ಯೂಜಿನ್ ಹೆನ್ರಿ ಪಾಲ್ ಗಾಗಿ

(ಗಾಗಿ ಯೂಜಿ೮ನ್ ಹೆನ್ರಿ ಪಾಲ್ ಇಂದ ಪುನರ್ನಿರ್ದೇಶಿತ)

ಗಾಗಿ ಯೂಜಿನ್ ಹೆನ್ರಿ ಪಾಲ್

ಬದಲಾಯಿಸಿ

1848-1903. ಫ್ರಾನ್ಸಿನ ಪ್ರತಿಭಾವಂತ ವರ್ಣಚಿತ್ರಕಾರ. ಕಲೆಗಾಗಿ ಸರ್ವವನ್ನೂ ತ್ಯಾಗಮಾಡಿ, ನವ್ಯಕಲಾ ಶೈಲಿಯ ನಿರ್ಮಾಪಕರಲ್ಲಿ ಅಗ್ರಗಣ್ಯನೆಂದು ಹೆಸರಾದವ.

 

ಬದುಕು ಮತ್ತು ಕಲಾಸಾಧನೆ

ಬದಲಾಯಿಸಿ

ಪತ್ರಿಕೋದ್ಯಮಿಯೊಬ್ಬನ ಮಗನಾಗಿ ಪ್ಯಾರಿಸಿನಲ್ಲಿ ಹುಟ್ಟಿದ. ಹದಿನೇಳು ವರ್ಷದ ಬಾಲಕನಾಗಿರುವಾಗಲೇ ಸಮುದ್ರಜೀವನದಲ್ಲಿ ದುಮುಕಿ ಆರು ವರ್ಷಗಳ ಕಾಲ ವ್ಯಾಪಾರಿ ಹಡಗುಗಳೊಂದಿಗೆ ಯೋಧರೊಟ್ಟಿಗೂ ಪ್ರಪಂಚ ಪರ್ಯಟನ ಮಾಡಿದ. 1871 ರಲ್ಲಿ ಪ್ಯಾರಿಸಿಗೆ ಹಿಂದಿರುಗಿ ಒಂದು ದಲಾಲಿ ವ್ಯಾಪಾರಿಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡ 1873ರಲ್ಲಿ ಡೇನಿಷ್ ಮಹಿಳೆ ಮೆಟ್ಟಿಸೋಫಿ ಗ್ಯಾಡ್ ಎಂಬಾಕೆಯನ್ನು ಮದುವೆಯಾದ.

ಗಾಗಿಯ ಚಿತ್ರಕಲಾ ಪ್ರವೃತ್ತಿ ಪ್ರಚೋದಿತವಾದದ್ದು ಆತನ ಪಾಲಕನಾಗಿದ್ದ ಗಸ್ಟಾಫ್ ಅರೋಸ ನಿಂದಾಗಿ, ಅರೋಸನಲ್ಲಿದ್ದ ಕಾರೋ, ಡೆಲಕ್ರ್ವಾ, ಮಿಲೆಟ್ ಮೊದಲಾದ ಹೆಸರಾಂತ ಕಲಾವಿದರ, ಕೃತಿರತ್ನಗಳನ್ನು ಗಾಗಿ ನೋಡಿ ಮಾರುಹೋಗಿ ಹವ್ಯಾಸಕ್ಕಾಗಿ ತಾನೂ ಚಿತ್ರಕಲೆಗೆ ಕೈಹಾಕಿದ. ವಿರಾಮವೇಳೆಯಲ್ಲೆಲ್ಲ ಚಿತ್ರಗಳನ್ನು ಬಿಡಿಸುತ್ತ, ಹೊಸ ಹೊಸ ಶೈಲಿಗಳನ್ನು ಶೋಧಿಸತೊಡಗಿದ. ಪರಿಣಾಮವಾಗಿ ಈತನ ಕಲಾಪ್ರೌಢಿಮೆ ಹೆಚ್ಚಿತು. ಆ ಸಮಯದಲ್ಲಿ ನವ್ಯಕಲಾಶೈಲಿಗಳಲ್ಲಿ ಜನಪ್ರಿಯವಾಗಿದ್ದ ಪರಿಣಾಮ ವಿಧಾನದಲ್ಲಿ (ಇಂಪ್ರೆಶನಿಸಂ) ಆಸಕ್ತನಾದ. 1875-76 ರಲ್ಲಿ ಪ್ರಸಿದ್ಧ ಚಿತ್ರಕಾರನಾದ ಪಿಸಾರೊನೊಟ್ಟಿಗೆ ಸೇರಿಕೊಂಡು ಕಲಾ ತಂತ್ರದಲ್ಲಿ, ಕಲಾಶೈಲಿಯಲ್ಲಿ ವಿಶೇಷ ಪರಿಣತಿಯನ್ನು ಪಡೆದ. ಅಲ್ಲದೆ ಮತ್ತೊಬ್ಬ ಹೆಸರಾಂತ ಕಲಾವಿದನಾದ ಸೇಜ್ಯಾóನನೊಡನೆ ಕೆಲಸಮಾಡಿ ತನ್ನ ಶೈಲಿಯಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದ.

ಕ್ರಮೇಣ ಗಾಗಿ ಕಲಾಪ್ರಪಂಚದಲ್ಲಿ ಎಷ್ಟೊಂದು ಆಸಕ್ತನಾದನೆಂದರೆ 1883 ರಲ್ಲಿ ತನ್ನ ಉಳಿದೆಲ್ಲ ಉದ್ಯೋಗಗಳನ್ನು ಅದಕ್ಕಾಗಿ ತ್ಯಜಿಸಿದ. ಈ ಒಂದು ಸಾಹಸೀ ನಿರ್ಧಾರ ಆತನ ಜೀವನಗತಿಯನ್ನೇ ಬದಲಾಯಿಸಿತು. ನಾಲ್ಕು ಮಕ್ಕಳ ತಂದೆಯಾದ ಗಾಗಿಗೆ ಸಂಸಾರವನ್ನು ತೂಗಿಸಿಕೊಂಡು ಹೋಗುವುದೇ ದುಸ್ತರವಾಯಿತು. ಸಾಲದ್ದಕ್ಕೆ ಈತನ ಕಲಾಕೃತಿಗಳನ್ನು ಕೊಂಡುಕೊಳ್ಳುವವರೂ ಕಾಣಲಿಲ್ಲ. ಈ ಆರ್ಥಿಕ ಅವ್ಯವಸ್ಥೆಯಿಂದಾಗಿ ಸಂಸಾರದಲ್ಲಿ ವಿರಸವುಂಟಾಯಿತು. ಮಾವನ ಕಡೆಯಿಂದ ಯಾವ ಸಹಾನುಭೂತಿಯೂ ದೊರೆಯಲ್ಲಿಲ್ಲ. ಮಕ್ಕಳೊಂದಿಗೆ ಹೆಂಡತಿ ತವರುಮನೆಗೆ ಹೊರಟುಹೋದಳು. 1885ರಲ್ಲಿ ಗಾಗಿ ಒಬ್ಬ ಅನಾಥ ನಿರಾಶಾವಾದಿ ಕಲಾವಿದನಾಗಿ ಅಂಡಲೆಯಬೇಕಾಯಿತು; ದಟ್ಟದಾರಿದ್ರ್ಯದಲ್ಲಿ ತೊಳಲಾಡಬೇಕಾಯಿತು. ಕೊನೆಗೆ ಸಮಾಜದಿಂದಲೂ ಈತ ಒಹಿಷ್ಕೃತನಾದ. ಇನ್ನು ಯಾವುದೇ ರೀತಿಯಲ್ಲಿ ತನ್ನ ಸ್ಥಿತಿಯನ್ನು ಸುಧಾರಿಸಲಸಾಧ್ಯವೆಂಬ ದುಃಸ್ಥಿತಿಗಿಳಿದಾಗ ಯುರೋಪ್ ಮತ್ತು ಅದರ ನಾಗರಿಕತೆಗಳ ಬಗೆಗಾಗಿ ತನಗಿದ್ದ ಎಲ್ಲ ಅಭಿಮಾನವನ್ನೂ ಕಳೆದುಕೊಂಡ.

ಈ ಎಲ್ಲ ಅನುಭವಗಳ ಮೂಸೆಯಲ್ಲಿ ಬೆಂದ ಗಾಗಿ ತನ್ನ ತೀವ್ರವಾದ ಸಂವೇದನೆಗಳನ್ನು ಬಣ್ಣಗಳಲ್ಲಿ ವ್ಯಕ್ತಪಡಿಸುವ ಸಾದ್ಯತೆಗಳನ್ನು ಕಲಿತ. ಈ ದಿಶೆಯಲ್ಲಿ ಅನೇಕ ಪ್ರಯೋಗಗಳನ್ನು ಮಾಡಿದ. 1887 ರಲ್ಲಿ ಮಾರ್ಟಿನೀಕ್ ಎಂಬ ಪ್ರಕೃತಿ ಸೌಂದರ್ಯದ ಬೀಡಿಗೆ ಹೋಗಿ ಸಂಚರಿಸಿ ಪ್ರಕೃತಿಯಲ್ಲಿನ ಮನೋಹರವಾದ ವರ್ಣ ಸಂಯೋಜನೆಯನ್ನೂ ರಸೋಪಜ್ಞತೆ ಯನ್ನೂ ಕಂಡುಕೊಂಡ. ಅಲ್ಲಿಯ ಮೂಲ ಜನಾಂಗದವರೊಡನೆ ಕಲೆತು ಅವರ ಸಹಜಸುಂದರ ನೈಜಜೀವನದ ಸೊಬಗನ್ನು ಬಹಳವಾಗಿ ಮೆಚ್ಚಿಕೊಂಡ. ಇವೆಲ್ಲವುಗಳ ಪ್ರಭಾವ ಗಾಗಿಯ ಕಲಾಶೈಲಿಯ ಮೇಲೆ ಆಗದೆ ಇರಲಿಲ್ಲ. ಗಾಗಿಯ ಮನಸ್ಸು ಸಮಕಾಲೀನ ಕಲಾಶೈಲಿಯಿಂದ ಪ್ರಾಚೀನ ಜಾನಪದ ಶೈಲಿಯತ್ತ ತಿರುಗಿತು. ಪ್ರಾಕೃತಿಕ ಸೌಂದರ್ಯ ವನ್ನು ತನಗೆ ತಕ್ಕಂತೆ ಉಪಯೋಗಿಸಿ ಕೊಂಡ ಗಾಗಿ ಚೇತೋಹಾರಿ ಯಾದ ಅನೇಕ ಕಲಾರತ್ನಗಳನ್ನು ಸೃಷ್ಟಿಸಿದ. ಈ ಸಂದರ್ಭದಲ್ಲಿ ಬನಾರ್ಡ ಎಂಬ ಜಾನಪದ ಕಲಾವಿದನ ಮಾರ್ಗದರ್ಶನವೂ ಈತನಿಗೆ ಸಿಕ್ಕಿತು. ಅಲ್ಲದೆ 1888 ರಲ್ಲಿ ಪ್ರಸಿದ್ಧ ಕಲಾವಿದ ವ್ಯಾನ್ ಗೋನ ಪರಿಚಯವೂ ಆಯಿತು. ಕ್ರಮೇಣ ಗಾಗಿ ತನ್ನದೇ ಆದ ಒಂದು ಸಂಶ್ಲೇಷಣಾಶೈಲಿಯನ್ನು ಬೆಳೆಸಿಕೊಂಡ. ಇದರಲ್ಲಿ ಕೃತ್ರಿಮ ನಾಗರಿಕತೆಯ ಪ್ರಭಾವಕ್ಕಿಂತಲೂ ಸಹಜ ಸುಂದರ ಪ್ರಕೃತಿಯ ಪರಿಣಾಮ ಎದ್ದುಕಾಣುತ್ತದೆ. ಜಪಾನಿನ ವರ್ಣಚಿತ್ರಗಳಲ್ಲಿ ಕಂಡುಬರುವಂತೆ, ಸರಳ ವರ್ಣಗಳನ್ನು ಉಪಯೋಗಿಸಿ ಚಪ್ಪಟೆ ಚಿತ್ರಗಳನ್ನು ಗಾಗಿ ರಚಿಸಿದ. ಇವುಗಳಲ್ಲಿ ಕಂಡುಬರುವ ವರ್ಣ ಸಂಯೋಜನೆ, ರೇಖಾವಿನ್ಯಾಸ, ಲಾಲಿತ್ಯ ಮತ್ತು ಅವುಗಳ ಒಟ್ಟು ಪರಿಣಾಮ ಬಹು ಮನೋಹರವಾಗಿದೆ.

ಈ ಶೈಲಿ ಜನಸಾಮಾನ್ಯರಿಗೂ ಅರ್ಥವಾಗುವಂತಿದ್ದು, ಅದರಲ್ಲಿ ಒಂದು ಭಾವ ಕಲಾತ್ಮಕವಾಗಿ, ವರ್ಣರಂಜಿತವಾಗಿ ವ್ಯಕ್ತವಾಗಿರುವುದನ್ನು ನೋಡಬಹುದು. ಒಟ್ಟಿನಲ್ಲಿ ಗಾಗಿಯ ಚಿತ್ರರಾಶಿಗಳಲ್ಲಿ ಆತ್ಮವಿನಾಶಕ ಬೂಜ್ವಾರ್óನಾಗರಿಕತೆಯ ವಿರುದ್ಧವಾಗಿ ವ್ಯಕ್ತಪಡಿಸಿದ ಒಂದು ತೀವ್ರ ಪ್ರತಿಕ್ರಿಯೆಯನ್ನು ನೋಡಬಹುದಾಗಿದೆ.

ಗಾಗಿಯ ಕಲಾಶೈಲಿಯ ಪ್ರಭಾವವನ್ನು ಪಿಕಾಸೊ ಮೊದಲಾದ ಕಲಾವಿದರ ಕೃತಿಗಳಲ್ಲಿ ಕಾಣಬಹುದು. ಇದು ಮುಂದೆ ಘನಾಕೃತಿವಿಧಾನ (ಕ್ಯೂಬಿಸಂ) ಎಂಬ ಕಲಾಶೈಲಿಯ ಬೆಳೆವಣಿಗೆಗೆ ಪುಷ್ಟಿನೀಡಿತು. ಅಲ್ಲದೆ ಗಾಗಿ ಮುಂದೆ ಆಫ್ರಿಕದ ನಿಗ್ರೋಕಲೆಯ ಸೌಂದರ್ಯ ಸಮೀಕ್ಷೆಗೆ ಪ್ರೇರಣೆ ನೀಡಿದ. ತನ್ನ ಕಲಾಸಾಧನೆಯ ಗುಣವಿಶೇಷದಿಂದಾಗಿ ಮತ್ತು ನವ್ಯಕಲೆಯ ಮೇಲೆ ಬೀರಿದ ಅದ್ಭುತ ಪ್ರಭಾವದಿಂದಾಗಿ ನವ್ಯಕಲಾ ಪ್ರಪಂಚದಲ್ಲಿ ಗಾಗಿ ಒಂದು ಪ್ರಮುಖ ಸ್ಥಾನವನ್ನು ಪಡೆದಿದ್ದಾನೆ.

ಗಾಗಿ ಬರೆದಿರುವ ನೋವ-ನೋವ ಎಂಬ ಪುಸ್ತಕ ಆತನ ಸೌಂದರ್ಯ ಮೀಮಾಂಸಾತತ್ತ್ವವನ್ನು ವಿವರಿಸುತ್ತದೆ.

ಈತನ ಜೀವನದ ಪ್ರಧಾನ ಘಟನೆಗಳನ್ನು ಆಧರಿಸಿ ಸಾಮರ್ಸೆಟ್ ಮಾಮ್ ಎಂಬ ಪ್ರಸಿದ್ಧ ಸಾಹಿತಿ ದಿ ಮೂನ್ ಅಂಡ್ ಸಿಕ್ಸ್ ಪೆನ್ಸ್ ಎಂಬ ಕಾದಂಬರಿಯನ್ನು ರಚಿಸಿದ್ದಾನೆ (1929).