರ್ಶನ ಮಾಡಿದಲ್ಲಿ ಮಾರನೇ ದಿನ ನೀವು ಕೊಂಚ ನಿರಾಳವಾಗಿರಬಹುದು.
ಬೆಳಿಗ್ಗೆ ಬೇಗನೆ ಎದ್ದು ಬೆಟ್ಟ ಹತ್ತಲು ಆರಂಭಿಸಿದರೆ, ಸುಮಾರು ೩ ಗಂಟೆ ಅವಧಿಯ ಬಳಿಕ ನೀವು ಜಿನ ಮಂದಿರಗಳಿರುವ ಪ್ರಾಂಗಣದಲ್ಲಿರುತ್ತೀರಿ. ಇಲ್ಲಿ ನೂರಾರು ಶ್ವೇತಾಂಬರ ಮತ್ತು ಏಕೈಕ ದಿಗಂಬರ ಜಿನ ಮಂದಿರವಿದೆ. ದರ್ಶನ ಮುಗಿಸಿ ಕೆಳಗೆ ಬಂದು ಸಾಧ್ಯವಾದರೆ ಅಂದೇ ಅಹಮದಾಬಾದ್‌ಗೆ ತೆರಳಿ. ಅಹಮದಾಬಾದ್‌ನಿಂದ ರಾತ್ರಿ ಮೌಂಟ್ ಅಬು (ಅಬು ರೋಡ್ ರೈಲ್ವೇ ನಿಲ್ದಾಣ)ಗೆ ತೆರಳಿ. (ಕೇವಲ ೧೭೦ ಕಿಮೀ ದೂರ) ಬೆಳಿಗ್ಗೆಯಷ್ಟೊತ್ತಿಗೆ ತಲುಪಬೇಕಾದರೆ ನಿಮಗೆ ರಾತ್ರಿ ೧೧.೧೫ ಕ್ಕೆ ಪ್ಯಾಸೆಂಜರ್ ರೈಲೊಂದಿದೆ.
ಬೆಳಿಗ್ಗೆ ಅಬು ರೋಡ್ ತಲುಪಿ, ಅಲ್ಲಿಂದ ೨೭ ಕಿಮೀ ದೂರವಿರುವ ಮೌಂಟ್ ಅಬುಗೆ ತೆರಳಿ. ಟ್ಯಾಕ್ಸಿ ಮತ್ತು ಸಾರಿಗೆ ಬಸ್ ವ್ಯವಸ್ಥೆಯಿದೆ. ಮೌಂಟ್ ಅಬುನಿನಲ್ಲಿ ಅತ್ಯಂತ ಮನೋಹರವಾಗಿರುವ ದಿಲ್ವಾರಾ ಜೈನ ಮಂದಿರ, ಮತ್ತು ಇನ್ನಿತರ ಸ್ಥಳಗಳ ದರ್ಶನ ಮುಗಿಸಿ, ರಾತ್ರಿ ಅಬು ರೋಡ್ ರೈಲ್ವೆ ನಿಲ್ಧಾಣಕ್ಕೆ ಬಂದು ಅಹಮದಾಬಾದ್‌ಗೆ ಮರಳಿ.
ಈ ಮೂಲಕ ಕೇವಲ ೫ ದಿನದಲ್ಲಿ ನೀವು ಗಿರಿನಾರ್,ಸೋನ್‌ಘಡ್, ಪಾಲಿಟಾಣಾ ಮತ್ತು ರಾಜಸ್ತಾನದ ಮೌಂಟ್ ಅಬು ದರ್ಶನವನ್ನು (Girinar, Songadh, Palitana, Mount abu) ಮುಗಿಸಬಹುದು.