ಧನಂಜಯ ರಾಮಚಂದ್ರ ಗಾಡಗೀಳ

ಒಬ್ಬ ಭಾರತೀಯ ಅರ್ಥಶಾಸ್ತ್ರಜ್ಞ, ಸಂಸ್ಥೆಯ ಬಿಲ್ಡರ್ ಮತ್ತು ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದರು.
(ಗಾಡಗೀಳ, ಧನಂಜಯ ರಾಮಚಂದ್ರ ಇಂದ ಪುನರ್ನಿರ್ದೇಶಿತ)

ಧನಂಜಯ ರಾಮಚಂದ್ರ ಗಾಡಗೀಳ, (1901-71) ಭಾರತದ ಒಬ್ಬ ವಿಚಾರಶೀಲ ಲೇಖಕ, ಅರ್ಥಶಾಸ್ತ್ರಜ್ಞ,

ಗಾಡಗೀಳ, ಧನಂಜಯ ರಾಮಚಂದ್ರ

ಜನನ 1901ರ ಏಪ್ರಿಲ್ 10 ರಂದು, ಮಹಾರಾಷ್ಟ್ರದ ನಾಸಿಕದಲ್ಲಿ. ನಾಗಪುರದ ಪಟವರ್ಧನ್ ಪ್ರೌಢಶಾಲೆಯಲ್ಲೂ ಕೇಂಬ್ರಿಜಿನ ಕ್ವೀನ್ಸ್ ಕಾಲೇಜಿನಲ್ಲೂ ವ್ಯಾಸಂಗಮಾಡಿ ಎಂ.ಎ., ಎಂ.ಲಿಟ್. ಪದವಿಗಳಿಸಿದರು. ಅರ್ಥಶಾಸ್ತ್ರ ಇವರ ವಿಶೇಷ ವ್ಯಾಸಂಗ ವಿಷಯ. ಇವರ ವಿದ್ವತನ್ನು ಗುರುತಿಸಿ ನಾಗಪುರ, ಕರ್ನಾಟಕ ಹಾಗೂ ಆಗ್ರ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಿ.ಲಿಟ್. ಪದವಿ ನೀಡಿದ್ದವು.

ಗಾಡಿಗೀಳರು ವಿದೇಶದಿಂದ ಹಿಂದಿರುಗಿದ ಅನಂತರ ಮುಂಬಯಿ ಸರ್ಕಾರದ ಹಣಕಾಸು ಶಾಖೆಯಲ್ಲಿ ಸುಮಾರು ಎರಡು ವರ್ಷ ಕೆಲಸಮಾಡಿದರು. ಅನಂತರ ಸೂರತ್ನ ಕಾಲೇಜೊಂದರಲ್ಲಿ 1925ರಿಂದ 1930ರ ವರೆಗೆ ಪ್ರಿನ್ಸಿಪಾಲರಾಗಿದ್ದರು. 1930 ರಿಂದ 1966ರ ವರೆಗೆ ಪುಣೆಯ ಗೋಖಲೆ ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದರು. 1966-67ರಲ್ಲಿ ಅವರು ಪುಣೆ ವಿಶ್ವವಿದ್ಯಾಲಯದ ಕುಲಪತಿ ಗಳಾಗಿದ್ದರು. ಇವರ ತಜ್ಞತೆಯನ್ನು ಗುರುತಿಸಿ ಭಾರತ ಸರ್ಕಾರ ಇವರನ್ನು ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ 1967ರಲ್ಲಿ ನೇಮಿಸಿತು. ಗಾಡಗೀಳರು ಆ ಅವಧಿಯಲ್ಲಿ ಭಾರತದ ವಾರ್ಷಿಕ ಯೋಜನೆಗಳನ್ನು ಮತ್ತು ನಾಲ್ಕ ನೆಯ ಪಂಚವಾರ್ಷಿಕ ಯೋಜನೆ ಯನ್ನು ರೂಪಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ಗಾಡಗೀಳರು ಅನೇಕ ವಿಚಾರಣಾ ಸಮಿತಿಗಳ ಸದಸ್ಯರಾಗಿ ಕೆಲಸ ಮಾಡಿದರು. ಆದರೆ ಎಲ್ಲರಂತೆ ಇವರು ಸಮಿತಿಯ ಕೆಲಸ ಮುಗಿದ ಅನಂತರ ಆ ವಿಷಯವನ್ನು ಕೈಬಿಟ್ಟಂಥವರಲ್ಲ. ಸಮಿತಿ ಪರಿಶೀಲಿಸಿದ ವಿಷಯದ ವರದಿ ಒಪ್ಪಿಸಿದ ಅನಂತರವು ಆ ಬಗ್ಗೆ ಮಥನ ಮುಂದುವರಿಸಿ ಇವರು ತಮ್ಮ ಅಭಿಪ್ರಾಯಗಳನ್ನು ಪುಸ್ತಕ ಇಲ್ಲವೆ ಲೇಖನಗಳ ರೂಪದಲ್ಲಿ ಪ್ರಕಟಿಸುತ್ತಿದ್ದರು.

1971ರ ಮೇ ತಿಂಗಳಲ್ಲಿ ಯೋಜನಾ ಆಯೋಗವನ್ನು ಬಿಟ್ಟು ದೆಹಲಿಯಿಂದ ಹಿಂದಿರುಗುತ್ತಿದ್ದಾಗ ಹಾದಿಯಲ್ಲೇ ತೀರಿಕೊಂಡರು.

ಗಾಡಗೀಳರ ಪ್ರಾರಂಭದ ಬರೆಹ ಮರಾಠಿಯಲ್ಲಿತ್ತು. ಸಾಮಾನ್ಯ ಜನಕ್ಕೆ ಅರ್ಥವಾಗುವ ಭಾಷೆಯಲ್ಲಿ ಬರೆದ ಅರ್ಥಶಾಸ್ತ್ರಜ್ಞರ ಪೈಕಿ ಗಾಡಗೀಳರೂ ಒಬ್ಬರು. ಅವರು ಭಾರತಕ್ಕೆ ಹಿಂದಿರುಗಿದ ಕೂಡಲೆ ಭಾರತದ ಆರ್ಥಿಕ ಸಮಸ್ಯೆಗಳ ಬಗ್ಗೆ ಬರೆಯಲು ಪ್ರಾರಂಭಿಸಿ ತಮ್ಮ ಕೊನೆಗಾಲದ ವರೆಗೂ ಆ ಕೆಲಸ ಮುಂದುವರಿಸಿದರು. ಈ ಕಾರಣದಿಂದ ಇವರು ಭಾರತೀಯ ಅರ್ಥಶಾಸ್ತ್ರವನ್ನು ಬೆಳೆಸಿದವರಲ್ಲಿ ಒಬ್ಬರೆಂದು ಪರಿಗಣಿತರಾಗಿದ್ದಾರೆ. 1924ರಲ್ಲಿ ಇವರು ಬರೆದ ದಿ ಇಂಡಸ್ಟ್ರಿಯಲ್ ಎವಲ್ಯೂಷನ್ ಆಫ್ ಇಂಡಿಯ ಎಂಬುದು ಭಾರತದ ಆರ್ಥಿಕ ಇತಿಹಾಸಜ್ಞರಿಗೆ ಉಪಯುಕ್ತವಾದ ಗ್ರಂಥ, ಇವರ ಇಪ್ಪತ್ತು ಗ್ರಂಥಗಳ ಪೈಕಿ, ರೆಗ್ಯುಲೇಷನ್ ಆಫ್ ವೇಜಸ್ ಅಂಡ್ ಅದರ್ ಪ್ರಾಬ್ಲೆಮ್ಸ್ ಆಫ್ ಇಂಡಿಯ, ದಿ ಇಕೊನಾಮಿಕ್ ಎಫೆಕ್ಟ್ ಆಫ್ ಇರಿಗೇಷನ್, ದಿ ಇಕೊನಾಮಿಕ್ ಪಾಲಿಸಿ ಅಂಡ್ ಡೆವಲಪ್ಮೆಂಟ್- ಇವು ಮುಖ್ಯವಾದವು. ಭಾರತದ ಆರ್ಥಿಕ ಸಮಸ್ಯೆಗಳ ಬಗ್ಗೆ ಅವರಿಗಿದ್ದ ವಿದ್ವತ್ತಿನ ಪರಿಣಾಮವಾಗಿ ಅವರು ಭಾರತೀಯ ಅರ್ಥಶಾಸ್ತ್ರಜ್ಞರ ಸಮ್ಮೇಳನದ ಅಧ್ಯಕ್ಷರಾಗಿ 1940ರಲ್ಲೂ ಭಾರತೀಯ ಕೃಷಿ ಅರ್ಥಶಾಸ್ತ್ರಜ್ಞರ ಸಮ್ಮೇಳನದ ಅಧ್ಯಕ್ಷರಾಗಿ 1954ರಲ್ಲೂ ಆಯ್ಕೆಗೊಂಡರು.

ಗಾಡಗೀಳರು ಭಾರತದ ಆರ್ಥಿಕ ಸಮಸ್ಯೆಗಳ ಅಧ್ಯಯನದ ಜೊತೆಗೆ ರಾಜಕೀಯ ಸಮಸ್ಯೆಗಳತ್ತಲೂ ಗಮನಕೊಟ್ಟಿದ್ದರು. ಗೋಖಲೆ ಅಧ್ಯಯನ ಸಂಸ್ಥೆಯ ಧ್ಯೇಯ ಭಾರತದ ಇತ್ತೀಚಿನ ಆರ್ಥಿಕ ಹಾಗೂ ರಾಜಕೀಯ ಸಮಸ್ಯೆಗಳ ಅಧ್ಯಯನವಾಗಿದ್ದುದು ಇವರ ಈ ಆಸಕ್ತಿಗೆ ಕಾರಣ. ಈ ಸಂಸ್ಥೆಯ ನಿರ್ದೇಶಕರಾಗಿ ಇವರು ಸ್ವಾಭಾವಿಕ ವಾಗಿಯೇ ರಾಜಕೀಯ ಸಮಸ್ಯೆಗಳ ಅಧ್ಯಯನವನ್ನೂ ಕೈಗೊಳ್ಳಬೇಕಾಯಿತು. 1942ರಲ್ಲಿ ಭಾರತಕ್ಕೆ ಬಂದಿದ್ದ ಕ್ರಿಫ್ಸ್ ಆಯೋಗದ ಅನಂತರ ಇವರು ಫೆಡರೇಟಿಂಗ್ ಇಂಡಿಯ ಎಂಬ ಗ್ರಂಥ ರಚಿಸಿದರು. ಅನಂತರ ಭಾರತದ ರಾಷ್ಟ್ರೀಯ ಕಾಂಗ್ರೆಸಿನ ಸಂವಿಧಾನರಚನಾ ಮಂಡಳಿಯ ಸದಸ್ಯರಾಗಿದ್ದರು. ಭಾರತದ ಸಂವಿಧಾವನ್ನು ಕುರಿತು ಅನೇಕ ಲೇಖನಗಳನ್ನು ಬರೆದರು. ರಾಜಕೀಯ ಸಮಸ್ಯೆಗಳ ಬಗ್ಗೆ ಇವರು ಬರೆದದ್ದು ಸಾಮಯಿಕವಾದ್ದು. ಆದರೆ ಇವರ ಮುಖ್ಯ ಕೊಡುಗೆಯೆಲ್ಲ ಅರ್ಥಶಾಸ್ತ್ರದ ಕ್ಷೇತ್ರದಲ್ಲಿ. ಗೋಖಲೆ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿ ಇವರು ಅನೇಕ ಆರ್ಥಿಕ ಸಮಸ್ಯೆಗಳನ್ನು ವಿಶ್ಲೇಷಿಸಿ ಸೂಕ್ತ ಸಲಹೆಗಳನ್ನೂ ನೀಡುವುದರಲ್ಲಿ ಮಗ್ನರಾಗಿದ್ದರು. ಹೀಗೆ ಇವರ ನಿರ್ದೇಶನದ ಮೊದಲ ದಶಕದಲ್ಲಿಯೇ ಇವರು ಹಣ್ಣುಹಂಪಲು ಮಾರುಕಟ್ಟೆ, ಮೋಟಾರು ಬಸ್ಸು ಸಾರಿಗೆ, ಕೃಷಿ ಉದ್ಯಮ ಇವುಗಳ ಅವಲೋಕನಗಳನ್ನೂ ಪುಣೆ ಹಾಗೂ ಷೋಲಾಪುರ ನಗರಗಳ ಅವಲೋಕನಗಳನ್ನೂ ಮುಗಿಸಿದ್ದರು.

ಮುಂಬಯಿ ಕಾರ್ಮಿಕರ ವಿಚಾರಣಾ ಸಮಿತಿಯ (1937-40) ಸದಸ್ಯರಾಗಿ ಕೆಲಸ ಮಾಡಿದ ಅನಂತರ ಕಾರ್ಮಿಕ ಸಮಸ್ಯೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ರೆಗ್ಯುಲೇಷನ್ ಆಫ್ ವೇಜಸ್ ಅಂಡ್ ಅದರ್ ಪ್ರಾಬ್ಲೆಮ್ಸ್ ಆಫ್ ಇಂಡಸ್ಟ್ರಿಯಲ್ ಲೇಬರ್ ಇನ್ ಇಂಡಿಯ ಎಂಬ ಪುಸ್ತಕದಲ್ಲಿ ವ್ಯಕ್ತಪಡಿಸಿದರು. ಸಾರಿಗೆ ಸೇವೆಗಳ ರಾಷ್ಟ್ರೀಯ ಯೋಜನಾಮಂಡಳಿಯ ಉಪಸಮಿತಿಯ (1939-40) ಅಧ್ಯಕ್ಷರಾಗಿ ಕೆಲಸ ಮಾಡಿದ ಅನಂತರ ರಸ್ತೆ ಸಾರಿಗೆ ರಾಷ್ಟ್ರೀಕರಣ, ಸಾರಿಗೆ ಸಂಘಟನೆ ಮುಂತಾದ ವಿಷಯಗಳನ್ನು ಕುರಿತು ಬರೆದರು. ಹಾಗೆಯೇ ಮಹಾರಾಷ್ಟ್ರ ರಾಜ್ಯದ ಆಹಾರ ಮತ್ತು ಕೃಷಿ ವಸ್ತುಗಳ ಸಲಹಾಮಂಡಳಿ ಮತ್ತು ಭಾರತ ಸರ್ಕಾರದ ಆಹಾರ ಧಾನ್ಯಗಳ ಧೋರಣಾ ಸಮಿತಿ ಇವುಗಳ ಸದಸ್ಯರಾಗಿದ್ದು ಆಹಾರ ಬೆಲೆಗಳ ಧೋರಣೆ, ಆಹಾರ ಧಾನ್ಯಗಳ ವಸೂಲಿ ಮೊದಲಾದ ವಿಷಯಗಳನ್ನು ಕುರಿತು ಬರೆದರು.

ಆದರೆ ಇವರು ಉದ್ದಕ್ಕೂ ಆಸ್ಥೆ ತೋರಿಸಿದಂಥ ವಿಷಯಗಳೆಂದರೆ ಗ್ರಾಮಾಂತರ ಸಮಸ್ಯೆಗಳು ಮತ್ತು ಆರ್ಥಿಕ ಯೋಜನೆಗಳು. ಮಹಾರಾಷ್ಟ್ರ ಸರ್ಕಾರ ಒಕ್ಕಲುತನ ಹಾಗೂ ರೈತರ ಸಾಲದ ಬಗ್ಗೆ ಕಾಯಿದೆ ಹೊರಡಿಸುವ ಸಂದರ್ಭದಲ್ಲಿ ಗಾಡಗೀಳರು ಇವೆರಡರ ಬಗ್ಗೆಯೂ ಅನೇಕ ಲೇಖನಗಳನ್ನು ಬರೆದರು. ಒಕ್ಕಲುತನ ಹಾಗೂ ಭೂಸುಧಾರಣೆ ಬಗ್ಗೆ ತಮಗೆ ಇದ್ದ ಅಭಿಪ್ರಾಯಗಳನ್ನು ಅವರು ಭಾರತೀಯ ಕೃಷಿ ಅರ್ಥಶಾಸ್ತ್ರಜ್ಞರ ಸಮ್ಮೇಳನದಲ್ಲಿ (1954) ತಮ್ಮ ಅಧ್ಯಕ್ಷಭಾಷಣದಲ್ಲಿ ವ್ಯಕ್ತ ಪಡಿಸಿದರು.

ಸಹಕಾರಿ ರಂಗಕ್ಕೆ ಇವರ ಕೊಡುಗೆ

ಬದಲಾಯಿಸಿ

ಗ್ರಾಮಾಂತರ ಸಹಕಾರದ ಬಗ್ಗೆ ಇವರ ಕೊಡುಗೆ ಅಮೂಲ್ಯವಾದ್ದು. ಸಹಕಾರ ಸಂಸ್ಥೆಗಳೊಡನೆ ಇವರಿಗಿದ್ದ ಸಂಪರ್ಕವೇ ಇದಕ್ಕೂ ಕಾರಣವಾಯಿತು. ಇವರು ಮೊದಲು ಪುಣೆ ಜಿಲ್ಲೆಯ ಕೇಂದ್ರೀಯ ಸಹಕಾರ ಬ್ಯಾಂಕಿನ ಸದಸ್ಯರಾಗಿ, ಅನಂತರ ಅದರ ಅಧ್ಯಕರಾಗಿ ದುಡಿದರು. ಪುಣೆ ಜಿಲ್ಲೆಯ ಕೇಂದ್ರೀಯ ಮಾರಾಟ ಹಾಗೂ ಕೊಳ್ಳುವ ಸಂಘದ ಅಧ್ಯಕ್ಷರಾಗಿದ್ದಾಗ (1945-50) ಸಹಕಾರ ಸಂಘಗಳ ಮೂಲಕ ಆವಶ್ಯಕ ವಸ್ತುಗಳನ್ನು ಬಳಕೆದಾರರಿಗೆ ಒದಗಿಸಿ ಬೆಲೆ ನಿಯಂತ್ರಣವನ್ನು ಕೈಗೊಳ್ಳಬಹುದೆಂಬುದಾಗಿ ಅವರು ಪ್ರತಿಪಾದಿಸಿದರು. ಭಾರತ ಸರ್ಕಾರದ ಕೃಷಿ ಧೋರಣಾ ಮಂಡಳಿ ಕೃಷಿ ಹಣಕಾಸು ಉಪಸಮಿತಿಯ ಅಧ್ಯಕ್ಷರಾಗಿ ಗ್ರಾಮಾಂತರ ಸಹಕಾರಿ ಹಣಕಾಸಿನ ಯೋಜನೆಯನ್ನು ರೂಪಿಸಿದ್ದರು. ಇವರು ಗ್ರಾಮಾಂತರ ಉದ್ದರಿ ಅವಲೋಕನ ಸಮಿತಿಯ (1951-54) ಸದಸ್ಯರಾಗಿದ್ದಾಗ ರೈತರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ಹಣಕಾಸನ್ನು ಒದಗಿಸುವ ಸಮರ್ಪಕವಾದ ಕ್ರಮವನ್ನು ರೂಪಿಸುವುದರಲ್ಲಿ ಇವರ ಈ ಅನುಭವ ಸಹಾಯಕವಾಯಿತು. ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲು ಕಾರಣರಾದವರು ಇವರು. ಅನಂತರ ಮಹಾಷ್ಟ್ರದಲ್ಲಿ ಇನ್ನೂ ಅನೇಕ ಸಹಕಾರಿ ಸಕ್ಕರೆ ಕಾರ್ಖಾನೆಗಳು ಸ್ಥಾಪಿತವಾದುವು. ಹೀಗೆ ಭಾರತದಲ್ಲಿ ಸಹಕಾರಿ ಚಳವಳಿಯಲ್ಲಿ ಗಾಡಗೀಳರ ಪಾತ್ರ ಹಿರಿದಾಗಿತ್ತು.

ಆರ್ಥಿಕ ಯೋಜನಾಕ್ಷೇತ್ರಕ್ಕೆ ಇವರ ಕೊಡುಗೆ

ಬದಲಾಯಿಸಿ

ಆರ್ಥಿಕ ಯೋಜನಾಕ್ಷೇತ್ರಕ್ಕೆ ಇವರ ಕೊಡುಗೆ ಅಮೂಲ್ಯವಾದ್ದು. ಯೋಜನೆ ಗಳೊಡನೆ ಇವರ ಸಂಪರ್ಕ ಹಳೆಯದು. ಇವರು 1940ರ ದಶಕದ ಆದಿಯಲ್ಲಿ ಸಾಂಗ್ಲಿ, ಕೊಲ್ಲಾಪುರ ಮುಂತಾದ ರಾಜ್ಯಗಳ ಅಭಿವೃದ್ಧಿ ಮಂಡಲಿಗಳ ಸದಸ್ಯರಾಗಿದ್ದರು. ಮಹಾರಾಷ್ಟ್ರ ಅಸ್ತಿತ್ವಕ್ಕೆ ಬಂದ ಅನಂತರ ಅದರ ಯೋಜನಾ ಆಯೋಗದ ಸದಸ್ಯರಾಗಿಯೂ ದುಡಿದರು. ಭಾರತದ ದ್ವಿತೀಯ ಪಂಚವಾರ್ಷಿಕ ಯೋಜನೆಯನ್ನು ರೂಪಿಸುವುದರಲ್ಲಿ ನಿರತರಾಗಿದ್ದ ಅರ್ಥಶಾಸ್ತ್ರಜ್ಞರ ತಂಡದಲ್ಲಿ ಒಬ್ಬರಾಗಿದ್ದು ಅನಂತರ ಆ ತಂಡದ ಉಪಾಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಭಾರತದ ಯೋಜನೆಗಳ ಬಗ್ಗೆ ಇವರು ಅನೇಕ ಲೇಖನಗಳನ್ನು ಬರೆದರು. ಆಗ ಇವರು ಪ್ಲಾನಿಂಗ್ ಅಂಡ್ ಇಕೊನಾಮಿಕ್ ಪಾಲಿಸಿ ಎಂಬ ಗ್ರಂಥವನ್ನು ಪ್ರಕಟಿಸಿದರು. ಭಾರತದ ಪಂಚವಾರ್ಷಿಕ ಯೋಜನೆಗಳ ಬಗ್ಗೆ ಗಾಡಗೀಳರಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಪ್ರಾರಂಭದಿಂದಲೂ ಇವರು ಯೋಜನಾ ಆಯೋಗದ ಕಾರ್ಯವಿಧಾನದಲ್ಲಿ ಕೊರತೆಯನ್ನೇ ಕಂಡಿದ್ದರು. ಅದನ್ನು ಸಂಪುರ್ಣ ದುರಸ್ತು ಮಾಡಬೇಕೆಂಬುದು ಇವರ ಅಭಿಪ್ರಾಯವಾಗಿತ್ತು. ಇವರು ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ಹೋಗುವ ಮುನ್ನ, ದೇಶದ ಪಂಚವಾರ್ಷಿಕ ಯೋಜನೆಗಳು ಯಶಸ್ವಿಯಾಗದಿದ್ದುದಕ್ಕೆ ಅವುಗಳಲ್ಲಿ ಧೋರಣಾ ಚೌಕಟ್ಟು ಹಾಗೂ ನಿಯಂತ್ರಣ ಚೌಕಟ್ಟು ಇಲ್ಲದ್ದೇ ಕಾರಣವೆಂಬುದು ಇವರ ಅಭಿಪ್ರಾಯವಾಗಿತ್ತು. ಹೀಗಾಗಲು ಕಾರಣವಾದ ಎರಡು ಅಂಶಗಳಿವು:

  1. ನಿರುಪಾಧಿಕ ಪ್ರೇರಣೆಯುಳ್ಳ ಹಿತಾಸಕ್ತ ವ್ಯಕ್ತಿಗಳು ಸರ್ಕಾರದ ಮೇಲೆ ಬೀರುವ ಪ್ರಭಾವ,
  2. ವಿನಿಯೋಜನೆಯನ್ನು ಕೈಗೊಂಡ ಮಾತ್ರಕ್ಕೆ ಆರ್ಥಿಕ ಅಭಿವೃದ್ಧಿ ಸ್ವಯಂ ಚಲಿಯಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ತಿಳಿದ ಆರ್ಥಿಕ ಮತ್ತು ಸಾಮಾಜಿಕ ತಂತ್ರಜ್ಞರ ಸಲಹೆ ಈ ಕಾರಣಗಳಿಂದಾಗಿ ಯೋಜನೆಯ ಸಾಧನಸಂಪತ್ತು ಹಿತಾಸಕ್ತ ವ್ಯಕ್ತಿಗಳ ಕೈಸೇರಿತು, ಹಾಗೂ ಮಾರುಕಟ್ಟೆಯನ್ನವಲಂಬಿಸಿದ ಉಪಯೋಗಗಳಿಗಾಗಿ ವಿನಿಯೋಗಿಸಲ್ಪಟ್ಟಿತು. ಇದರಿಂದಾಗಿ ಬೆಲೆಗಳ ಮಟ್ಟ ಏರಲು ಪ್ರಾರಂಭವಾಯಿತು. ಆರ್ಥಿಕ ಅಸಮಾನತೆ ಹೆಚ್ಚುತ್ತ ಬಂತು. ಬೆಲೆಗಳನ್ನು ನಿಯಂತ್ರಿಸಿ ಆರ್ಥಿಕ ಸ್ಥಿರತೆ. ಸಾಧಿಸಬೇಕಾದರೆ ವಸ್ತುಗಳ ಬಳಕೆಗೆ ತಡೆಹಾಕಬೇಕು ಮತ್ತು ಸಮರ್ಪಕವಾದ ಬೆಲೆಗಳ ಧೋರಣೆಯನ್ನು ರೂಪಿಸಬೇಕು. ಜೊತೆಗೆ ಉತ್ಪಾದನೆ, ವಾಣಿಜ್ಯ ಹಾಗೂ ಬ್ಯಾಂಕುಗಳ ಮೇಲೆ ಹೆಚ್ಚಿನ ನಿಯಂತ್ರಣ ವಿಧಿಸಬೇಕು- ಎಂಬುದು ಇವರ ಅಭಿಪ್ರಾಯವಾಗಿತ್ತು. ಹಂಚಿಕೆಗಿಂತ ಉತ್ಪಾದನೆಯೇ ಮುಖ್ಯವೆಂಬ ಸರ್ಕಾರದ ಧೋರಣೆಯೂ ಉದ್ಯೋಗಾವ ಕಾಶಗಳನ್ನು ಸೃಷ್ಟಿಸುವುದರ ಬಗ್ಗೆ ಸರ್ಕಾರದ ಅನಾದರಣೆಯೂ ಆರ್ಥಿಕ ಅಸಮಾನತೆ ಅಧಿಕವಾಗಲು ಕಾರಣವೆಂದು ಇವರು ಭಾವಿಸಿದ್ದರು.

ಆದರೆ ಗಾಡಗೀಳರೇ ಪ್ರತಿಪಾದಿಸಿದ ಅನೇಕ ವಿಚಾರಗಳನ್ನು ಇವರು ಆಯೋಗದ ಉಪಾಧ್ಯಕ್ಷರಾದಾಗ ನಾಲ್ಕನೆಯ ಯೋಜನೆಯಲ್ಲಿ ಅನುಷ್ಠಾನಕ್ಕೆ ತರಲಾಗಲಿಲ್ಲ. ಇದಕ್ಕೆ ಬಹುಶಃ ಆಡಳಿತ ಚೌಕಟ್ಟಿನಲ್ಲಿದ್ದ ಅಡಚಣೆಗಳು ಕಾರಣ. ಇವರು ಮತ್ತೆ ಗೋಖಲೆ ಅಧ್ಯಯನ ಸಂಸ್ಥೆಗೆ ಹಿಂದಿರುಗಿದ್ದಿದ್ದರೆ ಇವುಗಳ ಸ್ಪಷ್ಟ ವಿವರಣೆ ಬಹುಶಃ ಸಿಗುತ್ತಿತ್ತು ಎಂಬುದು ಇವರ ಸ್ನೇಹಿತರಾದ ವಿ.ಎಂ. ದಂಡೇಕರರ ಅಭಿಪ್ರಾಯ. ಯೋಜನಾ ಆಯೋಗ ತಯಾರಿಸಿರುವ ಐದನೆಯ ಯೋಜನೆಯ ಉಪಗಮನ ಪತ್ರದಲ್ಲಿ ಗಾಡಗೀಳರ ಅಭಿಪ್ರಾಯ ಗಳಿಗೆ ಮನ್ನಣೆ ದೊರಕಿದೆ. ಹಂಚಿಕೆಗಿಂತ ಉತ್ಪಾದನೆ ಮುಖ್ಯವೆಂಬ ಧೋರಣೆಯನ್ನು ಅದರಲ್ಲಿ ಖಂಡಿಸಿರುವುದಲ್ಲದೆ ಅಭಿವೃದ್ಧಿಯ ಫಲ ಎಲ್ಲರಲ್ಲೂ ಸಮಾನವಾಗಿ ಹಂಚಿಕೆ ಯಾಗಬೇಕಾದರೆ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು ಹಾಗೂ ಅವಶ್ಯಕ ವಸ್ತುಗಳ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂದು ಪ್ರತಿಪಾದಿಸಲಾಗಿದೆ.