ಖೊಟ್ಟಿಗ-967ರಿಂದ 972ರವರೆಗೆ ಆಳಿದ ಒಬ್ಬ ರಾಷ್ಟ್ರಕೂಟ ಚಕ್ರವರ್ತಿ, 3ನೆಯ ಕೃಷ್ಣನ ತಮ್ಮ. 3ನೆಯ ಕೃಷ್ಣನ ಕಾಲಕ್ಕೆ ರಾಷ್ಟ್ರಕೂಟ ಸಾಮ್ರಾಜ್ಯ ಅತ್ಯಂತ ಬಲಯುತವೂ ವಿಸ್ತಾರವೂ ಆಗಿತ್ತು. ಕೃಷ್ಣ ಮರಣ ಹೊಂದಿದಾಗ ಅವನ ಮೊಮ್ಮಗ 4ನೆಯ ಇಂದ್ರ ಬಹುಶಃ ಇನ್ನೂ ಚಿಕ್ಕವನಾಗಿದ್ದುದರಿಂದ ಸಾಮ್ರಾಜ್ಯದ ಆಡಳಿತವನ್ನು ಖೊಟ್ಟಿಗ ವಹಿಸಿಕೊಂಡ; ಸು.967-68ರ ಮಧ್ಯದಲ್ಲಿ ಪಟ್ಟಾಭಿಷಿಕ್ತನಾದ. ಇವನಿಗೆ ರಟ್ಟಕಂದರ್ಪ, ನಿತ್ಯವರ್ಷ, ಯಶಕೆನಲ್ಲಾತ ಮತ್ತು ಚಲದಂಕಕಾರ ಎಂಬ ಬಿರುದುಗಳಿದ್ದುವು. ಇವನ ಕಾಲದಲ್ಲಿ ರಾಷ್ಟ್ರಕೂಟರ ಶಕ್ತಿ ಕ್ಷೀಣವಾಯಿತು. ರಾಷ್ಟ್ರಕೂಟ ಸಾಮ್ರಾಜ್ಯದ ಮೇಲೆ ಉತ್ತರದಲ್ಲಿ ಪರಮಾರರ ಸಿಯ್ಯಕ ಹರ್ಷನಿಂದ ಮೊದಲ ಪೆಟ್ಟು ಬಿತ್ತು. ಖೊಟ್ಟಿಗನ ರಾಜಧಾನಿ ಮಾನ್ಯಖೇಟ ನಾಶವಾಯಿತು. ಈ ವಿಷಯವನ್ನು ಧನಪಾಲನ ಪಾಯಿಲಚ್ಛೀ ಗ್ರಂಥದಲ್ಲಿ ತಿಳಿಸಲಾಗಿದೆ: ಧನಪಾಲ ಈ ಗ್ರಂಥವನ್ನು ವಿಕ್ರಮ ಸಂವತ್ಸರ 1029ರಲ್ಲಿ (972-73) ಮುಗಿಸಿದನೆಂದು ತಿಳಿಸಿರುವುದರಿಂದ, ಸು. 971-72ರ ಮಧ್ಯದಲ್ಲಿ ಮಾನ್ಯಖೇಟ ನಾಶವಾಗಿರಬೇಕೆಂದು ಊಹಿಸಲಾಗಿದೆ. ಈ ಯುದ್ಧದಲ್ಲಿ ಖೊಟ್ಟಿಗ ಮರಣ ಹೊಂದಿರಬಹುದು. ಏಕೆಂದರೆ ಮುಂದೆ ಸ್ವಲ್ಪ ದಿವಸಗಳಲ್ಲಿಯೇ ಇವನ ಇನ್ನೊಬ್ಬ ತಮ್ಮನಾದ ನಿರುಪಮನ ಪುತ್ರ ಕರ್ಕ ರಾಜನಾದ.

ಖೊಟ್ಟಿಗನ ಮಾಂಡಲಿಕರಾಗಿ ಬಹು ಪ್ರಸಿದ್ಧಿಯನ್ನು ಪಡೆದವರೆಂದರೆ, ಬನವಾಸಿಯನ್ನು ಆಳುತ್ತಿದ್ದ ಶಂಕರಗಂಡ ಮತ್ತು ಗಂಗವಾಡಿಯನ್ನು ಆಳುತ್ತಿದ್ದ ಮಾರಸಿಂಹ. ಇವನ ಕಾಲದಲ್ಲಿ ಅವನತಿಯ ದಾರಿ ಹಿಡಿದ ರಾಷ್ಟ್ರಕೂಟರ ಸಾಮ್ರಾಜ್ಯ ಅವನ ಮರಣಾನಂತರ ಒಂದು ವರ್ಷದಲ್ಲೇ ಸಂಪೂರ್ಣ ನಾಶವಾಯಿತು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಖೊಟ್ಟಿಗ&oldid=1152109" ಇಂದ ಪಡೆಯಲ್ಪಟ್ಟಿದೆ