ಕ್ರ್ಯಾಸ್ಯುಲ - ಹೆಸರಾಂತ ಅಲಂಕಾರ ಸಸ್ಯ. ಕ್ರ್ಯಾಸ್ಯುಲೇಸೀ ಕುಟುಂಬಕ್ಕೆ ಸೇರಿದೆ. ಇದಕ್ಕೆ ವಿಚಿತ್ರವಾದ ಹಾಗೂ ಆಕರ್ಷಕವಾದ ಎಲೆಗಳಿರುವುದರಿಂದ ಮತ್ತು ಇದು ಸುಂದರವಾದ ಹೂಗಳನ್ನು ಬಿಡುವುದರಿಂದ ಇದನ್ನು ಕುಂಡಸಸ್ಯ, ಕಲ್ಲೇರಿಸಸ್ಯ ಇತ್ಯಾದಿಯಾಗಿ ಉದ್ಯಾನಗಳಲ್ಲಿ ಬೆಳೆಸಲಾಗುತ್ತದೆ.

Crassula capitella
Crassula nealeana
Crassula nealeana

ಇದರಲ್ಲಿ ಸುಮಾರು 250ಕ್ಕೂ ಹೆಚ್ಚು ಪ್ರಭೇದಗಳಿವೆ. ಇವುಗಳಲ್ಲಿ ಬಹುಪಾಲು ದಕ್ಷಿಣ ಆಫ್ರಿಕದ ಮುಳವಾಸಿಗಳು. ಹೆಚ್ಚುಕಡಿಮೆ ಎಲ್ಲವೂ ಮೆದುಕಾಂಡದ ಮೂಲಿಕೆಗಳು. ಎತ್ತರ ಸುಮಾರು 1'-3' (ಕ್ರ್ಯಾ.ಆರ್ಬಾರೆಸೆನ್ಸ್ ಎಂಬ ಪ್ರಭೇದ ಮಾತ್ರ 8'-10' ಎತ್ತರಕ್ಕೆ ಬೆಳೆಯುತ್ತದೆ). ಎಲೆಗಳು ಸಾಮಾನ್ಯವಾಗಿ ಅಭಿಮುಖವಾಗಿ ಜೋಡಣೆಗೊಂಡಿರುತ್ತವೆ. ಕೆಲವು ಪ್ರಭೇದಗಳಲ್ಲಿ ಮಾತ್ರ ಕಮಲದ ಹೂವಿನ ದಳಗಳ ರೀತಿಯಲ್ಲಿ ಜೋಡಿಸಲ್ಪಟ್ಟಿರುತ್ತವೆ. ಕ್ರ್ಯಾಸ್ಯುಲದ ವಿವಿಧ ತಳಿಗಳಿಗನುಸಾರವಾಗಿ ಅವುಗಳ ಎಲೆಗಳ ಆಕಾರ ಮತ್ತು ಬಣ್ಣ ವ್ಯತ್ಯಾಸವಾಗುತ್ತವೆ. ಎಲೆಗಳು ದಪ್ಪ ಮತ್ತು ರಸಭರಿತವಾಗಿಯೂ ನಯವಾದ ಅಂಚುಳ್ಳವಾಗಿಯೂ ಇವೆ. ಹೂಗೊಂಚಲು ಮಧ್ಯಾರಂಭಿ ಮಾದರಿಯದು; ಸಾಮಾನ್ಯವಾಗಿ ಕವಲೊಡೆಯುವುದಿಲ್ಲ. ಅಪೂರ್ವವಾಗಿ ಕವಲೊಡೆಯಬಹುದು. ಹೂಗಳು ದ್ವಿಲಿಂಗಿಗಳು. ಪುಷ್ಪಪತ್ರಗಳು 5. ದಳಗಳು 5; ಇವು ಬಿಡಿಯಾಗಿರಬಹುದು ಇಲ್ಲವೆ ಬುಡದಲ್ಲಿ ಮಾತ್ರ ಪರಸ್ಪರ ಕೂಡಿಕೊಂಡಿರಬಹುದು. ಕೇಸರಗಳು 5, ಉದ್ದದಲ್ಲಿ ಹೂದಳಗಳಿಗಿಂತ ಚಿಕ್ಕವು. ಅಂಡಾಶಯ ಉಚ್ಚಸ್ಥಾನದ್ದು, ಫಲ ಫಾಲಿಕಲ್ ಮಾದರಿಯದಾಗಿದ್ದು, ಅಸಂಖ್ಯ ಬೀಜಗಳನ್ನೊಳಗೊಂಡಿದೆ.

ಉದ್ಯಾನಗಾರಿಕೆಯಲ್ಲಿ ಪ್ರಮುಖವಾಗಿರುವ ಪ್ರಭೇದಗಳಿವು-ಕ್ರ್ಯಾ.ಕ್ವಾಡ್ರಿಫಿಡ, ಕಾರ್ಡೇಟ, ಲ್ಯಾಕ್ಟಿಯ, ಲೈಕೋಪೋಡಿಯಾಯ್ಡಿಸ್, ಆರ್ಬಾರೆಸೆನ್ಸ್, ಫ್ಯಾಲ್ಕೇಟ, ಟೆಟ್ರಗೋನ ಮತ್ತು ಸ್ಟ್ಯಾಚಲೇಟ.

ಕ್ರ್ಯಾಸ್ಯುಲ ಸಸ್ಯಗಳನ್ನು ಕಾಂಡತುಂಡುಗಳು ಮತ್ತು ಬೀಜಗಳಿಂದ ವೃದ್ದಿಮಾಡಬಹುದು. ಬೀಜಗಳಿಂದ ವೃದ್ಧಿ ಮಾಡುವುದಕ್ಕೆ ಹೆಚ್ಚು ಕಾಲ ಮತ್ತು ಶ್ರಮ ಹಿಡಿಯುವುದರಿಂದ ಕಾಂಡತುಂಡುಗಳಿಂದ ವೃದ್ಧಿಮಾಡುವುದೇ ವಾಡಿಕೆಯಲ್ಲಿರುವ ಕ್ರಮ. ಇವುಗಳಿಗೆ ಒಣವಾತಾವರಣ ಅಗತ್ಯ; ಪ್ರತಿನಿತ್ಯ ನೀರುಕೊಡುವ ಅವಶ್ಯಕತೆ ಇಲ್ಲ. ಇಟ್ಟಿಗೆ ಚೂರು, ಮರಳು ಮತ್ತು ಸ್ವಲ್ಪ ಗೊಬ್ಬರದ ಮಿಶ್ರಣದ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತವೆ. ಇವಕ್ಕೆ ಕೀಟಗಳ ಇಲ್ಲವೆ ಶಿಲೀಂಧ್ರ ರೋಗಗಳ ತೊಂದರೆ ಹೆಚ್ಚು ಇಲ್ಲವಾದರೂ ಮುನ್ನೆಚ್ಚರಿಕೆ ಕ್ರಮವಾಗಿ ಎರಡು ವಾರಗಳಿಗೆ ಒಂದು ಸಾರಿ ಕೀಟ ಮತ್ತು ಶಿಲೀಂಧ್ರ ನಾಶಕಗಳನ್ನು ಸಿಂಪಡಿಸಿದರೆ ಒಳ್ಳೆಯದು.


ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: