ಗಿಬ್ಸನ್, ವಿಲ್ಫ್ರೆಡ್ ವಿಲ್ಸನ್

1878-1962. ಜಾರ್ಜಿಯನ್ ಕಾವ್ಯಪಂಥದ ನಾಯಕರಲ್ಲೊಬ್ಬ. ಟೆನಿಸನ್ ಪಂಥವನ್ನು ವಿರೋಧಿಸಿ ಜನಜೀವನವನ್ನು ಕಾವ್ಯಕ್ಕೆ ವಸ್ತುವನ್ನಾಗಿ ಬಳಸಿಕೊಂಡು ವಿಪುಲವಾಗಿ ಕಾವ್ಯರಚನೆಮಾಡಿದ ಕವಿ.

ಈತ ಇಂಗ್ಲೆಂಡಿನ ನಾರ್ತಂಬರ್ಲೆಂಡ್ ಜಿಲ್ಲೆಯಲ್ಲಿ ಜನಿಸಿದ.

ಆರ್ಲಿನ ದಿ ಹಾರ್ಪರ್ ಮತ್ತು ದಿ ಕ್ವೀನ್ಸ್ ವಿಜಿಲ್ ಇವನ ಪ್ರಥಮ ಕವನ ಸಂಕಲನಗಳು (1902). ಮೊದಲು ಟೆನಿಸನ್ನನನ್ನು ಅನುಕರಿಸಿದನಾದರೂ ಕ್ರಮೇಣ ಆ ಹಾದಿಯನ್ನು ಬಿಟ್ಟು ತನ್ನ ಜಿಲ್ಲೆಯ ವಿಶಿಷ್ಟ ಕವಿಯಾಗಿ, ಅಲ್ಲಿನ ಜನಜೀವನದ ಸಾಹಿತಿಯಾಗಿ ಈತ 1907ರ ವೇಳೆಗೆ ಪ್ರಸಿದ್ಧನಾದ. ವಿಲಿಯಂ ವರ್ಡ್ಸವರ್ತನಂತೆಯೇ ಸರಳವಾದ, ನಿಸರ್ಗಕ್ಕೆ ಹತ್ತಿರವಾದ ಕವಿತಾ ವಸ್ತುವನ್ನು ಉಪಯೋಗಿಸಿಕೊಂಡು ಇನ್ನೂ ಒಂದು ಹೆಜ್ಜೆ ಮುಂದುವರಿದ. ನಾರ್ತಂಬರ್ಲೆಂಡ್ ಪ್ರದೇಶದ ರೈತರು, ಕೂಲಿಗಳು, ಗಣಿ ಕೆಲಸಗಾರರು, ಬಂಡಿ ಹೊಡೆಯುವವರು, ಕಲ್ಲು ಒಡೆಯುವವರು, ಕುರಿ ಕಾಯುವವರು, ಅಲೆಮಾರಿಗಳು ಮುಂತಾದ ನೆಲದ ಮಕ್ಕಳ ಸರಳವಾದ ಬದುಕಿನ ಸುಖ ದುಃಖಗಳನ್ನು ತನ್ನ ಕವಿತೆಗಳಲ್ಲಿ ನೇರವಾಗಿ, ಮನಮುಟ್ಟುವಂತೆ ಅಭಿವ್ಯಕ್ತಿಗೊಳಿಸಿದ. ಸ್ಟೋನ್ ಫೊಲ್ಸ್ಡ (1906) ಈ ರೀತಿಯ ಮೊದಲ ಕವನ ಸಂಕಲನ. ಅಲ್ಲಲ್ಲಿ ಜನರ ನುಡಿಗಟ್ಟುಗಳನ್ನೇ ಬಳಸಿ ಪ್ರಾದೇಶಿಕ ಭಾಷೆಗೆ ಬರ್ನ್ಸ್ ನಂತೆ ಕಾವ್ಯದಲ್ಲಿ ಸ್ಥಾನಮಾಡಿಕೊಟ್ಟ ಕೀರ್ತಿ ಗಿಬ್ಸನ್ನನದು.

ಡೇಲಿ ಬ್ರೆಡ್ (1910) ಸೊಗಸಾದ ಕಾವ್ಯನಾಟಕ. ನಿಸರ್ಗದ ಚೆಲುವನ್ನೂ ರೈತಕೂಲಿಗಳ ಸಂಕಟವನ್ನೂ ಒಳಗೊಂಡ ಈ ನಾಟಕ ರಂಗಭೂಮಿಗೆ ಪ್ರಜ್ಞಾವಂತ ಸಾಮಾಜಿಕ ಕೊಡುಗೆ.

ವಿಮೆನ್ಕೈಂಡ್ (1912), ಕೆಸ್ಟ್ರೆಲ್ ಎಜ್ (1924), ವಿದಿನ್ ಫೋರ್ ವಾಲ್ಸ್ (1950)-ಇವು ಇವನ ಇತರ ನಾಟಕಗಳು. ಬಡ ಜನರ ಬದುಕಿನಿಂದ ಒರಟು ಮತ್ತು ಅಸಂಸ್ಕೃತ ಘಟನೆಗಳಿಂದ ತನ್ನ ಕಾವ್ಯಕ್ಕೆ ಪ್ರತಿಮೆಗಳನ್ನು ವಸ್ತುವನ್ನು ಗಿಬ್ಸನ್ ಆಯ್ದುಕೊಂಡು ತನ್ನ ಕೃತಿಗಳಲ್ಲಿ ಮಾನವೀಯ ಸಹೃದಯತೆಯಿಂದ ಈ ಬಡಜನರ ಬಗ್ಗೆ ಅನುಕಂಪ ಮತ್ತು ಸೌಹಾರ್ದಗಳನ್ನು ಸೂಸಿದ್ದಾನೆ. ಜನರ ಭಾಷೆ, ನುಡಿಗಟ್ಟು, ಆಡುಮಾತು- ಇವುಗಳ ಪದಬಂಧ, ಲಯ, ರೀತಿಗಳನ್ನೇ ಉಳಿಸಿಕೊಂಡು ಮಾತನಾಡುವ ಸಾಮಾನ್ಯ ಬಗೆಯನ್ನೇ ಕಾವ್ಯರೂಪವನ್ನಾಗಿ ಮಾಡಿಕೊಂಡು ಮುಕ್ತಛಂದದಲ್ಲಿ ತನ್ನ ಕವಿತೆಗಳನ್ನು ಗಿಬ್ಸನ್ ರಚಿಸಿದ್ದಾನೆ. ಒಮ್ಮೊಮ್ಮೆ ಮಾತ್ರ ಪ್ರಾಸ ಬಳಸಿರುವುದೂ ಉಂಟು. ಛಂದಕ ಬಂಧದಲ್ಲಿ ಸೊಗಸಾದ ಧ್ವನಿಪುರ್ಣ ಕವಿತೆ ಗಳಲ್ಲಿಯೂ ಕಾವ್ಯನಾಟಕಗಳಲ್ಲಿಯೂ ತುಂಬಿ, ಅವೆಲ್ಲವನ್ನೂ ಕಾವ್ಯವನ್ನಾಗಿಸಿದೆ. ಈತನ ನಾಟಕಗಳಲ್ಲಿ, ಕಥನ ಕವನಗಳಲ್ಲಿ ಸರಳ ಜೀವಿಗಳ ಸರಳ ಸುಖಸಂಕಟಗಳ ಸರಳನಿರೂಪಣೆಯಿದ್ದು ಅವು ಮನತಾಗುವಂತಿವೆ. ಅದ್ಭುತ ಮತ್ತು ಅಮಾನುಷಗಳ ಗೊಡವೆಗೇ ಹೋಗದಿದ್ದರೂ ಫ್ಲಾನನ್ ಐಲ್ನಂಥ ಕವಿತೆಯಲ್ಲಿ ಬಹುಸುಂದರವಾಗಿ ಅದ್ಭುತ ರಮ್ಯ ಭಯಂಕರಗಳ ಧ್ವನಿ ಚಿತ್ರಣ ಕಾಣಬಹುದು.


ಇವನ ಕಥನ ಕವನಗಳೆಲ್ಲ ನಾಟಕಾಂಶದಿಂದ ಬೆಳಗುತ್ತವೆ. ಈ ನಾಟಕೀಯ ಬಗೆಗೆ ದೇಸೀಪದಗಳಿಂದ ಕಳೆಗಟ್ಟಿದೆ. ಕೆಲವೆಡೆಗಳಲ್ಲಿ ಪದ್ಯದ ಗದ್ಯತನ ಕಾಣಿಸಿದಂತೆನಿಸಿ ದರೂ ಸಾಮಾನ್ಯವಾಗಿ ಆಡುಮಾತಿನ ಲಯ ಮತ್ತು ಜೀವಂತಿಕೆ ಇದೆ. ಬಾರ್ಡರ್ ಲ್ಯಾಂಡ್ (1914). ಫೈರ್ಸ್ (1912), ಹೋಂ (1920), ಫ್ಯೂಯೆಲ್, ಹಜಾರ್ಡ್ (1930), ಐಲೆಂಡ್ಸ್ (1932), ಚ್ಯಾಲೆಂಜ್ (1942), ದಿ ಔಟ್ ಪೋಸ್ಟ (1944), ದಿ ಐಲೆಂಡ್ ಸ್ಟ್ಯಾಗ್ (1947) ಮುಂತಾದವು ಇವನ ಸುಮಾರು 40 ಕವನ ಸಂಗ್ರಹಗಳಲ್ಲಿ ಮುಖ್ಯವಾದುವು. ಕಾರ್ಖಾನೆಯ ಕೂಲಿಗಾರರ ಮತ್ತು ಬಡವರ ಕವಿಯಾಗಿ ಈತ ಅವರ ನೋವು ನಲಿವುಗಳನ್ನೂ ಕೈಗಾರಿಕಾ ಜೀವನದ ನೈಜಚಿತ್ರಣವನ್ನೂ ಈ ಕವನಗಳಲ್ಲಿ ಚಿತ್ರಿಸಿದ್ದಾನೆ. ನಮ್ಮ ಕಣ್ಣಮುಂದೆಯೇ ಘಟನೆಗಳು ನಡೆಯುವಂತೆ ಕಣ್ಣಿಗೆ ಕಟ್ಟುವ ಚಿತ್ರ ನೇಯುತ್ತಾನೆ, ಗಿಬ್ಸನ್. ಆ ಕಾಲದ ಸಮಾಜದ ಮನಸ್ಸಾಕ್ಷಿ ಎಂದೂ ನಾರ್ತಂಬರ್ ಲೆಂಡ್ ನೆಲದ ಕವಿಯೆಂದೂ ಈತ ಪ್ರಖ್ಯಾತ.