ಗಾಳಿ ಆಂಜನೇಯ ದೇವಸ್ಥಾನ ಬೆಂಗಳೂರು

ಗಾಳಿ ಆಂಜನೇಯ ದೇವಸ್ಥಾನ ಬೆಂಗಳೂರು ನಗರದ ಅತಿ ಶ್ರೇಷ್ಠ ಹಾಗೂ ಪವಿತ್ರವಾದ ಸ್ಥಳ. ಇದು ಬೆಂಗಳೂರಿನ ಹಳೆಯ ದೇವಸ್ಥಾನಗಳಲ್ಲಿ ಒಂದು. ಈ ದೇವಾಲಯವನ್ನು ಮೊದಲು ದಿಗಂಬರ ದೇವಸ್ಥಾನ ಎಂದು ಕರೆಯಲಾಗುತ್ತಿತ್ತು. ಗಾಳಿ ಆಂಜನೇಯ ದೇವಸ್ಥಾನ ಬೆಂಗಳೂರಿನ ಮೈಸೂರು ರಸ್ತೆಯ ಬ್ಯಾಟರಾಯನಪುರದ ಬಳಿ ಇದೆ. ಈ ದೇವಾಲಯದ ದೇವರು ತುಂಬಾ ಶಕ್ತಿಶಾಲಿಯಾಗಿರುವುದರಿಂದ ತಮ್ಮ ಎಲ್ಲಾ ಕೋರಿಕೆಗಳು ಈಡೇರುತ್ತವೆ ಎಂದು ಅನೇಕ ಭಕ್ತರು ನಂಬುತ್ತಾರೆ. ಇಡೀ ವರ್ಷ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ ಹಾಗೂ ಧಾರ್ಮಿಕ ಹಬ್ಬಗಳನ್ನು ಆಚರಿಸಲಾಗುತ್ತದೆ. ಗಾಳಿ ಆಂಜನೇಯ ದೇವರ ಆಶೀರ್ವಾದ ಪಡೆಯಲು ಮತ್ತು ತಮ್ಮ ಜೀವನದ ತೊಂದರೆಗಳನ್ನು ನಿವಾರಿಸಿಕೊಳ್ಳಲು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಆಂಜನೇಯನ ಆಶೀರ್ವಾದ ಪಡೆಯಲು ಭಕ್ತರು ಬೇರೆ ಬೇರೆ ಊರುಗಳು ಹಾಗೂ ರಾಷ್ಟ್ರಗಳಿಂದೆಲ್ಲಾ ಬರುತ್ತಾರೆ[].

ಗಾಳಿ ಆಂಜನೇಯ ದೇವಸ್ಥಾನದಲೆರುವ ಆಂಜನೇಯನ ವಿಗ್ರಹ
ಗಾಳಿ ಆಂಜನೇಯ ದೇವಸ್ಥಾನದಲ್ಲಿರುವ ಆಂಜನೇಯನ ವಿಗ್ರಹ

ಇತಿಹಾಸ

ಬದಲಾಯಿಸಿ

ಈ ದೇವಾಲಯವನ್ನು ೧೪೨೫ ರಲ್ಲಿ ನಿರ್ಮಿಸಲಾಗಿದ್ದು ಇದು ಸುಮಾರು ೬೦೦ ವರ್ಷಗಳ ಇತಿಹಾಸವನ್ನು ಹೊಂದಿದೆ[]. ವೃಷಭಾವತಿ ಮತ್ತು ಪಶ್ಚಿಮಾವತಿ ನದಿಗಳ ಸಂಗಮವಾದದ್ದರಿಂದ ವ್ಯಾಸರಾಜನು ಇಲ್ಲಿ ಪ್ರತಿಮೆಯನ್ನು ಸ್ಥಾಪಿಸಿದನೆಂದು ಪುರಾಣ ಹೇಳುತ್ತದೆ. ಇಲ್ಲಿರುವ ಆಂಜನೇಯನ ವಿಗ್ರಹವನ್ನು ಹಿಂದೂ ಸಂತ ಶ್ರೀ ವ್ಯಾಸರಾಜ ಸ್ಥಾಪಿಸಿದ್ದಾರೆ. ಅವರು ೭೩೨ ಹನುಮಂತನ ವಿಗ್ರಹಗಳನ್ನು ಸ್ಥಾಪಿಸಿದ್ದಾರೆ ಎಂದು ಹೇಳಲಾಗುತ್ತದೆ, ಇವುಗಳಲ್ಲಿ ಗಾಳಿ ಆಂಜನೇಯ ದೇವಸ್ಥಾನ ಕೂದ ಒಂದು[]. ಬೆಂಗಳೂರು ನಗರ ಉದಿಸುವ ಮುನ್ನ ಸ್ವಾಮಿಯ ಮೂರ್ತಿ ಬಯಲಿನಲ್ಲಿ ಇದ್ದ ಕಾರಣ ಗಾಳಿ ಆಂಜನೇಯ ಎಂಬ ಹೆಸರು ಬಂದಿದೆ. ಗಾಳಿ ಎಂದರೆ ದುಷ್ಟಶಕ್ತಿ ಎಂದರ್ಥ. ದುಷ್ಟಶಕ್ತಿಗಳ ಅಧಿಪತಿಯಾದ ರಾವಣನ ಪುತ್ರ ಅಕ್ಷಾಸುರನನ್ನು ಮೆಟ್ಟಿ ನಿಂತಿದ್ದರಿಂದ ಈ ಹೆಸರು ಬಂದಿದೆ.

ದೇವಾಲಯದ ವಿವರ

ಬದಲಾಯಿಸಿ

ದೇವಾಲಯದ ಪೂಜಾ ಮೂರ್ತಿಯ ಶಿರದ ಎರಡೂ ಬದಿಗಳಲ್ಲಿ ಶಂಖ ಚಕ್ರಗಳಿವೆ. ಸಾಮಾನ್ಯವಾಗಿ ಬಹುತೇಕ ಆಂಜನೇಯನ ವಿಗ್ರಹಗಳ ಕೈಯಲ್ಲಿ ಗದೆ ಇರುತ್ತದೆ ಆದರೆ ಇಲ್ಲಿ ಪದ್ಮಕಮಲ ಇರುವುದು ಮತ್ತೊಂದು ವಿಶೇಷತೆಯಾಗಿದೆ. ಆಂಜನೇಯನ ಬಹುತೇಕ ದೇಗುಲಗಳಲ್ಲಿ ಮೂರ್ತಿಯ ಮುಖಕ್ಕೆ ಸಿಂಧೂರ ಲೇಪಿಸಲಾಗುತ್ತದೆ ಆದರೆ ಇಲ್ಲಿ ಪ್ರತಿ ಗುರುವಾರ ಸ್ವಾಮಿಯ ಇಡೀ ದೇಹಕ್ಕೆ ಸಿಂಧೂರವನ್ನು ಲೇಪಿಸಿ ಪೂಜೆ ಮಾಡಲಾಗುತ್ತದೆ. ಪ್ರತಿ ಮಂಗಳವಾರ ಮತ್ತು ಶನಿವಾರ ವಿಶೇಷ ಪೂಜೆ ನಡೆಯುತ್ತದೆ[].

ಗಾಳಿ ಆಂಜನೇಯ ದೇವಸ್ಥಾನ ಎತ್ತರದ ಗೋಪುರವನ್ನು ಹೊಂದಿದ್ದು ಇಲ್ಲಿ ದೇವರು ಪಶ್ಚಿಮಕ್ಕೆ ಮುಖಮಾಡಿ ಶ್ರೀರಾಮನ ಪರಿವಾರವನ್ನು ಕಾಣುತ್ತಿದ್ದಾನೆ. ಇಲ್ಲಿ ಪವಿತ್ರ ದಾರವನ್ನು ಭಕ್ತರಿಗೆ ಪ್ರಸಾದ ಎಂದು ನೀಡಲಾಗುತ್ತದೆ. ಇಲ್ಲಿ ಭಗವಂತನ ಬಾಲದ ಕೊನೆಯಲ್ಲಿ ಒಂದು ಗಂಟೆಯನ್ನು ಕಟ್ಟಿದ್ದು ಇದು ಶ್ರೀ ವ್ಯಾಸರಾಜರ ಶಾಂತಿ ಶೈಲಿಯನ್ನು ಸೂಚಿಸುತ್ತದೆ. ಆಂಜನೇಯನ ವಿಗ್ರಹದ ಎಡಗೈ ಸೊಂಟದ ಮೇಲೆ ವಿಶ್ರಾಂತಿ ಪಡೆಯುತ್ತಾ ಹೂವನ್ನು ಹಿಡಿದಿದೆ ಹಾಗೂ ಬಲಗೈಯಲ್ಲಿ ಅಭಯ ಮುದ್ರೆಯನ್ನು ಹಿಡಿದು ತನ್ನ ಎಲ್ಲಾ ಭಕ್ತರಿಗೆ ಆಶೀರ್ವಾದ ನೀಡುತ್ತಿದೆ.

ದೇವಾಲಯದ ಮಹತ್ವ

ಬದಲಾಯಿಸಿ

ಗಾಳಿ ಆಂಜನೇಯ ದೇವಾಲಯದ ಅನನ್ಯತೆಯೆಂದರೆ ರಥ ಯಾತ್ರೆ. ಇದು ಕಳೆದ ೧೨೦ ವರ್ಷಗಳಿಂದ ನಡೆಯುತ್ತಿದೆ. ಈ ಸಮಯದಲ್ಲಿ ಬಹಳಷ್ಟು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇಲ್ಲಿ ೧೩೫ ವರ್ಷಗಳಿಂದ ಶ್ರೀ ರಾಮ ನವಮಿ ಸಂದರ್ಭದಲ್ಲಿ ೯ ದಿನಗಳ ಕಾಲ ಶ್ರೀ ಪಾಂಚರಾತ್ರಾಗಮ ಬ್ರಹ್ಮರಥೋತ್ಸವ ವಿಜ್ರಂಭಣೆಯಿಂದ ನಡೆಯುತ್ತದೆ. ಹನುಮ ಜಯಂತಿ ಹಾಗೂ ಭೀಮನ ಅಮಾವಾಸ್ಯೆಯಂದು ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿ ಪ್ರತಿ ಶನಿವಾರ ವಿಶೇಷ ಅಭಿಷೇಕ, ಪೂಜೆ, ಸಂಗೀತ, ಭಜನೆ, ಪ್ರಸಾದ ವಿಸ್ತರಣೆ ಮುಂತಾದವು ಇರುತ್ತದೆ. ಅಗಸ್ಟ್ ತಿಂಗಳಲ್ಲಿ ಈ ದೇವಸ್ಥಾನದ ದೇವರಿಗೆ ಬೆಣ್ಣೆ ಅಲಂಕಾರವನ್ನು ನಡೆಸಲಾಗುತ್ತದೆ. ಈ ಸಮಯದಲ್ಲಿ ದೈತ್ಯಾಕಾರದ ವಿಗ್ರಹವನ್ನು ಬೆಣ್ಣೆಯಿಂದ ಅಲಂಕರಿಸಲಾಗುತ್ತದೆ. ಬೆಣ್ಣೆಯನ್ನು ಸಾವಿರಾರು ಭಕ್ತರು ದಾನ ಮಾಡುತ್ತಾರೆ. ಹನುಮಾನ್ ಜಯಂತಿ ಸಮಯದಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಕೋತಿಗಳಿಗೆ ಹಣ್ಣುಗಳನ್ನು ನೀಡಲಾಗುತ್ತದೆ. ಗಾಳಿ ಆಂಜನೇಯ ದೇವಸ್ಥಾನದಲ್ಲಿ ಶ್ರೀ ವೇಣುಗೋಪಾಲಸ್ವಾಮಿ, ಶ್ರೀರಾಮ, ಗಣಪತಿ ಮತ್ತು ನವಗ್ರಹ ದೇವಾಲಯಗಳಿವೆ. ಈ ದೇವಾಲಯದಲ್ಲಿ ಸಾಕಷ್ಟು ರಾಜಕಾರಣಿ ಭಕ್ತರಿದ್ದಾರೆ. ಭಕ್ತರು ಅವರ ಕೆಲಸದ ಕ್ಷೇತ್ರಗಳಲ್ಲಿ ತಮ್ಮ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಮಕ್ಕಳಿಗೆ ಕಾಯಿಲೆಗಳನ್ನು ಗುಣಪಡಿಸಲು ಇಲ್ಲಿ ಭೇಟಿನೀಡುತ್ತಾರೆ.

ಹಬ್ಬ/ಉತ್ಸವಗಳು

ಬದಲಾಯಿಸಿ

ಈ ದೇವಾಲಯದ ಪ್ರಸಿದ್ಧ ಹಬ್ಬವೆಂದರೆ ಕಾರು ಉತ್ಸವ. ವರ್ಷಕ್ಕೊಮ್ಮೆ ನಡೆಯುವ ಅತ್ಯಂತ ಪ್ರಸಿದ್ಧ ಕಾರು ಉತ್ಸವವನ್ನು ಆಚರಿಸುವ ದೇವಾಲಯ ಇದಾಗಿದೆ. ಇಲ್ಲಿ ಭಕ್ತರು ಆಂಜನೇಯ ಆಶೀರ್ವಾದ ಪಡೆಯುವುದಕ್ಕಾಗಿ ತಮ್ಮ ಹೊಸ ಕಾರುಗಳನ್ನು ಪೂಜೆ ಮಾಡುತ್ತಾರೆ. ದೇವಸ್ಥಾನದಲ್ಲಿ ಭಕ್ತರಿಗೆ ದೇವರ ಹತ್ತಿರ ಇಟ್ಟು ಪೂಜೆ ಮಾಡಿದ ಅರಿಶಿನದ ದಾರವನ್ನು ಪ್ರಸಾದವಾಗಿ ನೀಡುತ್ತಾರೆ. ಈ ದೇವಸ್ಥಾನದಲ್ಲಿ ಮಕ್ಕಳು ಏನಾದರೂ ಕೆಟ್ಟದ್ದನ್ನು ನೋಡಿ ಹೆದರಿ ಕೊಂಡಿದ್ದರೆ ದೇವರ ಅಭಿಷೇಕದ ನೀರನ್ನು ಮಕ್ಕಳ ಮುಖದ ಮೇಲೆ ಬೇವಿನ ಎಲೆಗಳಿಂದ ನೀರನ್ನು ಹಾಕಿ ದೇವರ ಅರ್ಚನೆಯ ಕುಂಕುಮವನ್ನು ಹಣೆಯ ಮೇಲೆ ಇಡುತ್ತಾರೆ. ದೇವರ ಹತ್ತಿರ ಇಟ್ಟಿ ಪೂಜೆ ಮಾಡಿದ ನಿಂಬೆಹಣ್ಣು ಸಹ ನೀಡುತ್ತಾರೆ. ಇದರಿಂದ ಮನೆಯಲ್ಲಿ ಯಾವುದೇ ಕಷ್ಟ ತೊಂದರೆಗಳಿದ್ದರೆ ಪರಿಹಾರವಾಗುತ್ತದೆ ಎಂಬುದು ಭಕ್ತರ ನಂಬಿಕೆ. ಮಕ್ಕಳ ಬೇಡಿಕೆ ಕೋರಿಕೆಗಳನ್ನು‌ ಆಂಜನೇಯ ಬೇಗ ನೆರವೇರಿಸುತ್ತಾನೆ ಎಂದು ಭಕ್ತರು ನಂಬಿದ್ದಾರೆ. ಇಲ್ಲಿ ಪ್ರತೀ ಶನಿವಾರ ದೇವರಿಗೆ ವಡೆ ಅಲ೦ಕಾರ ಮಾಡುತ್ತಾರೆ.

ಈ ದೇವಾಲಯವು ಎಲ್ಲಾ ದಿನಗಳಲ್ಲಿ ಬೆಳಗ್ಗೆ ೬ ರಿಂದ ರಾತ್ರಿ ೮.೩೦ ರವರೆಗೆ ತೆರೆದಿರುತ್ತದೆ. ಇದು ಮಹಾಲಕ್ಷ್ಮಿ ಮೆಟ್ರೋ ನಿಲ್ದಾಣದಿಂದ ಕೆಲವೇ ನಿಮಿಷಗಳ ದೂರದಲ್ಲಿದೆ. ಮೆಟ್ರೋ ರೈಲು ಈ ಸ್ಥಳವನ್ನು ತಲುಪಲು ಉತ್ತಮ ಪ್ರಯಾಣ ಮಾರ್ಗವಾಗಿದೆ.

ಉಲ್ಲೇಖಗಳು

ಬದಲಾಯಿಸಿ