ಖುದಾ-ಈ-ಖಿದ್ಮತ್‍ಗಾರ್
ಖುದಾ-ಈ-ಖಿದ್ಮತ್‍ಗಾರ್ ಎನ್ನುವುದು ಅವಿಭಾಜ್ಯ ಭಾರತದ ವಾಯುವ್ಯ ಸರಹದ್ ಪ್ರಾಂತ್ಯದ ಪಠಾಣರ ಒಂದು ಸ್ವಯಂಸೇವಕ ಸಂಘಟನೆ.[೧] ಭಾರತದ ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಸಿದ್ಧವಾಗಿದ್ದ ಖಾನ್ ಅಬ್ದುಲ್ ಗಫಾರ್ ಖಾನ್ (ಸರಹದ್ ಗಾಂಧಿ)[೨] ಮತ್ತು ಖಾನ್ ಸಾಹೇಬ್ ಈ ಸಂಘಟನೆಯ ಜನಕರು. ಖುದಾ-ಈ-ಖಿದ್ಮತ್‌ಗಾರ್ ಎಂದರೆ ದೇವರ ಸೇವಕ. ಪಠಾಣರಲ್ಲಿ ಹಿಂದಿನಿಂದ ನಡೆದುಬಂದಿದ್ದ ಕುಡಿತ, ಚೌರ್ಯ, ಮದುವೆಯಲ್ಲಿ ಅನಾವಶ್ಯಕ ಖರ್ಚು ಮುಂತಾದವುಗಳಿಂದ ಅವರನ್ನು ಪಾರುಮಾಡಿ ಸಮಾಜ ಸುಧಾರಣೆ ಮಾಡುವುದೇ ಈ ಸಂಘಟನೆಯ ಧ್ಯೇಯವಾಗಿತ್ತು. ಈಶ್ವರನಿಷ್ಠೆ, ಅಹಿಂಸೆ, ಸೇವೆ, ನಿರ್ಭಯತೆ ಮತ್ತು ಶುದ್ಧಜೀವನ ಇವೇ ಸಂಸ್ಥೆಯ ತತ್ತ್ವಗಳು. ಸೈನಿಕ ಕವಾಯತನ್ನು ಕಲಿಯುತ್ತಿದ್ದರೂ, ಗಾಂಧೀಪ್ರಣೀತ ಅಹಿಂಸೆಯನ್ನು ಮಾನ್ಯಮಾಡಿದ್ದರಿಂದ, ಸ್ವಯಂಸೇವಕರು ತಮ್ಮ ಕೈಯಲ್ಲಿ ಒಂದು ಚಿಕ್ಕ ಕೋಲನ್ನು ಕೂಡ ಹಿಡಿಯುತ್ತಿರಲಿಲ್ಲ. ಸರಹದ್ ಪ್ರಾಂತ್ಯದಲ್ಲಿದ್ದರೂ ಅಖಿಲ ಭಾರತ ಕಾಂಗ್ರೆಸ್ ಧೋರಣೆಯನ್ನನುಸರಿಸಿ ಈ ಸಂಘಟನೆ ಕೆಲಸ ನಡೆಸುತ್ತಿತ್ತು. ಈ ಸಂಘಟನೆಯ ಅಧಿಕೃತ ಧ್ವಜದಲ್ಲಿ ಕೆಂಪು ಕಪ್ಪು ಪಟ್ಟಿಗಳಿದ್ದುವು. ಕಾರ್ಯಕರ್ತರು ಕೆಂಪುಬಟ್ಟೆಯನ್ನು ಧರಿಸುತ್ತಿದ್ದರು. ಈ ಕಾರಣದಿಂದ ರಷ್ಯದ ಬೋಲ್ಷೆವಿಕ್ ಚಳವಳಿಗೂ ಖುದಾ-ಈ-ಖಿದ್ಮತ್‌ಗಾರ್ ಸಂಘಟನೆಗೂ ಬ್ರಿಟಿಷ್ ಸರ್ಕಾರ ಸಂಬಂಧ ಕಲ್ಪಿಸಿತು; ಸಂಘಟನೆಯನ್ನು ನ್ಯಾಯಬಾಹಿರವೆಂದು ಸಾರಿ, ಖಾನ್ ಸೋದರರನ್ನೂ ಇತರ ನಾಯಕರನ್ನೂ ಕೈದು ಮಾಡಿತು. ಈ ಆರೋಪಗಳಿಗೆ ಉತ್ತರ ಕೊಡಲೂ ಕಾಂಗ್ರೆಸ್ ನೇಮಿತ ಸಂಧಾನ ಸಮಿತಿ ಆ ಭಾಗಕ್ಕೆ ಹೋಗಿ ವರದಿ ಮಾಡಲೂ ಬ್ರಿಟಿಷ್ ಸರ್ಕಾರ ಅವಕಾಶ ಕೊಡಲಿಲ್ಲ; ಇಷ್ಟಲ್ಲದೆ ಸಮಿತಿಯ ನಿಜಸಂಗತಿಯ ವರದಿಯನ್ನೂ, ಅದು ಸಂಗ್ರಹಿಸಿದ್ದ ಹೇಳಿಕೆ ಪತ್ರವನ್ನೂ ಜಪ್ತು ಮಾಡಿತು.
ಭಾರತದ ಸ್ವಾತಂತ್ರ್ಯದ ನಂತರ
ಬದಲಾಯಿಸಿಭಾರತದ ವಿಭಜನೆ ನಿಶ್ಚಿತವಾದ ಅನಂತರ ಆ ಸಮಯದಲ್ಲಿದ್ದ ಕಾಂಗ್ರೆಸ್ ಮುಖಂಡರಿಗೆ ಒಂದು ದೊಡ್ಡ ಪೇಚು ಒದಗಿತು. ಜೂನ್ 1947ರಲ್ಲಿ ಖಾನ್ ಸೋದರರ ಕಾಂಗ್ರೆಸ್ಸು ಸರಹದ್ ಪ್ರಾಂತ್ಯವನ್ನು ಆಳುತ್ತಿತ್ತು. ಪಾಕಿಸ್ತಾನದ ರಚನೆಯನ್ನು ಪ್ರಬಲವಾಗಿ ವಿರೋಧಿಸುತ್ತಿದ್ದ ಖಾನ್ ಸೋದರರ[೩][೪][೫] ಗಡಿನಾಡು ಪ್ರಾಂತ್ಯ ಪಾಕಿಸ್ತಾನದ ಅಧೀನಕ್ಕೆ ಬರುವ ಸಂದರ್ಭ ಬಂತು. ದೇಶದ ವಿಭಜನೆಗೆ ಒಪ್ಪಿಕೊಂಡು ಕಾಂಗ್ರೆಸ್ಸು ಸರಹದ್ ಪ್ರಾಂತ್ಯಕ್ಕೆ ಅನ್ಯಾಯ ಮಾಡಿತೆಂಬುದು ಖಾನ್ ಸೋದರರ ಅಭಿಪ್ರಾಯವಾಗಿತ್ತು.[೬] ಮುಸ್ಲಿಂ ಲೀಗ್ ಪಾಕಿಸ್ತಾನದಲ್ಲಿಯ ಪಠಾಣರನ್ನು ನ್ಯಾಯದಿಂದ ಕಾಪಾಡಬೇಕೆನ್ನುವ ಆಶ್ವಾಸನೆಯನ್ನು ಮಹಾತ್ಮಾ ಗಾಂಧಿಯವರು ವೈಸ್‌ರಾಯಿಯಿಂದ ಪಡೆದುಕೊಂಡರು. ಸರಹದ್ ಪ್ರಾಂತ್ಯ ಪಾಕಿಸ್ತಾನದಲ್ಲಿ ಸೇರಬೇಕೆ? ಅಥವಾ ಪಖ್ತುನಿಸ್ಥಾನ್ ನಿರ್ಮಾಣವಾಗಬೇಕೆ? ಎನ್ನುವ ವಿಷಯವನ್ನು ಜನಮತಕ್ಕೆ ಹಾಕಲಾಯಿತು. ಖಾನ್ ಬಂಧುಗಳು ಜನಮತ ಗಣನೆಯನ್ನು ಬಹಿಷ್ಕರಿಸಿದರು.[೭][೮] ಸರಹದ್ ಪ್ರಾಂತ್ಯ ಪಾಕಿಸ್ತಾನದಲ್ಲಿ ವಿಲೀನವಾಗಬೇಕೆಂಬುದಕ್ಕೆ ಬಹುಮತ ಬಂತು. ಪಾಕಿಸ್ತಾನದಲ್ಲಿ ಖುದಾ-ಈ-ಖಿದ್ಮತ್‌ಗಾರ್ ಸಂಘಟನೆಯ ಆಧಾರಸ್ತಂಭದಂತಿದ್ದ ಖಾನ್ ಸಾಹೇಬರ ಕೊಲೆಯಾಯಿತು. ಖಾನ್ ಅಬ್ದುಲ್ ಗಫಾರ್ ಖಾನರಿಗೆ ಸರ್ಕಾರದಿಂದ ಅನೇಕ ತೊಂದರೆಗಳುಂಟಾದವು. ಈ ಸನ್ನಿವೇಶದಲ್ಲಿ ಖುದಾ-ಈ-ಖಿದ್ಮತ್‌ಗಾರ್ ಚಟುವಟಿಕೆಗಳ ಬಗ್ಗೆ ವಿವರಗಳು ಹೊರಪ್ರಪಂಚಕ್ಕೆ ಗೊತ್ತಾಗಲಿಲ್ಲ.
1969ರ ಅಕ್ಟೋಬರ್‌ನಲ್ಲಿ ಗಫಾರ್ ಖಾನ್ ಭಾರತಕ್ಕೆ ಭೇಟಿ ನೀಡಿದಾಗ ಅವರ ಸ್ವಾಗತ ಸಮಾರಂಭದಲ್ಲಿ 1,000 ಖುದಾ-ಈ-ಖಿದ್ಮತ್‌ಗಾರರು ಭಾಗವಹಿಸಿದ್ದರು. 1970ರ ಫೆಬ್ರವರಿಯಲ್ಲಿ ಗಫಾರ್ ಖಾನರು ವಾಪಸಾದರು. ಆ ಸಮಯದಲ್ಲಿ ಖುದಾ-ಈ-ಖಿದ್ಮತ್‌ಗಾರ್ ಸಂಘಟನೆಯ ಮಾದರಿಯ ಮೇಲೆ ಒಂದು ಸ್ವಯಂಸೇವಕ ಸಂಸ್ಥೆಯನ್ನು ಭಾರತದಲ್ಲಿ ಸ್ಥಾಪನೆ ಮಾಡುವುದು ಅವಶ್ಯವಿದೆ ಎಂದು ಭಾರತದ ಕೆಲವು ಮುಖಂಡರು ಘೋಷಿಸಿದ್ದುಂಟು.
ಉಲ್ಲೇಖಗಳು
ಬದಲಾಯಿಸಿ- ↑ Oxford, Anthropological Society of (1995). Journal of the Anthropological Society of Oxford (in ಇಂಗ್ಲಿಷ್). Oxford University Anthropological Society. p. 300.
- ↑ "Red Shirt Movement".(2008) Encyclopædia Britannica. Retrieved 14 September 2008, from Encyclopædia Britannica Online: [www.britannica.com/EBchecked/topic/494519/Red-Shirt-Movement]
- ↑ Qasmi, Ali Usman; Robb, Megan Eaton (2017). Muslims against the Muslim League: Critiques of the Idea of Pakistan (in ಇಂಗ್ಲಿಷ್). Cambridge University Press. p. 2. ISBN 978-1108621236.
- ↑ "Abdul Ghaffar Khan". Encyclopædia Britannica. Retrieved 24 September 2008.
- ↑ "Abdul Ghaffar Khan". I Love India. Retrieved 24 September 2008.
- ↑ Partition and Military Succession Documents from the U.S. National Archives
- ↑ Meyer, Karl E. (2008). The Dust of Empire: The Race For Mastery in the Asian Heartland. PublicAffairs. ISBN 978-0786724819. Retrieved 10 July 2013 – via Google Boeken.
- ↑ "Was Jinnah democratic? – II". Daily Times. 25 December 2011. Retrieved 24 February 2019.
ಹೊರಗಿನ ಕೊಂಡಿಗಳು
ಬದಲಾಯಿಸಿ- Official website of Khudai Khidmatgar Archived 2024-04-16 ವೇಬ್ಯಾಕ್ ಮೆಷಿನ್ ನಲ್ಲಿ.
- The Khudai Khidmatgar[Usurped!]
- The Pashtun Code
- Ghani Khan (Poet and son of Ghaffar Khan)[Usurped!]; Interview, film, and sound recordings
- Interview with Ghaffar Khan
- Pervez Khan: Remembering Baacha Khan: the memory of his courage to stay for ever