ಕೋಟಿ ಚೆನ್ನಯ ತುಳುನಾಡಿನಲ್ಲಿ ತುಂಬ ಹೆಸರಾದ ಯೋಧರಾಗಿದ್ದು ಅವರನ್ನು ತುಂಬ ಮಂದಿ ದೈವ ಎಂದು ಆರಾಧಿಸುತ್ತಾರೆ.ಇವರ ಕಾಲ ಕ್ರಿ.ಶ.1556 ರಿಂದ ೧೫೯೧[] ತುಳುನಾಡಿನಲ್ಲಿ ಪ್ರಚಲಿತವಿರುವ ಭೂತಾರಾಧನೆಯಲ್ಲಿ ಕೋಟಿ-ಚೆನ್ನಯ ಖ್ಯಾತ ಹೆಸರು. ಕೋಟಿ ಮತ್ತು ಚೆನ್ನಯ ಎಂಬ ಸೋದರರು ಯೋಧರಾಗಿದ್ದು ಹೋರಾಡಿ ಮಡಿದ ಕಥೆ ಮುಂದೆ ಅದುವೇ ಭೂತಾರಾಧನೆಯಾಯಿತು.

ಕೋಟಿ ಚೆನ್ನಯ(೧೫೫೬-೧೫೯೧) ತುಳುನಾಡಿನ ಅವಳಿ ವೀರರು

ಇವರು ಪುತ್ತೂರು ತಾಲೂಕಿನ ಪಡುಮಲೆ ಎಂಬಲ್ಲಿ ಜನಿಸಿದರು.[] ತುಳುನಾಡಿನ ದಿವ್ಯ ಶಕ್ತಿಗೆ ಸೇರಿದ ದೇಯಿ ಬೈದೆತಿ(ಇವಳ ಮೂಲ ಹೆಸರು ಸ್ವರ್ಣ ಕೇದಗೆ ಬ್ರಾಹ್ಮಣರಿಗೆ ಮೊಟ್ಟೆಯ ಮೂಲಕ ಜನ್ಮ ತಾಳಿ ಸಿಕ್ಕಳು. ಆದ ಕಾರಣ ಕೋಟಿ ಚೆನ್ನಯ ದೈವ ಕಾರ್ಯ ನಿಮಿತ್ತ ಭೂಮಿಗೆ ಬಂದವರು ಯಾವುದೆ ಜಾತಿಗೆ ಸಂಬದ ಪಟ್ಟವರಲ್ಲ ) ಮಕ್ಕಳಾಗಿ ಜನಿಸಿದರು. ಇವರ ತಂದೆ ತಾಯಿ ಗರ್ಭಿಣಿಯಾಗಿದ್ದಾಗಲೇ ತೀರಿಕೊಂಡಿದ್ದರು. ಪಡುಮಲೆಯ ಪೆರುಮಾಳು ಬಲ್ಲಾಳನಿಗೆ ಬೇಟೆಗೆ ಹೋದಾಗ ಆದ ಗಾಯವನ್ನು ದೇಯಿ ಬೈದೆತಿಯು ಗುಣಪಡಿಸಿದ್ದಳು. ಇದರಿಂದಾಗಿ ಆಕೆಯ ಹೆರಿಗೆಯ ವ್ಯವಸ್ಥೆಯನ್ನು ಪೆರುಮಾಳು ಬಲ್ಲಾಳನು ತನ್ನ ಬೀಡಿನಲ್ಲೇ (ಅರಮನೆ) ಮಾಡಿಸಿದನು. ಅವಳಿ ಮಕ್ಕಳನ್ನು ಪಡೆದ ನಂತರ ಕೆಲವು ದಿನಗಳಲ್ಲೇ ದೇಯಿ ಬೈದತಿಯು ಅಸುನೀಗಿದಳು.

ಪೆರುಮಾಳು ಬಲ್ಲಾಳನು ಸಾಯಿನ ಬೈದ್ಯನೆಂಬುವವನಿಗೆ ಕೋಟಿ ಚೆನ್ನಯರನ್ನು ಸಾಕುವ ಜವಾಬ್ದಾರಿಯನ್ನು ನೀಡಿದನು. ಮಕ್ಕಳು ದಷ್ಟಪುಷ್ಟರಾಗಿ ಬೆಳೆದರು. ಪೆರುಮಾಳ ಬಲ್ಲಾಳನ ಮಂತ್ರಿಯಾದ ಮಲ್ಲಯ್ಯ ಬುದ್ಯಂತನಿಗೆ ಮೊದಲಿನಿಂದಲೂ ದೇಯಿ ಬೈದೆತಿಯೊಂದಿಗೆ, ಕೋಟಿ ಚೆನ್ನಯರೊಂದಿಗೆ ವೈರವಿತ್ತು. ಮಲ್ಲಯ್ಯ ಬುದ್ಯಂತನ ಮಕ್ಕಳಿಗೂ ಕೋಟಿಚೆನ್ನಯರಿಗೂ ಚೆಂಡಾಟವಾಡುವಾಗ ಜಗಳವಾಗಿ ಈ ವಿರೋಧ ಮತ್ತೂ ಬೆಳೆಯಿತು. ಕೋಟಿಚೆನ್ನಯರು ಬೆಳೆದು ನಿಂತು ಕೃಷಿಕಾರ್ಯಗಳ ಉಸ್ತುವಾರಿ ನೋಡಿಕೊಳ್ಳಲಾರಂಭಿಸಿದರು.

ಪಂಜದಲ್ಲಿ

ಬದಲಾಯಿಸಿ

ಕೃಷಿಕಾರ್ಯದ ವಿಚಾರದಲ್ಲಿ ಜಗಳವುಂಟಾಗಿ ಚೆನ್ನಯನು ಮಲ್ಲಯ್ಯ ಬುದ್ಯಂತನನ್ನು ಕೊಂದನು. ಇದರಿಂದಾಗಿ ವಿಚಾರಣೆಗೆ ಕರೆಸಿದಾಗ ಕೋಟಿಚೆನ್ನಯ್ಯರು ನ್ಯಾಯದ ಮಾತುಗಳನ್ನಾಡಿ ಚಾವಡಿಯಿಂದ ಹೊರನಡೆದರು. ಪೆರುಮಾಳ ಬಲ್ಲಾಳನು ಅವರನ್ನು ಬಂಧಿಸಲು ಆಜ್ಞೆ ಹೊರಡಿಸಿದ. ಆದರೆ ಕೋಟಿಚೆನ್ನಯರು ಪೆರುಮಾಳು ಸೀಮೆಯ ಗಡಿಭಾಗದಿಂದ ಪಂಜಸೀಮೆಯನ್ನು ಪ್ರವೇಶಿಸಿದರು. ಪ್ರವೇಶಿಸುವಾಗ ಸುಂಕದ ಕಟ್ಟೆಯಲ್ಲಿ ಜ್ಯೋತಿಷಿಯೊಬ್ಬರಲ್ಲಿ ಮುಂದಿನ ದಿನಗಳ ಬಗೆಗೂ ಕೇಳಿದರು. ಪಂಜದಲ್ಲಿ ಕೋಟಿಚೆನ್ನಯರ ಅಕ್ಕ ಕಿನ್ನಿದಾರು ವಾಸಿಸುತ್ತಿದ್ದಳು. ಪಂಜದಲ್ಲಿ ಕಿನ್ನಿದಾರುವಿನ ಮನೆಯಲ್ಲಿ ಕೋಟಿಚೆನ್ನಯರು ಆಶ್ರಯ ಪಡೆದರು. ಪಂಜದ ಅಧಿಕಾರಿಗಳಲ್ಲೊಬ್ಬನಾದ ಚೆಂದುಗಿಡಿಯು ಕೋಟಿಚೆನ್ನಯರ ಏಳ್ಗೆಯನ್ನು ಸಹಿಸದೇ ಉಪಾಯವಾಗಿ ಅವರಿಬ್ಬರನ್ನೂ ಬಂಧಿಸಿದ. ತದೇಕಚಿತ್ತದಿಂದ ಕುಲದೇವತೆಯಾದ ಕೆರ್ಮಲೆಯ ಬ್ರಹ್ಮನನ್ನು ಸ್ತುತಿಸಿದ ಕೋಟಿಚೆನ್ನಯರು ಕಿಟಕಿಯ ಮೂಲಕ ಪಾರಾಗಿ ಎಣ್ಮೂರು ಸೀಮೆಯನ್ನು ತಲುಪಿದರು.

ಎಣ್ಮೂರು ನಳ್ಳಿ

ಬದಲಾಯಿಸಿ

ಎಣ್ಮೂರು ಸೀಮೆಗೂ ಪಂಜಸೀಮೆಗೂ ಗಡಿವಿಚಾರದಲ್ಲಿ ಕಲಹವಿತ್ತು. ಪಂಜದ ಕೇಮರ ಬಲ್ಲಾಳನು ಗಡಿಕಲ್ಲನ್ನು ಮುಂದೆ ಹಾಕಿ ಎಣ್ಮೂರಿನ ಭೂಮಿಯನ್ನು ಕಬಳಿಸಿದ್ದ. ಕೋಟಿಚೆನ್ನಯರು ಮಣಭಾರದ ಗಡಿಕಲ್ಲನ್ನು ಪುನಃ ಸ್ವಸ್ಥಾನದಲ್ಲಿ ನೆಟ್ಟರು. ಆ ವೇಳೆಗಾಗಲೇ ಎಣ್ಮೂರು ಸೀಮೆಯಲ್ಲಿ ಕೋಟಿಚೆನ್ನಯರು ಪ್ರಸಿದ್ಧರಾಗಿದ್ದರು. ಎಣ್ಮೂರಿನ ದೇವಬಲ್ಲಾಳನು ಕೋಟಿಚೆನ್ನಯರನ್ನು ಸ್ವಾಗತಿಸಿ, ಕೋಟಿಚೆನ್ನಯರ ಆಶಯದಂತೆ ವಿವಾದಿತ ಸ್ಥಳದಲ್ಲಿ ಅವರಿಗೆ ವಾಸವಾಗಲು ಅನುಮತಿ ನೀಡಿದನು.

ಯುದ್ಧ, ಮರಣ

ಬದಲಾಯಿಸಿ
 
ಕೋಟಿ ಚೆನ್ನಯ ದೈವಗಳು

ಪಡುಮಲೆಯ ಪೆರುಮಾಳು ಬಲ್ಲಾಳನೂ, ಪಂಜದ ಕೇಮರ ಬಲ್ಲಾಳನೂ ಕೋಟಿಚೆನ್ನಯರನ್ನು ಬಂಧಿಸುವುದನ್ನೇ ಗುರಿಯಾಗಿರಿಸಿಕೊಂಡು ಎಣ್ಮೂರಿನ ಮೇಲೆ ದಂಡೆತ್ತಿ ಬಂದರು. ಯುದ್ಧದಲ್ಲಿ ವೀರಾವೇಶದಿಂದ ಹೋರಾಡಿದ ಕೋಟಿಚೆನ್ನಯರು ಎಣ್ಮೂರು ಶಿವದೇವಾಲಯದ ಅಂಗಣದಲ್ಲೇ ವೀರಮರಣವನ್ನಪ್ಪಿದರು. ಮರಣಾನಂತರ ಪೆರುಮಾಳು ಬಲ್ಲಾಳನೂ ಕೇಮರ ಬಲ್ಲಾಳನೂ ತುಂಬಾ ವ್ಯಥೆಪಟ್ಟರು. ಸುಂಕದ ಕಟ್ಟೆಯಲ್ಲಿ ಜ್ಯೋತಿಷ ಹೇಳಿದ್ದವರ ಕುಟುಂಬವೇ ಮುಂದೆ ಶಿವದೇವಾಲಯದ ಪೂಜೆ ಮಾಡಬೇಕು ಎಂಬುವುದು ಕೋಟಿಚೆನ್ನಯರ ಕೊನೆಯ ಆಸೆಯಾಗಿತ್ತು. [] []

ಸಮಾಜಮುಖಿ ಕೆಲಸಗಳು

ಬದಲಾಯಿಸಿ

ಕೋಟಿಚೆನ್ನಯರ ಅನೇಕ ಸಮಾಜಮುಖಿ ಕೆಲಸಗಳು ಪಾಡ್ದನಗಳಲ್ಲಿ ಉಲ್ಲೇಖವಾಗಿವೆ. ಶ್ರೀಮಂತರ ಶೋಷಣೆಯ ವಿರುದ್ಧವಾಗಿ ಕೋಟಿಚೆನ್ನಯರು ಆರಂಭದಿಂದಲೇ ದನಿಯೆತ್ತಿದರು. ತಮ್ಮ ತೋಳ್ಬಲದಿಂದ ಅನೇಕ ಕೆರೆ ಕುಂಟೆಗಳನ್ನು ನಿರ್ಮಿಸಿದರು. ಕಾಡುಮೃಗಗಳಿಂದ ನಾಡಿನ ಕೃಷಿಯನ್ನು ರಕ್ಷಿಸಿದರು ಮೊದಲಾದಂತಹ ಅನೇಕ ವರ್ಣನೆಗಳಿವೆ. ಆದ್ದರಿಂದಲೇ ಕೋಟಿಚೆನ್ನಯರನ್ನು ದೈವತ್ವಕ್ಕೇರಿಸಿ ತುಳುನಾಡಿನ ಅನೇಕ ಕಡೆಗಳಲ್ಲಿ ಗರಡಿಗಳನ್ನು ಕಟ್ಟಿಸಲಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. "Shree Brahma Baidarkala Garodi Kshethra". kankanadygarodi.in. Archived from the original on 2016-09-27. Retrieved 2017-03-05.
  2. "Birthplace of Koti, Chennaya may be the next tourist hub of Tulu Nadu". The Hindu (in Indian English). ISSN 0971-751X.
  3. ಮಂಗೇಶರಾಯರು, ಪಂಜೆ (1924). ಕೋಟಿ ಚೆನ್ನಯ. p. 1-70.
  4. ಕೋಟಿ ಚೆನ್ನಯ

ಹೆಚ್ಚಿನ ಓದಿಗಾಗಿ

ಬದಲಾಯಿಸಿ

ಕೋಟಿಚೆನ್ನಯ, ಪಂಜೆ ಮಂಗೇಶರಾಯರು, ಬಾಲಸಾಹಿತ್ಯಮಂಡಲ ಲಿಮಿಟೆಡ್ ಕೋಡಿಯಾಲಬೈಲು ಮಂಗಳೂರು

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: