ಕ್ಯಾಪ್ಚಾ
ಕಂಪ್ಯೂಟರ್ ಜಾಲಗಳಲ್ಲಿ, ಅಂತರಜಾಲ ತಾಣಗಳಲ್ಲಿ ನಿರ್ದಿಷ್ಟ ಕೋರಿಕೆಯನ್ನು ಸಲ್ಲಿಸುತ್ತಿರುವುದು ಸ್ವಯಂಚಾಲಿತ ತಂತ್ರಾಂಶವಲ್ಲ, ಮಾನವ ಬಳಕೆದಾರರೇ ಎಂದು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಬಳಕೆಯಾಗುವ ಪರೀಕ್ಷೆಯ ಹೆಸರು ಕ್ಯಾಪ್ಚಾ. ಈ ಹೆಸರು 'ಕಂಪ್ಲೀಟ್‌ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್' ಎಂಬುದರ ಹ್ರಸ್ವರೂಪ.
ಇತಿಹಾಸ
ಬದಲಾಯಿಸಿಈಗ ನಮಗೆ ಪರಿಚಿತವಿರುವ ರೂಪದ ಕ್ಯಾಪ್ಚಾ ತಂತ್ರಜ್ಞಾನದ ಆವಿಷ್ಕಾರವಾದದ್ದು ೧೯೯೭ರಲ್ಲಾದರೂ ಈ ತಂತ್ರಜ್ಞಾನಕ್ಕೆ ಕ್ಯಾಪ್ಚಾ ಎನ್ನುವ ಹೆಸರು ದೊರೆತದ್ದು ೨೦೦೩ರಲ್ಲಿ. ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ ತಜ್ಞರ ಸಾಲಿನಲ್ಲಿ ಲೂಯಿಸ್ ವಾನ್ ಆನ್ನ್, ಮ್ಯಾನುಯೆಲ್ ಬ್ಲುಮ್, ನಿಕೊಲಸ್ ಹಾಪರ್ ಹಾಗೂ ಜಾನ್ ಲಾಂಗ್‌ಫರ್ಡ್ ಪ್ರಮುಖರು[೧].
ಉದ್ದೇಶ
ಬದಲಾಯಿಸಿಈ ಪರೀಕ್ಷೆಯ ಅಂಗವಾಗಿ ಪರದೆಯ ಮೇಲೆ ತೋರಿಸುವ ಚಿತ್ರದಲ್ಲಿನ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸುವಂತೆ, ಅಥವಾ ಸರಳ ಪ್ರಶ್ನೆಗಳಿಗೆ ಉತ್ತರಿಸುವಂತೆ ಬಳಕೆದಾರರನ್ನು ಕೇಳಲಾಗುತ್ತದೆ. ಹಲವು ಸಂದರ್ಭಗಳಲ್ಲಿ ಅಕ್ಷರ-ಅಂಕಿಗಳ ಆಕಾರವನ್ನು ತಿರುಚಲಾಗುವುದೂ ಉಂಟು.
ಬಳಕೆದಾರರು ಮಾಹಿತಿ ದಾಖಲಿಸುವ ನಮೂನೆಗಳಿರುವಲ್ಲಿ ದುರುದ್ದೇಶಪೂರಿತ ತಂತ್ರಾಂಶಗಳ ಹಸ್ತಕ್ಷೇಪವನ್ನು ತಡೆಯುವುದು ಕ್ಯಾಪ್ಚಾ ತಂತ್ರಜ್ಞಾನದ ಮೂಲ ಉದ್ದೇಶ. ಕ್ಯಾಪ್ಚಾ ಕೇಳಿದ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದಾಗಲಷ್ಟೆ ಬಳಕೆದಾರರಿಗೆ ತಮ್ಮ ಪ್ರಯತ್ನದಲ್ಲಿ ಮುಂದುವರೆಯಲು ಅನುಮತಿ ಸಿಗುತ್ತದೆ. ಸಾಮಾನ್ಯವಾಗಿ ಕ್ಯಾಪ್ಚಾ ಕೇಳುವ ಪ್ರಶ್ನೆಗೆ ಉತ್ತರಿಸಲು ತಂತ್ರಾಂಶಗಳು ಅಸಮರ್ಥವಾಗಿರುತ್ತವೆ; ಹೀಗಾಗಿ ಕ್ಯಾಪ್ಚಾ ಬಳಕೆಯಿಂದ ದುರುದ್ದೇಶಪೂರಿತ ತಂತ್ರಾಂಶಗಳ ಹಾವಳಿಯನ್ನು ಕಡಿಮೆಮಾಡಬಹುದು.
ವಿಧಗಳು
ಬದಲಾಯಿಸಿಹತ್ತಕ್ಕೆ ಮೂರು ಸೇರಿಸಿದರೆ ಎಷ್ಟು, ಅಥವಾ ಆಕಾಶದ ಬಣ್ಣ ಯಾವುದು ಎನ್ನುವಂತಹ ಸರಳ ಪ್ರಶ್ನೆಗಳಿಂದ ಪ್ರಾರಂಭಿಸಿ ತಿರುಚಾದ ಅಕ್ಷರ ಅಥವಾ ಅಂಕಿಗಳನ್ನು ಗುರುತಿಸಿ ಎಂದು ಕೇಳುವವರೆಗೆ ಕ್ಯಾಪ್ಚಾಗಳು ಅನೇಕ ಬಗೆಯವಾಗಿರಬಹುದು. ಒದಗಿಸಲಾಗುವ ಶ್ರವ್ಯ ಸಂದೇಶವನ್ನು ಕೇಳಿ ಅದನ್ನು ದಾಖಲಿಸಿ ಎಂದು ಕೇಳುವ ಕ್ಯಾಪ್ಚಾಗಳೂ ಇವೆ.
ರೀಕ್ಯಾಪ್ಚಾ
ಬದಲಾಯಿಸಿಕ್ಯಾಪ್ಚಾ ಪ್ರಶ್ನೆಗಳನ್ನು ಬಳಸಿಕೊಂಡು ಮುದ್ರಿತ ಪಠ್ಯದ ಗಣಕೀಕರಣದಲ್ಲಿ ನೆರವಾಗುತ್ತಿರುವುದು 'ರೀಕ್ಯಾಪ್ಚಾ' ತಂತ್ರಜ್ಞಾನದ ವೈಶಿಷ್ಟ್ಯ[೨]. ಇಲ್ಲಿ ಬಳಕೆದಾರರಿಗೆ ಎರಡು ಪದಗಳನ್ನು ತೋರಿಸಿ ಅವನ್ನು ಗುರುತಿಸುವಂತೆ ಕೇಳಲಾಗುತ್ತದೆ. ಈ ಪೈಕಿ ಒಂದು ಪದ ಮಾತ್ರ 'ರೀಕ್ಯಾಪ್ಚಾ' ವ್ಯವಸ್ಥೆಗೆ ಪರಿಚಿತವಾಗಿರುತ್ತದೆ; ಮುದ್ರಿತ ಪಠ್ಯವನ್ನು ಗಣಕೀಕರಣಗೊಳಿಸಲು ಓಸಿಆರ್ ವ್ಯವಸ್ಥೆ ಬಳಸಿದಾಗ ಗುರುತಿಸಲಾಗದ ಪದಗಳ ಪೈಕಿ ಒಂದು ಈ ಪದದ ಜೊತೆಗೆ ಇರುತ್ತದೆ.
ಬಳಕೆದಾರರು ರೀಕ್ಯಾಪ್ಚಾಗೆ ಪರಿಚಿತವಾದ ಪದವನ್ನು ಸರಿಯಾಗಿ ಗುರುತಿಸಿದರೆ ಅಪರಿಚಿತವಾದ ಇನ್ನೊಂದು ಪದವನ್ನೂ ಸರಿಯಾಗಿ ಗುರುತಿಸಿರುವ ಸಾಧ್ಯತೆ ಹೆಚ್ಚು. ಆ ಪದವನ್ನು ಹೆಚ್ಚು ಬಳಕೆದಾರರು ಹೇಗೆ ಗುರುತಿಸುತ್ತಾರೋ ಅದನ್ನೇ ಅಂತಿಮ ರೂಪವಾಗಿ ಪರಿಗಣಿಸಿ ಪಠ್ಯದ ಗಣಕೀಕರಣವನ್ನು ಪೂರ್ಣಗೊಳಿಸಲಾಗುತ್ತದೆ.
ಸವಾಲುಗಳು
ಬದಲಾಯಿಸಿದುರುದ್ದೇಶಪೂರಿತ ತಂತ್ರಾಂಶ ನಿರ್ಮಾತೃಗಳು ಕ್ಯಾಪ್ಚಾ ಪರೀಕ್ಷೆಯನ್ನು ಸುಲಭಕ್ಕೆ ಎದುರಿಸಬಲ್ಲ ತಂತ್ರಾಂಶಗಳನ್ನು ನಿರ್ಮಿಸುವ ಸಾಧ್ಯತೆ ಈ ತಂತ್ರಜ್ಞಾನಕ್ಕಿರುವ ಪ್ರಮುಖ ಸವಾಲು. ಈ ಸವಾಲನ್ನು ಎದುರಿಸುವುದಕ್ಕೂ ಹಲವು ಪ್ರಯತ್ನಗಳು ನಡೆದಿವೆ. ಈ ನಿಟ್ಟಿನಲ್ಲಿ ನಡೆದಿರುವ ಒಂದು ಪ್ರಯತ್ನ ವೀಡಿಯೋ ರೂಪದ ಕ್ಯಾಪ್ಚಾ ಬಳಕೆ. ಚಿತ್ರಗಳ ದೊಡ್ಡದೊಂದು ಸಂಗ್ರಹದಿಂದ ನಾಲ್ಕಾರನ್ನು ಆಯ್ದು ತೋರಿಸಿ ಅವುಗಳಲ್ಲಿ ಒಂದನ್ನು ಗುರುತಿಸುವಂತೆ ಕೇಳುವುದು ಇಂತಹುದೇ ಇನ್ನೊಂದು ರೂಪ.
ಹೀಗಿದ್ದರೂ ಕ್ಯಾಪ್ಚಾ ತಂತ್ರಜ್ಞಾನವನ್ನು ಸೋಲಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಸುಧಾರಿತ ತಂತ್ರಾಂಶಗಳನ್ನು ಬಳಸುವುದರ ಜೊತೆಗೆ ಜನರಿಗೆ ಹಣನೀಡಿ ಕ್ಯಾಪ್ಚಾ ಪ್ರಶ್ನೆಗಳಿಗೆ ಉತ್ತರಿಸುವಂತೆ ಮಾಡುವ ಯತ್ನಗಳನ್ನೂ ಗಮನಿಸಲಾಗಿದೆ.
ಕ್ಯಾಪ್ಚಾದಲ್ಲಿ ತೋರಿಸುವ ಅಕ್ಷರ-ಅಂಕಿಗಳ ಕೆಲ ಆಕಾರಗಳನ್ನು ಗುರುತಿಸುವುದು ಮನುಷ್ಯರಿಗೂ ಕಷ್ಟವಾಗುತ್ತದೆ. ಹಾಗಾಗಿ ಕ್ಯಾಪ್ಚಾ ತಂತ್ರಜ್ಞಾನದ ಬಗ್ಗೆ ಸಾಕಷ್ಟು ಅಸಮಾಧಾನ ವ್ಯಕ್ತವಾಗಿದೆ. ಕ್ಯಾಪ್ಚಾ ಪ್ರಶ್ನೆಗಳನ್ನು ಉತ್ತರಿಸುವುದು ಸಮಯದ ವ್ಯರ್ಥ ಬಳಕೆ ಎನ್ನುವ ಅಭಿಪ್ರಾಯವೂ ಇದೆ[೩].
ಉಲ್ಲೇಖಗಳು
ಬದಲಾಯಿಸಿಬಾಹ್ಯ ಕೊಂಡಿಗಳು
ಬದಲಾಯಿಸಿ- ಕುತಂತ್ರ ತಡೆಗೆ ಕ್ಯಾಪ್ಚಾ Archived 2018-10-25 ವೇಬ್ಯಾಕ್ ಮೆಷಿನ್ ನಲ್ಲಿ., ಇಜ್ಞಾನ ಡಾಟ್.ಕಾಮ್