ಕ್ರ್ಯಾಸ್ಯುಲೇಸೀ
ಕ್ರ್ಯಾಸ್ಯುಲೇಸೀ -ದ್ವಿದಳ ಸಸ್ಯವರ್ಗದ ಒಂದು ಕುಟುಂಬ. ಸುಮಾರು 33 ಜಾತಿ ಮತ್ತು 1,300 ಪ್ರಭೇದಗಳನ್ನು ಒಳಗೊಂಡಿದೆ. ಇದಕ್ಕೆ ಸೇರಿದ ಸಸ್ಯಗಳು ಪ್ರಪಂಚದ ಒಣಹವೆಯುಳ್ಳ ಪ್ರದೇಶಗಳಲ್ಲಿ, ಮುಖ್ಯವಾಗಿ ಮಧ್ಯ ಏಷ್ಯದ ದಕ್ಷಿಣಭಾಗ, ದಕ್ಷಿಣ ಆಫ್ರಿಕ ಮತ್ತು ಸಮಶೀತೋಷ್ಣ ವಲಯದ ದ್ವೀಪಗಳಲ್ಲಿ ಹೇರಳವಾಗಿ ಕಾಣಬರುತ್ತವೆ. ಕ್ರ್ಯಾಸ್ಯುಲೇಸೀ ಕುಟುಂಬದ ಪ್ರಭೇದಗಳಲ್ಲಿ ಮುಖ್ಯವಾದವು ಕ್ರ್ಯಾಸ್ಯುಲ, ಬ್ರಯೊಫಿಲಮ್, ಟೆಲ್ಲಿಯ ಕ್ಯಾಲ್ಯಾಂಕೋಯಿ, ಕಾಟಿಲೀಡನ್, ಎಚಿವಿರಿಯ, ಇಯೊನಿಮಾ ಮತ್ತು ಸೆಮ್‍ಪರ್‍ವೈವಮ್ ಇತ್ಯಾದಿ.
ಭಾರತದಲ್ಲಿ ಕ್ರ್ಯಾಸ್ಯುಲ, ಬ್ರಯೊಫಿಲಮ್ ಮತ್ತು ಕೆಲಂಚೊ ಪ್ರಭೇದಗಳು ಸ್ವಾಭಾವಿಕವಾಗಿ ಬೆಳೆಯುತ್ತವೆ.
ಈ ಕುಟುಂಬಕ್ಕೆ ಸೇರಿದ ಸಸ್ಯಗಳು ಸಾಮಾನ್ಯವಾಗಿ ಮೂಲಿಕೆ ಅಥವಾ ಚಿಕ್ಕಚಿಕ್ಕ ಪೊದೆಗಳು. ಕಾಂಡ ಮತ್ತು ಎಲೆಗಳು ದಪ್ಪವಾಗಿದ್ದು ರಸಭರಿತವಾಗಿವೆ. ಎಲೆಗಳು ವ್ಯಂತಪತ್ರರಹಿತ ಮತ್ತು ಸರಳ; ಇವುಗಳ ಜೋಡಣೆ ಪರ್ಯಾಯ, ಅಭಿಮುಖ ಇಲ್ಲವೆ ಸುತ್ತು ಮಾದರಿಯದು; ಅಂಚು ನಯ (ಬ್ರಯೊಫಿಲಮ್ ಮತ್ತು ಕ್ಯಾಲ್ಯಾಂಕೋಯಿಗಳಲ್ಲಿ ಎಲೆಯ ಅಂಚು ಗರಗಸದಂತಿದೆ). ಹೂಗೊಂಚಲು ಮಧ್ಯಾರಂಭಿ ಮಾದರಿಯದು. ಕೆಲವುವೇಳೆ ಕದಿರು (ಉದಾಹರಣೆಗೆ ಕಾಟಿಲೀಡನ್) ಇಲ್ಲವೆ ಸಂಕೀರ್ಣ(ಉದಾಹರಣೆಗೆ ಬ್ರಯೊಫಿಲಮ್) ಮಾದರಿಯದಾಗಿರಬಹುದು. ಹೂಗಳಿಗೆ ಉಪಪುಷ್ಪಪತ್ರಗಳಿವೆ; ಹೂಗಳು ಸಂಪೂರ್ಣ ಮತ್ತು ದ್ವಿಲಿಂಗಿಗಳು; ಆರೀಯ ಸಮರೂಪತೆಯನ್ನು ಪ್ರದರ್ಶಿಸುತ್ತವೆ. ಪುಷ್ಪಪತ್ರಗಳ ಸಂಖ್ಯೆ 4 ರಿಂದ 30ರ ವರೆಗೆ ವ್ಯತ್ಯಾಸವಾಗುತ್ತದೆ. ಪತ್ರಗಳು ಬಿಡಿಬಿಡಿಯಾಗಿವೆ. ದಳಗಳ ಸಂಖ್ಯೆ ಪುಷ್ಪಪತ್ರಗಳ ಸಂಖ್ಯೆಗೆ ಸಮ. ಇವು ಕೂಡ ಬಿಡಿಬಿಡಿಯಾಗಿವೆ. ಕೇಸರಗಳ ಸಂಖ್ಯೆ ದಳಗಳ ಸಂಖ್ಯೆಯಷ್ಟೆ ಇರಬಹುದು ಇಲ್ಲವೆ ಇಮ್ಮಡಿಯಾಗಿರಬಹುದು. ಅಂಡಾಶಯ ಉಚ್ಚಸ್ಥಾನದ್ದು; 4 5 ಕಾರ್ಪೆಲುಗಳಿಂದ ಕೂಡಿದೆ. ಪ್ರತಿಯೊಂದು ಕಾರ್ಪೆಲಿನ ಬುಡದಲ್ಲಿ ಒಂದೊಂದು ಸಣ್ಣ ಹುರುಪೆಯಂತಿರುವ ಮಧುಗ್ರಂಥಿಯಿದೆ. ಅಂಡಕೋಶದ ಒಳಗೆ ಅದರ ಭಿತ್ತಿಗೆ ಅಂಟಿಕೊಂಡಿರುವ ಅಸಂಖ್ಯಾತ ಅಂಡಕಗಳಿವೆ. ಫಲ ಫಾಲಿಕಲ್ ಮಾದರಿಯದು. ಬೀಜಗಳು ಬಹು ಚಿಕ್ಕವು; ಗಾಳಿಯ ಮುಖಾಂತರ ಪ್ರಸಾರವಾಗುತ್ತವೆ.
ಕ್ರ್ಯಾಸ್ಯುಲೇಸೀ ಕುಟುಂಬದ ಕ್ರ್ಯಾಸ್ಯುಲ , ಕೆಲಂಚೊ , ಕಾಟಿಲೀಡನ್ , ಸೆಂಪರ್‍ವೈವಮ್ ಪ್ರಭೇದಗಳು ಅಲಂಕಾರಸಸ್ಯಗಳೆಂದು ಹೆಸರಾಗಿದ್ದು ಉದ್ಯಾನಪ್ರಾಮುಖ್ಯ ಪಡೆದಿವೆ. (ಡಿ.ಆರ್.ಎ.)