ಗಿರಿವ್ರಜ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಪ್ರಾಚೀನ ಮಗಧ ದೇಶದ ರಾಜಧಾನಿ. ಪಾಟ್ನದಿಂದ 62 ಕಿಮೀ ದೂರದಲ್ಲಿರುವ ಈ ಸ್ಥಳದ ಈಗಿನ ಹೆಸರು ರಾಜ್ಗಿರ್. ಉಪರಿಚರ ವಸುವಿನಿಂದ ಈ ನಗರ ನಿರ್ಮಾಣವಾದ್ದರಿಂದ ಇದಕ್ಕೆ ವಸುಮತೀ ಎಂಬ ಹೆಸರೂ ಉಂಟು. ಬೌದ್ಧರ ಕಾಲದಲ್ಲಿ ಇದನ್ನು ರಾಜಗೃಹ ಎಂದು ಕರೆದರು. ಬಿಂಬಸಾರ (ಪ್ರ.ಶ.ಪು. 550) ಇದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡ. ಅನಂತರ ಬಂದ ಕಲಾಶೋಕ ಎಂಬ ರಾಜ ತನ್ನ ರಾಜಧಾನಿಯನ್ನು ರಾಜಗ್ರಹದಿಂದ ಪಾಟಲಿಪುತ್ರಕ್ಕೆ ಬದಲಾಯಿಸಿದ. ಗಿರಿವ್ರಜ ಬಾರ್ಹದ್ರಥ ವಂಶದ ರಾಜಧಾನಿಯಾಗಿದ್ದುದರಿಂದ ಇದಕ್ಕೆ ಬಾರ್ಹದ್ರಥಪುರ ಎಂಬ ಹೆಸರಿತ್ತೆಂದು ತಿಳಿಯುತ್ತದೆ. ಬೌದ್ಧ ಗ್ರಂಥಗಳ ಪ್ರಕಾರ ಇದಕ್ಕೆ ಕುಶಾಗ್ರಪುರಿ ಎಂದೂ ಹೆಸರಿತ್ತು. ಬೃಹತ್ಸಂಹಿತೆ ಮತ್ತು ವಿಷ್ಣುಪುರಾಣಗಳಲ್ಲೂ ಗಿರಿವ್ರಜದ ಉಲ್ಲೇಖ ಬಂದಿದೆ. ಕೃಷ್ಣ, ಅರ್ಜುನ, ಭೀಮ-ಇವರು ಜರಾಸಂಧವಧೆಗಾಗಿ ಇಲ್ಲಿಗೆ ಬಂದಿದ್ದರೆಂದು ಭಾಗವತ ಪುರಾಣ ತಿಳಿಸುತ್ತದೆ. ಗೌತಮ ಬುದ್ಧ ವಿಶ್ರಾಂತಿಗಾಗಿ ಒಂದು ವರ್ಷಗಳ ಕಾಲ ಇಲ್ಲಿ ತಂಗಿದ್ದನೆಂದು ತಿಳಿದುಬರುತ್ತದೆ.
ಚೀನಿ ಪ್ರವಾಸಿ ಫಾಹಿಯಾನ್ ಮತ್ತು ಯುವಾನ್ಚಾಂಗ್ ಪ್ರಕಾರ ಈ ಪಟ್ಟಣ ಈಗಿನ ರಾಜ್ಗಿರ್ನ ದಕ್ಷಿಣಕ್ಕೆ ಒಂದು ಕಿಮೀ ದೂರದಲ್ಲಿ ಐದು ಪರ್ವತಗಳ ಮಧ್ಯೆ ಇತ್ತೆಂದು ತಿಳಿದುಬರುತ್ತದೆ. ರಾಮಾಯಣದಲ್ಲೂ ಇದೇ ರೀತಿ ಉಲ್ಲೇಖವಿದೆ
- ಪೈಹಾರ (ವೈಭಾರ),
- ವರಾಲ(ವಿಪುಲಗಿರಿ),
- ವೃಷಭ (ರಾನ),
- ಋಷಿ (ಉದಯ)
- ಚೈತ್ಯಕ (ಸೋನರಾಗಿರಿ)
ಇವೇ ಆ ಪಂಚ ಪರ್ವತಗಳು. ಬುದ್ಧನ ಪರಿನಿರ್ವಾಣದ ಅನಂತರ (ಪ್ರ.ಶ.ಪು.486) ಬೌದ್ಧರ ಪ್ರಥಮ ಪರಿಷತ್ತು ಸೇರಿದ್ದು ವೈಭಾರದಲ್ಲಿ. ಗಿರಿವ್ರಜ ದಲ್ಲಿ ಕೆಲವು ಜೈನ ಶಾಸನಗಳೂ ಉಂಟು. ಇಲ್ಲಿ ಅನೇಕ ಬಿಸಿನೀರಿನ ಚಿಲುಮೆಗಳಿರುವುದರಿಂದ ರಾಜ್ಗಿರ್ ಈಗ ಒಂದು ಆರೋಗ್ಯಧಾಮವೆಂದು ಪ್ರಸಿದ್ಧವಾಗಿದೆ.