ಕವಿ, ನಾಟಕಕಾರ, ನಿರ್ದೇಶಕ, ಪ್ರಾಧ್ಯಾಪಕ ಕ.ವೆಂ.ರಾಜಗೋಪಾಲ ಅವರು ಬೆಂಗಳೂರಿನ ಎಂಇಎಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ-ನಾಟಕ ಮತ್ತು ಸಂಗೀತ ವಿಭಾಗದ ನಿರ್ದೇಶಕರಾಗಿ, ಬಹಳ ಮಹತ್ವದ ಕೊಡುಗೆಯನ್ನು ಕೊಟ್ಟಿದ್ದಾರೆ. ಅವರೊಬ್ಬ ವಿಮರ್ಶಕ, ಹಾಗೂ ಮಾರ್ಕ್ಸ್ ವಾದಿ ಚಿಂತಕ. ನವ್ಯದ ಕಾಲಘಟ್ಟದಲ್ಲಿ ಮುಂಚೂಣಿಯಲ್ಲಿದ್ದ ಹೆಸರಾಂತ ಲೇಖಕರಾದ, ಲಂಕೇಶ್, ಅನಂತಮೂರ್ತಿ, ಬಿ ಸಿ ರಾಮಚಂದ್ರ ಶರ್ಮ, ಮತ್ತು ಹಲವು ಹೊಸ ಪ್ರತಿಭೆಗಳ ಮೇಲೆ ತಮ್ಮ ಗಾಢ ಪ್ರಭಾವ ಬೀರಿದ್ದರು. ರಂಗಭೂಮಿ, ಯಕ್ಷಗಾನ ಮತ್ತು ಶಿಲ್ಪಶಾಸ್ತ್ರದ ಬಗ್ಗೆಯೂ, ಗ್ರೀಕ್ ತತ್ತ್ವಜ್ಞಾನದ ಬಗ್ಗೆಯೂ ಹೆಚ್ಚು ಆಳವಾದ ಅಭ್ಯಾಸ ಮಾಡಿದ್ದರು.ರಂಗಭೂಮಿ ಇತಿಹಾಸ ದಾಖಲಿಸುವ ಹಿರಿಮೆಯ ಕೆಲಸ ಮಾಡಿದ್ದಾರೆ. ಕೆಲವು ಚಾರಿತ್ರಿಕ ಸಂಗತಿಗಳನ್ನು ತಮ್ಮ ಅಪಾರ ನೆನಪಿನ ಶಕ್ತಿಯಿಂದ ಅತ್ಯಂತ ಪ್ರಭಾವಶಾಲಿಯಾಗಿ ವಿವರಿಸುವ ಸಿದ್ಧಿ ಪಡೆದಿದ್ದರು. ಕ.ವೆಂ.ರಾ.ಒಬ್ಬ ಕನ್ನಡದ ಉತ್ಕೃಷ್ಠ ಲೇಖಕರಲ್ಲೊಬ್ಬರು. ಕವನ, ಕಥೆ,ನಾಟಕ, ರೇಡಿಯೋ ನಾಟಕ, ಅನುವಾದ,[] ಮತ್ತು ವಿಮರ್ಶೆಗಳನ್ನು ರಚಿಸಿ ಹೆಸರುಮಾಡಿದ್ದಾರೆ.[]


ಕ.ವೆಂ.ರಾಜಗೋಪಾಲ
ಜನನ೧೯೨೪. ನವೆಂಬರ್ , ೧೦
ಕಾಂತಾಪುರ, ಅರಕಲಗೂಡು ತಾಲ್ಲೂಕು, ಹಾಸನ ಜಿಲ್ಲೆ, ಕರ್ನಾಟಕ
ಮರಣ೨೦೧೪, ಅಕ್ಟೋಬರ್, ೨೦
ಬೆಂಗಳೂರು, ಕರ್ನಾಟಕ
ವೃತ್ತಿಸಾಹಿತಿ, ಸಂಶೋಧಕ, ರಂಗ ನಿರ್ದೇಶಕ, ಪ್ರಾಂಶುಪಾಲ
ರಾಷ್ಟ್ರೀಯತೆಭಾರತ
ಪ್ರಕಾರ/ಶೈಲಿಕಾವ್ಯ, ಸಣ್ಣಕತೆ, ನಾಟಕ, ಅನುವಾದ
ಸಾಹಿತ್ಯ ಚಳುವಳಿನವ್ಯ

ಪ್ರಭಾವಗಳು
  • [[]], [[]]

ಪ್ರಭಾವಿತರು
  • ಲಂಕೇಶ್, ಅನಂತಮೂರ್ತಿ, ಬಿ ಸಿ ರಾಮಚಂದ್ರ ಶರ್ಮ

ಜನನ, ಬಾಲ್ಯ, ವಿದ್ಯಾಭ್ಯಾಸ

ಬದಲಾಯಿಸಿ

ಕ ವೆಂ ರಾಜಗೋಪಾಲ ಅವರು ಹಾಸನ ಜಿಲ್ಲೆಯ,ಅರಕಲಗೂಡು ತಾಲ್ಲೂಕಿನ,ಕಾಂತಾಪುರದಲ್ಲಿ ೧೦, ನವೆಂಬರ್, ೧೯೨೪ ರಂದು ಜನಿಸಿದರು. ಬೆಳೆದದ್ದು ಕಟ್ಟೆಪುರದಲ್ಲಿ. ತಮ್ಮ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯನ್ನು ಹುಟ್ಟೂರಿನಲ್ಲಿ ಮುಗಿಸಿದರು. ಮುಂದಿನ ವಿದ್ಯಾಭ್ಯಾಸವನ್ನು, ಮೈಸೂರಿನ, ಮಹಾರಾಜ ಕಾಲೇಜು, ಮತ್ತು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮುಗಿಸಿ, ಬೆಂಗಳೂರಿನ ಎಂಇಎಸ್ ಕಾಲೇಜು ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ ಮತ್ತು ನಾಟಕ ವಿಭಾಗದ ನಿರ್ದೇಶಕರಾಗಿ, ಸೇವೆ ಸಲ್ಲಿಸಿದರು. ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಕನ್ನಡ ಚಳವಳಿಯ ಪರವಾಗಿ ನಡೆಸುವ ಚಟುವಟಿಕೆಗಳಿಗೆ ತಮ್ಮ ಕನ್ನಡ ವಿಭಾಗವನ್ನು ಬಳಸಿಕೊಳ್ಳಲು ಅವಕಾಶ ಮಾಡಿಕೊಟ್ಟರು.

ವ್ಯಕ್ತಿತ್ವ

ಬದಲಾಯಿಸಿ

ಕ ವೆಂ ರಾಜಗೋಪಾಲ, [] ನವ್ಯಕಾಲದ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗಲೂ ಹಳೆಯ ಪರಂಪರೆಯ ಶೈಲಿಯಲ್ಲಿ ಸಂವಾದಿಸುತ್ತಲೇ, ಸದಾ ಹೊಸತಿಗೆ ಮುಖ ಮಾಡಿಯೇ ಬೆಳೆದವರು ಮತ್ತು ತಮ್ಮ ಸುತ್ತಲಿದ್ದವರನ್ನು ಬೆಳೆಸಿದರು ಸಹಿತ. ತಮ್ಮ ಕಾವ್ಯ ರಚನೆಯಿಂದ ಕಾವ್ಯಾಸಕ್ತರ ಮನಸ್ಸನ್ನು ಸೂರೆಗೊಂಡಿದ್ದಾರೆ. ಕಾವ್ಯ, ಕಥೆ, ನಾಟಕ ಕ್ಷೇತ್ರವಷ್ಟೇ ಅಲ್ಲದೆ ಸಂಶೋಧನೆಯಲ್ಲೂ ಆಸಕ್ತರಾಗಿದ್ದ ಇವರು ಯಾವ ಮೆಚ್ಚುಗೆ, ಯಾರ ಪ್ರಶಂಸೆಯನ್ನೂ ಲೆಕ್ಕಿಸದೆ ತಮಗನಿಸಿದ್ದನ್ನು, ತಾವು ಬಯಸಿದ್ದನ್ನು ಆಸ್ಥೆ, ಆಸಕ್ತಿ, ಆಳವಾದ ಕಾಳಜಿಯಿಂದ ಸಾಹಿತ್ಯ ಕೃಷಿಮಾಡಿದರು. ಪ್ರತಿ ಕ್ಷಣ ತಮ್ಮ ಜ್ಞಾನವನ್ನು ಅಪ್‌ಡೇಟ್ ಮಾಡಿಕೊಳ್ಳಲು ಅವರು ಸದಾ ಸಿದ್ಧರು. ಹಳೆಯ ಮೌಲ್ಯಗಳನ್ನು ಬಿಡದೆ, ಮುಂದುವರೆಸುತ್ತಾ ಪ್ರಗತಿಪರ ಹೊಸ ಸಾಧ್ಯತೆಗಳನ್ನು ಆಹ್ವಾನಿಸುತ್ತಿದ್ದರು.

ಕವಿ, ರಂಗಕರ್ಮಿ, ಪ್ರಾಧ್ಯಾಪಕ

ಬದಲಾಯಿಸಿ

ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೈಯಾಡಿಸಿ ಅದರ ಸ್ವಾದವನ್ನು ಗಳಿಸಿದ್ದಾರೆ. ರಾಜಗೋಪಾಲರನ್ನು ಮೇಲ್ಮಟ್ಟದ ವ್ಯಕ್ತಿಯಾಗಿರಿಸಿರುವುದು ಅವರ ಯಾವ ಅಪೇಕ್ಷೆಗಳ ನಿರೀಕ್ಷೆಗಳಿಲ್ಲದೆ ಸಾಂಸ್ಕತಿಕ ವಲಯದಲ್ಲಿ ದುಡಿಯುವ ಸದ್ಗುಣಗಳನ್ನು. ಎಲ್ಲಾ ಸಂದರ್ಭಗಳಲ್ಲೂ ಅತ್ಯಂತ ಮಾನವೀಯವಾಗಿ ಸ್ಪಂದಿಸುತ್ತಿದ್ದ ಅವರ ಮಾನವೀಯ ಮೌಲ್ಯಗಳನ್ನು ಎಲ್ಲರೂ ಸ್ಮರಿಸುತ್ತಾರೆ.

ಒಳ್ಳೆಯ ವಾಗ್ಮಿ

ಬದಲಾಯಿಸಿ

ಪ್ರೊ|| ತೀ.ನಂ.ಶ್ರೀ, ಪ್ರೊ|| ಡಿ.ಎಲ್‌.ಎನ್ ಅವರಂತಹ ಮೇರು ಲೇಖಕರ ಕೃತಿಗಳ ಬಗ್ಗೆ ಮಾತಾಡುತ್ತಲೇ ಹೊಸ ತಲೆಮಾರಿನ ಕೆಲವು ಸಾಧಕರ ವಿದ್ವತ್ ಶಕ್ತಿಯ ಬಗ್ಗೆಯೂ ಮಾತನಾಡಬಲ್ಲವರಾಗಿದ್ದರು. ನವ್ಯಕಾಲದ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಾಗಿ ಬರೆಯುತ್ತಿದ್ದರು. ಕ.ವೆಂ.ಒಬ್ಬ ಶ್ರೇಷ್ಠ ವಿದ್ವಾಂಸರಾಗಿದ್ದರು. ಯಾವುದೇ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿಯಿಂದ, ಶ್ರಮಿಸಿ, ಅಧ್ಯಯನ ಮಾಡುತ್ತಿದ್ದರು. ಅಧ್ಯಾಪಕರಾಗಿ, ತಮ್ಮ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸುವುದಲ್ಲದೆ ಅವರಿಗೆ ತಿಳಿಯದಂತೆ ಸಮಯ ಬಂದಾಗ ಪ್ರೀತಿ, ತೋರಿಸಿ ಮಾರ್ಗದರ್ಶನ ಮಾಡುವುದಲ್ಲದೆ ಅವರ ವ್ಯಕ್ತಿತ್ವವನ್ನು ರೂಪಿಸುತ್ತಿದ್ದರು.

ನವ್ಯ ಸಾಹಿತಿಗಳ ಜೊತೆ ಒಡನಾಟ

ಬದಲಾಯಿಸಿ

ನವ್ಯ ಸಾಹಿತ್ಯ ಘಟಾನುಘಟಿಗಳ ಜೊತೆಗೆ ಒಡನಾಟ ಹೊಂದಿದ್ದ, ಆ ಕಾಲದ ಅನೇಕ ಹೊಸ ಲೇಖಕರ ಬೆನ್ನು ತಟ್ಟಿದವರು ಕವೆಂ. ಕಥೆಗಾರ ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ ಮುಂತಾದ ಅನೇಕರೊಂದಿಗೆ ಒಡನಾಡವಿತ್ತು. ಲಂಕೇಶ್ ಕವೆಂ ಕುರಿತು ತಲೆಮಾರು ಸಂಕಲನದಲ್ಲಿ ಸ್ನೇಹ ಮತ್ತು ಸಲಿಗೆಯಿಂದ ಬರೆಯುತ್ತಾ, 'ಕ.ವೆಂ. ರಾಜಗೋಪಾಲ/ನವ್ಯ ಕಾವ್ಯದ ಬಾಲ/ಬಾಲಕ್ಕೆ ಅರ್ಥ ಹಚ್ಚುವುದು ವ್ಯರ್ಥ/' ಎಂದಿದ್ದರು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ, ಮತ್ತು ಸ್ನೇಹಬೆಳೆಸಿದ್ದರು. ತಾವು ಉತ್ತಮ ಕವಿಯಾದಾಗ್ಯೂ 'ನಾಟಕ ಕಾವ್ಯವೂ ಆಗಿರಬೇಕು. ಕಾವ್ಯವೆಲ್ಲವನ್ನೂ ನಾಟಕವಾಗಿಸಬಹುದು' ಎನ್ನುವ ನಿರ್ಣಯ ಹೊಂದಿದ್ದರು. ತಾವು ಮನಗಂಡಂತೆ, 'ನಾಟಕಕ್ಕೆ ತನ್ನದೇ ಆದ ಸ್ವರೂಪವಿರುತ್ತದೆ' ಎಂದು ಹಲವಾರು ದೃಷ್ಟಾಂತಗಳಿಂದ ತೋರಿಸಿಕೊಟ್ಟರು. ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರರು ಬರೆದ ನಾಟಕಗಳನ್ನು ಮುಕ್ತ ಮನಸ್ಸಿನಿಂದ ಮೆಚ್ಚಿ,ಅವುಗಳ ಆಂತರಿಕ ಶಕ್ತಿಯನ್ನು ಗುರುತಿಸಿದ್ದರು. ಹೊಸದನ್ನು ಬರಮಾಡಿಕೊಳ್ಳುವುದು ಬಹಳ ಮುಖ್ಯವೆಂದು ತಮ್ಮ ಮಾತುಗಳಲ್ಲಿ ದಾಖಲಿಸಿದ್ದಾರೆ. ಕ.ವೆಂ.ರಾಜಗೋಪಾಲ್, ಕವಿ, ನಾಟಕಕಾರ ಎಚ್ ಎಸ್ ಶಿವಪ್ರಕಾಶರ 'ಮಹಾಚೈತ್ರ' ನಾಟಕದ ಕೊನೆಯ ದೃಶ್ಯದ ಭಿನ್ನ ಸಾಧ್ಯತೆಗಳನ್ನೂ ಸೂಚಿಸಿ ಅವರ ಮನಸ್ಸನ್ನು ಗೆದ್ದರು. ಕವಿ, ಶಿವಪ್ರಕಾಶ್, ಇಂತಹ ಪ್ರೋತ್ಸಾವನ್ನು ಬಹಳವಾಗಿ ಮೆಚ್ಚಿದ್ದಾರೆ.

ಸಾಹಿತ್ಯ ಕೃಷಿ

ಬದಲಾಯಿಸಿ

'ಅಂಜೂರ' ಕ.ವೆಂ. ಅವರ ಮೊದಲ ಕವನ ಸಂಕಲನ. ಈ ಕೃತಿಗೆ ಡಾ.ಗೋಪಾಲಕೃಷ್ಣ ಅಡಿಗರು ಮುನ್ನುಡಿ ಬರೆದರು. ಮುಂದೆ ಅಡಿಗರು ಜನಸಂಘದ ಮೂಲಕ ಚುನಾವಣೆಗೆ ಸ್ಪರ್ಧಿಸಿದಾಗ ಕ.ವೆಂ. ನಿಷ್ಠುರವಾಗಿ ಟೀಕಿಸಿದ್ದರು. ಚಿ.ಶ್ರೀನಿವಾಸರಾಜು ಅವರು ೧೯೭೧ ರಲ್ಲಿ 'ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕನ್ನಡ ಸಂಘ' ಆರಂಸಿದಾಗ, ಸಂಘದ ಮೊದಲ ಪ್ರಕಟಣೆಯಾಗಿ 'ನದಿಯ ಮೇಲಿನ ಗಾಳಿ' ಎಂಬ ಕವನ ಸಂಕಲನವನ್ನು ಹೊರತಂದಿತು. ಕವನ ಸಂಕಲನದ ಹಸ್ತಪ್ರತಿಯನ್ನು ಕೊಟ್ಟು, ಸಂಘದ ಚಟುವಟಿಕೆಗಳಿಗೆ ಅವರು ನಾಂದಿ ಹಾಡಿದ್ದರು. ಕ. ವೆಂ. ಅವರ ಈ ಸಂಕಲವನ್ನು ಪ್ರಕಟಿಸುವ ಮೂಲಕ ಮುಂದಡಿ ಇಟ್ಟ ಕನ್ನಡ ಸಂಘವು ಮುಂದೆ ೧೮೦ ಕೃತಿಗಳನ್ನು ಪ್ರಕಟಿಸಿತು. ಇದೇ ಸಂಘದಿಂದ ಅವರ ಕಡೆಯ ಕವನ ಸಂಕಲನ 'ಈ ನೆಲದ ಕರೆ' ಕೂಡ ಹೊರಬಂದಿತು. 'ಮೇ ತಿಂಗಳ ಅಬ್ಬರ' ಅವರ ಇನ್ನೊಂದು ಕವನ ಸಂಕಲನ. ಪ್ರೊ|| ಕ.ವೆಂ.ರಾಜಗೋಪಾಲರು ಒಟ್ಟು ೧೩೦ ಕೃತಿಗಳನ್ನು ರಚಿಸಿದ್ದಾರೆ. ಅವರ ಕೆಲವು ಕೃತಿಗಳು ಹೀಗಿವೆ:

ಕಥಾಸಂಕಲನಗಳು

ಬದಲಾಯಿಸಿ
  1. 'ಎಣಿಸದ ಹಣ',
  2. 'ನಿಸರ್ಗದ ನೆನಪು',
  3. 'ಆಸೆಯ ಶಿಶು',
  4. 'ರಾಗ-ಜಯಂತಿ',
  5. 'ಅರ್ಧ ತೆರೆದ ಬಾಗಿಲು'
  6. 'ಅನಾಥ ಮೇಷ್ಟ್ರ ಸ್ವಗತ ಸಂಪ್ರದಾಯ'

ಕವನ ಸಂಕಲನಗಳು

ಬದಲಾಯಿಸಿ
  1. ಅಂಜೂರ
  2. ನದಿಯ ಮೇಲಿನ ಗಾಳಿ
  3. ಮೇ ತಿಂಗಳ ಅಬ್ಬರ
  4. ಈ ನೆಲದ ಕರೆ

ನಾಟಕಗಳು

ಬದಲಾಯಿಸಿ
  1. ಅತ್ತೆಯ ಕಾಂಚಿ (ಅನುವಾದ)
  2. ಅನುಗ್ರಹ
  3. ಮಾಯಾಕೋಲಾಹಲ
  4. ಥೆನ್ಸಿನಲ್ಲಿ ಬರಿಗಾಲು (ಅನುವಾದ)
  5. ಕಲ್ಯಾಣದ ಕೊನೆ ದಿನಗಳು
  6. ಭಗತ್ ಸಿಂಗ್: ಒಂದು ವಿಚಾರಣೆ
  7. ವಿಚಾರಣೆ

ಸಂಶೋಧನೆಯ ಕ್ಷೇತ್ರದಲ್ಲಿ

ಬದಲಾಯಿಸಿ

ಸಂಶೋಧನೆಯ ಕ್ಷೇತ್ರದಲ್ಲೂ ರಾಜಗೋಪಾಲರು, ಬಹಳ ಮಹತ್ವದ ಕೊಡುಗೆಯನ್ನು ಕೊಟ್ಟಿದ್ದಾರೆ.[] []

  1. 'ಬೌದ್ಧ ಮತದಲ್ಲಿ ಯಕ್ಷಕಲೆ',
  2. ' ಕನ್ನಡ ರಂಗಭೂಮಿಯ ಶೋಧದಲ್ಲಿ',
  3. 'ಒಕ್ಕಲಿಗರ ಆಚರಣೆಗಳು',
  4. ' ಗಂಗರ ಇತಿಹಾಸ'

ಇತರ ಕೃತಿಗಳು

ಬದಲಾಯಿಸಿ

ಕವಿತೆಗಳು

ಬದಲಾಯಿಸಿ
  • “ಕಾಲೇಜು ಹುಡುಗಿಯರ ನಗೆಯಂತೆ ಹರಡುತಿದೆ ವಿದ್ಯುದ್ವಳ್ಳಿವೆಳಗು”
  • '(ಹೂ ತುಂಬಿದ ಮರದ ನೆಳಲು'-ಕವಿತೆಯಿಂದ)

ಹೂ ತುಂಬಿದ ಮರದ ನೆರಳು

ಹೂವಿಗಿಂತ ಹಗುರ

ನೆಳಲ ಹೂ ತಳದಿಂದ ಹೆರಳ

ಹೂತನಕ ಬಹುಸುಂದರ

ತೆರೆದ ಹೂಮನದ ಸಿಂಗಾರಕ್ಕೆ

ಹೊಂಗನಸಿನ ಹಾರ

ಹೂವಿನ ಹೆಡೆಯಾಡುವ ನೆಳಲಿನ

ನಗೆಹೂವಿನ ಸ್ವರ

ಯಾವುದೋ ಒಂದು

ಹೂಲಾಹೂಪ್ ನಿತ್ಯವೂ

ನನ್ನ ಬಳುಕಿಸಿದೆ

ನನ್ನ ನಂಬಿ

ನಾನದರ ಸೂತ್ರದ ಗೊಂಬಿ

ರಂಗಭೂಮಿಯ ಕಾರ್ಯಗಳು

ಬದಲಾಯಿಸಿ

ರೇಡಿಯೊ ನಾಟಕಗಳ ಮೂಲಕ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರರಾದರು. ತಮ್ಮ ೫೦ ವರ್ಷಗಳ ರಂಗಭೂಮಿಯ ಅನುಭವದಲ್ಲಿ ಹಲವಾರು ಹೊಸ ಸಾಧ್ಯತೆಗಳನ್ನು ಕಾಲಾವಿದರಿಗೆ ಮನದಟ್ಟುಮಾಡಿಕೊಟ್ಟರು. 'ಕಲ್ಯಾಣದ ಕೊನೆಯ ದಿನಗಳು'-ಎಂಬ ೧೨ ನೇ ಶತಮಾನದ ಬಸವಣ್ಣನವರ ಬಹುಚರ್ಚಿತ ಹಾಗೂ ಮೆಚ್ಚುಗೆಗಳಿಸಿದ, ಚಳವಳಿಯನ್ನು ಆಧರಿಸಿದ ನಾಟಕಗಳ ಸ್ವರೂಪವನ್ನು ಭಿನ್ನವಾಗಿ ಈ ನಾಟಕದ ಮೂಲಕ ತೋರಿಸಿಕೊಟ್ಟರು. ತಮ್ಮ ಅಂತಿಮ ದಿನಗಳಲ್ಲಿ ವಿಚಾರಣಾ ರಾಜಕೀಯವನ್ನು ಆಧರಿಸಿದ 'ಭಗತ್ ಸಿಂಗ್: ಒಂದು ವಿಚಾರಣೆ' ಮತ್ತು ಗಾಂಧೀ ಜೀವನ ಆಧರಿಸಿದ 'ವಿಚಾರಣೆ' ನಾಟಕಗಳನ್ನು ರಚಿಸಿದರು. ರಂಗ ಕಲಾವಿದರಿಗೆ ಎಲ್ಲ ವಿಧದಲ್ಲೂ ತಮ್ಮ ನೆರವನ್ನು ಕೊಡುತ್ತಿದ್ದರು. 'ಪ್ರಸನ್ನ', ಎಂಬ ರಂಗ ನಿರ್ದೇಶಕರನ್ನು ಪ್ರೋತ್ಸಾಹಿಸಿ ಮೇಲಕ್ಕೆ ತಂದರು. ಬಿ ವಿ ಕಾರಂತರ ಸಾಧನೆಗಳ ಬಗ್ಗೆ ಬೆಳಕು ಚೆಲ್ಲುವ ಬಗ್ಗೆ ಕನ್ನಡದಲ್ಲಿ ಅಧ್ಯಯನವಾಗಬೇಕೆಂದು ತಮ್ಮ ನಿಲುವನ್ನು ಪ್ರಕಟಿಸಿದರು. ದೃಶ್ಯಮಾಧ್ಯಮದತ್ತ ಆಸಕ್ತಿವಹಿಸಲು ಬರಗೂರು ರಾಮಚಂದ್ರಪ್ಪನವರನ್ನು ಪ್ರಚೋದಿಸಿದರು. ಅವರು ಮುಂದೆ ರಂಗಭೂಮಿಯಲ್ಲಿ ಗಮನಾರ್ಹ ಕೊಡುಗೆಯನ್ನು ಕೊಡಲು ಸಹಾಯಕವಾಯಿತು.

ಶ್ರೇಷ್ಠಮಟ್ಟದ ಪ್ರತಿಭಾಶಾಲಿ ಪ್ರೊ||ಕ.ವೆಂ.ರಾಜಗೋಪಾಲರು, [] ತಮ್ಮ (೯೦) ರ ಪ್ರಾಯದಲ್ಲಿ, ಕೊನೆಯುಸಿರೆಳೆದರು. ಅವರಿಗೆ ಇಬ್ಬರು ಪುತ್ರರೂ, ಮೂವರು ಪುತ್ರಿಯರೂ ಇದ್ದಾರೆ. ಬೆಂಗಳೂರಿನ ಚಾಮರಾಜಪೇಟೆ ಟಿ.ಆರ್.ಮಿಲ್ ಸಮೀಪದ ಶಾಂತಿವನದಲ್ಲಿ ಸಂಜೆ ೪ ಘಂಟೆಗೆ ಕ.ವೆಂ. ರಾಜಗೋಪಾಲರ ಅಂತ್ಯಕ್ರಿಯೆ ನಡೆಯಿತು. ಸಾಂಸ್ಕೃತಿಕ ವಲಯದ ಗಣ್ಯರು, ಅಪಾರ ಹಿತೈಷಿಗಳು, ಸಾಹಿತ್ಯ ಪ್ರಿಯರು, ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು. []

ಉಲ್ಲೇಖಗಳು

ಬದಲಾಯಿಸಿ
  1. Poem Hunter.com Original Kannada Poem by K.V. Rajajagopala, Translated by C.P. Ravikumar
  2. Poverty and Human Dignity : 'K.S.Karatha Encountered from Vatican II Council'-By Roque D'souza
  3. 'Science graph', ಕ.ವೆಂ.ರಾಜಗೋಪಾಲ[ಶಾಶ್ವತವಾಗಿ ಮಡಿದ ಕೊಂಡಿ]
  4. ಕರ್ನಾಟಕ ಇತಿಹಾಸ ಅಕ್ಯಾಡೆಮಿ,'A NOTE ON HALMIDI INSCRIPTION', Author: Prof.K.V.Rajagopal[ಶಾಶ್ವತವಾಗಿ ಮಡಿದ ಕೊಂಡಿ]
  5. "Yahoo Groups, Akandabaratam, 'Kannada deserves classical Language Status more than Tamil,'-Sugata Srinivasaraju,". Archived from the original on 2016-03-07. Retrieved 2014-10-22.
  6. ವಿಜಯ ಕರ್ನಾಟಕ, ಅಕ್ಟೋಬರ್,೨೨, ೨೦೧೪, 'ಹಿರಿಯ ಬರಹಗಾರ ಕ ವೆಂ ರಾಜಗೋಪಾಲ ಇನ್ನಿಲ್ಲ'-ಉಮಾಶ್ರೀ, ಕನ್ನಡ ಮತ್ತು ಸಂಸ್ಕೃತಿ ಸಚಿವೆ
  7. ಕನ್ನಡ ಪ್ರಭ ಇ-ಪತ್ರಿಕೆ, ಪ್ರೊ. ಕ.ವೆಂ.ರಾಜಗೋಪಾಲ ಇನ್ನಿಲ್ಲ-ಕವಿತೆ, ನಾಟಕ, ಸಣ್ಣಕಥೆ, ಸಂಶೋಧನಾ ಕ್ಷೇತ್ರಕ್ಕೆ ಅಪಾರ ಸೇವೆ, ಪುಟ-೯[ಶಾಶ್ವತವಾಗಿ ಮಡಿದ ಕೊಂಡಿ]