ಗಾಂಜಾಗಿಡ
Scientific classification
ಸಾಮ್ರಾಜ್ಯ:
Plantae
ಉಪಸಾಮ್ರಾಜ್ಯ:
Superdivision:
Division:
ಉಪವಿಭಾಗ:
ವರ್ಗ:
ಮೇಲ್ಗಣ:
ಗಣ:
ಕುಟುಂಬ:
ಕುಲ:
ಪ್ರಜಾತಿ:
Cannabis sativa
Subspecies

C. sativa ssp. sativa
C. sativa ssp. indica


ಗಾಂಜಾಗಿಡ ಕ್ಯಾನಬಿನೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ; ವೈಜ್ಞಾನಿಕ ನಾಮ ಕ್ಯಾನಬಿಸ್ ಸೇಟಿವ. ಪರ್ಯಾಯನಾಮ ಭಂಗಿ, ಹೆಂಪ್, ಸಾಫ್ಟ್ ಹೆಂಪ್ ಮುಂತಾದವು ಇಂಗ್ಲಿಷಿನ ಬಳಕೆಯ ಹೆಸರುಗಳು. ಈ ಸಸ್ಯ ಮೂಲತಃ ಹಿಮಾಲಯದ ಉತ್ತರಪ್ರದೇಶದ್ದು ಎಂದು ಹೇಳಲಾಗಿದೆ. ಪ್ರ.ಶ.ಪು. 2800ರಲ್ಲೇ ಚೀನೀಯರು ಈ ಗಿಡದ ನಾರನ್ನು ಉಪಯೋಗಿಸುತ್ತಿದ್ದರೆಂದು ಪ್ರಾಚೀನ ಕಾಲದ ಬರೆವಣಿಗೆಗಳ ಆಧಾರದಿಂದ ತಿಳಿದುಬಂದಿದೆ.

ಪ್ರಾಚೀನತೆ

ಬದಲಾಯಿಸಿ

ಮಾನವ ಮೊಟ್ಟಮೊದಲಲ್ಲಿ ಉಪಯೋಗಿಸಿದ ನಾರುಗಳಲ್ಲಿ ಗಾಂಜಾ ಗಿಡದ ನಾರು ಕೂಡ ಒಂದು. ಏಷ್ಯ ಖಂಡದಿಂದ ಈ ಗಿಡ ಮೊದಲು ಪೂರ್ವ ಹಾಗೂ ದಕ್ಷಿಣ ಯುರೋಪುಗಳಿಗೂ ಸು. 500ರ ವೇಳೆಗೆ ಪಶ್ಚಿಮ ಯುರೋಪಿಗೂ ಹರಡಿತೆಂದು ಊಹಿಸಲಾಗಿದೆ. ದಕ್ಷಿಣ ಅಮೆರಿಕದ ಚಿಲಿ ಪ್ರದೇಶಕ್ಕೆ 16ನೆಯ ಶತಮಾನದ ಮಧ್ಯದಲ್ಲಿ ಹಾಗೂ 100 ವರ್ಷಗಳ ಬಳಿಕ ನ್ಯೂಇಂಗ್ಲೆಂಡ್ ಮತ್ತು ವರ್ಜಿನಿಯಕ್ಕೆ ಇದು ಹರಡಿತು. 20ನೆಯ ಶತಮಾನದ ಆದಿಯಲ್ಲಿ ಉತ್ತರ ಸಮಶೀತೋಷ್ಣವಲಯದಲ್ಲಿರುವ ಎಲ್ಲ ದೇಶಗಳಲ್ಲಿ ಹಾಗೂ ದಕ್ಷಿಣ ಸಮಶೀತೋಷ್ಣ ವಲಯದ ಕೆಲವು ಪ್ರದೇಶಗಳಲ್ಲಿ ಇದು ಕಾಡುಗಿಡದಂತೆ ಬೆಳೆಯತೊಡಗಿತ್ತು. ಅಲ್ಲದೆ ಅಲ್ಲಲ್ಲಿ ಇದರ ಬೇಸಾಯವೂ ಪ್ರಾರಂಭವಾಗಿತ್ತು. ನಾರಿನ ಉತ್ಪಾದನೆಗೋಸ್ಕರ ಈ ಗಿಡವನ್ನು ಇಂದು ರಷ್ಯ, ಇಟಲಿ, ಚೀನ, ಯೂಗೋಸ್ಲಾವಿಯ, ರೊಮೇನಿಯ, ಕೊರಿಯ, ಪೋಲೆಂಡ್, ತುರ್ಕಿಸ್ತಾನ, ಹಂಗರಿ, ಜಪಾನ್, ಜರ್ಮನಿ, ಚೆಕೋಸ್ಲೊವಾಕಿಯ, ಫ್ರಾನ್ಸ್, ಬಲ್ಗೇರಿಯ, ಚಿಲಿ ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಬೇಸಾಯ ಮಾಡಲಾಗುತ್ತಿದೆ.

ವ್ಯವಸಾಯ

ಬದಲಾಯಿಸಿ

ಗಾಂಜಾ ಗಿಡ ಏಕವಾರ್ಷಿಕ ಸಸ್ಯ. ಎತ್ತರದಲ್ಲಿ ಸುಮಾರು 2ಮೀ ವರೆಗಿರಬಹುದು. ಕಾಂಡ ಟೊಳ್ಳು. ಗಿಡಗಳಲ್ಲಿ ಗಂಡು ಹೆಣ್ಣು ಬೇರೆ ಬೇರೆ. ಅಪರೂಪಕ್ಕೆ ಒಂದೇ ಗಿಡ ಗಂಡು ಮತ್ತು ಹೆಣ್ಣು ಹೂಗಳೆರಡನ್ನೂ ಪಡೆದಿರಬಹುದು. ಸಾಗುವಳಿಯಲ್ಲಿ ಗಂಡು ಮತ್ತು ಹೆಣ್ಣು ಗಿಡಗಳು ಸಮಾನಸಂಖ್ಯೆಗಳಲ್ಲಿ ಇರುತ್ತವೆ. ಪರಾಗೋತ್ಪತ್ತಿಯಾದ ಬಳಿಕ ಗಂಡುಗಿಡ ಒಣಗಿಹೋಗುತ್ತದೆ. ಹೆಣ್ಣು ಗಿಡಗಳು ಬೀಜ ಬಲಿಯುವವರೆಗೂ ಜೀವಂತವಾಗಿರುತ್ತವೆ.

 
ಗಾಂಜಾ ನಾರಿನಿಂದ ತಯಾರಿಸಿದ ಚೀಲ

ನಾರು ಬೇಕಾದಲ್ಲಿ ಸೂಕ್ತರೀತಿಯ ಹದ ಮಾಡಿ ಅಳವಡಿಸಿಕೊಂಡ ಬೀಜಗಳನ್ನು ಬಿತ್ತಬೇಕು. ಆಗ ಗಿಡಗಳು ನೀಳವಾಗಿ ಎತ್ತರಕ್ಕೆ ಬೆಳೆಯುತ್ತವೆ. ಈ ರೀತಿ ಬೆಳೆದ ಗಿಡಗಳ ನೀಳ ಕಾಂಡಗಳ ನೆತ್ತಿಯಲ್ಲಿ ಮಾತ್ರ ಕೊಂಬೆಗಳು ಕಾಣಿಸಿಕೊಳ್ಳುತ್ತವೆ. ಬೀಜಗಳನ್ನು ವಿರಳವಾಗಿ ಬಿತ್ತಿದ್ದು ಅವುಗಳ ಮಧ್ಯಾಂತರ ಸಾಕಷ್ಟಿದ್ದರೆ ಕೆಳಭಾಗದಿಂದ ಮೇಲ್ತುದಿಯವರೆಗಿರುವ ಗೆಣ್ಣುಗಳಲ್ಲೆಲ್ಲ ಕೊಂಬೆಗಳು ಚಿಗುರೊಡೆದು ಗಿಡ ದಪ್ಪವಾಗಿ ಒರಟಾಗಿ ರೂಪುಗೊಳ್ಳುತ್ತದೆ. ಹರಡಿ ಬೆಳೆದಾಗ ಗಿಡ ಕುಳ್ಳಾಗಿರುತ್ತದೆ. ಎಣ್ಣೆ ಬೀಜದ ಉತ್ಪಾದನೆಗೋಸ್ಕರ ರಷ್ಯದ ಈಶಾನ್ಯ ಭಾಗಗಳಲ್ಲಿ ಬೆಳೆಯುವ ಗಿಡಗಳು ಹಾಗೂ ಭಾರತ, ಅರಬ್ ದೇಶಗಳಲ್ಲಿ ಮತ್ತು ಉತ್ತರ ಆಫ್ರಿಕದ ವಿವಿಧ ಪ್ರದೇಶಗಳಲ್ಲಿ ಔಷಧ ಮೂಲಿಕೆಗಾಗಿ ಬೆಳೆಯುವ ಗಿಡಗಳು ಈ ರೀತಿ ಅನೇಕ ಕೊಂಬೆಗಳುಳ್ಳ ಕುಳ್ಳುಜಾತಿಯವು

ಕಾಂಡಭಾಗವೆಲ್ಲ ಟೊಳ್ಳಷ್ಟೆ ಕಾಂಡದ ಎಪಿಡರ್ಮಿಸ್ ಮತ್ತು ಕೇಂಬಿಯಮುಗಳ ನಡುವೆ ಇರುವ ಆಹಾರಸಾಗಣೆಯ ಅಂಗಾಂಶವಾದ ಫ್ಲೋಯೆಮ್ ಅಂಗಾಂಶವೇ ಗಾಂಜಾಗಿಡದ ನಾರು. ಗಂಡು ಹೂಗಳು ಗಾತ್ರದಲ್ಲಿ ಹೆಣ್ಣು ಹೂಗಳಿಗಿಂತ ದೊಡ್ಡವಾದ್ದರಿಂದ ಸುಲಭವಾಗಿ ಕಣ್ಣಿಗೆ ಬೀಳುತ್ತವೆ. ಅದೇ ಹೆಣ್ಣು ಹೂಗಳು ತುಂಬಾ ಚಿಕ್ಕವಾದುದರಿಂದ ಗಮನವನ್ನು ಸೆಳೆಯವು. ಕಾಂಡದ ತುದಿ ಭಾಗಗಳಲ್ಲಿ ಮತ್ತು ಕಾಂಡದುದ್ದಕ್ಕೆ ಪ್ರತಿ ಗೆಣ್ಣಿನಲ್ಲು ಹೂಗಳು ಗೊಂಚಲು ಗೊಂಚಲಾಗಿ ಬಿಡುತ್ತವೆ. ಬೀಜಗಳು ಗಾತ್ರದಲ್ಲಿ ಗೋದಿ ಕಾಳಿನಷ್ಟಿದ್ದು ಕೊಂಚ ಗುಂಡಾಗಿರುತ್ತವೆ. ಅವು ಪೂರ್ಣ ಬಲಿಯಲು ಇಷ್ಟೇ ಕಾಲ ಹಿಡಿಯುತ್ತದೆಂದು ಹೇಳಲು ಸಾಧ್ಯವಿಲ್ಲ.


ನಾರಿನ ಉತ್ಪಾದನೆಗೋಸ್ಕರ ಈ ಗಿಡದ ಸಾಗುವಳಿ ವಿಧಾನಗಳು ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆಯಾದರೂ ಎಲ್ಲ ಕಡೆಗೂ ಅನುಸರಿಸುವ ಕೆಲವು ಸಾಮಾನ್ಯ ಕ್ರಮಗಳಿವೆ. ಸಕಾಲದಲ್ಲಿ ಬೀಜ ಬಿತ್ತುವುದು, ಅಚ್ಚುಕಟ್ಟಾಗಿ ಹದ ಮಾಡಿದ ಭೂಮಿಯನ್ನೇ ಉಪಯೋಗಿಸುವುದು, ಫಲವತ್ತಾಗಿಲ್ಲದಲ್ಲಿ ಸಾಕಷ್ಟು ಗೊಬ್ಬರ ಕೊಡುವುದು ಹಾಗೂ ದಟ್ಟವಾಗಿ ಬೀಜ ಬಿತ್ತುವುದು ಎಲ್ಲೆಡೆಗಳಲ್ಲೂ ವಾಡಿಕೆ. ಒಂದು ಎಕರೆಗೆ 15-20 ಕೆಜಿ. ಬೀಜ ಬೇಕಾಗುತ್ತದೆ. ಬೆಲ್ಜಿಯಂ ಮತ್ತು ಫ್ರಾನ್ಸಿನ ಉತ್ತರದ ಪ್ರದೇಶಗಳಲ್ಲಿ ಎಕರೆಗೆ 40 ಕೆಜಿ ಬೀಜವನ್ನು ಬಿತ್ತುವುದುಂಟು. ಭೂಮಿಯ ಮೇಲ್ಮೈಯಲ್ಲಿ ಎಂದರೆ 1-2.5 ಸೆಂ.ಮೀ ಆಳದಲ್ಲಿ ಬೀಜ ನೆಡುತ್ತಾರೆ. ಬಿತ್ತಿದ ಅನಂತರ ಆರೈಕೆ ಅಷ್ಟಾಗಿ ಬೇಕಿಲ್ಲ. ಯುರೋಪಿನ ಕೆಲವು ಭಾಗಗಳ ಹೊರತು ಇತರ ಪ್ರದೇಶಗಳಲ್ಲಿ ಕಳೆ ಕೀಳುವುದು ಸಹ ರೂಢಿಯಲ್ಲಿಲ್ಲ. ಗಂಡು ಗಿಡಗಳಲ್ಲಿ ಹೂ ಅರಳಿ ಪರಾಗ ಹೊರ ಸುರಿಯುತ್ತಿರುವ ಕಾಲದಲ್ಲಿ ನಾರಿಗೋಸ್ಕರ ಬೆಳೆದ ಫಸಲನ್ನು ಕಟಾವು ಮಾಡುತ್ತಾರೆ. ಈ ಕಾಲದಲ್ಲಿ ಕಟಾಯಿಸಿದ ಗಿಡಗಳಿಂದ ಬರುವ ನಾರು ಅತಿನವುರಾಗಿಯೂ ಮೃದುವಾಗಿಯೂ ಇರುತ್ತದೆ. ಆದರೆ ಈ ನಾರು ಅಷ್ಟು ಗಡುಸಲ್ಲ. ನಾರು ಗಡುಸಾಗಿದ್ದು ಹೇರಳವಾಗಿರಬೇಕಾದರೆ ಗಿಡಗಳು ಇನ್ನೂ ಬಲಿತಿರಬೇಕು. ಆದರೆ ಈ ನಾರು ಒರಟು. ಯುರೋಪಿನ ಕೆಲವು ಭಾಗಗಳಲ್ಲಿ ಕೈಯಿಂದ ಗಿಡಗಳನ್ನು ಬುಡಸಮೇತ ಕೀಳುವುದು ರೂಢಿಯಲ್ಲಿದೆ. ಉಳಿದ ದೇಶಗಳ ಬಹುಭಾಗಗಳಲ್ಲಿ ಗಿಡವನ್ನು ನೆಲದಿಂದ ಕೊಂಚ ಮೇಲಕ್ಕೆ ಕುಡುಗೋಲಿನಿಂದ ಕತ್ತರಿಸುತ್ತಾರೆ.


ಗಿಡಗಳ ಕಟಾವಾದ ಬಳಿಕ ಅವುಗಳಿಂದ ನಾರು ತೆಗೆಯಲು ಅವನ್ನು ಕೊಳೆಸಬೇಕು. ಕೊಳೆಸುವಿಕೆಯಲ್ಲಿ ಮುಖ್ಯವಾಗಿ ಎರಡು ವಿಧಾನಗಳಿವೆ: ನೀರಿನಲ್ಲಿ ಅದ್ದಿಟ್ಟು ಕೊಳೆಸುವುದು ಅಥವಾ ಇಬ್ಬನಿಯಲ್ಲಿ ಗಿಡಗಳನ್ನು ಹರವಿಟ್ಟು ಕೊಳೆಸುವುದು. ಅಮೆರಿಕದಲ್ಲಿ ಇಬ್ಬನಿಯಿಂದ ಕೊಳೆಸುವುದು ಸಾಮಾನ್ಯ. ನೀರಿನಲ್ಲಿ ಅದ್ದಿಟ್ಟು ಕೊಳೆಸುವುದು ಇತರ ದೇಶಗಳಲ್ಲಿ ಅನುಸರಿಸುವ ಮಾರ್ಗ. ಇಬ್ಬನಿಯಲ್ಲಿ ಕಟಾವಾದ ಗಿಡಗಳನ್ನು ಹೊಲಗಳಲ್ಲೇ ಕೊಳೆಯಲು ಬಿಡುತ್ತಾರೆ. ಕೆಲವು ಏಕಾಣು ಜೀವಿಗಳು ಹಾಗೂ ಶಿಲೀಂಧ್ರಗಳು ನಾರಿನ ಸುತ್ತಲಿರುವ ಸಸ್ಯಾಂಶವನ್ನು ಹೊಕ್ಕು ಅವನ್ನು ಕೊಳೆಸುತ್ತವೆ. ಹೀಗೆ ಸಸ್ಯಾಂಶ ಮಾತ್ರ ಕೊಳೆಯುವುದರಿಂದ ನಾರನ್ನು ಸುಲಭವಾಗಿ ಬೇರ್ಪಡಿಸಬಹುದು. ಕೊಳೆಯಲು ಬೇಕಾಗುವ ಕಾಲಾವಧಿ ಹವಾ ಪರಿಸ್ಥಿತಿಯನ್ನು ಅವಲಂಬಿಸಿ ಒಂದು ವಾರದಿಂದ ಕೆಲವು ತಿಂಗಳುಗಳಷ್ಟು ವ್ಯತ್ಯಾಸವಾಗುತ್ತದೆ.


ನೀರಿನಲ್ಲಿ ಅದ್ದಿ ಕೊಳೆಸುವ ಕ್ರಮದಲ್ಲಿ ಮೊದಲು ಕಟಾವಾದ ಗಿಡಗಳನ್ನು ಪುರ್ಣವಾಗಿ ಒಣಗಿಸಬೇಕು. ಅನಂತರ ಇವನ್ನು ನೀರಿನಲ್ಲಿ ಅದ್ದಿಡಬೇಕು. ಏಕಾಣುಜೀವಿಗಳು ಹಾಗೂ ನೀರು ಇವೆರಡರಿಂದಾಗಿ ನಾರಿನ ಸುತ್ತಲಿರುವ ಸಸ್ಯಾಂಶ ಕೊಳೆಯಲು ಅವಕಾಶವಾಗುತ್ತದೆ. ಈ ಕ್ರಮದಿಂದ ನಾರು ಪಡೆಯಲು 10-20 ದಿವಸಗಳಾಗುತ್ತವೆ. ಕೊಳೆಯಲು ಬೇಕಾಗುವ ಅವಧಿ ನೀರಿನ ಉಷ್ಣತೆಯನ್ನು ಅನುಸರಿಸುವುದು. ಗಿಡಗಳನ್ನು ಕೆರೆ, ಕೊಳ, ಕುಂಟೆ, ನದಿಗಳಲ್ಲಿ ಇಲ್ಲವೆ ಕೃತಕ ತೊಟ್ಟಿಗಳಲ್ಲಿ ಕೊಳೆಸಬಹುದು. ತೊಟ್ಟಿಗಳಲ್ಲಿ ನೀರಿಟ್ಟು ಉಷ್ಣತೆಯನ್ನು ಸೂಕ್ತವಾಗಿ ನಿಯಂತ್ರಿಸಿದರೆ ಕೇವಲ 3-5 ದಿವಸಗಳಲ್ಲಿ ಕೊಳೆಯುತ್ತದೆ. ಇದಕ್ಕೆ ಬೇಕಾಗುವ ಸೂಕ್ತ ಉಷ್ಣತೆ 90° ಫ್ಯಾ.


ಇಬ್ಬನಿಯಿಂದ ಕೊಳೆಸಿದ ಗಿಡಗಳನ್ನು ಕೆಲವು ಪ್ರದೇಶಗಳಲ್ಲಿ ಕಂತೆ ಕಟ್ಟುವುದಿಲ್ಲ. ಅಮೆರಿಕ ಸಂಯುಕ್ತಸಂಸ್ಥಾನದ ಉತ್ತರ ಭಾಗಗಳಲ್ಲಿ ಗಿಡಗಳನ್ನು ಒಟ್ಟಿಗೆ ಸೇರಿಸಿ ಯಂತ್ರಗಳಿಂದ ಕಂತೆ ಕಟ್ಟುತ್ತಾರೆ. ಇದಾದ ಅನಂತರ ಕಂತೆಗಳನ್ನು ಒಣಗಿಸಲು ಯಾವ ವಿಶಿಷ್ಟ ಕ್ರಮವನ್ನೂ ಸಾಮಾನ್ಯವಾಗಿ ಅನುಸರಿಸುವುದಿಲ್ಲ. ಅವೇ ಒಣಗುತ್ತವೆ. ಆದರೆ ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಹಲವಾರು ಸಾಧನಗಳನ್ನು ಉಪಯೋಗಿಸಿ ಕೃತಕ ರೀತಿಯಲ್ಲಿ ಒಣಗಿಸುತ್ತಾರೆ.


ಕೊಳೆತ ಗಿಡಗಳು ಸಾಕಷ್ಟು ಒಣಗಿದ ಅನಂತರ ನಾರನ್ನು ಬೇರ್ಪಡಿಸಲು ವಿವಿಧ ರೀತಿಯ ಯಂತ್ರ ಸಾಧನಗಳನ್ನು ಉಪಯೋಗಿಸಲಾಗುವುದು. ಈ ಸಾಧನಗಳಿಗೆ ಜಜ್ಜಿ ತುಂಡರಿಸುವ (ಬ್ರೇಕರ್ಸ್) ಸಾಧನಗಳು ಎಂದು ಹೆಸರು. ಏಕೆಂದರೆ ಇವು ಸಸ್ಯಾಂಶವೆಲ್ಲವನ್ನು ಕಬ್ಬಿನ ಗಾಣದಂತೆ ಜಜ್ಜಿ ತುಂಡರಿಸುತ್ತವೆ. ಈ ಸಂಸ್ಕಾರವಾದ ಅನಂತರ ನಾರನ್ನು ಇವುಗಳಿಂದ ಬೇರ್ಪಡಿಸಲಾಗುವುದು. ಒದರುವುದು, ಕೂರ್ಚ ಹೊಡೆಯುವುದು ಹಾಗೂ ಚಾಚುವುದರಿಂದ ನಾರನ್ನು ಬೇರ್ಪಡಿಸಿ ಚೊಕ್ಕ ಮಾಡುತ್ತಾರೆ. ಸಾಮಾನ್ಯವಾಗಿ ಈ ಕಾರ್ಯಗಳನ್ನು ಕೈಗಳಿಂದಲೇ ಮಾಡಿದರೂ ಅನೇಕ ಕಡೆ ಯಂತ್ರ ಸಾಧನಗಳನ್ನೂ ಉಪಯೋಗಿಸುವುದುಂಟು. ಈ ಸಾಧನಗಳನ್ನು ಉಪಯೋಗಿಸಿ ದಾಗ ನಾರು ತುಂಡಾಗುವ ಸಂಭವ ಉಂಟು.


ಉತ್ಪಾದನಾ ಪರಿಮಾಣ

ಬದಲಾಯಿಸಿ

ಎಕರೆಗೆ ಉತ್ಪಾದನೆಯಾಗುವ ನಾರಿನ ಪರಿಮಾಣದಲ್ಲಿ ದೇಶದಿಂದ ದೇಶಕ್ಕೆ ವ್ಯತ್ಯಾಸ ಕಂಡುಬರುತ್ತದೆ. ಸಾಮಾನ್ಯವಾಗಿ ಇಳುವರಿ ಒಂದು ಎಕರೆಗೆ 225-820 ಕೆಜಿ.ಗಳವರೆಗೂ ಇರುವುದುಂಟು. ಎಕರೆಗೆ ಅತ್ಯಂತ ಕನಿಷ್ಠ ಉತ್ಪಾದನೆ ರಷ್ಯದಲ್ಲಿ ಹಾಗೂ ಅತ್ಯಂತ ಅಧಿಕ ಉತ್ಪಾದನೆ ಉತ್ತರ ಇಟಲಿಯಲ್ಲಿ. ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ 900 ಕೆಜಿ. ನಾರು ಉತ್ಪಾದನೆಯಾದ ದಾಖಲೆಯಿದೆಯಾದರೂ ಸರಾಸರಿ ಉತ್ಪಾದನೆ 400 ಕೆಜಿ.ಯನ್ನು ಮೀರಿಲ್ಲ.


ಉಪಯೋಗಗಳು

ಬದಲಾಯಿಸಿ
 
Δ9-tetrahydrocannabinol (THC)
 
Cannabis sativa, scientific drawing from c1900

ನಾರನ್ನು ಏಷ್ಯ ಮತ್ತು ಯುರೋಪುಗಳಲ್ಲಿ ವಿವಿಧ ರೀತಿಯ ನೇಯ್ಗೆ ಸರಕುಗಳಿಗಾಗಿ ಒಂದಲ್ಲ ಒಂದು ಕಾಲದಲ್ಲಿ ಬಳಸಲಾಗಿದೆ. ಇದರಿಂದ ಅತ್ಯಂತ ನವುರಾದ ದಾರ ಹಾಗೂ ದಪ್ಪ ಹುರಿಗಳನ್ನು ತಯಾರಿಸಬಹುದು. ಅಮೆರಿಕ ಸಂಯುಕ್ತಸಂಸ್ಥಾನಗಳಲ್ಲಿ ಗಾಂಜಾ ನಾರಿನಿಂದ ಟ್ವೈನ್ ದಾರವನ್ನು ತಯಾರಿಸುತ್ತಿದ್ದರು. ಕೃತಕ ಸ್ಪಂಜ್ ಮಾಡಲು ಈ ನಾರನ್ನು 1950ರ ಅನಂತರ ಉಪಯೋಗಿಸಿ ಕೊಳ್ಳಲಾಗುತ್ತಿದೆ. ಈ ಗಿಡದ ಬೀಜದಿಂದ ಎಣ್ಣೆಯೊಂದನ್ನು ತೆಗೆಯಬಹುದು. ಬೀಜದಲ್ಲಿ ಶೇ. 30 ಭಾಗ ಎಣ್ಣೆ ಉಂಟು. ಇದನ್ನು ಬಣ್ಣ, ವಾರ್ನಿಶ್ ಮತ್ತು ಸಾಬೂನು ತಯಾರಿಕೆಯಲ್ಲಿ ಬಳಸುತ್ತಾರೆ. ಅಲ್ಲದೆ ಬೀಜಗಳನ್ನು ಸಾಕುಪಕ್ಷಿಗಳ ಆಹಾರವಾಗಿ ಉಪಯೋಗಿಸುವುದಿದೆ.

ಗಾಂಜಾ ಸೇವನೆ

ಬದಲಾಯಿಸಿ

ಗಾಂಜಾಗಿಡದ ಕುಡಿ ಹೂ, ಎಳೆಯಕಾಂಡ, ಎಲೆ ಮತ್ತು ಬೀಜಗಳಲ್ಲಿ ಔಷಧೀಯ ಗುಣವಿದೆ. ಈ ಪದಾರ್ಥವನ್ನೇ ಗಾಂಜಾ ಎನ್ನುವುದೂ ಉಂಟು. ಗಾಂಜಾದ ಮಾದಕ ಗುಣಕ್ಕೆ ಅದರಲ್ಲಿನ ಎಣ್ಣೆಯೇ ಕಾರಣ. ತೀವ್ರತೆಗೆ ತಕ್ಕಂತೆ ಗಾಂಜಾ ಮೂರು ಬಗೆಯದಾಗಿದೆ.

ಅತ್ಯಂತ ಪ್ರಭಾವಶಾಲಿ ಮತ್ತೇರಿಸುವ ಬಗೆ: ಬಲಿತಿರುವ ಹೆಣ್ಣು ಗಿಡಗಳ ಕುಡಿಗಳಿಂದ ಬರುವ ಗೋಂದಿನಿಂದ ಇದನ್ನು ತಯಾರುಮಾಡುತ್ತಾರೆ. ಉತ್ತರ ಆಫ್ರಿಕ, ಮಧ್ಯಪ್ರಾಚ್ಯ ಪ್ರದೇಶಗಳಲ್ಲಿ ಇದಕ್ಕೆ ಹಶೀಶ್ ಎನ್ನುತ್ತಾರೆ. ಇದನ್ನೇ ಭಾರತದಲ್ಲಿ ಚರಸ್ ಎನ್ನವುದು. ಪ್ರಭಾವ ಅಷ್ಟು ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ, ಮಧ್ಯಮ ರೀತಿಯ ಬಗೆ ಇದೇ ಗಾಂಜಾ ಎಂದು ಬಳಕೆಯಿದೆ. ಸಾಗುವಳಿ ಮಾಡಿದ ಗಿಡಗಳ ಕುಡಿಗಳಲ್ಲಿ ಬಿಡುವ ಹೂ ಮತ್ತು ಎಲೆಗಳಿಂದ ಇದನ್ನು ಪಡೆಯಲಾಗುತ್ತದೆ. ಪ್ರಭಾವ ಅತ್ಯಲ್ಪವಾಗಿರುವುದು ಮೂರನೆಯ ವಿಧ. ಇದನ್ನು ಭಾಂಗ್ (ಭಂಗಿ) ಎಂದು ಕರೆಯುತ್ತಾರೆ. ಕಾಡುಗಿಡಗಳಂತೆ ಬೆಳೆದಿರುವ ಗಿಡಗಳ ಒಣ ಎಲೆಗಳು ಹಾಗೂ ಹೂ ಬಿಡುವ ಕೊಂಬೆಗಳನ್ನು ಕತ್ತರಿಸಿ ಇದನ್ನು ತೆಗೆಯಲಾಗುತ್ತದೆ.

ಗಾಂಜಾ ಗಿಡದ ಯಾವ ಭಾಗಕ್ಕೆ ಆಗಲಿ ಅಥವಾ ಯಾವ ಭಾಗದಿಂದ ತೆಗೆದ ವಸ್ತುವಿಗಾಗಲಿ ಅಮೆರಿಕದಲ್ಲಿ ಮ್ಯಾರವಾನ ಎಂಬ ಸಾಮಾನ್ಯ ಹೆಸರು ರೂಢಿಯಲ್ಲಿದೆ. ಅಂದರೆ ಈ ವಸ್ತುವನ್ನು ಸೇವಿಸಿದರೆ ವ್ಯಕ್ತಿಯ ಶರೀರಕ್ರಿಯೆ ಹಾಗೂ ಮನಸ್ಸಿನ ಮೇಲೆ ಪರಿಣಾಮ ಬೀರುವಂತಿರಬೇಕು. ಮ್ಯಾರವಾನ ಪದ ಪೋರ್ಚುಗೀಸ್ ಭಾಷೆಯ ಮರಿಜಿ ಆಂಗೋ (ಮಾದಕವಸ್ತು ಎಂದು ಅರ್ಥ) ಎಂಬುದರಿಂದ ಬಂದಿದೆ ಎಂದು ಊಹಿಸಲಾಗಿದೆ. ಅಮೆರಿಕದಲ್ಲಿ ಎಲ್ಲೆಡೆಗಳಲ್ಲೂ ಸುಲಭವಾಗಿ ಹಾಗೂ ಅತಿ ಕಡಿಮೆ ಬೆಲೆಗೆ ದೊರಕುವ ವಸ್ತು ಭಂಗಿ. ಅಶುದ್ಧ ಹಾಗೂ ಕೀಳುದರ್ಜೆಯ ವಸ್ತುವಿದು. ಇದರಿಂದ ಕೆಲವು ರೋಗಗಳೂ ಬರಬಹುದೆಂದು ಹೇಳಲಾಗಿದೆ.


ಗಾಂಜಾ ಮೊಟ್ಟಮೊದಲು ಔಷಧರೂಪದಲ್ಲಿ ಬಳಕೆಗೆ ಬಂದುದು ಪ್ರಾಚೀನ ಚೀನದಲ್ಲಿ. ಇದನ್ನು ಭಾರತ, ಆಫ್ರಿಕ ಅನಂತರ ಯುರೋಪು ದೇಶಗಳಲ್ಲೂ ಉಪಯೋಗಿಸಲಾಗುತ್ತಿತ್ತು ಮತ್ತು ಮಧ್ಯ ಮತ್ತು ದಕ್ಷಿಣ ಅಮೆರಿಕ ದೇಶಗಳ ಆದಿವಾಸಿಗಳಿಗೂ ಇದರ ಉಪಯೋಗ ಚೆನ್ನಾಗಿ ತಿಳಿದಿತ್ತು. ಇದನ್ನು ನೋವು ಮತ್ತು ಸಣ್ಣಪುಟ್ಟ ರೋಗಗಳಿಗೆ ಶಿಫಾರಸು ಮಾಡುತ್ತಿದ್ದರು. ಗಾಂಜಾದ ಬಗ್ಗೆ ೧೯೩೮ ರ ಅನಂತರ ಗಮನಾರ್ಹವಾದ ಸಂಶೋಧನೆಗಳು ನಡೆದಿವೆ. ಇದರ ರಾಸಾಯನಿಕ ಸ್ವರೂಪ ಅತಿ ಜಟಿಲವಾದದ್ದು. ಇದರ ಪುರ್ಣ ಅರಿವು ನಮಗಿನ್ನೂ ಆಗಿಲ್ಲ. ಟೆಟ್ರಹೈಡ್ರೊಕ್ಯನಾಬಿನಾಲ್ ಎಂಬುದು ಗಾಂಜಾದ ಕ್ರಿಯಾಂಶ (ಆಕ್ಟಿವ್ ಪ್ರಿನ್ಸಿಪಲ್) ಎಂದು ವಿಜ್ಞಾನಿಗಳು ನಂಬಿದ್ದಾರೆ. ಕ್ಯನಾಬಿನಾಲಿನಲ್ಲಿ ಅನೇಕ ಸ್ವರೂಪಗಳಿವೆ. ಪ್ರತಿಯೊಂದು ಒಂದು ನಿರ್ದಿಷ್ಟ ರೀತಿಯ ಮಾದಕಾವಸ್ಥೆಗೆ ಕಾರಣವಾಗಬಹುದು.


ಇತ್ತೀಚೆಗೆ ಯುವಕ ಯುವತಿಯರಲ್ಲಿ ಭಂಗಿ ಸೇವನೆ ಒಂದು ಬೃಹತ್ಸಮಸ್ಯೆಯಾಗಿ ಪ್ರಪಂಚಾದ್ಯಂತ ತಲೆ ಎತ್ತಿದೆ. ಪಾಶ್ಚಾತ್ಯ ದೇಶಗಳಲ್ಲಿ ಇದಕ್ಕೆ ವೀಡ್, ಪಾಟ್, ಸ್ಟಫ್, ಗ್ರ್ಯಾಸ್, ಇಂಡಿಯನ್ ಹೇ, ಟೀ, ಮೇರಿ ಜೇನ್ ಮುಂತಾದ ಹೆಸರುಗಳು ರೂಢಿಗೆ ಬಂದಿವೆ. ಗಿಡಗಳನ್ನು ಕಿತ್ತು, ಕತ್ತರಿಸಿ, ಒಣಗಿಸಿ, ಪುಡಿಮಾಡಿ ಸಿಗರೇಟು ಚುಟ್ಟಾಗಳಂತೆ ಸೇದುವುದೇ ಎಲ್ಲೆಲ್ಲೂ ಅನುಸರಣೆಯಲ್ಲಿರುವ ಚಟ. ಇವಕ್ಕೆ ಇಂಗ್ಲಿಷಿನಲ್ಲಿ ರೀಫರ್್ಸ ಅಥವಾ ಜಾಯಿಂಟ್ಸ್ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ಈ ವಸ್ತುವನ್ನು ದೇಹಕ್ಕೆ ಚುಚ್ಚಿ ಸೇರಿಸಿಕೊಳ್ಳುವುದೂ ವರದಿಯಾಗಿದೆ. ಪಾನೀಯ, ತಾಂಬೂಲ ಹಾಗೂ ಮಿಠಾಯಿಗಳಲ್ಲಿ ಸೇರಿಸಿ ಸೇವಿಸುವುದು ಮತ್ತೊಂದು ಬಗೆ. ಗಾಂಜಾ ಸೇವನೆಯಿಂದ ದೇಹ ಹಾಗೂ ಮನಸ್ಸುಗಳೆರಡರ ಮೇಲೂ ದುಷ್ಟಪರಿಣಾಮಗಳಾಗುತ್ತವೆ.


ದೈಹಿಕ ಪರಿಣಾಮಗಳು

ಬದಲಾಯಿಸಿ

ಗಾಂಜಾವನ್ನು ಸೇವಿಸುವ ವ್ಯಕ್ತಿಯ ನಾಡಿಯ ಓಟ ತ್ವರಿತಗೊಳ್ಳುತ್ತದೆ. ರಕ್ತದ ಒತ್ತಡ ಅಲ್ಪ ಸ್ವಲ್ಪ ಏರುತ್ತದೆ. ಕಣ್ಣು ಗುಡ್ಡೆ ಕೆಂಪಗಾಗುತ್ತದೆ. ರಕ್ತದಲ್ಲಿ ಸಕ್ಕರೆಯ ಅಂಶ ಅಧಿಕಗೊಳ್ಳುತ್ತದೆ. ಪದೇ ಪದೇ ಮೂತ್ರವಿಸರ್ಜನೆಗೆ ಒತ್ತಾಯ ಕಂಡುಬರುತ್ತದೆ. ಗಂಟಲೊಣಗುವುದು, ಬಾಯಾರುವುದು, ಓಕರಿಕೆ, ವಾಂತಿ ಕೆಲವು ವೇಳೆ ಭೇದಿ ಸಹ ಆಗಬಹುದು. ಕಣ್ಣಿನ ಪಾಪೆಯ ಸ್ಥಿತಿಸ್ಥಾಪಕಶಕ್ತಿ ಕಡಿಮೆಯಾಗುತ್ತದೆ. ಬೆರಳುಗಳು ಅದುರುವುದು ಸಾಮಾನ್ಯ. ದೈಹಿಕ ಮತ್ತು ಮಾನಸಿಕ ಕ್ರಿಯೆಗಳಲ್ಲಿ ಪರಸ್ಪರ ಹೊಂದಾಣಿಕೆಗೆ ಧಕ್ಕೆ ಉಂಟಾಗುತ್ತದೆ. ಉದಾಹರಣೆಗೆ ನೆಟ್ಟಗೆ ನಿಲ್ಲಲ್ಲು ಮತ್ತು ಬೇಕಾಗಿರುವೆಡೆ ಎಲ್ಲರಂತೆ ಹೋಗಲು ಸಾಧ್ಯವಾಗದಿರಬಹುದು.


ಮಾನಸಿಕ ಪರಿಣಾಮಗಳು

ಬದಲಾಯಿಸಿ

ಅತಿಸಾಮಾನ್ಯವಾಗಿ ಕಂಡುಬರುವ ಪ್ರತಿಕ್ರಿಯೆಗಳೆಂದರೆ ಒಂದು ರೀತಿಯ ಸ್ವಪ್ನಾವಸ್ಥೆ, ಅರಿವಿನಲ್ಲಿ ಬದಲಾವಣೆ, ಒಂದಕ್ಕೊಂದು ಹೊಂದಾಣಿಕೆ ಯಿಲ್ಲದ ಭಾವನಾತರಂಗಗಳು ಹತೋಟಿಯಿಲ್ಲದೆ ತಮ್ಮಷ್ಟಕ್ಕೆ ತಾವೇ ತೇಲಾಡುವಂಥ ತೋರಿಕೆ ಇತ್ಯಾದಿ. ಈ ಭಾವನಾತರಂಗಗಳು ಒಂದಾದ ಮೇಲೊಂದು ಜೋಡಣೆ ಯಿಲ್ಲದೆ ಇಲ್ಲಷ್ಟು ಅಲ್ಲಷ್ಟು ಹರುಕು ಹುರುಕು ಎಂದೋ ನಡೆದುಹೋದ ಮರೆತಿರುವ ಪ್ರಸಂಗಗಳು ಜ್ಞಾಪಕಕ್ಕೆ ಬರುವುದು ಮತ್ತು ಪ್ರಮುಖ ಪ್ರಸಂಗಗಳು ಜ್ಞಾಪಕದಲ್ಲಿ ಉಳಿಯದಿರುವುದು ಸಾಮಾನ್ಯ. ನಿಮಿಷಗಳು ಗಂಟೆಗಳಂತೆ ಗಂಟೆಗಳು ನಿಮಿಷಗಳಂತೆ ಭಾಸವಾಗುವುದು, ಸಂಕುಚಿತ ಸ್ಥಳ ಬೃಹದಾಕಾರವಾಗಿ ಕಾಣುವುದು, ಹತ್ತಿರವಿರುವ ವಸ್ತುಗಳು ದೂರವಿರುವಂತೆ ತೋರುವುದು ಇವೆಲ್ಲ ಸಾಮಾನ್ಯ. ಹೆಚ್ಚು ಮೊತ್ತದಲ್ಲಿ ಗಾಂಜಾ ಸೇವಿಸಿದರೆ ಅತ್ಯಂತ ವಾಸ್ತವಿಕವೆಂಬಂತೆ ತೋರುವ ಭ್ರಮೆಯ ಅನುಭವ ವಾಗುತ್ತದೆ. ಈ ಭ್ರಮೆ ಸಾಮಾನ್ಯವಾಗಿ ಉಲ್ಲಾಸ ಕೊಡುವ ಸಂತೋಷಾನುಭವ. ಆದರೆ ಅದರಲ್ಲಿ ಕಾಣುವ ಬಣ್ಣಗಳು, ಕಲ್ಪನೆಗೆ ಬರುವ ಲೈಂಗಿಕಪ್ರಸಂಗಗಳು ಮುಂತಾದವು ಔಷಧದ ಪ್ರಭಾವಕ್ಕಿಂತ ವ್ಯಕ್ತಿಯ ವ್ಯಕ್ತಿತ್ವವನ್ನು ಅವಲಂಬಿಸುತ್ತವೆ ಎಂದು ಹೇಳಲಾಗಿದೆ. ಅನೇಕ ವೇಳೆ ಮನಃಸ್ಥಿತಿಯಲ್ಲಿಯೂ ಬದಲಾವಣೆಗಳನ್ನು ಕಾಣಬಹುದು. ಅತ್ಯಂತ ಸುಖ ಸಂತೋಷಗಳಿಂದ ಕೂಡಿದ ಒಂದು ರೀತಿಯ ಉದ್ರೇಕಾನುಭವ ಈ ಔಷಧಿಯ ವೈಶಿಷ್ಟ್ಯ. ಹತೋಟಿಯಿಲ್ಲದ ನಗು ಹಾಗೂ ಅತಿ ಸ್ವಲ್ಪ ಉತ್ತೇಜನದಿಂದಲೇ ಉಂಟಾಗುವ ಆನಂದಾತಿರೇಕ ಇವು ಸಾಮಾನ್ಯ ಅನುಭವಗಳು. ಅನಂತರ ವ್ಯಕ್ತಿ ಒಂದು ರೀತಿಯ ದುಗುಡ, ವಿಲಕ್ಷಣ ಕಲ್ಪನಾಪ್ರಪಂಚದಲ್ಲಿ ಮುದುರಿಕೊಳ್ಳುತ್ತಾನೆ. ಅಪರೂಪಕ್ಕೆ ಗಾಂಜಾ ಸೇವನೆಯಿಂದ ಕೆಲವರಲ್ಲಿ ಇರುವ ಲವಲವಿಕೆಯೂ ಹೋಗಿ ಜಡತ್ವ ಕಂಡುಬರಬಹುದು. ಇಂಥವರು ಇನ್ನೂ ಹೆಚ್ಚಿನ ಪ್ರಮಾಣಗಳಲ್ಲಿ ಸೇವಿಸಿದರೆ ನಿಷ್ಕಾರಣವಾದ ಭೀತಿ ಆವರಿಸಿ ಸಾವಿನ ಭಯ ತೋರಬಹುದು. ತನ್ನ ದೇಹ ಸೊಟ್ಟಪಟ್ಟವಾದಂತೆ, ತಲೆ ದೊಡ್ಡದಾಗಿರುವಂತೆ, ಕೈಕಾಲುಗಳು ಎತ್ತಲಾರದಷ್ಟು ಭಾರವಾದಂತೆ ಅನುಭವವಾಗುತ್ತದೆ. ಕಲ್ಪನಾಪ್ರಪಂಚದ ಭ್ರಮೆ ಅನೇಕ ವಿಧ. ತಾನು ಎರಡು ವ್ಯಕ್ತಿತ್ವಗಳಿಂದ ಕೂಡಿದ್ದೇನೆಂಬ ಅರಿವು ಸಾಮಾನ್ಯವಾಗಿ ಉಂಟಾಗುತ್ತದೆ. ಔಷಧದ ಪ್ರಮಾಣ ಕಡಿಮೆಯಾಗಿದ್ದರೂ ಮನಸ್ಸಿನ ಆವೇಗದಿಂದ ನಡೆವಳಿಕೆ ಹಠಾತ್ತಾದ ಪ್ರವೃತ್ತಿಯನ್ನೊಳಗೊಂಡಿರಲೂ ಸಾಧ್ಯ. ಗೊತ್ತುಗುರಿ ಇಲ್ಲದ ಭಾವನೆಗಳು ಉದ್ಭವವಾದೊಡನೆ ವ್ಯಕ್ತಿ ಮಾತಿನಲ್ಲಿ ಈ ಭಾವನೆಗಳನ್ನು ಹೊರಗೆಡಹುತ್ತಾನೆ. ಆದರೆ ಹಿಂಸಾತ್ಮಕ ಅಥವಾ ಮೇಲೆ ಬೀಳುವ ಪ್ರವೃತ್ತಿ ಅಪರೂಪ. ವ್ಯಕ್ತಿ ಒಬ್ಬನೇ ಇದ್ದರೆ ಅಮಲೇರಿದವನಂತೆ ಮಲಗಿದ್ದು ಗದ್ದಲ ಮಾಡದೆ ಇರುತ್ತಾನೆ. ಯಾರಾದರೂ ಜೊತೆಗಿದ್ದರೆ ಹರಟುವುದು, ಉಲ್ಲಾಸ ಪುರಿತವಾಗಿರುವುದು ಸಾಮಾನ್ಯ. ಅನೇಕವೇಳೆ ಹುಚ್ಚು ಹಿಡಿದವರಿಗೂ ಇವರಿಗೂ ಹೆಚ್ಚು ವ್ಯತ್ಯಾಸಗಳೇನೂ ಕಂಡು ಬರುವುದಿಲ್ಲ. ಗಾಂಜಾ ಸೇವನೆಯಿಂದ ಸಂಭೋಗಾನಂದ ವೃದ್ಧಿಗೊಳ್ಳುತ್ತದೆಂಬುದು ಕೆಲವರ ಅಭಿಪ್ರಾಯ. ಆದರೆ ಇದಕ್ಕೆ ವೈಜ್ಞಾನಿಕ ಆಧಾರಗಳಿಲ್ಲ. ಇದರ ಪ್ರಭಾವಕ್ಕೊಳಗಾಗಿ ರುವ ವ್ಯಕ್ತಿಯ ಮಾನಸಿಕ ಹತೋಟಿ ಪುರ್ಣ ಸಡಿಲಗೊಂಡು ಗಂಡಸಲ್ಲೇ ಆಗಲಿ ಹೆಂಗಸಲ್ಲೇ ಆಗಲಿ ನೈತಿಕ ಮಟ್ಟ ಅಧೋಗತಿಗಿಳಿದಿರುತ್ತದೆ ಎಂಬುದರಲ್ಲಿ ಅನುಮಾನ ವಿಲ್ಲ. ಈ ಸಂದರ್ಭಗಳಲ್ಲಿ ಮನುಷ್ಯನ ಪಾಶವೀಗುಣ ಎದ್ದು ಕಾಣುತ್ತದೆ.


ಗಾಂಜಾ ಸೇವಿಸುವ ತಂದೆ ತಾಯಿಗಳಿಗೆ ಹುಟ್ಟುವ ಮಕ್ಕಳಲ್ಲಿ ಅನುವಂಶಿಕ ಪರಿಣಾಮಗಳೇನಾದರೂ ಉಂಟೇ ಎಂಬುದರ ಬಗ್ಗೆ ಅಮೆರಿಕದ ನ್ಯೂಜರ್ಸಿಯ ಪ್ಯಾಟರ್ಸನ್ನಲ್ಲಿರುವ ಸೇಂಟ್ ಡಿಸ್ಮಾಸ್ ಆಸ್ಪತ್ರೆಯ ಡಾಕ್ಟರ್ ಲೂಯಿ ಸೌಜರವರು ಅಧ್ಯಯನ ನಡೆಸಿದ್ದಾರೆ. ಗಾಂಜಾ ತನ್ನ ಪ್ರಭಾವವನ್ನು ವಂಶವಾಹಿಗಳ ಮೇಲೂ ಬೀರಿ ಪೀಳಿಗೆಯ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡಿ, ಅನುವಂಶಿಕವಾಗಿ ಬುದ್ಧಿಮಾಂದ್ಯ ಇತ್ಯಾದಿ ನ್ಯೂನತೆಗಳನ್ನು ಸಾಗಿಸುತ್ತದೆ ಎಂದು ಅವರು ದೃಢಪಡಿಸಿದ್ದಾರೆ. ದೀರ್ಘಾವಧಿ ಗಾಂಜಾ ಸೇವನೆಯಿಂದ ಕೆಮ್ಮು, ಗೂರಲು, ನಿದ್ರಾಭಂಗ, ಚಿತ್ತೈಕಾಗ್ರತೆಗೆ ಧಕ್ಕೆ ಮುಂತಾದ ದುಷ್ಪರಿಣಾಮಗಳು ಸಾಮಾನ್ಯ ಎಂದು ಅಮೆರಿಕದ ವೈದ್ಯರ ಸಂಘ ವರದಿ ಮಾಡಿದೆ. ಗಾಂಜಾ ಸೇವನೆ ಕ್ರಮೇಣ ಚಿಕಿತ್ಸೆ ತಿರುಗುತ್ತದೆಯೇ ಎಂಬ ಪ್ರಶ್ನೆಗೆ ಖಚಿತವಾದ ಉತ್ತರ ಇನ್ನೂ ಸಿಕ್ಕಿಲ್ಲ. ಸಾಮಾನ್ಯವಾಗಿ ಚಟವಸ್ತುಗಳನ್ನು ಸೇವಿಸುತ್ತಿರು ವವರು ಇದ್ದಕ್ಕಿದ್ದಂತೆ ನಿಲ್ಲಿಸಿದರೆ ಅವರ ಮಾನಸಿಕ ನೆಮ್ಮದಿ ಕೆಡುತ್ತದೆ; ಅವರು ಹುಚ್ಚರಂತೆ ಚಟಪಟಿಸುತ್ತಾರೆ. ಆದರೆ ಗಾಂಜಾ ಸೇವನೆಯಲ್ಲಿ ಈ ರೀತಿಯ ಲಕ್ಷಣಗಳು ಕಾಣುವುದಿಲ್ಲವಾದ್ದರಿಂದ ಗಾಂಜಾ ಚಟವಸ್ತುವಲ್ಲ ಎಂದು ಹೇಳಲಾಗಿದೆ. ವೈಜ್ಞಾನಿಕ ಪ್ರಯೋಗಗಳಿಂದಲೂ ಈ ಮಾತು ಸ್ಥಿರಪಟ್ಟಿದೆ. ಆದರೆ ಇದರ ರುಚಿ ಕಂಡವರು ಇದಕ್ಕೂ ಹೆಚ್ಚಿನ ಪ್ರಭಾವ ಬೀರುವ ವಸ್ತುಗಳನ್ನು ಹುಡುಕಿ ಸೇವಿಸುತ್ತಾರೆ.


ಔಷಧವಾಗಲ್ಲದೆ ಮಾದಕವಸ್ತುವಾಗಿ ಗಾಂಜಾವನ್ನು ಬಳಸಿದಾಗ ದೇಹ ಮತ್ತು ಮನಸ್ಸುಗಳ ಮೇಲೆ ಆಗುವ ದುಷ್ಪರಿಣಾಮಗಳು ಅಪಾರವಾದ್ದರಿಂದ ಅದರಿಂದ ಆದಷ್ಟು ದೂರ ಇರುವುದೇ ಒಳ್ಳೆಯದು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: