ಗಾರ್ಹಸ್ಥ್ಯ ಬದಲಾಯಿಸಿ

ಗೃಹಸ್ಥಾಶ್ರಮ ಧರ್ಮಕ್ಕೆ ಈ ಹೆಸರಿದೆ. ಗೃಹಸ್ಥ ಅಂದರೆ ಮನೆಯುಳ್ಳವನು ಎಂದು ಪದಶಃ ಅರ್ಥ; ಭಾವಾರ್ಥ ಇದಕ್ಕಿಂತ ವಿಶಾಲವಾದದ್ದು. ಹಾಗೆಯೇ ಗೃಹಿಣಿ ಪದದ ಅರ್ಥವೂ ವಿಶಾಲವಾದದ್ದು. ಗೃಹಸ್ಥ ಮತ್ತು ಗೃಹಿಣಿ ಕೇವಲ ಮನೆಯೆಂಬ ಒಂದು ಕಟ್ಟಡವನ್ನು ಪಡೆದವರಲ್ಲ. ಅವರು ತಂದೆ ತಾಯಿ, ಅಣ್ಣ ತಮ್ಮ, ಅಕ್ಕ, ತಂಗಿಯರೊಡನೆ ಬಾಳುವ ಕುಟುಂಬಿಗಳು, ಸಂಸಾರಿಗಳು. ಸಮಾಜದ ಶೈಶವಾವಸ್ಥೆಯಲ್ಲೂ ಕುಟುಂಬವೇ ಜೀವನವ್ಯವಸ್ಥೆಯ ತಳಹದಿಯಾಗಿತ್ತು. ಹಲವು ಕುಟುಂಬಿಗಳು ನೆರಹೊರೆಯಾಗಿ ಬಾಳುತ್ತಿದ್ದುವು. ಪ್ರತಿಯೊಬ್ಬ ಕುಟುಂಬಿಯೂ ಹಲವು ಕುಟುಂಬಗಳ ಒಂದು ಕುಲ ಅಥವಾ ಬುಡಕಟ್ಟಿನ ಆಡಳಿತದಲ್ಲಿ ಭಾಗವಹಿಸುತ್ತಿದ್ದನು. ಅದರ ಕಟ್ಟು ಕಾಯಿದೆಗಳನ್ನು ಪಾಲಿಸುತ್ತಿದ್ದನು. ಅದರ ಮತಾಚಾರ ಗಳನ್ನು ಅನುಸರಿಸುತ್ತಿದ್ದನು. ಅವನ ಮಕ್ಕಳು ಆಯಾ ಕುಲದ ಅಥವಾ ಗುಂಪಿನ ಗುರುಗಳಿಂದ ವಿದ್ಯೆ ಕಲಿಯುತ್ತಿದ್ದರು. ಗುಂಪುಗುಂಪುಗಳಿಗೆ ಯುದ್ಧ ಒದಗಿದಾಗ ಯುದ್ಧದಲ್ಲಿ ಭಾಗವಹಿಸುತ್ತಿದ್ದರು. ಬೆಳೆದ ಸಮಾಜದಲ್ಲಂತೂ ಗೃಹಸ್ಥನ ಸಾಮಾಜಿಕ ಕರ್ತವ್ಯಗಳು ತುಂಬ ವಿಸ್ತರಿಸಿವೆ. ಅವನು ಪುರವಾಸಿಯಾಗಿ ಪೌರನ ಹಕ್ಕುಬಾಧ್ಯತೆಗಳನ್ನು ಪಡೆದಿರುತ್ತಾನೆ. ಒಂದು ರಾಷ್ಟ್ರದ ಪ್ರಜೆಯಾದ ಗೃಹಸ್ಥ ಅದರಿಂದ ಪಡೆಯುವ ಪ್ರಯೋಜನಕ್ಕೆ ಸಾಪೇಕ್ಷವಾದ ಕಟ್ಟು ಕಾಯಿದೆಗಳನ್ನು ಪಾಲಿಸಬೇಕಾಗುತ್ತದೆ. ಅವನ ಮತ್ತು ಅವನ ಕುಟುಂಬದವರ ಕ್ಷೇಮ, ಆಯುರಾರೋಗ್ಯ, ಆರ್ಥಿಕಸ್ಥಿತಿ, ಸಂಸ್ಕೃತಿ ಮುಂತಾದುವುಗಳಿಗೆ ಬಹುಮಟ್ಟಿಗೆ ಕಾರಣವಾದ ತನ್ನ ರಾಷ್ಟ್ರದ ಸರ್ಕಾರದೊಡನೆ ಪ್ರಜೆಯಾದ ಅವನು ಸಹಕರಿಸಬೇಕು. ಅರಿಸ್ಟಾಟಲನ ಹೇಳಿಕೆಯಂತೆ ರಾಜ್ಯವೆಂಬುದು ವಿಸ್ತೃತಗೊಂಡ ಕುಟುಂಬ. ಇಪ್ಪತ್ತನೆಯ ಶತಮಾನದಲ್ಲಿ ಒಂದು ಸಮಾಜಕ್ಕೆ, ರಾಷ್ಟ್ರಕ್ಕೆ ಸೇರಿದ ಗೃಹಸ್ಥನ ಹೊಣೆಗಾರಿಕೆ ರಾಷ್ಟ್ರಗಳ ಎಲ್ಲೆಯನ್ನು ಮೀರಿ ಸ್ವಲ್ಪಮಟ್ಟಿಗಾದರೂ ಅಂತರರಾಷ್ಟ್ರೀಯವಾಗಿದೆ. ಹೀಗೆ ಸಂಸಾರಿಯಾದ ಗೃಹಸ್ಥನ ಸಂಬಂಧಗಳು ತುಂಬ ವಿಸ್ತರಿಸಿವೆ. ಸಂಸಾರಿಯಲ್ಲದವನ ಜೀವನ ಸಂಕುಚಿತ, ಜೀವನ ಸಮಸ್ಯೆಗಳೂ ಸಂಕುಚಿತ, ಸಂಸಾರಿಯಾದವನ ಜೀವನ ವಿಶಾಲ, ಅವನ ಸಮಸ್ಯೆಗಳೂ ಅನೇಕ. ಇವನ್ನು ಪರಿಹರಿಸಿಕೊಳ್ಳಲು ಅವನು ತನ್ನ ವ್ಯಕ್ತಿತ್ವವನ್ನು ವಿಶೇಷ ರೀತಿಯಲ್ಲಿ ಬೆಳೆಸಿಕೊಳ್ಳ ಬೇಕಾಗುತ್ತದೆ.

ಸಂಸಾರಿಮಾನವನ ಜೀವನವೇ ವಿಶ್ವದ ಸಾಹಿತ್ಯ. ಕಲೆಗಳು, ಕಸಬುಗಳು, ಧರ್ಮ, ನ್ಯಾಯ, ನೀತಿ ಮುಂತಾದ ಎಲ್ಲದರ ವಿಷಯ. ಅದನ್ನು ಬಿಟ್ಟರೆ ಈ ಎಲ್ಲದರ ವ್ಯಾಪ್ತಿ ತೀರ ಸಂಕುಚಿತವಾಗುತ್ತದೆ, ಅವು ಹುರುಳಿಲ್ಲದೆ ಬಡಕಲಾಗುತ್ತವೆ. ಹೀಗೆ ಜೀವನದಲ್ಲಿ ಮಹತ್ತರ ಪಾತ್ರವಹಿಸಿರುವ ಗೃಹಸ್ಥನ ಜೀವನಾವಸ್ಥೆಗೆ ಭಾರತೀಯ ತತ್ತ್ವವೂ ಮತವೂ ಧರ್ಮಶಾಸ್ತ್ರವೂ ಕಲೆಗಳೂ ತುಂಬ ಪ್ರಾಶಸ್ತ್ಯ ಕೊಟ್ಟಿವೆ. ಭಾರತೀಯ ತಾತ್ತ್ವಿಕರು ಜೀವನವನ್ನು ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ ಮತ್ತು ಸಂನ್ಯಾಸ ಎಂದು ನಾಲ್ಕು ಆಶ್ರಮಗಳಾಗಿ ವಿಂಗಡಿಸಿ ಅವುಗಳಲ್ಲಿ ಗೃಹಸ್ಥ್ಯಕ್ಕೆ ಒಂದು ಮುಖ್ಯ ಸ್ಥಾನವನ್ನು ಕೊಟ್ಟಿದ್ದಾರೆ. ಉಳಿದೆಲ್ಲ ಆಶ್ರಮಗಳಿಗೂ ಅದು ತಳಹದಿ. ಗೃಹಸ್ಥನ ಮಕ್ಕಳು ಗುರು ಮತ್ತು ಗುರುಪತ್ನಿಯ ಕುಟುಂಬಕ್ಕೆ ಸೇರಿದವರಾಗಿ ಬ್ರಹ್ಮಚರ್ಯವನ್ನು ನಡೆಸುತ್ತಾರೆ. ಗೃಹಸ್ಥನಾಗಿ ಜೀವನವನ್ನು ಸಾಂಗವಾಗಿ ನಡೆಸಿದವನೇ ಮುಂದೆ ವಾನಪ್ರಸ್ಥಾಶ್ರಮಿಯಾಗುವನು. ಸಂನ್ಯಾಸಿಯಾಗಿ ಪರಿವ್ರಾಜಕನಾದವನೂ ಮೊದಲಿಗೆ ಗೃಹಸ್ಥನೇ. ಪರಿವ್ರಾಜಕನಾದಾಗ ಅವನು ಭಿಕ್ಷೆ ಪಡೆಯುವುದು ಗೃಹಸ್ಥರ ಕುಟುಂಬದಿಂದ. ಹೀಗೆ ಗೃಹಸ್ಥಾಶ್ರಮದ ಮೇಲೆ ಉಳಿದೆಲ್ಲ ಆಶ್ರಮಗಳೂ ನಿಂತಿವೆ.

ವೇದದ ವಿಭಾಗಗಳಾದ ಮಂತ್ರಗಳು, ಬ್ರಾಹ್ಮಣಗಳು, ಆರಣ್ಯಕಗಳು ಮತ್ತು ಉಪನಿಷತ್ತುಗಳಿಗೂ ಜೀವನದ ಆಶ್ರಮಗಳಿಗೂ ನಿಕಟಸಂಬಂಧವಿದೆ. ಬಾಲಕ ಉಪನಯನದ ಮೂಲಕ ದೀಕ್ಷೆ ಪಡೆದು ಬ್ರಹ್ಮಚಾರಿಯಾದಾಗ ಆತ ತನ್ನ ಶಾಖೆಗೆ ಸಂಬಂಧಿಸಿದ ವೇದ ಮಂತ್ರಗಳನ್ನು ಕಲಿಯಬೇಕು. ಹಿಂದೆ ಬಾಲಕಿಯರಿಗೂ ಉಪನಯನ ರೂಢಿಯಲ್ಲಿತ್ತು. ಹಾರೀತ ಸ್ಮೃತಿ ಸ್ತ್ರೀಯರನ್ನು ಬ್ರಹ್ಮವಾದಿಗಳು ಸದ್ಯೋವಧುಗಳು ಎಂದು ಎರಡು ಬಗೆಯಾಗಿ ವಿಭಾಗ ಮಾಡುತ್ತದೆ. ಬ್ರಹ್ಮವಾದಿಗಳು ಉಪನಯನವಾದ ಮೇಲೆ ವೇದಾಧ್ಯಯನ ನಡಸಿ ಪರಬ್ರಹ್ಮ ಉಪಾಸನೆಯನ್ನು ಕೈಕೊಳ್ಳುತ್ತಿದ್ದರು. ಬೃಹದಾರಣ್ಯಕ ಉಪನಿಷತ್ತಿನ ಗಾರ್ಗಿ ಇಂಥ ಬ್ರಹ್ಮವಾದಿನಿ, ಸದ್ಯೋವಧುಗಳಿಗೆ ವಿವಾಹಸಮಯದಲ್ಲಿ ಅದರ ಅಂಗವಾಗಿ ಮಾತ್ರ ಉಪನಯನ ವಿಧಿಸಲಾಗಿತ್ತು. ಸ್ತ್ರೀಯರೂ ವೇದಾಧ್ಯಯನ ನಡೆಸಿ ಉಪಾಧ್ಯಾಯಾ ಉಪಾಧ್ಯಾಯೀ ಆಚಾರ್ಯಾ ಎಂಬ ಅಧಿಕಾರವನ್ನು ಪಡೆಯುತ್ತಿದ್ದರೆಂದು ಪಾಣಿನಿ ತಿಳಿಸುತ್ತಾನೆ. ಉಪಾಧ್ಯಾಯಾ, ಆಚಾರ್ಯಾ, ಉಪಾಧ್ಯಾಯೀ ಎಂದರೆ ಗುರುಪತ್ನಿಯಲ್ಲ, ಗುರುಪತ್ನಿಯನ್ನು ಆಚಾರ್ಯ, ಉಪಾಧ್ಯಾಯಾ ಎಂದು ಕರೆಯಕೂಡದು. ಗುರುಪತ್ನಿ ಆಚಾರ್ಯಿಣೀ, ಉಪಾಧ್ಯಾಯಿನೀ. ಗುರುವಾದವಳನ್ನು ಆಚಾರ್ಯಾ, ಉಪಾಧ್ಯಾಯಾ ಎಂದೇ ಸಂಬೋಧಿಸುವುದು ರೂಢಿಯಲ್ಲಿತ್ತು. ಪುರ್ವಮೀಮಾಂಸಾ ತತ್ತ್ವಸ್ಥಾಪಕನಾದ ಜೈಮಿನಿ ಶೂದ್ರರೂ ಉಪನಯನ ಮಾಡಿಕೊಂಡು ವೇದಾಧ್ಯಯನ ನಡೆಸಿ, ಗೃಹಸ್ಥರಾಗಿ ಜ್ಯೋತಿಷ್ಟೋಮ ಮುಂತಾದ ಯಜ್ಞಗಳನ್ನು ನಡೆಸಬಹುದೆಂದು ಹೇಳಿರುತ್ತಾನೆ.

ವೇದಾಧ್ಯಯನ ಮುಗಿಸಿ ಸ್ನಾತಕನಾಗಿ ದೇಶಗಳನ್ನು ಸುತ್ತಿ ತನ್ನ ವಿದ್ಯಾ ಪ್ರೌಢಿಮೆಯನ್ನು ತೋರಿಸಿ ಹಣವನ್ನು ಗಳಿಸಿ ಸದ್ಯೋವಧುವನ್ನು ಮದುವೆಯಾಗಿ ವ್ಯಕ್ತಿ ಗೃಹಸ್ಥನಾಗುತ್ತಾನೆ; ಗುರುವಾಗಿ, ಪುರೋಹಿತನಾಗಿ, ಯಾಜ್ಞಿಕನಾಗಿ ಧರ್ಮ, ಅರ್ಥ, ಕಾಮಗಳೆಂಬ (ತ್ರಿವರ್ಗ) ಪುರುಷಾರ್ಥಗಳನ್ನು ಸಾಧಿಸುತ್ತಾನೆ; ವೇದೋಕ್ತ ಯಜ್ಞ ಕಾರ್ಯಗಳನ್ನು ನಡೆಸಿದ ಫಲವಾಗಿ ಜೀವಾಂತ್ಯದಲ್ಲಿ ಸ್ವರ್ಗಸುಖವನ್ನು ಅನುಭವಿಸುತ್ತಾನೆ. ಮೊದಲಲ್ಲಿ ವೇದ ಅಂಗೀಕರಿಸಿದ್ದ ಪುರುಷಾರ್ಥಗಳು ಗೃಹಸ್ಥ ಸಾಧಿಸಬೇಕಾದ ಧರ್ಮ, ಅರ್ಥ ಮತ್ತು ಕಾಮಗಳೆಂಬ ಮೂರೇ ಪುರುಷಾರ್ಥಗಳು. ಸಂನ್ಯಾಸ ನಾಲ್ಕನೆಯ ಆಶ್ರಮವಾಗಿ ಸ್ಥಾಪಿತವಾದದ್ದು. ವೇದದ ಕೊನೆಯ ಭಾಗಗಳು ಅಂದರೆ ಉಪನಿಷತ್ತುಗಳು ಹಿಂದೆ ರೂಢಿಯಲ್ಲಿದ್ದ ಮೂರು ಪುರುಷಾರ್ಥಗಳ ಜೊತೆಗೆ ಮೋಕ್ಷವನ್ನು ನಾಲ್ಕನೆಯ ಪುರುಷಾರ್ಥವಾಗಿ ಸೇರಿಸಿದುವು. ಸ್ವರ್ಗಪ್ರಾಪ್ತಿಯೇ ಮೋಕ್ಷವಲ್ಲ. ಸ್ವರ್ಗಪಡೆದವ ತನ್ನ ಕರ್ಮಫಲ ತೀರಿದ ಮೇಲೆ ಪುನಃ ಈ ಲೋಕದಲ್ಲಿ ಜನ್ಮಪಡೆಯಲೇಬೇಕು. ಮೋಕ್ಷವಾದರೋ ಬ್ರಹ್ಮಸಾಕ್ಷಾತ್ಕಾರದ ಮೂಲಕ ಶಾಶ್ವತ ಬ್ರಹ್ಮಲೋಕಪ್ರಾಪ್ತಿ. ಮುಕ್ತನಾದವನಿಗೆ ಪುನರ್ಜನ್ಮವಿಲ್ಲ. ಗೃಹಸ್ಥನಾದವ ಈ ನಾಲ್ಕನೆಯ ಪುರುಷಾರ್ಥವನ್ನು ಸಾಧಿಸಲು, ಹೆಂಡತಿಯ ಅನುಮತಿ ಪಡೆದು ಸಂನ್ಯಾಸವನ್ನು ಸ್ವೀಕರಿಸುತ್ತಿದ್ದುದು ಸಾಮಾನ್ಯ ಪದ್ಧತಿ. ಗೃಹಸ್ಥನಾಗಿದ್ದ ಯಾಜ್ಞವಲ್ಕ್ಯ ತನ್ನ ಹೆಂಡತಿಯ ಅನುಮತಿ ಪಡೆದು ಸಂನ್ಯಾಸವನ್ನು ಅವಲಂಬಿಸಿದ ಚಿತ್ರವನ್ನು ಬೃಹದಾರಣ್ಯಕ ಉಪನಿಷತ್ತು ರಮ್ಯವಾಗಿ ಚಿತ್ರಿಸಿದೆ. ಉಪನಿಷತ್ತುಗಳ ಕಾಲದಲ್ಲಿ ಬಾಲಸಂನ್ಯಾಸ ಪ್ರಚಾರದಲ್ಲಿದ್ದಂತೆ ಕಂಡುಬರುವುದಿಲ್ಲ. ಈ ಪದ್ಧತಿ ಹುಟ್ಟಿದ್ದು ಬಹುಶಃ ಬುದ್ಧನ ಕಾಲದಲ್ಲಿ, ಉಪನಿಷತ್ತುಗಳಲ್ಲೂ ಕಲ್ಪಸೂತ್ರಗಳ ಗೃಹಸ್ಥನಾಗಿ ಬಾಳಿ ಸಮಾಜಕ್ಕೂ ವಂಶಕ್ಕೂ ಸಕಲ ಪ್ರಾಣಿವರ್ಗಕ್ಕೂ ಸಲ್ಲಿಸಬೇಕಾದ ಕರ್ತವ್ಯಗಳನ್ನು ಸಲ್ಲಿಸಿ ಧರ್ಮವೆಂಬ ಪುರುಷಾರ್ಥವನ್ನು ಸಾಧಿಸಿದ ಗೃಹಸ್ಥನೇ ಮೋಕ್ಷ ಸಾಧನವಾದ ಸಂನ್ಯಾಸಕ್ಕೆ ಅರ್ಹ-ಎಂದು ಸ್ಪಷ್ಟಪಡಿಸುತ್ತವೆ. ಕೆಲವು ಧರ್ಮಸೂತ್ರಗಳು, ಉದಾಹರಣೆಗೆ, ಗೌತಮ ಧರ್ಮಸೂತ್ರ, ಸಂನ್ಯಾಸವನ್ನು ಧಿಕ್ಕರಿಸಿವೆ. ಜೈಮಿನಿಯ ಪುರ್ವಮೀಮಾಂಸಾದರ್ಶನ ಗಾರ್ಹಸ್ಥ್ಯಕ್ಕೆ ಪ್ರಾಧಾನ್ಯ ಕೊಟ್ಟು ಸಂನ್ಯಾಸವನ್ನು ನಿರಾಕರಿಸುತ್ತದೆ. ಅದರ ಪ್ರಸಿದ್ಧ ಅನುಯಾಯಿಯಾಗಿದ್ದ ಮಂಡನಮಿಶ್ರ ಸಂನ್ಯಾಸಿಗಳಾದ ಶಂಕರಾಚಾರ್ಯರು ತನ್ನ ಬಳಿಗೆ ಬಂದಾಗ ಅವರನ್ನು ತಿರಸ್ಕಾರದಿಂದ ಕಾಣುತ್ತಾನೆ. ಅನಂತರ ವಾದದಲ್ಲಿ ಸೋತು ಸಂನ್ಯಾಸವನ್ನು ಅವಲಂಬಿಸುತ್ತಾನೆ. ಶಂಕರಾಚಾರ್ಯರ ಅನಂತರ ಹುಟ್ಟಿದ ಶ್ರೀವೈಷ್ಣವ ಮತ್ತು ಮಾಧ್ವವೇದಾಂತಪಕ್ಷದವರೂ ಗೃಹಸ್ಥರಾಗಿ ಬಾಳಿ ಸಂನ್ಯಾಸವನ್ನು ಸ್ವೀಕರಿಸುವುದೇ ಸಾಮಾನ್ಯ. ಧರ್ಮವನ್ನು ಬಿಟ್ಟು ಮೋಕ್ಷವಿಲ್ಲ. ಗೃಹಸ್ಥಧರ್ಮವೇ ಉಳಿದೆಲ್ಲಕ್ಕೂ ಆಧಾರ. ಮೋಕ್ಷಾರ್ಥಿಯಾದ ಸಂನ್ಯಾಸಿಯೂ ಧರ್ಮಬಾಹಿರನಲ್ಲ. ಅವನೂ ಸರ್ವರಿಗೆ ಸಾಮಾನ್ಯವಾದ ಸಾಧಾರಣ ಧರ್ಮವನ್ನು ಪಾಲಿಸಬೇಕು.

ಗೃಹಸ್ಥನ ಸಾಧಾರಣ ಧರ್ಮದ ಬಗ್ಗೆ ಯಾಜ್ಞವಲ್ಕ್ಯ ಸ್ಮೃತಿ ಹೀಗೆ ಹೇಳಿದೆ. ಅಹಿಂಸಾ ಸತ್ಯಮಸ್ತೇಯಮ್ ಶೌಚಮ್ ಇಂದ್ರಿಯನಿಗ್ರಹಃ ದಾನಂ ಧರ್ಮೋ ದಯಾ ಶಾಂತಿಃ ಸರ್ವೇಷಾಂ ಧರ್ಮಸಾಧನಮ್ ಅಹಿಂಸೆ, ಸತ್ಯವಚನ, ಪರಿಶುದ್ಧತೆ, ದೇಹ ಮತ್ತು ಮನಸ್ಸುಗಳ ಶುಚಿ, ಇಂದ್ರಿಯಗಳ ಹತೋಟಿ, ದಾನ, ಸಂಯಮ, ದಯೆ, ಶಾಂತಿವರ್ತನೆ-ಇವು ಎಲ್ಲರ ಧರ್ಮ ಸಾಧನೆಗೂ ಅಗತ್ಯವಾದುವು. ಕಾಲ, ದೇಶ ಜಾತಿ, ಕುಲ, ಗೋತ್ರ, ಬುಡಕಟ್ಟು, ಜನಾಂಗ, ಬ್ರಹ್ಮಚಾರಿ, ಗೃಹಸ್ಥ, ಸಂನ್ಯಾಸಿ ಮುಂತಾದ ಭೇದಗಳ ಉಪಾಧಿಗೆ ಒಳಪಡದ ಸಾರ್ವಜನಿಕ ಮಾನವ ಧರ್ಮವೇ ಎಲ್ಲರಿಗೂ ಸಾಧಾರಣವಾದ ಧರ್ಮ.

ಮೇಲೆ ಹೇಳಿದ ಸಾಧಾರಣ ಕರ್ತವ್ಯಗಳಲ್ಲದೆ ಗೃಹಸ್ಥಾಶ್ರಮಕ್ಕೆ ವಿಶಿಷ್ಟವಾದ ಕರ್ಮಗಳಿವೆ. ಇವು ಮೂರು ಬಗೆಯಾಗಿವೆ-ನೈಮಿತ್ತಿಕ ಕರ್ಮಗಳು, ನಿತ್ಯ ಕರ್ಮಗಳು ಮತ್ತು ಐಚ್ಛಿಕ ಕರ್ಮಗಳು-ಎಂದು. ಗೃಹಸ್ಥ ಆಚರಿಸಬೇಕಾದ ನೈಮಿತ್ತಿಕ ಕರ್ಮಗಳನ್ನು ಗೃಹ್ಯಸೂತ್ರಗಳು ವಿಸ್ತಾರವಾಗಿ ವರ್ಣಿಸಿವೆ. ಈ ಕರ್ಮಗಳು ಜೀವನದುದ್ದಕ್ಕೂ ಬೇರೆ ಬೇರೆ ಕಾಲಗಳಲ್ಲಿ ಆಚರಿಸಬೇಕಾದ ಸಂಸ್ಕಾರಗಳಿಗೆ ಸಂಬಂಧಪಟ್ಟವು. ವಿವಾಹ ಗೃಹಸ್ಥಾಶ್ರಮಕ್ಕೆ ಸೇರಲು ಅಗತ್ಯವಾದ ಸಂಸ್ಕಾರ. ವಿವಾಹಗಳು ಎಂಟು ಬಗೆಯಾಗಿವೆ. ಅವುಗಳಲ್ಲಿ ಶ್ರೇಷ್ಠವಾದದ್ದು ಬ್ರಾಹ್ಮೀವಿವಾಹಪದ್ಧತಿ. ಇದು ಗಂಡು ಹೆಣ್ಣುಗಳು ಮತ್ತು ಅವರ ಹತ್ತಿರ ಸಂಬಂಧಿಗಳ ಅನುಮೋದನೆಯಿದ ವೇದೋಕ್ತವಾಗಿ, ಅಗ್ನಿ ಸಾಕ್ಷಿಯಾಗಿ ನಡೆಯುವ ಕರ್ಮ. ವಿವಾಹಾನಂತರ ನಡೆಯುವ ಕರ್ಮ ಗರ್ಭಾಧಾನ. ಸೋಮದೇವತೆಯನ್ನು ಸ್ತೋತ್ರಮಾಡಿ ಅವನಿಗೆ ಹವಿಸ್ಸನ್ನರ್ಪಿಸಿ ಅವನನ್ನು ಒಲಿಸಿಕೊಂಡು ದಂಪತಿಗಳು ಈ ಕರ್ಮದಲ್ಲಿ ಸಹಭಾಗಿಗಳಾಗುತ್ತಾರೆ. ಇಲ್ಲಿ ವ್ಯಕ್ತಿ ಸ್ವಇಚ್ಛೆಯಂತೆ ನಡೆಯುವಂತಿಲ್ಲ. ಕೇವಲ ಇಂದ್ರಿಯ ಸುಖವೇ ಸಂಭೋಗದ ಅಂತಿಮ ಗುರಿಯಲ್ಲ. ಅದು ಧರ್ಮ ಸಾಧನವಾದ ನಿಯೋಜಿತ ಕರ್ತವ್ಯ. ದಂಪತಿಗಳು ತಮ್ಮ ವಂಶೋದ್ಧಾರಕ್ಕೆ ಸಲ್ಲಿಸಬೇಕಾದ ಕರ್ತವ್ಯ ಇದು. ಸಂತಾನವಿಲ್ಲದ ದಂಪತಿಗಳಿಗೆ ಸದ್ಗತಿ ಇಲ್ಲ; ಅವರ ಪಿತೃಗಳಿಗೆ ಸ್ವರ್ಗದಲ್ಲಿ ಏಳಿಗೆ ಇಲ್ಲ. ಆದ್ದರಿಂದ ದಂಪತಿಗಳು ಸಂತಾನವನ್ನು ಪಡೆಯಬೇಕೆಂದು ವೇದ ಆಜ್ಞಾಪಿಸಿದೆ. ಗರ್ಭಧಾರಣೆಯಾದ ಮೇಲೆ ಐದನೆಯ ಅಥವಾ ಏಳನೆಯ ತಿಂಗಳಲ್ಲಿ ಆಚರಿಸಬೇಕಾದ ಕರ್ಮ ಸೀಮಂತ. ಶಿಶು ಜನಿಸಿದ ಮೇಲೆ ಹನ್ನೊಂದನೆಯ ದಿನ ದಂಪತಿಗಳು ಶಿಶುವಿಗೆ ನಡೆಸಬೇಕಾದ ಕರ್ಮ ನಾಮಕರಣ. ಶಿಶುವಿಗೆ ಒಂಬತ್ತು ತಿಂಗಳಾದ ಮೇಲೆ ನಡೆಸುವ ಕರ್ಮ ಅನ್ನಪ್ರಾಶನ. ಅದಕ್ಕೆ ಮೂರು ವರ್ಷ ತುಂಬಿದಾಗ ಏರ್ಪಡಿಸುವ ಕರ್ಮ ಚೌಲ. ಏಳು ವರ್ಷತುಂಬಿದಾಗ ಏರ್ಪಡಿಸುವ ಕರ್ಮ ಉಪನಯನ. ಈಗ ಬಾಲಕರಿಗೆ ಮಾತ್ರ ಉಪನಯನವನ್ನು ಮಾಡುವುದು ರೂಢಿಯಲ್ಲಿದೆ. ಹಿಂದೆ ಹುಡುಗಿಯರಿಗೂ ಉಪನಯನ ನಡೆಯುತ್ತಿತ್ತೆಂಬುದನ್ನು ಈಗಾಗಲೇ ತಿಳಿಸಿದೆ. ಉಪನಯನ ಅತ್ಯಂತ ಮುಖ್ಯವಾದ ಸಂಸ್ಕಾರ. ಅಧ್ಯಾತ್ಮಜೀವನವನ್ನು ಪ್ರವೇಶಿಸಲು ಅದು ಮೊದಲನೆಯ ದ್ವಾರ. ಈ ಎಲ್ಲ ಸಂಸ್ಕಾರಗಳಿಗೆ ಸೇರಿದ ಕರ್ಮಗಳು ಗೃಹಕರ್ಮಗಳು. ಜೀವನದ ಹಲವು ಘಟ್ಟಗಳಲ್ಲಿ ಮಾಡಬೇಕಾದ ನೈಮಿತ್ತಿಕ ಕರ್ಮಗಳಿವು.

ಗೃಹಸ್ಥ ಯಾವುದೊಂದು ಫಲಾಪೇಕ್ಷೆ ಇಲ್ಲದೆ ನಿತ್ಯವೂ ಮಾಡಬೇಕಾದ ಕರ್ಮಗಳೇ ನಿತ್ಯಕರ್ಮಗಳು-ತ್ರಿಕಾಲ ಸಂಧ್ಯಾವಂದನೆ, ಬೆಳಗ್ಗೆ ಮತ್ತು ಸಂಜೆ ನಡೆಸಬೇಕಾದ ಅಗ್ನಿಹೋತ್ರ, ವರ್ಷದುದ್ದಕ್ಕೂ ಗೃಹಾಗ್ನಿ ಆರದಂತೆ ಅದನ್ನು ಪೋಷಿಸುವುದು ಅವನ ಆದ್ಯ ಕರ್ತವ್ಯವಾಗಿತ್ತು. ಅದು ಗೃಹಸ್ಥ ನಿತ್ಯವೂ ಮಾಡಬೇಕಾದ ಪಂಚಮಹಾಯಜ್ಞಗಳಲ್ಲಿ ಒಂದು. ವೇದಾಧ್ಯಯನ, ಅತಿಥಿಸತ್ಕಾರ, ಪಿತೃತರ್ಪಣ, ಮೃಗಪಕ್ಷಿಗಳಿಗೆ ಆಹಾರ ಕೊಡುವುದು (ಭೂತಯಜ್ಞ)-ಈ ನಾಲ್ಕು ಇತರ ಮಹಾಯಜ್ಞಗಳು. ಈ ಪಂಚಮಹಾ ಯಜ್ಞಗಳನ್ನು ಸಾಂಗವಾಗಿ ನೆರವೇರಿಸಲು ಗೃಹಸ್ಥ ದಿನದ ಹೆಚ್ಚು ಭಾಗವನ್ನು ಮೀಸಲಾಗಿಡಬೇಕಾಗಿತ್ತು.

ನಿತ್ಯ, ನೈಮಿತ್ತಿಕ ಕರ್ಮಗಳಲ್ಲದೆ ಗೃಹಸ್ಥ ತನ್ನ ಜೀವನೋಪಾಯಕ್ಕಾಗಿ ಅವಲಂಬಿಸಿದ ಪೌರೋಹಿತ್ಯ ಉಪಾಧ್ಯಾಯವೃತ್ತಿ, ವೈದ್ಯಕೀಯವೃತ್ತಿ, ಸಾಹಿತ್ಯ, ಸಂಗೀತ ಮುಂತಾದ ಕಲೆಗಳಿಗೆ ಸಂಬಂಧಪಟ್ಟ ಕರ್ತವ್ಯಗಳು- ಇವು ಐಚ್ಛಿಕ ಕರ್ತವ್ಯಗಳು. ಜೊತೆಗೆ ಬಗೆಬಗೆಯ ಇಷ್ದಸಿದ್ಧಿಗಳಿಗಾಗಿ ಆತ ಕೈಗೊಳ್ಳುವ ಯಜ್ಞಕಾರ್ಯಗಳೂ ಐಚ್ಛಿಕ ಕರ್ಮಗಳೇ.

ಮೊದಲಲ್ಲಿ ಗೃಹಸ್ಥಾಶ್ರಮದ ಪುರುಷಾರ್ಥಗಳು ಧರ್ಮಾರ್ಥಕಾಮಗಳೆಂಬ ಮೂರೇ ಆಗಿದ್ದವು. ಮೋಕ್ಷವೆಂಬ ನಾಲ್ಕನೆಯ ಪುರುಷಾರ್ಥ ಹುಟ್ಟಿದಾಗ ಆ ಮೋಕ್ಷಸಿದ್ಧಿಗೆ ಸಂನ್ಯಾಸ ಅಗತ್ಯವೆಂದು ಕೆಲವರು ಭಾವಿಸಿದರು. ಗೃಹಸ್ಥನಾಗಿದ್ದೇ ಮೋಕ್ಷಪಡೆಯಬಹುದೆಂದು ಇನ್ನು ಕೆಲವರು ಭಾವಿಸಿದರು. ಈ ನಾಲ್ಕನೆಯ ಪುರುಷಾರ್ಥ ಉಪನಿಷತ್ತುಗಳಲ್ಲಿ ಕಾಣಿಸಿಕೊಂಡಾಗ, ಗೃಹಸ್ಥರಲ್ಲೂ ಬೃಹ್ಮ ಸಾಕ್ಷಾತ್ಕಾರ ಪಡೆದವರಿದ್ದರು. ರಾಜನಾದ ಜನಕ, ಗಾಡಿಯನ್ನು ತಯಾರಿಸುತ್ತಿದ್ದ ರೈಕ್ವ ಇವರು ಗೃಹಸ್ಥರಾಗಿದ್ದೇ ಮೋಕ್ಷ ಪಡೆದರು. ಮಹಾಭಾರತ ಮತ್ತು ಪುರಾಣಗಳಲ್ಲಿ ಗೃಹಸ್ಥರಾದ ಹೆಂಗಸರೂ ಗಂಡಸರೂ ಮೋಕ್ಷ ಪಡೆದ ನಿದರ್ಶನಗಳು ಅನೇಕವಿವೆ. ಈ ರೀತಿ ಗೃಹಸ್ಥನ ಜೀವನ ಸಕಲ ಪುರುಷಾರ್ಥಗಳನ್ನು ಸಾಧಿಸಬಹುದಾದ ಸುವ್ಯವಸ್ಥಿತವಾದ ತುಂಬುಜೀವನ.

ಹಿಂದಿನ ರೀತಿಯ ಗಾರ್ಹಸ್ಥ್ಯ ಈಗ ಅಪುರ್ವವೆನಿಸಿದೆ. ಕೆಲವು ವೈದಿಕ ಕುಟುಂಬಗಳನ್ನು ಬಿಟ್ಟರೆ ಉಳಿದವರಲ್ಲಿ ಅರ್ಥಕಾಮಗಳಿಗೇ ಹೆಚ್ಚು ಬೆಲೆ. ಹಿಂದೆ ಸ್ತ್ರೀಯರಿಗೆ ಮದುವೆಯ ಜೊತೆಯಲ್ಲೇ ಉಪನಯನವಾಗುತ್ತಿದ್ದಂತೆ ಈಗ ಪ್ರಾಯಕ್ಕೆ ಬಂದ ಪುರುಷರಿಗೆ ಉಪನಯನ ನಡೆಯುತ್ತಿದೆ. ನಿತ್ಯ ಮತ್ತು ನೈಮಿತ್ತಿಕ ಕರ್ಮಗಳ ಮತ್ತು ಪಂಚಮಹಾಯ್ಞಗಳ ಆಚರಣೆ ನಿಂತುಹೋಗಿದೆ. ಇಂದಿನ ಧರ್ಮ ವಿಶೇಷವಾಗಿ ಲೌಕಿಕ ಧರ್ಮವಾಗಿ ಪರಿವರ್ತನೆಯಾಗಿದೆ. ಆದರೂ ಪಾಶ್ಚಾತ್ಯ ದೇಶಗಳಂತೆ ಭಾರತದಲ್ಲಿ ಕುಟುಂಬ ಜೀವನ ಮುರಿದುಬೀಳುತ್ತಿಲ್ಲ. ಈಗಿನ ಗೃಹಸ್ಥರ ಮತೀಯ ಕರ್ತವ್ಯಗಳು ಸಂಕುಚಿತವಾದರೂ ಸಾಮಾಜಿಕ, ರಾಜಕೀಯ ಕರ್ತವ್ಯಗಳು ವಿಸ್ತರಿಸಿವೆ, ನೈತಿಕ ದೃಷ್ಟಿ ಉದಾರವೂ ವಿಶಾಲವೂ ಆಗಿದೆ. ಸಂನ್ಯಾಸಕ್ಕಿಂತಲೂ ಈಗ ಗಾರ್ಹಸ್ಥ್ಯಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದಿದೆ.