ಕೋಕ್ ಬೊರೋಕ್ - Kokborok (/ˌkɒkbəˈrɒk/) ಎಂಬುದು ಭಾರತದ ತ್ರಿಪುರ ಹಾಗೂ ಇದರ ಆಸುಪಾಸಿನಲ್ಲಿ ಬರುವ ಬಾಂಗ್ಲಾದೇಶದಲ್ಲಿ ಪ್ರಚಲಿತದಲ್ಲಿರುವ ಬೊರೋಕ್ ಜನರ ಸಿನೋ-ಟಿಬೇಟನ್ ಸ್ಥಳೀಯ ಭಾಷೆ. ಕೋಕ್ (kok) ಎಂದರೆ ಭಾಷೆ, ಬೊರೋಕ್ (borok) ಎಂದರೆ ಮಾನವ ಎಂದರ್ಥ. ನೆರೆಯ ಅಸ್ಸಾಂ ರಾಜ್ಯದ ಬೋಡೊ, ದಿಮಾಸಾ ಮತ್ತು ಕಚಾರಿ ಭಾಷೆಗಳಿಗೆ ಹತ್ತಿರದ ಸಂಬಂಧವನ್ನು ಹೊಂದಿದೆ.[೧]

ಇತಿಹಾಸ ಬದಲಾಯಿಸಿ

ತಿಪ್ರ ಎಂದು ಹಿಂದೆ ಕರೆಯಲ್ಪಡುತ್ತಿದ್ದ ಕೋಕ್ ಬೊರೋಕ್ ಭಾಷೆ ೨೦ನೇ ಶತಮಾನದಲ್ಲಿ ತನ್ನ ಹೆಸರು ಬದಲಾಯಿಸಿಕೊಂಡಿತು. ಮೊದಲು ಅಸ್ತಿತ್ವದಲ್ಲಿದ್ದ ತ್ವಿಪ್ರ ರಾಜ್ಯದ ನಿವಾಸಿಗಳನ್ನು ಹಾಗೂ ಅವರ ಜನಾಂಗೀಯತೆಯನ್ನು ಕೂಡ ಇದೇ ಹೆಸರಿನಿಂದ ಕರೆಯುತ್ತಿದ್ದರು.

ತಿಪ್ರ ಜನರು ಕೋಕ್ ಬೊರೋಕ್ ಅಲ್ಲದೆ ತ್ರಿಪುರ, ರಿಯಾಮ್ ಚೋಂಗ್ ಹಾಗೂ ಡಾರ್ಲೋಂಗ್ (ಹಾಗೂ ಬಾಂಗ್ಲಾದೇಶ ಮತ್ತು ಭಾರತಕ್ಕೆ ಸಂಬಂಧಿಸಿದ ಇತರ ಭಾಷೆಗಳನ್ನು) ಮಾತನಾಡುತ್ತಾರೆ. ರಿಯಾಮ್ ಚೋಂಗ್ ಭಾಷೆಯನ್ನು ಹಲಾಮ್ ಸಮುದಾಯದವರು ಹಾಗೂ ಡಾರ್ಲೋಂಗ್ ಭಾಷೆಯನ್ನು ಡಾರ್ಲೋಂಗ್ ಸಮುದಾಯದವರು ಮಾತನಾಡುತ್ತಾರೆ. ಕೋಕ್ ಬೊರೋಕ್ ಮತ್ತು ರಿಯಾಮ್ ಚೋಂಗ್ ಪರಸ್ಪರ ತುಂಬ ವಿಭಿನ್ನವಾದವು. ಆದರೆ ರಿಯಾಮ್ ಚೋಂಗ್ ಮತ್ತು ಡಾರ್ಲೋಂಗ್ ಗಳನ್ನು ತ್ರಿಪುರದ ಸ್ಥಳೀಯ ಭಾಷೆಗಳೆಂದು ಪರಿಗಣಿಸಲಾಗುತ್ತದೆ.

ಕೋಕ್ ಬೊರೋಕ್ ಭಾಷೆಯು ಕನಿಷ್ಠ ಕ್ರಿ.ಶ. ೧ನೇ ಶತಮಾನದಿಂದ, ಅಂದರೆ ತಿಪ್ರ ರಾಜರುಗಳ ಇತಿಹಾಸವು ದಾಖಲೀಕರಣಗೊಂಡಲ್ಲಿಂದ, ಅಧಿಕೃತ ಭಾಷೆಯಾಗಿ ಪರಿಗಣಿಸಲ್ಪಟ್ಟಿದೆ. ಕೋಕ್ ಬೊರೋಕ್ ನ ಲಿಪಿಯನ್ನು ಕೊಲೋಮ ಎಂದು ಕರೆಯುತ್ತಾರೆ. ಬೊರೋಕ್ ರಾಜರುಗಳ ಇತಿಹಾಸವನ್ನು ರಾಜರತ್ನಾಕರ ಎಂಬ ಗ್ರಂಥದಲ್ಲಿ ಬರೆಯಲಾಗಿದೆ. ಇದನ್ನು ಮೂಲತಃ ಕೋಕ್ ಬೊರೋಕ್ ಭಾಷೆಯಲ್ಲಿ ಕೊಲೋಮ ಲಿಪಿಯಲ್ಲಿ ದುರ್ಲೋಬೇಂದ್ರ ಚೊಂಟೈ ಬರೆದಿದ್ದಾರೆ.

ನಂತರ ಅದನ್ನು ಸುಕ್ರೇಶ್ವರ್ ಮತ್ತು ವಿನೇಶ್ವರ್ ಎಂಬ ಇಬ್ಬರು ಬ್ರಾಹ್ಮಣರು ಸಂಸ್ಕೃತಕ್ಕೆ ಅನುವಾದಿಸಿದರು. ಮುಂದೆ ಅದನ್ನು ೧೯ನೇ ಶತಮಾನದಲ್ಲಿ ಬೆಂಗಾಲಿ ಭಾಷೆಗೆ ಅನುವಾದಿಸಲಾಯಿತು. ಕೋಕ್ ಬೊರೋಕ್ ಭಾಷೆಯಲ್ಲಿರುವ ತಿಪ್ರ ಇತಿಹಾಸ ಮತ್ತು ರಾಜರತ್ನಾಕರ ಈಗ ಲಭ್ಯವಿಲ್ಲ. ೧೯ನೇ ಶತಮಾನದಿಂದ ೨೦ನೇ ಶತಮಾನದವರೆಗೆ ತಿಪ್ರ ರಾಜ್ಯದ ಬೊರೋಕ್ ರಾಜರುಗಳ ಅವಧಿಯಲ್ಲಿ ಕೋಕ್ ಬೊರೋಕ್ ಅನ್ನು ಜನಸಾಮಾನ್ಯರ ಭಾಷೆಯನ್ನಾಗಿ ಮಾಡಲಾಯಿತು.

ಕೋಕ್ ಬೊರೋಕ್ ಅನ್ನು ತ್ರಿಪುರ ರಾಜ್ಯದ ಅಧಿಕೃತ ಭಾಷೆಯನ್ನಾಗಿ ೧೯೭೯ರಲ್ಲಿ ರಾಜ್ಯ ಸರ್ಕಾವು ಘೋಷಿಸಿತು.[೨] ಪರಿಣಾಮವಾಗಿ ೧೯೮೦ರ ದಶಕದಿಂದ ಈ ಭಾಷೆಯನ್ನು ತ್ರಿಪುರದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಒಂದು ಬೋಧಿಸಲಾಗುತ್ತದೆ.[೩] ತ್ರಿಪುರ ವಿಶ್ವವಿದ್ಯಾನಿಲಯವು ೧೯೯೪ರಲ್ಲಿ ಕೋಕ್ ಬೊರೋಕ್ ಭಾಷೆಯ ಒಂದು ಸರ್ಟಿಫಿಕೇಟ್ ಕೋರ್ಸ್ ಅನ್ನು ಹಾಗೂ ೨೦೦೧ರಲ್ಲಿ ಒಂದು ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್ ಅನ್ನು ಆರಂಭಿಸಿತು. ತ್ರಿಪುರ ವಿಶ್ವವಿದ್ಯಾನಿಲಯವು ತನ್ನ ಸಂಯೋಜಿತ ಕಾಲೇಜುಗಳ ಬಿಎ ಪದವಿಯಲ್ಲಿ ೨೦೧೨ರಿಂದ ಕೋಕ್ ಬೊರೋಕ್ ಅನ್ನು ಒಂದು ಐಚ್ಛಿಕ ವಿಷಯವನ್ನಾಗಿ ಪರಿಚಯಿಸಿದೆ. ೨೦೧೫ರಲ್ಲಿ ಕೋಕ್ ಬೊರೋಕ್ ನಲ್ಲಿ ಎಂ.ಎ. ಪದವಿಯನ್ನು ಆರಂಭಿಸಿದೆ.[೪]

ಪ್ರಸ್ತುತ ಕೋಕ್ ಬೊರೋಕ್ ಅನ್ನು ಭಾರತೀಯ ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವ ಮೂಲಕ ಭಾರತದ ಅಧಿಕೃತ ಭಾಷೆಯನ್ನಾಗಿಸಬೇಕೆಂಬ ಬೇಡಿಕೆ ಇದೆ.[೫] ತ್ರಿತಿಪುರದ ರಾಜಧಾನಿ ಅಗರ್ತಲದಲ್ಲಿ ಮಾತನಾಡುತ್ತಿರುವುದು ಕೋಕ್ ಬೊರೋಕ್ ನ ಅಧಿಕೃತ ಆವೃತ್ತಿಯೆನಿಸಿದೆ.

ವಿಂಗಡಣೆ ಮತ್ತು ಸಂಬಂಧಿತ ಭಾಷೆಗಳು ಬದಲಾಯಿಸಿ

ಕೋಕ್ ಬೊರೋಕ್ ಭಾಷೆಯು ಬೋಡೋ-ಗಾರೋ ಪಂಗಡದ ಸಿನೋ-ಟಿಬೆಟನ್ ಭಾಷೆಯಾಗಿದೆ.[೬]

ಇದು ನೆರೆಯ ಅಸ್ಸಾಂನ ಬೋಡೋ ಮತ್ತು ದಿಮಾಸಾ ಭಾಷೆಗಳೊಂದಿಗೆ ಹತ್ತಿರದ ಸಂಬಂಧವನ್ನು ಹೊಂದಿದೆ. ಮೇಘಾಲಯ ಹಾಗೂ ಬಾಂಗ್ಲಾದೇಶಗಳಲ್ಲಿ ಮಾತನಾಡಲಾಗುವ ಗಾರೋ ಭಾಷೆ ಕೂಡ ಇದಕ್ಕೆ ಸಂಬಂಧಿಸಿದ್ದಾಗಿದೆ.

ಕೋಕ್ ಬೊರೋಕ್ ವಾಸ್ತವವಾಗಿ ಒಂದೇ ಭಾಷೆಯಲ್ಲ. ತ್ರಿಪುರದಲ್ಲಿ ಮಾತನಾಡಲಾಗುವ ಅನೇಕ ಭಾಷೆಗಳ ಮಿಶ್ರಣವಾಗಿದೆ. ಉಸೋಯಿ (ಕೌ ಬ್ರುಂಗ್), ರಿಯಾಂಗ್ (ಪೊಲೋಂಗ್-ಒ), ಮತ್ತು ಖಗ್ರಚರಿ (ತ್ರಿಪ್ಪೇರ)ಗಳನ್ನು ಜನಾಂಗಶಾಸ್ತ್ರವು ಪ್ರತ್ಯೇಕ ಭಾಷೆಗಳನ್ನಾಗಿ ಪಟ್ಟಿಮಾಡುತ್ತದೆ. ಪಟ್ಟಿಯಲ್ಲಿ ಇಲ್ಲದಿದ್ದರೂ ಮುಕ್ ಚಕ್ (ಬರ್ಬಾಕ್ ಪುರ್) ಒಂದು ವಿಶಿಷ್ಟ ಭಾಷೆಯಾಗಿದೆ. ಅನೇಕ ಬೊರೋಕ್ ಕುಲಗಳ ಭಾಷೆಗಳ ಕುರಿತು ಇನ್ನೂ ಸಂಶೋಧನೆ ನಡೆಯಬೇಕಿದೆ. ಖಗ್ರಚರಿ ಭಾಷೆಯೊಂದರಲ್ಲೇ ಅನೇಕ ವೈವಿಧ್ಯತೆಗಳಿದ್ದರೂ ವಿವಿಧ ಖಗ್ರಚರಿ ಪ್ರಕಾರಗಳನ್ನು ಮಾತನಾಡುವವರೂ ಪರಸ್ಪರ ಆ ಭಾಷೆಯನ್ನು ಅರ್ಥಮಾಡಿಕೊಳ್ಳಬಲ್ಲರು. ಖಗ್ರಚರಿ ಸಾಹಿತ್ಯವನ್ನು ನೈತೋಂಗ್ ಹಾಗೂ ಡೆಂಡಕ್ ವೈವಿಧ್ಯತೆಗಳಲ್ಲಿ ರಚಿಸಲಾಗುತ್ತದೆ.

ಧ್ವನಿವಿಜ್ಞಾನ ಬದಲಾಯಿಸಿ

ಡೆಬ್ಬರ್ಮ ಕೋಕ್ ಬೊರೋಕ್ ಸಿನೋ-ಟಿಬೆಟನ್ ಭಾಷೆಯ ಧ್ವನಿವಿಜ್ಞಾನವನ್ನು ಹೊಂದಿದೆ.

ಸ್ವರಗಳು ಬದಲಾಯಿಸಿ

ಕೊಕ್ ಬೊರೋಕ್ ಆರು ಸ್ವರಗಳನ್ನು ಹೊಂದಿದೆ: /i u e w o a/.

ಕೊಕ್ ಬೊರೋಕ್ ನ ಆರಂಭಿಕ ವಿದ್ವಾಂಸರು ಇಂಗ್ಲಿಷಿನಲ್ಲಿ ಇಲ್ಲದ ಸ್ವರವೊಂದನ್ನು ಸೂಚಿಸಲು w ಅಕ್ಷರವನ್ನು ಬಳಸಲು ನಿರ್ಧರಿಸಿದರು. ಕೆಲವು ಪ್ರದೇಶಗಳಲ್ಲಿ ಇದನ್ನು i ಗೆ ಸಮೀಪವಾಗಿ ಉಚ್ಚರಿಸಲಾಗುತ್ತದೆ. ಇನ್ನು ಕೆಲವು ಪ್ರದೇಶಗಳಲ್ಲಿ o ಗೆ ಸಮೀಪವಾಗಿ ಉಚ್ಚರಿಸಲಾಗುತ್ತದೆ.

ಜಂಟಿ ಸ್ವರಗಳು ಬದಲಾಯಿಸಿ

ಜಂಟಿಸ್ವರ ಎಂದರೆ ಎರಡು ಸ್ವರಗಳ ಒಂದು ಗುಂಪು. m ಹಾಗೂ p ಅಕ್ಷರಗಳ ಧ್ವನಿಗಳ ಬಳಿಕ wi ಜಂಟಿಸ್ವರವನ್ನು ui ಎಂದು ಉಚ್ಚರಿಸಲಾಗುತ್ತದೆ. chumui (ಮೋಡ) ಮತ್ತು thampui (ಸೊಳ್ಳೆ) ಇದಕ್ಕೆ ಉದಾಹರಣೆಗಳು. ui ಜಂಟಿಸ್ವರವು wi ಜಂಟಿಸ್ವರದ ಇನ್ನೊಂದು ವಿಧವಾಗಿದೆ. ಕಡಿಮೆ ಬಳಕೆಯಾಗುವ oi ಮತ್ತು ai ಜಂಟಿಸ್ವರಗಳನ್ನು ಮುಕ್ತಾಯದ ಜಂಟಿಸ್ವರಗಳೆಂದು ಕರೆಯಲಾಗುತ್ತದೆ.

ಸಾಹಿತ್ಯ ಬದಲಾಯಿಸಿ

ಕೋಕ್ ಬೊರೋಕ್ ಸಾಹಿತ್ಯ ರಚನೆಯ ಆರಂಭಿಕ ಪ್ರಯತ್ನಗಳು ರಾಧಾಮೋಹನ್ ಠಾಕುರ್ ರಿಂದ ನಡೆದವು. ಅವರು ೧೯೦೦ರಲ್ಲಿ 'ಕೋಕ್ ಬೊರೋಕ್ಮಾ' ಎಂಬ ವ್ಯಾಕರಣ ಪುಸ್ತಕವನ್ನು ಪ್ರಕಟಿಸಿದರು. 'ತ್ರಿಪುರ್ ಕೊಥಮಾಲಾ' ಮತ್ತು 'ತ್ರಿಪುರ್ ಭಾಷಾಭಿದಾನ್' ಎಂಬ ಇನ್ನೆರಡು ಪುಸ್ತಕಗಳನ್ನು ಕೂಡ ಪ್ರಕಟಿಸಿದರು. ತ್ರಿಪುರ್ ಕೊಥಮಾಲಾ ಪುಸ್ತಕವು ೧೯೦೬ರಲ್ಲಿ ಪ್ರಕಟವಾದ ಕೋಕ್ ಬೊರೋಕ್ - ಬೆಂಗಾಲಿ - ಇಂಗ್ಲಿಷ್ ಅನುವಾದವಾಗಿದೆ. ತ್ರಿಪುರ್ ಭಾಷಾಭಿದಾನ್ ಪುಸ್ತಕವು ೧೯೦೭ರಲ್ಲಿ ಪ್ರಕಟವಾಯಿತು.

ದೌಲತ್ ಅಹ್ಮದ್ ಎಂಬವರು ರಾಧಾಮೋಹನ್ ಠಾಕುರ್ ಅವರ ಸಮಕಾಲೀನರು. ಅವರು ಮೊಹಮ್ಮದ್ ಒಮರ್ ಎಂಬವರೊಂದಿಗೆ ಜಂಟಿಯಾಗಿ ಕೋಕ್ ಬೊರೋಕ್ ವ್ಯಾಕರಣವನ್ನು ಬರೆದವರಲ್ಲಿ ಮೊದಲಿಗರು. ೧೮೯೭ಲ್ಲಿ ಅಮರ್ ಜಂತ್ರಾ, ಕೋಮಿಲ್ಲ, ಅವರಿಂದ 'ಕೊಕ್ ಬೊಕ್ಮಾ' ಎಂಬ ವ್ಯಾಕರಣ ಪುಸ್ತಕ ಪ್ರಕಟವಾಯಿತು. ೨೭ ಡಿಸೆಂಬರ್ ೧೯೪೫ರಂದು ತ್ರಿಪುರ ಜನಶಿಕ್ಷಾ ಸಮಿತಿ ಸ್ಥಾಪನೆಯಾಗಿ ತ್ರಿಪುರದ ವಿವಿಧ ಭಾಗಗಳಲ್ಲಿ ಅನೇಕ ಶಾಲೆಗಳನ್ನು ಸ್ಥಾಪಿಸಿತು.

ಸಮಿತಿಯ ಸ್ಥಾಪಕರಾದ ಸಂಧ್ಯಾ ದೇವ್ ವರ್ಮಾ ಎಂಬವರು ೧೯೫೪ರಲ್ಲಿ 'ಕ್ವತಾಲ್ ಕೊಥಾಮ' ಹೆಸರಿನ ಮೊದಲ ಕೋಕ್ ಬೊರೋಕ್ ಮ್ಯಾಗಜಿನ್ ಅನನ್ನು ಸಂಪಾದಿಸಿ ಪ್ರಕಟಿಸಿದರು. ಸಂಧ್ಯಾ ದೇವ್ ವರ್ಮಾ ಅವರ 'ಹಚುಕ್ ಖುರಿಯೋ' (ಪರ್ವತಗಳ ಮಡಿಲಲ್ಲಿ) ಕೋಕ್ ಬೊರೋಕ್ ಭಾಷೆಯ ಮೊದಲ ಆಧುನಿಕ ಕಾದಂಬರಿ. ಇದನ್ನು ೧೮೯೭ರಲ್ಲಿ ಕೋಕ್ ಬೊರೋಕ್ ಸಾಹಿತ್ಯ ಸಭಾ ಹಾಗೂ ಸಂಸ್ಕೃತಿ ಸಂಸದ್ ಪ್ರಕಟಿಸಿದವು. ಬೈಬಲ್ ಸೊಸೈಟಿ ಆಫ್ ಇಂಡಿಯ ೧೯೭೬ರಲ್ಲಿ ಪ್ರಕಟಿಸಿದ ಹೊಸ ಒಡಂಬಡಿಕೆಯ ಕೋಕ್ ಬೊರೋಕ್ ಅನುವಾದವು ೨೦ನೇ ಶತಮಾನದ ಪ್ರಮುಖ ಅನುವಾದವಾಗಿದೆ. ೨೦೦೨ರಲ್ಲಿ ಪ್ರಕಟವಾದ ವಿನಯ್ ದೇವ್ ವರ್ಮಾ ಅವರು ಸಂಪಾದಿಸಿದ ಆಂಗ್ಲೋ-ಕೋಕ್ ಬೊರೋಕ್-ಬೆಂಗಾಲಿ ನಿಘಂಟು ೨೧ನೇ ಶತಮಾನದ ಅತಿ ಮಹತ್ವದ ಕೆಲಸವಾಗಿದೆ.

ಸಂಘಸಂಸ್ಥೆಗಳು ಬದಲಾಯಿಸಿ

ಅನೇಕ ತ್ರಿಪುರಿ ಸಾಂಸ್ಕೃತಿಕ ಸಂಘಟನೆಗಳು ಕಳೆದ ಶತಮಾನದಿಂದ ಭಾಷೆಯ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಅಂತಹ ಕೆಲವು ಸಂಘಟನೆಗಳ ಪಟ್ಟಿ ಇಲ್ಲಿದೆ:

  • ಕೆಎಸ್ಎಸ್, ಕೋಕ್ ಬೊರೋಕ್ ಸಾಹಿತ್ಯ ಸಭಾ- ಈಗ ಬೊರೋಕ್ ಕೊಕ್ರ್ವಬೈ ಬೊಸಾಂಗ್ ಅಥವಾ ಬಿಕೆಬಿಯಲ್ಲಿದೆ.
  • ಕೆಒಎಚ್ಎಂ, ಕೋಕ್ ಬೊರೋಕ್ ತೈ ಹುಕುಮು ಮಿಶನ್
  • ಕೆಬಿಎಸ್ಎಸ್, ಕೋಕ್ ಬೊರೋಕ್ ಸಾಹಿತ್ಯ ಸಂಸದ್
  • ಎಚ್ ಕೆ ಪಿ, ಹಚುಕ್ನಿ ಖೋರಾಂಗ್ ಪಬ್ಲಿಶರ್ಸ್
  • ಜೆಪಿ, ಜೋರಾ ಪಬ್ಲಿಕೇಶನ್
  • ಡಿಕೆಪಿ, ಡೇ ಕೋಕ್ ಬೊರೋಕ್ ಪಬ್ಲಿಷರ್ಸ್
  • ಕೆಎ, ಕೋಕ್ ಬೊರೋಕ್ ಅಕಾದೆಮಿ

ಕೋಕ್ ಬೊರೋಕ್ ಭಾಷೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸರ್ಕಾರಿ ಸಂಶೋಧನ ಮತ್ತು ಪ್ರಕಟಣಾ ಸಂಸ್ಥೆಗಳೆಂದರೆ:

  • ಟ್ರೈಬಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಟಿಆರ್ ಐ), ಅಗರ್ತಲ
  • ಭಾಷಾ ಶಾಖೆ, ತ್ರಿಪುರ ಟ್ರೈಬಲ್ ಏರಿಯಾಸ್ ಅಟೋನಮಸ್ ಡಿಸ್ಟ್ರಿಕ್ಟ್ ಕೌನ್ಸಿಲ್ (ಟಿಟಿಎಎಡಿಸಿ) ಇದರ ಶೈಕ್ಷಣಿಕ ವಿಭಾಗ

ಕೋಕ್ ಬೊರೋಕ್ ವಿಭಾಗ, ತ್ರಿಪುರ ವಿಶ್ವವಿದ್ಯಾನಿಲಯ ಬದಲಾಯಿಸಿ

ಅಗರ್ತಲದಲ್ಲಿರುವ ತ್ರಿಪುರ ವಿಶ್ವವಿದ್ಯಾನಿಲಯವು ೨೦೧೫ರಲ್ಲಿ ಕೋಕ್ ಬೊರೋಕ್ ವಿಭಾಗವನ್ನು ಆರಂಭಿಸಿತು. ಇದು ಕೋಕ್ ಬೊರೋಕ್ ಭಾಷೆಯಲ್ಲಿ ಎಂ.ಎ., ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಹಾಗೂ ೬ ತಿಂಗಳ ಸರ್ಟಿಫಿಕೇಟ್ ಕೋರ್ಸ್ ಅನ್ನು ನೀಡುತ್ತದೆ.[೭]

ವಿಶ್ವವಿದ್ಯಾನಿಲಯವು ತನ್ನ ವಿವಿಧ ಸಂಯೋಜಿತ ಕಾಲೇಜುಗಳಲ್ಲಿ ಬಿ.ಎ. ಪದವಿಯಲ್ಲಿ ಕೋಕ್ ಬೊರೋಕ್ ಅನ್ನು ಒಂದು ಐಚ್ಛಿಕ ವಿಷಯವನ್ನಾಗಿ ೨೦೧೨ರಿಂದ ಬೋಧಿಸುತ್ತಿದೆ. ಆ ಸಂಯೋಜಿತ ಕಾಲೇಜುಗಳೆಂದರೆ:

  • ಎಂಬಿಬಿ ಕಾಲೇಜು, ಅಗರ್ತಲ
  • ಬಿಬಿಎಂ ಕಾಲೇಜು, ಅಗರ್ತಲ
  • ರಾಮ್ ಠಾಕುರ್ ಕಾಲೇಜು, ಅಗರ್ತಲ
  • ಸರ್ಕಾರಿ ಪದವಿ ಕಾಲೇಜು, ಖುಮುಲ್ವಂಗ್
  • ಎನ್ಎಸ್ ಮಹಾವಿದ್ಯಾಲಯ, ಉದಯಪುರ
  • ಸರ್ಕಾರಿ ಪದವಿ ಕಾಲೇಜು, ಧರ್ಮನಗರ
  • ಆರ್ ಎಸ್ ಮಹಾವಿದ್ಯಾಲಯ, ಕೈಲಾಸಹರ್
  • ಸರ್ಕಾರಿ ಪದವಿ ಕಾಲೇಜು, ಕಮಲ್ ಪುರ
  • ಸರ್ಕಾರಿ ಪದವಿ ಕಾಲೇಜು, ತೆಲಿಯಾಮುರ
  • ಸರ್ಕಾರಿ ಪದವಿ ಕಾಲೇಜು, ಶಾಂತಿರ್ ಬಜಾರ್

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2021-10-29. Retrieved 2021-07-23.
  2. "In Tripura, a musician's bid to preserve the language of the tribes". The Indian Express (in ಅಮೆರಿಕನ್ ಇಂಗ್ಲಿಷ್). 22 May 2018. Retrieved 4 November 2018.
  3. http://www.indiatogether.org/kokborok-education
  4. "Department of Kokborok". www.tripurauniv.in (in ಬ್ರಿಟಿಷ್ ಇಂಗ್ಲಿಷ್). Archived from the original on 25 ಫೆಬ್ರವರಿ 2016. Retrieved 4 November 2018.
  5. "ಆರ್ಕೈವ್ ನಕಲು". Archived from the original on 2019-10-06. Retrieved 2019-10-06.
  6. "ಆರ್ಕೈವ್ ನಕಲು" (PDF). Archived from the original (PDF) on 2012-07-10. Retrieved 2021-07-23.
  7. "ಆರ್ಕೈವ್ ನಕಲು". Archived from the original on 2019-10-06. Retrieved 2019-10-06.