ಗಿನಿ ಕೋಳಿ
ಗಿನಿ ಕೋಳಿಗ್ಯಾಲಿಫಾರ್ಮೀಸ್ ಗಣದ ನ್ಯೂಮಿಡಿಡೀ ಕುಟುಂಬಕ್ಕೆ ಸೇರಿದ ಹಕ್ಕಿ. ಇದರಲ್ಲಿ ಸುಮಾರು 5 ಜಾತಿಗಳೂ 7 ಪ್ರಭೇದಗಳೂ ಇವೆ. ಎಲ್ಲವೂ ಕೋಳಿಗಳಿಗೆ ಹತ್ತಿರ ಸಂಬಂಧಿಗಳು. ಆಫ್ರಿಕ, ಮಡಗಾಸ್ಕರ್ ಮತ್ತು ವೆಸ್ಟ್ಇಂಡೀಸಿನ ಕೆಲವು ದ್ವೀಪಗಳಲ್ಲಿ ಕಾಣಬರುತ್ತವೆ. ಇವುಗಳಲ್ಲಿ ಕೆಲವು ಬಗೆಗಳನ್ನು ಕೋಳಿಗಳಂತೆ ಸಾಕಲಾಗಿದೆ. ಗಿನಿಕೋಳಿಗಳು ಸುಮಾರು 40-80 ಸೆಂಮೀ ಉದ್ದದ ಹಕ್ಕಿಗಳು. ಇವುಗಳ ತಲೆಯ ಮೇಲೆ ಪುಕ್ಕ ಗಳಿಲ್ಲ. ಕೆಲವು ಪ್ರಭೇದಗಳಲ್ಲಿ (ನ್ಯೂಮಿಡ್) ನೆತ್ತಿಯ ಮೇಲೆ ಕೊಂಬಿನ ಮುಳ್ಳಿನಂಥ ರಚನೆಯಿದೆ. ಇನ್ನು ಕೆಲವು ಬಗೆಗಳಲ್ಲಿ ಗರಿಗಳ ಕಿರೀಟ ವಿರುವುದೂ ಉಂಟು. ಬಹುಪಾಲು ಬಗೆಗಳಲ್ಲಿ ಕತ್ತು ಕೂಡ ಬರಿದಾಗಿರುವುದಾದರೂ ಕೆಲವು ಪ್ರಭೇದ ಗಳಲ್ಲಿ ನೀಲಿ ಇಲ್ಲವೆ ಕೆಂಪು ಬಣ್ಣದ ಜೋಲು ಮಾಂಸಲ ಭಾಗ (ವ್ಯಾಟಲ್) ಉಂಟು. ಈ ಲಕ್ಷಣ ದಲ್ಲಿ ಇವು ಟರ್ಕಿ ಕೋಳಿಗಳನ್ನು ಹೋಲುತ್ತವೆ. ಹಿಂದಕ್ಕೆ ಬಾಗಿ ಹೆಚ್ಚು ಕಡಿಮೆ ನೆಲವನ್ನು ಮುಟ್ಟುವಂಥ ಬಾಲ, ಬಾಲವನ್ನು ಸಂಪೂರ್ಣವಾಗಿ ಮುಚ್ಚುವಂಥ ಬಾಲದ ಗರಿಗಳು, ಅಚ್ಚ ಕಪ್ಪು ಬಣ್ಣ ಮತ್ತು ಚೆಲುವಾದ ಬಿಳಿಯ ಮಚ್ಚೆಗಳಿಂದ ಕೂಡಿದ ಗರಿಗಳು-ಇವು ಗಿನಿ ಕೋಳಿಗಳ ಇನ್ನಿತರ ಲಕ್ಷಣಗಳು.
ಗಿನಿ ಕೋಳಿಯ ಜೀವನ ಚಿತ್ರಣ
ಬದಲಾಯಿಸಿ- ದಟ್ಟವಾದ ಕಾಡುಗಳಲ್ಲಿ ಇವುಗಳ ವಾಸ. ಸಂಘಜೀವಿಗಳಾದ ಇವು ದೊಡ್ಡ ಗುಂಪುಗಳಲ್ಲಿರುತ್ತವೆ. ಗುಂಪಿಗೆ ಮುದಿ ಹುಂಜವೇ ಯಜಮಾನ. ಹಿಂಡುಗಳಲ್ಲಿರುವಾಗ ಇವು ಜೋರಾಗಿ ಕೇಕೆ ಹಾಕುತ್ತ ಓಡಾಡುತ್ತವೆ. ಇವು ಎಷ್ಟು ಗದ್ದಲ ಪ್ರೇಮೀಗಳೋ ಅಷ್ಟೇ ಪುಕ್ಕಲು ಸ್ವಭಾವದವು ಕೂಡ. ಅಲ್ಪಸ್ವಲ್ಪ ಶಬ್ದಕ್ಕೂ ಗಾಬರಿಗೊಂಡು, ಗುಂಪಿನಿಂದ ಚದರಿ ಪೊದೆಗಳಲ್ಲಿ ಅವಿತುಕೊಳ್ಳುತ್ತವೆ. ಚಿಗುರು, ಬೀಜ ಮುಂತಾದವು ಇವುಗಳ ಮೆಚ್ಚಿನ ಆಹಾರ. ಸಂತಾನೋತ್ಪತ್ತಿಯ ಕಾಲದಲ್ಲಿ ಮಾತ್ರ ಗುಂಪಿನಲ್ಲಿನ ಗಂಡು ಹೆಣ್ಣುಗಳು ಜೊತೆಯಾಗಿ ಗುಂಪಿನಿಂದ ಪ್ರತ್ಯೇಕವಾಗಿ ಜೀವಿಸುತ್ತವೆ.
- ಈ ಸಮಯದಲ್ಲಿ ಸದ್ದುಗದ್ದಲ ಮಾಡದೆ ಶಾಂತವಾಗಿರುತ್ತವೆ. ಗೂಡು ಕಟ್ಟುವ ಕೆಲಸ ಹೆಣ್ಣಿನದು. ಗಿನಿ ಕೋಳಿಗಳು ಸಾಮಾನ್ಯವಾಗಿ ನೆಲದ ಮೇಲೆ ನಡೆದಾಡುವುದೇ ಹೆಚ್ಚು. ಆಹಾರವನ್ನು ಅರಸಿಕೊಂಡು ದಿನಕ್ಕೆ ಸುಮಾರು 35 ಕಿಮೀ ವರೆಗೂ ಓಡಾಡುವುದುಂಟು. ಇವಕ್ಕೆ ಚೆನ್ನಾಗಿ ಹಾರಲು ಬಾರದು. ಶತ್ರುಪ್ರಾಣಿಗಳು ಎರಗಿದಾಗ ಹಾರುವ ಬದಲು ವೇಗವಾಗಿ ಓಡುವುದೇ ಸಾಮಾನ್ಯ. ಅತ್ಯಾವಶ್ಯಕವೆನಿಸಿದಾಗ ಮಾತ್ರ ಹಾರುತ್ತವೆ. ಗಿನಿ ಕೋಳಿಗಳಲ್ಲೆಲ್ಲ ಬಹಳ ಪ್ರಸಿದ್ಧವಾದುದು ಪೂರ್ವ ಆಫ್ರಿಕದ ನಿವಾಸಿಯಾದ ಆಕ್ರಿಲಿಯಮ್ ವಲ್ಚರೈನಮ್ ಎಂಬ ಪ್ರಭೇದ.
- ಈ ಜಾತಿಯಲ್ಲೇ ಇದು ಅತ್ಯಂತ ದೊಡ್ಡ ಗಾತ್ರದ್ದು. ಇದರ ತಲೆ ಬೋಳಾಗಿದ್ದು ಹೆಚ್ಚು ಕಡಿಮೆ ರಣಹದ್ದಿನ ತಲೆಯನ್ನೇ ಹೋಲುವುದರಿಂದ ಇದನ್ನು ಬಳಕೆಯ ಮಾತಿನಲ್ಲಿ ವಲ್ಚರೈನ್ ಗಿನಿಕೋಳಿ ಎಂದು ಕರೆಯಲಾಗುತ್ತದೆ. ಪಶ್ಚಿಮ ಆಫ್ರಿಕದ ದಟ್ಟವಾದ ಕಾಡುಗಳಲ್ಲಿ ಹೆಲ್ಮೆಟೆಡ್ ಗಿನಿಫೌಲ್ (ನ್ಯೂಮಿಡ ಮಿಲಿಯಾಗ್ರಿಸ್) ಎಂಬ ಇನ್ನೊಂದು ಬಗೆ ಕಾಣಬರುತ್ತದೆ. ಸಾಕಣೆಯಲ್ಲಿರುವ ಗಿನಿಕೋಳಿಗಳನ್ನು ಈ ಬಗೆಯಿಂದಲೇ ಪಡೆಯಲಾಗಿದೆ ಎನ್ನುತ್ತಾರೆ. ಗಿನಿಕೋಳಿಗಳನ್ನು ಅವುಗಳ ಬಲು ರುಚಿಯಾದ ಮಾಂಸಕ್ಕಾಗಿ ಸಾಕುವುದಿದೆ.
- ಇವುಗಳ ಸಾಕಣೆ ಬಹು ಪ್ರಾಚೀನವಾದ ಕಸಬು. ರೋಮನರು, ಗ್ರೀಕರು ಆಫ್ರಿಕದಿಂದ ಇವನ್ನು ಹಿಡಿದುತಂದು ಸಾಕುತ್ತಿದ್ದರಂತೆ. ಆದರೆ ಪ್ರಸಕ್ತಯುಗ ಆರಂಭವಾಗುವ ಕಾಲಕ್ಕೆ ಇವುಗಳ ಸಾಕಣೆ ನಿಂತುಹೋಯಿತು. ಮತ್ತೆ ಹದಿನೈದನೆಯ ಶತಮಾನದಲ್ಲಿ ಪೋರ್ಚುಗೀಸ್ ನಾವಿಕರು ಗಿನಿ ತೀರ ಪ್ರದೇಶದಲ್ಲಿ ಇವನ್ನು ಕಂಡು ಮತ್ತೆ ಯುರೋಪಿಗೆ ತಂದರು. ಅಲ್ಲಿಂದೀಚೆಗೆ ಯುರೋಪಿನ ದೇಶಗಳಲ್ಲಿ ಕೆಲವೆಡೆ ಗಿನಿಕೋಳಿಗಳ ಸಾಕಣೆ ರೂಢಿಯಲ್ಲಿದೆ. ಹೀಗೆ ಸಾಕುವ ಗಿನಿಕೋಳಿಗಳಲ್ಲಿ ಪರ್ಲ್, ಹ್ವೈಟ್ ಮತ್ತು ಲ್ಯಾವೆಂಡರ್ ಎಂಬ ಮೂರು ಬಗೆಗಳಿವೆ. ಆರ್ಥಿಕ ದೃಷ್ಟಿಯಿಂದ ಗಿನಿಕೋಳಿಗಳ ಸಾಕಣೆ ಲಾಭದಾಯಕವಲ್ಲದ್ದರಿಂದ ಇದು ಹೆಚ್ಚು ಜನಪ್ರಿಯವಾಗಿಲ್ಲ.