ಗಟ್ಟಿನಾಣ್ಯ ಎಂದರೆ ಜಾಗತಿಕವಾಗಿ ವಿನಿಮಯ ಮಾಡಲಾದ ಯಾವುದೇ ಚಲಾವಣೆ (ಕರೆನ್ಸಿ). ಇದು ಮೌಲ್ಯದ ಒಂದು ವಿಶ್ವಸನೀಯ ಮತ್ತು ಸ್ಥಿರ ಸಂಗ್ರಹವಾಗಿ ಕಾರ್ಯನಿರ್ವಹಿಸುತ್ತದೆ.

ಒಂದು ದೇಶದಲ್ಲಿ ಶಾಸನಬದ್ಧವಾದ ಹಣವನ್ನು (ನಾಣ್ಯ, ನೋಟುಗಳು ಎರಡೂ ಸೇರಿ) ಸಾಮಾನ್ಯವಾಗಿ ನಾಣ್ಯವೆಂದು ಹೆಸರಿಸುವುದು ವಾಡಿಕೆ. ಚಲಾವಣೆಯಲ್ಲಿರುವ ಹಣವನ್ನು ಇಂಗ್ಲೀಷಿನಲ್ಲಿ ಕರೆನ್ಸಿ ಎನ್ನುವರು. ಒಂದು ದೇಶದ ಕರೆನ್ಸಿಯು ಎಷ್ಟು ಗಟ್ಟಿಯೆಂಬುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅದಕ್ಕಿರುವ ಬೇಡಿಕೆ, ಮಹತ್ವ, ನಂಬಿಕೆ, ವಿಶ್ವಾಸ, ದೇಶದ ದೃಢತೆ, ದೇಶದಲ್ಲಿನ ಕಡಿಮೆಯಿರುವ ಹಣದುಬ್ಬರ, ಹಣಕಾಸಿನ ಶಾಸನ, ನೀತಿ, ವಿಧಿ, ವಿಧಾನಗಳಲ್ಲಿನ ದೃಢತೆ ಮೊದಲಾದವುಗಳಿಂದ ಗೊತ್ತಾಗುತ್ತದೆ. ಉತ್ತಮ ಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಗಟ್ಟಿಕುಳ ಎನ್ನುವಂತೆ, ಒಂದು ದೇಶದ ಕರೆನ್ಸಿಯು ಹಲವಾರು ರೀತಿಗಳಿಂದ ದೃಢವಾಗಿದ್ದರೆ ಅದನ್ನು ಗಟ್ಟಿ ಕರೆನ್ಸಿ ಅಥವಾ ಗಟ್ಟಿನಾಣ್ಯವೆನ್ನುತ್ತಾರೆ. ಉದಾಹರಣೆಗೆ ಅಮೆರಿಕದ ಡಾಲರ್, ಬ್ರಿಟನ್ನಿನ ಪೌಂಡು, ಯುರೋಪಿನ ಯುರೋ, ಸ್ವಿಟ್ಜರ್ಲ್ಯಾಂಡ್ ಫ್ರಾಂಕ್, ಆಸ್ಟ್ರೇಲಿಯ ಡಾಲರ್ ಮೊದಲಾದವುಗಳು ಗಟ್ಟಿ ನಾಣ್ಯಗಳು. ಕೆಲವು ದೇಶಗಳಲ್ಲಿ ಗಟ್ಟಿ ನಾಣ್ಯಗಳನ್ನು ಮಾತ್ರ ವ್ಯವಹಾರದಲ್ಲಿ ಒಪ್ಪುತ್ತಾರೆ. ಏಷಿಯಾ, ಅರಬ್ ಮೊದಲಾದ ದೇಶಗಳಲ್ಲಿ ಅಮೆರಿಕದ ಡಾಲರ್ ಸರ್ವಮಾನ್ಯವಾಗಿ ಚಲಾವಣೆಯಲ್ಲಿರುವ ಗಟ್ಟಿನಾಣ್ಯವಾಗಿದೆ.

ಗಟ್ಟಿ ನಾಣ್ಯವಾಗಿ ಅಮೇರಿಕದ ಡಾಲರ್

ಬದಲಾಯಿಸಿ

ಹೀಗೆ ಒಂದು ದೇಶದ ನಾಣ್ಯಕ್ಕೆ (ಕರೆನ್ಸಿ) ಇತರ ದೇಶಗಳಿಂದ ಬರುವ ಬೇಡಿಕೆಯ ದೃಷ್ಟಿಯಿಂದ ಆ ನಾಣ್ಯದ ಸರಬರಾಯಿ ಸಾಕಷ್ಟು ಇಲ್ಲದಿದ್ದಾಗ ಆ ನಾಣ್ಯವನ್ನು ಗಟ್ಟಿ ನಾಣ್ಯ ಅಥವಾ ಗಟ್ಟಿ ಕರೆನ್ಸಿ (ಹಾರ್ಡ್ ಕರೆನ್ಸಿ) ಎಂದು ಕರೆಯಲಾಗುತ್ತದೆ. ಎರಡನೆಯ ಮಹಾಯುದ್ಧಾನಂತರದ ವರ್ಷಗಳಲ್ಲಿ ಮುಖ್ಯವಾಗಿ ಅಮೆರಿಕದ ಡಾಲರನ್ನು ಹೀಗೆಂದು ಪರಿಭಾವಿಸಲಾಗಿತ್ತು. ಎರಡನೆಯ ಮಹಾಯುದ್ಧದ ವಿನಾಶಕಾರಿ ಪರಿಣಾಮಗಳಿಂದಾಗಿ ಪಶ್ಚಿಮ ಯೂರೋಪಿನ ರಾಷ್ಟ್ರಗಳು ತಮ್ಮ ಸ್ವಂತ ಸರಕುಗಳನ್ನು ಅಧಿಕವಾಗಿ ಉತ್ಪಾದಿಸುವುದಾಗಲಿ ನಿರ್ಯಾತಿಸುವುದಾಗಲಿ ಸಾಧ್ಯವಾಗದಿದ್ದುದರಿಂದ ಅಮೆರಿಕದ ನಿರ್ಯಾತ ಸರಕುಗಳಿಗೆ ಅತೀವವಾದ ಬೇಡಿಕೆ ಪ್ರಾಪ್ತವಾಗಿ, ಅದನ್ನು ಕೊಳ್ಳಲು ಅಗತ್ಯವಾದ ಡಾಲರುಗಳ ಸಂಪಾದನೆ ಇಲ್ಲವಾಗಿ ಈ ಪರಿಸ್ಥಿತಿ ತೀವ್ರವಾಗಿತ್ತು. ಪುನರ‍್ರಚನೆ-ಅಭಿವೃದ್ಧಿಗಳಿಗೆ ಹಾತೊರೆಯುತ್ತಿದ್ದ ಅನೇಕ ರಾಷ್ಟ್ರಗಳಿಗೆ ಸಮಾನವಾಗಿದ್ದ ಒಂದು ಲಕ್ಷಣವೆಂದರೆ ಅವುಗಳ ಡಾಲರ್ ಹಸಿವು.

ಒಂದನೆಯ ಮಹಾಯುದ್ಧದ ಮೊದಲು

ಬದಲಾಯಿಸಿ

ಒಂದನೆಯ ಮಹಾಯುದ್ಧಕ್ಕೆ ಮೊದಲು ಅಂತರರಾಷ್ಟ್ರೀಯ ಹಣಕಾಸಿನ ವ್ಯವಹಾರಗಳು ಮುಖ್ಯವಾಗಿ ಪೌಂಡ್ ಸ್ಟರ್ಲಿಂಗ್ ಮೂಲಕ ನಡೆಯುತ್ತಿದ್ದವು. ವಿವಿಧ ದೇಶಗಳ ನಾಣ್ಯಗಳ ವಿನಿಮಯ ದರಗಳು ಚಿನ್ನದ ಆಧಾರದ ಮೇಲೆ ನಿರ್ಧರಿಸಲ್ಪಡುತ್ತಿದ್ದವು. ಆದರೆ ಒಂದನೆಯ ಮಹಾಯುದ್ಧವಾದ ಮೇಲೆ ಸಂಭವಿಸಿದ ಆರ್ಥಿಕ ಘಟನೆಗಳ ಪರಿಣಾಮವಾಗಿ ಹಳೆಯ ಅಂತರರಾಷ್ಟ್ರೀಯ ಹಣಕಾಸಿನ ವ್ಯವಸ್ಥೆ ಸಡಿಲವಾಯಿತು, ಮುರಿದು ಬಿತ್ತು. ಸುವರ್ಣ ಪ್ರಮಿತಿ ಪರಿತ್ಯಕ್ತವಾಯಿತು. ಅನೇಕ ದೇಶಗಳಲ್ಲಿ ನಿಯಂತ್ರಿತ ನಾಣ್ಯಪದ್ಧತಿ ಜಾರಿಗೆ ಬಂತು.

ಸುವರ್ಣ ಪ್ರಮಿತಿ ಕುಸಿದು ಬಿದ್ದ ಮೇಲೆ ಅಮೆರಿಕದ ಡಾಲರ್ ನಾಣ್ಯ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿ ಹೆಚ್ಚಿನ ಮನ್ನಣೆ ಪಡೆಯಿತು. ಅನೇಕ ದೇಶಗಳು ಡಾಲರಿಗೆ ಪ್ರತಿಯಾಗಿ ತಮ್ಮ ವಸ್ತುಗಳನ್ನು ಮಾರಲು ಒಪ್ಪಿಕೊಂಡವು. ಏಕೆಂದರೆ ಡಾಲರನ್ನು ಚಿನ್ನಕ್ಕೆ ಯಾವಾಗ ಬೇಕಾದರೂ ಅಧಿಕೃತ ಬೆಲೆಯಲ್ಲಿ ಪರಿವರ್ತಿಸಬಹುದಾಗಿತ್ತು. ಇದೇ ರೀತಿ ಉಳಿದ ದೇಶಗಳ ನಾಣ್ಯಗಳನ್ನು ಚಿನ್ನಕ್ಕೆ ಪರಿವರ್ತಿಸಲಾಗುತ್ತಿರಲಿಲ್ಲ. ಹೀಗೆ ಡಾಲರ್ ಸ್ವಲ್ಪ ಹೆಚ್ಚು ಕಡಿಮೆ ಅಂತರರಾಷ್ಟ್ರೀಯ ನಾಣ್ಯದ ಸ್ಥಾನಮಾನ ಪಡೆಯಿತು. ಆದರೂ ಎರಡನೆಯ ಮಹಾಯುದ್ಧದವರೆಗೆ ಸ್ಟರ್ಲಿಂಗ್ ನಾಣ್ಯ ಮಿತಪ್ರದೇಶದಲ್ಲಿ ಮಾನ್ಯತೆ ಪಡೆದಿತ್ತು. ಬ್ರಿಟಿಷ್ ಸಾಮ್ರಾಜ್ಯದ ದೇಶಗಳು, ಈಜಿಪ್ಟ್, ಇರಾಕ್, ಯೂರೋಪಿನ ಕೆಲವು ದೇಶಗಳು ತಮ್ಮ ಅಂತರರಾಷ್ಟ್ರೀಯ ಹಣಕಾಸಿನ ವಹಿವಾಟನ್ನು ಸ್ಟರ್ಲಿಂಗ್ ಮೂಲಕ ನಡೆಸುತ್ತಿದ್ದವು. ಈ ರಾಷ್ಟ್ರಗಳದು ಸ್ಟರ್ಲಿಂಗ್ ವಲಯ.[][]

ಪೌಂಡ್ ಸ್ಟರ್ಲಿಂಗ್ ಬಳಕೆಯ ಮೇಲೆ ಹತೋಟಿ

ಬದಲಾಯಿಸಿ

ಎರಡನೆಯ ಮಹಾಯುದ್ಧ ಆರಂಭವಾದ ಕೂಡಲೇ ಬ್ರಿಟನ್ನು ಸ್ಟರ್ಲಿಂಗಿನ ಬಳಕೆಯ ಮೇಲೆ ಹತೋಟಿ ವಿಧಿಸಿತು. ಯುದ್ಧದ ಅವಧಿಯಲ್ಲಿ ವಸಾಹತುಗಳಿಂದಲೂ, ಅಧಿರಾಜ್ಯಗಳಿಂದಲೂ ಯುದ್ಧಕ್ಕೆ ಬೇಕಾದ ಸರಕುಸೇವೆಗಳನ್ನು ಕೊಂಡು ಪ್ರತಿಯಾಗಿ ಅವಕ್ಕೆ ತನ್ನ ನಾಣ್ಯವಾದ ಸ್ಟರ್ಲಿಂಗಿನಲ್ಲಿ ಪಾವತಿ ಮಾಡಿತು. ಆದರೆ ಆ ಸ್ಟರ್ಲಿಂಗನ್ನು ಆ ದೇಶಗಳು ಬಳಸಿ ತಮಗೆ ಬೇಕಾದ ಸರಕು ಸೇವೆಗಳನ್ನು ಕೊಳ್ಳುವಂತಿರಲಿಲ್ಲ. ಅವುಗಳ ಬಳಕೆಯ ಮೇಲೆ ನಿಯಂತ್ರಣ ಹೇರಲಾಗಿತ್ತು. ಮಹಾಯುದ್ಧ ವಿಸ್ತಾರಗೊಂಡಂತೆಲ್ಲಾ ಬ್ರಿಟನ್ನಿಗೆ ಯುದ್ಧಸಾಮಗ್ರಿಗಳು ಒದಗುವುದು ಕಷ್ಟವಾಯಿತು. ಅದಕ್ಕೆ ಅವಶ್ಯಕವಾದ ಯುದ್ಧ ಸಾಮಗ್ರಿಗಳು ಮತ್ತು ಇತರ ನಿತ್ಯೋಪಯೋಗಿ ವಸ್ತುಗಳನ್ನು ಒದಗಿಸುವ ಸಾಮರ್ಥ್ಯವನ್ನು ಪಡೆದಿದ್ದ ದೇಶ ಅಮೆರಿಕ. ಆದರೆ ಅಮೆರಿಕದಿಂದ ತನಗೆ ಬೇಕಾದ ಎಲ್ಲ ಸರಕುಗಳನ್ನೂ ಪಡೆಯಬೇಕಾದರೆ ಡಾಲರ್ ರೂಪದಲ್ಲಿ ಹಣ ಪಾವತಿ ಮಾಡಬೇಕಾಗಿತ್ತು. ಡಾಲರ್ ರೂಪದಲ್ಲಿ ಪಾವತಿ ಮಾಡಲು ಬ್ರಿಟನ್ನಿಗೆ ಶಕ್ತಿ ಇಲ್ಲಿದಿದ್ದುದರಿಂದ ಡಾಲರನ್ನು ಶೇಖರಿಸುವುದಕ್ಕಾಗಿ ಲಂಡನ್ನಿನಲ್ಲಿ ಪ್ರತ್ಯೇಕ ಏರ್ಪಾಡು ಮಾಡಿತು. ಸ್ಟರ್ಲಿಂಗ್ ವಲಯದ ಎಲ್ಲ ರಾಷ್ಟ್ರಗಳೂ ಡಾಲರ್ ವಲಯಕ್ಕೆ ಮಾಡಿದ ಮಾರಾಟಕ್ಕೆ ಪ್ರತಿಯಾಗಿ ಸಂಪಾದಿಸಿದ ಡಾಲರುಗಳನ್ನೆಲ್ಲ ಈ ಸಾಮ್ರಾಜ್ಯ ಡಾಲರ್ ಸಂಕೋಷಕ್ಕೆ (ಎಂಪೈರ್ ಡಾಲರ್ ಪೂಲ್) ಒಪ್ಪಿಸಬೇಕಾಗಿತ್ತು. ಇಡೀ ಸಂಕೋಷ ರಾಷ್ಟ್ರಗಳ ಪೈಕಿ ಯಾವುದಕ್ಕೆ ಹೆಚ್ಚಿನ ಅವಶ್ಯಕತೆಯಿದೆಯೋ ಅದಕ್ಕೆ ಅಗತ್ಯಾನುಗುಣವಾಗಿ ಡಾಲರನ್ನು ವೆಚ್ಚಮಾಡಲು ಅವಕಾಶ ನೀಡಲಾಗುತ್ತಿತ್ತು. ತಮಗಿಷ್ಟ ಬಂದಂತೆ ಡಾಲರನ್ನು ಪಡೆದು ಅದನ್ನು ಬಳಸುವುದು ಕಷ್ಟವಾಗಿ ಕಂಡು ಬಂದುದರಿಂದ ಬ್ರಿಟಿಷ್ ಸಾಮ್ರಾಜ್ಯದ ದೇಶಗಳು ಮತ್ತು ಯೂರೋಪಿನ ಕೆಲವು ದೇಶಗಳು ಡಾಲರನ್ನು ಗಟ್ಟಿ ನಾಣ್ಯ ಎಂದು ಕರೆದವು. ಇತರ ಅನೇಕ ದೇಶಗಳ ನಾಣ್ಯಗಳು ಹೇರಳವಾಗಿ ದೊರೆಯುತ್ತಿದ್ದುದರಿಂದ ಮತ್ತು ಅವನ್ನು ಸುಲಭವಾಗಿ ಪಡೆಯಬಹುದಾಗಿದ್ದುದರಿಂದ ಅವು ಮೃದು ನಾಣ್ಯಗಳೆನಿಸಿಕೊಂಡಿದ್ದುವು (ಸಾಫ್ಟ್ ಕರೆನ್ಸೀಸ್).

ಎರಡನೆಯ ಮಹಾಯುದ್ಧವಾದ ಮೇಲೂ ಈ ಪರಿಸ್ಥಿತಿ ಮುಂದುವರಿಯಿತು. ಅನೇಕ ಐರೋಪ್ಯ ರಾಷ್ಟ್ರಗಳ ಆರ್ಥಿಕತೆ ಯುದ್ಧದಿಂದಾಗಿ ಜರ್ಝರಿತವಾಗಿತ್ತು. ಅವುಗಳ ಆರ್ಥಿಕ ಪುನರ‍್ರಚನೆಗೆ ಬೃಹದ್ಗಾತ್ರದಲ್ಲಿ ಸರಕುಗಳನ್ನು ಆಮದು ಮಾಡಿಕೊಳ್ಳಬೇಕಾಗಿತ್ತು. ಯುದ್ಧ ಮುಗಿದ ಮೇಲೆ ಕೆಲವು ವರ್ಷಗಳ ತನಕ ಯೂರೋಪಿನ ದೇಶಗಳಿಗೆ ಬೇಕಾದ ಸರಕುಗಳನ್ನು ಸರಬರಾಯಿ ಮಾಡುವ ಶಕ್ತಿ ಇದ್ದದ್ದು ಅಮೆರಿಕಕ್ಕೆ ಮಾತ್ರ. ಅಮೆರಿಕದಿಂದ ಪಡೆದ ವಸ್ತುಗಳಿಗೆ ಪ್ರತಿಯಾಗಿ ಡಾಲರ್ ರೂಪದಲ್ಲಿ ಹಣ ಪಾವತಿ ಮಾಡುವುದು ಸಾಧ್ಯವಿಲ್ಲವಾಗಿದ್ದ ಪಶ್ಚಿಮ ಐರೋಪ್ಯ ದೇಶಗಳು ಅಮೆರಿಕದ ನೆರವನ್ನು ಕೋರಿದುವು. ಮಾರ್ಷಲ್ ಯೋಜನೆಯನ್ನು ಅಮೆರಿಕ ಜಾರಿಗೆ ತಂದದ್ದು ಇದಕ್ಕಾಗಿ. ಈ ಯೋಜನೆಯ ಅಡಿಯಲ್ಲಿ ಯೂರೋಪಿನ ರಾಷ್ಟ್ರಗಳಿಗೆ ಅದು ಆರ್ಥಿಕ ನೆರವು ನೀಡಿತು. ಇದರಿಂದ ಆ ಐರೋಪ್ಯ ದೇಶಗಳಿಗೆ ಡಾಲರ್ ಸಂಗ್ರಹಿಸಿಕೊಳ್ಳುವ ತೊಂದರೆ ತಪ್ಪಿ, ತಮಗೆ ಬೇಕಾದ ವಸ್ತುಗಳನ್ನು ಪಡೆಯುವ ಅನುಕೂಲ ದೊರೆಯಿತು. ಡಾಲರ್‌ಗಿದ್ದ ಈ ವಿಶೇಷ ಬೇಡಿಕೆಯಿಂದಾಗಿ ಅದು ಗಟ್ಟಿ ನಾಣ್ಯ ಎನಿಸಿಕೊಂಡಿತ್ತು.

ಅಮೆರಿಕದ ಡಾಲರ್ ನಾಣ್ಯವನ್ನು ಚಿನ್ನಕ್ಕಾಗಲಿ, ಪ್ರಪಂಚದ ಯಾವ ದೇಶದ ನಾಣ್ಯಕ್ಕೇ ಆಗಲಿ ಪರಿವರ್ತಿಸಿಕೊಳ್ಳಬಹುದಾಗಿತ್ತು. ಆದ್ದರಿಂದ ಅಮೆರಿಕದ ಡಾಲರನ್ನು ಪಡೆದಿದ್ದರೆ ಪ್ರಪಂಚದ ಯಾವುದೇ ಭಾಗದಲ್ಲಾದರೂ ವ್ಯವಹಾರ ನಡೆಸಬಹುದೆಂಬುದು ಆಗ ಎಲ್ಲ ದೇಶಗಳಿಗೂ ಇದ್ದ ದೃಢ ನಂಬಿಕೆ.

೧೯೭೦ರ ನಂತರ

ಬದಲಾಯಿಸಿ

ಡಾಲರಿನ ಬಗ್ಗೆ ಇದ್ದ ಈ ಭಾವನೆ 1970ರ ಅನಂತರ ಬಹಳಮಟ್ಟಿಗೆ ಕುಗ್ಗಿತು. ವಿಯೆಟ್‌ನಾಂ ಯುದ್ಧ, ಶಸ್ತ್ರಾಸ್ತ್ರ ನೆರವು ಮುಂತಾದ ಅಗಾಧ ವೆಚ್ಚಗಳಿಂದಾಗಿ ಪಾವತಿ ಶಿಲ್ಕು ಅಮೆರಿಕಕ್ಕೆ ಪ್ರತಿಕೂಲವಾಯಿತು. ಡಾಲರನ್ನು ಹಿಂದಿನ ದರದಲ್ಲಿ ಚಿನ್ನಕ್ಕೆ ಪರಿವರ್ತಿಸುವ ಸೌಲಭ್ಯವನ್ನು ತೆಗೆದುಹಾಕಲಾಯಿತು. ಡಾಲರ್ ಸ್ವಲ್ಪ ಮಟ್ಟಿಗೆ ಅಪಮೌಲ್ಯಕ್ಕೂ ಒಳಗಾಗಿದೆ. ಅಮೆರಿಕದಿಂದ ಹೊರಕ್ಕೆ ಡಾಲರ್ ಹಿಂದಿನಂತೆ ಸ್ವೇಚ್ಛೆಯಾಗಿ ಪ್ರವಹಿಸುವಂತಿರಲಿಲ್ಲ. ಆರ್ಥಿಕ ನೆರವು ತಗ್ಗಿತು. ಆದ್ದರಿಂದ ಈಗ ಅಮೆರಿಕನ್ ಡಾಲರು ಗಟ್ಟಿ ಎನ್ನಲು ಅದಕ್ಕೆ ಅಂತರರಾಷ್ಟ್ರೀಯ ವ್ಯವಹಾರಗಳಲ್ಲಿರುವ ಸ್ಥಾನಮಾನಗಳು ಮುಖ್ಯ ಕಾರಣ. ಏನೇ ಆದರೂ ಸಧ್ಯದಲ್ಲಿ ಅಮೆರಿಕದ ಡಾಲರ್‌ಗೆ ಇನ್ನೂ ಜಗತ್ತಿನ ಮಾರುಕಟ್ಟೆಯಲ್ಲಿ ಮಹತ್ವದ ಸ್ಥಾನಮಾನವಿದ್ದೇ ಇದೆ. ಭಾರತದಲ್ಲಂತೂ ಅಮೆರಿಕದ ಡಾಲರ್ ಗಟ್ಟಿ ನಾಣ್ಯವಾಗಿದೆ.

ಅಲ್ಲದೆ ಒಂದು ದೇಶದ ನಾಣ್ಯವು ಗಟ್ಟಿಯೋ ಅಥವಾ ಮೃದು/ಸುಲಭ ನಾಣ್ಯವೋ ಎಂದು ಇದಮಿತ್ಥಂ ಎಂದು ಹೇಳುವಂತಿಲ್ಲ. ಇಂದು ಮೃದು ಅಥವಾ ಸುಲಭ ನಾಣ್ಯವಾಗಿದ್ದುದು ಪರಿಸ್ಥಿತಿಯ ಅಥವಾ ಹಲವಾರು ಆರ್ಥಿಕ, ರಾಜಕೀಯ ಕಾರಣಗಳಿಂದ ಗಟ್ಟಿ ನಾಣ್ಯವಾಗಬಹುದು. ಅದೇ ರೀತಿ ಇಂದು ಗಟ್ಟಿ ನಾಣ್ಯವಾಗಿದ್ದುದು ಆರ್ಥಿಕ ಕುಸಿತವೋ, ರಾಜಕೀಯ ಅಸ್ಥಿರತೆಯೋ, ಜಗತ್ತಿನ ಮಾರುಕಟ್ಟೆಯಲ್ಲಿನ ಅದರ ವಿಫಲತೆಯ ಕಾರಣದಿಂದಲೋ ನಾಳೆ ಸುಲಭ ನಾಣ್ಯವಾಗಬಹುದು. ಉದಾಹರಣೆಗೆ ಸಂಯುಕ್ತ ರಶಿಯಾ ಸಂಸ್ಥಾನವು ಛಿದ್ರಗೊಂಡು ಅದರ ನಾಣ್ಯವು ಇಂದು ಗಟ್ಟಿನಾಣ್ಯ ಸ್ಥಾನದಿಂದ ಇಳಿದು ಹೋಗಿರುವುದು ಎಲ್ಲರಿಗೂ ಹೊತ್ತು. ಜಪಾನಿನ ಯೆನ್ ಹಿಂದೆ ಗಟ್ಟಿ ನಾಣ್ಯವಾಗಿತ್ತು. ಆದರೆ, ೨೦೨೨ರಿಂದ ಆ ನಾಣ್ಯದ ಮೌಲ್ಯದಲ್ಲಿನ ತೀವ್ರವಾದ ಇಳಿತದ ಕಾರಣ ಇದನ್ನು ಈಗ ತ್ಯಾಜ್ಯ ನಾಣ್ಯ (ಜಂಕ ಕರೆನ್ಸಿ) ಎಂದು ಪರಿಗಣಿಸಲಾಗಿದೆ.[][][][] ಈ ಕಾರಣಕ್ಕಾಗಿ, ಅನೇಕ ಕರೆನ್ಸಿ ವಿನಿಮಯ ಕಚೇರಿಗಳು ಜಪಾನೀಸ್ ಯೆನ್ ಅನ್ನು ನಿರ್ವಹಿಸುವುದಿಲ್ಲ.[] ಇದಲ್ಲದೆ, ಜಪಾನೀಸ್ ಕಂಪನಿಗಳು ಸಹ ಜಪಾನೀಸ್ ಯೆನ್‌ನಲ್ಲಿ ವಹಿವಾಟುಗಳನ್ನು ಹೆಚ್ಚಾಗಿ ನಿಲ್ಲಿಸುತ್ತಿವೆ.[] ಮೃದು ಅಥವಾ ಸುಲಭ ಕರೆನ್ಸಿ (ನಾಣ್ಯ) ಎಂದರೆ ಒಂದು ದೇಶದ ನಾಣ್ಯವು ಜಗತ್ತಿನ ಮಾರುಕಟ್ಟೆಯಲ್ಲಿ ಮಾನ್ಯವಾಗದ ಆದರೆ ಸುಲಭವಾಗಿ ದೊರಕುವಂತಹ ನಾಣ್ಯ.

ಜಗತ್ತಿನ ಮಾರುಕಟ್ಟೆಯಲ್ಲಿ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ ಮೊದಲಾದ ದೇಶಗಳ ನಾಣ್ಯವು ಮೃದು/ಸುಲಭ ಕರೆನ್ಸಿಗಳಾಗಿವೆ.

ಉಲ್ಲೇಖಗಳು

ಬದಲಾಯಿಸಿ
  1. Haraszti, György (1981). Questions of International Law. Vol. 2. Brill. p. 114. ISBN 90-286-0830-3. it was not until 1947, under the aegis of the British Exchange Control Act, that the area acquired some degree of legal formality. In that Act the members of the sterling area are referred to as the "scheduled territories" [...]
  2. Schenk, Catherine (2010). The Decline of Sterling. Cambridge Univ. Press. p. 22. ISBN 978-1-139-48725-2. The [Exchange Control Act] identified members of the sterling area as 'scheduled territories'.
  3. "Yen's decline will inevitably affect confidence in Japan's economy". Nikkei Asia (in ಬ್ರಿಟಿಷ್ ಇಂಗ್ಲಿಷ್). Retrieved 2024-05-29.
  4. Cawley, Nick (2024-04-17). "Japanese Yen Forecast: USD/JPY and GBP/JPY Technical Analysis and Potential Set-Ups". DailyFX (in ಇಂಗ್ಲಿಷ್). Retrieved 2024-05-29.
  5. "日本円が「ジャンク通貨」に? ロシアや新興国通貨よりも価値下落:朝日新聞デジタル" [Will the Japanese yen become a "junk currency"? Decrease in value compared to Russian and emerging market currencies]. 朝日新聞デジタル (in ಜಾಪನೀಸ್). 2022-09-02. Retrieved 2024-05-29.
  6. "「円弱」時代の処方箋 国内生産・インバウンド・外貨投資に活路 編集委員 小栗太". 日本経済新聞 (in ಜಾಪನೀಸ್). 2024-04-24. Retrieved 2024-05-29.
  7. "円安で日本円は"ジャンク通貨"になった 海外両替所に日本円の表示がないことも". マネーポストWeb (Moneypost). Shogakukan. Retrieved 2024-09-20. {{cite web}}: External link in |publisher= (help)
  8. "三井海洋開発など、決算書、円表記やめます 拠点も資金も日本に戻らず 円の警告・国富を考える(3)". Nikkei. Retrieved 2024-09-20. {{cite web}}: External link in |website= (help)
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: