ಜೊಹಾನ್ ವೂಲ್ಫ್‍ಗಾಂಗ್ ವಾನ್ ಗಯಟೆ

(ಗಯಟೆ ಇಂದ ಪುನರ್ನಿರ್ದೇಶಿತ)


ಜೊಹಾನ್ ವೂಲ್ಫ್‍ಗಾಂಗ್ ವಾನ್ ಗಯಟೆ(28 ಆಗಸ್ಟ್ 1749 – 22 ಮಾರ್ಚ್ 1832) ಅಥವಾ ಗಯಟೆ ಜರ್ಮನಿಕವಿ. ನಾಟಕಕಾರ, ವಿಮರ್ಶಕ, ಕಾದಂಬರಿಕಾರ, ವಿಜ್ಞಾನಿ, ಚಿಂತಕ, ಆಡಳಿತಗಾರ, ವಿವಿಧ ಪ್ರಕಾರಗಳಲ್ಲಿ ವಿಪುಲ ಸಾಹಿತ್ಯ ರಾಶಿಯನ್ನೇ ಸೃಷ್ಟಿಸಿದ ಮಹಾಸಾಹಿತಿ. ಯುರೋಪಿನ ರೆನೆಸಾನ್ಸ್ ಯುಗದ ಪರಂಪರೆಯ ಕಟ್ಟಕಡೆಯ ಪ್ರತಿನಿಧಿ. ಈತ ಸೃಷ್ಟಿಸಿದ ವಿಶ್ವಸಾಹಿತ್ಯ ಎನ್ನುವ ಮಾತನ್ನು ಈತನಿಗೇ ಅನ್ವಯಿಸಿ ಹೇಳುವುದಾದರೆ ಇವನೊಬ್ಬ ಶ್ರೇಷ್ಠ ವಿಶ್ವಸಾಹಿತಿ. ನೂರಾರು ರಸಮಯ ಘಟನೆಗಳಿಂದ ವೈವಿಧ್ಯಮಯ ಅನುಭವಗಳಿಂದ ತುಂಬಿ ಹರಿಯುವ ಇವನ ಬದುಕೇ ಒಂದು ರೋಮಾಂಚಕ ಇತಿಹಾಸದಂತಿದೆ.

ಜೊಹಾನ್ ವೂಲ್ಫ್‍ಗಾಂಗ್ ವಾನ್ ಗಯಟೆ
[[File:|frameless|center=yes|alt=]]
ಜನನ(೧೭೪೯-೦೮-೨೮)೨೮ ಆಗಸ್ಟ್ ೧೭೪೯
Frankfurt-am-Main, ಜರ್ಮನಿ
ಮರಣ22 March 1832(1832-03-22) (aged 82)
Weimar, Grand Duchy of Saxe-Weimar-Eisenach, German Confederation
ವೃತ್ತಿಕವಿ, ಕಾದಂಬರಿಕಾರ,ನಾಟಕಕಾರ, ತತ್ವಜ್ಞಾನಿ,ರಾಜತಂತ್ರಜ್ಞ,ಆಡಳಿತಗಾರ
ರಾಷ್ಟ್ರೀಯತೆಜರ್ಮನ್
ಸಾಹಿತ್ಯ ಚಳುವಳಿSturm und Drang; Weimar Classicism
ಪ್ರಮುಖ ಕೆಲಸ(ಗಳು)Faust; The Sorrows of Young Werther; Wilhelm Meister's Apprenticeship; Elective Affinities; "Prometheus"; Zur Farbenlehre; Italienische Reise; Westöstlicher Diwan
ಬಾಳ ಸಂಗಾತಿChristiane Vulpius (1806–16, her death)



ಸಹಿ

ಗಯಟೆ 1749ರ ಆಗಸ್ಟ್ 28ರಂದು ಜರ್ಮನಿಯ ಫ್ರಾಂಕ್ಫರ್ಟ್ ಆನ್-ದಿ-ಮೆಯ್ನ್ನಲ್ಲಿ ಜನಿಸಿದ. ಶ್ರೀಮಂತ ಕುಟುಂಬಕ್ಕೆ ಸೇರಿದ್ದ ಇವನ ತಂದೆ ಜೋವಾನ್ ಕ್ಯಾಸ್ಪರ್ ಗಯಟೆ ಸುಸಂಸ್ಕೃತ ಗೃಹಸ್ಥ. ತಾಯಿ ಕ್ಯಾಥರೀನ್ ಎಲಿಜಬೆತ್ ಟೆಕ್ಸ್‍ಟರ್ ಉತ್ತಮ ವಂಶಸ್ಥಳು; ಫ್ರಾಂಕ್‍ಫರ್ಟಿನ ಪೌರಾಧ್ಯಕ್ಷನ ಮಗಳು. ಸುಖಸಂತೋಷಗಳಿಂದ ತುಂಬಿದ ಶ್ರೀಮಂತ ವಾತಾವರಣದಲ್ಲಿ ಗಯಟೆಗೆ ಒಳ್ಳೆಯ ಶಿಕ್ಷಣ ದೊರೆಯಿತು. 1759 ರಿಂದ ಮೂರು ವರ್ಷಗಳ ಕಾಲ ಫ್ರೆಂಚ್ ಸೈನ್ಯ ಫ್ರಾಂಕ್ಫರ್ಟನ್ನು ಮುತ್ತಿ ಆಕ್ರಮಿಸಿಕೊಂಡಿತ್ತು. ಕೋಲಾಹಲಕರವಾದ ಆ ಕಾಲದ ಹಲವು ಘಟನೆಗಳಿಂದಾಗಿ ಗಯಟೆಯ ದೃಷ್ಟಿ ವಿಶಾಲಗೊಂಡು ಮನಸ್ಸು ರಂಗಭೂಮಿಯತ್ತ ತಿರುಗುವಂತಾಯಿತು. ನ್ಯಾಯಶಾಸ್ತ್ರವನ್ನು ಓದಲೆಂದು 1765ರಲ್ಲಿ ಲೀಪ್ಜಿ಼ಗ್ಗಿಗೆ ಹೋಗಿ ಮೂರು ವರ್ಷದ ಅನಂತರ ಊರಿಗೆ ವಾಪಸಾದ. ಆಗಿನ ಅವನ ಕೆಲವು ಲೇಖನಗಳಲ್ಲಿ ರೊಕೋಕೋ ಯುಗದ ಆಡಂಬರಯುತ ಶೈಲಿ ಮತ್ತು ಅತಿರಂಜಕ ಕಲ್ಪನೆಗಳನ್ನು ಕಾಣಬಹುದು. ದೀರ್ಘಕಾಲದ ಕಾಯಿಲೆಯಿಂದ ಚೇತರಿಸಿಕೊಂಡ ಮೇಲೆ ಶಿಕ್ಷಣ ಮುಂದುವರಿಸಲೆಂದು ಸ್ಟ್ರಾಸ್ಬರ್ಗಿಗೆ ಹೋದ (1770). ಅಲ್ಲಿ ವಿದ್ಯಾಭ್ಯಾಸ ಮುಗಿಯಿತು.

ಇವನಲ್ಲಿ ಅಡಗಿದ್ದ ಸಾಹಿತ್ಯಶಕ್ತಿಗೆ ಅಲ್ಲಿಸ್ಟ್ರಾಸ್‍ಬರ್ಗ್‍ನಲ್ಲಿ ಹೆಚ್ಚಿನ ಸ್ಫೂರ್ತಿ ಸಿಕ್ಕಿತು. ಗಯಟೆ ಅಲ್ಲಿ ಹರ್ಡರ್ನನ್ನು ಭೇಟಿಯಾದುದು ನಿಜವಾಗಿ ಧರ್ಮಕರ್ಮ ಸಂಯೋಗವೇ ಸರಿ. ಹರ್ಡರನ ಪ್ರಭಾವದಿಂದಾಗಿ ಗಯಟೆಗೆ ಷೇಕ್‍ಸ್ಪಿಯರನ ಕೃತಿಗಳ ಪರಿಚಯವಾಯಿತು. ಗಾತಿಕ್ ವಾಸ್ತುಶಿಲ್ಪ, ಹೋಮರನ ಮಹಾಕಾವ್ಯ, ಓಸಿಯನ್ ಮುಂತಾದವನ್ನು ಓದಿದ. 1771-75ರವರೆಗಿನ ಅವಧಿಯಲ್ಲಿ ಫ್ರಾಂಕ್‍ಫರ್ಟ್‍ನಲ್ಲಿ ವಕೀಲನಾಗಿ ಕೆಲಸ ಮಾಡಿದ. ಆಗ ಬರೆದ ಗಾಟ್ಸ್ ಫನ್ ಬರ್ಲಿಷಿಂಗನ್ ಎಂಬ ನಾಟಕ ವಿಶೇಷ ಖ್ಯಾತಿ ತಂದಿತು. ಸಾರೋಸ್ ಆಫ್ ವರ್ದರ್ (ಡೈ ಲೇಡನ್ ಡೇಯ್ ಯಂಗನ್ ವರ್ದರ್) ಎಂಬ ಕಾದಂಬರಿ (1774) ಕವಿಯ ಹೆಸರು ಯುರೋಪಿನಲ್ಲೆಲ್ಲ ಹರಡುವಂತೆ ಮಾಡಿತು. 1775ರಲ್ಲಿ ಗಯಟೆ ವೈಮರ್ಗೆ ಹೋದ. ಪ್ರಶಾಂತವಾದ ಆ ಪುಟ್ಟ ಸಂಸ್ಥಾನದ ವಾತಾವರಣದಿಂದಾಗಿ ಆತನ ಬಹುಮುಖ ಪ್ರತಿಭೆ ವಿಕಾಸವಾಯಿತು. ಸುಮಾರು ಹನ್ನೊಂದು ವರ್ಷ ಕಾಲ ಆ ರಾಜ್ಯದ ಮುಖ್ಯಾಧಿಕಾರಿಯಾಗಿ ಕೆಲಸ ಮಾಡಿ, ವೈವಿಧ್ಯಮಯವಾದ ಅಪೂರ್ವ ಅನುಭವಗಳನ್ನು ಆತ ಮೈಗೂಡಿಸಿಕೊಂಡ. ಚಾರ್ಲೆಟ್ ಫನ್ ಸ್ಟೈನ್ ಎಂಬಾಕೆಯ ಪ್ರಭಾವದಿಂದ ಗಯಟೆ ಸುಸಂಸ್ಕೃತ ವ್ಯಕ್ತಿಯಾದ. ಕಲೆ, ವಿಜ್ಞಾನ ಮೊದಲಾದ ಹಲವು ವಿಷಯಗಳಲ್ಲಿ ಇವನ ಅಭಿರುಚಿ ಬೆಳೆಯಿತು. 1786-88ರವರೆಗೆ ಇಟಲಿಯಲ್ಲಿ ಪ್ರವಾಸ ಮಾಡಿ ಕ್ಲಾಸಿಕಲ್ ಇಟಲಿಯ ಕಲಾವೈಭವವನ್ನು ಕಣ್ಣಾರೆ ಕಂಡುಬಂದ. ಹರ್ಡರನ ಪ್ರಭಾವ, ಷೇಕ್‍ಸ್ಪಿಯರನ ಕಾವ್ಯ ಮತ್ತು ಕ್ಲಾಸಿಕಲ್ ಇಟಲಿಯ ಕಲಾಸಂಪತ್ತು-ಇವು ಇವನ ವ್ಯಕ್ತಿತ್ವದ ಎರಡು ಬೇರೆ ಬೇರೆ ಮುಖಗಳ ವಿಕಸನಕ್ಕೆ ನೆರವಾದವು. 1790ರಲ್ಲಿ (ಅಲ್ಲಿಯವರೆಗೆ ಹದಿನೇಳು ವರ್ಷಗಳು ವಿವಾಹವಿಲ್ಲದೆ ಯಾರೊಂದಿಗೆ ಸಹಜೀವನ ನಡೆಸುತ್ತಿದ್ದನೋ ಆ ಹೆಂಗಸು) ಕ್ರಿಸ್ಟಿಯಾನ್ ವಲ್ಪಿಯಸ್ ಎಂಬುವಳನ್ನು ಮದುವೆಯಾದ. ವೈಮರ್ಗೆ ಹಿಂದಿರುಗಿದ ಮೇಲೆ ರಾಜ್ಯ ಅಧಿಕಾರ ಪದವಿಯನ್ನು ಬಿಟ್ಟುಕೊಟ್ಟ. 1791-1817ವರೆಗೆ ವೈಮರ್ ರಂಗಭೂಮಿಯ ಮೇಲ್ವಿಚಾರಣೆ ವಹಿಸಿಕೊಂಡು ಕೆಲಸ ಮಾಡಿದ. ಆ ಕಾಲದಲ್ಲಿ ಷಿಲ್ಲರನೊಡನೆ ಅತಿ ನಿಕಟವಾದ ಸ್ನೇಹ ಬೆಳೆಯಿತು. 1800-1832ರವರೆಗೆ ಗಯಟೆ ಅಪೂರ್ವ ಕೀರ್ತಿ, ಗೌರವಗಳಿಗೆ ಭಾಜನನಾಗಿ ಯುರೋಪಿನ ಅತ್ಯಂತ ಗಣ್ಯಸಾಹಿತಿ ಎನಿಸಿಕೊಂಡ. ಈ ಸುಮಾರಿನಲ್ಲೇ ತನ್ನ ಮೇರುಕೃತಿ ಫೌಸ್ಟ್ ನಾಟಕದ ಎರಡನೆಯ ಭಾಗವನ್ನು ತಿದ್ದಿ ಬರೆದು, ತಾನು ಸಾಯುವ ಒಂದು ವರ್ಷಕ್ಕೆ ಮೊದಲು ಅದನ್ನು ಮುಗಿಸಿದ, 1832ರಲ್ಲಿ ಈತ ತೀರಿಕೊಂಡಾಗ ಯುರೋಪಿನ ಒಬ್ಬ ಯುಗಪುರುಷ ಕಣ್ಮರೆಯಾದಂತಾಯಿತು.


ಕೃತಿಗಳು

ಬದಲಾಯಿಸಿ
 
First edition of The Sorrows of Young Werther
 
Goethe, age 38, painted by Angelica Kauffman 1787

ಗಯಟೆಯ ಸಾಹಿತ್ಯಕ ಕೃತಿಗಳನ್ನು ಮೂರು ಮುಖ್ಯ ಭಾಗಗಳಾಗಿ ವಿಭಜಿಸಬಹುದು. ಮೊದಮೊದಲ ಕೃತಿಗಳು ರೊಕೋಕೋ ಯುಗದವು-ಅವು ಅಷ್ಟು ಪಕ್ವವಾಗಿಲ್ಲ. ಅನಂತರದವು ಜರ್ಮನಿಯ ರೊಮ್ಯಾಂಟಿಕ್ ಬಿರುಗಾಳಿಯ ಪ್ರಭಾವವನ್ನು ತೋರುವ ಕೃತಿಗಳು-ಸ್ಟುರ್ಮ್ ಉಂಡ್ ಡ್ರಂಗ್ ಯುಗದವು. ಕೊನೆ ಕೊನೆಯವು ಕ್ಲ್ಯಾಸಿಕ್ ಮತ್ತು ರೊಮ್ಯಾಂಟಿಕ್ ಅಂಶಗಳ ಸಮನ್ವಯವನ್ನು ತೋರುವಂಥವು. ಇವುಗಳಲ್ಲಿ ತಂತ್ರ ಮತ್ತು ಮನೋವೈಜ್ಞಾನಿಕ ಸೂಕ್ಷ್ಮತೆಗಳಿಗೆ ಹೆಚ್ಚು ಪ್ರಾಧಾನ್ಯ. ಇವು ಅತ್ಯಂತ ಆಧುನಿಕ ಅನಿಸುವಂತಿದ್ದು ಹೆನ್ರಿ ಜೇಮ್ಸ್ ಮುಂತಾದವರ ಆಧುನಿಕ ಕೃತಿಗಳಿಗೆ ಪೂರ್ವಸೂಚಿಗಳಂತಿವೆ.


ಗಾಟ್ಸ್ ಫನ್ ಬರ್ಲಿಷಿಂಗನ್ (1773)


ಇದೊಂದು ಐತಿಹಾಸಿಕ ನಾಟಕ, ಇದನ್ನು ಗಯಟೆ ಎರಡು ವರ್ಷ ಕಾಲ ತಿದ್ದಿ ಹೊಳಪುಗೊಳಿಸಿದ. ಇದರಲ್ಲಿ ರೆಫರ್ಮೇಷನ್ ಕಾಲದ ಸ್ವಾತಂತ್ರ್ಯ ವೀರಯೋಧನೊಬ್ಬನ ಕಥೆಯಿದೆ. ಕಥಾನಾಯಕ ಗಾಟ್ಸ್ ಮತ್ತು ಚಂಚಲಚಿತ್ತ ವೆಸ್ಲಿಂಗನ್ ಇಬ್ಬರೂ ವಿಭಿನ್ನ ಸ್ವಭಾವದವರಾದರೂ ಬಾಲ್ಯಸ್ನೇಹಿತರು. ವೆಸ್ಲಿಂಗನ್ ಗಾಟ್ಸ್ ಸೋದರಿ ಮೇರಿಯಲ್ಲಿ ಅನುರಕ್ತನಾಗಿರುತ್ತಾನೆ. ಗಾಟ್ಸ್ ಸ್ವಾತಂತ್ರ್ಯಪ್ರಿಯ ಶ್ರೀಮಂತ. ಆದರೆ ವೆಸ್ಲಿಂಗನ್ ಬ್ಯಾಂಬರ್ಗ್ ಬಿಷಪ್ಪನ ಅಡಿಯಾಳು. ನಾಟಕದ ಪ್ರಾರಂಭದಲ್ಲಿ ಗಾಟ್ಸ್ ತನ್ನ ಸ್ನೇಹಿತನನ್ನು ತನ್ನ ಹಳೆಯ ಶತ್ರುವಾದ ಬ್ಯಾಂಬರ್ಗಿನ ಬಿಷಪ್ಪಿನ ಸಹವಾಸದಿಂದ ಬೇರ್ಪಡಿಸಿ ಕೈಸೆರೆ ಹಿಡಿದು ತನ್ನ ಅರಮನೆಗೆ ಕರೆತರುತ್ತಾನೆ. ಅಲ್ಲಿ ಮೇರಿಯನ್ನು ಕಂಡಾಗ ವೆಸ್ಲಿಂಗನ್ನನ ಹಳೆಯ ಪ್ರೇಮ ಮರುಕಳಿಸುತ್ತದೆ; ಅವನು ಗಾಟ್ಸ್ ನ ಪಕ್ಷ ಹಿಡಿಯುತ್ತಾನೆ. ತನ್ನ ಖಾಸಗಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲೆಂದು ಬ್ಯಾಂಬರ್ಗಿಗೆ ಹೋದಾಗ ವೆಸ್ಲಿಂಗನ್ ತನ್ನ ಸ್ನೇಹಿತನಿಗೂ ಪ್ರೇಯಸಿಗೂ ಇತ್ತ ವಚನವನ್ನು ಮರೆತು ಭ್ರಷ್ಟನಾಗುತ್ತಾನೆ; ವಾಲ್ಡಾರ್ಫ್ ಎಂಬ ಕುಟಿಲಸ್ವಭಾವದ, ಅರಮನೆಯ ಬಣ್ಣದ ಚಿಟ್ಟೆಯ ಸಹವಾಸಕ್ಕೆ ಬೀಳುತ್ತಾನೆ. ದಬ್ಬಾಳಿಕೆಗೆ ಸಿಕ್ಕಿದ್ದ ರೈತರು ದಂಗೆ ಎದ್ದಾಗ ಗಾಟ್ಸ್ ಅವರ ಮುಖಂಡನಾಗಿ ಹೋರಾಡುತ್ತಾನೆ. ವೆಸ್ಲಿಂಗ್ನ್ನನ ಕೈಗೆ ಸಿಕ್ಕಿ, ಮರಣದಂಡನೆಗೆ ಗುರಿಯಾಗುತ್ತಾನೆ. ಮೇರಿ ಮಧ್ಯೆ ಪ್ರವೇಶಿಸಿ, ತನ್ನ ಮೇಲಿನ ಹಳೆಯ ಪ್ರೇಮದ ಸಲುವಾಗಿಯಾದರೂ ತನ್ನಣ್ಣನನ್ನು ಬಂಧನದಿಂದ ಬಿಡಿಸಬೇಕೆಂದು ಬೇಡಿಕೊಳ್ಳುತ್ತಾಳೆ. ಅವಳ ಮಾತಿಗೆ ಕರಗಿದ ವೆಸ್ಲಿಂಗನ್ ಮರಣದಂಡನೆಯ ಆಜ್ಞೆಯನ್ನು ಹರಿದುಹಾಕುತ್ತಾನೆ. ಆದರೆ ಅವನ ಹೆಂಡತಿ ವಾಲ್ಡಾರ್ಫ್ ಗಂಡನಿಗೆ ವಿಷವೂಡಿಸಿ ಕೊಲ್ಲುತ್ತಾಳೆ. ಅನಂತರ ತಾನೇ ಮರಣ ದಂಡನೆಗೆ ಗುರಿಯಾಗುತ್ತಾಳೆ. ಗಾಟ್ಸ್ ಕಾರಾಗೃಹದಲ್ಲಿ ಗಾಯಗೊಂಡು ಅಸು ನೀಗುತ್ತಾನೆ. ಅತಿ ಭಾವುಕತೆ ತುಂಬಿದ ಈ ನಾಟಕವನ್ನು ಜರ್ಮನ್ ರೊಮ್ಯಾಂಟಿಕ್ ಪಂಥದ ಘೋಷಣೆ ಎನ್ನಬಹುದು. ನಾಟಕದಲ್ಲಿನ ಅತಿರಂಜಕ ಶೈಲಿ, ರಾಗರಂಜಿತ ಪಾತ್ರ ವಿನ್ಯಾಸ-ಇವು ಜರ್ಮನಿಯ ಯುವಕಸ್ತೋಮವನ್ನು ಬಹಳವಾಗಿ ಆಕರ್ಷಿಸಿದವು. ಇದರಲ್ಲಿ ಕವಿ ತನ್ನ ಜೀವನದ ಹಲವು ಘಟನೆಗಳನ್ನೂ ಜೀವಂತ ವ್ಯಕ್ತಿಗಳನ್ನೂ ಸೇರಿಸಿದ್ದಾನೆ. ಈ ನಾಟಕದಲ್ಲಿ ಬಹುಮಟ್ಟಿಗೆ ಷೇಕ್ ಸ್ಪಿಯರನ ನಾಟಕಗಳ ಹಾಗೂ ಮಾರ್ಟಿನ್ ಲೂಥರ್ನ ಬೈಬಲ್ ಅನುವಾದದ ಶೈಲಿಗಳ ಅನುಕರಣ ಇದೆ. ನಿಜವಾದ ಅರ್ಥದಲ್ಲಿ ಇದನ್ನು ಐತಿಹಾಸಿಕ ನಾಟಕ ಎನ್ನುವುದು ಕಷ್ಟ. 16ನೆಯ ಶತಮಾನದ್ದೆಂದು ಹೇಳಲಾದ ನಾಟಕದ ಪರಿಸರ, ಹಿನ್ನೆಲೆ, ಪಾತ್ರಗಳು-ಎಲ್ಲವೂ ಅಸಹಜವಾಗಿವೆ. ಅದೇನೇ ಇರಲಿ, ಈ ನಾಟಕ ಜರ್ಮನಿಯ ರಂಗಭೂಮಿಗೆ ಹೊಸ ತಿರುವನ್ನು ಕೊಟ್ಟ ಕೃತಿ.


ಡೈಲೇಡನ್ ಡೇಯ್ ಯುಂಗನ್ ವರ್ದರ್ (1774)


ಗಯಟೆಯ ಕೀರ್ತಿ ಯುರೋಪಿನಲ್ಲೆಲ್ಲ ಹರಡುವಂತೆ ಮಾಡಿದ ಈ ಕೃತಿ ಒಂದು ದುರಂತ ಕಾದಂಬರಿ. ತನ್ನ ಸಮಕಾಲೀನರಾದ ಇಂಗ್ಲೆಂಡಿನ ಕಾದಂಬರಿಕಾರ ರಿಚರ್ಡ್ಸನ್ ಹಾಗೂ ಫ್ರೆಂಚ್ ಸಾಹಿತಿ ರೂಸೋವಿನ ಕೃತಿಗಳಿಂದ ಪ್ರೇರಿತನಾಗಿದ್ದ ಗಯಟೆ ಈ ಕಾದಂಬರಿಯನ್ನು ಪತ್ರಗಳ ರೂಪದಲ್ಲಿ ಬರೆದಿದ್ದಾನೆ. ತನ್ನ ಸ್ವಂತ ಪ್ರಣಯಾನುಭವಗಳನ್ನು ಗಾಟ್ಸ್ ನಾಟಕದಲ್ಲಿ ಎರಕ ಹೊಯ್ದಂತೆ, ಚಾರ್ಲೆಟ್ ಬಫ್ಳೊಂದಿಗೆ ವೆಟ್ ಸ್ಲೆರ್ ನಲ್ಲಿ ತನಗಾದ ಪ್ರಣಯಾನುಭವವನ್ನು ಈ ಕಾದಂಬರಿಯಲ್ಲಿ ಪ್ರತಿರೂಪಿಸಿದ್ದಾನೆ. ತನ್ನ ಕಹಿ ಅನುಭವಗಳ ಜೊತೆಗೆ, ಸಹಪಾಠಿಯೊಬ್ಬನ ದುರಂತ ಅತ್ಮಹತ್ಯೆಯ ಪ್ರಕರಣವನ್ನೂ ಸೇರಿಸಿ ಕಥೆ ನೇಯ್ದಿದ್ದಾನೆ. ಕಥಾನಾಯಕ ವರ್ದರ್ ಒಬ್ಬ ಅತಿಭಾವುಕ ಯುವಕ ಲೋಟ್ ಎಂಬ ಸುಂದರಿಯನ್ನು ಗಾಢವಾಗಿ ಪ್ರೀತಿಸಿದ್ದು, ಅವಳು ತಮ್ಮಿಬ್ಬರ ಗೆಳೆಯನಾದ ಆಲ್ಬರ್ಟ್ ಆಗಲೇ ಮದುವೆಯಾಗಲು ನಿಶ್ಚಯಿಸಿರುವ ಹುಡುಗಿಯೆಂದು ತಿಳಿದಾಗ ನಿರಾಶೆಗೊಳಗಾ ಗುತ್ತಾನೆ. ಅವಳನ್ನು ಮರೆಯಲೆಂದು ದೂರದ ಊರಿಗೆ ಹೋಗಿ ನೆಲಸುತ್ತಾನೆ. ಆದರೆ ಅದಮ್ಯ ಪ್ರೇಮದ ಸೆಳೆತದಿಂದ ತಪ್ಪಿಸಿಕೊಳ್ಳಲಾರದೆ ಹಿಂದಿರುಗಿ ಬರುತ್ತಾನೆ. ಅಷ್ಟು ಹೊತ್ತಿಗೆ ಲೋಟ್ ಆಲ್ಬರ್ಟ್ ನ ಹೆಂಡತಿಯಾಗಿರುತ್ತಾಳೆ. ಅದನ್ನು ನೋಡಿ ತಾಳಲಾರದೆ ವರ್ದರ್ ಆಲ್ಬರ್ಟ್ ನ ಪಿಸ್ತೂಲಿನಿಂದಲೇ ತನ್ನ ತಲೆಗೆ ಗುಂಡಿಕ್ಕಿಕೊಂಡು ಸಾಯುತ್ತಾನೆ. ಈ ಕಾದಂಬರಿಯನ್ನು ಕೇವಲ ಅತಿಭಾವನಾಮಯ ಹಳಸಲು ಪ್ರೇಮಕಥೆ ಎನ್ನಲಾಗದು. ದುಗುಡ, ನಿರಾಶೆ, ಅಸಮಾಧಾನಗಳಿಂದ ತುಂಬಿದ ಒಂದು ಯುಗದ ಅಂತರ್ಮುಖಿ ಯುವಕವೃಂದವನ್ನೇ ಈ ಕಾದಂಬರಿ ಪ್ರತೀಕಿಸುತ್ತದೆ-ಎನ್ನುವುದು ವಿಮರ್ಶಕರ ಅಭಿಮತ. ಕಾರ್ಲೈಲ್ ಹೇಳುವಂತೆ ಜರ್ಮನಿಯ ಸ್ಟಾರ್ಮ್ ಉಂಡ್ ಡ್ರಂಗ್ ಯುಗದ ಕುದಿತ, ಮೊರೆತ, ಅಂತರಂಗದ ತಹತಹ-ಮುಂತಾಗಿ ತರುಣ ಜನಾಂಗದ ಉತ್ಕಟ ಮಾನಸಿಕ ಅನುಭವಗಳನ್ನೆಲ್ಲವನ್ನೂ ಈ ಕಾದಂಬರಿ ಪ್ರತಿಧ್ವನಿಸುತ್ತದೆ. ಆದ್ದರಿಂದಲೇ ಈ ಕಾದಂಬರಿಯನ್ನು ಓದಿದಾಗ ಯುರೋಪಿಗೆ ಯುರೋಪೇ ಕಣ್ಣೀರು ಕರೆಯಿತಂತೆ. ಗಯಟೆಯ ಉದ್ದೇಶ ಕೇವಲ ದುರಂತ ಪ್ರೇಮ ಚಿತ್ರಣವಲ್ಲ, 18ನೆಯ ಶತಮಾನದ ಜನರ ಅತಿಭಾವನಾ ಪರವಶತೆಯ ದುರಂತ ಪರಿಣಾಮಗಳ ವಿಶ್ಲೇಷಣೆ, ಸಮಾಜದ ನಡುವೆ ಯಾವ ಮೌಲ್ಯವೂ ನಿರಂಕುಶವಾಗಬಾರದು; ಯಾವುದೊಂದು ಭಾವನೆಯೂ ವಿವೇಕದ ಎಲ್ಲೆ ಮೀರಬಾರದು. ಆದರೆ ಮನುಷ್ಯನ ಬದುಕಿನಲ್ಲಿ ಸಂಘರ್ಷ, ನೋವು, ತೊಳಲಾಟಗಳು ಅನಿವಾರ್ಯ. ಇದನ್ನು ಪ್ರತಿರೂಪಿಸುವುದರ ಜೊತೆಗೆ ತನ್ನ ವೈಯಕ್ತಿಕ ಬದುಕನ್ನು ಶೋಧಿಸುತ್ತ ತನ್ನ ಅಂತರಂಗವನ್ನು ತೋಡಿಕೊಳ್ಳುವುದೇ ಗಯಟೆಯ ಉದ್ದೇಶವೆಂದು ಕಾಣುತ್ತದೆ.


ಎಗ್ಮಾಂಟ್ (1787)


ಫೌಸ್ಟ್ ನಾಟಕದ ಮೊದಲ ಭಾಗಕ್ಕೆ ಬೀಜಾಂಕುರವಾದಂತೆ ಕಾಣುವ ಒಂದು ಅಪೂರ್ಣ ಕೃತಿಯನ್ನು (ಉರ್ ಫೌಸ್ಟ್) ಬರೆಯುತ್ತಿದ್ದ ಕಾಲದಲ್ಲಿ ಗಯಟೆ ರಚಿಸಿದ ಐತಿಹಾಸಿಕ ನಾಟಕವಿದು. ಇದನ್ನು ಮೊಟ್ಟಮೊದಲು 1775ರಲ್ಲಿ ಪ್ರಾರಂಭಿಸಿದರೂ ಕ್ರಮೇಣ ಪರಿಷ್ಕಾರಗೊಂಡು 1787ರಲ್ಲಿದು ಸಿದ್ಧವಾಯಿತು. ಹಾಲೆಂಡನ್ನು ಆಕ್ರಮಿಸಿದ್ದ ಸ್ಪೇನಿನ ಸರ್ವಾಧಿಕಾರಿಯ ವಿರುದ್ಧ ದಂಗೆ ಎದ್ದ ಗ್ರಾಫ್ ಎಗ್ಮಾಂಟ್ ಎಂಬ ಸ್ವಾತಂತ್ರ್ಯ ವೀರನ ಕಥೆ ಈ ನಾಟಕದ ವಸ್ತು. ಇದರಲ್ಲಿ ಕ್ರಿಯೆಯ ಅಂಶ ತೀರ ವಿರಳ. ಕ್ರಾಂತಿಕಾರರ ನಾಯಕ ಗ್ರಾಫ್ ಎಗ್ಮಾಂಟ್ ಬ್ರಸಲ್ಸ್ ನಗರದಿಂದ ತಕ್ಷಣ ಹೊರಟುಹೋಗಬೇಕೆಂದೂ ಇಲ್ಲದಿದ್ದರೆ ಅವನ ಪ್ರಾಣಕ್ಕೆ ಅಪಾಯವಿದೆ ಯೆಂದೂ ಅವನಿಗೆ ಮೇಲಿಂದ ಮೇಲೆ ಎಚ್ಚರಿಕೆ ಬರುತ್ತದೆ. ಆದರೆ ಅವನು ಅದನ್ನು ಕಡೆಗಣಿಸಿ, ಆಲ್ಬಾದ ಡ್ಯೂಕನಿಗೆ ಸೆರೆಸಿಕ್ಕು ಮರಣದಂಡನೆಗೆ ಗುರಿಯಾಗುತ್ತಾನೆ. ಇದಿಷ್ಟೇ ನಾಟಕದ ಕ್ರಿಯೆ. ಉಳಿದೆಲ್ಲ ಸಂಗತಿಗಳೂ ಪ್ರಾಸಂಗಿಕವಾಗಿ ಬಂದು ಎಗ್ಮಾಂಟನ ಪಾತ್ರವಿನ್ಯಾಸಕ್ಕೆ ನೆರವಾಗುತ್ತವೆ. ಮಾರ್ಗರೆಟ್, ಮ್ಯಾಕಿಯವೆಲ್ಲಿ, ಎಗ್ಮಾಂಟ್ ಪ್ರೀತಿಸುವ ಕ್ಲಾರ್ಷೆನ್-ಮುಂತಾದ ಪಾತ್ರಗಳು ಜೀವಂತವಾಗಿ ಹೊಮ್ಮಿವೆ. ಗಾಟ್ಸ್ ಮುಂತಾದ ಮೊಟ್ಟಮೊದಲ ನಾಟಕಗಳಲ್ಲಿರುವ ಪ್ರಕ್ಷುಬ್ಧತೆ ಇಲ್ಲಿಲ್ಲ. ನಾಟಕದಲ್ಲಿ ಎದ್ದು ಕಾಣುವ ಮಾನವೀಯತೆ, ಭಾವುಕತೆ, ಹಾಗೂ ಪ್ರಶಾಂತ ವಾತಾವರಣ-ಇವು ಓದುಗರನ್ನು ಸೆಳೆಯುತ್ತವೆ. ಸ್ಟುರ್ಮ್ ಉಂಡ್ ಡ್ರಂಗ್ ಯುಗದ ಉದ್ರೇಕ, ಕೋಲಾಹಲಗಳ ಹಿನ್ನೆಲೆಯಲ್ಲಿ ಬರೆದ ಕೃತಿಗಳಿಗೂ ವೈಮರ್ನ ನೀರವ, ಪ್ರಶಾಂತ, ಜೀವನದ ಹಿನ್ನೆಲೆಯಲ್ಲಿ ಬರೆದ ಇಫಿಜೆನಿ ಮುಂತಾದ ಶ್ರೇಷ್ಠ, ಕಲಾತ್ಮಕ ಕೃತಿಗಳಿಗೂ ನಡುವಣ ತಿರುವನ್ನು ಈ ನಾಟಕ ಸೂಚಿಸುತ್ತದೆ.


ಇಫಿಜೆನಿ ಆಫ್ ಟಾರಿಸ್ (1787)


ಈ ನಾಟಕ ಗಯಟೆಯ ಕೃತಿಗಳಲ್ಲಿ ಅತ್ಯಂತ ಪರಿಪೂರ್ಣವೂ ದೋಷರಹಿತವೂ ಆದುದೆಂದು ಹೇಳುವುದುಂಟು. ಗ್ರೀಕ್ ಶಿಲ್ಪಕಲೆಯಲ್ಲಿ ತಾನು ಮೆಚ್ಚಿಕೊಂಡ ಸಂಯಮವನ್ನಿಲ್ಲಿ ಕವಿ ಸಾಧಿಸಿದ್ದಾನೆ. ಆದರೂ ನಾವು ಇಲ್ಲಿ ಕಾಣುವುದು ಗ್ರೀಕ್ ಕಲಾತತ್ತ್ವವನ್ನಲ್ಲ, ಗಯಟೆಯ ಮಾನವತಾವಾದದ ದಿವ್ಯ ಸ್ವರೂಪವನ್ನು. ತಂದೆ ಆಗಮೆಮ್ನಾನನ ಕೈಯಿಂದ ದೇವತೆಗಳ ಪ್ರೀತ್ಯರ್ಥವಾಗಿ ಬಲಿಯಾಗುವ ಅವನ ಮಗಳು ಇಫಿಜೀನಿಯಳ ಕಥೆ ಯುರಿಪಿಡೀಸನ ನಾಟಕದ ವಸ್ತು. ಅದನ್ನು ಗಯಟೆ ಮಾರ್ಪಡಿಸಿಕೊಂಡು ತನ್ನ ನಾಟಕಕ್ಕೆ ಅಳವಡಿಸಿಕೊಂಡಿದ್ದಾನೆ. ಕ್ರೂರಿ ತಂದೆಯ ಕೈಯಿಂದ ಅವಳನ್ನು ತಪ್ಪಿಸಲು ಆರ್ಟೆಮಿಸ್ ದೇವತೆ ಅವಳನ್ನು ಸ್ಕಿತಿಯನರೆಂಬ ಅನಾಗರಿಕರ ದೇಶಕ್ಕೆ ಕೊಂಡೊಯ್ದು ಬಿಡುತ್ತಾಳೆ. ಇಫಿಜೆನಿ ತನ್ನ ಅನುಪಮ ರೂಪಲಾವಣ್ಯ, ಧೈರ್ಯಸ್ಥೈರ್ಯಾದಿ ಸದ್ಗುಣಗಳಿಂದ ಅಲ್ಲಿನ ಅನಾಗರಿಕ ಜನರನ್ನು ಸುಧಾರಿಸುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾಳೆ. ಸ್ಕಿತಿಯನ್ನರ ರಾಜ್ಯದಲ್ಲಿ ದೇವತೆಗಳಿಗೆ ನರಬಲಿ ಅರ್ಪಿಸುವ ಸಂಪ್ರದಾಯವನ್ನು ತಪ್ಪಿಸುತ್ತಾಳೆ. ಅವಳು ಶಾಪಗ್ರಸ್ತ ಟ್ಯಾಂಟಲಸ್ ವಂಶದವಳೆಂದು ತಿಳಿದರೂ ದೊರೆ ಥೊಯಾಸ್ ಅವಳಲ್ಲಿ ಪ್ರೇಮಭಿಕ್ಷೆ ಯಾಚಿಸಿ ಹತಾಶನಾಗುತ್ತಾನೆ. ತನ್ನಲ್ಲಿಗೆ ಬಂದ ಇಬ್ಬರು ಅಗಂತುಕರನ್ನು ಇಫಿಜೆನಿಯ ಬಳಿ ಕಳುಹಿಸಿ ಅನೂಚಾನವಾಗಿ ನಡೆದು ಬಂದ ನರಬಲಿ ಮತ್ತೆ ಪ್ರಾರಂಭವಾಗ ಬೇಕೆಂದು ಆಜ್ಞಾಪಿಸುತ್ತಾನೆ. ಈ ಅಗಂತುಕರಲ್ಲಿ ಒಬ್ಬ ತನ್ನ ಸೋದರ ಓರೆಸ್ಟ್, ಇನ್ನೊಬ್ಬ ಅವನ ಗೆಳೆಯ ಪೈಲೇಡಿಸ್ ಎಂದು ಅವಳಿಗೆ ತಿಳಿಯದು. ರಾಜಾಜ್ಞೆಯ ಪ್ರಕಾರ ಅವರಿಬ್ಬರೂ ಅಲ್ಲಿ ಮೊದಲ ಬಲಿಯಾಗಬೇಕು. ಪೈಲೇಡಿಸ್ ಅವಳಿಗೆ ಟ್ರಾಯ್ಪತನ, ಆಗಮೆಮ್ನಾನನ ಕೊಲೆ, ಮಗ ಓರೆಸ್ಟ್ ಪ್ರತೀಕಾರಕ್ಕಾಗಿ ನಡೆಸಿದ ಮಾತೃಹತ್ಯೆ ಎಲ್ಲವನ್ನೂ ಸೂಚ್ಯವಾಗಿ ತಿಳಿಸುತ್ತಾನೆ. ಅಪಾಲೋ ದೇವತೆಯ ಆಜ್ಞೆಯಂತೆ ಓರೆಸ್ಟ್ ತನ್ನ ತಂಗಿಯ ದೇವಾಲಯದಿಂದ ದೇವತೆಯ ವಿಗ್ರಹವನ್ನು ತಂದರೆ ಅವನು ಉಗ್ರ ಕನ್ಯೆಯರ ಕೋಪದಿಂದ ಮುಕ್ತನಾಗುವನಲ್ಲದೇ ಅವನ ಶಾಪ ನಿವಾರಣೆ ಯಾಗುವುದೆಂದು ಪೈಲೇಡಿಸ್ ತಿಳಿಸುತ್ತಾನೆ. ತಾಳ್ಮೆ ತಪ್ಪಿದ ಓರೆಸ್ಟ್ ತನ್ನ ನಿಜರೂಪವನ್ನು ಸೋದರಿಗೆ ತಿಳಿಸಿಬಿಡುತ್ತಾನೆ. ನಿಷ್ಕಳಂಕಳೂ ಪವಿತ್ರ ಹೃದಯಿಯೂ ಆದ ಸೋದರಿಯ ಎದುರು ತನ್ನ ಘೋರ ಅಪರಾಧಗಳನ್ನು ಒಪ್ಪಿಕೊಂಡಾಗ ಅವನ ಉನ್ಮತ್ತಸ್ಥಿತಿ ಹಾಗೂ ಹೃದಯದ ಭಾರ ಇಳಿದಂತಾಗುತ್ತದೆ. ತನ್ನ ಕಣ್ಣಮುಂದೆ ಸುಳಿಯುವ ಅದ್ಭುತ ದೃಶ್ಯಾವಳಿಯಲ್ಲಿ ತನ್ನ ಪಿತೃಗಳೆಲ್ಲರೂ ಶಾಂತಿಸೌಹಾರ್ದಗಳಿಂದಿರುವುದನ್ನು ನೋಡಿ ಅವನಿಗೆ ತನ್ನ ಶಾಪನಿವಾರಣೆಯ ಬಗ್ಗೆ ಭರವಸೆ ಮೂಡುತ್ತದೆ. ಮೂವರೂ ಅಲ್ಲಿಂದ ತಪ್ಪಿಸಿಕೊಂಡು ದೇವತೆಯ ವಿಗ್ರಹವನ್ನು ರಹಸ್ಯವಾಗಿ ಒಯ್ಯಬೇಕಾದಾಗ ಇಫಿಜೆನಿ ತನ್ನನ್ನು ಪ್ರೀತಿಸಿದ ಥೊಯಾಸನಿಗೆ ಮೋಸಮಾಡಲು ಇಚ್ಛಿಸುವುದಿಲ್ಲ. (ಗ್ರೀಕ್ ನಾಟಕದಲ್ಲಿ ಅವಳು ವಂಚನೆಯಿಂದ ತಪ್ಪಿಸಿಕೊಂಡು ಹೋಗುತ್ತಾಳೆ. ಅರ್ಟೆಮಿಸ್ ದೇವತೆಯೇ ಪ್ರತ್ಯಕ್ಷಳಾಗಿ ಬಂದು ದುರಂತವನ್ನು ತಪ್ಪಿಸುತ್ತಾಳೆಂಬುದು ಗಮನಾರ್ಹ.) ನಡೆದ ಎಲ್ಲ ಸಂಗತಿಯನ್ನು ಅವನ ಮುಂದೆ ಒಪ್ಪಿಸಿ ಅವನು ತನ್ನನ್ನು, ತನ್ನ ಬಂಧುಗಳಿಬ್ಬರನ್ನು ಬಿಡುಗಡೆ ಮಾಡುವಂತೆ ಬೇಡಿಕೊಳ್ಳುತ್ತಾಳೆ. ತಂಗಿಯ ದೇವಾಲಯ ಎನ್ನುವ ದೇವವಾಣಿಯ ದ್ವಂದ್ವಾರ್ಥ ನಿವಾರಣೆಯಾಗಿ ಥೊಯಾಸ್ ಉದಾರ ಹೃದಯದಿಂದ ಅವರನ್ನು ವಿಮುಕ್ತಗೊಳಿಸುತ್ತಾನೆ. ಹೀಗೆ ಈ ನಾಟಕದಲ್ಲಿ ಗಯಟೆ ಮೂಲ ಗ್ರೀಕ್ ನಾಟಕವನ್ನು ತನ್ನ ನೈತಿಕ ಮಾನವೀಯ ದೃಷ್ಟಿಗಳಿಗನುಸಾರವಾಗಿ ಅಳವಡಿಸಿಕೊಂಡು ಒಂದು ಅಸದೃಶ ಕಲಾಕೃತಿ ನಿರ್ಮಿಸಿದ್ದಾನೆ. ಇಂಥ ಪಾತ್ರಗಳನ್ನು ಕುರಿತೇ ಅವನು ಹಲವು ವರ್ಷಗಳ ಅನಂತರ ‘ಹೃದಯವಂತಿಕೆಯ ಸಾಕಾರಗಳು’ ಎಂದು ನುಡಿದದ್ದು.


ಟಾರ್ಕ್ವಾಟೋ ಟ್ಯಾಸೋ (1790)


ಐದು ಅಂಕಗಳ ಈ ನಾಟಕದಲ್ಲಿ ಗಯಟೆ ವೈಮರ್ ರಾಜನ ಆಸ್ಥಾನದಲ್ಲಿ ಕಂಡುಂಡ ವೈಯಕ್ತಿಕ ಅನುಭವಗಳನ್ನು ಕಂಡರಿಸಿದ್ದಾನೆನ್ನಬಹುದು. ಇದು 16ನೆಯ ಶತಮಾನದ ಇಟಲಿಯ ಮಹಾಕವಿ ಟ್ಯಾಸೋವಿನ ಜೀವನಚರಿತ್ರೆಗೆ ಸಂಬಂಧಿಸಿದ ನಾಟಕ. ಇಫಿಜೆನಿ ನಾಟಕದಲ್ಲಿ ಬರುವ ಮಿಂಚಿನಂಥ ಘಟನೆಗಳಾಗಲೀ ಮಾತಿನ ಚಮತ್ಕಾರವಾಗಲೀ ಇಲ್ಲಿಲ್ಲ. ಇದರಲ್ಲಿ ಭಾವಗೀತೆಯ ಸಾಂದ್ರತೆಯೇ ಹೆಚ್ಚು. ಕ್ರಿಯೆ, ಸಂಘರ್ಷಗಳು ಇಲ್ಲವೆಂದರೂ ಇದೊಂದು ಮನೋವಿಶ್ಲೇಷಣಾತ್ಮಕ ನಾಟಕ. ಕೇವಲ ಐದೇ ಪಾತ್ರಗಳಿರುವ ಈ ನಾಟಕದ ಕಥೆಯೆಲ್ಲವೂ ಫೆರ್ರಾರ ನಗರದ ಡ್ಯೂಕ್ ಎರಡನೆಯ ಆಲ್ಫಾನ್ಸೋವಿನ ಆಸ್ಥಾನದಲ್ಲಿ ನಡೆಯುತ್ತದೆ. ಆತ್ಮಸಂಯಮವನ್ನು ಪರಿಪೂರ್ಣತೆಯನ್ನು ಪಡೆಯಲಾರದೆ ತೊಳಲುವ ಟ್ಯಾಸೋ ಕವಿಯ ವ್ಯಗ್ರ ಅಂತರಂಗದ ಚಿತ್ರಣ ಇಲ್ಲಿದೆ. ನಾಟಕ ಪ್ರಾರಂಭವಾಗುವಾಗ ಕವಿ ತನ್ನ ಮೇರುಕೃತಿ ಜೆರೂಸಲೆಂ ಲಿಬರ್ಯಾಟ ಎಂಬ ಭವ್ಯ ಕಾವ್ಯವನ್ನು ಬರೆದು ಅಪೂರ್ವ ಮನ್ನಣೆಗೆ ಪಾತ್ರನಾಗಿದ್ದಾನೆ. ತನ್ನ ಆಶ್ರಯದಾತ ಡ್ಯೂಕ್ ಆಲ್ಫಾನ್ಸೋವಿನ ಸೋದರಿ ಲಿಯೋನೋರ್ ದ ಎಸ್ತ ಕವಿಯನ್ನು ಬಹುವಾಗಿ ಮೆಚ್ಚಿ ಅವನಿಗೆ ಜಯಮಾಲೆ ಅರ್ಪಿಸಿದ್ದಾಳೆ. ಇದರಿಂದ ಆಗತಾನೇ ರೋಮಿನಿಂದ ಹಿಂದಿರುಗಿರುವ, ಡ್ಯೂಕನ ಕಾರ್ಯದರ್ಶಿ ಆಂಟೋನಿಯೋ ಮಾಂಟಿಕ್ಯಾಟಿನೋವಿಗೆ ಕವಿ ಟ್ಯಾಸೋವಿನ ವಿಷಯದಲ್ಲಿ ಅಸೂಯೆ, ಅನಾದರಗಳು ಹುಟ್ಟಿವೆ. ಕವಿ ತನ್ನ ಯಶಸ್ಸಿನ ಬಗ್ಗೆ ಇಲ್ಲಸಲ್ಲದ ಪ್ರಚಾರ ಮಾಡಿಕೊಂಡು, ತಾನು ವರ್ಜಿಲ್, ಆರಿಯೋಸ್ಟೊ ಮುಂತಾದ ಮಹಾಕವಿಗಳ ಸಾಲಿಗೆ ಸೇರಿದವನೆಂದು ಹೇಳಿಕೊಳ್ಳುತ್ತಿದ್ದಾನೆಂದು ಭಾವಿಸಿ ಆಂಟೋನಿಯೋವಿಗೆ ಸಿಟ್ಟು ಬರುತ್ತದೆ. ಕವಿ ರಾಜಕಾರಣಿಗಳ್ಳಿಬ್ಬರ ನಡುವೆ ಬಿರುಕು ಹುಟ್ಟುತ್ತದೆ. ಟ್ಯಾಸೋವಿನ ಮೇಲೆ ದೇಶದ್ರೋಹದ ಆಪಾದನೆ ಬರುತ್ತದೆ. ಅವನನ್ನು ಕಾರಾಗೃಹಕ್ಕೆ ಕಳುಹಿಸಲಾಗುತ್ತದೆ. ಅನಂತರ ಡ್ಯೂಕನ ಆಜ್ಞೆಯಂತೆ ಆಂಟೋನಿಯೋ ಭಗ್ನ ಹೃದಯದ ಕವಿಯನ್ನು ಬಿಡುಗಡೆ ಮಾಡುತ್ತಾನೆ. ಟ್ಯಾಸೋ ಫೆರ್ರಾರ ನಗರವನ್ನು ಬಿಟ್ಟು ಹೊರಡಲು ತನಗೆ ಡ್ಯೂಕನ ಅಪ್ಪಣೆ ದೊರಕುವಂತೆ ಮಾಡಬೇಕೆಂದು ಆಂಟೋನಿಯೋನನ್ನು ಪ್ರಾರ್ಥಿಸುತ್ತಾನೆ. ಕೊನೆಯ ಗಳಿಗೆಯಲ್ಲಿ ನತದೃಷ್ಟ ಟ್ಯಾಸೋ ರಾಜಕುಮಾರಿ ಲಿಯೋನಾರಳಲ್ಲಿ ತನಗಿರುವ ಗಾಢ ರಹಸ್ಯಪ್ರೇಮವನ್ನು ತೋಡಿಕೊಂಡು ಅವಳಿಂದ ತಿರಸ್ಕೃತನಾಗುತ್ತಾನೆ. ಎಲ್ಲ ಕಡೆಯೂ ನಿರಾಶೆಯನ್ನು ಕಾಣುತ್ತಿರುವ ಕವಿಗೆ ರಾಜಕಾರಣಿ ಆಂಟೋನಿಯೋವಿನ ಗೆಳೆತನವೇ ಅಮೃತಸೇಚನವಾಗುತ್ತದೆ. ಹೀಗೆ ಇದ್ದಕ್ಕಿದ್ದಹಾಗೆ ಮುಗಿಯುವ ಈ ನಾಟಕ ಅಪೂರ್ಣವೆನಿಸಿದರೂ ಅಲ್ಲಲ್ಲಿ ಕಾವ್ಯಾತ್ಮಕವಾದ ಹೊಳಪಿನಿಂದ ಕೂಡಿದೆ. ಆದರೆ ಆಂಟೋನಿಯೋ ಪಾತ್ರ ವಿನ್ಯಾಸ ಅಸಹಜವೆನಿಸುವಷ್ಟು ವಿರೋಧಾಭಾಸಗಳಿಂದ ತುಂಬಿದೆ. ಕುಟಿಲ ರಾಜಕಾರಣಿ ಇದ್ದಕ್ಕಿದ್ದ ಹಾಗೆ ಕವಿಯ ಆತ್ಮೀಯ ಗೆಳೆಯನಾಗುವ ಸಂಗತಿಯಲ್ಲಿ ನಾಟ್ಯಾಂಶವೇ ಇಲ್ಲ. ಆದರೆ ಕವಿಯ ಅಂತರಂಗದ ತುಮುಲವನ್ನೂ ಆಸೆ ನಿರಾಸೆಗಳ ಏರಿಳಿತಗಳನ್ನೂ ಗಯಟೆ ಅತ್ಯಂತ ಹೃದಯಸ್ಪರ್ಶಿಯಾಗಿ ವಿಶ್ಲೇಷಿಸಿದ್ದಾನೆ. ಇಂಗ್ಲಿಷ್ ಕವಿ ಕೀಟ್ಸ್, ಟ್ಯಾಸೋನ ಅಂತರಂಗದ ಸ್ವರೂಪವನ್ನು ವಿವರಿಸುತ್ತ ಆತ ಗೋಸುಂಬೆಯಂಥವನು, ಅವನಿಗೆ ವಿಶಿಷ್ಟ ವ್ಯಕ್ತಿತ್ವವೆಂಬುದೇ ಇಲ್ಲ, ಅವನಿಗೆ ತಾನೆಂಬುದೇ ಇಲ್ಲ-ಎನ್ನುತ್ತಾನೆ. ಹೀಗೆ ಗೋಸುಂಬೆಯಂತೆ ಏನೊಂದೂ ವಿಶಿಷ್ಟ ವ್ಯಕ್ತಿತ್ವವಿಲ್ಲದ, ಆದರೆ ಮಾನವಕೋಟಿಯನ್ನೇ ಪ್ರತೀಕಿಸುವಂಥ ಸ್ವರೂಪವುಳ್ಳ ಕವಿಯ ಸಂಕೀರ್ಣ ಅಂತರಂಗವನ್ನು ಗಯಟೆ ಈ ನಾಟಕದಲ್ಲಿ ತುಂಬ ಅರ್ಥವತ್ತಾಗಿ ಪ್ರತಿರೂಪಿಸಿದ್ದಾನೆ.


ವಿಲ್ಹೆಲ್ಮ್ ಮೈಸ್ಟರ್ಸ್ ಅಪ್ರೆಂಟಿಸ್ಷಿಪ್ (1795-96)


ಇಟಲಿಯ ಪ್ರವಾಸದಿಂದ ಗಯಟೆ ವೈಮರ್ಗೆ ಹಿಂದಿರುಗಿದ ಮೇಲೆ ಸುಮಾರು 25 ವರ್ಷ ವೈಮರ್ ಥಿಯೇಟರಿನ ನಿರ್ದೇಶನಕ್ಕಾಗಿ ಕೆಲಸಮಾಡಿದ. ಥಿಯೇಟರಿನ ಆಡಳಿತದಲ್ಲಿ ತನಗೆ ಲಭಿಸಿದ ಗಾಢ ಅನುಭವಗಳನ್ನು ಈ ಕಾದಂಬರಿಯಲ್ಲಿ ರೂಪಿಸಿದ್ದಾನೆ. ಕವಿ ಇದರಲ್ಲಿ ಇಂಗ್ಲಿಷ್ ಕಾದಂಬರಿಕಾರ ರಿಚರ್ಡ್ಸನ್ನನ ಪ್ರಭಾವದಿಂದ ತಪ್ಪಿಸಿಕೊಂಡು ಹೊಸ ಸಂವೇದನೆಯ ನ್ನೊಳಗೊಂಡ, ಆತ್ಮಕಥನೀಯ ಕಾದಂಬರಿ ಎನ್ನಬಹುದಾದ ಒಂದು ಹೊಸ ಪ್ರಕಾರವನ್ನೇ ಸೃಷ್ಟಿಸಿದ್ದಾನೆ. ಈ ಕಾದಂಬರಿಯ ರಚನೆ ತೀರ ಶಿಥಿಲವಾಗಿದ್ದು, ಕಥಾವಸ್ತು ಹಾಗೂ ಪಾತ್ರಗಳು ಕೇವಲ ಒಂದು ನೀತಿಪಾಠದ ಅಥವಾ ತತ್ತ್ವನಿರೂಪಣೆಯ ಸಾಧನವಾಗಿವೆಯೆಂದು ತೋರುತ್ತದೆ. ಒಬ್ಬ ಯುವಕನ ವ್ಯಕ್ತಿತ್ವ ಸಂಪುರ್ಣವಾಗಿ ವಿಕಾಸವಾಗುವುದಕ್ಕೆ ಮುಂಚೆ ಅವನಿಗೆ ಎಂಥ ಅನುಭವಗಳು ಲಭಿಸಬಹುದೆಂಬುದನ್ನು ಇಲ್ಲಿ ಕಾಣಬಹುದು. ವಿಲ್ಹೆಲ್ಮ್ ಪ್ರೀತಿಸುವ ಮಾರಿಯಾನಿ, ಮೇನಾ, ನಟಾಲಿ, ಥೆರೆಸಾ ಮುಂತಾದ ಹೆಣ್ಣುಗಳು, ವಿಲ್ಹೆಲ್ಮ್ ನ ಸಾಕುಮಗಳು ಮಿಗ್ನಾನ್, ಚಿತ್ರ ವಿಚಿತ್ರ ಅಲೌಕಿಕ ಅದ್ಭುತ ವ್ಯಕ್ತಿ ಹಾರ್ಪರ್-ಇವರು ಕಾದಂಬರಿಯ ಹಾಸು ಹೊಕ್ಕಾಗಿ ಬರುತ್ತಾರೆ. ಕಥೆ ಎಂಟು ಘಟ್ಟಗಳಾಗಿ ವಿನ್ಯಾಸಗೊಂಡು ಒಂದಕ್ಕೊಂದು ಸಂಬಂಧವಿಲ್ಲದಂತೆ ಬೆಳೆಯುತ್ತದೆ. ವ್ಯಾಪಾರಿಯಾಗಿದ್ದ ವಿಲ್ಹೆಲ್ಮ್ ನ ಅನುಭವಗಳು, ರಂಗಭೂಮಿಯ ಜೀವನದ ವಾಸ್ತವ ಘಟನೆಗಳು, ಲೋಥಾರಿಯೋವಿನ ದುರ್ಗದಲ್ಲಿ ನಡೆಯುವ ಅದ್ಭುತ ಪ್ರಸಂಗಗಳು-ಇವು ಕಾದಂಬರಿಯ ಮುಖ್ಯಾಂಶಗಳು. ವ್ಯಕ್ತಿ ಸಮಾಜದ ಅಂಗವಾಗಿ ಬದುಕುವುದರ ಜೊತೆಗೆ ಬದುಕಿನ ನಾನಾ ಅನುಭವಗಳ ಸಾರವನ್ನು ರಕ್ತಗತ ಮಾಡಿಕೊಳ್ಳಬೇಕು, ತನ್ನ ಅರಿವನ್ನು ಕಲ್ಪನೆಯ ಕಣ್ಣನ್ನು ನಕ್ಷತ್ರಲೋಕದಿಂದಾಚೆಗೆ ಕೊಂಡೊಯ್ಯಲೆತ್ನಿಸಬೇಕು-ಎಂಬ ಮಾತು ಇಲ್ಲಿ ಮುಖ್ಯವೆಂದು ತೋರುತ್ತದೆ. ಕಾದಂಬರಿಯ ಕೊನೆಯಲ್ಲಿ ವಿಲ್ಹೆಲ್ಮ್ ನ ಸಾಕುಮಗಳು ಮಿಗ್ನಾನ್ ಸತ್ತಾಗ ಅವಳ ಶವದ ಬಳಿ ನಾಲ್ವರು ತರುಣರು ಶೋಕಗೀತೆ ಹಾಡುತ್ತಾರೆ. ಈ ಗೀತೆಯಲ್ಲಿ ಇಡೀ ಕಾದಂಬರಿಯ ತತ್ತ್ವವೇ ಅಡಗಿದೆ ಎನ್ನುವುದುಂಟು. ‘ನಿನ್ನ ಜೀವನದಲ್ಲಿ ಯಾವುದು ನಿನ್ನ ಪಾಲಿಗೆ ಒದಗುತ್ತದೆಯೋ ಅದನ್ನು ನಿಷ್ಠೆಯಿಂದ, ನಿನ್ನ ಶಕ್ತಿಮೀರಿ ನೆರವೇರಿಸು’ ಎನ್ನುವುದು ಗಯಟೆಗೆ ಪ್ರಿಯವಾಗಿದ್ದ ಆದರ್ಶ. ಕಾದಂಬರಿಯ ಪಾತ್ರ ಘಟನೆಗಳೆಲ್ಲವೂ ಈ ಆದರ್ಶಕ್ಕೆ ವಸ್ತುಪ್ರತಿರೂಪಗಳಾಗಿ ಬಂದಿವೆ ಎನ್ನುವುದು ವಿಮರ್ಶಕರ ಅಭಿಪ್ರಾಯ.


ಹರ್ಮನ್ ಮತ್ತು ಡೊರೋತಿಯ (1798)


ಈ ನೀಳ್ಗವನದಲ್ಲಿ ಗಯಟೆ ಗ್ರೀಕ್ ಕಲೆಯನ್ನು ಆಧುನಿಕ ಕಲ್ಪನೆಯೊಂದಿಗೆ ಹೇಗೆ ಸಮನ್ವಯಗೊಳಿಸಬಹುದೆಂದು ತೋರಿಸಿದ್ದಾನೆ. ಅತಿ ಸಾಮಾನ್ಯ ಹಳ್ಳಿಗಾಡಿನ ಪ್ರೇಮಕಥೆಯನ್ನು ಹೋಮರನ ಭವ್ಯಕಾವ್ಯದ ಶೈಲಿಯಲ್ಲಿ (ಹೆಕ್ಸಾಮೀಟರ್) ನಿರೂಪಿಸುತ್ತಾನಾದರೂ ಕವನ ದೋಷರಹಿತವಾಗಿದೆ. ಅದರಲ್ಲಿ ಒಂದಿಷ್ಟೂ ಅತಿಭಾವುಕತೆ ಕಂಡುಬರುವುದಿಲ್ಲ. ಇಲ್ಲಿ ಬರುವ ಪ್ರೇಮಿಗಳು, ತರುಣ ತರುಣಿಯರು, ತಂದೆತಾಯಂದಿರು, ಗ್ರಾಮವಾಸಿಗಳು ಮೊದಲಾದ ಎಲ್ಲ ಪಾತ್ರಗಳೂ ಅಚ್ಚಿನಲ್ಲಿ ಎರಕ ಹೊಯ್ದಂತಿದ್ದರೂ ಕಥೆಯ ನಿರೂಪಣೆಯಲ್ಲಿ ಕವಿ ಸಾಧಿಸಿರುವ ನಿರ್ಲಿಪ್ತತೆ, ವಸ್ತುನಿಷ್ಠೆ ಬೆರಗುಗೊಳಿಸುವಂಥವು. ರ್ಹೈನ್ ನದೀತೀರದ ಜರ್ಮನ್ ಶ್ರೀಮಂತ ಕುಟುಂಬಕ್ಕೆ ಸೇರಿದ ಹರ್ಮನ್ ಎಂಬ ತರುಣ ಪ್ಯಾಲೆಸ್ಟೈನಿನಿಂದ ಬಂದ ನಿರಾಶ್ರಿತರಿಗೆ ಅನ್ನ ಬಟ್ಟೆ ಹಂಚಲು ಹೋದಾಗ ಆ ಗುಂಪಿನಲ್ಲಿದ್ದ ಡೊರೋತಿಯ ಎಂಬ ಹುಡುಗಿಯನ್ನು ಕಂಡು ಪ್ರೀತಿಸುತ್ತಾನೆ. ತಾನು ಹಂಚಲು ತಂದಿದ್ದ ವಸ್ತುಗಳನ್ನೆಲ್ಲ ಆ ಹುಡುಗಿಯ ವಶಕ್ಕೆ ಕೊಟ್ಟುಬಿಡುತ್ತಾನೆ. ಶ್ರೀಮಂತ ಕುಟುಂಬದ ಹೆಣ್ಣನ್ನು ತಂದು ಮಗನಿಗೆ ಮದುವೆ ಮಾಡಬೇಕೆಂದಿದ್ದ ಹರ್ಮನ್ನನ ತಂದೆಗೆ ಇದರಿಂದ ನಿರಾಶೆಯಾಗುತ್ತದೆ. ಆದರೆ ಡೊರೋತಿಯಳ ಸಚ್ಚರಿತ್ರೆ, ಸದ್ಗುಣ ಸೌಂದರ್ಯಗಳ ಬಗೆಗೆ ಸಂತೃಪ್ತನಾದ ತಂದೆ ಇಬ್ಬರೂ ಮದುವೆಯಾಗಲು ಅನುಮತಿ ನೀಡುತ್ತಾನೆ. ತನ್ನ ಮನೆಗೆಲಸಕ್ಕಾಗಿ ನೇಮಿಸಿದ ಸೇವಕಿಯೆಂದು ಆ ಮುಗ್ಧ ಹಳ್ಳಿಯ ಹುಡುಗಿಗೆ ಹರ್ಮನ್ ಸುಳ್ಳು ಹೇಳಿ ಮನೆಗೆ ಕರೆತರುತ್ತಾನೆ. ಅವನು ಅವಳಿಗೆ ಅನಿರೀಕ್ಷಿತವಾಗಿ ನಿಜಾಂಶ ತಿಳಿಸಿದಾಗ ಅವಳ ಸಂತೋಷಕ್ಕೆ ಪಾರವಿಲ್ಲದಂತಾಗುತ್ತದೆ. ಮತ್ತೆ ಮತ್ತೆ ಹೋಮರನ ಭವ್ಯ ಪಾತ್ರಗಳನ್ನು ನೆನಪು ಮಾಡುವಂಥ ಈ ಕಥನ ಕವನದ ಸರಳ ಪಾತ್ರಗಳು ಗ್ರೀಕ್ ಶಿಲ್ಪಾಕೃತಿಗಳನ್ನು ಹೋಲುತ್ತವೆ. ಕ್ಲಾಸಿಕಲ್ ಗ್ರೀಕ್ ಸಾಹಿತ್ಯ ಮತ್ತು ಶಿಲ್ಪಕಲೆಗಳಿಂದ ತಾನು ಗ್ರಹಿಸಿದ ಕಲಾಪ್ರಜ್ಞೆಯನ್ನು ಗಯಟೆ ಇಲ್ಲಿ ತುಂಬ ಸೊಗಸಾಗಿ ಬಳಸಿದ್ದಾನೆ. ಜರ್ಮನಿಯ ಕ್ಲಾಸಿಕಲ್ ಸಾಹಿತ್ಯದಲ್ಲಿ ಇದನ್ನು ಮೀರಿಸಿದ ಪರಿಪೂರ್ಣ ಕವನ ಇನ್ನೊಂದಿಲ್ಲ.


ದಿ ಎಲೆಕ್ಟಿವ್ ಅಫಿನಿಟೀಸ್ (1809)


ಈ ಕಾದಂಬರಿಯಲ್ಲಿ ಗಯಟೆ ವ್ಯಕ್ತಿವ್ಯಕ್ತಿಗಳ ನಡುವಣ ಸಂಬಂಧ ಎಷ್ಟು ಅವ್ಯಕ್ತವೂ ವಿಚಿತ್ರವೂ ಆದುದೆಂಬುದನ್ನು ಚಿತ್ರಿಸಿದ್ದಾನೆ. ಕಥಾನಾಯಕ ಎಡ್ವರ್ಡ್, ಅವನ ಹೆಂಡತಿ ಚಾರ್ಲೆಟ್, ಆಕೆ ಪ್ರೀತಿಸುವ ಕ್ಯಾಪ್ಟನ್, ಎಡ್ವರ್ಡ್ ಪ್ರೀತಿಸುವ ಓಟ್ಟೆಲಿ (ಚಾರ್ಲೆಟ್ಟಳ ಸಾಕುಮಗಳು)-ಈ ನಾಲ್ವರ ವಿಷಮ ಸಂಬಂಧವನ್ನು ಗಯಟೆ ಅತ್ಯಂತ ವಸ್ತುನಿಷ್ಠ ಶೈಲಿಯಲ್ಲಿ ನಿರೂಪಿಸಿದ್ದಾನೆ. ಕೆಲವು ಧಾತುಗಳು ಕೆಲವನ್ನು ಬಿಟ್ಟು ಉಳಿದ ಕೆಲವು ಪದಾರ್ಥಗಳೊಡನೆ ಸಂಯೋಗ ಹೊಂದುವ ಪ್ರವೃತಿ ಪಡೆದಿರುತ್ತವೆ. ಇದು ರಸಾಯನಶಾಸ್ತ್ರದಲ್ಲಿನ ಒಂದು ನೈಸರ್ಗಿಕ ವ್ಯಾಪಾರ. ಸಸ್ಯ ಹಾಗೂ ಪ್ರಾಣಿಲೋಕದ ನೈಸರ್ಗಿಕ ವ್ಯಾಪಾರಗಳನ್ನು ಬಿಡುಗಣ್ಣಿನಿಂದ ವೀಕ್ಷಿಸುತ್ತಿದ್ದ ವಿಜ್ಞಾನಿ ಗಯಟೆ ಈ ರಾಸಾಯನಿಕ ಕ್ರಿಯೆಯನ್ನು ಮಾನವಸಂಬಂಧ ಹಾಗೂ ವ್ಯಕ್ತಿವ್ಯಕ್ತಿಗಳ ನಡುವಣ ಆಕರ್ಷಣೆಗಳಿಗೆ ಅನ್ವಯಿಸಿ ಈ ಕಾದಂಬರಿಯನ್ನು ರಚಿಸಿದ್ದಾನೆ. ಪುರ್ವಸಿದ್ಧ ತಾತ್ತ್ವಿಕ ಸೂತ್ರಗಳ ಚೌಕಟ್ಟಿನಲ್ಲಿ ಚಲಿಸುವುದರಿಂದ ಇಲ್ಲಿನ ಪಾತ್ರಗಳ ನಿಯೋಜನೆ ತೀರ ಯಾಂತ್ರಿಕವಾಗಿದೆಯಾದರೂ ಕತೆ ಮಾತ್ರ ಕವಿ ಗಯಟೆಯ ವೈಚಾರಿಕತೆಯ ವಿವಿಧ ಸ್ತರಗಳನ್ನು ನವಿರಾಗಿ ಪ್ರತೀಕಿಸುತ್ತದೆ.


ಡಿಶ್ಚಂಗ್ ಅಂಡ್ ವಾಹ್ರ್ ಹೈಟ್ (1811-14)


ಇದು ಗಯಟೆಯ ಜೀವನದ ಮೊದಲ ಭಾಗವನ್ನು ರೂಪಿಸುವ ಆತ್ಮಕಥೆ. 1811ರಿಂದ 1814ರವರೆಗಿನ ಅವಧಿಯಲ್ಲಿ ಗಯಟೆ ಆತ್ಮಕತೆಯ ಮೂರುಭಾಗಗಳನ್ನು ಬರೆದರೂ ಕೊನೆಯಭಾಗ, ಅಂದರೆ ಅವನು ವೈಮರ್ಗೆ ಬರುವವರೆಗಿನ ಜೀವನದ ಇತಿಹಾಸದ ಭಾಗ, ಆತ ತೀರಿಹೋದ ಅನಂತರ, 1833ರಲ್ಲಿ ಪ್ರಕಟವಾಯಿತು. ಇಳಿ ವಯಸ್ಸಿನ ಕವಿ ತನ್ನ ವಿಸ್ತೃತ ಜೀವನದ ಏರಿಯ ಮೇಲೆ ನಿಂತು, ಕಳೆದುಹೋದ ತನ್ನ ತಾರುಣ್ಯದ ವಿವಿಧ ಅನುಭವಗಳನ್ನು ಇಲ್ಲಿ ಸಮೀಕ್ಷಿಸಿದ್ದಾನೆ. ಫ್ರಾಂಕ್ಫರ್ಟಿನಲ್ಲಿನ ಬಾಲ್ಯ ಮತ್ತು ಲೀಪ್ಜಿ಼ಗ್ ಘಟನೆಗಳು ಇಲ್ಲಿ ಜೀವ ತಳೆದು ಸ್ಫುಟವಾಗಿ ಹೊಮ್ಮಿವೆ. ತಾನು ಪ್ರೀತಿಸಿದ್ದ ಫ್ರೆಡ್ರಿಕ್ ಬ್ರಯಾನ್ ಮತ್ತು ಸೀಸನ್ಹ್ಯಾಮ್ ಹಳ್ಳಿಗಳ ವರ್ಣನೆ ಅತ್ಯಂತ ಕಾವ್ಯಾತ್ಮಕವಾಗಿ ಅರಳಿ ಬಂದಿದೆ. ಜರ್ಮನಿಯಲ್ಲಿ ಚಂಡಮಾರುತದಂತೆ ಬೀಸಿದ ಸ್ಟುರ್ಮ್ ಉಂಡ್ ಡ್ರಂಗ್ ಚಳವಳಿಯ ನಡುವೆ ಗಯಟೆ ತನ್ನ ಯೌವ್ವನವನ್ನು ಕಳೆದರೂ ಆ ಪ್ರಕ್ಷುಬ್ಧ ವಾತಾವರಣದ ಪ್ರಭಾವ ಈ ಆತ್ಮಕಥೆಯಲ್ಲಿ ಎಲ್ಲೂ ಸುಳಿದಿಲ್ಲ. ಇಲ್ಲಿನ ವಸ್ತುನಿಷ್ಠ ನಿರ್ಲಿಪ್ತಶೈಲಿ ತಾನೇತಾನಾಗಿ, ಅನಿವಾರ್ಯವಾಗಿ ರೂಪ ತಾಳಿ ಬಂದುದಲ್ಲ ಅನಿಸುತ್ತದೆ. ಈ ಆತ್ಮಕಥೆಯ ಶೈಲಿಯನ್ನು ಕುರಿತು ವಿಮರ್ಶಕರು ಅರುವತ್ತು ವರ್ಷದ ವೃದ್ಧ ನಾಲ್ವತ್ತರ ಹರೆಯದ ಕಣ್ಣುಗಳ ಮೂಲಕ ನೋಡಲೆತ್ನಿಸಿದಂತಿದೆ-ಎಂದಿದ್ದಾರೆ.


ವೆಸ್ಟ್ಯೋಸ್ಟ್ಲಿಶೆರ್ ಡೀವಾನ್ (1819)


ಈ ಕವನ ಸಂಗ್ರಹದಲ್ಲಿ ಗಯಟೆ ಪರ್ಷಿಯನ್ ಕವಿ ಹಾಫಿಜ್ನನ್ನು ಅನುಕರಿಸಿ ಬರೆದ ಪ್ರೇಮಗೀತೆಗಳಿವೆ. ಪ್ರಸಿದ್ಧ ಪೌರಸ್ತ್ಯ ಭಾಷಾಪಂಡಿತ ಜೋಸೆಫ್ ಹ್ಯಾಮರ್ನ ವಿಪುಲ ಗ್ರಂಥಗಳಿಂದ ಪರ್ಷಿಯನ್ ಸಾಹಿತ್ಯದ ಪರಿಚಯ ಪಡೆದಿದ್ದ ಗಯಟೆಗೆ ಹಾಫಿಜ್ನ ಪ್ರೇಮಗೀತೆಗಳಲ್ಲಿ ಬರುವ ಮೇಳಗೀತಾ ಛಂದಸ್ಸು ಬಹಳ ಮೆಚ್ಚಾಯಿತು. ತನ್ನ ಇಳಿವಯಸ್ಸಿನಲ್ಲೂ ಮೇರಿಯಾನ ವಿಲ್ಹೆಮರ್ ಎಂಬ ಹುಡುಗಿಯನ್ನು ಅಪಾರವಾಗಿ ಪ್ರೀತಿಸಿದ ಗಯಟೆ ತನ್ನ ಉತ್ಕಟ ಭಾವನೆಗಳನ್ನು ಈ ಕವನಗಳಲ್ಲಿ ಹರಿಯಬಿಟ್ಟಿದ್ದಾನೆ. ಸಂಗ್ರಹದಲ್ಲಿನ ಹನ್ನೆರಡು ಭಾಗಗಳಲ್ಲಿ ನೆಪೋಲಿಯನನನ್ನು ಕುರಿತ ಕವನ ಚಿತ್ರಗಳಿವೆ. ಉದ್ದನೆಯ ಸೂಕ್ತಿಗಳಂತೆ ಕಾಣುವ ಈ ಸುಂದರ ಕವನಗಳಲ್ಲಿ ಗಾಢ ಚಿಂತನೆ ಇದೆ. ಚಿತ್ರಯುಕ್ತವಾದ ಸಂಯುಕ್ತ ಪದಗಳನ್ನು ಗಯಟೆ ಈ ಕವನಗಳಲ್ಲಿ ಅನನ್ಯವಾಗಿ ಬಳಸಿದ್ದಾನೆ.


ವಿಲ್ಹೆಲ್ಮ್ ಮೈಸ್ಟರ್ಸ್ ವಾಂಡರ್ಜಾಹ್ರ್ (1821-29)


ವಿಲ್ಹೆಲ್ಮ್ ಮೈಸ್ಟರ್ಸ್ ಅಪ್ರೆಂಟಿಸ್ಷಿಪ್ ಎಂಬ ಕಾದಂಬರಿಯ ಮುಂದಿನ ಭಾಗವಾದ ಇದನ್ನು ಗಯಟೆ 1829ರಲ್ಲಿ ಮುಗಿಸಿದ. ಮೊದಲ ಭಾಗದ ಭಾವಸಾಂದ್ರತೆಯಾಗಲೀ ಚೆಲುವಾದ ನಿರೂಪಣೆಯಾಗಲೀ ಇಲ್ಲಿಲ್ಲ. ಕಥಾನಾಯಕನ ಆತ್ಮಕಥನ ಅಲ್ಲಲ್ಲಿ ನೀರಸವಾಗಿದೆ. ಮೊದಲ ಭಾಗದಲ್ಲಿ ಬರುವ ಪಾತ್ರಗಳೇ ಮತ್ತೆ ಇಲ್ಲಿ ಕಾಣಿಸಿಕೊಂಡರೂ ಅವುಗಳ ಕಲ್ಪನೆ ಶಿಥಿಲವಾಗಿದೆ. ಅವು ಕೆಲವು ವಿಶಿಷ್ಟ ಆದರ್ಶ ರೀತಿಗಳನ್ನು ಮೈಗೆ ಮೆತ್ತಿಕೊಂಡು ಬರುವ ಆಕೃತಿಗಳಂತೆ ಸುಳಿಯುತ್ತವೆ. ಮೊದಲ ಭಾಗದಲ್ಲಿ ಕಥಾನಾಯಕ, (ಫೌಸ್ಟ್ ನಾಟಕದ ಮೊದಲ ಭಾಗದ ನಾಯಕನ ಹಾಗೆ) ಸ್ವಂತ ಜೀವನದ ಎಡರುತೊಡರುಗಳನ್ನು ಎದುರಿಸಿ ಕಟ್ಟಕಡೆಯಲ್ಲಿ ಅನುಭವಗಳನ್ನು ರೂಢಿಸಿಕೊಂಡು ಜೀವನದ ರಹಸ್ಯವನ್ನು ಅರಿಯಲು ಯತ್ನಿಸುವಂತೆ ಕಾದಂಬರಿಯ ಎರಡನೆಯ ಭಾಗದಲ್ಲಿ ವ್ಯಕ್ತಿ ಹಾಗೂ ಸಮಾಜದ ಸಂಬಂಧವೇನೆಂದು ಅರ್ಥ ಮಾಡಿಕೊಳ್ಳಲು ಹೆಣಗುತ್ತಾನೆ. ಬದುಕಿನ ಶಿಕ್ಷಣಶಾಲೆಯಲ್ಲಿ ಕಲಿತ ಆದರ್ಶವನ್ನು ಇಲ್ಲಿ ವಾಸ್ತವ ಜೀವನಕ್ಕೆ ಅನ್ವಯಿಸಲು ಪ್ರಯತ್ನಿಸುತ್ತಾನೆ. ಕಥೆಯ ಸ್ವಾರಸ್ಯಕ್ಕಿಂತ ಹೆಚ್ಚಾಗಿ ಇಲ್ಲಿ ಗಯಟೆಯ ವೈಚಾರಿಕತೆ ತುಂಬಿ ಹೊನಲಾಗಿ ಹರಿಯುತ್ತದೆ. ಶಿಕ್ಷಣ, ಧರ್ಮ, ಕೈಗಾರಿಕೆಯ ಸಮಸ್ಯೆಗಳು, ಕಾರ್ಮಿಕರ ಹಕ್ಕು ಬಾಧ್ಯತೆಗಳು-ಮುಂತಾದ ಸಮಾಜ ಸಂಬಂಧಿ ತತ್ತ್ವಗಳು ಇಲ್ಲಿ ಗರಿಗೆದರಿಕೊಂಡಿವೆ.


ಫೌಸ್ಟ್-1ನೆಯ ಮತ್ತು 2ನೆಯ ಭಾಗಗಳು (1808-32)


ಗಯಟೆ ತನ್ನ ಜೀವನದ ಬೇರೆ ಬೇರೆ ಘಟ್ಟಗಳಲ್ಲಿ, ಕಾಲಾವಧಿಗಳಲ್ಲಿ ಬರೆದ ಈ ಕಾವ್ಯ ನಾಟಕ (ನಾಟಕೀಯ ಕಾವ್ಯವೆಂದರೂ ಸಮಂಜಸವಾದೀತು) ಜಗತ್ತಿನ ಮಹೋನ್ನತ ಸಾಹಿತ್ಯ ಕೃತಿಗಳಲ್ಲಿ ಒಂದು. ತನ್ನ ಭೌತಿಕ ಜಗತ್ತಿನ ಎಲ್ಲೆಕಟ್ಟುಗಳನ್ನು ಮೀರಿ ನಿಲ್ಲಬೇಕೆನ್ನುವ ಮನುಷ್ಯನ ಹಂಬಲವಾಗಲೀ ಬದುಕಿನ ಮೂಲಭೂತ ಸಾರ್ವಕಾಲಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕೆನ್ನುವ ಮನುಷ್ಯನ ತುಡಿತ ತೊಳಲಾಟಗಳಾಗಲೀ ಹೊಸ ವಿಚಾರಗಳೇನಲ್ಲ. ಆದರೆ ಈ ವಿಶ್ವವ್ಯಾಪಕ ಸಮಸ್ಯೆಯನ್ನು ಗಯಟೆ ಉನ್ನತ ಕಾವ್ಯಶೈಲಿಯಲ್ಲಿ ರೂಪಿಸಿದ್ದಾನೆ. ಫೌಸ್ಟ್ ನಾಟಕದ ಎರಡನೆಯ ಭಾಗವನ್ನು ಗಯಟೆ 1831ರಲ್ಲಿ ಮುಗಿಸಿದರೂ 1771ರಲ್ಲಿ ಉರ್ಫೌಸ್ಟ ಎಂಬ ಅಪೂರ್ಣ ಕೃತಿಯನ್ನು ಬರೆಯಲು ಮೊದಲು ಮಾಡಿದಾಗಲೇ ನಾಟಕದ ಬೀಜಾಂಕುರವಾಯಿತೆನ್ನಬಹುದು. ಕವಿಯ ಅಂತಃಕರಣ ಸಂವೇದನೆಗಳು ಬೆಳೆಯುತ್ತ ಹೋದಂತೆ ಈ ನಾಟಕದ ಕಲ್ಪನೆಯೂ ಹಿಗ್ಗುತ್ತ ಹೋಗಿ ಹೊಸ ಹೊಸ ವಿಚಾರಗಳನ್ನು ಅದು ಒಳಗೊಳ್ಳುವಂತಾಯಿತು. ಎಲ್ಲವನ್ನೂ ಹುಡುಕುತ್ತ ತಡಕುತ್ತ ಬಾಳಿನ ರಹಸ್ಯವನ್ನು ಮುಟ್ಟಿ ಮೇಲೇರಬೇಕೆನ್ನುವ ಫೌಸ್ಟನ ತತ್ತ್ವ ಹಾಗೂ ಫೌಸ್ಟ್ ಪಾತ್ರದ ಕಲ್ಪನೆಯನ್ನು ನಾಟಕದ ಮೊದಲ ಭಾಗದಲ್ಲಿ ಬರುವ ಸ್ವರ್ಗದಲ್ಲಿನ ಪ್ರಸ್ತಾವನೆಯಲ್ಲಿ ಕಾಣಬಹುದು. ಇಲ್ಲಿ ಸೃಷ್ಟಿಕರ್ತ ಭಗವಂತ ಒಂದು ಕಡೆ, ಎಲ್ಲವನ್ನೂ ಅಲ್ಲಗಳೆದು ಹೀನೈಸುವ ನಿಷೇಧಾತ್ಮಕ ಶಕ್ತಿಯಾದ ಮೆಫಿಸ್ಟಾಫೆಲೀಸ್ ಇನ್ನೊಂದು ಕಡೆ, ಮುಖಾಮುಖಿಯಾಗಿ ನಿಂತು ಮನುಷ್ಯನ ಆತ್ಮದ ವಿಷಯವಾಗಿ ಜಿಜ್ಞಾಸೆ ನಡೆಸುತ್ತಾರೆ. ಮೆಫಿಸ್ಟಾಫೆಲೀಸ್ ಹೇಳುತ್ತಾನೆ: ಮನುಷ್ಯ ಚಿರದುಃಖಿ. ಅವನ ಸ್ಥಿತಿ ಕರುಣಾಜನಕ. ಇನ್ನುಮೇಲೆ ನಾನು ಅವನ ಗೋಜಿಗೆ ಹೋಗುವುದಿಲ್ಲ. ದೇವರೆಂಬ ಬಯಲ ಭ್ರಾಂತಿಯನ್ನು ಕೇವಲ ತೋರಿಕೆಗಾಗಿ ನೆಚ್ಚಿಕೊಂಡಿರುವ ಅವನನ್ನು ದೇವರ ದಾರಿಯಿಂದ ತಪ್ಪಿಸಿ ಸೈತಾನಶಕ್ತಿಯತ್ತ ಒಯ್ಯುವುದು ಅತಿ ಸುಲಭ. ಇದಕ್ಕೆ ಭಗವಂತನ ಉತ್ತರ: ಮನುಷ್ಯ ಚಿರದುಃಖಿಯೆಂಬುದು ದಿಟ. ಭೂಮಿಯ ಮೇಲೆ ಬದುಕಿರುವ ತನಕ ಅವನು ಕಷ್ಟದಲ್ಲಿ ನರಳಬೇಕು, ಹೋರಾಡಬೇಕು. ಹೋರಾಟ ನಡೆಯುವಷ್ಟು ಕಾಲ ಅವನು ತಪ್ಪು ಮಾಡುವುದು ಅನಿವಾರ್ಯ, ಆದರೆ ಅವನು ದೈವಶಕ್ತಿಯ ಪ್ರತೀಕವೂ ಹೌದು. ಅವನು ಎಷ್ಟೇ ತಪ್ಪು ಮಾಡಿದರೂ ಸತ್ಯದ ದಾರಿಗೆ ಮತ್ತೆ ಬಂದೇ ಬರುತ್ತಾನೆ. ಏಕೆಂದರೆ ಅವನಿಗೆ ಎಂದೆಂದಿಗೂ ಸತ್ಯದ ಅರಿವು ಇದ್ದೇ ಇರುತ್ತದೆ. ಮೆಫಿಸ್ಟಾಫೆಲೀಸ್ ಮಹಾಕೆಡುಕಿಯಾದರೂ ದೇವರ ಸೃಷ್ಟಿಯಲ್ಲಿ ತಾನೂ ಒಂದು ಪುರಕಶಕ್ತಿ, ಈ ಲೋಕದ ಆಗುಹೋಗುಗಳಲ್ಲಿ ತಾನೂ ಭಾಗಿಯೆಂಬುದು ಅವನಿಗೆ ತಿಳಿಯದು. ಆದ್ದರಿಂದ ಮನುಷ್ಯನನ್ನು ಕೆಡಿಸಿ, ಅವನ ಆತ್ಮವನ್ನು ಸಂಪೂರ್ಣವಾಗಿ ವಿನಾಶಗೊಳಿಸುವೆನೆಂದು ದೇವರ ಮುಂದೆ ಪಣ ತೊಡುತ್ತಾನೆ. ಇದು ಅಸಾಧ್ಯವಾದ ಸಾಹಸವೆನ್ನುವುದು ಮೆಫಿಸ್ಟಾಫೆಲೀಸ್ ಮತ್ತು ಫೌಸ್ಟ್ ಪಣ ತೊಡುವ ಇನ್ನೊಂದು ಸನ್ನಿವೇಶದಲ್ಲಿ ವ್ಯಕ್ತವಾಗುತ್ತದೆ. ಫೌಸ್ಟ್ ನ ಈ ಪಣಕ್ಕನುಸಾರವಾಗಿ ಮೆಫಿಸ್ಟಾಫೆಲೀಸ್ ಫೌಸ್ಟನ ಎಲ್ಲ ಆಸೆ ಆಕಾಂಕ್ಷೆಗಳನ್ನೂ ಸಂಪೂರ್ಣವಾಗಿ ಸಂತೃಪ್ತಿಗೊಳಿಸಬೇಕು. ಮನುಷ್ಯನಿಗೆ ಎಲ್ಲ ಸುಖವೂ ಕೈಗೂಡಿತೆಂದಾಗ ಅವನಿಗೆ ಅದು ಇನ್ನೂ ಇರಲಿ, ಮತ್ತೂ ಇರಲಿ ಎನಿಸುವ ಹಾಗೆ ಮಾಡಬೇಕು. ಈ ಕಠಿಣ ಷರತ್ತನ್ನು ಅವನು ಒಪ್ಪಿಕೊಳ್ಳುತ್ತಾನೆ. ದೇವಮಾನವರಿಬ್ಬರನ್ನೂ ಗೆದ್ದು ತನ್ನ ಏಕೈಕ ಪ್ರಭುತ್ವವನ್ನು ಸ್ಥಾಪಿಸಲು ಹವಣಿಸುತ್ತಾನೆ. ಆದರೆ ಸ್ವರ್ಗದಲ್ಲಿನ ಪ್ರಸ್ತಾವನಾ ಭಾಗದಲ್ಲಿ ಫೌಸ್ಟ್ ಅಜೇಯ ಆತ್ಮಶಕ್ತಿಯುಳ್ಳವನು, ಅಂತಿಮವಾಗಿ ಅವನಿಗೆ ಯಶಸ್ಸು ದೊರೆಯುವುದು ಖಂಡಿತ-ಎನ್ನುವ ಸೂಚನೆ ಇದೆ. ಇಲ್ಲಿ ಗಯಟೆ, ಫೌಸ್ಟ್ ಇಡೀ ಮಾನವ ವರ್ಗದ ಪ್ರತಿನಿಧಿ ಎಂಬ ವಿಚಾರದ ಮೇಲೆ ಒತ್ತು ಹಾಕಿದ್ದಾನೆ. ಮನುಷ್ಯನಿಗೆ ತೃಪ್ತಿಯೆಂಬುದೇ ಇಲ್ಲ. ಅವನ ಆಸೆ ಕೊರೆಬೀಳದ ಗಣಿಯಂತೆ; ಎಷ್ಟು ಮೊಗೆದು ಕುಡಿದರೂ ಬತ್ತದ ಪ್ರವಾಹದಂತೆ. ಇದ್ದುದನ್ನು ಬಿಟ್ಟು ಇಲ್ಲದುದನ್ನು ಹಿಡಿಯಲು ಊಧರ್ರ್ವ್ ಮುಖಿಯಾಗಿ ಹೊರಟ ಅವನು ನಿರಂತರವಾಗಿ ಗಗನದತ್ತ ಹಾರುತ್ತಿರುವನು. ಇದು ಅವನ ಬದುಕಿನ ರಹಸ್ಯ. ಇಲ್ಲಿ ಗಯಟೆಯ ನಾಟಕದ ಅಂತರಾರ್ಥವಿದೆ. ನಾಟಕದ ಕೊನೆಯಲ್ಲಿ ದೇವತೆಗಳು ಫೌಸ್ಟನ ದೇಹವನ್ನು ಸ್ವರ್ಗದತ್ತ ಒಯ್ಯುವಾಗ, ಕೆಡುಕನ್ನು ಕಳೆದು ಉದ್ಧಾರಗೊಂಡ ಅವನ ದಿವ್ಯಚೇತನವನ್ನು ಕುರಿತು ಅವರು ಹಾಡಿ ಹೊಗಳುತ್ತಾರೆ: ಯಾರು ತಮ್ಮ ಧೀಃಶಕ್ತಿಯಿಂದ ಹೋರಾಡುತ್ತಾರೋ ಅಂಥವರು ದೇವರಿಗೆ ಹತ್ತಿರದವರು. ನಾವು ಅಂಥವರನ್ನು ಒಲಿಯುತ್ತೇವೆ.


ಫೌಸ್ಟ್ ಏರುವ ಯಶಸ್ಸಿನ ಈ ಶಿಖರಕ್ಕೆ ಸುಖದ ಸೋಪಾನಗಳಿಲ್ಲ. ಕೊನೆಯುಸಿರಿರುವ ತನಕ ಅವನು ಕ್ಷಣ ಕ್ಷಣವೂ ಹೋರಾಡಬೇಕು. ಆಸೆ-ನಿರಾಸೆ, ಬಯಕೆ-ನೋವು, ರಾಗ-ದ್ವೇಷ ಎಲ್ಲವನ್ನೂ ಅನುಭವಿಸುತ್ತ ಯಾವುದನ್ನೂ ಅಪ್ಪಿಹಿಡಿಯದೆ, ತಪ್ಪಿನಡೆದರೂ ಎಲ್ಲೂ ನಿಲ್ಲದೆ, ಮೇಲೇರುತ್ತ ಸಾಗಬೇಕು. ಈ ಘೋರ ಹೋರಾಟದಲ್ಲಿ ಮಾರ್ಗರೆಟ್ಟಳ (ಗ್ರೆಚೆನ್) ದುರಂತ ಒಂದು ಮುಖ್ಯ ಘಟ್ಟ. ಮೆಫಿಸ್ಟಾಫೆಲೀಸನ ಬಲೆಗೆ ಬಿದ್ದ ಫೌಸ್ಟ್, ತಾನು ಗಾಢವಾಗಿ ಪ್ರೀತಿಸುವ, ನಿಷ್ಕಳಂಕಳಾದ ಮಾರ್ಗರೆಟ್ಟಳನ್ನು ಕೂಡುತ್ತಾನೆ. ಕಾಮತೃಷೆ ತೀರಿಸಿಕೊಳ್ಳುತ್ತಾನೆ. ವಾಲ್ಪುರ್ಗಿಸ್ ಇರುಳಿನ ಕಾಮಕೇಳಿಯಲ್ಲಿ ಸೇರಿ ಸ್ವೈರನಾಗಿ ರಮಿಸುತ್ತಾನೆ. ಕಾಮ ಹೊತ್ತಿ ಉರಿದು ಮತ್ತೆ ತಣ್ಣಗಾದ ಮೇಲೆ ಅವನಿಗೆ ಮಾರ್ಗರೆಟ್ಟಳಿಗೆ ಮಾಡಿದ ಅನ್ಯಾಯದ ಅರಿವಾಗುತ್ತದೆ. ಅವಳ ನಿಷ್ಕಳಂಕ ಪ್ರೇಮ, ಸಹನೆ, ತ್ಯಾಗಗಳ ನೆನಪಾದಾಗ ಪಶ್ಚಾತ್ತಾಪದಿಂದ ಕುದಿಯುತ್ತಾನೆ. ಆದರೆ ಮೆಫಿಸ್ಟಾಫೆಲೀಸನ ಕೈಗೆ ಸಿಕ್ಕಿದ ಅವನು ಹಿಂದಕ್ಕೆ ಕಾಲ್ದೆಗೆ ಯುವಂತಿಲ್ಲ. ಏಕೆಂದರೆ ಸೈತಾನನ ವ್ಯವಸ್ಥೆಯಲ್ಲಿ ಅವ್ಯಾಜ ಪ್ರೇಮ, ಬಲಿದಾನಗಳಿಗೆ ಸ್ಥಾನವಿಲ್ಲ, ಅರ್ಥವಿಲ್ಲ. ಹೀಗೆ ಪಿಶಾಚಿಯ ಪ್ರಲೋಭನಗಳಗೆ ಸಿಕ್ಕಿದ ಅವನು ಮಾರ್ಗರೆಟ್ಟಳನ್ನು ತ್ಯಜಿಸಿದ್ದಾನೆ. ತನ್ನ ಪಾಪದ ಫಲವಾಗಿ ಶಿಕ್ಷೆಗೆ ಗುರಿಯಾದ ಮಾರ್ಗರೆಟ್ ಸೆರಮನೆಯಲ್ಲಿ ಕೊಳೆಯುತ್ತಿರುವಾಗ, ನಿರುಪಾಯ ಸ್ಥಿತಿಯಲ್ಲಿರುವ ಫೌಸ್ಟ್ ದುಃಖತಪ್ತನಾಗಿ ತನ್ನನ್ನು ತಾನೇ ಅವಹೇಳನ ಮಾಡಿಕೊಳ್ಳುತ್ತಾನೆ. ಇಲ್ಲಿಂದ ಮುಂದಕ್ಕೆ ಮೆಫಿಸ್ಟಾಫೆಲೀಸ್ ಹಾಗೂ ಫೌಸ್ಟರ ನಡುವಣ ಸಂಘರ್ಷ ಹೆಚ್ಚು ಸೂಕ್ಷವೂ ಸ್ಪಷ್ಟವೂ ಆಗಿ ತೋರುತ್ತದೆ. ಫೌಸ್ಟ್ ನದು ಮೇಲುಗೈಯಾಗಿ ಅವನ ಎಳಸಿಕೆಗಳೆಲ್ಲವನ್ನೂ ಪುರೈಸುವೆನೆಂದು ವಚನವಿತ್ತ ಮೆಫಿಸ್ಟಾಫೆಲೀಸನದು ಸೋಲುಗೈ ಆಗುತ್ತದೆ. ಏಕೆಂದರೆ ಮೆಫಿಸ್ಟಾಫೆಲೀಸ್ ನೀಡುವ ಕ್ಷುದ್ರವಾದ ಆಸೆ ಆಮಿಷಗಳೆಲ್ಲವನ್ನೂ ಫೌಸ್ಟ ಕ್ಷಣದಲ್ಲೇ ಹೀರಿ ಬಿಸುಟು ಆತ್ಮೋನ್ನತಿಯತ್ತ ಏರುತ್ತಾನೆ.


ನಾಟಕದ ಎರಡನೆಯ ಭಾಗದ ಫೌಸ್ಟನ ಎಳಸಿಕೆಗಳು, ಬೇಡಿಕೆಗಳು ಮೆಫಿಸ್ಟಾ ಫೆಲೀಸನಿಗೆ ತಿಳಿಯದಷ್ಟು ಜಟಿಲವಾಗುತ್ತವೆ. ಭೂಮಿಗೆ ಅಂಟಿಕೊಂಡ ಅವನಿಗೆ ಫೌಸ್ಟನ ಬೌದ್ಧಿಕ ಔನ್ನತ್ಯ, ಅದಮ್ಯ ಸೌಂದರ್ಯಾನ್ವೇಷಣೆಗಳು ಅರ್ಥವಾಗುವುದಾದರೂ ಹೇಗೆ? ಮಾರ್ಗರೆಟ್ಟಳ ಕಥೆ ಮೊದಲ ಭಾಗದಲ್ಲಿ ನಾಟಕದ ರಸಶಿಖರವಾದಂತೆ, ಇಲ್ಲಿ ಹೆಲೆನಳ ಪ್ರಕರಣ ಫೌಸ್ಟನ ವ್ಯಕ್ತಿತ್ವಕ್ಕೆ ಪೋಷಣೆಯಾಗುವ ಅಂಶವಾಗಿ, ವ್ಯಂಜಕತೆಯನ್ನು ಉದ್ದೀಪಿಸುತ್ತದೆ. ಎರಡು ಪ್ರಕರಣಗಳ ರಚನೆಯಲ್ಲಿ ಕಲಾತ್ಮಕವಾದ ಸಾಮ್ಯವಿದ್ದರೂ ಹೆಲೆನ್ ಕಥೆಯ ಸಾಂಕೇತಿಕತೆ ತೀರಾ ವಿಶಿಷ್ಟವಾದದ್ದು. ಹೆಲೆನ್ ಕ್ಲಾಸಿಕಲ್ ತತ್ತ್ವಗಳು ಪ್ರತಿಪಾದಿಸುವ ಸೌಂದರ್ಯದ ಪ್ರತೀಕವಾದರೆ ಫೌಸ್ಟ ರೊಮ್ಯಾಂಟಿಕ್ ಶಕ್ತಿಸಾಹಸಗಳ ಪ್ರತಿನಿಧಿ. ಇಬ್ಬರ ಸಂಗದಿಂದ ಹುಟ್ಟುವ ಮಗು ಯುಫೋರಿಯನ್ ಆಧುನಿಕ ಪ್ರತಿಭೆಯ ಸಂಕೇತವಾಗುತ್ತಾನೆ. (ಯುಫೋರಿಯನ್ ಪಾತ್ರ ಕಲ್ಪನೆ ಬೈರನ್ ಕವಿಯ ಬದುಕು ಹಾಗೂ ವ್ಯಕ್ತಿತ್ವದಿಂದ ಪ್ರೇರಿತವಾಯಿತೆಂಬುದು ಗಮನಾರ್ಹ). ಹೀಗೆ ಹುಟ್ಟಿದ ಮಗ ಏನೊಂದೂ ಕಟ್ಟುಪಾಡುಗಳಿಲ್ಲದೆ ಸ್ಟೈರನಾಗಿ ಬೆಳೆದು ನಾಶವಾಗುತ್ತಾನೆ. ಹೆಲೆನ್ ಅಧೋಲೋಕಕ್ಕೆ ತೆರಳುತ್ತಾಳೆ. ಹೆಲೆನ್ ಪ್ರಕರಣದಿಂದಾಗಿ ಫೌಸ್ಟನಿಗೆ ಪುರಾತನ ಗ್ರೀಕರ ಕಾಲದಿಂದ ಹಿಡಿದು ತನ್ನ ಕಾಲದವರೆಗೆ ಎಡೆಬಿಡದೆ ಪ್ರವಹಿಸುತ್ತಿರುವ ಇತಿಹಾಸ, ಸಂಸ್ಕೃತಿಗಳ ದರ್ಶನವಾಗುತ್ತದೆ. ಆದರೂ ಅವನ ಎಳಸಿಕೆಗಳಿಗೆ ಮಿತಿಯಿಲ್ಲ. ಅವಳನ್ನು ಸಾಧಿಸಲು ಆತ ಮತ್ತೆ ಹೋರಾಡುತ್ತಾನೆ. ನಾಟಕದ ಕೊನೆಯ ಘಟ್ಟದಲ್ಲಿ ಫೌಸ್ಟ ಒಬ್ಬ ಶತಾಯು ಸಾಹಸಿ. ಪ್ರಕೃತಿಯ ಶಕ್ತಿಗಳೆಲ್ಲವನ್ನೂ ನಿಯಂತ್ರಿಸುವ ಅದ್ಭುತ ಸಾಮರ್ಥ್ಯ, ಮನುಷ್ಯ ಲೋಕವನ್ನು ಆಳಬಲ್ಲ ಯೋಗ್ಯತೆಗಳು ಈಗ ಅವನಿಗೆ ದಕ್ಕಿವೆ. ಕೈಸರ್ ದೊರೆಯ ದೇಶದಲ್ಲಿ ಅವನು ಅಸಾಮಾನ್ಯವಾದ ಕೆಲಸಕಾರ್ಯಗಳಲ್ಲಿ ತೊಡಗಿದ್ದಾನೆ. ಒಡ್ಡುಕಟ್ಟಿ ಸಮುದ್ರವನ್ನು ಹಿಂದಕ್ಕೆ ತಳ್ಳಿ, ಲಕ್ಷಾಂತರ ಮಂದಿಗೆ ಮರುವಸತಿ ಒದಗಿಸಲು ಸಮುದ್ರದಿಂದ ಉತ್ಕೃಷ್ಟ ನೆಲವನ್ನು ಆತ ಪಡೆದುಕೊಳ್ಳುತ್ತಾನೆ. ಆತನ ಕಾರ್ಯಕ್ರಮಗಳೆಲ್ಲವೂ ಬೇಗನೆ ಮುಗಿದು ಹೋಗಲೆಂದು ತುಡಿಯುತ್ತಿರುವ ಮೆಫಿಸ್ಟಾಫೆಲೀಸ್ ಫೌಸ್ಟನ ಎಲ್ಲ ಕೆಲಸಗಳಲ್ಲೂ ನೆರವಾಗುತ್ತಾನೆ. ಮೆಫಿಸ್ಟಾಫೆಲೀಸನ ಕ್ಷುದ್ರತನವನ್ನು ಅರಿತ ಫೌಸ್ಟ ಅವನ ಸಹಾಯವಿಲ್ಲದೆ ಬದುಕಬೇಕೆಂಬ ನಿರ್ಧಾರಕ್ಕೆ ಬರುತ್ತಾನೆ. ಸಾಯುವ ಕೊನೆಯ ಗಳಿಗೆಯಲ್ಲೂ ಮುಂದಿನ ಸಹಸ್ರಾರು ಯೋಜನೆಗಳನ್ನೂ ತಯಾರಿಸುತ್ತಿರುವ ಫೌಸ್ಟನಿಗೆ ಎಣೆಯೆಲ್ಲಿ, ಕೊನೆಯಲ್ಲಿ? ಅವನ ಆತ್ಮವನ್ನು ವಶಪಡಿಸಿಕೊಳ್ಳಲು ದೇವತೆಗಳಿಗೂ ಪಿಶಾಚಿಗಳಿಗೂ ಪೈಪೋಟಿ. ಮೇಲಿಂದ ಇಳಿದುಬಂದ ದೇವತಾವೃಂದ ಅವನನ್ನು ಸ್ವರ್ಗಾಭಿಮುಖವಾಗಿ ಕೊಂಡೊಯ್ಯುತ್ತದೆ.


ಅತ್ಯದ್ಭುತ ಕಾವ್ಯಸಂಪತ್ತಿನಿಂದ ತುಂಬಿದ ಈ ಮಹಾಕೃತಿಯಲ್ಲಿ ಗಯಟೆ ವೈವಿಧ್ಯಮಯ ಕಾವ್ಯರೂಪಗಳನ್ನು ಬಳಸಿದ್ದಾನೆ. ಹೆಚ್ಚಾಗಿ ಪಾತ್ರ ವಿನ್ಯಾಸಕ್ಕೆ ಗಮನವಿತ್ತಿರುವುದರಿಂದ ನಾಟಕರಚನೆಯಲ್ಲಿ ಸಾವಯವ ಸಮಗ್ರತೆ ಇಲ್ಲ. ಆದರೆ ಫೌಸ್ಟನ ಅನ್ಯಾದೃಶ ಪಾತ್ರವೇ ನಾಟಕದ ಭಾವಗೀತಾತ್ಮಕವಾದ ಬಿಡಿಭಾಗಗಳನ್ನು ಒಂದುಗೂಡಿಸುವ ಸಾಧನವಾಗಿದೆ. ಫೌಸ್ಟ ನಾಟಕ ರಂಗಪ್ರದರ್ಶನಕ್ಕಾಗಿ ಉದ್ದೇಶಿಸಿದ ಕೃತಿಯಲ್ಲ. ಆದರೂ ಅದು ನೂರು ವರ್ಷಗಳಿಂದಲೂ ಯುರೋಪಿನ ನಾಟಕಕಾರರನ್ನೂ ನಟರನ್ನೂ ಬೇರೆ ಬೇರೆ ಪ್ರಕಾರಗಳ ಕಲಾವಿದರನ್ನೂ ಆಕರ್ಷಿಸುತ್ತ ಬಂದಿದೆ. ಅವರ ಆತ್ಮಕ್ಕೆ ಚ್ಯುತಿ ಇಲ್ಲ- ಇದು ಗಯಟೆಯ ಜೀವನದ ಮುಖ್ಯ ಸಿದ್ಧಾಂತವಾಗಿತ್ತು. ಇದಕ್ಕೆ ಚಿರಂತನ ಅಭಿವ್ಯಕ್ತಿ ಕೊಟ್ಟ ಫೌಸ್ಟ, ವಿಶ್ವಸಾಹಿತ್ಯದ ಒಂದು ಅಮೃತ ಕೃತಿ.


ಗಯಟೆಯ ವೈಜ್ಞಾನಿಕ ಬರೆಹಗಳು

ಬದಲಾಯಿಸಿ
 
ಚಿಕಾಗೋದ ಲಿಂಕನ್ ಪಾರ್ಕ್‍ನಲ್ಲಿರುವ ಗಯಟೆಯ ಪುತ್ಥಳಿ-(1913)
 
Light spectrum, from Theory of Colours. Goethe observed that with a prism, colour arises at light-dark edges, and the spectrum occurs where these coloured edges overlap.

ಪ್ರಪಂಚದ ಅದ್ವಿತೀಯ ಸಾಹಿತಿಗಳಲ್ಲೊಬ್ಬ ನಾದ ಗಯಟೆ ತನ್ನ ವೈಜ್ಞಾನಿಕ ಕೃತಿಗಳನ್ನು ಕುರಿತು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ಅವನ ವೈಜ್ಞಾನಿಕ ವಿಚಾರಗಳೆಲ್ಲವನ್ನೂ ಆಧುನಿಕ ವಿಜ್ಞಾನಿಗಳು ಒಪ್ಪಿಕೊಂಡಿಲ್ಲ. ಆದರೆ ತಾನೇ ನಡೆಸಿದ ಸಂಶೋಧನೆಗಳ ಫಲವಾಗಿ ಅವನು ಪ್ರತಿಪಾದಿಸಿದ ಕೆಲವು ಸಂಶೋಧನಾತ್ಮಕ ವಿಚಾರಗಳನ್ನು ವಿಜ್ಞಾನಿಗಳು ಸ್ವೀಕರಿಸಿ ಅವನಿಗೆ ಸಲ್ಲಬೇಕಾದಷ್ಟು ಅಗ್ರಮಾನ್ಯತೆ ಕೊಟ್ಟಿದ್ದಾರೆ. ಅವನು ಪ್ರತಿಪಾದಿಸಿದ ವಿಚಾರಗಳ ಸ್ವಂತಿಕೆಯ ಮಹತ್ತ್ವಕ್ಕಿಂತ ಹೆಚ್ಚಾಗಿ ಅವನ ವೈಜ್ಞಾನಿಕ ದೃಷ್ಟಿ, ಮನೋಧರ್ಮಗಳನ್ನು ಹಲವು ವಿಜ್ಞಾನಿಗಳು ಮೆಚ್ಚಿಕೊಂಡಿದ್ದಾರೆ. ಅವನ ವೈಜ್ಞಾನಿಕ ಗ್ರಂಥಗಳಲ್ಲಿ ಮುಖ್ಯವಾಗಿ ಬಣ್ಣದ ಸ್ವರೂಪವನ್ನು ಕುರಿತ ಫಾರ್ಬೆನ್ ಲೆಹ್ರ (1805-10), ಮನೋವಿಜ್ಞಾನ ಹಾಗೂ ದೃಗ್ವಿಜ್ಞಾನಕ್ಕೆ ಸಂಬಂಧಿಸಿದ ಯುಟೋಪಿಶ್ಚೆ ಫಾರ್ ಬೆನ್, ಸಸ್ಯಶಾಸ್ತ್ರ ಹಾಗೂ ರೂಪವಿಜ್ಞಾನವನ್ನು ಕುರಿತ ಮೆಟಮಾರ್ಫೋಸ್ ಡರ್ ಫ್ಲಾಂಜೆನ್-ಇವು ವಿಜ್ಞಾನ ಲೋಕದ ಕಣ್ಣು ಸೆಳೆದಿರುವ ಕೃತಿಗಳು. ಬೆಳಕು ಹಾಗೂ ಬಣ್ಣದ ಸ್ವರೂಪವನ್ನು ವಿಶ್ಲೇಷಿಸುವಾಗ ನ್ಯೂಟನ್ನನ ಸೂತ್ರಗಳನ್ನು ಗಯಟೆ ಅಲ್ಲಗಳೆಯಲು ಪ್ರಯತ್ನಿಸಿ ವಿಫಲನಾಗಿದ್ದಾನೆ. ಗಣಿತವಿಜ್ಞಾನದಲ್ಲಿ ಸಾಕಷ್ಟು ಮಾಹಿತಿ ಇಲ್ಲದ್ದರಿಂದ ಗಯಟೆ ಹಲವು ತಪ್ಪುಗಳನ್ನು ಮಾಡಿದ್ದಾನೆಂದು ಭೌತವಿಜ್ಞಾನಿಗಳು ಸುಲಭವಾಗಿ ತೋರಿಸಿಕೊಟ್ಟಿದ್ದಾರೆ. ಬೆಳಕು ಕಣಗಳ ರೂಪದಲ್ಲಿ ಚಲಿಸುತ್ತದೆಂಬ ಸಿದ್ಧಾಂತ ತಪ್ಪೆಂದು ತೋರಿಸಲು ಪ್ರಯತ್ನಿಸುವ ಇವನ ಗಮನ ಸೂತ್ರಗಳನ್ನು ಅವರು ಒಪ್ಪಿಕೊಂಡಿಲ್ಲ. ಆದರೆ ದೃಗ್ವಿಜ್ಞಾನ ಸೂತ್ರಗಳನ್ನು ಪ್ರತಿಪಾದಿಸುವಾಗ ಬಳಸಿಕೊಂಡಿರುವ ಮನೋವೈಜ್ಞಾನಿಕ ತತ್ತ್ವಗಳು ಸ್ವೀಕಾರಾರ್ಹವೆಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ವಿಜ್ಞಾನದ ವಿಕಾಸವನ್ನು ಚರ್ಚಿಸುವ ಇವನ ವಿಚಾರಗಳು ವಿಜ್ಞಾನದ ಇತಿಹಾಸ ರಚಿಸುವವರಿಗೆ ದಾರಿದೀಪವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ರೂಪವಿಜ್ಞಾನಕ್ಕೆ ಸಂಬಂಧಪಟ್ಟ ಮೂಲಭೂತ ವಿಚಾರಗಳನ್ನು ಪ್ರಪ್ರಥಮವಾಗಿ ಪ್ರತಿಪಾದಿಸಿದ ಹಿರಿಮೆ ಗಯಟೆಗೆ ಸಲ್ಲುತ್ತದೆ. ಮಾರ್ಫಾಲಜಿ ಎಂಬ ಪದ ಇವನೇ ಸೃಷ್ಟಿಸಿದ್ದು. 1790ರಲ್ಲಿ ಈತ ಬರೆದ ಮೆಟಮಾರ್ಫಸಿಸ್ ಆಫ್ ಪ್ಲ್ಯಾಂಟ್ಸ ಎಂಬ ಗ್ರಂಥದಲ್ಲಿ ಈತನೇ ರಚಿಸಿರುವ ಚೇತೋಹಾರಿ ಚಿತ್ರಗಳು, ವಿವರಣೆಗಳು, ಸಸ್ಯ ವಿಜ್ಞಾನಿಗಳಿಗೆ ಪ್ರಿಯವೆನಿಸಿವೆ. ಒಂದು ಸಸ್ಯ ದೊಡ್ಡದಾಗಿ ಬೆಳೆಯುವ ಪೂರ್ವದಲ್ಲಿ ಹೊಮ್ಮುವ ಟೈಪ್ಲೀಫ್ನಲ್ಲಿ ಆ ಗಿಡದ ರಚನೆಯ ಸ್ವರೂಪವೆಲ್ಲವೂ ಅಂತರ್ಗತ ವಾಗಿರುತ್ತದೆಂಬ ವಿಚಾರವನ್ನು ಆಧುನಿಕ ವಿಜ್ಞಾನ ಒಪ್ಪಿಕೊಂಡರೂ ಈತ ಸೂಚಿಸುವ ಟೈಪ್ಪ್ಲಾಂಟ್ ತತ್ತ್ವವನ್ನು ಕೇವಲ ಊಹೆ ಎಂದು ಹೇಳಿ ಕೈಬಿಡಲಾಗಿದೆ. ಗಿಡದ ಬೇರುಗಳನ್ನು ಕುರಿತು ಗಯಟೆ ಏನನ್ನೂ ಹೇಳದಿರುವುದು ಸಸ್ಯ ಸಂಶೋಧನೆಗೆ ಅಗತ್ಯವಾದ ಒಂದು ಆಧಾರ ಸಂಗತಿಯನ್ನೇ ಬಿಟ್ಟಂತಾಗಿದೆ. ಇದನ್ನು ವಿಜ್ಞಾನಿಗಳು ಸ್ಪಷ್ಟವಾಗಿ ಟೀಕಿಸಿದ್ದಾರೆ. ಗಯಟೆ ಕೈಗೊಂಡ ವೈಜ್ಞಾನಿಕ ಸಂಶೋಧನೆಗಳಲ್ಲಿ ಜೀವವಿಜ್ಞಾನಕ್ಕೆ ಸಂಬಂಧಿಸಿದ ಒಂದು ವಿಚಾರ ಉಲ್ಲೇಖಾರ್ಹ. ಕಶೇರುಕಗಳಲ್ಲಿರುವ ಒಳದವಡೆಯ ಹಿಂಭಾಗ (ಇಂಟರ್ ಮ್ಯಾಕ್ಸಿಲೇರ್ ಅಥವಾ ಈಗಿನ ಅರ್ಥದಲ್ಲಿ ಪ್ರೀಮ್ಯಾಕ್ಸಿಲಾ)- ಮನುಷ್ಯನ ದೇಹರಚನೆಯಲ್ಲೂ ಇದೆ ಎಂದು ತನ್ನದೇ ಆದ ಸ್ವಂತ ರೀತಿಯಲ್ಲಿ ಗಯಟೆ ಗುರುತಿಸಿದ್ದು ಒಂದು ವಿಶೇಷ ಸಂಗತಿ. ಈ ಸಂಶೋಧನೆಯ ಮೂಲಕ ವಿಕಾಸ ಸಿದ್ಧಾಂತಕ್ಕೆ ದಾರಿತೋರಿದನೆಂದು ಡಾರ್ವಿನ್ ಗಯಟೆಯನ್ನು ಸ್ತುತಿಸಿದ್ದಾನೆ. ವ್ಯಕ್ತಿ ತನ್ನ ದೈಹಿಕ ಹಾಗೂ ಮಾನಸಿಕ ವ್ಯಾಪಾರ ವಿಶೇಷಗಳನ್ನು ಸೂಕ್ಷ್ಮವಾಗಿ ಗುರುತಿಸುವುದು ಸಾಧ್ಯ ಎಂಬುದು ಗಯಟೆಯ ರೂಪ ವಿಜ್ಞಾನತತ್ತ್ವ. ಈ ವಿಚಾರದ ನಾನಾ ಮುಖಗಳು ಅವನ ವೈಜ್ಞಾನಿಕ ಬರೆಹಗಳಿಗೆ ಪ್ರೇರಣೆ ಒದಗಿಸಿವೆ.

ಗಯಟೆಯ ಸೌಂದರ್ಯತತ್ತ್ವಗಳು

ಬದಲಾಯಿಸಿ
 
ಲಿಪ್‍ಜಿಗ್ ನಲ್ಲಿರುವ ಗಯಟೆ ಸ್ಮಾರಕ

ಗಯಟೆಯ ವಿಪುಲ ಸಾಹಿತ್ಯರಾಶಿಯಲ್ಲಿ ಬೆರೆತುಹೋಗಿರುವ ಸೌಂದರ್ಯತತ್ತ್ವಗಳಲ್ಲಿ ಮುಖ್ಯವಾದವನ್ನು ಮಾತ್ರ ಇಲ್ಲಿ ಸೂಚಿಸಲು ಪ್ರಯತ್ನಿಸಿದೆ. ಸಾಮಾನ್ಯವಾಗಿ ಸೌಂದರ್ಯಮೀಮಾಂಸೆಯ ಚರಿತ್ರೆಯಲ್ಲಿ ಗಯಟೆಗೆ ವಿಂಕಲ್ ಮನ್ ಪಂಥವನ್ನು ಜನಪ್ರಿಯಗೊಳಿಸಿದವನು ಎಂದಷ್ಟೇ ಸ್ಥಾನ ಕೊಡಲಾಗಿದೆ. ಕೆಲವು ಶಾಸ್ತ್ರಗ್ರಂಥಗಳಲ್ಲಿ ಇವನನ್ನು ಷಿಲ್ಲರ್ನಿಂದ ಪ್ರತ್ಯೇಕಿಸಿ, ಮೆಂಗ್ಸ್ ಹಾಗೂ ವಿಂಕಲ್ಮನ್ ಸಮುದಾಯಕ್ಕೆ ಸೇರಿದವನು, ಕ್ಯಾಂಟನಿಗಿಂತ ಹಿಂದಿನ ಪಂಥದವನು ಎಂದು ಹೇಳಲಾಗಿದೆ. ಇದು ಸರಿಯಲ್ಲ ಎಂದು ಬೊಸಾಂಕೆ ಅಭಿಪ್ರಾಯಪಟ್ಟಿದ್ದಾನೆ. ಏಕೆಂದರೆ ಗಯಟೆ ತನ್ನ ಸಮಕಾಲೀನನಾದ ಕಾಂಟನ ತತ್ತ್ವಗಳನ್ನು ಕೂಡ ಅಧ್ಯಯನ ಮಾಡಿ ಅವುಗಳ ಬಗೆಗೆ ತನ್ನ ಸ್ಪಷ್ಟ ಅಭಿಪ್ರಾಯ ಕೊಟ್ಟಿದ್ದಾನೆ. ಗಯಟೆಯ ಸ್ವೋಪಜ್ಞತೆಯನ್ನು ಪ್ರಶ್ನಿಸುವ ಕೆಲವು ಇತಿಹಾಸತಜ್ಞರು ಅರ್ಥಪುರ್ಣತ್ವ (ದಿ ಡಾಕ್ಟ್ರೀನ್ ಆಫ್ ದಿ ಸಿಗ್ನಿಫಿಕೆಂಟ್ ಆರ್ ದಿ ಕ್ಯಾರೆಕ್ಟರಿಸ್ಟಿಕ್) ಎನ್ನುವ ತತ್ತ್ವವನ್ನು ಪ್ರತಿಪಾದಿಸಿದವನು ವಿಂಕಲ್ಮನ್ನನೇ ಹೊರತು ಗಯಟೆ ಅಲ್ಲ ಎನ್ನುತ್ತಾರೆ. ಆದರೆ ವಿಂಕಲ್ಮನ್ಗೆ ಅದರ ಸ್ಪಷ್ಟವಾದ ಕಲ್ಪನೆ ಇತ್ತೆನ್ನುವುದು ಕಷ್ಟ. ಅದರ ಬಗೆಗೆ ನಿಚ್ಚಳ ವಿಚಾರ ಪರಂಪರೆ ಮೂಡಿಸಿದವ ಗಯಟೆಯೇ ಎನ್ನುವ ಅಭಿಪ್ರಾಯವೂ ಸಾಧಾರವಾಗಿ ವಿಮರ್ಶಕರಿಂದ ಮಂಡಿತವಾಗಿದೆ. ವಿಂಕಲ್ಮನ್ ತನ್ನ ಸಮಾಲೋಚನೆಯಲ್ಲಿ ಶಿಲ್ಪ ಮತ್ತು ಚಿತ್ರ ಕಲೆಗಳನ್ನುಳಿದು ಸಂಗೀತ, ಕಾವ್ಯ ಮುಂತಾದ ಲಲಿತಕಲಾಪ್ರಕಾರಗಳನ್ನು ಪ್ರಸ್ತಾಪಿಸಿಲ್ಲ. ಕಲೆಯಲ್ಲಿ ಯಾವುದು ಅರ್ಥಪುರ್ಣವೋ ಅದೇ ಉತ್ಕೃಷ್ಟ ಸುಂದರ. ಸುಂದರ ಎನ್ನುವ ಮಾತನ್ನು ಬಾಹ್ಯರೂಪಕ್ಕೆ ಮಾತ್ರ ಅನ್ವಯಿಸಬಾರದು; ಐತಿಹಾಸಿಕ ಹಿನ್ನಲೆಯಲ್ಲಿ ಸಾಪೇಕ್ಷವಾಗಿ ಪರಿಶೀಲಿಸಬೇಕು-ಎಂದಿದ್ದಾನೆ ವಿಂಕಲ್ಮನ್. ಸೌಂದರ್ಯಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸುವ ಅವಕಾಶ ಗಯಟೆಗೆ ಒದಗಿದ್ದು ಅವನು ಗಾತಿಕ್ ವಾಸ್ತುಶಿಲ್ಪವನ್ನು ಕುರಿತು ವಿಚಾರ ಮಾಡಿದಾಗ, ಕೃತಕ ಅಭಿಜಾತ ಪರಂಪರೆ ಯನ್ನು (ಸ್ಯೂಡೊ ಕ್ಲಾಸಿಕಲ್ ಟ್ರೆಡಿಷನ್) ಅನುಕರಿಸುವ ತನ್ನ ಕಾಲದ ವಾಸ್ತುಶಿಲ್ಪಗಳ ಪ್ರವೃತ್ತಿಯನ್ನು ಖಂಡಿಸುತ್ತ ಅವನು ಗಾತಿಕ್ಕಲೆಯ ಮಹತ್ತ್ವವನ್ನು ಎತ್ತಿ ತೋರಿಸಿದ. ಈ ಸಂದರ್ಭದಲ್ಲಿ ಅವನು ಚಿತ್ರಕಲೆ, ಸಂಗೀತ, ಕಾವ್ಯಗಳಿಗೆ ಸಂಬಂಧಿಸಿದ ವಿಚಾರಗಳನ್ನೂ ಪ್ರತಿಪಾದಿಸಿದ್ದಾನೆ. ಜರ್ಮನ್ ವಾಸ್ತುಕಲೆಯನ್ನು ಕುರಿತ ಪುಸ್ತಕದಲ್ಲಿ ಆ ಶತಮಾನದ ಸೌಂದರ್ಯಮೀಮಾಂಸೆಗೆ ಸಂಬಂಧಿಸಿದ ಅತಿ ಮುಖ್ಯ ವಿಚಾರಗಳಿವೆ. 84 ವರ್ಷಗಳ ಅನಂತರ ರಸ್ಕಿನ್ ಗಯಟೆಯ ಮೂಲತತ್ತ್ವಗಳನ್ನೇ ವಿಶದವಾಗಿ, ನಿಷ್ಕೃಷ್ಟವಾಗಿ ತನ್ನ ದಿ ಸ್ಟೋನ್ಸ ಆಫ್ ವೆನಿಸ್ ಎನ್ನುವ ಗ್ರಂಥದಲ್ಲಿ ಕ್ರೋಡೀಕರಿಸಿ ದ್ದಾನೆಂಬುದು ಗಮನಾರ್ಹ.


ಸ್ಟ್ರಾಸ್ಬರ್ಗ್ (ಸೇಂಟ್ ಪೀಟರ್) ಚರ್ಚಿನ ವಾಸ್ತುಶಿಲ್ಪವನ್ನು ವಿಮರ್ಶಿಸುತ್ತ ಪರಂಪರೆಯ ಅಂಧಾನುಕರಣೆ ಮಾಡುತ್ತಿದ್ದ ಸಮಕಾಲೀನರ ಶಿಲ್ಪ ಶೈಲಿಯನ್ನು ಗಯಟೆ ಉಗ್ರವಾಗಿ ಟೀಕಿಸಿದ್ದಾನೆ. ಸೇಂಟ್ ಪೀಟರ್ ಚರ್ಚನ್ನು ನೋಡುವ ಮೊದಲು ಗಾತಿಕ್ಕಲೆಯ ಬಗ್ಗೆ ತನ್ನಲ್ಲಿ ವಿಶೇಷ ತಪ್ಪು ಗ್ರಹಿಕೆ ಇತ್ತೆಂದೂ ಆ ಭವ್ಯಮಂದಿರವನ್ನು ಕಂಡಾಗ ಅವೆಲ್ಲ ಕರಗಿಹೋಗಿ ಗಾತಿಕ್ಕಲೆಯ ಅರ್ಥಪೂರ್ಣತೆಯ ಅರಿವು ತನಗಾಯಿತೆಂದೂ ತಿಳಿಸಿದ್ದಾನೆ. ಮೇಲುನೋಟಕ್ಕೆ ಭದ್ರವಾಗಿದ್ದು ಯಾವ ನಯ ನುಣುಪುಗಳಿಲ್ಲವೆಂದು ತೋರಿದರೂ ಗಾತಿಕ್ಕಲೆಯಲ್ಲಿ ಆಂತರಿಕವಾದ ಸೌಂದರ್ಯ ವಿದೆ. ಸೌಂದರ್ಯ ಪ್ರಜ್ಞೆ ಇರುವ ಯಾರಿಗಾದರೂ ಅದರಲ್ಲಿ ಲಲಿತಕಲೆಯ ಉತ್ಕೃಷ್ಟ ಗುಣಗಳು ಎದ್ದು ಕಾಣುತ್ತವೆ. ನೈಜರೂಪದ ಕಲಾಕೃತಿಯಲ್ಲೂ ಸೌಂದರ್ಯವಿದೆ ಎಂಬ ಮಾತಿನ ಮೇಲೆ ಗಯಟೆ ಹೀಗೆ ಒತ್ತು ಹಾಕಿರುವುದು ಅವನ ಮತ್ತು ವಿಂಕಲ್ಮನ್ನರ ನಡುವಣ ಅಭಿಪ್ರಾಯ ಭಿನ್ನತೆಯನ್ನು ಸೂಚಿಸುತ್ತದೆ. ಸಾಮಾನ್ಯರ ಅಭಿಪ್ರಾಯದಲ್ಲಿ ಸುಂದರ ಎಂದರೆ ಅಚ್ಚುಕಟ್ಟಾಗಿರುವುದು, ಸಮಗ್ರರೂಪ ಉಳ್ಳದ್ದು, ನುಣುಪು ಮಾಡಿದ್ದು ಎನ್ನುವ ಅರ್ಥ. ಆದರೆ ಸೌಂದರ್ಯಶಾಸ್ತ್ರದಲ್ಲಿ ಆ ಅರ್ಥ ಅಪೂರ್ಣವಾಗುತ್ತದೆ. ಕಲೆ ಪರಿಷ್ಕೃತ ಸುಂದರ ರೂಪ ಪಡೆಯುವುದಕ್ಕೆ ಪುರ್ವಭಾವಿಯಾಗಿ ದೀರ್ಘಕಾಲ ಬೆಳೆವಣಿಗೆಯ ಸ್ವರೂಪದಲ್ಲಿ ಇರುತ್ತದೆ; ಸಾಮಾನ್ಯರಿಗೆ ಅದು ಅಪೂರ್ಣವೆನಿಸಿದರೂ ನಿಜವಾಗಿ ಅರ್ಥಪೂರ್ಣವಾಗಿರುತ್ತದೆ. ಶ್ರೇಷ್ಠ ಕಲೆ ಎನ್ನುವುದು ಕೇವಲ ನುಣುಪಾದ ನಾಜೂಕಾದ ಸುಂದರ ಕಲೆಗಿಂತ ಉತ್ಕೃಷ್ಟವಾದುದು, ಜೀವಂತವಾದುದು-ಎಂದು ಗಯಟೆ ಅರ್ಥಪೂರ್ಣತ್ವದ ವಿವರಣೆ ಕೊಟ್ಟಿದ್ದಾನೆ. ಅರ್ಥಪೂರ್ಣ ಕಲೆಯಲ್ಲಿ ಆಂತರಿಕವಾದ ಅವಿಭಾಜ್ಯ ಏಕಸೂತ್ರವಿರುತ್ತದೆ. ಸ್ವತಂತ್ರ ಉತ್ಕಟ ಭಾವನೆಯ ಪ್ರೇರಣೆ ಇರುತ್ತದೆ. ಸುತ್ತಲಿನ ಪರಿಸರದ ಕ್ಷಣಿಕತೆಯಿಂದ ಪ್ರಭಾವಿತವಾಗದ, ಸಾರ್ವಕಾಲಿಕ, ಸಾರ್ವತ್ರಿಕ ಮೌಲ್ಯಗಳು ಅದರಲ್ಲಿರುತ್ತವೆ ಎನ್ನುವುದು ಅವನ ಮತ.


ಆದರೆ ಯುವಕ ಗಯಟೆಯಲಿದ್ದ ಈ ವಿಚಾರಗಳು ಸ್ವಲ್ಪಕಾಲ ಬೇರೆ ಜಾಡಿನಲ್ಲಿ ನಡೆದಂತೆ ತೋರಿ ಮತ್ತೆ ಅವನ ವೃದ್ಧಾಪ್ಯದ ಕಾಲದಲ್ಲಿ ಯಥಾಸ್ಥಿತಿಗೆ ಮರುಕಳಿಸಿದವೆನ್ನಬಹುದು. ತನ್ನ ಜೀವನದ ಮಧ್ಯಂತರಕಾಲದಲ್ಲಿ ಸುಂದರ ಗ್ರೀಕ್ ಕಲೆಯ ನಯ, ನಾಜೂಕುಗಳು ತನ್ನನ್ನು ಸೆಳೆದವೆಂದು ಆತ್ಮಕಥೆಯಲ್ಲಿ ಆತ ಹೇಳಿಕೊಂಡಿದ್ದಾನೆ. ತನ್ನ ಅಂತರಂಗದ ಈ ವಿಕಾಸವನ್ನು ಫೌಸ್ಟ ನಾಟಕದಲ್ಲಿ ಪ್ರತೀಕಿಸಿದ್ದಾನೆ; ಹೆಲನ್ನಳ ಅನ್ಯಾದೃಶ ಸೌಂದರ್ಯಕ್ಕೆ ಕಥಾನಾಯಕ ಮಾರುಹೋದರೂ ಸಂಪೂರ್ಣವಾಗಿ ಅದರಲ್ಲಿ ತಲ್ಲೀನನಾಗದೆ ಅವಳನ್ನು ತ್ಯಜಿಸಿ ಬಿಡುವುದು ಇದರ ಸಂಕೇತವಾಗಿದೆ.


ಕಲೆ ಮತ್ತು ವಿಜ್ಞಾನಗಳಿಗಿರುವ ಪರಸ್ಪರ ಸಂಬಂಧ ಅವನನ್ನು ಬಹಳವಾಗಿ ಸೆಳೆಯಿತು. ಪ್ರಕೃತಿಯಲ್ಲಿ ಕಾಣಸಿಗುವ ಪೂರ್ವಲಕ್ಷಣಗಳನ್ನುಳ್ಳ ಮಾದರಿಗಳಿಗೂ (ಆರ್ಕಿ ಟೈಪಲ್) ಆರ್ಷೇಯ ಕಲೆಯ ಅರ್ಥಪುರ್ಣತ್ವಕ್ಕೂ ನಡುವೆ ಇರುವ ಹೋಲಿಕೆಯನ್ನು ಆತ ಗಮನಿಸಿದ್ದಾನೆ. ಅವನು ಪ್ರಕೃತಿಯಲ್ಲಿ ಆರ್ಷೇಯ ಮಾದರಿಗಳನ್ನು ಹುಡುಕುತ್ತ ಹೊರಟಾಗಲೇ ಅವನಿಗೆ ವಿಜ್ಞಾನದ ಹಲವು ಮುಖಗಳ ದರ್ಶನವಾದದ್ದು. ಕೆಲವು ಜಾತಿಯ ಹೂಗಳಲ್ಲಿ ಅವನು ಅವುಗಳ ಸಂಪೂರ್ಣ ವಿಕಾಸದ ರೂಪವನ್ನು ಗುರುತಿಸಿ ಆ ಮೂಲಕ ಸಸ್ಯಗಳ ಕಾಯಾಂತರಣ (ಮೆಟಮಾರ್ಫಸಿಸ್) ಕುರಿತ ಸಿದ್ಧಾಂತವನ್ನು ಪ್ರತಿಪಾದಿಸಿದ್ದು ಹೀಗೆಯೇ. ಯಾವುದೇ ವಸ್ತು ಅಥವಾ ಕೃತಿಯ ಮಥಿತಾರ್ಥ (ಇಂಪೋರ್ಟ್), ಅದರ ಪ್ರಾತಿನಿಧಿಕ ಗುಣ (ಕ್ಯಾರೆಕ್ಟರ್ ಅಥವಾ ಸಿಗ್ನಿಫಿಕೆನ್ಸ) ಅದರ ಜೀವಾಳ ಎನ್ನುವುದು ಅವನ ಅಭಿಮತ. ಗಯಟೆ ಹಾಗೂ ಅವನ ಇಬ್ಬರು ಗೆಳೆಯರಾದ ಮೇಯರ್ ಮತ್ತು ಹರ್ಟ್ ಒಟ್ಟಾಗಿ ಪ್ರತಿಪಾದಿಸಿದ ಈ ವಿಚಾರಗಳಲ್ಲಿ ಅಲ್ಪಸ್ವಲ್ಪ ಭಿನ್ನಾಭಿಪ್ರಾಯ ತೋರಿಬಂದರೂ ಹೆಗಲ್ ಹೇಳುವಂತೆ ಅವರ ಸೂತ್ರಗಳು ಮುಖ್ಯವಾಗಿ ವಸ್ತು ಮತ್ತು ರೂಪಗಳಿಗೆ ಸಂಬಂಧಿಸಿದವು; ಕಲೆಯ ಶ್ರೇಷ್ಠತೆ ಅದು ಉಚಿತ ಅರ್ಥವನ್ನು ಅಭಿವ್ಯಕ್ತಿಸುತ್ತದೆಯೋ ಇಲ್ಲವೋ ಎನ್ನುವುದನ್ನು ಹೊಂದಿಕೊಂಡಿದೆ ಎಂಬ ಮಾತನ್ನು ಒತ್ತಿ ಹೇಳುತ್ತದೆ. ಆದರೆ ಕಲೆಯ ಈ ಅರ್ಥದ ಸ್ವರೂಪವೇನೆಂದು ವಿವರಿಸಹೊರಟಾಗ ಮಾತ್ರ ಕಲಾಕೃತಿಯ ಆರ್ಷೇಯ ಗುಣಗಳ ವಿವರಣೆ ಅಮೂರ್ತವೆನಿಸಿ ಬಿಡುತ್ತವೆ. ಆರ್ಷೇಯ ಕಲೆ ವಿಶಿಷ್ಟ ಅರ್ಥವನ್ನು ಪಡೆದಿದ್ದರೂ ಅದು ಕಾಲಕ್ರಮೇಣ ಪರಿಷ್ಕಾರಕ್ಕೆ ಪಕ್ಕಾದಾಗ ವಿಶಿಷ್ಟ ರೂಪ ತಳೆದು ಸುಂದರಕಲೆ ಆಗುತ್ತದೆ ಎನ್ನುತ್ತಾನೆ, ಗಯಟೆ. ಕಲೆಯನ್ನು ಆಸ್ವಾದಿಸಬೇಕಾದರೆ ಅದನ್ನು ಸುಂದರಗೊಳಿಸಿ ವಿಶಿಷ್ಟ ರೂಪಕ್ಕೆ ಇಳಿಸಿ ಅದನ್ನು ಸಾಂಪ್ರದಾಯಿಕಗೊಳಿಸಬೇಕು; ಆದರೆ ರಸಾಭಿಜ್ಞನಾದವ ವಿಶಿಷ್ಟರೂಪದಲ್ಲಿರುವ ಕಲೆಯ ನೆರವೂ ಇಲ್ಲದೆ ಸೌಂದರ್ಯವನ್ನು ಕಾಣಬಲ್ಲ ಎನ್ನುವ ಗಯಟೆಯ ಮಾತುಗಳಲ್ಲಿ ಪರಸ್ಪರ ವಿರೋಧ ಕಾಣಿಸುತ್ತದೆ.


ಗಯಟೆ ಹಾಗೂ ಅವನ ಗೆಳೆಯರು ಕೂಡಿ ನಡೆಸುತ್ತಿದ್ದ ಸೌಂದರ್ಯ ಜಿಜ್ಞಾಸೆಗಳ ಫಲಶ್ರುತಿಯನ್ನು ಅವನ ದಿ ಕಲೆಕ್ಟರ್ ಅಂಡ್ ಹಿಸ್ ಫ್ರೆಂಡ್ಸ್ ಎನ್ನುವ ಒಂದು ಸಂವಾದರೂಪಕದಲ್ಲಿ ಕಾಣಬಹುದು. ಸೌಂದರ್ಯ ಮೀಮಾಂಸೆಯ ಇತಿಹಾಸದಲ್ಲಿ ಇದು ಮಹತ್ತ್ವದ ಕೃತಿ. ಇದರಲ್ಲಿ ಶ್ರೇಷ್ಠ ಕಲೆಯ ವಿವಿಧ ಅಂಶಗಳು ಯಾವುವು ಎನ್ನುವ ವಿಶ್ಲೇಷಣೆ ಇದೆ. ಈ ಪ್ರಸ್ತಾಪ ಸೌಂದರ್ಯಶಾಸ್ತ್ರದ ಇತಿಹಾಸದಲ್ಲೇ ಹೊಸತು ಎನ್ನುತ್ತಾನೆ ಬೊಸಾಂಕೆ. ಗ್ರೀಕ್ ಕಲೆಯಲ್ಲೂ ಆರ್ಷೇಯ ಕಲೆಯ ಅರ್ಥಪೂರ್ಣ ಗುಣಗಳಿವೆ-ಎನ್ನುವ ಮಾತನ್ನು ಚರ್ಚಿಸುತ್ತ ಗ್ರೀಕರ ಭವ್ಯಶೈಲಿ ನಮ್ಮನ್ನು ಆದರ್ಶದ ಔನ್ನತ್ಯಕ್ಕೆ ಏರಿಸುತ್ತದೆ, ಆದರೆ ನಮಗೆ ಅಷ್ಟೇ ಸಾಲದು ಆರ್ಷೇಯ ಕಲೆಯ ವಿಶಿಷ್ಟತೆ, ಗ್ರೀಕರ ಔನ್ನತ್ಯ, ಎರಡೂ ಬೇಕು. ಈ ಉಭಯ ಸಂಕಟವನ್ನು ನಿವಾರಿಸಲು ನಮಗೆ ಸೌಂದರ್ಯದ ನೆರವೇ ಬೇಕು. ಅದು ಗ್ರೀಕರ ಕಲೆಯ ವಸ್ತುನಿಷ್ಠೆಗೆ ಜೀವಂತ ಉತ್ಸಾಹವನ್ನು ಸೇರಿಸಬಲ್ಲದು, ಆರ್ಷೇಯ ಕಲೆಯ ಒರಟುತನವನ್ನು ನಯಗೊಳಿಸ ಬಲ್ಲದು. ಇದರಿಂದಾಗಿ ಒಂದು ಸುಂದರ ಕಲಾಕೃತಿ ವಿಕಾಸದ ಹಲವು ಹಂತಗಳನ್ನು ಏರಿ ವಿಶಿಷ್ಟತೆಯನ್ನು ಪಡೆಯುತ್ತದೆ. ಆ ವಿಶಿಷ್ಟತೆಯನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯವಾಗುತ್ತದೆ.- ಗಯಟೆಯ ಈ ಮಾತುಗಳಲ್ಲಿ ಒಂದು ದ್ವಂದ್ವ ಗೋಚರಿಸುತ್ತದೆ. ಸೌಂದರ್ಯ ಸೂತ್ರವೆಂದರೆ ಅನಗತ್ಯವಾದುದನ್ನು ವರ್ಜಿಸುವುದು. ಅಗತ್ಯ ಅಂಶಗಳನ್ನು ಸಮಗ್ರೀಕರಣಗೊಳಿಸುವುದು ಎನ್ನುವುದಾದರೆ ಅದು ವಿಶಿಷ್ಟ ಗಟ್ಟಿಭದ್ರ ವೈಯಕ್ತಿಕ ಗುಣರೇಖೆಗಳನ್ನು ನುಣುಪುಗೊಳಿಸಿ, ನಿರ್ಬಲಗೊಳಿಸಿದಂತಾಗುವುದಲ್ಲವೇ? ಕಲೆಯ ಗಟ್ಟಿಭದ್ರ ಗುಣರೇಖೆಗಳಲ್ಲಿ ಸೌಂದರ್ಯವನ್ನು ಕಾಣುವುದು ರಸಾಭಿಜ್ಞನ ಪ್ರತಿಭೆಯನ್ನು ಅವಲಂಬಿಸಿರುತ್ತದೆಯಲ್ಲವೆ? ಪರಸ್ಪರ ವಿರೋಧವೆನಿಸುವ ಈ ಅಭಿಪ್ರಾಯಗಳನ್ನು ಸಮತೋಲನಗೊಳಿಸಲು ಗಯಟೆ ಪ್ರಯತ್ನಿಸುವುದಿಲ್ಲ.


ಶ್ರೇಷ್ಠ ಕಲೆಯನ್ನು ನಿರ್ಧರಿಸುವ ಕಲೆಗಾರರು ಕಲಾಭಿಜ್ಞರು ಮತ್ತು ಸೌಂದರ್ಯ ವಿಮರ್ಶಕರಲ್ಲಿ ಯಾವ ಯಾವ ಗುಣಗಳಿರಬೇಕು ಎಂದು ಗಯಟೆ ಈ ಚರ್ಚೆಯ ಕೊನೆಯಲ್ಲಿ ಪಟ್ಟಿ ಮಾಡಿದ್ದಾನೆ. ಸೌಂದರ್ಯದ ವಿವಿಧ ಅಂಶಗಳನ್ನು ಸವಿವರವಾಗಿ ಉಲ್ಲೇಖಿಸಿದ್ದಾನೆ. ಶ್ರೇಷ್ಠಕಲೆಯಲ್ಲಿ ಸಹಜತೆ (ಆರ್ಟ್-ಟ್ರುತ್), ಸೌಂದರ್ಯ, ನಯಗಾರಿಕೆ (ಒಪ್ಪ)- ಎಂಬ ಮೂರು ಅಂಶಗಳಿರುತ್ತವೆ. ಇವುಗಳಲ್ಲಿ ಒಂದೊಂದೂ ಪರಸ್ಪರ ವಿರೋಧ ಗುಣ ಅಥವಾ ಪರಸ್ಪರ ವಿರೋಧ ಪ್ರವೃತ್ತಿಗಳಿಂದ ಸಮಾವೇಶಗೊಂಡಿರುತ್ತದೆ. ಆ ಪರಸ್ಪರ ವಿರೋಧ ಗುಣ ಅಥವಾ ಪ್ರವೃತ್ತಿಗಳಲ್ಲಿ ಯಾವುದಾದರೂ ಒಂದು ಮಹತ್ತ್ವ (ಸೀರಿಯಸ್)ದ್ದಾಗಿದ್ದು ಇನ್ನೊಂದು ಲಘುವಾಗಿರುತ್ತದೆ (ಪ್ಲೇಫುಲ್). ಎರಡನ್ನೂ ಪ್ರತ್ಯೇಕವಾಗಿ ಪರಿಗಣಿಸಿದಾಗ ಅವು ಅಪ್ರಬುದ್ಧತೆ, ವಿಲಕ್ಷಣತೆ ಎನಿಸಿಕೊಳ್ಳುತ್ತವೆ. ಆದರೆ ಎರಡೂ ಸುಸಂಘಟಿತವಾದ ಶೈಲಿಯ ನಿರ್ಮಾಣವಾಗುತ್ತದೆ. ಇದನ್ನು ಹೀಗೆ ಸೂಚಿಸಬಹುದು.


ಬರಿ ಅನುಕರಣಾತ್ಮಕವಾದ್ದು + ಕಲ್ಪನಾಶಕ್ತಿ = ಕಲಾಸಹಜತೆ ಆರ್ಷೇಯ ಪ್ರಾತಿನಿಧಿಕ ಗುಣವುಳ್ಳದ್ದು + ಕೇವಲ ಅಲಂಕಾರಿಕವಾದ ವಕ್ರರೇಖಾರೂಪ ವಿನ್ಯಾಸ = ಸೌಂದರ್ಯ ಸೂಕ್ಷ್ಮ ನಿಷ್ಕೃಷ್ಟತೆ + ಅರ್ಥಗರ್ಭಿತ ರೇಖಾರೂಪಣೆ = ನಯಗಾರಿಕೆ.

ಇದಲ್ಲದೆ ಶ್ರೇಷ್ಠ ಕಲೆಯ ಆವಿಷ್ಕಾರವಾಗಬೇಕಾದರೆ ಕಲಾಸಹಜತೆ, ಸೌಂದರ್ಯ ಮತ್ತು ನಯಗಾರಿಕೆ- ಈ ಮೂರು ಗುಣಗಳ ಸಂಯೋಗವಿರಬೇಕು.


ಇಲ್ಲಿಯೂ ಗಯಟೆಯ ತತ್ತ್ವದಲ್ಲಿ ಪರಸ್ಪರ ವಿರೋಧಭಾವವಿದೆ. ಸೌಂದರ್ಯ (ಆ ಮಾತಿನ ಸಾಮಾನ್ಯ ಅರ್ಥದಲ್ಲಿ) ಲಲಿತಕಲೆಯ ವೈಶಿಷ್ಟ್ಯವನ್ನು ಹೆಚ್ಚಿಸುತ್ತದೆಂದು ಅವನು ಹೇಳಿದರೂ ವಸ್ತುವಿನ ತಿರುಳಿಲ್ಲದ ಸೌಂದರ್ಯ ಅಥವಾ ವಿಭಜಿಸಲು ಸಾಧ್ಯವಿಲ್ಲದ ಸೌಂದರ್ಯ ಸಾಧ್ಯವೇ ಇಲ್ಲವೆಂದಾಯಿತು. ಗಯಟೆ ಸೌಂದರ್ಯವೆನ್ನುವ ಮಾತಿಗೆ ಕೊಟ್ಟ ವಿವರಣೆಯಿಂದಾಗಿ ಅದು ಅಭಿವ್ಯಕ್ತಿಯನ್ನು ದುರ್ಬಲಗೊಳಿಸುವುದಿಲ್ಲ. ಏಕೆಂದರೆ ಅದರಲ್ಲಿ ಮೂಲಭೂತವಾದ, ಸಾಂಕೇತಿಕವಾದ ಅಭಿವ್ಯಂಜಕತೆ ಸೇರಿರುತ್ತದೆ ಎಂದು ಅರ್ಥವಾಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಗಯಟೆ 18ನೆಯ ಶತಮಾನ ದಿಂದೀಚೆಗೆ ಪ್ರಚಲಿತವಾದ ಫಾರ್ಮಲಿಸ್ಟಿಕ್ ಥಿಯೊರಿ ಎನ್ನುವ ಪಂಥಕ್ಕೆ ಜೀವತುಂಬಿದ. 1805ರಲ್ಲಿ ಅವನು ವಿಂಕಲ್ಮನ್ನನ್ನು ಕುರಿತು ಬರೆದ ಗ್ರಂಥದಲ್ಲಿ ಕಲೆ ಪರಸ್ಪರಾವಲಂಬಿ ಭಾಗಗಳುಳ್ಳ ಒಂದು ಸಮಷ್ಟಿಕ್ರಿಯೆ ಎಂಬುದನ್ನು ಒತ್ತಿ ಹೇಳಿದ್ದಾನೆ. ಈ ಎಲ್ಲ ವಿಚಾರಗಳನ್ನೂ ಗಮನಿಸುವಾಗ ಗಯಟೆ 18ನೆಯ ಶತಮಾನದ ಸೌಂದರ್ಯಶಾಸ್ತ್ರದ ಚಿಂತನೆಗಳಿಗೆ ಒಂದು ಮುಖ್ಯ ತಿರುವುಕೊಟ್ಟನೆಂಬುದು ಖಚಿತವಾಗುತ್ತದೆ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ

ಟೆಂಪ್ಲೇಟು:Zeno-Autor


ಉಲ್ಲೇಖಗಳು

ಬದಲಾಯಿಸಿ
  1. Karl Robert Mandelkow, Bodo Morawe: Goethes Briefe. 2. edition. Vol. 1: Briefe der Jahre 1764–1786. Christian Wegner, Hamburg 1968, p. 709
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: